ಅನಂತನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ (ಫಾಲ್ಕೆ ಎಂದು ಕನ್ನಡದಲ್ಲಿ ಬರೆಯುವುದು ರೂಢಿ, ಆದರೆ ಮರಾಠಿಯಲ್ಲಿ ಅದು ಪಾಳಕೆ ಎಂದು ಬರೆಯುತ್ತಾರೆ ಮತ್ತು ಪಾಳ್ಕೆ ಎಂದು ಉಚ್ಚರಿಸುತ್ತಾರೆ) ಪ್ರಶಸ್ತಿ ಬಂದಿದೆ ಎಂದು ಓದಿದಾಗ, ನನಗಾದ ಸಂತೋಷವನ್ನು, ಅವರ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳದೇ ಸುಮ್ಮನೇ ಇರಲಾಗದೇ ಈ ಲೇಖನವನ್ನು ಬರೆಯುತ್ತಿದ್ದೇನೆ. ಬರೀ ಸಂತೋಷವಷ್ಟೇ ಅಲ್ಲ, ಆಶ್ಚರ್ಯವೂ ಆಯಿತು. ಏಕೆಂದರೆ ಅವರು ಎಂದಿಗೂ ಪ್ರಶಸ್ತಿಗಳ ಹಿಂದೆ ಹೋದವರಲ್ಲವಲ್ಲ! ಯಾವು ಯಾವುದಕ್ಕೋ ಅರ್ಧಪತ್ರಿಕೆಯನ್ನು ಮೀಸಲಿಡುವ ಕನ್ನಡದಿನಪತ್ರಿಕೆಯೂ ಕಾಲುಪುಟದಷ್ಟು ಮಾತ್ರ ಸುದ್ದಿಯನ್ನು ಕವರ್ ಮಾಡಿತ್ತು. ನೋಡಿ ಬೇಜಾರಾಯಿತು.
ಕನ್ನಡ ಚಿತ್ರರಂಗದಲ್ಲಿ ರಾಜ್‌ಕುಮಾರ್ ನಂತರ ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಕೇವಲ ಎರಡನೆಯ ವ್ಯಕ್ತಿ ಅನಂತನಾಗ್ ಎಂದರೆ ಅನಂತನಾಗ್ ಅವರ ಪ್ರತಿಭೆಯ ಅಂದಾಜು ಕನ್ನಡಿಗರಿಗೆ ಸಿಗಬಹುದು. ಅರ್ಧ ಶತಮಾನದಿಂದ ಚಿತ್ರರಂಗದಲ್ಲಿ ೩೦೦ಕ್ಕೂ ಹೆಚ್ಚು ಚಿತ್ರಗಳು, ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಚಲನಚಿತ್ರಗಳು. ಕಲಾತ್ಮಕ ಚಿತ್ರ, ಮುಖ್ಯವಾಹಿನಿ ಸಿನಿಮಾ, ರಂಗಭೂಮಿ ಮತ್ತು ಟೆಲಿವಿಷನ್ ಯಾವುದಾದರೂ ಸರಿ. ಹಲವಾರು ರಾಜ್ಯಪ್ರಶಸ್ತಿಗಳು, ರಾಷ್ಟ್ರಮಟ್ಟದ ಚಲನಚಿತ್ರಗಳು, ಪದ್ಮಭೂಷಣ, ಈಗ ಫಾಲ್ಕೆ! ಎಂಥ ಅದ್ಭುತ ಮನುಷ್ಯ, ಎಷ್ಟು ವಿನೀತ, ಕನ್ನಡಿಗರು ಪುನೀತ!
ಭಾರತೀಯ ಚಿತ್ರರಂಗ ಕಂಡ ಅತ್ಯಂತ ಸುಂದರ ಪುರುಷರಲ್ಲಿ ಅವರೂ ಒಬ್ಬರು. ಕನ್ನಡದ ಅತ್ಯಂತ ಹ್ಯಾಂಡ್-ಸಮ್ ಹೀರೋ ಎಂದು ನಿರಾತಂಕವಾಗಿ ಹೇಳಬಹುದು (ಈ ಹೊಸ ಪ್ರಪಂಚದ ಕೆತ್ತಿದಂತಹ, ಜಿಮ್‌ನಲ್ಲಿ ಹುರಿಗೊಳಿಸಿದ ಅರ್ಥದಲ್ಲಿ ಅಲ್ಲ). ಅವರು ಮೀಸೆಯೊಂದಿಗೆ ಇರಲಿ, ಕ್ಲೀನ್-ಶೇವ್ ಮಾಡಿರಲಿ, ಯುವಕನಾಗಿರಲಿ ಅಥವಾ ಮಧ್ಯವಯಸ್ಕನಿರಲಿ, ಅವರದು ಸಹಜ ಸೌಂದರ್ಯ. ಈ ವಯಸ್ಸಿನಲ್ಲೂ ಅವರ ಸೌಂದರ್ಯ ಮಾಸಿಲ್ಲ!
ಅನಂತನಾಗ್ ಅವರ ಬಗ್ಗೆ ಯೋಚಿಸಿದಾಗ ನನಗೆ ಕಾಣುವುದು ಅವರ ಮುಗುಳುನಗೆ. ಅದು ಎಳ್ಳಷ್ಟೂ ಬದಲಾಗಿಲ್ಲ, ವಯಸ್ಸಾದಂತೆ ಸ್ವಲ್ಪ ಪಕ್ವವಾಗಿದೆ ಅಷ್ಟೆ. ಆ ಒಂದು ಸರಳ ಮುಗುಳುನಗೆಯಲ್ಲಿ ಆತ್ಮೀಯತೆ, ತುಂಟತನ, ಚೇಷ್ಟೆ, ವಿನೋದ ಮತ್ತು ನಾಚಿಕೆ ಎಲ್ಲವೂ ಅಡಗಿದೆ! ನಿಮಗಿಂತ ತನಗೆ ಸ್ವಲ್ಪ ಹೆಚ್ಚು ತಿಳಿದಿದೆ, ಆದರೆ ಅದನ್ನು ಹೇಳುವುದಿಲ್ಲ ಎಂದು ಸೂಕ್ಷ್ಮವಾಗಿ ಸೂಚಿಸುವಂತಹ ಮುಗುಳುನಗೆ!
ಅವರ ಕನ್ನಡವನ್ನು ಕೇಳುವುದರಲ್ಲೇ ಆನಂದವಿದೆ: ಕೃತಕವಾಗಿ ಧ್ವನಿಸದ ಸ್ವಚ್ಛವಾದ ಉಚ್ಚಾರಣೆ ಮತ್ತು ನಿಖರವಾದ ಶಬ್ದಪ್ರಯೋಗ. ಬಹುಶಃ ಕೊಂಕಣಿ, ಕನ್ನಡ, ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳನ್ನು ಬಲ್ಲ ಸಹಜ ಬಹುಭಾಷಿಗರಾಗಿರುವುದೇ ಇದಕ್ಕೆ ಕಾರಣವಿರಬಹುದು.
ಅನಂತನಾಗ್ ‘ನಟಿಸದೆ’ ನಟಿಸುತ್ತಾರೆ. ಆದರೆ ಈ ಸಹಜ ನಟನೆ ಎನ್ನುವುದು ಅಗಾಧವಾದ ಅಭ್ಯಾಸದ ಫಲ. ಅವರು ಆಧುನಿಕ ರಂಗಭೂಮಿಯಿಂದ ಬಂದವರು, ಅನೇಕ ಭಾಷೆಗಳಲ್ಲಿ ಅಭಿನಯಿಸಿದವರು. ಸತ್ಯದೇವ್ ದುಬೆಯಂತಹವರ ಒಡನಾಟದಲ್ಲಿ ಕಲಿತವರು. ನಂತರ ಶ್ಯಾಮ್ ಬೆನೆಗಲ್ ಜೊತೆ ಸೇರಿ ಸಮಾಂತರ ಸಿನಿಮಾದಲ್ಲಿ ನಟಿಸಿದವರು. ಕನ್ನಡದ ನಾಯಕರಾಗುವ ಮೊದಲು ಅನಂತನಾಗ್ ಅಂಕುರ್, ನಿಶಾಂತ್, ಮಂಥನ್ ಮತ್ತು ಭೂಮಿಕಾದಂತಹ ಚಿತ್ರಗಳಲ್ಲಿ ನಟಿಸಿದ್ದರು.
ಕನ್ನಡದ ಮುಖ್ಯವಾಹಿನಿ ಚಿತ್ರರಂಗಕ್ಕೆ ಅನಂತನಾಗ್ ಅವರ ಅತಿದೊಡ್ಡ ಕೊಡುಗೆ ಎಂದರೆ, ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನನ್ನು ನಾಯಕನನ್ನಾಗಿ ಮಾಡಿದ್ದು. ಅವರು ಹತ್ತು ಖಳರನ್ನು ಒಂದೇ ಏಟಿಗೆ ಹೊಡೆಯಲಿಲ್ಲ, ನೃತ್ಯ ಕೂಡ ಮಾಡಲಿಲ್ಲ, ನಾಯಕನ ಆಗಮನವನ್ನು ಸಾರುವ ಪ್ರವೇಶ ದೃಶ್ಯವಿರಲಿಲ್ಲ. ಅವರು ಕೆಳ-ಮಧ್ಯಮ ವರ್ಗದ ಅಂತರ್ಮುಖಿ, ನಾಚಿಕೆ ಸ್ವಭಾವದ ಪ್ರಿಯಕರ, ಕಾಳಜಿ ವಹಿಸುವ ಪತಿ, ಕಡಿಮೆ ಆದಾಯದ ಗುಮಾಸ್ತ, ಸರ್ಕಾರಿ ಶಾಲಾ ಶಿಕ್ಷಕ, ಗೊಂದಲಕ್ಕೊಳಗಾದ ನೆರೆಯವನು, ಆಡಂಬರದ ಗೋಸುಂಬೆ, ಹಾಸ್ಯಾಸ್ಪದ ಸನ್ನಿವೇಶದಲ್ಲಿ ಸಿಕ್ಕಿಬಿದ್ದವನು, ಪ್ರಮಾದ ಮಾಡಿ ಪಾಪಪ್ರಜ್ಞೆಯಲ್ಲಿ ನರಳುವ ಪ್ರಾಮಾಣಿಕ, ಹೆಂಡತಿಯಿಂದ ಏನನ್ನೋ ಮುಚ್ಚಿಡಲು ಪ್ರಯತ್ನಿಸುವ ತುಂಟ, ಹೇಗೆ ವರ್ತಿಸಬೇಕೆಂದು ತಿಳಿಯದೆ ಪ್ರೀತಿಯಲ್ಲಿ ಬೀಳುವ ಯುವಕ… ಸರಳವಾಗಿ ಹೇಳಬೇಕೆಂದರೆ, ಅವರು ನಾವೇ ಆಗಿದ್ದರು.
ಅನಂತನಾಗ್ ಬಗ್ಗೆ ಯೋಚಿಸಿದಾಗಲೆಲ್ಲಾ, ಲಕ್ಷ್ಮಿ ನೆನಪಾಗುತ್ತಾರೆ. ಅನಂತನಾಗ್ ಮತ್ತು ಲಕ್ಷ್ಮಿ ಅವರನ್ನು ನೋಡಿದರೆ, ಅವರು ಒಂದು ದಶಕದಿಂದ ಪ್ರೀತಿಸಿ ನಂತರ ಮತ್ತೊಂದು ದಶಕ ದಾಂಪತ್ಯ ಜೀವನ ನಡೆಸುತ್ತಿದ್ದಾರೇನೋ ಎಂಬಂತೆ ಅನಿಸುತ್ತಿತ್ತು; ಅವರ ನಡುವಿನ ಕೆಮಿಸ್ಟ್ರಿ ಅಂಥದಿತ್ತು. ಒಬ್ಬರಿಗೊಬ್ಬರು ಸ್ಪರ್ಶಿಸದೆಯೇ ಪ್ರಣಯ ಮಾಡಬಲ್ಲವರಾಗಿದ್ದರು. ಕಿರಿಕಿರಿ, ವಾತ್ಸಲ್ಯ, ವಾದ, ವ್ಯಂಗ್ಯ, ನೆಮ್ಮದಿಗಳನ್ನು ನಮ್ಮ ನಿಮ್ಮ ಮನೆಗಳಲ್ಲಿ ನಡೆಯುವಂತೆ ಸಹಜವಾಗಿ ಪರದೆಯ ಮೇಲೆ ತೋರಿಸುತ್ತಿದ್ದರು. ಅವರಿಂದಾಗಿಯೇ ದೊರೈ-ಭಗವಾನ್ ಯುಗದ ಚಲನಚಿತ್ರಗಳು ಅಷ್ಟು ಯಶಸ್ವಿಯಾದವು, ರಾಜನ್-ನಾಗೇಂದ್ರ ಜೋಡಿಯು ಸಂಗೀತದ ಮಾಂತ್ರಿಕತೆಯನ್ನು ಸೃಷ್ಟಿಸಿತು. ಬಯಲು ದಾರಿ, ಚಂದನದ ಗೊಂಬೆ, ಬೆಂಕಿಯ ಬಲೆ ಮತ್ತು ಇತರ ಅನೇಕ ಚಿತ್ರಗಳು ನನ್ನ ನೆನಪಿನ ಭಾಗವಾಗಿವೆ.
ಎಸ್‌ಪಿಬಿ (ಎ ಸ್ಪಿ ಬಾಲಸುಬ್ರಮಣ್ಯಂ) ಅವರ ಬಗ್ಗೆ ಬರೆಯದಿದ್ದರೆ ಈ ಲೇಖನ ಅಪೂರ್ಣ ಅನಿಸುತ್ತದೆ. ಅನಂತನಾಗ್ ಲೇಖನದಲ್ಲಿ ಎಸ್‌ಪಿಬಿಗೆ ಏನು ಕೆಲಸ? ಅನಂತನಾಗ್ ಹೇಗೆ ಹಾಡಬಹುದು ಎಂಬುದು ಎಸ್‌ಪಿಬಿಗೆ ತಿಳಿದಿತ್ತು. ಗಮನವಿಟ್ಟು ಆಲಿಸಿ. ಅನಂತನಾಗ್ ಅವರಿಗಾಗಿ, ಎಸ್‌ಪಿಬಿ ಅವರು ಸ್ವಲ್ಪ ನಾಸಿಕ ಧ್ವನಿಯ ಛಾಯೆಯೊಂದಿಗೆ ಮೃದುವಾಗಿ ಹಾಡುತ್ತಿದ್ದರು (ನಿನ್ನ ನಗುವು ಹೂವಂತೆ ಹಾಡನ್ನು ನೋಡಿ ಮತ್ತು ಆಲಿಸಿ). ದಪ್ಪಧ್ವನಿಯಲ್ಲಿ ಹಾಡಿರುವ ಅಂಬರೀಷ್ ಹಾಡುಗಳೊಂದಿಗೆ ಅಥವಾ ಒರಟು ಧ್ವನಿಯಲ್ಲಿ ಹಾಡಿರುವ ಶಂಕರನಾಗ್ ಹಾಡುಗಳೊಂದಿಗೆ ಹೋಲಿಸಿ ನೋಡಿ, ಎಸ್‌ಪಿಬಿ ಅವರ ಅದ್ಭುತ ಸಾಮರ್ಥ್ಯದ ಅರಿವಾಗುತ್ತದೆ. ತಮ್ಮ ಶೈಲಿಯನ್ನು ಉಳಿಸಿಕೊಳ್ಳುತ್ತಲೇ ತೆರೆಯ ಮೇಲಿನ ವ್ಯಕ್ತಿಯ ವ್ಯಕ್ತಿತ್ವವನ್ನು ಸೂಚಿಸಬಲ್ಲವರಾಗಿದ್ದರು. ‘ನಿನ್ನ ನೀನು ಮರೆತರೇನು’, ‘ಎಲ್ಲಿರುವೆ ಮನವ ಕಾಡುವ ರೂಪಾಸಿಯೇ’, ‘ಕನಸಲು ನೀನೆ ಮನಸಲು ನೀನೆ’, ‘ಆಕಾಶದಿಂದ ಧರೆಗಿಳಿದ ರಂಭೆ’, ‘ನಾನು ನೀನು ಒಂದಾದ’, ‘ಬಿಸಿಲಾದರೇನು’, ‘ಒಲಿದ ಜೀವ ಜೊತೆಯಲಿರಲು’ – ಇವು ನಮ್ಮ ಮನೆಗಳಲ್ಲಿ, ಮಧ್ಯಾಹ್ನ ಮತ್ತು ಸಂಜೆಯ ಬಾನುಲಿಯಲ್ಲಿ ಮತ್ತು ಕ್ಯಾಸೆಟ್ಟುಗಳಲ್ಲಿ ತುಂಬಿದ್ದವು.
ಕಲಾತ್ಮಕ ಸಿನೆಮಾ ಪ್ರಿಯರಿಗೆ, ಅನಂತನಾಗ್ ಹಿಂದಿಯಲ್ಲಿ ನಟಿಸಿದ ಅಂಕುರ್, ನಿಶಾಂತ್, ಮಂಥನ್, ಭೋಮಿಕಾ, ಕಲಿಯುಗ್ ಸಿನೆಮಾಗಳು, ಕನ್ನಡದಲ್ಲಿ ನಟಿಸಿದ ಹಂಸಗೀತೆ, ಬರ, ಅವಸ್ಥೆ, ಅನ್ವೇಷಣೆ ಸಿನೆಮಾಗಳು ಇಷ್ಟವಾಗುತ್ತವೆ. ಕನ್ನಡದ ಹೆಂಗಸರಿಗೆ (ಈಗ ಅವರೆಲ್ಲ ಅರವತ್ತು ಎಪ್ಪತ್ತು ದಾಟಿದ್ದಾರೆ) ಬಯಲುದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಬಾಡದ ಹೂ, ಬೆಂಕಿಯ ಬಲೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು, ಸುಖ ಸಂಸಾರಕ್ಕೆ ಹನ್ನೆರೆಡು ಸೂತ್ರಗಳು, ಒಲವು ಮೂಡಿದಾಗ, ಅರುಣರಾಗ, ಮನೆಯೇ ಮಂತ್ರಾಲಯ…ಸಾಲು ಸಾಲು ಸಿನೆಮಾಗಳು. ಅಲ್ಲಿಯೂ ಇಲ್ಲಿಯೂ ಸಲ್ಲುವ ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದು ಹೀಗೆ, ಆಕ್ಸಿಡೆಂಟ್, ಪರಮೇಶಿ ಪ್ರೇಮ ಪ್ರಸಂಗ ಸಿನೆಮಾಗಳೂ ಇವೆ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ನಾರದ ವಿಜಯ, ಹೆಂಡ್ತಿಗೆ ಹೇಳ್ಬೇಡಿ, ಗೋಲಮಾಲ್ ರಾಧಾಕೃಷ್ಣ, ಗಣೇಶನ ಮದುವೆ, ಗೋಲ್-ಮಾಲ್, ಗೌರಿ ಗಣೇಶ, ಯಾರಿಗೂ ಹೇಳ್ಬೇಡಿ ಸಿನೆಮಾಗಳಿವೆ. ಅನನ್ಯವಾದ ಬೆಳದಿಂಗಳ ಬಾಲೆ ಇದೆ.
ಅನೇಕ ಚಲನಚಿತ್ರ ತಾರೆಯರು ವಯಸ್ಸಾಗಿರುವುದನ್ನು ಮುಚ್ಚಿಡಲು ಏನೆಲ್ಲ ಮಾಡುತ್ತಾರೆ ಅಥವಾ ತೆರೆಯಿಂದ ಮರೆಯಾಗುತ್ತಾರೆ! ಅನಂತನಾಗ್ ಅದಕ್ಕೆ ಹೊರತಾದರು. ‘ಮುಂಗಾರು ಮಳೆ’ಯಲ್ಲಿ ಅಪ್ಪನ ಪಾತ್ರ ಮಾಡಿ ನಗೆಗಡಲಿನಲ್ಲಿ ಮುಳುಗಿಸಿದರು. ಹಿರಿಯ ವ್ಯಕ್ತಿಯಾಗಿ, ಹಿರಿಯ ಶಿಕ್ಷಕನಾಗಿ, ನಿವೃತ್ತ ಅಧಿಕಾರಿಯಾಗಿ ಮತ್ತು ತಾತನಾಗಿ ನಟಿಸಿದರು. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ, ಅವರು ಅದನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು.
ಶಂಕರನಾಗ್ ಅವರಿಂದ ಅನಂತನಾಗ್ ಅವರನ್ನು ಬೇರ್ಪಡಿಸುವುದು ಅಸಾಧ್ಯ. ಅನಂತನಾಗ್ ತಮ್ಮನ ಮೇಲೆ ಒಂದು ಪುಸ್ತಕವನ್ನೂ ಬರೆದಿದ್ದಾರೆ, ‘ನನ್ನ ತಮ್ಮ ಶಂಕರ’. ನಿರೂಪಣೆ ಸರಳವಾಗಿದೆ, ಅಣ್ಣನ ವಾತ್ಸಲ್ಯವೂ ಇದೆ. ಅಣ್ಣ ಅನಂತ ಶಾಂತ, ಸಂಯಮ ಮೂರ್ತಿ; ಶಂಕರ ಅಸಹನೆಯ ಮತ್ತು ಯಾವಾಗಲೂ ಹೊಸತೇನನ್ನಾದರೂ ಪ್ರಯತ್ನಿಸವ ಚಂಚಲ. ಶಂಕರನಾಗ್ ಅವರೊಂದಿಗಿನ ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರಗಳನ್ನು ಮರೆಯಲು ಸಾಧ್ಯವೆ? ಅಣ್ಣ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ನೋಡಲು ತಮ್ಮ ಶಂಕರನಾಗ್ ಇಂದು ಇದ್ದಿದ್ದರೆ ಎಂದು ಅನಿಸದೇ ಇರದು.
ಅನಂತನಾಗ್ ಸುತ್ತ ಅಭಿಮಾನಿ ಸಂಘ ಇರಲಿಲ್ಲ. ಸ್ಟಾರ್ ಎಂಬ ಘೋಷಣೆಗಳಿರಲಿಲ್ಲ. ತೆರೆಯ ಮೇಲಿರಲಿ ಅಥವಾ ಹೊರಗಿರಲಿ ಬಿರುದು-ಬಾವಲಿಗಳಿರಲಿಲ್ಲ. ಚಿತ್ರದ ಕ್ರೆಡಿಟ್‌ಗಳಲ್ಲಿ ಕೇವಲ ಅವರ ಹೆಸರು ಮಾತ್ರ, ಅದರ ಮುಂದೆ ಅಥವಾ ಹಿಂದೆ ಯಾವುದೇ ‘ಸ್ಟಾರ್’ ಇಲ್ಲ. ಪೋಸ್ಟರ್‌ಗಳಿಗೆ ಹಾಲು ಸುರಿಯುವ ಅಗತ್ಯವಿರಲಿಲ್ಲ. ಐವತ್ತು ಅಡಿ ಎತ್ತರದ ಕಟ್-ಔಟ್‌ಗಳಿರಲಿಲ್ಲ. ಆದರೂ ನನ್ನ ತಾಯಿಯ ಪೀಳಿಗೆಯ ಮಹಿಳೆಯರಿಂದಾಗಿ ಕರ್ನಾಟಕದ ಅತಿದೊಡ್ಡ (ಅನಧಿಕೃತ) ಅಭಿಮಾನಿ ಬಳಗವನ್ನು ಹೊಂದಿದವರು ಅನಂತನಾಗ್ ಎಂದು ಹೇಳಿದರೆ ಸುಳ್ಳಾಗಲಾರದು!
ಫಾಲ್ಕೆ ಪ್ರಶಸ್ತಿಯನ್ನು ಪಡೆದ ಇಬ್ಬರು ಕನ್ನಡಿಗರು ಕನ್ನಡ ಚಿತ್ರರಂಗದ ಎರಡು ವಿಭಿನ್ನ ಎಳೆಗಳನ್ನು ಪ್ರತಿನಿಧಿಸುತ್ತಾರೆ ಎನ್ನುವುದರಲ್ಲಿಯೇ ಅನನ್ಯತೆಯಿದೆ. ರಾಜ್‌ಕುಮಾರ್ ಸಾಂಪ್ರದಾಯಿಕ ರಂಗಭೂಮಿಯಿಂದ ಬಂದವರು, ಅನಂತನಾಗ್ ಆಧುನಿಕ ರಂಗಭೂಮಿಯಿಂದ ಬಂದವರು. ಇಡೀ ಚಿತ್ರರಂಗಕ್ಕೆ ರಾಜ್ ಅಣ್ಣಾವ್ರು, ಅನಂತನಾಗ್ ಶಂಕರನಿಗೆ ಅಣ್ಣನಾಗಿದ್ದರೂ ಸಣ್ಣವನಂತೆ ಉಳಿದವರು. ಅವರು ದಂತಕತೆ, ಇವರು ನಮ್ಮ-ನಿಮ್ಮಂತೆ. ಅವರು ನೈತಿಕತೆಯ ಕಾವಲುಗಾರ, ಇವರು ತುಂಟಗಾರ. ಅವರು ಸಮೂಹದ ಸಮ್ಮೋಹನಿಯ ಸಂಕೇತ, ಇವರು ಮಧ್ಯಮ ವರ್ಗದ ಜನಸಾಮಾನ್ಯರ ಪ್ರತೀಕ. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶಿಪುವಾಗಿ ರಾಜ್‌ಕುಮಾರ್, ನಾರದನಾಗಿ ಅನಂತನಾಗ್. ರಾಜ್‌ಕುಮಾರ್ ಅವರ ಹಿರಣ್ಯಕಶಿಪು ಇಡೀ ದೃಶ್ಯವನ್ನು ತುಂಬುತ್ತಾರೆ, ತಲೆಯಿಂದ ಉಂಗುಷ್ಜದವರೆಗೆ ಗರ್ಜಿಸುತ್ತಾರೆ, ಹಿರಣ್ಯಕಶಿಪುವಿಗೆ ಏನು ಬೇಕಿತ್ತೋ ಹಾಗೆ, ವೃತ್ತಿ ರಂಗಭೂಮಿಯ ಕಲಾವಿದನಂತೆ. ನಾರದನಾಗಿ ಅನಂತನಾಗ್ ಸಾಮಾನ್ಯನಂತೆ ಮಾತನಾಡುತ್ತಾರೆ, ಸಹಜವಾಗಿ ನಡೆಯುತ್ತಾರೆ, ನಂತರ ಆ ‘ಅನಂತನಾಗ್’ ಮುಗುಳುನಗುವನ್ನು ಬೀರುತ್ತಾರೆ! ಕನ್ನಡ ಚಿತ್ರರಂಗ ನಮಗೆ ಇಬ್ಬರನ್ನೂ ಕೊಡುಗೆಯಾಗಿ ಕೊಟ್ಟಿತು, ಈ ಇಬ್ಬರಿಂದಾಗಿ ಕನ್ನಡ ಚಿತ್ರರಂಗದ ಸಂಸ್ಕೃತಿ ಇನ್ನಷ್ಟು ಶ್ರೀಮಂತವಾಯಿತು.
ಅನಂತನಾಗ್ ಎಂದಿಗೂ ಪ್ರಸಿದ್ಧಿಯ ಹಿಂದೆ ಓಡಲಿಲ್ಲ, ತಾರೆಯಾಗಿಯೇ ಉಳಿಯಲು ಬಯಸಲಿಲ್ಲ. ನಟಿಸುತ್ತಾ, ವಯಸ್ಸಿಗೆ ಹೊಂದಿಕೊಳ್ಳುತ್ತಾ ನಮ್ಮನ್ನು ಇನ್ನೂ ರಂಜಿಸುತ್ತಿದ್ದಾರೆ. ತೆರೆಯ ಮೇಲೆ ಎಂದೂ ಅತಿದೊಡ್ಡದಾಗಿ (larger than life) ಕಾಣದ ನಟನ ಬಳಿಗೆ ಭಾರತೀಯ ಚಿತ್ರರಂಗದ ಅತಿದೊಡ್ಡ ಗೌರವವು ಹುಡುಕಿಕೊಂಡು ಬಂದಿದೆ. ಥ್ಯಾಂಕ್ಯೂ ಫಾಲ್ಕೆ ಪ್ರಶಸ್ತಿ!









































































































