ಅನಿವಾಸಿ ಬಳಗದ ಯುಗಾದಿ ಸಂಭ್ರಮ

ಅನಿವಾಸಿ ಬಳಗದ 'ರಂಗ' ಯುಗಾದಿ  
- ಅಮಿತಾ ರವಿಕಿರಣ್

ಈ 'ಅನಿವಾಸಿ' ಎಂಬ ಪದ, ಕನ್ನಡ ಬಲ್ಲ ಸರ್ವರಿಗೂ ಅರ್ಥವಾಗುವ ರೀತಿ ಒಂದು ತೆರನಾದರೆ, ನನಗೆ ಅರ್ಥವಾಗುವ ರೀತಿಯೇ ಬೇರೆ. ಅನಿವಾಸಿ ಎಂಬುದು ದೇಶದಿಂದ ದೂರವಿರುವ ಅಥವಾ ಪ್ರಸ್ತುತ ತಾಯಿನೆಲದಲಿ, ಸ್ವದೇಶದಲ್ಲಿ ನೆಲೆಸದ ಅನ್ನುವ ಅರ್ಥವಿದ್ಯಾಗ್ಯೂ ನನಗೆ ಅನಿವಾಸಿ ಎಂಬ ಪದ ಕೇಳಿದೊಡನೆ ಆತ್ಮೀಯ, ಹತ್ತಿರದ, ಪ್ರೀತಿಯ, ಅಕ್ಕರೆಯ ಅಂತಃಕರಣದ, ನಾಡು ನುಡಿಗಳ ಕುರಿತು ಸದಾ ತುಡಿಯುವ ಮಿಡಿಯುವ ಮನಸುಗಳ, ನನ್ನದಲ್ಲದ ನೆಲದಲ್ಲಿ ನನ್ನ ತವರಿನಂತಿರುವ ಒಂದು ಸಹೃದಯಿ ಗುಂಪು ಎಂಬ ಚಿತ್ರ ಮನಃಪಟಲದಲ್ಲಿ ಮೂಡುತ್ತದೆ. ಸಾಹಿತ್ಯ ಸಂಗೀತಗಳಿಂದ ಆಂತರ್ಯವನ್ನು ಚೊಕ್ಕಟವಾಗಿಡಲು, ಸೃಜನಶೀಲತೆಯ ಸ್ಪುರಣದಂತಿರುವ ಅನಿವಾಸಿ ಬಳಗಕ್ಕೆ ಏಳುವರ್ಷಗಳ ಹಿಂದೆ ನನ್ನ ಪರಿಚಯಿಸಿದ್ದು ನಮ್ಮ ಕಥೆಗಾರ್ತಿ ಕವಯಿತ್ರಿ ಅದಮ್ಯ ಉತ್ಸಾಹದ ಚಿಲುಮೆಯಂತಿರುವ ಡಾ ಪ್ರೇಮಲತಾ.

ಅನಿವಾಸಿಯ ಪ್ರತಿಯೊಬ್ಬ ಸದಸ್ಯರ ಕುರಿತು ನನಗೆ ಗೌರವ, ಅಚ್ಚರಿ! ಎಲ್ಲರೂ ಒಂದಲ್ಲ ಕ್ಷೇತ್ರದಲ್ಲಿ ಸಾಧನೆಗೈದವರು, ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಹವ್ಯಾಸ ಆಸಕ್ತಿಗಳನ್ನು ಅಷ್ಟೇ ಆಸ್ಥೆಯಿಂದ ಬೆಳೆಸಿಕೊಂಡು ಅದರ ನಿರಂತರತೆಯನ್ನು ಕಾಪಾಡಿಕೊಂಡು ಬಂದವರು. ಇಲ್ಲಿ ಬರೆಯುವ ಎಲ್ಲರ ಘನವಾದ ಬರವಣಿಗೆಯ ಮುಂದೆ ನನಗೆ ನನ್ನ ಬರಹಗಳು ಆವತ್ತಿಗೂ, ಇವತ್ತಿಗೂ, ಯಾವತ್ತಿಗೂ ತರಗೆಲೆಯಂತೆ ಅನಿಸುತ್ತದೆ. ನನ್ನ ಜೀವನದಲ್ಲಿ ಅನಿವಾಸಿ ಈಗ ಬರೀ ಒಂದು ವಾಟ್ಸಾಪ್ ಗುಂಪು ಅಥವಾ ಬ್ಲಾಗ್ ಬರಹಗಳ ವೇದಿಕೆಗಿಂತ ಹೆಚ್ಚಿನದ್ದು. ನನಗೆ ಶಿಸ್ತು, ಬದ್ಧತೆಯನ್ನು ಮತ್ತೆ ಮತ್ತೆ ಕಲಿಸುವ ತಿಳಿಸುವ ಅನಿವಾಸಿ ಬಳಗವನ್ನು
ಒಮ್ಮೆಯಾದರೂ ಭೇಟಿ ಮಾಡಬೇಕು ಅನ್ನುವುದು ನನ್ನ ಬಹುಕಾಲದ ಕನಸಾಗಿತ್ತು.

ಊರು ಸುಟ್ಟರೂ ಹಣಮಪ್ಪ ಹೊರಗೆ ಅನ್ನುವ ಗಾದೆ ಮಾತಿನಂತೆ, UK ಯಲ್ಲಿ ಇದ್ದಾಗ್ಯೂ ಈ ತನಕ ನನಗೆ ಕನ್ನಡ ಬಳಗ ಅಥವಾ ಅನಿವಾಸಿಯ ಯಾವ ಕಾರ್ಯಕ್ರಮದಲ್ಲೂ ಭಾಗಹಿಸಲು ಆಗಿಲ್ಲ, ಕಾರಣ ವಿಮಾನಯಾನ ಅಥವಾ ಜಲಯಾನ ಮಾಡಿ ಬರಬೇಕಾದ ಅನಿವಾರ್ಯತೆ ಒಂದುಕಡೆಯಾದರೆ, ಪುಟ್ಟ ಮಕ್ಕಳು ಇರುವ ಮನೆಯಲ್ಲಿ ಎಲ್ಲ ಜವಾಬ್ದಾರಿಗಳು ಜಯಮಾಲೆಯಂತೆ ಕೊರಳಿಗೆ ಬಂದು ತಾನೇ ತೂಗು ಹಾಕಿಕೊಂಡಿರುವ ಬಿಡಿಸಿಕೊಳ್ಳಲಾರದ ಜವಾಬ್ದಾರಿಗಳು ಮತ್ತೊಂದೆಡೆ.
ಅದು ಹೇಗೋ ಎಲ್ಲಾ ಗ್ರಹ ನಕ್ಷತ್ರ ಬಲ ಕೂಡಿ ಬಂತು; ನಾನೂ ಈ ಸಲದ ಕನ್ನಡ ಬಳಗ ಯುಕೆ ಮತ್ತು ಲೆಸ್ಟರ್ ಕನ್ನಡ ಬಳಗದ ಯುಗಾದಿ ಸಂಭ್ರಮದಲ್ಲಿ ಭಾಗವಹಿಸುವ ಯೋಗಾಯೋಗ ಒದಗಿ ಬಂತು.
ಈ ಯುಗಾದಿ ನಿಜಕ್ಕೂ, ನಾಡಿನಲ್ಲಿದ್ದು ಯುಗಾದಿ ಹಬ್ಬ ಆಚರಿಸಿದ್ದಕ್ಕಿಂತ ಹೆಚ್ಚು ಸಂಭ್ರಮದಲ್ಲಿ ಜರುಗಿತು.
ಪ್ರತಿಬಾರಿ ಅನಿವಾಸಿ ಬ್ಲಾಗ್ ಮತ್ತು ಗ್ರೂಪ್ ಫೋಟೋಗಳಲ್ಲಿ ನೋಡಿ ಖುಷಿ ಪಡುತ್ತಿದ್ದ ಅನಿವಾಸಿ ಸಾಹಿತಿಕ ಕಾರ್ಯಕ್ರಮದಲ್ಲಿ ನಾನೂ ಈ ಬಾರಿ ಭಾಗವಹಿಸಿದ್ದು ನನಗೆ ಹೆಮ್ಮೆಯ ಸಂಗತಿ.

ಅನಿವಾಸಿ ಕಾರ್ಯಕ್ರಮ

ಪ್ರತಿಬಾರಿಯಂತೆ, ಈ ಸಲವೂ ಕಾರ್ಯಕ್ರಮಕ್ಕೆ ಬರುವ ಅಥಿತಿಗಳ ವೈಶಿಷ್ಟತೆಗೆ ಅನುಗುಣವಾಗಿ ಕಾರ್ಯಕ್ರಮವನ್ನು ರೂಪುಗೊಳಿಸುವುದು ಎಂಬ ನಿರ್ಧಾರವಾದ ಕೆಲ ದಿನಗಳಲ್ಲೇ ರಂಗಭೂಮಿ, ನಟ ನಿರ್ದೇಶಕ, ಕಿರುತೆರೆ, ಬೆಳ್ಳಿತೆರೆಯ ಮೇಲೆ ತಮ್ಮ ವಿಶಿಷ್ಟ ಛಾಪು ಮೂಡಿಸಿ ನೆನಪಿನಲ್ಲಿ ಉಳಿಯುವಂಥ ಹಲವಾರು ಕ್ರೀಯಾಶೀಲ ಪ್ರಸ್ತುತಿಗಳನ್ನು ರಂಗದಮೇಲೆ ನಟಿಸಿ ನಿರ್ದೇಶಿಸಿದ ಅದ್ಭುತ ಕಲಾವಿದ ಶ್ರೀ ಶ್ರೀನಿವಾಸ ಪ್ರಭು ಅವರು ಅತಿಥಿಯಾಗಿ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಮರುಗಳಿಗೆಯಿಂದ ಅನಿವಾಸಿ ಅಂಗಳ ಮತ್ತಷ್ಟು ಕ್ರಿಯಾಶೀಲವಾಯಿತು .
ಎಲ್ಲ ಚರ್ಚೆಗಳು, zoom, ಗೂಗಲ್ ಮೀಟ್ ಗಳಲ್ಲಿ ವಿಚಾರ ವಿನಿಮಯದ ನಂತರ, ಅನಿವಾಸಿ ಬಳಗದ ಉತ್ಸಾಹಿ ದಂಪತಿಗಳಾದ ಅನ್ನಪೂರ್ಣ ಮತ್ತು ಆನಂದ ಅವರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತು, ಎಲ್ಲರ ಸಲಹಾ ಸೂಚನೆಗಳನ್ನು ಪರಾಂಬರಿಸಿ ರಂಗಭೂಮಿ ನಾಟಕ ಕುರಿತಾದ ಕಾರ್ಯಾಗಾರವನ್ನುಏರ್ಪಡಿಸುವ ಕುರಿತು ಅತಿಥಿಗಳೊಂದಿಗೆ ಮಾತನಾಡಿ ಕಾರ್ಯಕ್ರಮದ ರೂಪರೇಶೆ ತಯಾರಿಸಿದರು. ಜೊತೆಗೆ ಆಸಕ್ತರು ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಬೇಕು ಅಂತಿದ್ದರೆ ಮೊದಲೇ ಕಳುಹಿಸಬೇಕಾಗಿ ವಿನಂತಿಸಲಾಯಿತು.

ಕಾರ್ಯಕ್ರಮದ ದಿನಕ್ಕಿಂತ ಅದರ ಸಿದ್ಧತೆಗಳನ್ನು, ಪೂರ್ವ ತಯಾರಿಗಳನ್ನು ನೋಡುವುದು ಮತ್ತು ಆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದೇ ಒಂದು ಮಜಾ ಅನುಭವ. ನಾನು, ಡಾ ಶ್ರೀವತ್ಸ ದೇಸಾಯಿ ಅವರೊಂದಿಗೆ ಕಾರ್ಯಕ್ರಮದ ಮುನ್ನಾದಿನ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಿ ಮತ್ತಿಬ್ಬರು volunteers ಜೊತೆಗೂಡಿ ಖುರ್ಚಿ, ಮೇಜು ಜೋಡಿಸಿ ಬ್ಯಾನರ್ ಹಾಕಿ, ಎಲ್ಲವನ್ನು ಸಿದ್ಧಮಾಡಿ ಬಂದೆವು.
ಆದರೆ ಮರುದಿನ ಅನಿವಾರ್ಯ ಕಾರಣಗಳಿಂದಾಗಿ ಆ ಜಾಗದಲ್ಲಿ ಅನಿವಾಸಿ ಕಾರ್ಯಕ್ರಮ ನಿಗದಿತ ಸಮಯಕ್ಕೆ ನಡೆಯದೆ ಸ್ವಲ್ಪ ನಿರಾಸೆ ಉಂಟುಮಾಡಿತು. ಆದರೆ ಇತ್ತ ಹಬ್ಬದಡಿಗೆಯ ಅದ್ಭುತ ರುಚಿಯ ಬಾಳೆಎಲೆ ಊಟ ಉಂಡು ಸಾಂಸ್ಕೃತಿಕ ಕಾರ್ಯಕ್ರಮ ನೋಡುತ್ತಾ ಕುಳಿತಿರುವಾಗ ಅನಿವಾಸಿ ಕಾರ್ಯಕ್ರಮ ನಾಲ್ಕು ಘಂಟೆಗೆ ನಿಗದಿಯಾಗಿದೆ ಎಂದು ಸಂಘಟಕರು ತಿಳಿಸಿದ್ದು ನಿಜಕ್ಕೂ ಮನಸನ್ನು ಪ್ರಫುಲ್ಲ ಗೊಳಿಸಿತು.

ಅನಿವಾಸಿಯ ಈ ಕಾರ್ಯಾಗಾರಕ್ಕೆಂದೇ ಕಟ್ಟಿದ್ದರೇನೋ ಅನ್ನುವಷ್ಟು ಅಚ್ಚುಕಟ್ಟಿನ ಪುಟ್ಟ ಸುಂದರ ಕೋಣೆಯಲ್ಲಿ ಆಸಕ್ತರು ಸೇರಿದ ಮೇಲೆ, ಕಾರ್ಯಕ್ರಮದ ಆರಂಭಕ್ಕೆ ಒಂದು ನಾಂದಿ ಗೀತೆ ಹಾಡುವ ಅವಕಾಶ ನನಗೆ ಒದಗಿ ಬಂತು. ಕಾರ್ಯಕ್ರಮವನ್ನು ಅನ್ನಪೂರ್ಣ ಅವರು ಈ ಮೊದಲೇ ಕಳಿಸಲಾಗಿದ್ದ ಪ್ರಶ್ನೆಗಳನ್ನು ಒಂದೊಂದಾಗಿ ಸ್ಪಷ್ಟತೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀನಿವಾಸ ಪ್ರಭು ಅವರಿಗೆ ಕೇಳುತ್ತ ಹೊದರು. ಶ್ರೀನಿವಾಸ ಪ್ರಭುಗಳು ಕೂಡ ಪ್ರತಿ ಪ್ರಶ್ನೆಗೂ ತಮ್ಮ ಅನುಭವದ ಬುತ್ತಿಯಿಂದ ರುಚಿಯಾದ ತುತ್ತುಗಳನ್ನೇ ನಮಗೆ ಉಣಬಡಿಸಿದರು.
ಒಂದು ನಾಟಕವನ್ನು ಪುಸ್ತಕದಿಂದ ರಂಗದ ಮೇಲೆ ತರುವಾಗ ಎದುರಾಗುವ ಸವಾಲುಗಳು, ಎಲ್ಲಿ ನಿಯಮಗಳನ್ನು ಸಡಿಲಿಸಬಹುದು , ಯಾವುದನ್ನು ಸಡಲಿಸಬಾರದು? ಹವ್ಯಾಸಿ ರಂಗಭೂಮಿ ನಟರಿಗೆ ಎದುರಾಗುವ ಸಮಸ್ಯೆಗಳು. ಕ್ರಿಯಾಶೀಲ ಜಗತ್ತಿನ ವಿಪರ್ಯಾಸಗಳ ಕುರಿತು ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು.
ಅವರ ಮಾತುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಳುಗರನ್ನು ಅದೆಷ್ಟು ತಾಕಿದವೆಂದರೆ, ಒಂದು ನಾಟಕದ ತಂಡವನ್ನೇ ಕಟ್ಟುವ ಹುರುಪಿನಲ್ಲಿ ಆಸಕ್ತರ ಪಟ್ಟಿಕೂಡಾ ಸಿದ್ಧವಾಯಿತು. ಇವೆಲ್ಲ ಖುಷಿಯ ವಿಷಯಗಳು ಜರುಗುವಾಗ ದೇಸಾಯಿಯವರು ಕಾರ್ಯಕ್ರಮಕ್ಕೆ ನಿಗದಿಯಾದ ಒಂದು ಘಂಟೆಯ ಕಾಲಾವಕಾಶ ಮುಗಿಯುತ್ತ ಬಂದಿದ್ದನ್ನು ನಿರ್ವಾಹಕ ಗಮನಕ್ಕೆ ತಂದು ನಮ್ಮನ್ನೆಲ್ಲ ಮತ್ತೆ ವಾಸ್ತವಕ್ಕೆ ಕರೆತಂದರು. ಛೇ ಇಷ್ಟು ಬೇಗ ಮುಗಿದೇ ಹೋಯಿತೇ ಅನ್ನುವಂಥ ಭಾವ ದಟ್ಟವಾಗುವ ಮುನ್ನವೇ, ಆನಂದ ಅವರು ವಂದನಾರ್ಪಣೆ ನಡೆಸಿಕೊಟ್ಟರು.
ಅತಿಥಿಗಳೊಂದಿಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅನಿವಾಸಿ ಸದಸ್ಯರು ಗ್ರೂಪ್ ಫೋಟೋ ತೆಗೆಸಿಕೊಂಡ ನಂತರವೂ ಶ್ರೀನಿವಾಸ ಪ್ರಭುಗಳೊಂದಿಗೆ ಹಲವರು ನಾಟಕದ ಬಗ್ಗೆ ಚರ್ಚೆ ನಡೆಸುತ್ತಿದ್ದುದು ಕಾರ್ಯಕ್ರಮ ಸಾರ್ಥಕ್ಯ ಎಂದರೂ ಅತಿಶಯೋಕ್ತಿ ಅಲ್ಲ.


			

ಇಂಗ್ಲೆಂಡಿನಲ್ಲಿ ಯುಗಾದಿ: ವಸಂತನಾಗಮನದ ನಾಂದಿ

ಸಪ್ಟೆಂಬರ್ ತಿಂಗಳಿನಿಂದ ನಿರಂತರ ಮಳೆಯ ಆಘಾತಕ್ಕೆ ತುತ್ತಾಗಿರುವ ಇಂಗ್ಲೆಂಡಿನಲ್ಲಿ ಕಳೆದ ಕೆಲವು ದಿನಗಳಿಂದ ಸೂರ್ಯ ಮಹಾಶಯ ಮೋಡಗಳ ಚಾದರದ ಮರೆಯಿಂದ ಹಣಕಿ ಹಾಕುತ್ತ ಕವಿದಿರುವ ಛಳಿಯ ಬಲೆಯನ್ನು ಹರಿದು ಬದಿಗೊಡ್ಡಲು ಪ್ರಯತ್ನಿಸುತ್ತಿದ್ದಾನೆ. ಅವನ ಕ್ಷೀಣ ಪ್ರಯತ್ನವನ್ನು ಹುರಿದುಂಬಿಸಲು ಒಣಗಿ ನಿಂತ ಗಿಡ ಮರಗಳು ಟಿಸಿಲೊಡೆಯುತ್ತ, ಮೈತುಂಬ ಬಣ್ಣ ಬಣ್ಣದ ಹೂಗಳನ್ನು ಹೊತ್ತು ಚಿಯರ್ ಚಿಣ್ಣರಂತೆ ಉತ್ಸಾಹದಿಂದ ತಲೆದೂಗುವುದ ಕಂಡಾಗ ವಸಂತ ಬಂದ ಎಂಬ ಉತ್ಸಾಹ ನಮ್ಮಲ್ಲೂ. ವಾತಾವರಣದಲ್ಲಿ ಕಾವು ಕೂಡುತ್ತಿದ್ದಂತೇ ಗೂಡುಗಳಿಂದ ಹೊರಬಿದ್ದು ಹೊಂಬಿಸಿಲ ಹೊಲದಲ್ಲಿ ಹೊರಳಾಡುವ ಹಂಬಲ ಹೊಮ್ಮುವುದು ಸಹಜ. ಇಂತಹ ಹಂಬಲಕ್ಕೆ ಇಂಬಾಗುವುದು ಯುಗಾದಿ. ಪ್ರತಿವರ್ಷದಂತೆ ಈ ವರ್ಷವೂ ಕನ್ನಡ ಬಳಗ ಯು.ಕೆ ಯುಗಾದಿ ಹಬ್ಬದ ಸಂಭ್ರಮದ ಕಾರ್ಯಕ್ರಮವನ್ನು ಏಪ್ರಿಲ್ ೧೩ರಂದು ಲೆಸ್ಟರ್ ನಗರದಲ್ಲಿ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣೀ ಭೂತರಲ್ಲಿ ಒಬ್ಬರಾದ, ಅನಿವಾಸಿ ಬಳಗದ ಸದಸ್ಯರೂ ಆದ ಡಾ. ರಾಜಶ್ರೀ ಪಾಟೀಲರು ತಮ್ಮ ಅನಿಸಿಕೆಗಳನ್ನು ಚಿತ್ರ ಸಮೇತ ಇಲ್ಲಿ ಉಣಬಡಿಸಿದ್ದಾರೆ. ಕಾರಣಾಂತರಗಳಿಂದ ಅಂದು ಬರಲಾಗದವರಿಗೆ, ವಿದೇಶಗಳಲ್ಲಿರುವ ನಮ್ಮ ಓದುಗರಿಗೆ ಈ ವರದಿ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಿದ ಅನುಭವ ಕೊಡುವುದರಲ್ಲಿ ಸಂದೇಹವಿಲ್ಲ. ಪ್ರತೀ ಕನ್ನಡ ಬಳಗದ ದೀಪಾವಳಿ-ಯುಗಾದಿ ಕಾರ್ಯಕ್ರಮದಲ್ಲಿ ನಮ್ಮ ಅನಿವಾಸಿ ಬಳಗ ಸಮಾನಾಂತರವಾಗಿ ಸಾಹಿತ್ಯಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿ ರಂಗಕರ್ಮಿ ಶ್ರೀ. ಶ್ರೀನಿವಾಸ ಪ್ರಭು ಅವರೊಂದಿಗೆ ನಡೆಸಿದ ಸಂವಾದದ ಅನುಭವವನ್ನು ಉತ್ತರ ಐರ್ಲ್ಯಾನ್ಡ್ ನಿಂದ ಮೊದಲ ಬಾರಿಗೆ ಭಾಗವಹಿಸಿದ ಶ್ರೀಮತಿ ಅಮಿತ ರವಿಕಿರಣ್ ಮುಂದಿನ ವಾರ ವಿಶದವಾಗಿ ಹಂಚಿಕೊಳ್ಳಲಿದ್ದಾರೆ. (ಸಂ)

‘ಬೇವಿನಕಹಿ ಬಾಳಿನಲಿ, ಹೂವಿನ ನಸುಗಂಪ ಸೂಸಿ ಜೀವಕಳೆಯ ತರುತಿದೆ. ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.’
ನಮ್ಮೆಲ್ಲರ ಜೀವನ ಜಂಜಾಟಗಳ ನಡುವೆ ಸಂಭ್ರಮದ ಕಳೆ ತರಲು ಯುಗಾದಿ ಸಂಭ್ರಮ ಮತ್ತೆ ಬಂದಿತ್ತು ೧೩/೦೪/೨೪ ಲೆಸ್ಟರ್ ಗೆ. ಲೆಸ್ಟರ್ ಕನ್ನಡಿಗರು ೨೦೧೬ ನಿಂದ ಸಾಂಪ್ರದಾಯಿಕವಾಗಿ ಯುಗಾದಿಯನ್ನ ಸಂಭ್ರಮದಿಂದ ಆಚರಿಸುತ್ತ ಬಂದಿದ್ದಾರೆ  ಆದರೆ ಈ ಬಾರಿ ಕನ್ನಡ ಬಳಗದ ಸಹಯೋಗ ಅದರ ಮೆರಗನ್ನ ಇನ್ನೂ ಹೆಚ್ಚಿಸಿತ್ತು. ದೇಶದ ಹಲವಾರು ಮೂಲೆಗಳಿಂದ  ೬೦೦ಕ್ಕೂ ಹೆಚ್ಚು ಜನರು ಯುಗಾದಿ ಸಂಭ್ರಮವನ್ನು  ಆಚರಿಸಲು ನೆರೆದಿದ್ದರು. ಅದೇ ದಿನದಂದು ಹಲವಾರು ಕಡೆ ಯುಗಾದಿ ಸಂಭ್ರಮಾಚರಣೆ ಇದ್ದರೂ ಲೆಸ್ಟರನಲ್ಲಿ ಇಷ್ಟೊಂದು ಜನ ಸೇರಿದ್ದು ಇನ್ನೂ ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ವಿಧಿವತ್ತಾಗಿ  ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಯೊಂದಿಗೆ ಮತ್ತು ಸ್ತುತಿಹಾಡಿನೊಂದಿಗೆ ಓಂಕಾರ ದೊರಕಿತು. ಲೆಸ್ಟರ್ ಕನ್ನಡಿಗರು ಮತ್ತು ಕನ್ನಡ ಬಳಗ ಯುಕೆ ತಂಡಗಳು ಭಾರತದಿಂದ ಆಗಮಿಸಿದ ಜನಪ್ರಿಯ ಗಣ್ಯ ಅತಿಥಿಗಳಾದ ಶ್ರೀಯುತ ಸಿಹಿ ಕಹಿ ಚಂದ್ರು, ಶ್ರೀನಿವಾಸ ಪ್ರಭು, ವಿಶ್ವೇಶ್ ಭಟ್ ಅವರನ್ನ ಮತ್ತೂ ದೇಶದ ಮೂಲೆ ಮೂಲೆಯಿಂದ ಬಂದ ಕನ್ನಡಿಗರನ್ನ ಹೃದಯ ಪೂರ್ವಕವಾಗಿ ಬೇವು ಬೆಲ್ಲವನ್ನ ಹಂಚುವದರೊಂದಿಗೆ ಸ್ವಾಗತಿಸಿದರು. ಗಣ್ಯರು ದೀಪ ಬೆಳಗಿಸುವದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶುಭಕೋರಿದರು.

ಸಾಂಪ್ರದಾಯಿಕ ಭರತನಾಟ್ಯ ನೃತ್ಯಗಳಿಂದ ಕಲಾಪ್ರದರ್ಶನ ಪ್ರಾರಂಭವಾಯಿತು. ಬಿಡುವಿಲ್ಲದೆ ಸತತ ೫ ಘಂಟೆಗಳ ಕಾಲ ಕಲಾಪ್ರದರ್ಶನ ಯುಕೆಯ ವಿವಿಧ ಪ್ರದೇಶಗಳಿಂದ ಬಂದ ಕಲಾವಿದರಿಂದ ನಡೆಯಿತು .  ಚಿಕ್ಕ ಪುಟಾಣಿಗಳು ‘ಸಿಂಡರೆಲ್ಲ’ ನೃತ್ಯರೂಪಕ , ಧಾರ್ಮಿಕ ಭಾವನೆಯನ್ನು ಪುಟಿಸಿದ, ನಾಟಕೀಯ ಕನ್ನಡ ಭಾಷೆಯಲ್ಲಿ ಮೂಡಿ ಬಂದ ‘ಸೀತಾ ಅಗ್ನಿಪ್ರವೇಶ’ ದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕರ್ನಾಟಕದ ಶ್ರೀಮಂತ ನೃತ್ಯ ವೈವಿದ್ಯತೆಯನ್ನ ಪ್ರದರ್ಶಿಸುವ ಕೋಲಾಟ , ಕಂಸಾಳೆ, ಡೊಳ್ಳು ಕುಣಿತ, ಕೊಡವ ನೃತ್ಯ ಮತ್ತು ಹುಲಿಕುಣಿತವನ್ನೊಳಗೊಂಡ ‘ಕರ್ನಾಟಕ ನೃತ್ಯದರ್ಶನ’, ಭಾರತದ ವಿವಿಧ ರಾಜ್ಯಗಳ ಮದುವೆ ಶೃಂಗಾರವನ್ನ ಬಿಂಬಿಸುವ ‘ಲಗ್ನ ಶೃಂಗಾರ’, ‘ಹಚ್ಚೇವು ಕನ್ನಡದ ದೀಪ’ ನೃತ್ಯ ರೂಪಕ, ಜನಪ್ರಿಯ ಗೀತೆಗಳನ್ನಾಧರಿಸಿದ ನೃತ್ಯಗಳು, ಹಾಡು, ವೀಣೆ ಹಾಗು ಗಿಟಾರ್ ವಾದನ ಕಾರ್ಯಕ್ರಮಗಳು ನೆರೆದವರ ಮನಸೆಳೆದವು.

ಈ ಎಲ್ಲ ಕಾರ್ಯಕ್ರಗಳು ಒಂದು ಕಡೆಯಾದರೆ, ಇನ್ನೊಂದೆಡೆ ಬಹು ಪ್ರಸಿದ್ದಿ ಪಡೆದಿರುವ ಲೆಸ್ಟರ್ ಬಾಳೆ ಎಲೆ ಭೋಜನ ಯುಗಾದಿ ಸಂಭ್ರಮಕ್ಕೆ ಸಾಂಪ್ರದಾಯಿಕ ಹೊಳಪನ್ನು ಕೊಟ್ಟಿತ್ತು. ಹೋಳಿಗೆ, ಪಾಯಸ, ಭಜಿ, ಪಲ್ಯಗಳು, ಪೂರಿ, ಚಿತ್ರಾನ್ನ, ಅನ್ನ, ಸಾರು, ಸಾಂಬಾರ್, ಉಪ್ಪಿನಕಾಯಿ, ಕೋಸಂಬ್ರಿ ಹೀಗೆ ಭಕ್ಷ್ಯಗಳ ಪಟ್ಟಿ ಎಷ್ಟು ದೊಡ್ಡದಿತ್ತೋ, ಊಟಮಾಡಿದವರಿಂದ ಊಟದ ಬಗೆಗಿನ ಹೊಗಳಿಕೆ ಪಟ್ಟಿನೂ ಅಷ್ಟೇ ದೊಡ್ಡದಾಗಿತ್ತು! ಲೆಸ್ಟರ್ ಆಯೋಜಕರೇ ಟೊಂಕಕಟ್ಟಿ ಈ ಭೂರಿ ಭೋಜನದ ಅಡುಗೆಯನ್ನು ಮಾಡಿ, ಬಡಿಸಿದ್ದು ಇನ್ನೂ ವಿಶೇಷವಾಗಿತ್ತು! ಊಟದ ವ್ಯವಸ್ಥೆ ಯಶಸ್ವಿಯಾಗಲು ಲೆಸ್ಟರ್ ಕನ್ನಡ ಕುಟುಂಬದೊಟ್ಟಿಗೆ ಹಲವಾರು ಸ್ವಯಂಸೇವಕರು ಕೆಲಸಮಾಡಿದ್ದರು. ಕರ್ನಾಟಕದಿಂದ ಬಂದ ಲೆಸ್ಟರ್ ಮತ್ತು ಡಿ ಮೊಂಟೊಫೋರ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು , ಶಿವಾಲಯ ಲೆಸ್ಟರ್ ಗುಂಪು ಮತ್ತು ಹೆಚ್ ಎಸ್ ಎಸ್ ಸ್ವಯಂಸೇವಕರು ನಗುಮುಖದಿಂದ ತಮ್ಮ ನಿಸ್ವಾರ್ಥ ಸಹಾಯ ಒದಗಿಸಿದರು.

ಸಭಾಂಗಣದ ಪಕ್ಕದಲ್ಲಿ ಆಯೋಜಿಸಿದ ಕೆಲ ಜಾಹಿರಾತುದಾರರ ಅಂಗಡಿಗಗಳು ಜನರ ಆಕರ್ಷಣೆಗೆ ಒಳಗಾದವು . ಇವುಗಳ ಜೊತೆ ಮ್ಯಾಕ್ ಮಿಲನ್ ಚಾರಿಟಿಗೋಸ್ಕರ ೧೩ ವರ್ಷದ ಹುಡುಗಿ ಖುಷಿ ಪಾಟೀಲ್ ತನ್ನ ಕೈಯಾರೆ ಬೇಕ್ ಮಾಡಿದ ವಿವಿಧ ರೀತಿಯ ಕೇಕುಗಳು ಮತ್ತು ಬಿಸ್ಕತ್ಗಳನ್ನೊಳಗೊಂಡ ಅಂಗಡಿ ಚಿಕ್ಕ ಮಕ್ಕಳು ತಮ್ಮ ತಂದೆ ತಾಯಂದಿರನ್ನ ಅಲ್ಲಿಗೆ ಕರೆದೊಯ್ಯುವಂತೆ ಮಾಡಿತ್ತು. ನೆರೆದವರ ಧಾರಾಳ ಕಾಣಿಕೆ ಜಾಹಿರಾತಿನ ನೆರವಿಲ್ಲದೆ ಅವಳ ನೀರಿಕ್ಷೆಗೂ ಮೀರಿ ಹಣಕೂಡಿಸುವಲ್ಲಿ ಯಶಸ್ವಿಯಾಯಿತು. ಅನನ್ಯ ಪ್ರಸಾದ್ (ಡಾ ಜಿ ಎಸ್ ಶಿವಪ್ರಸಾದರವರ ಮಗಳು) ಈ ವರ್ಷಾಂತ್ಯದಲ್ಲಿ ತಾವು ಒಂಟಿಯಾಗಿ ದತ್ತಿ ಕಾರ್ಯಕ್ಕಾಗಿ ಅಟ್ಲಾಂಟಿಕ್ ಸಾಗರವನ್ನು ಹುಟ್ಟು ದೋಣಿಯಲ್ಲಿ ದಾಟುವ ಸಾಹಸದ ಮಾಹಿತಿಯನ್ನು ಹಂಚಿಕೊಂಡರು. ಸಂಗ್ರಹಿಸಲಿರುವ ಹಣವನ್ನು ಯು.ಕೆ ಯ ಮಾನಸಿಕ ಆರೋಗ್ಯ ದತ್ತಿ ಮತ್ತು ಭಾರತದ ದೀನಬಂಧು ಟ್ರಸ್ಟ್ ಗಳೊಂದಿಗೆ ಹಂಚುವ ಆಕಾಂಕ್ಷೆ ಅವರದ್ದು. ಅವರ ಈ ಪ್ರಯತ್ನ ಯಶಸ್ವಿಯಾದರೆ, ಅಟ್ಲಾಂಟಿಕ್ ಸಾಗರವನ್ನು ಒಬ್ಬಂಟಿಯಾಗಿ ಹುಟ್ಟು ದೋಣಿಯಲ್ಲಿ ಕ್ರಮಿಸಿದ ಪ್ರಥಮ ಬಣ್ಣದ ಮಹಿಳೆಯಾಗಲಿದ್ದಾರೆ ಎಂಬುದು ಕನ್ನಡಿಗರಿಗೆ/ಭಾರತೀಯರಿಗೆ ಹೆಮ್ಮೆಯ ವಿಷಯ. ಅವರ ಈ ಪ್ರಯತ್ನ ಯಶಸ್ವಿಯಾಗಲೆಂದು ಎಲ್ಲರೂ ಹಾರೈಸಿದರು.  ಇದರೊಟ್ಟಿಗೆ ಕನ್ನಡ ಬಳಗ ಯುಕೆ ತಂಡದ ವಾರ್ಷಿಕ ಸಾಮಾನ್ಯ ಸಭೆ (ಎಜಿಮ್) ಮತ್ತು ಅನಿವಾಸಿ ಬಳಗದ ಕಾರ್ಯಕ್ರಮ (ಇದರ ವಿಶೇಷ ವಿವರ ಮುಂದಿನ ವಾರ) ಸಮಾನಾಂತರವಾಗಿ ನಡೆದವು.

ಮತ್ತೆ ಸಾಯಂಕಾಲ ಸಭಿಕರೆಲ್ಲ ಕಾತುರದಿಂದ ಕಾಯುತ್ತಿದ್ದ ಗಣ್ಯರ ಕಾರ್ಯಕ್ರಮಗಳು ಶುರುವಾದವು. ಶ್ರೀಯುತ ಶ್ರೀನಿವಾಸ ಪ್ರಭು ತಮ್ಮ ವೃತ್ತಿ ಬದುಕಿನ ಅನುಭವಗಳನ್ನ ಹಂಚಿಕೊಂಡು ಜನರನ್ನ ರಂಜಿಸಿದರು. ಸಭಿಕರ ಕೋರಿಕೆಗೆ ಮಣಿದು, ರಣಧೀರ ಚಿತ್ರದಲ್ಲಿ ಅವರು ನಟ ರವಿಚಂದ್ರನ್ ಅವರಿಗೆ ಧ್ವನಿ ದಾನ ಮಾಡಿದ ಸಂಭಾಷಣೆಗಳನ್ನು ಸಾದರ ಪಡಿಸಿದರು. ಆದರೆ ಅವರು ತಮ್ಮ ಕಂಚಿನ ಕಂಠದಲ್ಲಿ ಪಠಿಸಿದ ಹ್ಯಾಮ್ಲೆಟ್ ನಾಟಕದ ನಾಯಕನ ಕೊನೆಯ ಸಂಭಾಷಣೆ ಅವರ ಭಾಷಣದ ಪ್ರಮುಖ ಆಕರ್ಷಣೆಯಾಗಿತ್ತು. ಶ್ರೀಯುತ  ಸಿಹಿಕಹಿ ಚಂದ್ರು ಅವರಂತೂ ತಮ್ಮ ಮಾತಿನ ಚಾಕಚಕ್ಯತೆಯಿಂದ ಸಭಿಕರನ್ನ ನಗೆಗಡಲಲ್ಲಿ ಮುಳುಗಿಸಿದರು. ಅವರು ಕಲಾಸಾಮ್ರಾಟ್ ರಾಜಕುಮಾರ ಅವರೊಂದಿಗೆ ಕಳೆದ ಕ್ಷಣಗಳು ಎಲ್ಲರ ಮನದಲ್ಲಿ ಮರೆಯದೆ  ಉಳಿಯುವಂತವು. ಅವರು ನಡೆಸಿ ಕೊಡುವ  ಅಡುಗೆ ಕಾರ್ಯಕ್ರಮಗಳು ಕರ್ನಾಟಕದ ಮನೆಮನೆಗಳಲ್ಲಿ ಮಾತಾಗಿವೆ. ಅವರ ಸಲಹೆಯಂತೆ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಿಗಳು ಮನೆಯಲ್ಲಿ ಮಾಡಿದ ಅಡುಗೆಗಳ ರುಚಿ ನೋಡಿ ಚಂದ್ರು ಅವರು ವಿಜೇತರನ್ನ ಆಯ್ಕೆಮಾಡಿದರು ಮತ್ತು ಅವರ ಹೆಸರಾಂತ ಜನುಮದ ಜೋಡಿ ಸ್ಪರ್ಧೆಯನ್ನೂ ನಡೆಸಿಕೊಟ್ಟರು.

ಸಾಯಂಕಾಲದ ಲಘು ಉಪಾಹಾರ ಮತ್ತು ಚಹಾ ಜನರನ್ನ ಕೊನೆಯ ಕಾರ್ಯಕ್ರಮಕ್ಕೆ ಸಜ್ಜುಗೊಳಿಸಿತು. ಶ್ರೀಯುತ ವಿಶ್ವೇಶ್ ಭಟ್ ರವರು ಬಹುಮುಖ ಪ್ರತಿಭೆಯ ಅಭಿಯಂತರು. ಇವರು ವ್ಯಂಗಚಿತ್ರ ಮತ್ತು ಸಂಗೀತ ಲೋಕಗಳಲ್ಲಿ ತಮ್ಮ ಛಾಪನ್ನ ಮೂಡಿಸಿದ್ದಾರೆ. ಇವರ ತಮ್ಮ ವಿಭಿನ್ನ ರೀತಿಯ ಹಲವಾರು ಸಂಗೀತ ಪ್ರಕಾರಗಳನ್ನೊಳಗೊಂಡ ಪ್ರದರ್ಶನದಿಂದ  ಜನರನ್ನ ಮಂತ್ರ ಮುಗ್ಧರನ್ನಾಗಿಸಿದರು. ಇವರ ಹಾಡಿಗೆ ಜನ ಹೆಜ್ಜೆ ಹಾಕಿ ಸಂತೋಷ ವ್ಯಕ್ತ ಪಡಿಸಿದರು. ಕಾರ್ಯಕ್ರಮ ರಾತ್ರಿಯ ಭೋಜನ ಮತ್ತು ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು.

ಒಟ್ಟಾರೆ ಇದು ಒಂದು ಪರಿಪೂರ್ಣವಾದ , ಪಕ್ವವಾದ, ಯುಗಾದಿ ಹಬ್ಬದ ಸಂಭ್ರಮವನ್ನೊಳಗೊಂಡ ಮತ್ತು  ಕರ್ನಾಟಕದ ಸಂಸ್ಕೃತಿಯ ವೈವಿಧ್ಯತೆಯನ್ನ ಎತ್ತಿಹಿಡಿಯುವ ಆಚರಣೆಯಾಗಿತ್ತು. ಹೀಗೆ ಹಲವಾರು ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ನಡೆದು ಅನಿವಾಸಿ ಕನ್ನಡಿಗರ ಮನದಲ್ಲಿ ಸದಾ ತಾಯ್ನುಡಿ ಮತ್ತು ತಾಯ್ನೆಲದ ವಾಸನೆಯನ್ನು ತುಡಿಯುತ್ತಿರಲಿ ಎಂದು ಹಾರೈಸೋಣ.

ಡಾ. ರಾಜಶ್ರೀ ಪಾಟೀಲ್

ಕಥೆ ಕಥೆ ಕಬ್ಬಿಣ..

‘ಕನೆಕ್ಟ್ ಆದರೆ ಕಥೆ ..ಬಾಕಿ ಎಲ್ಲ ವ್ಯಥೆ’.

ನಮಸ್ಕಾರ ಅನಿವಾಸಿ ಬಂಧುಗಳೇ,ಇವತ್ತಿನ ಓದಿಗೆ ಸ್ವಾಗತ 

ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ. ಪ್ರಾಯಶ: ಯಾವ ಕಥೆಗಾರರಿಗೂ ಅವರವರ ಕಥೆಗಳ ಬಗ್ಗೆ ಕರಾರುವಕ್ಕಾದ ಅಭಿಪ್ರಾಯವಿರುವುದಿಲ್ಲವಾದ್ದರಿಂದ ಅವರೆಲ್ಲ ಒಂದಕ್ಕೆ ನಿಲ್ಲಿಸದೇ ಹಲವಾರು ಕಾದಂಬರಿಗಳನ್ನು ರಚಿಸುತ್ತಾರೋ ಏನೋ? ನಾವೂ ಹಾಗೇ. ಸಿನೆಮಾಗಳ ಮೇಲೆ ಸಿನೆಮಾ. ‘ ಇಂಥದ್ದೊಂದನ್ನು ನೋಡೇ ಇಲ್ಲ’ ಎಂದು ಬೊಂಬಡಿ ಬಜಾಯಿಸುತ್ತಾ ಮಾಡುತ್ತಲೇ ಹೋಗುತ್ತೇವೆ. ಕಥೆ ತನ್ನ ಪಾಡಿಗೆ ತಾನೆಲ್ಲೋ ಇರುತ್ತದೆ.
‐--ಯೋಗರಾಜ ಭಟ್.

ಹೌದಲ್ಲವೇ ಕಥೆ ಯಾರ ಹಂಗಿಗೂ ಒಳಗಾಗದೇ, ಯರೊಬ್ಬರನ್ನೂ ಲೆಕ್ಕಿಸದೇ ತನ್ನ ಪಾಡಿಗೆ ತಾನು ಹಾಯಾಗಿ ಎಲ್ಲೋ ಇರುತ್ತದೆ. ಅದನ್ನು ಹೆಕ್ಕುತ್ತ ನಾವು ಹೈರಾಣಾಗುತ್ತೇವೆ. ಬನ್ನಿ.. ಇವತ್ತು 'ಕಥೆಯ ಕಥೆ' ಕೇಳೋಣ..ಅಲ್ಲಲ್ಲ ಓದೋಣ.

~ಸಂಪಾದಕಿ

ಕಥೆಯ ಕಥೆ


‘ಹೀಂಗs ಒಂದ ಊರಾಗ ಒಬ್ಬ ರಾಜಾ ಇದ್ದನಂತ’.. ‘ ಹೀಂಗs ಒಂದ ಅಡವ್ಯಾಗ ಒಂದು ಹುಲಿ ಇತ್ತಂತ’.. ಹೀಗೆ ಈ ‘ಹೀಂಗ ಒಂದ’ ಅಂತ ಕಥಿ ಶುರುವಾದ್ರ ಸಾಕು ಕಣ್ಣ ಅಗಲಿಸಿ, ಮೈಯೆಲ್ಲ ಕಿವಿಯಾಗಿ, ಆ ಅಂತ ಬಾಯಿ ತಕ್ಕೊಂಡು ಅಜ್ಜಿಯ ಮುಂದೆ ಕಾಲದ ಪರಿವೆಯಿಲ್ಲದೇ ಕೂತು ಬಿಡುವುದಿತ್ತು. ನಾವೂ ಆ ಕಥೆಯೊಡನೆ ಆ ಹೀಂಗ ಒಂದ ಊರೋ, ಅಡವಿಯೋ ಏನಿತ್ತೋ ಅಲ್ಲಿಗೇ ಹೋಗಿ ಆ ಗೇಣುದ್ದ ಮನಷಾ ಚೋಟುದ್ದ ಗಡ್ಡದವನೊಡನೆಯೋ, ಬೆಂಡು ಬತ್ತಾಸಿನ ಮಳೆಯಲ್ಲಿ ಎದ್ದ ಹುಡುಗನೊಡನೆಯೋ ಅಡ್ಡಾಡಿ ಬಂದುಬಿಡುತ್ತಿದ್ದೆವು.ಚಿನ್ನದ ಕೂದಲಿನ ರಾಜಕುಮಾರಿ,ಆಸೆಬುರುಕ ನರಿಯಣ್ಣ,ಜಾಣ ಮೊಲದ ಮರಿ, ಮೂರ್ಖ ಕಾಗಕ್ಕ, ಸಪ್ತ ಸಮುದ್ರದಾಚೆಯ ಗಿಣಿಮರಿಯಲ್ಲಿ ಜೀವವಿಟ್ಟುಕೊಂಡಿದ್ಧ ರಾಕ್ಷಸ..ಇವರೆಲ್ಲ ನಮ್ಮ ಭಾವಕೋಶದ ಜೊತೆಗೇ ಬೆರೆತು ಉಸಿರಾಡುತ್ತಿದ್ದರು.ಕಾಗಕ್ಕ- ಗುಬ್ಬಕ್ಕನ ಕಥೆಯಂತೂ ನಮ್ಮ ಫೇವರಿಟ್.
ಅಜ್ಜಿಯ ಕಥೆ ಹೇಳುವ ಚೆಂದವೇ ಬೇರೆ.ಅವಳ ಕಥೆಗಳು ಬಹಳ ರೋಚಕವಾಗಿದ್ದಂಥವು.ಅಕಿ ತನ್ನ ಹಳ್ಳಿಯ ತನ್ನ ಸಣ್ಣಂದಿನ ಅನುಭವದ,ನೆನಪಿನ ಕಥೆಗಳನ್ನೂ ಹೇಳಾಕಿ. ‘ ನಮ್ಮೂರಿಗೆ ಉದ್ದನೆಯ ಬಿಳಿಗಡ್ಡದ ಬಾಬಾ ಬಂದಿದ್ದ..ಕೇಸರಿ ಶಾಟಿ ಉಟಗೊಂಡು. ಅವಾ ಹಿಮಾಲಯಕ್ಕ ಹೋಗಿದ್ನಂತ.’ ಆಕೆ ಹೇಳುತ್ತಿದ್ದರೆ ‘ಹಿಮಾಲಯ ಅಂದ್ರ?!’..ಹಿಂದೆಯೇ ನಮ್ಮ ಪ್ರಶ್ನೆ. ‘ ಅದು ದೂರ ದೇಶದಾಗ( ಇಲ್ಲಿ ದೇಶ ಅಂದ್ರ ಪ್ರದೇಶ.ಬೇರೆ ದೇಶವಲ್ಲ.) ಇರೋ ಬರ್ಫಿನ ಬೆಟ್ಟ’ ಅಲ್ಲೆ ಯಾರಾದರೂ ಹೋದ್ರ ಥಂಡಿಗೆ ಕೈಕಾಲು ಶಟದ ಹೋಗತಾವ.ಬರೇ ಸಾಧುಗಳು ಮತ್ತು ದೇವರು ಅಷ್ಟೇ ಅಲ್ಲಿರತಾರ ಅಂತ ಅಕಿ ಹೇಳತಿದ್ರ ಬಿಜಾಪೂರದ ಬಿಸಿಲ ಝಳದ ನೆಲದ ನನಗೆ ಆ ಶೆಟೆದು ಹೋಗುವ ಥಂಡಿಯ ಕಿಂಚಿತ್ತೂ ಕಲ್ಪನೆಯಾಗದಿದ್ದರೂ ಬರ್ಫಿನ ಬೆಟ್ಟವಷ್ಟೇ ತಲೆಯಲ್ಲುಳಿದು ‘ ಓಹ್! ಹಂಗಾದ್ರ ಆ ಲಾಲ್ ವಾಲಾ ( ಐಸ್ ಕ್ಯಾಂಡಿ ಮಾರುವವ) ನ್ನ ಅಲ್ಲೆ ಕರಕೊಂಡ ಹೋಗಿ ಆ ಸಿಹಿಸಿಹಿ ಕೆಂಪು ದ್ರವವನ್ನೆಲ್ಲ ಅದರ ಮೇಲೆ ಸುರುವಿದ್ರ ಅದೆಷ್ಟು ದೊಡ್ಡ ಐಸ್ಕ್ರೀಂ ಕುಲ್ಫೀ ಆದೀತು ಅಂತ ನಾನು ಮನದಲ್ಲೇ ಲಾಲಾರಸ ಸುರಿಸಾಕಿ. ‘ ಆ ಸಾಧೂಂದು ಹೀಂಗೇ ಒಂದ ಬಟ್ಟ ( ಬೆರಳು) ಹೆಪ್ಪುಗಟ್ಟಿ ಕಪ್ಪ ಆಗಿಹೋಗಿತ್ತ.ಅದರ ಮ್ಯಾಲೆ ಸುತಗಿ ತಗೊಂಡು ಹೊಡದ್ರೂ ಅವಂಗ ನೋವು ಆಗೂದಿಲ್ಲಂತ.’. ಅಕಿ ಕಥಿ ಮುಂದುವರೆಸಿದ್ರ ‘ ಓಹ್! ಒಮ್ಮೆ ಹಂಗಾರ ನಾನೂ ಹೋಗಿ ಪೂರಾ ಮೈನೇ ಹಂಗ ಮಾಡಕೊಂಡು ಬರಬೇಕು. ಅಂದ್ರ ಒಟ್ಟಾಪ್ಪೆ(ಕುಂಟಾಬಿಲ್ಲೆ ) ಆಡಬೇಕಾದ್ರ ಬಿದ್ರೂ ಮೊಣಕಾಲು – ಮೊಣಕೈ ತರಚಂಗಿಲ್ಲ’ ಅಂತೆಲ್ಲ ಹುಚ್ಚುಚ್ಚಾಗಿ ಯೋಚಿಸುತ್ತಿದ್ದುದು ಈಗಲೂ ನೆನಪಿನಲ್ಲಿದೆ.
ಇನ್ನು ಸ್ವಲ್ಪ ಬುದ್ಧಿ ಬಂದಮೇಲೆ ಅವಳು ಹಾಡಿನ ಮೂಲಕ ಹೇಳಿದ ಕಥೆಗಳಂತೂ ಇಡಿಯ ಪುರಾಣ ಪ್ರಪಂಚವನ್ನೇ ನಮ್ಮೆದಿರು ತೆರೆದಿಡುವಂಥವು.
‘ಚೈತ್ರ ಶುದ್ಧ ಹಗಲು ನವಮಿ ರಾಮ ಜನಿಸಿದ
ಬಿದ್ದ ಶಿಲೆಯ ಪಾದದಿಂದುದ್ಧಾರ ಮಾಡಿದ
ಜನಕರಾಯನಲ್ಲಿ ಚಾಪು ತುಣುಕು ಮಾಡಿದ
ಗುಣಕ ಶೀಲ ಸೀತಾದೇವಿ ಮನಕ ಮೆಚ್ಚಿದ’
ಇಡಿಯ ರಾಮಾಯಣದ ಕಥೆ 3-4 ನುಡಿಗಳಲ್ಲಿ ಮುಗಿದುಹೋಗುತ್ತಿತ್ತು.ಮತ್ತೊಂದು ಆಸಕ್ತಿದಾಯಕ ಹಾಡೆಂದರೆ ‘ಕಮಲಮುಖಿ ಸತ್ಯಭಾಮೆ’. ಶ್ರೀಕೃಷ್ಣ- ಸತ್ಯಭಾಮೆಯರ ಸಂವಾದದ ಹಾಡು. ಇಡಿಯ ದಶಾವತಾರದ ಕಥೆಗಳೆಲ್ಲ ರೋಚಕವಾಗಿ ಅದರಲ್ಲಿ ಬಂದುಬಿಡುತ್ತವೆ. ಅದೂ ಒಂಥರಾ ನಿಂದಾ ಸ್ತುತಿಯ ರೂಪದಲ್ಲಿ. ಸತ್ಯಭಾಮೆಯ ಮನೆಗೆ ಬಂದ ಕೃಷ್ಣ
‘ ಕಮಲಮುಖಿ ಸತ್ಯಭಾಮೆ ಬೇಗದಿಂದ ಬಾಗಿಲು ತಗಿ ಅಂತೀನಿ ರಮಣಿ’ ಎಂದರೆ ಅವಳು ,
‘ಯಾರೂ ಅರಿಯೆ ನಿಮ್ಮ ಖೂನು-ಗುರುತು ಇಲ್ಲ, ಹೆಂಗ ತೆಗಿಯಲಿ ರಾತ್ರೀಲಿ ರಮಣ’ ಎಂದು ಪ್ರಶ್ನಿಸುತ್ತಾಳೆ. ಅವನು ತನ್ನ ಪರಿಚಯ ಹೇಳುತ್ತ,
‘ ವೇದ ತುಡುಗು ಮಾಡಿ ಒಯ್ದು ನೀರೊಳು
ಶಂಖದೊಳಗ ಇದ್ದನು ವೈರಿ|
ಮತ್ಸ್ಯವತಾರ ತಾಳಿ ಶಂಖಾಸುರನ ಕೊಂದು ವೇದವ ತಂದೀನಿ ನಾರಿ|
ಕೂರ್ಮವತಾರ ತೊಟ್ಟು ಸಮುದ್ರ ಮಥನ ಮಾಡೀನೆ ಹೊತ್ತು ಗಿರಿ|
ರತ್ನ ತೆಗೆದು ಅಮೃತ ಹಂಚುವಾಗ ರಾಹು-ಕೇತುವಿನ ಮಾಡೀನಿ ಸೂರಿ|
ರಸಾತಳಕೆಳೀತಿದ್ದ ಭೂಮಿ ಕೇಳ್
ದೇವರಾದರೆಲ್ಲ ಗಾಬರಿ|
ಸತ್ಯವರಾಹನಾಗಿ ಭೂಮಿ ಹೊತ್ತು ಮ್ಯಾಲಕ ಎತ್ತೀನಿ ಕ್ವಾರಿ|
ಹಿರಣ್ಯಕಶಿಪು ಶಂಭುವಿನ ವರದಾ
ವಿಷ್ಣುಭಕ್ತ ಮಗ ಪ್ರಹ್ಲಾದ|
ತಂದೆ- ಮಗಗ ಬಿದ್ದೀತೋ ವಾದ
ಸಿಟ್ಟಿನಿಂದ ಕಶ್ಯಪ ಕಂಭಕೊದ್ದ
ನಾ ಬಂದೆನಾರ್ಭಾಟದಿಂದ
ಹೊಸ್ತಿಲದೊಳಗ ಹೊಟ್ಟಿ ಸೀಳಿದರ ಕೇಳ ಭಾಮಿನಿ ಆತನ ಮರಣ’
ಎಂದು ಪರಾಕ್ರಮ ಕೊಚ್ಚಿಕೊಂಡ ಅವನ ಕಾಲನ್ನೆಳೆವ ಭಾಮೆಯ ಕುಚೋದ್ಯದ ಉತ್ತರ ಕೇಳಿ..
‘ ಮತ್ಸ್ಯನೆಂದು ಬಲು ಬಡಾಯಿ ಹೇಳತಿ
ಹೆಂಗ ಬಂದ್ಯೋ ನೀ ಊರಾಗ|
ಕೂರ್ಮನಾದರ ಇಲ್ಲಿಗ್ಯಾಕ ಬಂದಿ
ಬೀಳಹೋಗೋ ನೀ ಭಾವ್ಯಾಗ|
ಸತ್ಯ ವರಾಹನೆಂದು ಸಾಕ್ಷಿ ಹೇಳತಿ ಭೂಮಿ ಹೊತ್ತ ಕಸರತ್ತ ಎನಗ ತಲೆ ಎತ್ತದೇ ತಿರುಗುತ ಹೋಗಿರಿ ಹಸಿಮಣ್ಣು ತಿಂದಡವ್ಯಾಗ|
ಭಾಳ ಭಾಳ ಹೇಳತಿದ್ದಿ ಕಸರತ್ತ
ನರಸಿಂಹನವತಾರದ ಮಾತ |♧
ಸಿಂಹನಾದರ ಗುಡ್ಡದಾಗ ಇರಹೋಗು ಇಲ್ಲಿಗ್ಯಾಕ ಬಂದಿರಿ ಕಾರಣ’
ಹೀಗೆಯೇ ಎಲ್ಲ ಅವತಾರಗಳ ಬಗ್ಗೆ ಅವನ ಬಡಾಯಿ, ಅವಳ ಹೀಯಾಳಿಸುವಿಕೆ ನಡೆದು ಕೊನೆಗೆ
‘ನಿನ್ನ ಪ್ರಾಣವಲ್ಲಭ ಮನದನ್ನ’ ಬಂದಿದ್ದೇನೆಂದ ಮೇಲೆಯೇ ಅವಳು ಬಾಗಿಲು ತೆಗಯುವುದು. ಹೇಳಿ ಕೇಳಿ ‘ಸರಸಕೆ ಕರೆದರೆ ವಿರಸವ ತೋರುವ’ ಸತ್ಯಭಾಮೆ ಅವಳು.ಸುಮ್ಮನೆ ಇಷ್ಟು ಸುಲಭಕ್ಕೆ ಬಿಟ್ಟಾಳೆಯೇ?
ನಮ್ಮ ಓಣ್ಯಾಯಿ(ಅಜ್ಜಿ) ರಾಗವಾಗಿ ಈ ಹಾಡು ಹಾಡುತ್ತಿದ್ದರೆ ದಶಾವತಾರದ ಎಲ್ಲ ಕಥೆಗಳೂ ಕಣ್ಣಮುಂದೆ ಸಿನೆಮಾ ರೀಲಿನಂತೆ ಉರುಳುತ್ತಿದ್ದವು.
ಸ್ವಲ್ಪ ದೊಡ್ಡವರಾದ ಮೇಲೆ ಅಂದರೆ ಸುಮಾರು 4-5 ನೇಯತ್ತೆ ಹೊತ್ತಿಗೆ ಓದುವ ಹುಚ್ಚು ಅಂಟಿಕೊಂಡಾದ ಮೇಲೆ ಆಹಾ! ಆ ಚಂದಮಾಮ, ಬೊಂಬೆಮನೆ, ಬಾಲಮಿತ್ರದ ಆ ರೋಚಕಕಥೆಗಳು..ಆರು ಬೆರಳಿನ ಉದ್ದ ಗಡ್ಡದ ಮಾಂತ್ರಿಕ, ಛಕ್ಕಂತ ವೇಷ ಬದಲಿಸಿ ಬರುವ ಮಾಟಗಾತಿ,ಕೂದಲೆಳೆ- ಉಗುರುಗಳಿಂದ ಮಾಟ ಮಾಡುವ ತಾಂತ್ರಿಕ , ವಿಕ್ರಮಾದಿತ್ಯನ ಹೆಗಲಿನಿಂದ ಹಾಹ್ಹಾಹಾ ಎಂದು ನಗುತ್ತ ಹಾರಿಹೋಗಿ ಗಿಡದ ಟೊಂಗೆಗೆ ನೇತಾಡುವ ಬೇತಾಳ..ನಮ್ಮಕಲ್ಪನೆಗೊಂದು ಎಲ್ಲೆಯೇ ಇಲ್ಲದಂತೆ ಮಾಡಿದವಷ್ಟೇ ಅಲ್ಲ ಜೊತೆಗೇ ಇಲ್ಲದ ಭಯವನ್ನೂ ಅಲ್ಪಸ್ವಲ್ಪ ಹುಟ್ಟು ಹಾಕಿದವೆನ್ನಿ. ನಾನಾಗ 4 ನೇಯತ್ತೆ ಹುಡುಗಿ. ಒಂದು ಕಥೆ ಓದಿದ್ದೆ. ಅದರಲ್ಲಿ ಸುಳ್ಳು ಮಾತಾಡಿದರೆ ತಲೆಯ ಮೇಲೆ ಕೊಂಬು ಮೂಡುತ್ತವೆ. ಪ್ರತಿಸಲ ಸುಳ್ಳು ಹೇಳಿದಾಗೆಲ್ಲ ಒಂದೊಂದು ಇಂಚು ಬೆಳೆಯುತ್ತ ಹೋಗಿ , ಹೀಗೆಯೇ ಬಹಳ ಸಲ ಸುಳ್ಳು ಹೇಳಿದ ಹುಡುಗನ ತಲೆಯ ಕೊಂಬುಗಳು ಬೆಳೆದು ಬೆಳೆದು ಮೇಲೆ ಜಂತಿಗೆ ಸಿಕ್ಕಿಹಾಕಿಕೊಂಡು ಬಿಡುತ್ತವೆ. ಆದನ್ನೋದಿದ ಮೇಲೆ ವರುಷಗಟ್ಟಲೆ ಸಣ್ಣ ಸುಳ್ಳು ಹೇಳಿದರೂ ಹತ್ತುಸಲ ತಲೆಮುಟ್ಟಿ ನೋಡಿಕೊಳ್ಳುತ್ತಿದ್ದೆ. ಒಮ್ಮೆ ಯಾಕೋ ಪಕ್ಕದ ಶಿವಮೊಗ್ಗಿ ಅವರ ಮನೆಗೆ ಹೋಗಿದ್ದೆ. ಊಟಕ್ಕೆ ಕುಳಿತಿದ್ದ ಅವರು, ‘ಬಾರs ಊಟ ಮಾಡು ಬಾ’ ಎಂದು ಕರೆದರು. ಹಾಗೆಲ್ಲ ಊಟ-ತಿನಿಸಿಗೆ ಯಾರಾದರೂ ಕರೆದರೆ ಹೂಂ ಅಂತ ಹೊರಟುಬಿಡಬಾರದು.ನಮ್ಮ ಊಟ ಆಗಿದೆ ಅಂತ ಹೇಳಬೇಕು ಎನ್ನುವುದು ಮನೆಯಲ್ಲಿ ಹಿರಿಯರು ವಿಧಿಸಿದ್ದ ನಿಯಮವಾಗಿದ್ದರಿಂರ ಹಾಗೇ ಹೇಳಿದೆ. ‘ಇರಲಿ ಬಾ. ಚೂರೇ ಪಾಯಸ ತಿನ್ನು’ ಎಂದರು. ‘ ನಮ್ಮನೆಯಲ್ಲೂ ಅದೇ’ ಎಂದೆ. ಹೀಗೇ ಅವರು ಒತ್ತಾಯಿಸಿ ಕರೆಯುವುದು, ನಾನು ಸುಳ್ಳು ಹೇಳುತ್ತ ಹೋಗಿ ನೋಡುತ್ತಿದ್ದಂತೇ 8-10 ಸುಳ್ಳುಗಳಾಗಿ ಇನ್ನೇನು ಕೊಂಬು ಬೆಳೆದು ನಾನಿಲ್ಲೇ ಇವರ ನಡುಮನೆಯಲ್ಲೇ ಸಿಕ್ಕಿಹಾಕಿಕೊಂಡು ಬಿಡುತ್ತೇನೆಂದು ತುಂಬ ಭಯವಾಗಿ ಅಳಲು ಶುರು ಮಾಡಿದ್ದೆ. ನನ್ನ ಅವಸ್ಥೆ ನೋಡಿ ಪಾಪ ಅವರಿಗೂ ಗಾಬರಿ .
ಇನ್ನೊಮ್ಮೆ ನಮ್ಮ ಸ್ನೇಹಿತರಂತೆ, ಮನೆಯವರಂತೆ ವೇಷ ಬದಲಿಸಿ ಬರುವ ದೆವ್ವದ ಕಥೆ ಓದಿದಾಗಲಂತೂ ನನ್ನ ಪಾಡು ನಾಯಿಪಾಡಾಗಿತ್ತು. ಜೊತೆಗಿದ್ದವರೆಲ್ಲ ಇವರು ನಿಜದವರೋ, ವೇಷಧಾರಿ ದೆವ್ವಗಳೋ ಎಂದು ಹೆದರಿಕೆಯಾಗಿಬಿಡುತ್ತಿತ್ತು. ಅದೂ ಬಿಜಾಪೂರದ ನಮ್ಮ ಮುದ್ದಣ್ಣ ಮಾಮಾನ ಆ ದೊಡ್ಡ ಮನೆಯಲ್ಲಿ ರಾತ್ರಿವೇಳೆ ಬಚ್ಚಲಿಗೆ ಹೋಗಬೇಕಾಗಿ ಬಂದರಂತೂ ಮುಗಿದೇಹೋಯ್ತು. ಪಡಸಾಲೆಯಲ್ಲಿ ಮಲಗಿದ ನಾವು ನಡುಮನೆ, ದೊಡ್ಡ ಅಡುಗೆಮನೆ ದಾಟಿ ಬಚ್ಚಲಿಗೆ ಅದೂ ಎಂಥಾ ಬಚ್ಚಲು ಅಂತೀರಿ 3-4 ಮೆಟ್ಟಿಲುಗಳ , 3-4 ಕಂಬಗಳುಳ್ಳ ದೆವ್ವನಂಥಾ ಬಚ್ಚಲು. ಅಲ್ಲಿ ಒಂದೆಡೆ ಕುಳ್ಳಿನ ಚೀಲ, ಎತ್ತರಕ್ಕೆ ಒಟ್ಟಿದ ಕಟ್ಪಿಗೆಗಳು, ಅವುಗಳ ಸಂದಿಯಲ್ಲೆಲ್ಲೋ ಕಣ್ಣಿಗೆ ಕಾಣದೇ ದಡಬಡ ಮಾಡುವ ಇಲಿಯ ಸಂಸಾರಗಳು, ಉದ್ದ ಮೀಸೆ ಝಳಪಿಸುವ ಜೊಂಡಿಂಗಗಳು..ಸಾಲದ್ದಕ್ಕೆ ಎದುರಿಗೊಂದು ಎರಡು ಸರಳುಗಳ ಸಣ್ಣ ಕಿಡಕಿ. ನಮ್ಮ ಪಪ್ಪೂಮಾಮ( ನನ್ನ ಸಣ್ಣ ಸೋದರ ಮಾವ) ‘ ರಾತ್ರಿ ಬಚ್ಚಲಿಗೆ ಹೋದ್ರ ಆ ಕಿಡಕಿ ಕಡೆ ನೋಡಬ್ಯಾಡ್ರಿ ಎರಡು ಕೆಂಪುಕಣ್ಣು ನಿಮ್ಮನ್ನೇ ನೋಡತಿರತಾವ. ನೀವೇನರ ಅಪ್ಪಿತಪ್ಪಿ ನೋಡಿದ್ರ ತನ್ನ ಉದ್ದನ್ನ ಕೆಂಪು ನಾಲಿಗೆ ಚಾಚಿ ಎಳಕೊಂಡು ಬಿಡತಾವ’ ಅಂತೆಲ್ಲ ಏನೇನೋ ಹೇಳಿ ನಮ್ಮನ್ನು ಕಾಡಿ ಹೆದರಿಸಿರುತ್ತಿದ್ದ. ಹೀಗಾಗಿ ಯಾವಾಗಲೂ ಅಜ್ಜಿಯನ್ನೆಬ್ಬಿಸಿ ಅವಳ ಬೆಂಗಾವಲಿನಲ್ಲೇ ರಾತ್ರಿ ಬಚ್ಚಲಿಗೆ ಹೋಗುವುದು. ಆದರೆ ಈ ವೇಷ ಬದಲಿಸುವ ದೆವ್ವದ ಕಥೆ ಓದಿದ ಮೇಲೆ ಹಿಂದೆ ಬರುತ್ತಿರುವುದು ಓಣ್ಯಾಯಿನೋ ಅಥವಾ ದೆವ್ವವಿರಬಹುದೋ ಎಂದು ಶುರುವಾದ ಸಂಶಯ ಕೆಲವೇ ಸೆಕೆಂಡುಗಳಲ್ಲಿ ಪೆಡಂಭೂತವಾಗಿ ಬೆಳೆದು ನನ್ನನ್ನು ನಡುಗಿಸಿಬಿಡುತ್ತಿತ್ತು. ಅಮ್ಮ ಹೇಳಿಕೊಟ್ಟ ‘ ನಿರ್ಭಯತ್ವಂ ಅರೋಗತಾಂ’ ದ ಹನುಮಪ್ಪನೋ, ಅಜ್ಜ ಕಲಿಸಿದ ‘ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ದ ರಾಯರೋ ಹೇಗೋ ನನ್ನನ್ನು ಕಾಯುತ್ತಿದ್ದರೆನ್ನಿ.
ರಾಯರು(ರಾಘವೇಂದ್ರ ಸ್ವಾಮಿಗಳು) ಅಂದಕೂಡಲೇ ಮತ್ತೊಂದು ಘಟನೆ ನೆನಪಾಯ್ತು. ಒಮ್ಮೆ ರಜೆಗೆಂದು ನಿಪ್ಪಾಣಿಗೆ ನಮ್ಮ ಇನ್ನೊಬ್ಬ ಸೋದರಮಾವನ ಮನೆಗೆ ಹೋಗಿದ್ದೆ. ಬಹಳ ಹೊತ್ತು ರಾತ್ರಿ ಹರಟೆ, ಮಾತುಕತೆಯ ಜೊತೆಗೇ ನನ್ನ ಕಸಿನ್ಸ್ ತಮ್ಮ home-work ನ್ನೂ ಮುಗಿಸಿ, ಪಾಟಿ- ಪುಸ್ತಕ ಎಲ್ಲ ಎತ್ತಿಟ್ಟು ಇನ್ನೇನು ಮಲಗಲು ಅಣಿಯಾದೆವು.
ಪೆನ್ಸಿಲ್ ಬಾಕ್ಸ್ ಒಂದು ತಂಗಿ ಭೂದೇವಿಯ ತಲೆದಿಂಬಿನ ಪಕ್ಕಕ್ಕೆ ಉಳಿದುಹೋಗಿತ್ತು. ನಾನು ಮರೆತು ಉಳಿದಿದೆಯೇನೋ ಎಂದು ಎತ್ತಿಡಲು ಹೋದರೆ ‘ ಅವ್ವಾ, ಗೌರಕ್ಕಾ ಅದನ್ನ ತಗೀಬ್ಯಾಡವಾ. ಅದರಾಗ ರಾಯರು, ಹನುಮಪ್ಪ ಎಲ್ಲ ಇದ್ದಾರ. ಕೆಟ್ಟ ಕನಸು ಬೀಳಬಾರದು, ರಾತ್ರಿ ಅಂಜಿಕಿ ಬರಬಾರದು ಅಂತ ಇಟಗೊಂಡೀನಿ’ ಅಂದಳು. ನಾನು ಅರೇ! ತ್ರಿಜ್ಯ, ಕೋನಮಾಪಕ, ಸೀಸಕಡ್ಡಿಗಳ ಬದಲು ಇದರಲ್ಲಿ ದೇವರು ಹೆಂಗ ಬಂದ್ರು ಅಂತ ತೆಗೆದು ನೋಡಿದರೆ ಅದರಲ್ಲಿ ರಾಯರ-ಹನುಮಪ್ಪನ ಸಣ್ಣ ಸಣ್ಣ ಫೋಟೋಗಳು. ಆಮೇಲೆ ಗೊತ್ತಾಯಿತು ಇದು ಅನಂತನಾಗ್ ನ ‘ ನಾ ನಿನ್ನ ಬಿಡಲಾರೆ’ ಸಿನೆಮಾದ ಕಥೆ ಕೇಳಿದ್ದರ ಪ್ರಭಾವ ಅಂತ. (ಇನ್ನು ಸಿನೆಮಾ ನೋಡಿದ್ದರೆ ಏನಾಗುತ್ತಿತ್ತು ಆ ‘ ಕಾಮಿನಿ’ ಗೇ ಗೊತ್ತು ) ಅಂತೂ ಈಗಲೂ ಅವಳ ಭೇಟಿಯಾದಾಗ ಈ ಕಥೆ ನೆನೆಸಿಕೊಂಡು ನಗುತ್ತೇವೆನ್ನಿ.

ಈಗ ಅಜ್ಜಿಯ ಕಥೆಗಳನ್ನು ಚೆಂದ ಚೆಂದದ ಕಾರ್ಟೂನ್ ಗಳು ಹೇಳುತ್ತವೆ.ತನ್ನ ಚಿಕ್ಕಂದಿನಲ್ಲಿ ‘snow-white ‘ ನೋಡುತ್ತ ಕಣ್ಣೀರು ಸುರಿಸುತ್ತಿದ್ದ, Tom & Jerry ಯಲ್ಲಿ ಕನಸು ನೋಡುತ್ತಿರುವ Tom ನನ್ನು ನೋಡಿ ಸೋಫಾದ ಮೇಲೆ ಉರುಳಾಡಿ ನಗುತ್ತಿದ್ದ ನನ್ನ ಮಗನ ಚಿತ್ರ ಈಗಲೂ ನನ್ನ ಕಣ್ಣ ಮುಂದಿದೆ.ದೃಶ್ಯಮಾಧ್ಯಮ ಯಾವಾಗಲೂ ಹೆಚ್ಚು ರಮಣೀಯ ಹಾಗೂ ಆಕರ್ಷಕವಲ್ಲವೇ?
ಕಥೆಗಳೂ ದೇವರಂತೆ ಅನಾದಿ-ಅನಂತ- ವಿಶ್ವವ್ಯಾಪಿ.ಅವುಗಳ ರೀತಿ, ಮಾಧ್ಯಮಗಳು ಬದಲಾದರೇನಂತೆ? ಜಗವಿರುವತನಕ ಕಥೆಗಳಿರುತ್ತವೆ. ನಮ್ಮ ಕಥೆ, ನಿಮ್ಮ ಕಥೆ, ಅವರ ಕಥೆ, ಇವರ ಕಥೆ, ಕಂಸನ ಕ್ರೌರ್ಯ ದ ಕಥೆ, ಬುದ್ಧನ ಕರುಣೆಯ ಕಥೆ, ಶಕುನಿಯ ಕುತಂತ್ರದ ಕಥೆ,ವಿದುರನ ನೀತಿಕಥೆ, ರಾಮನ ಶೌರ್ಯ ದ ಕಥೆ, ಭೀಮನ ಬಲದ ಕಥೆ, ಸಿರಿವಂತರ ಸೊಕ್ಕಿನ ಕಥೆ, ಬಡವರ ಹಸಿವಿನ ಕಥೆ, ಸೋತ ಕಥೆ, ಗೆದ್ದ ಕಥೆ, ನಗುವ ಕಥೆ, ಅಳುವ ಕಥೆ, ಸನ್ಯಾಸದ ಕಥೆ, ಗಾರ್ಹಸ್ಥ್ಯದ ಕಥೆ, ಸಾಮಾನ್ಯರ ಸಾಮಾನ್ಯ ಕಥೆ , ಸಂತೆಯ ಸೌತೆ-ಬದನೆಗಳ ಕಥೆ, ಹೋರಾಟದ ಕಥೆ, ಯಶಸ್ಸಿನ ಕಥೆ,ಅಪ್ಪುವ ಕಥೆ, ದಬ್ಬುವ ಕಥೆ, ಮಿನಿ ಕಥೆ,ಹನಿಗಥೆ, ಸಣ್ಣ ಕಥೆ,ನೀಳ್ಗಥೆ, ಕಾವ್ಯ-ಕಾದಂಬರಿಗಳ ಕಥೆ...ಮುಗಿಯದ,ನಿಲ್ಲದ ಕಥೆ .

~ ಗೌರಿಪ್ರಸನ್ನ

ಮೂರು ದಿನಗಳು – ಶಿವ ಮೇಟಿ ಬರೆದ ಪತ್ತೇದಾರಿ ಕಥೆ

ಪ್ರಿಯ ಓದುಗರೇ,
ಮತ್ತೊಂದು ಪತ್ತೇದಾರಿ ಕಥೆ, ಇದು. ನನ್ನ ಪತ್ತೇದಾರಿ ಕಥೆಯ ನಾಯಕನಾದ ಸಿ ಐ ಡಿ ವಿಕ್ರಮನ ಎರಡನೆಯ ಸಾಹಸವನ್ನು ನಿಮ್ಮ ಮುಂದೆ ಕಥೆಯ ರೂಪದಲ್ಲಿ ಇಟ್ಟಿರುವೆ. ಓದಿ ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವಿರೆಂದು ಭಾವಿಸಿರುವೆ. ನಿಮ್ಮ ಅನಿಸಿಕೆ ನನಗೆ ಅಮೃತ, ಕುಡಿದು ತಿದ್ದಿಕೊಳ್ಳಲು ಸಹಾಯ!
ಇಂತಿ ಸಂಪಾದಕ



ಹೆಂಡತಿಯೊಂದಿಗೆ ವಿಶ್ರಾಂತಿಗೆಂದು, ಕೇರಳದಲ್ಲಿರುವ ವೈಥ್ರಿ ರೆಸಾರ್ಟಿಗೆ ಹೋಗುವ ತಯ್ಯಾರಿಯಲ್ಲಿದ್ದನು ವಿಕ್ರಂ. ಅಷ್ಟರಲ್ಲಿಯೇ ಅವನ ಮೊಬೈಲ್ ರಿಂಗ್ ಆಗತೊಡಗಿತು, ಹೆಡ್ ಕ್ವಾರ್ಟರ್ಸ್ನಿಂದ ಕರೆ,”ವಿಕ್ರಂ, ತಕ್ಷಣವೇ ಕಚೇರಿಗೆ ಬಾ, ತುರ್ತು ಕೆಲಸವಿದೆ”ಎಂದು ಬಾಸ್ ಫೋನಿನಲ್ಲಿ ಆದೇಶ ಕೊಟ್ಟಿದ್ದರು.
“ಸಾರ್! ನಾನು ರಜಾದ ಮೇಲಿರುವೆ, ವಿಶ್ರಾಂತಿಗೆಂದು ಕೇರಳಕ್ಕೆ ಹೊರಟಿರುವೆ”
“ವಿಶ್ರಾಂತಿ ಆ ಮೇಲೆ, ಮಹತ್ವದ ಕೆಲಸ, ಈಗಲೇ ಬರಲೇ ಬೇಕು” ಎಂದು ಹೇಳಿ ಫೋನು ಇಟ್ಟು ಬಿಟ್ಟರು. ವಿಕ್ರಂ,ಸಿಡಿಮಿಡಿಗೊಂಡ ಹೆಂಡತಿಯನ್ನು ಸಮಾಧಾನಪಡಿಸಿ, ಪ್ಯಾಲೇಸ್ ರಸ್ತೆಯ, ಕಾರ್ಲ್ಟನ್ ಹೌಸಿನಲ್ಲಿರುವ ಸಿ ಐ ಡಿ ಮುಖ್ಯ ಕಚೇರಿಯನ್ನು ತಲುಪಿದಾಗ ಬೆಳಗಿನ ಹನ್ನೊಂದು ಗಂಟೆಯಾಗಿತ್ತು. ಬಾಸ್ ಯಾಕೋ ಉದ್ವೇಗದಲ್ಲಿರುವಂತೆ ಕಂಡುಬಂದರು
“ವಿಕ್ರಂ, ನೀನು ಟಿವಿಯಲ್ಲಿ ಆಗಲೇ ಕೇಳಿರಬಹುದು, ಪಟ್ಟಣದ ಪ್ರತಿಷ್ಠಿತ ವ್ಯಕ್ತಿಯೊಬ್ಬನು ನಿನ್ನೆ ಸಂಜೆಯಿಂದ ಕಾಣೆಯಾಗಿದ್ದಾನೆ. ಬಿಡದಿಯ ಪೊಲೀಸ್ ಪಡೆಗೆ ಈ ಕೇಸಿನ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಹತ್ವದ ಸುಳಿವು ದೊರೆತಿಲ್ಲ. ವಿರೋಧ ಪಕ್ಷಗಳ ಒತ್ತಡದಿಂದ ಈ ಕೇಸು ಈಗ ನಮಗೆ ವರ್ಗಾವಣೆಯಾಗಿದೆ. ನಮಗೆ ಇರುವುದು ಕೇವಲ ಮೂರು ದಿನಗಳು ಮಾತ್ರ, ಇಲ್ಲವಾದರೆ ಕೇಸು ಸಿ ಬಿ ಐ ಗೆ ಹೋಗುವ ಸಾಧ್ಯತೆ ಇದೆ. ನನ್ನಿಂದ ನಿನಗೆ ಎಲ್ಲ ಸಹಾಯವಿದೆ. ನೀನು ಇದರಲ್ಲಿ ಯಶಸ್ವಿಯಾಗುತ್ತಿ ಎಂಬ ಭರವಸೆ ನನಗೆ ಇದೆ. ಗುಡ್ ಲಕ್.” ಎಂದು ಹೇಳಿ ಅವನನ್ನು ಬೀಳ್ಕೊಟ್ಟರು.
ಎರಡು ಗಂಟೆಗಳಲ್ಲಿ ವಿಕ್ರಮನ ಕಾರು ಬಿಡದಿಯ ಪೊಲೀಸ್ ಠಾಣೆಯನ್ನು ತಲುಪಿತ್ತು. ಮುಖ್ಯ ತನಿಖಾಧಿಕಾರಿ ಇನ್ಸ್ಪೆಕ್ಟರ್
ಪಾಟೀಲ್ ಕೈ ಕುಲುಕಿ ಸ್ವಾಗತಿಸಿಕೊಂಡರು.
“ಪಾಟೀಲರೇ ಈ ವ್ಯಕ್ತಿಯ ಬಗ್ಗೆ ವಿವರಗಳನ್ನು ಕೇಳಬಹುದೇ?”
“ಸಾರ್ ! ಕಾಣೆಯಾದ ವ್ಯಕ್ತಿಯ ಹೆಸರು ಖೇತನ್ ರೆಡ್ಡಿ. ವಯಸು ನಲವತ್ತು. ಹತ್ತು ವರುಷಗಳ ಹಿಂದೆ ಬಿ ಬಿ ಎಂ ಪಿ ಯಲ್ಲಿ ಒಬ್ಬ ಸಾಮಾನ್ಯ ನೌಕರ, ಈಗ ಪ್ರತಿಷ್ಠಿತ ರೆಡ್ಡಿ ಡೆವೆಲಪರ್ಸ್ ಕಾರ್ಪೊರೇಷನ್ನಿನ ಮಾಲೀಕ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಎತ್ತಿದ ಕೈ. ಎಷ್ಟೋ ರಾಜಕಾರಣಿಗಳೊಂದಿಗೆ ನಿಕಟ ಸಂಬಂಧ. ಬರುವ ಮೇಯರ್ ಚುನಾವಣೆಯ್ಲಲಿ ಬಹುಶಃ ವಿರೋಧ ಪಕ್ಷದ ಅಭ್ಯರ್ಥಿ”
“ಅವನ ವೈಯಕ್ತಿಕ ಜೀವನದ ಬಗ್ಗೆ ಏನಾದರು ಮಾಹಿತಿ ಇದೆಯೇ?”
“ಇಲ್ಲಿಯವರೆಗೆ ನಮಗೆ ದೊರೆತ ಮಾಹಿತಿಯ ಪ್ರಕಾರ,
ಮಿಸ್ಟರ್ ರೆಡ್ಡಿ ಐಷಾರಾಮಿ ಜೀವಿ. ಫ್ಯಾನ್ಸಿ ಕಾರು, ಹೈಫೈ ಕ್ಲಬ್ಬ್ಸ್ ಮತ್ತು ವಿದೇಶಿ ಬ್ರಾಂಡಿನ ಮದ್ಯಗಳ ಬಗ್ಗೆ ತುಂಬಾ ಒಲವು. ಮೊದಲನೆಯ ಹೆಂಡತಿಯೊಡನೆ ಐದು ವರ್ಷಗಳ ಹಿಂದೆ ಡೈವೋರ್ಸ್ ಆಗಿದೆ, ಅವಳಿಗೆ ಮೂರು ವರ್ಷದ ಮಗು ಇದೆ. ಎರಡು ವರ್ಷಗಳ ಮುಂಚೆ ಎರಡನೆಯ ಮದುವೆ ಆಗಿದೆ. ಗಂಡ ಹೆಂಡರ ನಡುವೆ ಹನ್ನೆರಡು ವರ್ಷಗಳ ಅಂತರವಿದೆ. ಯಾವುದೊ ಕ್ಲಬ್ಬಿನಲ್ಲಿ ಪರಿಚಯವಾಗಿ ಮದುವೆಯಾಗಿದ್ದಾರಂತೆ . ಎರಡನೆಯ ಹೆಂಡತಿ ಮುಂಬೈಯಿನ ಮೂಲದವಳು, ಅವಳ ಅಣ್ಣ ಡಾಕ್ಟರ್ ಗುಪ್ತಾ, ರೆಡ್ಡಿಯ ಸ್ನೇಹಿತನಂತೆ, ಬಿಡದಿಯ ಹೊರವಲಯದಲ್ಲೊಂದು ಸಣ್ಣ ಆಸ್ಪತ್ರೆಯನ್ನು ನಡೆಸುತ್ತಿದ್ದಾನೆ.
“ಹಾಗಾದರೆ, ಕಾಣೆಯಾಗಿರುವ ಕಂಪ್ಲೇಂಟ್ ರಿಜಿಸ್ಟರ್ ಆಗಿದ್ದು ಹೇಗೆ?”
“ನಿನ್ನೆ ರಾತ್ರಿ ಸುಮಾರು ಒಂಭತ್ತು ಗಂಟೆಗೆ ಅಣ್ಣನೊಂದಿಗೆ ಅವನ ಹೆಂಡತಿ ಸ್ಟೇಷನ್ಗೆ ಬಂದಿದ್ದಳು. ‘ಜೀವನದಲ್ಲಿ ಜಿಗುಪ್ಸೆ ಆಗಿದೆ, ನನ್ನನ್ನು ಹುಡುಕುವ ಪ್ರಯತ್ನ ಬೇಡಾ’ ಎಂದು ಗಂಡನಿಂದ ಅವಳ ಮೊಬೈಲ್ಗೆ ಬಂದ ಮೆಸೇಜ್ ತೋರಿಸಿದಳು. ಮೆಸೇಜ್
ಪರಿಶೀಲಿಸಿದ ಮೇಲೇನೆ ಕಂಪ್ಲೇಂಟ್ ದಾಖಲಿಸಿಕೊಂಡಿದ್ದೀವಿ ಸಾರ್.”
“ಸರಿ! ಇಲ್ಲಿಯವರೆಗೆ ಏನೇನು ತನಿಖೆ ಆಗಿದೆ?” ಎಂದು ಕೇಳಿದ ವಿಕ್ರಂ.
“ಅವನ ಜೊತೆಗೇನೆ ಕಾಣೆಯಾಗಿರುವ ಕಾರಿನ ನಂಬರನ್ನು, ಅವನ ಫೋಟೋವನ್ನು ಎಲ್ಲ ಸ್ಟೇಷನ್ಗಳಿಗೆ ರವಾನೆ ಮಾಡಿದ್ದೇವೆ, ಅವನ ಮನೆಯಲ್ಲಿದ್ದವರಿಂದ ಕೆಲವು ಸ್ಟೇಟ್ಮೆಂಟ್ ಸಂಗ್ರಹಿಸಿದ್ದೇವೆ. ಅವನಿಗೆ, ಆಸ್ತಿಯ ಮೇಲೆ ತೆರಿಗೆ ಅಧಿಕಾರಿಗಳ ದಾಳಿಯ ಭಯವಿತ್ತೆಂದೂ, ಪರ್ಸನಲ್ ಸೆಕ್ರೆಟರಿ ರಾಣಿಯ ಜೊತೆಗೆ ಅನೈತಿಕ ಸಂಬಂಧ ಹೊಂದಿರುವನೆಂದು ಮತ್ತು ಅವಳೇ ಈ ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಹೆಂಡತಿ ಮೋನಿಕಾಳ ಅನಿಸಿಕೆ. ಗಂಡ ಹೆಂಡರ ನಡುವಿನ ಸಂಬಂಧ ಹದಗೆಟ್ಟು ಅವರಿಬ್ಬರ ನಡುವೆ ದಿನಾಲೂ ಜಗಳವಾಗುತ್ತಿತ್ತೆಂದು ಮತ್ತು ಮೋನಿಕಾ ನಿನ್ನೆ ಮನೆಯಲ್ಲಿ ಇರಲಿಲ್ಲವೆಂದು, ಆಗಾಗ್ಯೆ ಡಾ. ಗುಪ್ತಾ ಮನೆಗೆ ಬರುತ್ತಿದ್ದನೆಂದು, ಅಡಿಗೆಯ ಕೆಲಸದ ಲಕ್ಶ್ಮಿಯ ಹೇಳಿಕೆ. ನಿನ್ನೆ ಸಂಜೆ ಏಳು ಗಂಟೆಗೆ ರೆಡ್ಡಿ ಮನೆ ಬಿಟ್ಟನೆಂದೂ ಮತ್ತು ಬರುವುದು ಲೇಟ್
ಆಗಬಹುದೆಂದು ಹೇಳಿ ಹೋದನೆಂಬುವುದು ಮನೆಗೆಲಸದ ಹುಡುಗ ರಾಜುವಿನ ಸ್ಟೇಟ್ಮೆಂಟ್. ನಿನ್ನೆ ಸಾಯಂಕಾಲ ಸುಮಾರು ಏಳು ಗಂಟೆಗೆ ರೆಡ್ಡಿಯ ಮನೆಯಲ್ಲಿ ತಾನು ಅವನನ್ನು ಭೇಟಿಯಾಗಿರುವದಾಗಿಯು, ರೆಡ್ಡಿಯ ಹಳೆಯ ಬ್ಯುಸಿನೆಸ್ ಪಾರ್ಟ್ನರ್
ಅನಿಲ್, ದೊಡ್ಡ ಮೊತ್ತದ ಹಣ ಕೊಡಬೇಕಾಗಿತ್ತೆಂದು ಮತ್ತು ಇತ್ತಿತ್ತಲಾಗಿ ಅವರಿಬ್ಬರ ನಡುವೆ ಜಗಳ ನಡೆಯುವುದು ಸಾಮಾನ್ಯವಾಗಿತ್ತೆಂದು, ಮೋನಿಕಾ ಹೇಳಿದಂತೆ ರಾಣಿಯ ಜೊತೆಗೆ ಸಂಬಂಧವಿರುವುದು ಸತ್ಯವೆಂದೂ, ರಾಣಿ ಅಥವಾ ಅನಿಲನೇ ಇದಕ್ಕೆಲ್ಲ ಕಾರಣ ಎಂಬುವುದು ಮೋನಿಕಾಳ ಅಣ್ಣ ಡಾ.ಗುಪ್ತಾನ ವಾದ. ರೆಡ್ಡಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ, ಇಲ್ಲಿಯವರೆಗೂ ಏನೂ ಸುಳಿವು ಸಿಕ್ಕಿಲ್ಲ. ರಾಣಿಯನ್ನು ಸಂಪರ್ಕಿಸಿ ಸ್ಟೇಷನ್ಗೆ ವಿಚಾರಣೆಗೆ ಬರಲು ಹೇಳಿದ್ದೇವೆ, ಇಷ್ಟರಲ್ಲಿಯೇ ಬರಬಹುದು. ಆದರೆ, ಅನಿಲನನ್ನು ಟ್ರೇಸ್ ಮಾಡಲು ಆಗುತ್ತಿಲ್ಲಾ. ಕಾಂಪ್ಲಿಕೇಟೆಡ್ ಕೇಸ್ ಇದ್ದಂಗೆ ಇದೆ ಸಾರ್”ಎಂದು ವರದಿ ಒಪ್ಪಿಸಿದನು ಇನ್ಸ್ಪೆಕ್ಟರ್ ಪಾಟೀಲ್.
“ಎಸ್! ಇಟ್ ಇಸ್ ಕಾಂಪ್ಲಿಕೇಟೆಡ್. ಐಷಾರಾಮಿ ಜೀವನ ನಡೆಸುತ್ತಿದ್ದ ಮನುಷ್ಯ, ಜಿಗುಪ್ಸೆಯಿಂದ ಕಾಣೆಯಾಗುವ ಚಾನ್ಸ್ ತೀರಾ ಕಡಿಮೆ. ನನಗೆ ಅನಿಸಿದಂತೆ ಎರಡು ಸಾಧ್ಯತೆಗಳು, ಕಿಡ್ನಾಪ್ ಇಲ್ಲಾ ಕೊಲೆ.
ಕಾನ್ಸ್ಟೇಬಲ್ ತಂದಿಟ್ಟಿದ್ದ ಬಿಸಿ ಚಹಾ ಹೀರುತ್ತಾ ವಿಕ್ರಂ ಏನನ್ನೋ ಯೋಚಿಸುತ್ತಿರುವಾಗಲೇ ಹರೆಯ ವಯಸ್ಸಿನ ಆಕರ್ಷಿತ ಹೆಣ್ಣೊಬ್ಬಳು ಪೇದೆಯ ಜೊತೆಗೆ ಇವರಿದ್ದ ಕೋಣೆಗೆ ಬಂದಳು.
“ಸಾರ್! ನನ್ನ ಹೆಸರು ರಾಣಿ. ಮಿ. ರೆಡ್ಡಿಯವರ ಪಿ.ಎ. ವಿಷಯ ಕೇಳಿ ನನಗೂ ತುಂಬಾ ಬೇಜಾರಾಗಿದೆ. ನೀವು ಕರೆಸಿದಂತೆ, ನಿಮಗೆ ಈ ಕೇಸಿನಲ್ಲಿ ಸಹಾಯ ಮಾಡಲು ಬಂದಿರುವೆ”
ವಿಕ್ರಂ ಅವಳ ಬಾಡಿದ ಮುಖವನ್ನೇ ನೋಡುತ್ತಾ,
“ಮೇಡಂ, ವಿಚಾರಣೆಗೆ ಬಂದಿದ್ದಕ್ಕೆ ಧನ್ಯವಾದಗಳು. ಏನನ್ನೂ ಮರೆಮಾಚದೆ ಸತ್ಯವನ್ನು ಹೇಳಿದರೆ ನಮಗೂ ಅನುಕೂಲ, ನಿಮಗೂ ಒಳ್ಳೆಯದು. ರೆಡ್ಡಿಯವರ ಜೊತೆಗೆ ನೀವು ಎಷ್ಟು ವರ್ಷಗಳಿಂದ ಕೆಲಸಾ ಮಾಡುತ್ತಿರುವಿರಿ? ಅವನ ಜೊತೆಗೆ ನಿಮ್ಮ ಆಕ್ರಮ ಸಂಬಂಧವಿದೆಯೆಂಬ ಅವನ ಹೆಂಡತಿಯ ಹೇಳಿಕೆಗೆ ನಿಮ್ಮ ಉತ್ತರವೇನು ? ನಿಮ್ಮ ಅನಿಸಿಕೆಯಲ್ಲಿ ಯಾರಾದರು ಶಂಕಿತರಿದ್ದಾರೆಯೇ? ಐ ಜಸ್ಟ್ ವಾಂಟ್ ಆನ್ ಹಾನೆಸ್ಟ್ ಆನ್ಸರ್”. ‘ಸಾರ್, ನಾನು ರೆಡ್ಡಿಯವರ ಪಿ. ಎ. ಆಗಿ ಕೆಲಸಾ ಮಾಡ್ತಿರುವುದು ಕಳೆದ ಮೂರು ವರ್ಷಗಳಿಂದ. ಕಳೆದ ಎರಡು ದಿನಗಳಿಂದ ರಜೆ ಮೇಲಿದ್ದಿದ್ದರಿಂದ ಆಫೀಸಿಗೆ ಹೋಗಿಲ್ಲ. ಅವರ ಜೊತೆಗೆ ಅಕ್ರಮ ಅಲ್ಲಾ ಅನ್ಯೋನ್ಯ ಸಂಬಂಧವಿದೆ. ಎಷ್ಟೋ ಸಲ ಜೊತೆಗೂಡಿ ಹೊರಗಡೆಗೆ ಊಟಕ್ಕೆ ಹೋಗಿದ್ದೇನೆ, ತಾಸುಗಂಟಲೇ ಅವರ ಜೊತೆಗೆ ಹರಟೆ ಹೊಡಿದಿದ್ದೇನೆ. ನಾನು ಕೊಳ್ಳುತ್ತಿರುವ ಹೊಸ ಫ್ಲಾಟ್ಗೆ ಆರ್ಥಿಕ ಸಹಾಯ ಕೇಳಿದ್ದೇನೆ. ಯಾಕೋ ಅವರು ಇತ್ತೀಚಿಗೆ ಬಹಳೇ ಚಿಂತಿತರಾಗಿದ್ದರು. ಕುಡಿತ, ಕ್ಲಬ್ಬಿನ ಭೇಟಿ ಹೆಚ್ಚಾಗಿತ್ತು. ಡಾ.ಗುಪ್ತಾ ಒಳ್ಳೆಯ ಮನುಷ್ಯನಲ್ಲ, ಇಬ್ಬರ ನಡುವೆ ಒಳ್ಳೆಯ ಸಂಬಂಧ ಉಳಿದಿಲ್ಲಾ, ಇವರಿಂದ ಆಗಾಗ್ಯೆ ಎಷ್ಟೋ ಸಾಲ ತೆಗೆದುಕೊಂಡು ಇನ್ನೂ ಹಿಂದಿರುಗಿಸಿಲ್ಲ. ಇದರಲ್ಲಿ ಅವನದೇ ಕೈವಾಡವಿರಬಹುದು ಎಂಬುವುದು ನನ್ನ ಸಂಶಯ.‘

ಇಂತಾ ಕೇಸುಗಳಲ್ಲಿ ಒಬ್ಬರಮೇಲೊಬ್ಬರು ಅಪವಾದ ಮಂಡಿಸುವುದು ಸಹಜ ಎಂಬ ಅರಿವಿದ್ದ ವಿಕ್ರಂ , “ನಿಮ್ಮ ಹೇಳಿಕೆಗೆ ಧನ್ಯವಾದಗಳು, ರೆಡ್ಡಿ ಮತ್ತು ನಿಮ್ಮ ನಡುವೆ ನಡೆದ ಮಾತುಕತೆಯನ್ನು ಶೋಧಿಸಲು ನಿಮ್ಮ ಮೊಬೈಲ್
ಫೋನು ನಮಗೆ ಬೇಕು”
“ಸಾರ್ ! ನನ್ನ ಹಳೆಯ ಮೊಬೈಲ್ ಕಳೆದು ಮೂರು ದಿನವಾಗಿದೆ. ಕಂಪ್ಲೇಂಟ್ ಕೂಡಾ ಕೊಟ್ಟಾಗಿದೆ, ಈಗಿರುವುದು ಹೊಸ ಮೊಬೈಲ್, ನೀವು ತೆಗೆದುಕೊಳ್ಳಬಹುದು”
“ವಾಟ್ ಎ ಕೋ ಇನ್ಸಿಡೆಂಟ್”
“ಈ ಕೇಸು ಮುಗಿಯುವವರೆಗೂ ಸಂಶಯದ ದೃಷ್ಟಿಯಿಂದ ನಿಮ್ಮನ್ನು ಅರೆಸ್ಟ್ ಮಾಡಲಾಗುವುದು”.
“ಸತ್ಯ ಹೇಳಿದವರಿಗೆ ಉಳಿವಿಲ್ಲ ಎಂಬುವುದಕ್ಕೆ ಇದೊಂದು ಉದಾಹರಣೆ. ಮೀಡಿಯಾದ ಮುಂದೆ ನಿಮ್ಮ ಕೆಲಸವನ್ನು ತೋರಿಸಿಸಲು ಇದೊಂದು ಉಪಾಯ ಎಂದು ನನಗೆ ಚನ್ನಾಗಿ ಗೊತ್ತು. ಯು ವಿಲ್ ರಿಪೆಂಟ್ ಫಾರ್ ಇಟ್”
“ಪಾಟೀಲರೇ ಇವಳನ್ನು ಬಂಧನದಲ್ಲಿರಿಸಿ, ಹೆಸರು ಮಾತ್ರ ಗುಪ್ತವಾಗಿರಲಿ, ಅವಳ ಮೊಬೈಲನ್ನು ಮಿ. ಜೋಸ್ ಗೆ ಪರಿಶೀಲನೆಗೆ ರವಾನೆ ಮಾಡಿ, ಅನಿಲನ ಮೇಲೆ ವಾರೆಂಟ್ ಕಳಿಸಿ. ಈಗ ನಾನು ತಕ್ಷಣವೇ ಅವನ ಆಫೀಸಿಗೆ ಹೋಗಬೇಕು” ಎಂದು ಆದೇಶ ಕೊಟ್ಟನು ವಿಕ್ರಂ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಜೀಪು, ಬಿಡದಿಯ ಇಂಡಸ್ಟ್ರಿಯಲ್ ಎಸ್ಟೇಟ್ ಹತ್ತಿರವಿದ್ದ ಅವನ ಆಫೀಸನ್ನು ಸೇರಿತ್ತು. ಗೇಟಿನಲ್ಲಿದ್ದ ಗಾರ್ಡಿನಿಂದ ಆಫೀಸಿನ ಕೀಲಿಯನ್ನು ತೆರೆಸಿ, ನೇರವಾಗಿ ರೆಡ್ಡಿಯ ಚೇಂಬರ್ನೊಳಗೆ ಹೋಗಿ, ಸೂಕ್ಷ್ಮವಾಗಿ ಕಣ್ಣಾಡಿಸಿದನು. ಶೆಲ್ಫಿನಲ್ಲಿ ಅಚ್ಚು ಕಟ್ಟಾಗಿ ಫೈಲುಗಳನ್ನು ಜೋಡಿಸಲಾಗಿತ್ತು, ಟೇಬಲ್ ಮೇಲಿನ ಕುಂಡೆಯಲ್ಲಿದ ಹೂವುಗಳು ಇನ್ನೂ ತಾಜಾ
ಅನಿಸುತ್ತಿದ್ದವು. ಟೇಬಲಿನ ಮೇಲಿನ ಡ್ರಾವರನ್ನು ತೆಗೆದಾಗ ಕಂಡಿದ್ದು ಆಧುನಿಕ ಶೈಲಿಯ ಪಿಸ್ತೂಲು, ಕೆಳಗಡೆ ಡ್ರಾವರಿನಲ್ಲಿ ಸಿಕ್ಕಿದ್ದು ರಾಣಿಯ ಹೆಸರಿನಲ್ಲಿ ಬರೆದಿದ್ದ ಹತ್ತು ಲಕ್ಷ ರೂಪಾಯಿಗಳ ಚೆಕ್ಕು. ರಾಣಿಯ ಕುರಿತು ಕೊಟ್ಟ ಮೋನಿಕಾಳ ಹೇಳಿಕೆ ಬಹುತೇಕ ನಿಜವೆನಿಸಿತು ವಿಕ್ರಮಿನಿಗೆ. ‘ಹಾಗಾದರೆ ಈ ಪಿಸ್ತೂಲ್ ಏಕೆ? ಅವನಿಗೆ ಯಾರಿಂದಲಾದರೂ ಪ್ರಾಣ ಭೀತಿಯಿತ್ತೇ?’ ಅಥವಾ ‘ಸ್ವಯಂ ರಕ್ಷಣೆಗೆ ಇಟ್ಟುಕೊಂಡಿರಬಹುದೇ?’ ಎಂದು ಯೋಚಿಸತೊಡಗಿದನು.
ಕ್ರೈಂ ಬ್ರಾಂಚಿನ ಟೆಕ್ನಿಕಲ್ ಟೀಮಿನ ಅವಶ್ಯಕತೆ ಇದೆ ಎನಿಸಿ, ಮುಖ್ಯಸ್ಥ ಜೋಸ್ ಗೆ ಕರೆ ಮಾಡಿದನು. “ಮಿ. ಜೋಸ್, ನನಗೆ ಸಹಾಯ ಬೇಕಾಗಿದೆ. ಈಗ ನಾನು ಕಳಿಸುವ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ, ನನಗೆ ಈ ಮೊಬೈಲಿನಿಂದ ಬಂದ ಕೊನೆಯ ಟೆಕ್ಸ್ಟ್ ಮೆಸೇಜಿನ ವೇಳೆ ಮತ್ತು ಸ್ಥಳದ ಅವಶ್ಯಕತೆ ಇದೆ. ಪ್ಲೀಸ್ ಡು ಇಟ್ ಆಸ್ ಕ್ವಿಕ್ಲಿ ಆಸ್ ಪಾಸಿಬಲ್, ಹಾಗೆಯೇ ಪಾಟೀಲ್ ಕಳಿಸಿ ಕೊಡುವ ಮೊಬೈಲಿನಲ್ಲಿನ ಸಂದೇಶಗಳನ್ನು ಮತ್ತು ಕರೆಗಳನ್ನು ರಿಟ್ರೀವ್ ಮಾಡಲು ಪ್ರಯತ್ನ ಮಾಡಿ ಅರ್ಜೆಂಟ್ ಪ್ಲೀಸ್” ಎಂದು ಹೇಳಿ, ರೆಡ್ಡಿಯ ಮೊಬೈಲ್ ನಂಬರನ್ನು ಕಳುಹಿಸಿ, ಮುಂದಿನ ಯೋಜನೆಯ ಬಗ್ಗೆ ಚಿಂತಿಸತೊಡಗಿದನು. ವಿಕ್ರಂನಿಗೆ, ಡಾ. ಗುಪ್ತಾ ಮತ್ತು ಮೋನಿಕಾಳ ಮೇಲೆಯೂ ನಿಗಾ ಇಡುವುದು ಒಳ್ಳೆಯದೆನಿಸಿತು. ಅಷ್ಟರಲ್ಲಿಯೇ ಜೋಸ್ ನಿಂದ ಕರೆ ಬಂತು,
“ಮಿ. ವಿಕ್ರಂ ಅವನ ಮೊಬೈಲ್ನಿಂದ ಕೊನೆಯ ಮೆಸೇಜ್ ಹೋಗಿದ್ದು
ಸಾಯಂಕಾಲ ೭. ೩೦ ಗಂಟೆಯಲ್ಲಿ, ಬಿಡದಿಯ ಹತ್ತಿರದ ನೆಲ್ಲಿಗುಡ್ಡೆ ಕೆರೆಯ ಪ್ರದೇಶದಿಂದ, ಅನೇಬಲ್ ಟು ಟ್ರೇಸ್ ದಿ ಫೋನ್
ಫರ್ದರ್, ಸಾರೀ” ಎಂದು ಫೋನಿಟ್ಟನು. ಆಗಲೇ ಸಾಯಂಕಾಲ ಆರು ಗಂಟೆಯಾಗಿತ್ತು.” ಒಹ್! ನೋ,
ಪಾಟೀಲರೇ ಜೀಪ್ ರೆಡಿ ಮಾಡಿ ತಕ್ಷಣವೇ ನೆಲ್ಲಿಗುಡ್ಡೆ ಕೆರೆಗೆ ಹೋಗಬೇಕು”.
“ಸಾರ್, ಹೊರಗೆ ವಿಪರೀತ ಮಳೆ ಸುರಿಯುತ್ತಿದೆ, ಈ ಪರಿಸ್ಥಿತಿಯಲ್ಲಿ ಅಲ್ಲೇನು ಸಿಗುತ್ತದೆ?”
“ಪ್ರಮುಖವಾದ ಸುಳಿವು, ಶೀಘ್ರದಲ್ಲಿಯೇ ನಿಮಗೆ ಗೊತ್ತಾಗುತ್ತದೆ.”
ವಿಕ್ರಮನ ಆದೇಶದಂತೆ ಜೀಪು ಹದಿನೈದು ಕಿಲೋಮೀಟರ್ ದೂರದಲ್ಲಿದ್ದ ನೆಲ್ಲಿಗುಡ್ಡೆ ಕೆರೆಯನ್ನು ತಲುಪಿತ್ತು. ಯಾವಾಗೂ ಜನ ಜಂಗುಳಿಯಿಂದ ತುಂಬಿರುತ್ತಿದ್ದ ಕೆರೆಯ ಪ್ರದೇಶ, ಸುರಿಯುತ್ತಿದ್ದ ಧಾರಾಕಾರವಾದ ಮಳೆಯಿಂದಾಗಿ ನಿರ್ಜನವಾಗಿತ್ತು. ಸುರಿಯುತ್ತಿದ್ದ ಮಳೆಯಲ್ಲಿಯೂ ಜೀಪಿನಿಂದ್ ಕೆಳಗಿಳಿದು, ಏನನ್ನೋ ಹುಡುಕುತ್ತಲಿದ್ದ ವಿಕ್ರಮನನ್ನು ಪಾಟೀಲ್ ಹಿಂಬಾಲಿಸುತ್ತಿದ್ದನು. ಅನತಿ ದೂರದಲ್ಲಿ ಅವರಿಗೆ ಕಂಡಿದ್ದು ಮಿ. ರೆಡ್ಡಿಯ ಕಾರು.
“ಗಾಟ್ ಇಟ್” ಎಂದು ಉದ್ಘಾರವೆತ್ತಿದನು ವಿಕ್ರಂ.
ವಿಕ್ರಮನ ಚುರುಕು ಬುದ್ದಿಗೆ ಮನದಲ್ಲಿಯೇ ಅಭಿನಂದನೆ ವ್ಯಕ್ತಪಡಿಸಿ ಅವನ ಜೊತೆಗೆ ಕಾರಿನತ್ತ ಧಾವಿಸಿದನು ಪಾಟೀಲ. ಕಾರು ಹೊರಗಡೆಯಿಂದ ಲಾಕ್ ಆಗಿತ್ತು, ಒಳಗಡೆ ಯಾರೂ ಇರಲಿಲ್ಲ, ಮೊಬೈಲ್ ಫೋನಿನ ಸುಳಿವೂ ಇರಲಿಲ್ಲ.
“ಅಂದರೆ , ರೆಡ್ಡಿ ಇಲ್ಲಿಯವರೆಗೂ ಬಂದು ಮಾಯವಾಗಿದ್ದಾನೆ. ಕೆರೆಯನ್ನು ಶೋಧ ಮಾಡಲು ಬೋಟಿಂಗ್ ಟೀಮಿನ ಅವಶ್ಯಕತೆ ಇದೆ”
“ಸಾರ್, ಈ ರಾತ್ರಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಈಗ ಇದು ಸಾಧ್ಯವಿಲ್ಲ . ಪೊಲೀಸರಿಗೆ ಕಾರನ್ನು ಗಾರ್ಡ್ ಮಾಡಲು ಹೇಳಿ ನಾಳೆ ಬೆಳಿಗ್ಗೆ ಬರೋಣ” ಎಂದು ಸಲಹೆ ಕೊಟ್ಟನು ಪಾಟೀಲ. ಅವನ ಯೋಚನೆ ಸರಿ ಎನಿಸಿ ಮನೆಗೆ ಹಿಂದುರಿಗಿದನು ವಿಕ್ರಂ.
ಸುರಿಯುತ್ತಿದ್ದ ಮಳೆಯು ಬೆಳಗಿನ ವೇಳೆಗೆ ತಣ್ಣಗಾಗಿತ್ತು. ಪೊಲೀಸ್ ಪಡೆಯೊಂದಿಗೆ ವಿಕ್ರಮನು ಕೆರೆಯನ್ನು ತಲುಪಿದಾಗ ಹತ್ತು ಗಂಟೆಯಾಗಿತ್ತು. ಅಷ್ಟರಲ್ಲಿಯೇ ರಾತ್ರಿ ಕಾರು ಕಾವಲಿಗೆಂದು ಇದ್ದ ಪೇದೆಗಳು ಕೆರೆಯಲ್ಲೊಂದು ಹೆಣ ತೇಲಾಡುತ್ತಿದೆಯೆಂದು ಹೇಳಿದರು. ಬೋಟಿಂಗ್ ಟೀಮಿನವರು ಹೆಣವನ್ನು ಹೊರ ತರುವದರಲ್ಲಿ ಯಶಸ್ವಿಯಾಗಿದ್ದರು. ಅಷ್ಟೇನು ಬದಲಾವಣೆಯಾಗದಿದ್ದ ದೇಹ , ದೇಹದ ಮೇಲಿದ್ದ ಬಟ್ಟೆ, ಬಟ್ಟೆಯ ಜೇಬಿನಲ್ಲಿದ್ದ ಕಾರ್ ಕೀ ಮತ್ತು ಮೊಬೈಲ್ನಿಂದ ಅದು ರೆಡ್ಡಿಯ ದೇಹವೆಂದೇ ಖಚಿತವಾಯ್ತು. ವಿಕ್ರಂ ದೇಹವನ್ನು ಅರ್ಜೆಂಟ್ ಪೋಸ್ಟ್ ಮಾರ್ಟಮ್ ಗೆ ರವಾನೆ ಮಾಡಲು ತಿಳಿಸಿ, ಮೋನಿಕಾ ಮತ್ತು ಡಾ. ಗುಪ್ತಾಗೆ ಸ್ಟೇಷನಗೆ ಬರ ಹೇಳಿ, ಪಾಟೀಲ್ ನೊಂದಿಗೆ ಕಾರಿನ ಬಾಗಿಲನ್ನು ತೆರೆದು ಸೂಕ್ಷ್ಮ ವೀಕ್ಷಣೆಯನ್ನು ಮಾಡಿದನು. ಕಾರಿನ ಒಳಗಾಗಲಿ ಅಥವಾ ಹೊರಗಾಗಲಿ ಏನೂ ಪುರಾವೆ ಸಿಗಲಿಲ್ಲ. ಸುರಿದ ಮಳೆಯಿಂದ ಕಾರಿನ ಹೊರಗಡೆ ಯಾವುದೇ ಹೆಜ್ಜೆ
ಗುರುತುಗಳೂ ಕಾಣಿಸಲಿಲ್ಲ. ಸ್ಟೀಯರಿಂಗಿನ ಮೇಲಿನ ಫಿಂಗರ್ ಪ್ರಿಂಟ್ ತೆಗೆದುಕೊಂಡ ಮೇಲೆ ಕಾರನ್ನು ಠಾಣೆಗೆ ತರಲು ಹೇಳಿ ಪಾಟೀಲನೊಂದಿಗೆ ಸ್ಟೇಷನಗೆ ಮರಳಿದನು ವಿಕ್ರಂ.
ಕೊನೆಗೂ ಅನಿಲನನ್ನು ಹುಡುಕಿ, ಅರೆಸ್ಟ್ ಮಾಡಿ, ಠಾಣೆಗೆ ತರುವಲ್ಲಿ ಪೊಲೀಸ್ ಪಡೆಯವರು ಯಶಸ್ವಿಯಾಗಿದ್ದರು. ರೆಡ್ಡಿಗೆ ಇಪ್ಪತ್ತು ಲಕ್ಷ ಹಣ ಕೊಡುವದಿತ್ತೆಂದು , ಅವರಿಬ್ಬರ ನಡುವೆ ಜಗಳವಾಗುತ್ತಿದ್ದಿದ್ದು ನಿಜವೆಂದು ಹಾಗು ಅವನು ಕಾಣೆಯಾದ ವಿಷಯದಲ್ಲಿ ತನಗೇನೂ ಸಂಬಂಧವಿಲ್ಲವೆಂದು ಹೇಳಿಕೆ ಕೊಟ್ಟಿದ್ದನು ಅನಿಲ್. ಮೋನಿಕಾ ಮತ್ತು ಡಾ. ಗುಪ್ತ ವಿಕ್ರಮನ ಆದೇಶದಂತೆ ಸ್ಟೇಷನಗೆ ಬಂದಿದ್ದರು.
ಅವರೆಲ್ಲರಿಂದ ಮತ್ತೊಮ್ಮೆ ಮರು ಹೇಳಿಕೆ ಪಡೆದು, ಎಲ್ಲರ ಮೊಬೈಲುಗಳನ್ನು ಪಡೆದು, ಮಿ. ಜೋಸ್ ಗೆ ರವಾನಿಸಿ ಮೆಸೇಜ್ ಅನಲೈಸಿಂಗ್ ಮತ್ತು ರಿಟ್ರೀವಿಂಗ್ ಮಾಡಲು ಹೇಳಿ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತ ಕುಳಿತನು ವಿಕ್ರಂ.
ಮರಣೋತ್ತರ ಪರೀಕ್ಷೆಯ ಪ್ರಕಾರ … ದೇಹದ ಮೇಲೆ ಯಾವುದೇ ಗಾಯಗಳಿಲ್ಲವೆಂದೂ, ಪುಪ್ಪುಸದಲ್ಲಿ ನೀರು ಮತ್ತು ಪಾಚಿ ಇರುವುದರಿಂದ ಕೆರೆಯಲ್ಲಿ ಬಿದ್ದಾಗ ಅವನು ಜೀವಂತನಿದ್ದನೆಂದೂ, ಶರೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆರಾಯಿನ್ ಪತ್ತೆಯಾಗಿದ್ದರಿಂದ ಸಾಯುವ ಮುನ್ನ ಅವನು ಡ್ರಗ್ಗಿನ ಪ್ರಭಾವದಲ್ಲಿ ಇದ್ದ ಎಂಬುವುದು ಖಚಿತವೆಂದೂ, ಒಟ್ಟಿನಲ್ಲಿ ಇದೊಂದು ಬಹುಶಃ ಆತ್ಮಹತ್ಯೆ ಎಂದು ರಿಪೋರ್ಟ್ ಸೂಚಿಸಿತ್ತು. ಯಾಕೋ ವಿಕ್ರಮನ ಮನಸು ಇನ್ನೂ ಬೇರೆ ಏನನ್ನೋ ಯೋಚಿಸತೊಡಗಿತ್ತು. ಅವನಿಗೆ ಕಾರನ್ನು ಇನ್ನೊಮ್ಮೆ ಪರೀಕ್ಷಿಸಬೇಕೆನಿಸಿ ಕಾರಿನತ್ತ ಹೋದನು. ಸ್ಟೀಯರಿಂಗ್ ಮೇಲೆ ಸ್ಪಷ್ಟವಾದ ಫಿಂಗರ್ ಪ್ರಿಂಟ್ ಮೂಡಿಲ್ಲ ಎಂಬ ವರದಿಯನ್ನು ನೋಡಿ ಅವನಿಗೆ ಇನ್ನೂ ಕುತೂಹಲ ಮೂಡಿತ್ತು. ಹಾಗಾದರೆ ಸ್ಟೀಯರಿಂಗನ್ನು ಯಾರಾದರೂ ತೊಳೆದಿರಬಹುದೇ ? ಅವನ ಜೊತೆಗೆ ಕಾರಿನಲ್ಲಿ ಬೇರೆ ಯಾರಾದರೂ ಇದ್ದಿರಬಹುದೇ? ಎಂದು ಯೋಚಿಸತೊಡಗಿದನು.
ಒಂದು ಕ್ಷಣ ಸ್ಟೀಯರಿಂಗಿಗೆ ಲ್ಯೂಮಿನಾಲ್ ಲೇಪಿಸಿ ನೋಡಬೇಕೆನಿಸಿತು. ತನ್ನ ಕಾರಿನ ಬಾಟಲಿನಲ್ಲಿದ್ದ ಲ್ಯೂಮಿನಾಲನ್ನು ತಂದು ಸ್ಟೀಯರಿಂಗಿಗೆ ಲೇಪಿಸಿದ ತಕ್ಷಣವೇ ಗುಪ್ತವಾಗಿದ್ದ ಒಂದು ರಕ್ತದ ಕಲೆಯು ಹೊಳೆಯತೊಡಗಿತು. ಉಳಿದ ದ್ರವ್ಯವನ್ನು ಅವನು ಸೀಟುಗಳ ಮೇಲೆಯೂ ಮತ್ತು ಡಿಕ್ಕಿಯಲ್ಲಿಯೂ ಲೇಪಿಸಿದನು. ಡಿಕ್ಕಿಯ ಮೂಲೆಯಲ್ಲೂ ಒಂದು ಸಣ್ಣ ರಕ್ತದ ಕಲೆಯು ಹೊಳೆಯತೊಡಗಿತು.
ತಾನು ಯೋಚಿಸಿದ್ದು ಸರಿ ಎನಿಸಿ ತಕ್ಷಣವೇ ಫಾರೆನ್ಸಿಕ್ ಸ್ಕ್ರೀನಿಂಗ್ ಟೀಮನ್ನು ಕರೆಯಿಸಿ, ರಕ್ತದ ಕಲೆಯಿಂದ ಸ್ಯಾಂಪಲ್
ಸಂಗ್ರಹಿಸಿ, ಅರ್ಜೆಂಟ್ ಡಿ ಏನ್ ಎ ಅನಲೈಸಿಂಗಿಗೆ ಕಳುಹಿಸಿದನು. ಡಿಕ್ಕಿಯಲ್ಲಿದ್ದ ರಕ್ತದ ಕಲೆಯು ರೆಡ್ಡಿಯದೆಂದು ಆದರೆ ಸ್ಟೀಯರಿಂಗ್ ಮೇಲೆ ಇದ್ದ ರಕ್ತವು ಬೇರೆಯವರದೆಂದು ರಿಪೋರ್ಟ್ ಬಂದಿತು. ತಕ್ಷಣವೇ ವಿಕ್ರಂ ಅಂದುಕೊಂಡನು ಅಂದರೆ ,
ರೆಡ್ಡಿಯನ್ನು ಡಿಕ್ಕಿಯಲ್ಲಿ ಹಾಕಿ ಬೇರೆ ಯಾರೋ ಕಾರನ್ನು ಡ್ರೈವ್ ಮಾಡಿರುವರು. ಹಾಗಾದರೆ ಆ ಬೇರೆಯವನು ಯಾರು ? ಎಂದು ಯೋಚಿಸತೊಡಗಿದನು.
ತಕ್ಷಣವಾಗಿ ಅವನಿಗೆ ಶಂಕೆ ಬಂದಿದ್ದು ರಾಣಿ, ಅನಿಲ್, ಮೋನಿಕಾ ಮತ್ತು ಡಾ. ಗುಪ್ತಾರ ಮೇಲೆ. ವೈದ್ಯರ ಸಹಾಯದಿಂದ ಅವರೆಲ್ಲರ ರಕ್ತವನ್ನು ಸಂಗ್ರಹಿಸಿ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದನು. ಆಶ್ಚರ್ಯವೆಂಬುವಂತೆ ಸ್ಟೀಯರಿಂಗ್ ಮೇಲೆ ಇದ್ದ ರಕ್ತವು ಡಾ. ಗುಪ್ತಾನದೆಂದು ಪರೀಕ್ಷೆಯಿಂದ ಖಚಿತವಾಗಿತ್ತು. ಡಾ. ಗುಪ್ತಾನನ್ನು ಅರೆಸ್ಟ್ ಮಾಡಿ ಠಾಣೆಗೆ ಕರೆತಂದಾಗಿತ್ತು. ವಿಕ್ರಂ ಅವನಿಗೆ ಜೋರಾಗಿ ಹೇಳುತ್ತಿದ್ದನು,
ಡಾ. ಗುಪ್ತಾ ನೀವಾಗಿಯೇ ತಪ್ಪನ್ನು ಒಪ್ಪಿಕೊಂಡರೆ ಒಳ್ಳೆಯದು ಇಲ್ಲವಾದರೆ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಗುಪ್ತಾನಿಗೆ ಬೇರೆ ಹಾದಿ ಇಲ್ಲವೆನಿಸಿತು.
“ಹೌದು ಸಾರ್! ನಾನು ಮಾಡಿದ ಪ್ಲಾನ್ ಪರ್ಫೆಕ್ಟ್ ಅಂತಾ ಅಂದುಕೊಂಡಿದ್ದೆ ಆದರೆ ಅದು ಸುಳ್ಳಾಯಿತು. ಆಸ್ಪತ್ರೆಯಲ್ಲಾದ ನಷ್ಟದಿಂದ, ಐಷಾರಾಮದ ಜೀವನ ಶೈಲಿಯಿಂದ ಹಣದ ಉಬ್ಬರವಾಗಿತ್ತು. ರೆಡ್ಡಿಯಿಂದ ಆಗಾಗ್ಯೆ ತೆಗೆದುಕೊಂಡ ಸಾಲದ ಮೊತ್ತ ಐವತ್ತು ಲಕ್ಷವನ್ನು ದಾಟಿತ್ತು. ಅವನು ಇತ್ತಿತ್ತಲಾಗಿ ಹಣ ಮರಳಿಸಲು ಭಯಂಕರ ಕಿರುಕುಳ ಕೊಡತೊಡಗಿದ್ದನು, ಅದನ್ನು ತಡೆದುಕೊಳ್ಳಲಾಗದೇ ಅವನನ್ನೇ ಮುಗಿಸಿ ಬಿಡುವ ಯೋಚನೆಯನ್ನು ಹಾಕಿದೆ. ಡೀಪ್ ಫೇಕ್ ಟೆಕ್ನಾಲಜಿ ಉಪಯೋಗಿಸಿ ರಾಣಿ ಮತ್ತು ರೆಡ್ಡಿ ಜೊತೆಗೂಡಿದ ಸುಳ್ಳು ಫೋಟೋಗಳನ್ನು ಮೋನಿಕಾಗೆ ಕಳುಹಿಸಿ, ಅವಳಲ್ಲಿ ಅವನ ಬಗ್ಗೆ ಸಂಶಯ ಹುಟ್ಟಿಸಿದೆ. ಎರಡು ದಿನಗಳ ಹಿಂದೆ ಮೋನಿಕಾಳನ್ನು ನನ್ನ ಮನೆಗೆ ಕರೆತಂದೆ. ರೆಡ್ಡಿಗೆ ಹೆರಾಯಿನ್ ಬಗ್ಗೆ ಒಲವಿದ್ದದ್ದು ನನಗೆ ಮೊದಲಿನಿಂದಲೂ ಗೊತ್ತಿತ್ತು. ಕೆಲವು ಸಲ ಇಬ್ಬರೂ ಸೇರಿ ಸವಿದಿದ್ದೆವು. ಮೊನ್ನೆ ಅವನಿಗೆ ಫೋನು ಮಾಡಿ, ಅವನ ಮನೆಯಲ್ಲಿ ಇಪ್ಪತ್ತು ಲಕ್ಷ ಹಣ
ಹಿಂತಿರುಗಿಸುವದಾಗಿಯೂ ಮತ್ತು ಕೂಡಿ ಹೆರಾಯಿನ್ ಸೇವಿಸುವದಾಗಿಯೂ ತಿಳಿಸಿದ್ದೆ. ಈ ಪ್ಲಾನಿನನಲ್ಲಿ ಹಣದಾಸೆ ಹಚ್ಚಿ ಮನೆಗೆಲಸದ ಹುಡುಗ ರಾಜುನನ್ನು ಉಪಯೋಗಿಸಿದೆ. ಮನೆಯಲ್ಲಿಯ ಎಲ್ಲ ಸಿ ಸಿ ಟಿವಿಗಳನ್ನು
ಅವನ ಕೈಯಿಂದ ಆಫ್ ಮಾಡಿಸಿದ್ದೆ. ನನ್ನನ್ನು ನಂಬಿ ಆರೂವರೆ ಗಂಟೆಗೆ ರೆಡ್ಡಿ ಮನೆಗೆ ಬಂದಿದ್ದ. ಅವನ ರಕ್ತನಾಳದಲ್ಲಿ ಅಪಾಯಕರ ಪ್ರಮಾಣದ ಹೆರಾಯಿನ್ ನನ್ನು ಇಂಜೆಕ್ಟ್ ಮಾಡಿದ್ದೆ. ಕೆಲವೇ ನಿಮಿಷಗಳಲ್ಲಿ ಅವನು ಮೂರ್ಛೆ ಹೋಗಿದ್ದ. ರಾಜುವಿನ ಸಹಾಯದಿಂದ ಅವನನ್ನು ಅವನ ಕಾರಿನ ಡಿಕ್ಕಿಯಲ್ಲಿ ಹಾಕಿದ್ದೆ. ಕುಳಿತ ಸ್ಥಳವನ್ನು ಸ್ವಚ್ಛಗೊಳಿಸುವ ಅವಸರದಲ್ಲಿ ನನಗೆ ದುರದೃಷ್ಟವಶಾತ್ ನೀಡಲ್ ಸ್ಟಿಕ್ ಇಂಜುರಿ ಆಗಿತ್ತು.
ರಾಜುನ ಜೊತೆಗೆ ಕಾರನ್ನು ಓಡಿಸಿ ಹತ್ತಿರದ ನೆಲ್ಲಿಗುಡ್ಡೆ ಕೆರೆಗೆ ಬಂದು ರಾಜುನ ಸಹಾಯದಿಂದ ಮೂರ್ಛೆಗೊಂಡಿದ್ದ ರೆಡ್ಡಿಯನ್ನು ಕೆರೆಯಲ್ಲಿ ತಳ್ಳಿದೆ. ತಳ್ಳುವ ಮುಂಚೆ ಅವನದೇ ಮೊಬೈಲ್ನಿಂದ ಮೋನಿಕಾಗೆ ಮೆಸೇಜ್ ಕಳುಹಿಸಿದ್ದೆ ಹಾಗೂ ಫಿಂಗರ್ ಪ್ರಿಂಟ್ ಅಳಿಸಲು ಸ್ಟೀಯರಿಂಗನ್ನು ಬಟ್ಟೆಯಿಂದ ತಿಕ್ಕಿ, ಕಾರನ್ನು ಲಾಕ್ ಮಾಡಿ, ಕಾರ ಕೀ ಮತ್ತು ಮೊಬೈಲ್ ಅನ್ನು ಅವನ ಜೇಬಿನಲ್ಲಿ ಹಾಕಿದ್ದೆ. ಮಳೆ ಸುರಿಯುತ್ತಿದ್ದರಿಂದ ಜನರು ಯಾರೂ ಇರಲಿಲ್ಲ. ಟ್ಯಾಕ್ಸಿ ಹಿಡಿದುಕೊಂಡು ಮನೆ ಸೇರಿ, ಮೋನಿಕಾಳನ್ನು ಕರೆದುಕೊಂಡು ಸ್ಟೇಷನ್ ಗೆ ಬಂದಿದ್ದೆ. ಇದು ಕೊಲೆಯಲ್ಲ ಆತ್ಮಹತ್ಯೆ ಅಂತ ತೋರಿಸುವುದೇ ನನ್ನ ಉದ್ದೇಶವಾಗಿತ್ತು. ಮುಂದೆ
ಏನಾಯಿತಂತ ನಿಮಗೇ ಗೊತ್ತಲ್ಲ” ಎಂದು ಎಲ್ಲವನ್ನೂ ವಿವರಿಸಿ ತಲೆ ತಗ್ಗಿಸಿ ನಿಂತುಕೊಂಡನು.
“ದುರದೃಷ್ಟವಶಾತ್ ನಿಮ್ಮ ಬೆರಳಲ್ಲಾದ ನೀಡಲ್ ಸ್ಟಿಕ್ ಇಂಜುರಿಯಿಂದ ಸ್ಟೀಯರಿಂಗ್ ಮೇಲೆ ಹಾಗು ಹೆರಾಯಿನ ಸೇವಿಸಿದ ರೆಡ್ಡಿಯ ರಕ್ತನಾಳದಿಂದ ಡಿಕ್ಕಿಯಲ್ಲಿ ಅಂಟಿದ ಸಣ್ಣ ರಕ್ತದ ಕಲೆ ನಿಮ್ಮ ಕಣ್ಣಿಗೆ ಕಾಣದೇ ಹೋಯಿತಲ್ಲವೇ?”
ವಿಕ್ರಂ ವೇಳೆಯನ್ನು ನೋಡಿಕೊಂಡನು, ಮೂರು ದಿನಗಳಿಗೆ ಇನ್ನೂ ಮೂರು ತಾಸು ಬಾಕಿ ಇತ್ತು!

ಡಾ. ಶಿವಶಂಕರ ಮೇಟಿ

ಮದುಮಗಳು ಬೇಕಾಗಿದ್ದಾಳೆ – ವತ್ಸಲಾ ರಾಮಮೂರ್ತಿ

ಸಿಟ್ಟಿಂಗ್ ರೂಮಿನಲ್ಲಿ ಗಂಡ ಟೀ ಕುಡೀತಾ, ಕೋಡುಬಳೆ ತಿನ್ನುತ್ತಾ ಕುಳಿತಿದ್ದಾನೆ. ಹೆಂಡತಿ ಹೊಸ ಸೀರೆ ಉಟ್ಟು, ದೊಡ್ಡ ಕುಂಕಮವನಿಟ್ಟುಕೊಂಡು, ಹೂವ ಮುಡಿದು, ಕಳಕಳಂತ ಬರುತ್ತಾಳೆ.

ಹೆಂಡತಿ: ಏನೊಂದ್ರೆ? ಆರಾಮವಾಗಿ ಟೀ ಕುಡೀತ ಕೂತಿದ್ದೀರಾ? ಹುಡುಗಿ ಮನೆಯವರು ಹೆಣ್ಣನ್ನು ಕರಕೊಂಡು ಬರುತ್ತಿದ್ದಾರೆ. ಏಳಿ, ಪ್ಯಾಂಟು ಷರಟು ಬೂಟು ಟೈ ಕಟ್ಟಿಕೊಂಡು ಬನ್ನಿ. ಹಾಗೆ ಸೆಂಟು ಮೆತ್ತಿಕೊಳ್ಳಿ.

ಗಂಡ: ಅಮ್ಮ! ತಿಮ್ಮಣ್ಣಿ ! ಹುಡುಗಿ ನನ್ನ ನೋಡೋಕೆ ಬರುತ್ತಿಲ್ಲ ಕಣೆ. ನಿನ್ನ ಮುದ್ದಿನ ಮಗನ ನೋಡುವುದಕ್ಕೆ ಬರುತ್ತಿದ್ದಾರೆ. ನಾನು ಸೊಟು ಗೀಟು ಹಾಕಲ್ಲ. ಜರತಾರಿ ಪಂಚೆ, ಶಲ್ಯ, ಮುದ್ರೆ ಹಾಕಿಕೊಂಡು ಬರುತ್ತೇನೆ.

ಹೆಂಡತಿ: ಅಯ್ಯೊ! ಹುಡುಗಿ ಮನೆಯವರು ತುಂಬಾ ಮಾಡರ್ನ್ ಮತ್ತು ಸ್ಮಾರ್ಟ್ ಅಂತೆ. ಹುಡುಗಿ ಗ್ರಾಜುಯೆಟ್‌. ವೃತ್ತಿಯಲ್ಲಿರುವ ಹುಡುಗಿ. ಇಂಗ್ಲೀಷ್ ಚೆನ್ನಾಗಿ ಮಾತನಾಡುತ್ತಾಳಂತೆ. ಅಲ್ಲಾ, ನನ್ನ ಯಾಕೆ ತಿಮ್ಮಣ್ಣಿ ಅಂತ ಕರೀತಿರಿ? ನನ್ನ ಹೆಸರು ಸುಗಂಧ ಅಲ್ಲವೇ? ನಮ್ಮ ಅಮ್ಮ ತಿರುಪತಿ ದೇವರ ಹೆಸರು ಅಂತ ಹಾಗೆ ಕರೆದರು. ನಾನು ನಿಮ್ಮನ್ನ ಬೋಡು ಕೆಂಪಣ್ಣಂತ ಕರೀಲಾ?

ಗಂಡ: ಬೇಡ ಕಣೆ. ನಿನ್ನ ಮಗ ತಯಾರಾಗಿದ್ದಾನಾ? ಹೋಗಿ ನೋಡು. ಅಂದಹಾಗೆ ಹುಡುಗಿ ಮನೆಯವರಿಗೆ ಹುಡುಗ ಏನು ಓದಿದ್ದಾನೆ, ಕೆಲಸವೇನು ಅಂತ ಹೇಳಿದ್ದಿ ತಾನೆ?

ಹೆಂಡತಿ: ಅದೇರಿ ಅವನ ಹೆಸರು ಮುಸರೆಹಳ್ರಿ ಮಾದಪ್ಪಂತ ಹೇಳಿಲ್ಲ. ಅವನು ಮಿಸ್ಟರ್ ವಿವಿದ್ ಕುಮಾರ್‌. ಬಿಕಾಂ ಓದಿದ್ದಾನೆ. ಎಸ್ ಎಸ್ ಎಲ್ ಸಿ ಕನ್ನಡ ಮೀಡಿಯಮ್‌ ನಪಾಸು ಅಂತ ಗುಟ್ಟುಬಿಟ್ಟುಕೊಟ್ಟಿಲ್ಲ. ಅಕೌಂಟಂಟ್ ಅಂತ ಹೇಳಿದ್ದೀನಿ.

ಗಂಡ: ಏಷ್ಟು ಸಂಬಳ? ಫೋಟೋ ಕಳಿಸಿದ್ದಿಯಾ?

ಹೆಂಡತಿ: ಹೋಗ್ರಿ! ಬರೆ ೫೦೦ ರೊಪಾಯಿ ಸಂಬಳ , ಕಿರಾಣಿ ಅಂಗಡಿಯಲ್ಲಿ ಕಾರಕೊನಂತ ಹೇಳಿದರೆ ಯಾರು ಮದುವೆ ಮಾಡಿಕೊಳ್ಳುತ್ತಾರೆ? ಅದಕ್ಕೆ ೫೦೦೦ ರೂಪಾಯಿ ಸಂಬಳಂತ ಹೇಳಿದೆ. ಫೋಟೋಗೆ ಏನು ಮಾಡಿದೆಗೊತ್ತಾ? ಫೋಟೋಗ್ರಾಫರನಿಗೆ “ನೋಡಪ್ಪ, ನಮ್ಮ ಮಗನ ಫೋಟೊ ಸ್ಮಾರ್ಟ್ ಆಗಿ ಕಾಣೊ ಹಾಗೆ ಮಾಡಪ್ಪ ಅಂತ ಹೇಳಿದೆ.“ ಅವನು ನಮ್ಮ ಕುಮಾರನ ಉಬ್ಬು ಹಲ್ಲು , ಬೋಳು ತಲೆಯನ್ನು ಮರೆಮಾಚಿದ್ದಾನೆ. ಕರಿಬಣ್ಣ ಫೋಟೋದಲ್ಲಿ ಕಾಣುವುದಿಲ್ಲ.

ಗಂಡ: ಅಲ್ಲ ಕಣೆ , ನೀನೇನೊ ಹುಡುಗ ಬಿಕಾಂ ಅಂತ ಹೇಳಿದ್ದೀ . ಹುಡುಗಿ ಇವನ್ನನ್ನ ಇಂಗ್ಲೀಷಿನಲ್ಲಿ ಮಾತಾನಾಡಿಸಿದರೆ ನಮ್ಮ ಕುಮಾರನಿಗೆ ಉತ್ತರಿಸಲು ಸಾದ್ಯವೇ? ಒಂದು ವಾಕ್ಯ ಇಂಗ್ಲೀಷಿನಲ್ಲಿರಲಿ, ಕನ್ನಡದಲ್ಲಿ ಬರೆಯಲು ಬರಲ್ಲ. ಎಷ್ಟು ಸಾರಿ ಇಂಗ್ಲೀಷಿನಲ್ಲಿ ನಪಾಸಾಗಿದ್ದಾನೆ. ಕಡೆಯಲ್ಲಿ ಕನ್ನಡ ಮೀಡಿಯಮ್ಮಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಗೋತ ಹೋಡಿಲ್ಲಿಲ್ಲವೇ?

ಹೆಂಡತಿ: ಬಿಡ್ರಿ! ನಮ್ಮ ಕುಮಾರನಂಥ ಗಂಡ ಸಿಗಬೇಕಾದರೆ ಪುಣ್ಯ ಮಾಡಿರಬೇಕು.

ಅಷ್ಟರಲ್ಲಿ ಹುಡುಗ ಬರುತ್ತಾನೆ.

ವಿವಿದ್ ಕುಮಾರ: ಅಮ್ಮ ಅಪ್ಪ, ನಾನು ಹುಡುಗೀನ ನೋಡಲ್ಲ. ಎಲ್ಲರೂ “ಹುಡಗ ಕೋತಿ ತರಹ ಇದ್ದಾನೆ, ನಾನು ಒಲ್ಲೆ ಅಂತಾರೆ. ಹೋಗಲಿ, ಹುಡುಗಿಯ ಕತೆ ಏನು? ಫೋಟೋ ಇದೆಯಾ? (ಪಾಪ! ಅವನಿಗೆ ಆಸೆ, ಹಸೆಮಣೆಯ ಮೇಲೆ ಕುಳಿತುಕೊಳ್ಳುಪುದಕ್ಕೆ!)

ತಾಯಿ: ಹುಡುಗಿ ಹೆಸರು ಸೋನಿಯಾ, ಅಂದ್ರೆ ಬಂಗಾರ ಕಣೊ. ಕಪ್ಪು ಬಂಗಾರ ಕಣೊ. ನೀನು ಅದೃಷ್ಟವಂತ. ೧೫ನೇ ಹುಡುಗಿನಾದಾರೂ ಓಪ್ಪುತ್ತಾಳೇನೊ?

ಹುಡುಗ: ಹಾಗಾದರೆ ಏನು ತಿಂಡಿ ಮಾಡಿದ್ದಿ ಅವರಿಗೆ?

ತಾಯಿ: ನೀನೊಬ್ಬ ತಿಂಡಿಪೋತ! ಖಾರದ ಮೆಣಸಿನಕಾಯಿ ಬೊಂಡ ಮತ್ತು ಗಟ್ಟಿ ಉಂಡೆ ಮಾಡಿದ್ದೇನೆ.

ಅಷ್ಟರೊಳಗೆ ಹೂರಗೆ ಕಾರಿನ ಶಬ್ದ.

ಗಂಡ: ಅವರು ಬಂದ್ರು (ಓಡಿಹೋಗಿ ಬಾಗಿಲು ತೆರೆಯುತ್ತಾನೆ).

ಹುಡುಗಿ ಒಳಗೆ ಬಂದಳು!
ಗಂಡನ ಕಡೆಯವರು ತರತರ ನಡುಗಿದರು!
ಏದೆಡಭಢಭ ಬಡಿಯಿತು..!
ಹುಡುಗಿ ಹೇಗಿದ್ದಳು ಗೊತ್ತಾ?
ಆರು ಅಡಿ ಉದ್ದ , ಕಪ್ಪಗೆ ಇದ್ದಾಳೆ. ದೂಡ್ಡ ಬೂಟ್ಸ್ ಹಾಕಿಕೊಂಡಿದ್ದಾಳೆ. ಪೋಲೀಸ್ ಯುನಿಫಾರ್ಮ್-ನಲ್ಲಿ ಬಂದ್ದಿದ್ದಾಳೆ!

ಅವಳು: ಹುಡುಗ ಯಾರು? (ಗುಡಿಗಿದಳು).

ಹುಡುಗ ನಡುಗಿದ ಮತ್ತೊಮ್ಮೆ.

ಹುಡುಗಿ: ನನಗೆ ಈ ಮಂಕುತಿಮ್ಮನೆ ಬೇಕು. ಹೇಳಿದ ಹಾಗೆ ಕೇಳುತ್ತಾನೆ.

ಮದುವೆ ಓಲಗ ಊದಿಸಿಯೇ ಬಿಟ್ಯರು.

ಸಂಕಟ (ಕಥೆ) – ಲಕ್ಷ್ಮೀನಾರಾಯಣ ಗುಡೂರ

ಅನಿವಾಸಿಯ ಬಂಧುಗಳಿಗೆ ನಮಸ್ಕಾರ. ಇಂದು ನನ್ನ ಹತ್ತಿರ ಬೇರೆ ಏನೂ ಸರಕು ಇರಲಿಲ್ಲವಾದ್ದರಿಂದ, ಈ ಹಿಂದೆ ನಾನೇ ಬರೆದ ಕಥೆಯೊಂದನ್ನು ಹಾಕುತ್ತಿರುವೆ. ನಾನು ಕಥೆಗಾರನಲ್ಲವೆಂದು ಗೊತ್ತಿದ್ದೂ ನನ್ನ ಒಂದು ಪ್ರಯತ್ನವನ್ನು ನಿಮ್ಮಂತಹ ಪ್ರಬುದ್ಧರ ಮುಂದೆ ಇಡುತ್ತಿರುವೆ. ದಯವಿಟ್ಟು ನಿಮ್ಮ ಅಭಿಪ್ರಾಯ, constructive criticism ತಿಳಿಸಿ, ಓದಿದ ನಂತರ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)

28.06.2020

ಹೆಚ್ಚು ಕಡಿಮೆ ಆರು ತಿಂಗಳಾದ ಮೇಲೆ ಮತ್ತೆ ಇಲ್ಲಿ ಬರೆಯುತ್ತಿರುವೆ. ಬರೆಯುವ ವಿಷಯ ಬಹಳವಿದೆ – ಎಲ್ಲಿಂದ ಪ್ರಾರಂಭಿಸುವುದೋ ಗೊತ್ತಿಲ್ಲ. ಅದರ ಬಗ್ಗೆ ಚಿಂತಿಸುತ್ತ ಹತ್ತು ದಿನಗಳು ಹೋದವು. ಇವತ್ತೂ ಕೈಯಲ್ಲಿ ಐ-ಪ್ಯಾಡಿದೆ … ಆದರೆ ಬೆರಳುಗಳು ಓಡುತ್ತಿಲ್ಲ. ನನ್ನ ಯೂನಿವರ್ಸಿಟಿ ಅಪ್ಲಿಕೇಶನ್ನಿನಿಂದ ಶುರುವಾದದ್ದು, ಇಂಟರ್ವ್ಯೂ, ಏ-ಲೆವೆಲ್ ಮಾಕ್ ಪರೀಕ್ಷೆ, ಮುಂದಿನ ತಯಾರಿಗಳ ಮೂಲಕ ಹಾಯ್ದು ನಿನ್ನೆ ಫೈನಲ್ ಪರೀಕ್ಷೆಗಳು ಮುಗಿಯುವವರೆಗೆ ಸತತವಾಗಿ ಒಂದಾದ ಮೇಲೊಂದರಂತೆ ಬಂದು, ನನ್ನ ಸ್ಥಿತಿ ಆ ಬಿಬಿಸಿಯ ಅಟ್ಟೆನ್ಬರಾ ಅವರ ಬ್ಲೂ ಪ್ಲಾನೆಟ್ಟಿನ ತಿಮಿಂಗಿಲದ ಹಾಗಿತ್ತು – ಮಧ್ಯ ಮಧ್ಯ ಮೇಲೆ ಬಂದು ಉಸಿರೆಳೆದುಕೊಳ್ಳುವುದು ಮತ್ತೆ ಓದು / ಕೆಲಸದ ಜೀವನದಲ್ಲಿ ಮುಳುಗು ಹಾಕುವುದು. ಇವತ್ತು ಖಾಲಿ ಇದ್ದೇನೆ, ಬ್ಲಾಗಿನಲ್ಲೇನಾದರೂ ಬರೆಯೋಣ ಅನ್ನಿಸಿ ಎತ್ತಿಕೊಂಡೆ.

ಅಮ್ಮ ಕರೆಯುತ್ತಿದ್ದಾಳೆ ಕೆಳಗಿನಿಂದ. ನೋಡಿ ಬಂದು ಮತ್ತೆ ಬರೆಯುತ್ತೇನೆ.

ವೃತ್ತಿಯಲ್ಲಿ ವೈದ್ಯಳಾಗಿದ್ದ ಅಮ್ಮನಿಗೆ ಕೋವಿಡ್ ಆಗಿದ್ದು, ನಾಲ್ಕು ತಿಂಗಳ ಹಿಂದೆ ಫೆಬ್ರುವರಿಯಲ್ಲಿ. ನನ್ನ ಮಾಕ್ ಎಕ್ಸಾಮ್ ಮುಗಿದಂದು. ಪರೀಕ್ಷೆಯ ಕೊನೆಯ ದಿನ ಅವತ್ತು. ಬೆಳಗ್ಗೆ ನಾನು ಹೊರಡುವಾಗಲೇ ಅಮ್ಮ ತಲೆ ಹಿಡಿದುಕೊಂಡು ಕೂತಿದ್ದಳು. “ಯಾಕೋ ಸ್ವಲ್ಪ ತಲೆನೋವು ಕಣೆ, ಕೆಮ್ಮು, ಜ್ವರ ಯಾವ್ದೂ ಇಲ್ಲ ಪುಣ್ಯಕ್ಕೆ; ಇಲ್ಲಂದರೆ ಕೋವಿಡ್ಡೋ ಏನೋ ಅನ್ನೋ ಚಿಂತೆ ಮಾಡಬೇಕಾಗಿರ್ತಿತ್ತು. ಎಲ್ಲ ಕಡೆ ಅದೊಂದು ಶುರುವಾಗಿದೆಯಲ್ಲ, ನಮ್ಮ ಆಸ್ಪತ್ರೆಯಲ್ಲಿ ಸಾಕಷ್ಟು ಪೇಶಂಟ್ಗಳು ಬರುತ್ತಿದ್ದಾರೆ! ನಿನ್ ಪರೀಕ್ಷೆ ಬೇರೆ. ಕೊನೇ ದಿನ, ಮುಗಿಸಿ ಬಿಡು. ನೋಡೋಣ” ಅನ್ನುತ್ತ ಪ್ಯಾರಾಸೆಟಮಾಲ್ ನುಂಗಿ ನನಗೆ ಬೈ ಹೇಳಿದಳು. ಪಪ್ಪ ಆಗಲೇ ಕಾರು ಸ್ಟಾರ್ಟ್ ಮಾಡಿಯಾಗಿತ್ತು. ನಾನು ಬಾಗಿಲು ದಾಟುವಾಗಲೇ “ದೇವರಿಗೆ ಕೈ ಮುಗಿದು ಹೋಗು, ಗುಡ್ ಲಕ್” ಅಂತ ಅಮ್ಮನ ಕೂಗು ಕೇಳಿಸಿ, ಬಾಗಿಲ ಮೇಲಿದ್ದ ಗಣಪತಿಯ ಕಡೆ ನೋಡಿ ಒಮ್ಮೆ ಎದೆಗೆ, ಕಣ್ಣಿಗೆ ಕೈ ಮುಟ್ಟಿಸಿಕೊಂಡು “ಅಮ್ಮಾ, ಬಾಗಿಲು ಹಾಕ್ಕೋ; ಪಪ್ಪ ಆಗಲೇ ಕಾರಲ್ಲಿದಾನೆ” ಅಂದು ಬಾಗಿಲು ಮುಚ್ಚಿ ಹೊರಟೆ.

ಸಂಜೆ ಶಾಲೆಯಿಂದಲೇ ಗೆಳತಿಯರೊಂದಿಗೆ ಹೊರಗೆ ಊಟಕ್ಕೆ ಹೋಗುವ ಬಗ್ಗೆ ಅಮ್ಮನಿಗೆ ಗೊತ್ತಿದ್ದುದರಿಂದ, ಒಂದು ಮೆಸೇಜು ಕಳಿಸಿ ನಾವು ನಾಲ್ವರೂ ಇಟಾಲಿಯನ್ ರೆಸ್ಟಾರೆಂಟಿಗೆ ಹೋದೆವು. ಒಂಬತ್ತೂವರೆಗೆ ಪಪ್ಪನ ಮೆಸೇಜು ಬಂತು – “Waiting in the car outside”. ಗೆಳತಿಯರಿಗೆ ವಿದಾಯ ಹೇಳಿ ಬಂದು ಕಾರಲ್ಲಿ ಕೂತಾಗ ಒಂಬತ್ತು-ಮುಕ್ಕಾಲು. ಪಪ್ಪ ಯಾಕೋ ಚಿಂತೆಯಲ್ಲಿರುವಂತೆ ಅನ್ನಿಸಿತು. ಒಂದೆರಡು ಸಲ ಕೇಳಿದರೂ ಅದಕ್ಕುತ್ತರ ಬರಲಿಲ್ಲ; ನನ್ನ ಕಳೆದ ದಿನದ ಬಗ್ಗೆ ಮಾತಾಡುತ್ತ ಡ್ರೈವ್ ಮಾಡಿದ ಪಪ್ಪ.

ಮನೆಗೆ ಬಂದಾಗ ಅಮ್ಮ ಇರಲಿಲ್ಲ. ಆಗಲೇ ನನಗೆ ನೆನಪಾಗಿದ್ದು ಅಮ್ಮನ ಬೆಳಗಿನ ತಲೆನೋವು. “ಅಮ್ಮ ಎಲ್ಲಿ?” ಊಟದ ಟೇಬಲ್ಲಿನ ಮುಂದೆ ಕುಳಿತ ಪಪ್ಪನ ಮುಖ ನೋಡುತ್ತ ಕೇಳಿದೆ.

“ಮಧ್ಯಾಹ್ನ ಜ್ವರ ಹೆಚ್ಚಾಗಿ, ಉಸಿರಾಟಕ್ಕೆ ತೊಂದರೆ ಅನ್ನಿಸಿದಾಗ ಅವಳನ್ನು ಆಸ್ಪತ್ರೆಗೆ ಕರಕೊಂಡು ಹೋಗಬೇಕಾಯ್ತು. ಆಕ್ಸಿಜೆನ್ ಸ್ಯಾಚುರೇಶನ್ ಕಡಿಮೆಯಾಗಿತ್ತು. ಎಕ್ಸ್-ರೇ, ಸಿಟಿ ಸ್ಕ್ಯಾನ್ ಮತ್ತು ಕೋವಿಡ್ ಟೆಸ್ತ್ ಮಾಡಿದ್ರು, ಮೊದಲಿನ ಎರಡರಲ್ಲೂ ಪಾಸಿಟಿವ್ ಅಂತ ಬಂದುದರಿಂದ ಅಲ್ಲೇ ಅಡ್ಮಿಟ್ ಮಾಡಿಕೊಂಡಿದ್ದಾರೆ. ಕೋವಿಡ್ ರಿಸಲ್ಟ್ ಬರಲಿಕ್ಕೆ ಎರಡು ದಿನ ಬೇಕಾಗಬಹುದಂತೆ. ನಿನ್ನ ಪರೀಕ್ಷೆ ಮುಗಿದು, ಊಟ ಮುಗಿಸಿಕೊಂಡು ಬರ್ತೀಯಲ್ಲ ಅಂತ ಮುಂಚೆ ಹೇಳ್ಳಿಲ್ಲ” ಅಂದ ಪಪ್ಪ.

ನನ್ನ ಎದೆ ಡವಡವ ಹೊಡೆದುಕೊಂಡರೂ, ತೋರಿಸಿಕೊಳ್ಳದೆ “ಹೇಗಿದ್ದಾಳೆ ಈಗ” ಅಂದೆ. “ಸ್ವಲ್ಪ ಹೊತ್ತಿನ ಮುನ್ನ ಫೋನು ಮಾಡಿದ್ಲು, ಆಮೇಲೆ ಮಾಡ್ತಾಳಂತೆ ಎದ್ದಿದ್ದರೆ” ಅನ್ನುವುದರಲ್ಲಿ ನನ್ನ ಫೋನು ಸದ್ದು ಮಾಡಿತು. ಸುಸ್ತಿನ ಧ್ವನಿಯಲ್ಲಿ ಮಾತಾಡಿದ ಅಮ್ಮ, ಎರಡು ನಿಮಿಷದಲ್ಲಿ ಒಂದಿಪ್ಪತ್ತು ಬಾರಿ ಕೆಮ್ಮಿದಳು.

“ಸರಿ, ಮಲಕ್ಕೊ. ಗುಡ್ ನೈಟ್” ಫೋನು ಕಟ್ ಮಾಡಿದೆ. ನಾನೂ ಮಲಗಲು ಹೋದೆ.

ಬೆಳಗ್ಗೆ ಎದ್ದಾಗ ಹನ್ನೆರಡು-ಇಪ್ಪತ್ತು. ಹೇಗೂ ವೀಕೆಂಡು ಅಲ್ಲಿಂದ ಹಾಫ್ ಟರ್ಮ್ ರಜೆ. “ಅಮ್ಮು, ನಾನು ರಾತ್ರಿಯಿಡೀ ಮಲಗಲಿಕ್ಕೇ ಆಗಿಲ್ಲ, ಒಂದೆರಡು ಗಂಟೆ ಮಲಗಿರ್ತೀನಿ” ಅಂತ ಬಾಗಿಲಲ್ಲೇ ಹೇಳಿ ಮಲಗಲು ಹೋದ ಪಪ್ಪ. ಇಡೀ ದಿನ ಮನೆಯೆಲ್ಲ ಭಣಭಣ, ಅತಿಯಾದ ನಿಶ್ಶಬ್ದ. ಅಮ್ಮನ ಮಾತಿಲ್ಲ, ಕೆಲಸಗಳಿಗೆ ಸಹಾಯ ಮಾಡುತ್ತ ಅವಳ ಹಿಂದೆಯೇ ಸುತ್ತುವ ಅಪ್ಪನ ಜೋಕುಗಳಿಲ್ಲ. ಅವತ್ತು ಶನಿವಾರ ಮಧ್ಯಾಹ್ನದ ರೂಟೀನ್ ಅಜ್ಜಿ-ತಾತನ ಜೊತೆಯ ಚಾಟಿಂಗಿಗೂ ನಾನೊಬ್ಬಳೇ ಇದ್ದೆ. ಅಜ್ಜಿ-ತಾತನಿಗೆ ಈಗಲೇ ಹೇಳಿ ಗಾಬರಿಮಾಡಬಾರದು ಎಂದು ಹಿಂದಿನ ರಾತ್ರಿಯೇ ಹೇಳಿದ್ದ ಪಪ್ಪ.

ಇನ್ನೆರಡು ದಿನ ಹೀಗೆಯೇ ಕಳೆಯಿತು. ಕೋವಿಡ್ ಸ್ವಾಬ್ ಪಾಸಿಟಿವ್ ಅಂತ ಬಂದಿತ್ತು. ಫೋನಿನ ಮೇಲೆಯೇ ಅಮ್ಮನೊಡನೆ ಮಾತು. ಇನ್ನೂ ಸುಸ್ತು, ಕೆಮ್ಮು ಹೆಚ್ಚಾದಂತೆಯೇ ಅನ್ನಿಸುತ್ತಿತ್ತು. ಮನೆಯಲ್ಲಿ ಸ್ಮಶಾನಮೌನ. ಫೋನಿನಲ್ಲಿ ಕೇಳಿಸುತ್ತಿದ್ದ ಅಮ್ಮನ ಕೆಮ್ಮು ಮಾತ್ರ ಮನೆಯಲ್ಲಿ ಕೇಳಿಸುವ ಸದ್ದಾಗಿತ್ತು.

ಏನಿದು ಕೋವಿಡ್, ಏನು ಅದಕ್ಕೆ ಉಪಾಯ ಅಂತ ಗೂಗಲ್ ಮಾಡಿ ನೋಡಿದರೆ, ಜಾಸ್ತಿ ಏನೂ ವಿಷಯ ಸಿಗುತ್ತಿರಲಿಲ್ಲ. ಅಮ್ಮ ಇದ್ದ ವಾರ್ಡಿನ ಡಾಕ್ಟರು ಆರನೆಯ ದಿನ ಬೆಳಿಗ್ಗೆ ಫೋನು ಮಾಡಿ, ಹೊಸ ಐ-ಪ್ಯಾಡುಗಳನ್ನು ಕೊಂಡಿರುವುದಾಗಿಯೂ, ಪೇಷಂಟುಗಳ ಜೊತೆಗೆ ಮನೆಯವರು ಫೇಸ್ ಟೈಮಿನಲ್ಲಿ ಮಾತಾಡಬಹುದೆಂದೂ ತಿಳಿಸಿದಾಗ ಒಂದು ದೊಡ್ಡ ಚಿಂತೆ ಕಳೆದಂತಾಗಿ ಪಪ್ಪನ ಕಣ್ಣಿನಲ್ಲಿ ಜೀವ ಮರಳಿ ಬಂದಂತೆನಿಸಿತು. ಅವತ್ತೆಲ್ಲ ಮಾತೂ ಜಾಸ್ತಿಯಾಗಿದೆ ಅನ್ನಿಸಿದ್ದೂ ನಿಜ. ಸಂಜೆ ಅಮ್ಮನನ್ನು ನೋಡಿದಾಗ ಪಪ್ಪ ಅತ್ತೇಬಿಡುತ್ತನೆನ್ನಿಸಿದರೂ, ಅದು ನನ್ನ ಕಣ್ಣೀರನಿಂದ ಮಂಜಾಗಿದ್ದ ದೃಷ್ಟಿಯ ದೋಷವಿರಬಹುದೇ ಅಂದುಕೊಂಡು ಸುಮ್ಮನಾಗಿದ್ದೆ.

ಹಾಫ್ ಟರ್ಮ್ ರಜೆ ಮುಗಿದು, ಶಾಲೆ ಶುರುವಾಗಿ ಎರಡು ದಿನ ಆಗಿತ್ತು. ಮಂಗಳವಾರ ಮಧ್ಯಾಹ್ನ ಮನೆಗೆ ಬಂದಾಗ ಪಪ್ಪ ತಲೆಯನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಸೋಫಾದ ಮುಂದೆ ನೆಲದ ಮೇಲೆ ಕೂತಿದ್ದ. ಒಂದು ಕ್ಷಣ ಎದೆ ಧಸ್ಸೆಂದರೂ, ಎಷ್ಟು ಸಾಧ್ಯವೋ ಅಷ್ಟು ನಾರ್ಮಲ್ ಧ್ವನಿಯಲ್ಲಿ “ಏನಾಯ್ತು ಪಪ್ಪಾ?” ಅಂದರೂ, ಆ ಧ್ವನಿ ನನ್ನದೇನಾ ಆನ್ನುವ ಅನುಮಾನ ಬರದೇ ಇರಲಿಲ್ಲ.

ಅಳು ತಡೆಯುತ್ತ ಗೊಗ್ಗರು ಧ್ವನಿಯಲ್ಲಿ “ಅಮ್ಮನಿಗೆ ಸೀರಿಯಸ್ಸು ಪುಟ್ಟಾ; ಇವತ್ತು ಬೆಳಿಗ್ಗೆ ಐಸಿಯುಗೆ ಶಿಫ್ಟ್ ಮಾಡಿದ್ದರು. ಈಗ ವೆಂಟಿಲೇಟರ್ ಮೇಲೆ ಹಾಕಬೇಕೇನೋ ಅನ್ನುವ ಮಾತಾಡಿದರು ಡಾಕ್ಟರು …” ಇಷ್ಟು ಹೇಳುವಲ್ಲಿಗೆ ಮುಗಿಯಿತು ಪಪ್ಪನ ಹಿಡಿತ, ಕಣ್ಣೀರಿನ ಕಟ್ಟೆ ಒಡೆಯಿತು, ತಲೆಯನ್ನು ಕೆಳಗೆ ಮಾಡಿ ಕುಳಿತ. ಸದ್ದಿಲ್ಲದೇ ಅಳುತ್ತಿದ್ದಾನೆ ಅನ್ನುವುದನ್ನು ಮುಚ್ಚಿಡಲಾರದೇ ಹೋದವು ಆಗಾಗ ಬರುತ್ತಿದ್ದ ಬಿಕ್ಕುಗಳು. ನಾನಂತೂ ಪಪ್ಪನ ಭುಜದ ಮೇಲೆ ತಲೆಯಿಟ್ಟು ಜೋರಾಗಿಯೇ ಅತ್ತೆ, ಅದುವರೆಗೆ ಹಿಡಿದಿಟ್ಟಿದ್ದ ದುಃಖವನ್ನೆಲ್ಲ ಹೊರಹಾಕಿದೆ.

ಅಲ್ಲಿಂದ ನಮ್ಮ ಜೀವನ ಯಾಂತ್ರಿಕವಾಯಿತು. ಅಳು ಕಡಿಮೆಯಾಗಿ, ಮೌನ ಹೆಚ್ಚಿತು. ಪಪ್ಪನ ಕೆಲಸ, ನನ್ನ ಶಾಲೆ, ಅಮ್ಮನ ಐಸಿಯು ಹೋರಾಟ ಮುಂದುವರೆದೆವು. ದಿನಕ್ಕೆರಡು ಬಾರಿ ಫೇಸ್ ಟೈಮಿನಲ್ಲಿ ಅಮ್ಮನನ್ನು ನೋಡುವುದು, ಬದುಕಿರುವಳೆನ್ನುವ ಸಮಾಧಾನಕ್ಕಿಂತ ಹತ್ತಾರು ಟ್ಯೂಬುಗಳನ್ನು ಚುಚ್ಚಿಸಿಕೊಂಡು ಸೊರಗಿ ಅಸ್ಥಿಪಂಜರದಂತಾಗಿರುವ ಅವಳನ್ನು ನೋಡುವ ಸಂಕಟವೇ ಹೆಚ್ಚಾಯಿತು. ಎಷ್ಟೋ ಸಲ ತಪ್ಪಿಸಿದರೆ ದುಃಖ ಕಡಿಮೆಯಾಗಬಹುದೇನೋ ಅನ್ನಿಸಿದರೂ, ಪಪ್ಪ ಒಬ್ಬನೇ ಆಗುತ್ತಾನಲ್ಲ ಅನ್ನುವ ಕಾರಣಕ್ಕೆ ನನ್ನನ್ನು ನಾನು ಎಳೆದುಕೊಂಡು ಹೋಗುತ್ತಿದ್ದೆ. ಉಳಿದೆಲ್ಲ ಹೊತ್ತು ಪಪ್ಪ ತನ್ನ ಕೆಲಸದಲ್ಲಿ ಕಳೆದರೆ, ಪರೀಕ್ಷೆ ಹತ್ತಿರ ಬಂದಂತೆ ನನ್ನ ಓದಿನ ಭರದಲ್ಲಿ ನಾನು ಮುಳುಗಿದೆ. ಆಗೀಗ ಅಡಿಗೆ ಮಾಡುವಾಗ, ಪ್ರತಿಸಲ ಊಟ ತಿಂಡಿ ಮಾಡುವಾಗ ಪಪ್ಪ ಮತ್ತು ನಾನು ಜೊತೆಯಾಗಿಯೇ ಮಾಡುವುದು. ಅಮ್ಮನ ನಗು, ಮಾತುಕತೆ, ಹಾಸ್ಯದ ಬಗ್ಗೆ ಮಾತಾಡುತ್ತಾ ಅವಳೊಂದಿಗೆ ಕಳೆದ ಒಳ್ಳೆಯ ದಿನಗಳ ನೆನಪನ್ನು ಹಸಿರಾಗಿಡುವ ಪ್ರಯತ್ನ ನಡೆಸುತ್ತಿದ್ದೆವು. ಅಜ್ಜಿ-ತಾತಗೂ ವಿಷಯ ಹೇಳಿಯಾಗಿತ್ತು; ಅವರೂ ಈ ನಡುವೆ ಪರಿಸ್ಥಿತಿಯೊಡನೆ ಹೊಂದಾಣಿಕೆ ಮಾಡಿಕೊಂಡು ದೂರದೇಶದಲ್ಲಿ ಇಬ್ಬರೇ ಇರುವ ನಮ್ಮ ಧೈರ್ಯಗೆಡದಂತೆ ನೋಡುವ ಯತ್ನದಲ್ಲೇ ಇರುತ್ತಿದ್ದರು.

ಈಸ್ಟರ್ ರಜೆ ಮುಗಿದು ಎರಡು ವಾರವಾಗಿತ್ತು. ಅಮ್ಮನಿಗೆ ಟ್ರೆಕಿಯಾಸ್ಟಮಿ (ಉಸಿರಾಟಕ್ಕೆ ಅನುಕೂಲವಾಗುವಂತೆ ಕತ್ತಿನಲ್ಲಿ ಮುಂದೆ ಗಾಯಮಾಡಿ ನೇರವಾಗಿ ವಿಂಡ್ ಪೈಪಿಗೆ ಆಕ್ಸಿಜೆನ್ ಕೊಳವೆ ಹಾಕುವುದೆಂದು ಗೂಗಲ್ ಮಾಡಿದಾಗ ಗೊತ್ತಾಗಿದ್ದು) ಮಾಡಿ ಮೂರು ದಿನಕ್ಕೆ, ಶುಕ್ರವಾರ ಮಧ್ಯಾಹ್ನ ಐಸಿಯು ಟೀಮಿನೊಂದಿಗೆ ನಮ್ಮ ಮಾತಿದೆ ಅಂತ ಪಪ್ಪ ಹೇಳಿದ್ದ. ಎಲ್ಲ ಫೋನು-ಕಂಪ್ಯೂಟೆರಿನ ಮೇಲೆಯೆ ಮಾತುಕತೆ. ಡಾಕ್ಟರರು ತಮ್ಮ ಪ್ರಯತ್ನ ತಾವು ಮುಂದುವರೆಸುವುದಾಗಿ ಭರವಸೆ ಕೊಡುತ್ತಲೇ, ಯಾವಾಗ ಬೇಕಾದರೂ ಜೀವ ಹೋಗಬಹುದೆಂದು ಹೇಳಿದಾಗ ಪಪ್ಪನ ಮುಖ ಕಲ್ಲಿನಂತಾಗಿದ್ದರೆ, ನನ್ನ ಹೊಟ್ಟೆಯಲ್ಲಿ ಯಾರೋ ಕೈ ಹಾಕಿ ಹಿಂಡಿದಂತಾಗಿತ್ತು.

ಮೇ ಎರಡನೆಯ ವಾರ, ನನ್ನ ಫೈನಲ್ ಪರೀಕ್ಷೆಗಳು ಶುರುವಾಗಲು ಐದು ದಿನವಿರಬೇಕಿತ್ತು. ಅಮ್ಮ ಇನ್ನೂ ಐಸಿಯುನಲ್ಲೇ ಇದ್ದಳು. ಅವತ್ತು ಬೆಳಿಗ್ಗೆ ಎದ್ದಾಗ, ಪಪ್ಪ ಯಾರೊಡನೆಯೋ ಜೋರಾಗಿ ಮಾತಾಡುತ್ತಿರುವುದು ಕೇಳಿಸಿತು. ಈ ನಡುವೆ ಕೇಳಿಲ್ಲದ ಆಶಾವಾದದ ಛಾಯೆ ಇದ್ದಂತನಿಸಿ, ಓಡಿ ಕೆಳಗಿಳಿದು ಬಂದೆ. ಐಸಿಯು ಡಾಕ್ಟರು ಹೊಸದೊಂದು ಟ್ರೀಟ್ಮೆಂಟ್ ಟ್ರಯಲ್ ಶುರುವಾಗಿದೆಯೆಂದೂ, ಅಮ್ಮನನ್ನು ಅದರಲ್ಲಿ ಸೇರಿಸಿದ್ದಾರೆಂದೂ ಹೇಳುತ್ತಿದ್ದರು. ಆ ಟ್ರಯಲ್ಲಿನ ಮೊದಮೊದಲಿನ ಫಲಿತಾಂಶಗಳು ಚೆನ್ನಾಗಿದ್ದುದು ಕಂಡುಬರುತ್ತಿದೆಯೆಂದೂ ಆದರೆ ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಹೇಗಾಗುವುದೋ ಕಾಯ್ದು ನೋಡಬೇಕೆಂದೂ ಒತ್ತಿ ಒತ್ತಿ ಹೇಳಿದರು. ನಮ್ಮಿಬ್ಬರಿಗಂತೂ ಕತ್ತಲೆಯ ಗುಹೆಯ ಕೊನೆಯಲ್ಲೊಂದು ಬೆಳಕಿನ ಕಿರಣ ಕಂಡಂತಾಗಿತ್ತು.

ಇದಾಗಿ ಎರಡು ವಾರಕ್ಕೆಲ್ಲ ಅಮ್ಮನ ಪರಿಸ್ಥಿತಿ ಸುಧಾರಿಸಲಾರಂಭಿಸಿ, ಅಮ್ಮ ವೆಂಟಿಲೇಟರಿನಿಂದ ಹೊರಬಂದಳು. ಪಪ್ಪ ಮತ್ತೆ ಮಾತಾಡಲಾರಂಭಿಸಿದ. ದಿನಕ್ಕೆರಡು ಬಾರಿ “ಏನನ್ಕೊಂಡೀಯೇ ನಿಮ್ಮಮ್ಮನ್ನ? ಅವಳ ಜೀವನೋತ್ಸಾಹ ನೋಡಿನೇ ನಾನು ಮದುವೆಯಾಗಿದ್ದು” ಅನ್ನಲಾರಂಭಿಸಿದ. ನನಗೂ ಪರೀಕ್ಷೆಯಿಲ್ಲದೇ ಶಾಲೆಯ ಅಸೆಸ್ಮೆಂಟಿನ ಮೇಲೆಯೇ ನಿರ್ಧಾರವಾಗಲಿರುವ ಫಲಿತಾಂಶವನ್ನು ಎದುರಿಸುವ ಧೈರ್ಯ ಬಂತು ನಿಜವಾಗಿಯೂ. ನಿರೀಕ್ಷಿತ ಗ್ರೇಡುಗಳು ಬಂದದ್ದು ಸಮಾಧಾನವನ್ನೇ ತಂದಿತು ಕೂಡ.
ಅಮ್ಮ ವಾರ್ಡಿಗೆ ಹೋಗಿ, ಹತ್ತು ದಿನವಿದ್ದು, ಡಿಸ್ಚಾರ್ಜ್ ಆಗಿ ಮನೆಗೆ ಬಂದು ಒಂದು ವಾರವಾಯಿತು. ಇನ್ನೂ ಅಮ್ಮನಿಗೆ ಬಹಳವೇ ನಿಶ್ಶಕ್ತಿಯಿದೆಯಾದರೂ ನಮ್ಮಿಬ್ಬರಲ್ಲಿ ಬಲಬಂದಿದೆ. ನನ್ನ ಶೈಕ್ಷಣಿಕ ವರ್ಷ ಮುಗಿದಿರುವುದರಿಂದ ಮನೆಯಲ್ಲೇ ಉಳಿದು ಅಮ್ಮನ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿದೆ. ಅಮ್ಮನಿಗೆ ಮಾತಾಡಲೂ ಇನ್ನೂ ಸುಸ್ತಿದ್ದರೂ, ನಾನೇ ಇಬ್ಬರ ಪರವಾಗಿ, ತಿಂಗಳುಗಟ್ಟಲೆ ಆಡದೆ ಉಳಿದ ಮಾತುಗಳನ್ನು ಆಡಿ ಮುಗಿಸುತ್ತಿರುವೆ. ಅಮ್ಮನೂ ಕ್ಯಾಚಪ್ ಮಾಡುತ್ತಿದ್ದಾಳೆ. ಮನೆಯಲ್ಲಿ ಮತ್ತೆ ಗದ್ದಲವಿದೆ, ನನ್ನದು ಮತ್ತು ಪಪ್ಪನದು ಸಧ್ಯಕ್ಕೆ.

************************************************************
20.08.2020
ಬಿದ್ದು ಹೊರಳಾಡಿ ಅತ್ತುಬಿಡಬಬೇಕನ್ನಿಸುತ್ತದೆ, ಎಷ್ಟು ಬಾರಿ. ದುಃಖ ಉಮ್ಮಳಿಸಿ ಬಂದರೂ, ಕಣ್ಣಲ್ಲಿ ನೀರು ಬರುತ್ತಿಲ್ಲ. ಗುಂಡು ಬಡಿದು ಬಿದ್ದು ಬೇಟೆಗಾರನ ದಾರಿ ನೋಡುತ್ತಿರುವ ಜಿಂಕೆಗೂ ಹೀಗೇ ಅನ್ನಿಸುತ್ತಿರಬೇಕು. ಅಮ್ಮ ಹತ್ತಿರದವಳಾದರೂ, ನನ್ನ ಮನಸ್ಸಿಗೆ ಬೇಜಾರಾದರೆ ನಾನು ಓಡುತ್ತಿದ್ದುದು ಅಪ್ಪನ ಹತ್ತಿರವೇ. ಕಳೆದ ಆರು ವಾರಗಳಲ್ಲಿ ಎಷ್ಟು ಬಾರಿ ಪಪ್ಪಾ ಅಂದು ಅವರ ರೂಮಿನ ಕಡೆ ಹೋಗಿಯಾಗಿದೆ. ಉತ್ತರವಿಲ್ಲದೇ ವಾಪಸು ಬರುವಾಗ, ಅಮ್ಮನ ರೂಮಿನ ಕಡೆಗೆ ಹಾಯ್ದ ಕಣ್ಣುಗಳು ತುಂಬಿ ಬರುತ್ತವೆ. ಮೊದಮೊದಲು ಆ ಕಣ್ಣುಗಳು ತುಂಬಿ ಕೆನ್ನೆಯ ಮೇಲೆ ಇಳಿದ ಕಣ್ಣೀರಿನ ಗುರುತು ಮುಖ ತೊಳೆದರೂ ಹೋಗುವುದಿಲ್ಲ ಅನ್ನಿಸಿತ್ತು. ಆಮೇಲಾಮೇಲೆ, ಕಣ್ಣಲ್ಲಿ ದುಃಖ ಸಂಕಟ ಕಾಣುತ್ತವಷ್ಟೆ. ಫೈರ್ ಪ್ಲೇಸಿನ ಮೇಲಿರುವ ಹಿತ್ತಾಳೆಯ ಪಾಲಿಶ್ ಮಾಡಿದ ತಂಬಿಗೆಯಲ್ಲಿ ಕಾಣುವ ಕಣ್ಣುಗಳು ನನ್ನವೇನಾ ಅನ್ನುವಷ್ಟು ನಿಸ್ಸತ್ವವಾಗಿವೆ. ಈ ವರ್ಷದ ನವೆಂಬರಿಗೆ ಅಮ್ಮ-ಪಪ್ಪನ ಮದುವೆಯ ಸಿಲ್ವರ್ ಜುಬಿಲಿ ಆಗಬೇಕಿತ್ತು.

ಹೋದ ಸಲದ ಎಂಟ್ರಿಯಲ್ಲಿ ಅಮ್ಮ ಕರೆದಳೆಂದು ಹೋಗಿದ್ದೆ ಅಂದೆನಲ್ಲ, ಅದರ ಬಗ್ಗೆ ಹೇಳಬೇಕು; ಯಾಕೆಂದರೆ ಈಗ ಹಿಂದೆ ನೋಡಿದಾಗ ಅದೊಂದು ಟರ್ನಿಂಗ್ ಪಾಯಿಂಟ್ ಇನ್ ಟೈಮ್ ಅನ್ನಿಸುತ್ತಿದೆ.

ಅಮ್ಮ ಕರೆದದ್ದು, ಪಪ್ಪ ಟಾಯ್ಲೆಟ್ಟಿಗೆ ಹೋಗಿ ಸ್ವಲ್ಪ ಹೊತ್ತಾಯ್ತು, ಅಷ್ಟು ಹೊತ್ತು ಹೋಗೋದಿಲ್ಲ ಅವರು ಸಾಧಾರಣವಾಗಿ ಕರಿ ಒಂದ್ಸಲ ಅಂತ ಹೇಳ್ಳಿಕ್ಕೆ. ಗೆಸ್ಟ್ ರೂಮಿನ ಆನ್ ಸ್ವೀಟ್ ಬಾಗಿಲು ಬಡಿದು “ಪಪ್ಪ, ಆರ್ ಯೂ ಓಕೇ? ಅಮ್ಮ ಕೇಳಿದ್ಲು” ಅಂದೆ. “ಬಂದೆ, ಬಂದೆ; ಟೂ ಮಿನಿಟ್ಸ್” ಅಂದ ಪಪ್ಪ.

ಅಮ್ಮನ ಕಣ್ಣಿಗೆ ಪಪ್ಪ ಸೊರಗಿರುವುದು ಮನೆಗೆ ಬಂದ ಮೊದಲ ದಿನವೇ ಬಿದ್ದಿದ್ದು ನನಗೆ ಆಶ್ಚರ್ಯವೇನಾಗಿರಲಿಲ್ಲ. ಅಮ್ಮ ಅನ್ನುವುದಕ್ಕೆ ಮುನ್ನ ನನಗೆ ಹೊಳೆದಿರಲಿಲ್ಲವಾದರೂ, ಹೌದಲ್ಲ ಅನ್ನಿಸದೇ ಇರಲಿಲ್ಲ. ಆದರೆ, ಹಿಂದಿನ ಕೆಲ ತಿಂಗಳುಗಳ ಪರಿಸ್ಥಿತಿಯ ಅರಿವಿನಿಂದ, ಅದಕ್ಕೆ ಕಾರಣ ಹುಡುಕುವ ಅಗತ್ಯವಿರಲಿಲ್ಲ ಅಮ್ಮನಿಗೆ.

ಜುಲೈ 15, ಸೋಮವಾರ: ಸತತ ಒಂದುವಾರದಿಂದ ಮೋಡ, ಮಳೆಗಳಿದ್ದು ವಾತಾವರಣ ಕತ್ತಲು-ಕತ್ತಲಾಗಿದ್ದುದು, ಅವತ್ತು ಬೆಳಗ್ಗೆ ಬಿಸಿಲೊಡೆದಿತ್ತು. ಅಮ್ಮ ಬೆಳಗ್ಗೆ ಎದ್ದು ನಮ್ಮ ಫಸ್ಟ್ ಫ್ಲೋರಿನ ಲ್ಯಾಂಡಿಂಗಿನಲ್ಲಿರುವ ದೊಡ್ಡ ಕಿಟಕಿಯ ಪರದೆ ತೆಗೆದು, ಬಿಸಿಲಿನಲ್ಲಿ ಪುಸ್ತಕ, ಕಾಫಿ ಕಪ್ಪಿನೊಡನೆ ಕಾಲುಚಾಚಿಕೊಂಡು ಜೋಕಾಲಿಯಲ್ಲಿ ಕುಳಿತಿದ್ದಳು. ಪಪ್ಪ ಬಂದು ಎಂದಿನಂತೆ ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗಿ, ಮುಖಕ್ಕೆ ಬಿಸಿಲು ಬಿದ್ದು ಕಣ್ಣು ಮುಚ್ಚಿದ. ಒಂದು ಕ್ಷಣ ಮುಖ ನೋಡಿದ ಅಮ್ಮ ಪುಸ್ತಕ ಪಕ್ಕಕ್ಕಿಟ್ಟು “ಎಲ್ಲಿ ಕಣ್ ತೆಗೀರಿ” ಎದ್ದು ಹಲ್ಲುಜ್ಜುತ್ತಿದ್ದ ನನಗೂ ಕೇಳಿಸಿತು. ಟವೆಲಿನಿಂದ ಒರೆಸಿಕೊಳ್ಳುತ್ತ ಬಂದು ನೋಡಿದೆ – ಪಪ್ಪನ ಮುಖ-ಕಣ್ಣು ಹಳದಿಯಾಗಿದೆಯಲ್ಲ ಅನಿಸಿ, ಅಮ್ಮನ ಕಡೆ ನೋಡಿದೆ. ಅಮ್ಮ ತನ್ನ ವೃತ್ತಿಸಹಜ ಪ್ರತಿಕ್ರಿಯೆಯಂತೆ, ಅಲ್ಲೇ ಪಪ್ಪನ ದೈಹಿಕ ಪರೀಕ್ಷೆ ಶುರುಮಾಡಿಬಿಟ್ಟಿದ್ದಳು. ಗಂಟೆ ಎಂಟಾಗುತ್ತಲೇ ಅವಳೇ ಆಸ್ಪತ್ರೆಗೆ ಫೋನು ಮಾಡಿ, ಅಪಾಯಿಂಟ್ಮೆಂಟ್ ತೊಗೊಳ್ಳುವುದಲ್ಲದೆ, ಗುರುತಿನ ಗ್ಯಾಸ್ಟ್ರೋಎಂಟರಾಲಜಿಸ್ಟರೊಡನೆಯೂ, ರೇಡಿಯಾಲಜಿಸ್ಟ್ ಜೊತೆಗೂ ಮಾತನಾಡಿ ಅರ್ಜೆಂಟಾಗಿ ಸಿಟಿ ಸ್ಕ್ಯಾನ್ ಇತ್ಯಾದಿ ಪರೀಕ್ಷೆಗಳ ತಯಾರಿಯನ್ನೂ ಮಾಡಿದಳು.
ಅಲ್ಲಿಂದ ಎರಡು ವಾರದಲ್ಲಿ ಎಲ್ಲ ಮುಗಿದೇ ಹೋಯಿತು. ಪಪ್ಪನಿಗೆ ಗಾಲ್ ಬ್ಲಾಡರಿನ ನಳಿಗೆಯ (ಬೈಲ್ ಡಕ್ಟ್) ಕೊಲಾಂಜಿಯೋಕಾರ್ಸಿನೋಮಾ ಅನ್ನುವ ಕ್ಯಾನ್ಸರ್ ಆಗಿದೆ, ಅದು ತುಂಬಾ ಮುಂದುವರೆದು ಎಲ್ಲೆಡೆ ಹಬ್ಬಿದೆಯೆಂದೂ ಕೇಳಿ ಅರ್ಥಮಾಡಿಕೊಳ್ಳುವುದರಲ್ಲೇ ಅಪ್ಪ ಹೊರಟೇಬಿಟ್ಟ. ಆಸ್ಪತ್ರೆಗೆ ಸೇರಿದ ಅಪ್ಪನ ಮುಖವನ್ನು ನಾನು ಮತ್ತೆ ನೋಡಿದ್ದು ಫ್ಯುನರಲ್ ಪಾರ್ಲರಿನಲ್ಲಿಯೇ. ಅಮ್ಮ ಆಸ್ಪತ್ರೆಯಲ್ಲಿದ್ದಾಗ ನಾನು ಹಿಡಿದಿಟ್ಟಿದ್ದ ದುಃಖವೆಲ್ಲ ಉಮ್ಮಳಿಸಿ ಬಂದು, ಅವಳ ಭುಜದ ಮೇಲೆಯೇ ತಲೆಯಿಟ್ಟು ಬಿಕ್ಕಿಬಿಕ್ಕಿ ಅತ್ತುಬಿಟ್ಟೆ.

“ವೈ ಅಸ್, ಅಮ್ಮಾ, ವೈ ಅಸ್? ವಾಟ್ ಹಾವ್ ವಿ ಡನ್ ಟು ಡಿಸರ್ವ್ ದಿಸ್?”

*****************************************************
10.09.2020
ನನಗೆ ಮೆಡಿಕಲ್ ಸೀಟು ಸಿಕ್ಕಿದೆ. ಎಲ್ಲೇ ಇರಲಿ ಪಪ್ಪನಿಗೆ ಖುಶಿಯಿದೆ ಅಂತ ಖಂಡಿತ ಹೇಳಬಲ್ಲೆ. ಅಮ್ಮನಿಗೂ ಸಹ ಹಾಗೇ ಅನ್ನಿಸುತ್ತದೆಯಂತೆ, ಅವಳೇ ಎರಡು-ಮೂರು ಸಲ ಹೇಳಿದ್ದಾಳೆ. ಪಪ್ಪ ಇನ್ನೂ ಮನೆಯಲ್ಲೇ ಇದ್ದಾನೆ, ಫೈರ್ ಪ್ಲೇಸಿನ ತಂಬಿಗೆಯಲ್ಲಿ. ಮನದಲ್ಲಂತೂ ಸರಿಯೇ. ಈ ವರ್ಷದ ರೋಲರ್ ಕೋಸ್ಟರ್ ಘಟನೆಗಳಿಂದಾಗಿ ನಾನು ಡೆಫರ್ಮೆಂಟ್ ತೊಗೊಂಡು, ಮುಂದಿನ ವರ್ಷಕ್ಕೆ ಯುನಿವರ್ಸಿಟಿ ಸೇರಿಕೊಳ್ಳಲು ನಿರ್ಧರಿಸಿರುವೆ. ನಾನು ಅಮ್ಮ ಸೇರಿ ಎಲ್ಲೆಡೆ ಸುತ್ತಾಡುವ, ಪಪ್ಪನಿಗೆ ಇಷ್ಟವಾದದ್ದನ್ನು (ಅವನ ಬಕೆಟ್ ಲಿಸ್ಟ್ ಅಂತೆ) ನೋಡುವ ಪ್ಲಾನ್ ಹಾಕಿದ್ದೇವೆ. ನಮ್ಮ ಪಟ್ಟಿಯಲ್ಲಿ ನ್ಯೂ ಡೆಲ್ಲಿಗೆ ಹೋಗಿ ಅಲ್ಲಿ ರಸ್ತೆಬದಿಯ ಪಾನಿಪೂರಿ, ಮಸಾಲಪೂರಿ, ಮೊಮೊ ತಿನ್ನುವುದಿದೆ; ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ದೋಸೆ ಕಾಫಿ ಸವಿಯುವುದಿದೆ; ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ತೋರಿಸುವ ಲದ್ದಾಖ್ ಸರೋವರದ ದಂಡೆಯ ಮೇಲೆ ಓಡುವುದಿದೆ; ಯಾಣಕ್ಕೆ, ಸೇಂಟ್ ಮೇರೀಸಿಗೆ ಹೋಗಿ, ಯಾರೂ ಇಲ್ಲದಿರುವಾಗ ಜೋರಾಗಿ ಕೂಗುವುದಿದೆ; ಅಜ್ಜಿ-ತಾತನ ಜೊತೆ ಅಡುಗೆಮನೆಯಲ್ಲಿ ನೆಲದ ಮೇಲೆ ಕೂತು ಊಟ ಮಾಡುತ್ತಾ ಗಂಟೆಗಟ್ಟಲೆ ಹರಟೆ ಹೊಡೆಯುವುದಿದೆ. ಆ ಪಟ್ಟಿ ನಾವು ಹೋಗುವವರೆಗೂ ಬೆಳೆಯುವ ಸಾಧ್ಯತೆಯಂತೂ ಖಂಡಿತ ಇದೆ. ಇದೆಲ್ಲವನ್ನೂ ಪಪ್ಪನ ಅಸ್ಥಿಯನ್ನ ಶ್ರೀರಂಗಪಟ್ಟಣದ ಕಾವೇರಿಯಲ್ಲಿ, ಅವನ ಇಷ್ಟದ ಗೋಸಾಯಿ ಘಾಟಿನ ನದಿಯಲ್ಲಿ ಹರಿಯಬಿಡುವ ಮುನ್ನ ಮಾಡಬೇಕಿದೆ.
ಅಮ್ಮ ಊಟಕ್ಕೆ ಕರೀತಿದ್ದಾಳೆ. ಮತ್ತೆ ಸಿಗೋಣ.

*******************************************************

ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE) ಭಾಗ ೨
ಡಾ. ಜಿ. ಎಸ್. ಶಿವಪ್ರಸಾದ್





ಕಳೆದ ವಾರ ಪ್ರಕಟಿತವಾದ ‘ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು’ ಎಂಬ ಲೇಖನದ ಎರಡನೇ ಭಾಗವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಈ ಎರಡನೇ ಸಂಚಿಕೆಯಲ್ಲಿ ಅರಬ್ ಜನರ ಸಂಸ್ಕೃತಿಯ ಬಗ್ಗೆ , ಇಲ್ಲಿಯ ವಿಶಿಷ್ಟತೆಯ ಬಗ್ಗೆ, ಈ ರಾಷ್ಟ್ರದ ಹೆಮ್ಮೆಯ ಮಹಾನಗರವಾದ ದುಬೈ ಮತ್ತು ಅಲ್ಲಿಯ ಜನಜೀವನವನ್ನು ಕುರಿತಾಗಿ ಲೇಖಕರ ಅನಿಸಿಕೆಗಳಿವೆ. ದಯವಿಟ್ಟು ಓದಿ ಸ್ಪಂದಿಸಿ – ಸಂ

ಅಲೈನ್ ನಗರದ ಮಧ್ಯೆ ಇರುವ ಅಲೈನ್ ಓಯಸಿಸ್ ಒಂದು ಮುಖ್ಯ ಆಕರ್ಷಣೆ. ಮರಳುಗಾಡಿನ ಹಸಿರು ತಾಣಗಳ ಬಗ್ಗೆ ನನಗೆ ಹಿಂದಿನಿಂದ ಕುತೂಹಲ. ಬೆಟ್ಟದ ಆಸುಪಾಸಿನಲ್ಲಿರುವ ಈ ಓಯಸಿಸ್ ನೂರಾರು ಎಕರೆ ವಿಸ್ತಾರವಾಗಿದ್ದು ಇಲ್ಲಿ ಹಲವಾರು ಜಾತಿಯ ಹಸಿರುಮರಗಳಿದ್ದು ಡೇಟ್ಸ್ ಮರಗಳೇ ಹೆಚ್ಚು. ಬೆಟ್ಟದಿಂದ ಹರಿದುಬರುವ ನೀರನ್ನು ಪುರಾತನವಾದ 'ಫಲಾಜ್ ನೀರಾವರಿ ' ತಂತ್ರಜ್ಞಾನದಲ್ಲಿ ಇಲ್ಲಿ ನೀರನ್ನು ಹಾಯಿಸಿದ್ದಾರೆ. ಇಟಲಿ ಮತ್ತು ಇಂಗ್ಲೆಂಡಿನಲ್ಲಿ ರೋಮನ್ನರು ಕಟ್ಟಿದ್ದ ಅಕ್ವಾಡಕ್ಟ್ ಗಳನ್ನು ಹೋಲುವ ಈ ಮಾನವ ನಿರ್ಮಿತ ಕಾಲುವೆಗಳು ಒಳಚರಂಡಿಯಂತೆ ಮುಚ್ಚಿದ್ದು ಒಂದು ರೀತಿ ಗುಪ್ತಗಾಮಿನಿಗಳಾಗಿ ಹರಿಯುತ್ತವೆ. ಬಹುಶ ಓಪನ್ ವ್ಯವಸ್ಥೆಯಲ್ಲಿ ನೀರು ಸೆಖೆಗೆ ಆವಿಯಾಗಬಹುದು ಮತ್ತು ಮುಚ್ಚಿರುವ ಕಾಲುವೆಯಲ್ಲಿ ನೀರು ತಣ್ಣಗಿರುವ ಸಾಧ್ಯತೆ ಹೆಚ್ಚು. ಅಲ್ಲಲ್ಲೇ ಸಣ್ಣ ಸಣ್ಣ ಕಟ್ಟೆಗಳನ್ನು ಕಟ್ಟಿ ನೀರನ್ನು ಎಲ್ಲ ದಿಕ್ಕುಗಳಿಗೆ ಹಾಯಿಸಿದ್ದಾರೆ. ಇನ್ನೊಂದು ಸ್ವಾರಸ್ಯಕರವಾದ ಸಂಗತಿ ಎಂದರೆ ಇಲ್ಲಿ ಸಾವಿರಾರು ಸಂಖ್ಯೆಯಲ್ಲಿರುವ ಡೇಟ್ಸ್ ಮರಗಳನ್ನು ಗಂಡು ಮತ್ತು ಹೆಣ್ಣು ಮರಗಳು ಎಂದು ವಿಂಗಡಿಸಿ ಗುರುತಿಸಬಹುದು. ಗಂಡು ಮರಗಳಲ್ಲಿ ಬಿಜೋತ್ಪತ್ತಿಯಾಗುತ್ತದೆ ಆದರೆ ಅವು ಫಲವನ್ನು ಕೊಡುವುದಿಲ್ಲ. ನಿಸರ್ಗದಲ್ಲಿ ಗಾಳಿಯು, ಗಂಡು ಮತ್ತು ಹೆಣ್ಣು ಮರಗಳ ನಡುವೆ ಪರಾಗ ಸ್ಪರ್ಶವನ್ನು ಮಾಡುತ್ತದೆ, ಆದರೆ ಅಧಿಕ ಸಂಖ್ಯೆಯಲ್ಲಿ ಸಮರ್ಥವಾಗಿ ಹಣ್ಣುಗಳನ್ನು ಪಡೆಯುವ ಉದ್ದೇಶದಿಂದ ಗಂಡು-ಹೆಣ್ಣು ಮರಗಳ ನಡುವೆ ಪರಾಗಸ್ಪರ್ಶವನ್ನು ಇಲ್ಲಿ ಮನುಷ್ಯ ಮಾಡುತ್ತಿದ್ದಾನೆ. ಇದಕ್ಕೆ ಬೇಕಾದ ಬೀಜಗಳು ಮಾರ್ಕೆಟ್ಟಿನಲ್ಲಿ ದೊರೆಯುತ್ತವೆ. ಹೀಗಾಗಿ ಹೆಣ್ಣು ಡೇಟ್ಸ್ ಮರಗಳನ್ನು ಕೃಷಿ ಮಾಡುವವರೇ ಜಾಸ್ತಿ. ಸಿಹಿಯಾದ ಡೇಟ್ಸ್ ಹಣ್ಣು ಬಿಡುವುದು ಮೇ ತಿಂಗಳಾದ ಮೇಲೆ. ನಾವು ಓಯಸಿಸ್ ಉದ್ದಗಲಕ್ಕೂ ವಿಹರಿಸಿದೆವು. ಇದು ಬಹಳ ಸುಂದರ, ಪ್ರಶಾಂತವಾದ ತಾಣ.  ನಾವು ಅಗ್ಗದ ದರದಲ್ಲಿ ಸಿಗುವ ಸಿಹಿಯಾದ ಡೇಟ್ಸ್ ಗಳನ್ನು ಕೊಂಡುಕೊಂಡೆವು.

ನಾವು ಅರಬ್ಬರನ್ನು ಹತ್ತಿರದಿಂದ ಕಂಡದ್ದು ಅಲೈನ್ ನಗರದ ಪ್ರತಿಷ್ಠಿತ 'ಲಾ ಬ್ರಯೋಷ್' ಎಂಬ ಫ್ರೆಂಚ್ ಕೆಫೆಯಲ್ಲಿ. ಇಲ್ಲಿ ಗಂಡಸರು ಅಡಿಯಿಂದ ಮುಡಿಯವರೆಗೆ ಶುಭ್ರವಾದ ನೀಟಾಗಿ ಇಸ್ತ್ರಿ ಮಾಡಿದ ಬಿಳಿ ನಿಲುವಂಗಿಯನ್ನು ತೊಟ್ಟು ತಲೆಗೆ ಒಂದು ಬಿಳಿ ವಸ್ತ್ರವನ್ನು ಇಳಿಬಿಟ್ಟು ಅದನ್ನು ತಲೆಸುತ್ತಳತೆಗೆ ಹೊಂದುವಂತಹ ಕರಿಪಟ್ಟಿಯಲ್ಲಿ ನೀಟಾಗಿ ತಲೆಯಮೇಲೆ ನಿಲ್ಲುವಂತೆ ಕಟ್ಟಿರುತ್ತಾರೆ. ತಮ್ಮ ಗಡ್ಡಗಳನ್ನು ಟ್ರಿಮ್ ಮಾಡಿ, ದೃಢಕಾಯರಾಗಿ, ಕೂಲಿಂಗ್ ಗ್ಲಾಸ್ ಏರಿಸಿ, ಘಮ ಘಮಿಸುವ ಪರ್ಫ್ಯೂಮ್ ಧರಿಸಿ ನೋಡಲು ಸ್ಮಾರ್ಟ್ ಆಗಿರುತ್ತಾರೆ. ಗಂಡಸರು ತೊಡುವ ಈ ನಿಲುವಂಗಿಗೆ ಕಂದೂರವೆಂದು ಕರೆಯಲಾಗುತ್ತದೆ. ಇಲ್ಲಿ ಬಹಳಷ್ಟು ಜನ ಶ್ರೀಮಂತರಾಗಿ, ಶಿಕ್ಷಿತರಾಗಿರುವಂತೆ ಕಂಡರು. ಇಲ್ಲಿ ಜೋರಾಗಿ ಮಾತನಾಡುವ, ಕ್ಯಾಕರಿಸಿ ಉಗಿಯುವ, ಗುಡುಗುಡಿ ಸೇದುವ ಜನರು ಕಾಣಲಿಲ್ಲ. ಹೆಂಗಸರು ತೆಳ್ಳಗೆ ಬೆಳ್ಳಗೆ ಇದ್ದು, ಮುಖಕ್ಕೆ ಮೇಕಪ್, ಲಿಪ್ಸ್ಟಿಕ್ ಹಾಕಿಕೊಂಡು ಅಬಯ್ ಎಂಬ ಕರಿ ನಿಲುವಂಗಿಯನ್ನು ತೊಟ್ಟು ತಲೆಗೆ ಹಿಜಾಬ್ ಧರಿಸಿರುತ್ತಾರೆ. ಇಲ್ಲಿಯ ಜನರು ಬೇರೆಯವರ ಜೊತೆ ದೃಷ್ಠಿ ಹಾಯಿಸಿ ‘ಹಾಯ್’ ಎನ್ನುವವರಲ್ಲ. ಕಿರುನಗೆಯನ್ನು ಬಿರುವವರಲ್ಲ, ಹೊರಗಿನವರ ಬಗ್ಗೆ ಅವರಿಗೆ ಆಸಕ್ತಿ ಇರುವಂತೆ ಕಾಣಲಿಲ್ಲ. ಇದು ಸರಿ ತಪ್ಪುಗಳ ವಿಮರ್ಶೆಯಲ್ಲ, ಅವರವರ ಸಂಸ್ಕೃತಿಗೆ ಸಂಬಂಧ ಪಟ್ಟ ವಿಚಾರವಷ್ಟೇ. ಸ್ಥಳೀಯರು ಅವರಪಾಡಿಗೆ ಅವರಿದ್ದು ಇಲ್ಲವೇ ಅವರ ಜನರ ಜೊತೆ ಬೆರೆತು ಮಾತನಾಡುತ್ತಾರೆ. ಹೆಂಗಸರ ಬಗ್ಗೆ ವಿಶೇಷವಾದ ಗೌರವ ಮತ್ತು ಮಡಿವಂತಿಕೆ ಇದೆ. ಅರಬ್ಬರಿಗೆ ಸಂಜೆಯಾದ ಮೇಲೆ ಅಥವಾ ವಾರಾಂತ್ಯದಲ್ಲಿ ನಗರದ ಪಾರ್ಕುಗಳಲ್ಲಿ, ಸಮುದ್ರ ತೀರಗಳಲ್ಲಿ ಕಾಲಕಳೆಯುವುದೆಂದರೆ ಬಲು ಖುಷಿ. ಇವರ ಜೀವನ ಪ್ರೀತಿ ಅದಮ್ಯವಾದದ್ದು. ಅವರ ಸಂಸಾರ ಕೂಡ ದೊಡ್ಡದು. ಕುಟುಂಬದ ಹಿರಿಯ ಕಿರಿಯ ಗಂಡಸರು ಹೆಂಗಸರು ಸದಸ್ಯರು ದೊಡ್ಡ ದೊಡ್ಡ ಕಾರುಗಳಲ್ಲಿ ಬಂದು ಪಿಕ್ನಿಕ್ ಮಾಡುತ್ತಾರೆ. ಹೊರಾಂಗಣದಲ್ಲಿ ತಿನ್ನುವುದು ಇಲ್ಲಿ ಸಾಮಾನ್ಯ. ಎಲ್ಲಿಯೂ ಒಂದಿಷ್ಟು ಕಸವನ್ನು ಎಸೆಯದೆ ಎಲ್ಲಿಯೂ ಗಲೀಜು ಮಾಡದ ಹಾಗೆ ಎಚ್ಚರಿಕೆ ವಹಿಸುತ್ತಾರೆ. ಒಂದು ಸಂಜೆ ಸೂರ್ಯಾಸ್ತವನ್ನು ನೋಡಿ ನಂತರ ಝಬೀಲ್ ಹಫೀತ್ ಬೆಟ್ಟದ ಬುಡದಲ್ಲಿರುವ ಸಂತೆಯಲ್ಲಿ ಚಾ ಮತ್ತು ಜಾಮೂನಿನಂತೆ ಕಾಣುವ ಲಗೈಮತ್ ಎಂಬ ಸಿಹಿ ಖಾದ್ಯವನ್ನು, ಬಿಸಿಬಿಸಿಯಾದ ಫಲಾಫಲ್ ಎಂಬ ಚೆನ್ನಾಕಾಳಿನ ಮಸಾಲೆ ಉಂಡೆಗಳನ್ನು ಸೇವಿಸಿದೆವು. ಇವರಿಗೆ ಮೀನು, ಲ್ಯಾಮ್ಬ್ ಮತ್ತು ಬಿರಿಯಾನಿ ಅನ್ನವೆಂದರೆ ಇಷ್ಟವೆಂದು, ಅದು ಇಲ್ಲಿಯ ಆಹಾರವೆಂದು ಕೇಳಿದೆ.

ಮೇಲೆ ಪ್ರಸ್ತಾಪಿಸಿದ ಬದಿಕಿನ ಚಿತ್ರಣ ಅರಬ್ ದೇಶದ ಒಳನಾಡಿನದ್ದಾದರೆ, ಇಲ್ಲಿಯ ಮಹಾ ನಗರಗಳಾದ ದುಬೈ ಅಬುದಾಬಿಯಲ್ಲಿನ ಜೀವನ ಸ್ವಲ್ಪ ಭಿನ್ನ ವಾಗಿದೆ. ಇವುಗಳನ್ನು ಪಾಶ್ಚಿಮಾತ್ಯ ನಗರಗಳಾದ ಲಂಡನ್ ಅಥವಾ ನ್ಯೂಯಾರ್ಕ್ ನಗರಗಳಿಗೆ ಹೋಲಿಸಬಹುದು. ಇಲ್ಲಿ ಸ್ಥಳೀಯ ಎಮಿರಾಟಿ ಗಳು ಯಾರು? ಹೊರಗಿನಿಂದ ವಲಸೆ ಬಂದವರು ಯಾರು? ಪ್ರವಾಸಿಗರು ಯಾರು? ಎಂದು ಗುರುತಿಸುವುದು ಕಷ್ಟ. ಈ ನಗರದಲ್ಲಿ ೩.6 ಮಿಲಿಯನ್ ಜನರು ವಾಸವಾಗಿದ್ದಾರೆ. ಯಾರು ಕಾರ್ಮಿಕ ವರ್ಗದವರು, ಯಾರು ವೈಟ್ ಕಾಲರ್ ಹುದ್ದೆಗಳಲ್ಲಿರುವವರು ಎಂದು ಸುಲಭವಾಗಿ ಗುರುತಿಸಬಹುದು. ಇಲ್ಲಿ ಹಲವಾರು ದೇಶಗಳಿಂದ ವಲಸೆ ಬಂದ ಜನರಿದ್ದಾರೆ. ಇದು ಬಹುಮುಖಿ ಸಂಸ್ಕೃತಿಯ ನಗರ. ತೀವ್ರಗತಿಯಲ್ಲಿ ನಗರ ಬೆಳೆಯುತ್ತಿದೆ. ಇಲ್ಲಿಯ ಜನಗಣತಿ
(ಡೆಮೊಗ್ರಾಫಿ) ಮಾಹಿತಿಗಳು ಸ್ವಾರಸ್ಯಕರವಾಗಿದೆ. ಇಲ್ಲಿ ಸುಮಾರು ೬೦% ದಕ್ಷಿಣ ಏಷ್ಯಾ ಮೂಲದವರು; ಭಾರತೀಯರು ೪೦%, ಪಾಕಿಸ್ತಾನಗಳು ೧೦%, ಬಾಂಗ್ಲಾದೇಶದವರು ೧೦%, ಈಜಿಪ್ಟಿನವರು ೧೦%, ಫಿಲಿಫೈನ್ಸ್ ೬%, ಪಶಿಮತ್ಯ ಮತ್ತು ಇತರರು ೧೩%. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸ್ಥಳೀಯ ಎಮಿರಾಟಿಗಳು ೧೨% ಅಷ್ಟೇ! ಒಟ್ಟಾರೆ ನೋಡಿದಾಗ ಹೊರಗಿನಿಂದ ವಲಸೆ ಬಂದವರು ೮೮%, ಮತ್ತು ಸ್ಥಳೀಯರು ಕೇವಲ ೧೨%. ಅಂದರೆ ಸಂಖ್ಯೆ ಲೆಕ್ಕದಲ್ಲಿ ಇಲ್ಲಿ ಎಮಿರಾಟಿಗಳೇ ಅಲ್ಪಸಂಖ್ಯಾತರು! ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಬರುವವರ ಬಗ್ಗೆ ಅಂಜಿಕೆ ಇರುವವವರು ಈ ಡೆಮೊಗ್ರಾಫಿಯನ್ನು ಗಮನಿಸಬೇಕು. ವಲಸೆ ಬಂದವರು ಒಂದು ದೇಶಕ್ಕೆ ಹೊರೆಯಾಗದೇ ಅದರ ಆರ್ಥಿಕ ಉನ್ನತಿಗೆ ಕಾರಣರಾಗಬಹುದು ಎಂಬ ವಿಚಾರವನ್ನು ಈ ಅರಬ್
ರಾಷ್ಟ್ರದ ಮಾದರಿಯ ಹಿನ್ನೆಲೆಯಲ್ಲಿ ಕಲಿಯಬೇಕು. ಸಂಯುಕ್ತ ಅರಬ್ ಸಂಸ್ಥಾನಗಳ ಈ ದೇಶದ ಮತ್ತು ಪಾಶ್ಚಿಮಾತ್ಯದೇಶಗಳ ಹೋಮ್ ಆಫೀಸ್ ಮತ್ತು ವೀಸಾ ನಿಯಮಗಳನ್ನು, ಅರ್ಹತೆ ಮತ್ತು ಹಕ್ಕುಗಳನ್ನು ಹೋಲಿಸಲು ಸಾಧ್ಯವಿಲ್ಲವಾದರೂ ಈ ಮಾಹಿತಿಗಳು ಗಮನಾರ್ಹ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದುನ್ನು ನೇತ್ಯಾತ್ಮಕವಾಗಿ ಕಾಣಲಾಗುತ್ತಿದೆ ಮತ್ತು ಅಲ್ಲಿನ ಬಿಳಿಯರು ವಲಸಿಗರನ್ನು ಅನ್ಯರೆಂಬ ಭಾವನೆಯಲ್ಲಿ ಕಂಡು ಅವರು ತಮ್ಮ ದೇಶದ ಸಂಪನ್ಮೂಲಗಳನ್ನು ಕಬಳಿಸುತ್ತಾರೆ, ತಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಾರೆ ಎಂಬ ಊಹೆಯಲ್ಲಿ ಆತಂಕಗೊಂಡಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಲಸೆ ಎಂಬುದು ಜನಾಂಗಭೇಧ (ರೇಸಿಸಂ) ಭಾವನೆಗಳನ್ನು ಮೂಡಿಸಿ ಘರ್ಷಣೆಗೆ ಕಾರಣವಾಗಿದೆ. ಯು.ಕೆ ಯಲ್ಲಿ ಮಧ್ಯ ಪೂರ್ವ ರಾಷ್ಟ್ರಗಳ ಮತ್ತು ಆಫ್ರಿಕಾ ದೇಶಗಳ ಬಡ ನಿರಾಶ್ರಿತರು ಮಿತಿಮೀರಿದ ಸಂಖ್ಯೆಯಲ್ಲಿ ವಲಸೆ ಬಂದಾಗ ಎಲ್ಲರನ್ನೂ ಒಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಬ್ರಿಟನ್ನಿನ ಆತಂಕ ಅರ್ಥವಾಗುವಂತಹುದು. ಆದರೆ ಕಳೆದ ಕೆಲವು ವರ್ಷಗಳ ಹಿಂದೆ ತಮ್ಮದೇ ಸಂಸ್ಕೃತಿಯ, ತಮ್ಮದೇ ಧರ್ಮದ, ತಮ್ಮದೇ ಬಣ್ಣದ ಯೂರೋಪಿನ್ ವಲಸಿಗರ ಯು.ಕೆಗೆ ಉದ್ಯೋಗವನ್ನು ಅರಸಿ ಬರುತ್ತಿರುವಾಗ ಅವರ ಬಗ್ಗೆ ಸಂಶಯಾಸ್ಪದಗಳು ಮೂಡಿ ಅದು ಬ್ರೆಕ್ಸಿಟ್ಟಿಗೆ ಕಾರಣವಾಯಿತು. ಬಹುಶ ಇಂಡಿಯಾ ಮತ್ತು ಇತರ ಉಪ ರಾಷ್ಟ್ರಗಳಿಂದ ಉದ್ಯೋಗ ಅರಸಿ ದುಬೈಗೆ ಬರುವ ವಲಸಿಗರ ಬಗ್ಗೆ ಅರಬ್ಬರಿಗೆ ಸಧ್ಯಕ್ಕೆ ಆ ಆತಂಕವಿಲ್ಲವೆನ್ನಬಹುದು. ಈ ರಾಷ್ಟ್ರಗಳು ಇನ್ನು ಅಭಿವೃದ್ಧಿಗೊಳ್ಳುತ್ತಿವೆ, ಉದ್ಯೋಗ ಅವಕಾಶ ಇನ್ನೂ ಇದೆ, ಮುಂದೆ ಇವರ ನಿಲುವು ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

ದುಬೈ ಮತ್ತು ಇತರ ನಗರಗಳ ಬಹು ಅಂತಸ್ತಿನ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರು ಬಹುಪಾಲು ದಕ್ಷಿಣ ಏಷ್ಯಾದಿಂದ ಬಂದ ಬಡ ವಲಸಿಗರು. ಅದರಲ್ಲೂ ಕೇರಳದಿಂದ ಬಂದ ಜನರು ಅಧಿಕ. ಕೇರಳದಲ್ಲಿ ಟ್ರೇಡ್ ಯೂನಿಯನ್ ಗಳು ಬಲವಾಗಿದ್ದು ಅಲ್ಲಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಚಲಾಯಿಸಿ ಹೆಜ್ಜೆ ಹೆಜ್ಜೆಗೂ ಹರತಾಳವನ್ನು ಕೈಗೊಳ್ಳುತ್ತಾರೆ ಎಂದು ತಿಳಿದಿದ್ದೇನೆ. ಅರಬ್ ರಾಷ್ಟ್ರಗಳಲ್ಲಿ ಈ ಕಾರ್ಮಿಕರಿಗೆ ಯಾವ ಟ್ರೇಡ್ ಯೂನಿಯನ್ ಗಳನ್ನೂ ಕಟ್ಟಿಕೊಳ್ಳುವ ಹಕ್ಕಿಲ್ಲ. ಇವರಲ್ಲಿ ಕೆಲವರು ಶೋಷಣೆಗೆ ಒಳಗಾಗಿದ್ದಾರೆ ಎಂದು ಕೆಲವು ಮಾನವೀಯ ಹಕ್ಕುಗಳ ಸಂಘ ಸಂಸ್ಥೆಗಳು ಅಸಮಾಧಾನವನ್ನು ವ್ಯಕ್ತಪಡಿಸಿವೆ. ಅವರ ಕ್ಷೇಮಾಭಿವೃದ್ಧಿಯನ್ನು ಗಮನಿಸ ಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇಲ್ಲಿ ಹರತಾಳ ಮಾಡುವ ಕಾರ್ಮಿಕರನ್ನು ಡಿಪೊರ್ಟ್ ಮಾಡಲಾಗುತ್ತದೆ. ನನ್ನ ಮಿತವಾದ ಅರಿವಿನಲ್ಲಿ, ಇಲ್ಲಿಯ ಭಾರತೀಯ ಮೂಲದವರೊಡನೆ ಮಾತನಾಡಿದ ಬಳಿಕ ಇಲ್ಲಿ ವಲಸೆ ಬಂದ ಉದ್ದಿಮೆದಾರರು, ವೃತ್ತಿಪರರು, ಕೆಳವರ್ಗದ ಕಾರ್ಮಿಕರು ಎಲ್ಲರೂ ಖುಷಿಯಿಂದ ಇದ್ದಾರೆ ಎಂದೆನಿಸಿತು. ಅವರವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಇಲ್ಲಿ ಊಟ, ತಿಂಡಿ, ಮನೋರಂಜನೆ ಬಟ್ಟೆ ಬರೆ ದೊರೆಯುತ್ತದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಇನ್ನು ಉತ್ತಮವಾಗಬಹುದು. ದುಬೈ ಮೆಟ್ರೋವನ್ನು ಎಲ್ಲರೂ ಬಳಸುತ್ತಿದ್ದಾರೆ. ದುಬೈ, ಅಬುದಾಬಿ ಮತ್ತು ಇತರ ನಗರಗಳಲ್ಲಿ ಪ್ರಪಂಚದ ಎಲ್ಲರೀತಿ ಊಟ ತಿಂಡಿ ದೊರೆಯುತ್ತದೆ. ಹಲವು ಸಂಸ್ಕೃತಿಗಳು ಕರಗುವ ಕಡಾಯಿ ಅಮೇರಿಕ ಮತ್ತು ಯುರೋಪ್ ನಗರಗಳಷ್ಟೇ ಅಲ್ಲ, ದುಬೈ ಕೂಡ ಅದರಲ್ಲಿ ಒಂದು ಎಂದು ಪರಿಗಣಿಸಬಹುದು. ದುಬೈ ಕ್ರೀಕ್ ಪಕ್ಕದಲ್ಲೇ ಇರುವ ಹಳೇ ಬರ್ ದುಬೈ ಪ್ರದೇಶದಲ್ಲಿರುವ ಮೀನಾ ಬಜಾರನ್ನು ನಾವು ಪ್ರವೇಶಿಸಿದಾಗ ಅಲ್ಲಿ ಕಾಣುವುದು ನಮ್ಮ ಭಾರತದ ಉಡುಪು, ತಿಂಡಿ, ಚಿನ್ನ, ಆಭರಣ, ದಿನ ನಿತ್ಯ ಬಳಕೆ ವಸ್ತು ಇವುಗಳನ್ನು ಮಾರುವ ನೂರಾರು ಅಂಗಡಿಗಳು! ಗ್ರಾಹಕರನ್ನು ಹಲವಾರು ಭಾರತೀಯ ಭಾಷೆಗಳಲ್ಲಿ 'ಬನ್ನಿ ಸಾರ್, ಬನ್ನಿ ಮೇಡಂ; ಪರ್ಸ್ ನೋಡಿ, ವಾಚ್ ನೋಡಿ' ಎಂದು ದುಂಬಾಲು ಬೀಳುವ ವ್ಯಾಪಾರಿಗಳನ್ನು, ಅವರ ಸೇಲ್ಸ್ ಏಜೆಂಟುಗಳನ್ನು ಗಮನಿಸಿದಾಗ ನಾವು ಬೆಂಗಳೂರಿನ ಚಿಕ್ಕಪೇಟೆಯಲ್ಲೋ ಅಥವಾ ಚೆನ್ನಾಯಿನ ಮಾರ್ಕೆಟ್ಟಿನಲ್ಲೊ ಇದ್ದಂತೆ ಅನಿಸುತ್ತದೆ. ಇವುಗಳ ನಡುವೆ ನಮಗೆ ದೊರಕಿದ ಹಲ್ದಿರಾಮ್, ಪೂರಣಮಲ್, ಕೊನೆಗೆ ನಮ್ಮ ದಕ್ಷಿಣ ಭಾರತದ ಸರ್ವಾಣ ಭವನ್ ಖುಷಿ ತಂದಿತು. ಈ ಪ್ರದೇಶವನ್ನು ಬಿಟ್ಟು ಮೆಟ್ರೋ ಹತ್ತಿ ದುಬೈ ಮಾಲ್ ಆಸುಪಾಸನ್ನು ತಲುಪಿದರೆ ಅಲ್ಲಿ ಲೆಕ್ಕವಿಲ್ಲದ ನೂತನ ವಿನ್ಯಾಸದ ಕಟ್ಟಡಗಳು, ನಗರ ಮಧ್ಯದ ಕಾಲುವೆಗಳು, ಕಾರಂಜಿಗಳು, ಥಳ ಥಳಿಸುವ ದೀಪಾಲಂಕಾರಗಳು, ದುಬಾರಿ ಬೆಲೆ ವಸ್ತುಗಳನ್ನು ಮಾರುವ ಹೈ ಎಂಡ್ ಶೋ ರೂಂಗಳು ಕಾಣುತ್ತವೆ. ಇಲ್ಲಿ ಪಾಶ್ಚಿಮಾತ್ಯರು ಅಧಿಕ ಸಂಖ್ಯೆಯಲ್ಲಿ ಕಾಣುತ್ತಾರೆ. ಇವೆಲ್ಲಾ ನೋಡಿದಾಗ ನಾವು ಯೂರೋಪಿನಲ್ಲೋ ಅಥವಾ ಅಮೆರಿಕದಲ್ಲೋ ಇರುವ ಭಾವನೆ ಉಂಟಾಗುತ್ತದೆ. ಹೀಗೆ ದುಬೈ ಏಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ಸೇತುವೆಯಾಗಿ ನಿಂತಿದೆ. ಇಲ್ಲಿ ನೆಲೆಸಿರುವ ಪ್ರಪಂಚದ ಎಲ್ಲ ಜನರು ತಮ್ಮ ತಮ್ಮ ಸಾಂಸ್ಕೃತಿಕ ಪ್ರಜ್ಞೆಗೆ ನಿಲುಕುವ ಈ ನಗರವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಲ್ಲಿಯ ಎಮಿರಾಟಿಗಳು ಸ್ಥಳೀಯರಾಗಿದ್ದು ಜನಸಂಖ್ಯೆಯಲ್ಲಿ ಅವರೇ ಮೈನಾರಿಟಿಗಳಾಗಿದ್ದರೂ ಸರ್ಕಾರದ ಮತ್ತು ಆಡಳಿತದ ಸ್ಥಾನ ಅವರಿಗಷ್ಟೇ ಮೀಸಲಾಗಿದೆ. ವಲಸೆ ಬಂದವರಿಗೆ ಕೆಲಸಕ್ಕೆ ಹೊಂದುವಂತಹ ವೀಸಾ ಕೊಡಲಾಗುತ್ತದೆ. ವೀಸಾ ಪಡೆದನಂತರ ಸ್ಥಳೀಯ ನೌಕರಿ ನೀಡಿದ್ದ ಸಂಸ್ಥೆ ಒಂದರಿಂದ ಮೂರು ವರ್ಷದ ವರೆಗೆ ರೆಸಿಡೆನ್ಸ್ ಸ್ಟೇಟಸ್ ನೀಡುತ್ತದೆ. ಅದನ್ನು ಮತ್ತೆ ಮತ್ತೆ ವಿಸ್ತರಿಸಬೇಕಾಗುತ್ತದೆ. ಇಲ್ಲಿ ಖಾಯಂ ಆಗಿ ನೆಲೆಸಲು ಸಾಧ್ಯವಿಲ್ಲ. ಬಹುಶ ಈ ಕಾರಣಕ್ಕಾಗಿ ಹೆಚ್ಚಿನ ಜನ ಈ ದೇಶಗಳಿಗೆ ನಿರಾಶ್ರಿತರಾಗಿ ಬರುವುದಿಲ್ಲ. ವಿಶೇಷ ತಜ್ಞರಿಗೆ ೧೦ ವರ್ಷಗಳ ಮಟ್ಟಿಗೆ ರೆಸಿಡೆನ್ಸಿ ದೊರಕಬಹುದು. ನಿವೃತ್ತಿ ನಂತರ ಉದ್ಯೋಗಿಗಳು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ. ಇಲ್ಲಿ ಕೆಲವು ಹೊರತುಗಳು ಇರಬಹುದು. ಸ್ಥಳೀಯ ಎಮಿರಾಟಿಗಳಿಗೆ ವಿಶೇಷ ಸೌಲಭ್ಯಗಳಿವೆ. ಹೀಗಾಗಿ ಅರಬ್ಬರು “ಹುಟ್ಟಿದರೇ….ಎಮಿರಾಟಿಗಳಾಗಿ ಹುಟ್ಟಬೇಕು"! ಎಂದು ಹಾಡಬಹುದು.

ಈ ಒಂದು ಹಿನ್ನೆಲೆಯಲ್ಲಿ ಒಂದು ಲಘು ಹಾಸ್ಯ ಪ್ರಸಂಗವನ್ನು ಹಂಚಿಕೊಳ್ಳುತ್ತಿದ್ದನೇ. ನಾವು, ರಮೇಶ್ ಮತ್ತು ಅವರ ಮಿತ್ರರಾದ ಪ್ರತಾಪ್ ಮತ್ತು ವಿಜಯ ಅವರ ಅಬುದಾಬಿ ಮನೆಯಲ್ಲಿ ತಂಗಿದ್ದೆವು. ಒಂದು ಬೆಳಗ್ಗೆ ಉಪಹಾರದ ವೇಳೆಯಲ್ಲಿ ನಾನು ರೆಡಿಯಾಗಿ ಗರಿ ಗರಿಯಾಗಿ ಇಸ್ತ್ರಿಮಾಡಿದ್ದ ಪ್ಯಾಂಟ್, ಶರ್ಟ್ ಮತ್ತು ಥಳ ಥಳಿಸುವ ಶೂ ಕಟ್ಟಿ ಕೆಳಗೆ ಬಂದೆ. ನನ್ನನ್ನು ಗಮನಿಸಿದ ಪ್ರತಾಪ್ ಕೂಡಲೇ "ನೋಡಿ ಪೂರ್ಣಿಮಾ, ಪ್ರಸಾದ್ ಅವರು ಯಂಗ್ ಆಗಿ, ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ, ಅವರಿಗೆ ಇನ್ನೊಂದು ಮಾಡುವೆ ಮಾಡಿಬಿಡಬಹುದು" ಎಂದು ಕೀಟಲೆಯ ಮಾತುಗಳನ್ನಾಡಿದರು. ನಾನು ಕೂಡಲೇ "ಪ್ರತಾಪ್ ನನಗೊಂದು ಎಮಿರಾಟಿ ಹೆಣ್ಣನ್ನು ನೋಡಿ, ನಾನು ಮದುವೆಯಾಗಿ ಅಬುದಾಬಿಯಲ್ಲಿ ಶೇಕ್ ಆಗಿ, ನಿಶ್ಚಿಂತೆಯಾಗಿ, ಖಾಯಂ ಆಗಿ ಇದ್ದು ಬಿಡುತ್ತೇನೆ" ಎಂದೆ. ಅಂದಹಾಗೆ ಎಮಿರಾಟಿ ಹೆಂಗಸರು ಹೊರಗಿನವರನ್ನು ಮದುವೆಯಾಗುವುದು ನಿಷಿದ್ಧ. ಕಾನೂನು ಬಾಹಿರವಾದದ್ದು.

ಇಲ್ಲಿ ಎಮಿರಾಟಿಗಳೇ ಆಗಿರಲಿ ಅಥವಾ ಹೊರಗಿನವರೇ ಆಗಿರಲಿ ಗಂಡು ಹೆಣ್ಣುಗಳು ಬಹಿರಂಗವಾಗಿ ತಮ್ಮ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಇತ್ತೀಚಿಗೆ ಕಾನೂನು ಸ್ವಲ್ಪ ಸಡಿಲಗೊಂಡು ಕೈ ಕೈ ಹಿಡಿಯಬಹುದು. ಹಿಂದೆ ಇಲ್ಲಿ ಬಹಿರಂಗವಾಗಿ ಚುಂಬನದಲ್ಲಿ ತೊಡಗಿದ್ದ ಪಾಶ್ಚಿಮಾತ್ಯ ಗಂಡು ಹೆಣ್ಣು ಜೋಡಿಯನ್ನು ಅಪರಾಧಿಗಳೆಂದು ಪರಿಗಣಿಸಲಾಗಿತ್ತು. ದುಬೈ, ಅಬುದಾಬಿಗೆ ಬರುವ ಪ್ರವಾಸಿಗಳು ಇಲ್ಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ನಿಯಮಗಳನ್ನು ಅರಿತುಕೊಳ್ಳುವುದು ಒಳಿತು. ಧಾರ್ಮಿಕ ಸ್ಥಳಗಳನ್ನು ಹೊರತಾಗಿ ಇಸ್ಲಾಂ ಧರ್ಮದ ಹೊರಗಿನ ಗಂಡಸರ ಮತ್ತು ಹೆಂಗಸರ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚಿನ ನಿರ್ಬಂಧೆಗಳು ಇಲ್ಲ. ಆದರೂ ಹೆಂಗಸರು ತಮ್ಮ ಉಡುಗೆಯ ಬಗ್ಗೆ, ಸಭ್ಯತೆಯ ಬಗ್ಗೆ, ಗಮನ ನೀಡುವುದು ಒಳಿತು. ಇಲ್ಲಿಯ ನ್ಯಾಯಾಂಗದಲ್ಲಿ ಇಸ್ಲಾಂ ಧರ್ಮದವರಿಗೆ ಮದುವೆ, ವಿವಾಹ ವಿಚ್ಛೇದನೆ, ಅಸ್ತಿ ವಿಸರ್ಜನೆ ಈ ವಿಷಯಗಳಲ್ಲಿ ಷರಿಯಾ ಕಾನೂನು ಅನ್ವಯವಾಗುತ್ತದೆ. ಅನ್ಯ ಧರ್ಮಿಗಳಿಗೆ ಸಿವಿಲ್ ಕಾನೂನು ಅನ್ವಯವಾಗುತ್ತದೆ. ಹಿಂದೆ ಇದ್ದ ಭಯಂಕರ ಉಗ್ರ ಶಿಕ್ಷೆಗಳಾದ ಕೈ ಕಡಿಯುವುದು, ಚಾಟಿ ಏಟು ಮುಂತಾದ ಹಿಂಸಾತ್ಮಕ ಶಿಕ್ಷೆಗಳನ್ನು ರದ್ದುಮಾಡಲಾಗಿದೆ. ನಾಸ್ತಿಕ ವಾದ ಮತ್ತು ಧರ್ಮ ನಿರಪೇಕ್ಷೆ ಒಂದು ಆಯ್ಕೆ ಅಲ್ಲ. ಇಲ್ಲಿ ಅದು ಅಪರಾಧ. ಇಲ್ಲಿ ಹೊರಗಿನವರು ಪರ್ಮಿಟ್ ಇರುವ ನಿಗದಿತ ಬಾರುಗಳಲ್ಲಿ, ಹೋಟೆಲಿನಲ್ಲಿ, ಮನೆಗಳಲ್ಲಿ ಮದ್ಯಪಾನ ಮಾಡಬಹುದು. ಇಲ್ಲಿ ಎಲ್ಲ ದೇಶಗಳ ವಿಸ್ಕಿ, ವೈನ್ ಇತ್ಯಾದಿ ದೊರೆಯುವ ಅಂಗಡಿಗಳು ತೆರೆಯಲ್ಪಟ್ಟಿವೆ. ಇಲ್ಲಿ ವಾರಾಂತ್ಯವನ್ನು ಶುಕ್ರವಾರದ ಬದಲಿಗೆ ಪ್ರಪಂಚದ ಇತರ ದೇಶಗಳ ಅಂತರರಾಷ್ಟ್ರೀಯ ಕೆಲಸ ಕಾರ್ಯಗಳಿಗೆ ಹೊಂದುವಂತೆ ಶನಿವಾರ ಮತ್ತು ಭಾನುವಾರ ರಜಾದಿನಗಳಾಗಿ ಬದಲಾಯಿಸಲಾಗಿದೆ. ಇಸ್ಲಾಂ ಧರ್ಮಾದವರಿಗೆ ಶುಕ್ರವಾರ ಪ್ರಾರ್ಥನೆ ಮಾಡಲು ಅನುವು ಮಾಡಿಕೊಡಲಾಗಿದೆ. ನಿಧಾನವಾಗಿ ಹೊರಗಿನ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾ ಒಂದು ಹದವಾದ ಹತೋಟಿಯಲ್ಲಿ ಈ ರಾಷ್ಟ್ರ ಬದಲಾಗುತ್ತಿದೆ.

ನಾನು ಪ್ರವಾಸ ಮಾಡುವ ಸಂದರ್ಭದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಆಗಮಿಸಿ ಅಬುದಾಬಿಯ ಹಿಂದೂ ದೇವಾಲಯದ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದರು ಎಂದು ಸುದ್ದಿವಾಹಿನಿಯಿಂದ ತಿಳಿದೆ. ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳ ಮಧ್ಯೆ ಸಂಯುಕ್ತ ಅರಬ್ ರಾಷ್ಟ್ರದಲ್ಲಿ (UAE) ಪ್ರಸಕ್ತ ಭಾರತಕ್ಕಿಂತ ಹೆಚ್ಚು ಧಾರ್ಮಿಕ ಸಹಿಷ್ಣುತೆ ಇದೆಯೆಂದು ಅರಿತ್ತಿದ್ದೇನೆ. ಇಲ್ಲಿ ಮಸೀದಿ, ಮಂದಿರ ಮತ್ತು ಚರ್ಚುಗಳು ಒಂದರ ಪಕ್ಕ ಇನ್ನೊಂದಿದ್ದು ಜನ ಧಾರ್ಮಿಕ ಸೌಹಾರ್ದತೆಯನ್ನು ಉಳಿಸಿಕೊಂಡಿದ್ದಾರೆ, ಎಲ್ಲರಿಗೂ ಅವರವರ ಧಾರ್ಮಿಕ ನಂಬಿಕೆಗಳ ಜೊತೆ ಅನ್ಯ ಧರ್ಮದವರ ಬಗ್ಗೆ ಗೌರವವಿದೆ ಎಂದು ನಮನ್ನು ದುಬೈ ನಗರದಿಂದ ಅಲೈನ್ ನಗರಕ್ಕೆ ಕರೆತಂದ ಪಾಕಿಸ್ತಾನದ ಪೇಶಾವರ್ ಮೂಲದ ಪಠಾಣ್ ಖಾನ್ ಎಂಬ ಟ್ಯಾಕ್ಸಿ ಡ್ರೈವರ್ ಮೂಲಕ ತಿಳಿಯಿತು. ಈತನಿಗೆ ಭಾರತೀಯ ಮೂಲದ ಜನರ ಬಗ್ಗೆ ಸ್ನೇಹ ವಿಶ್ವಾಸ ಗೌರವಗಳಿರುವುದನ್ನು ಕಂಡು ಸಂತೋಷವಾಯಿತು. ಇಂದಿನ ಭಾರತದಲ್ಲಿ ಧರ್ಮವೆಂಬ ಅಮಲಿನಲ್ಲಿ ನಾವು ಹಿಂದೂ ಅಲ್ಲದವರನ್ನು, ಅದರಲ್ಲೂ ಇಸ್ಲಾಂ ಧರ್ಮದವರನ್ನು ಹೀಯಾಳಿಸಿ ಎರಡನೇದರ್ಜೆ ಪ್ರಜೆಗಳಂತೆ ಕಾಣುತ್ತಿರುವ ಪರಿಸ್ಥಿತಿಯಲ್ಲಿ ಪಠಾಣ್ ಖಾನ್ ಒಬ್ಬ ಆಪ್ತನಾಗಿ ಕಂಡುಬಂದ. ಅವನು ತನ್ನ ಪಾಕಿಸ್ತಾನದ ರಾಜಕೀಯ ಹುಳುಕುಗಳನ್ನು, ಅಲ್ಲಿಯ ಅಸಮರ್ಥ ಆಡಳಿತವನ್ನು ಮತ್ತು ತನ್ನ ಸ್ವಂತ ಕಷ್ಟಗಳನ್ನು ನಮ್ಮೊಂದಿಗೆ ಹಂಚಿಕೊಂಡ. “ಹಿಂದೊಮ್ಮೆ ನಾವು ಒಂದೇ ಅವಿಭಾಜ್ಯ ದೇಶದ ಪ್ರಜೆಗಳಾಗಿದ್ದೆವು, ವೈಯುಕ್ತಿಕ ನೆಲೆಯಲ್ಲಿ ನಾವೆಲ್ಲಾ ಮಿತ್ರರೇ ಆಗಿದ್ದರೂ, ಎರಡೂ ದೇಶಗಳ ರಾಜಕಾರಣ ನಮ್ಮನ್ನು ದೂರವಾಗಿಸಿದೆ” ಎಂದು ವ್ಯಥೆ ಪಟ್ಟ. ಅವನ ಪ್ರಾಮಾಣಿಕ ಅನಿಸಿಕೆಗಳನ್ನು ನಾವು ಒಪ್ಪಿಕೊಂಡೆವು. ಒಂದು ದೇಶದ ಒಳಗೇ ಬದುಕುತ್ತಿರುವಾಗ ಒಂದು ಸಂಕುಚಿತ ಐಡಿಯಾಲಾಜಿಗೆ ಬದ್ಧರಾಗಿ, ನಮ್ಮ ಆಲೋಚನಾಕ್ರಮಗಳ ಆಚೆಗೆ ನಾವು ವಿಚಾರ ಮಾಡುವುದಿಲ್ಲ. ನಮಗೆ ತಿಳಿದದ್ದೇ ಸರಿ, ಎಲ್ಲರು ಹೇಳುತ್ತಿರುವುದು ಸರಿ ಎಂದು ಕುರಿಯ ಮಂದೆಯ ಹಾಗೆ ಪರಿಣಾಮಗಳನ್ನು ಚಿಂತಿಸದೆ ಅನುಸರಿಸುತ್ತೇವೆ. ದೇಶ, ಗಡಿ ಸಂಸ್ಕೃತಿಗಳನ್ನು ದಾಟಿ ಹೊಸ ದಿಂಗಂತದಲ್ಲಿ ಕಾಲಿಟ್ಟಾಗ ಹಳೇ ಬ್ಯಾಗೇಜುಗಳಾದ ದೇಶಭಕ್ತಿ, ದೇಶಪ್ರೇಮಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡು ಅಲ್ಲಿ ವಿಶ್ವ ಮಾನವ ಪ್ರಜ್ಞೆ ಉಂಟಾಗುತ್ತದೆ. ಈ ವಿಚಾರವನ್ನು ಅರಿಯಲು ದೇಶದ ಹೊರಗೇನು ಕಾಲಿಡಬೇಕಾಗಿಲ್ಲ. ಒಂದು ಬಹುಮುಖಿ ಸಂಸ್ಕೃತಿಯಲ್ಲಿ ಬದುಕುವವರಿಗೆ ಹೊಳೆಯಬೇಕು. ಕೆಲವರಿಗೆ ಈ ವಿಚಾರಗಳು ಸುಲಭದಲ್ಲಿ ಹೊಳೆಯುತ್ತವೆ, ಕೆಲವರಿಗೆ ಹೊಳೆಯುವುದಿಲ್ಲ. ಮುಸ್ಲಿಂ ಧರ್ಮಾಂದತೆ, ಐಸಿಸ್ ಭಯೋತ್ಪಾದನೆ, ಹಿಂದೂಗಳ ಹಿಂದುತ್ವ ವಾದ, ಜಾತಿವಾದ, ಬಿಳಿಯರ ರೇಸಿಸಂ ಹೀಗೆ ಒಂದೊಂದು ಐಡಿಯಾಲಜಿಯ ಆಳಕ್ಕೆ ಇಳಿದವರನ್ನು ಕಂಡಾಗ ಒಂದು ಉಕ್ತಿ ನೆನಪಾಗುತ್ತದೆ ಅದು ಹೀಗಿದೆ; "ಭಾವಿಯ ಒಳಗೇ ಇರುವ ಕಪ್ಪೆಗಳಿಗೆ ಸಾಗರದ ವಿಸ್ತಾರವನ್ನು ತೋರಿಸುವುದಾದರೂ ಹೇಗೆ?"

ಅಂದಹಾಗೆ ಅರಬ್ ಸಂಯುಕ್ತ ರಾಷ್ಟ್ರವು ವಾಸಿಸಲು ಯೋಗ್ಯಸ್ಥಳವಾಗಿ ಇಲ್ಲಿ ಹಲವಾರು ಉದ್ಯೋಗ ಅವಕಾಶಗಳು ಇರುವಾಗ ಮಧ್ಯಪೂರ್ವ ದೇಶಗಳಾದ ಸಿರಿಯಾ, ಲಿಬಿಯಾ, ಇರಾಕ್ ಮುಂತಾದ ದೇಶಗಳಲ್ಲಿ ಯುದ್ಧಗಳಾಗಿ ಸ್ಥಳಾಂತರಗೊಂಡ ನಿರಾಶ್ರಿತರಿಗೆ ಈ ಶ್ರೀಮಂತ ಅರಬ್ ರಾಷ್ಟ್ರಗಳು ಏಕೆ ಆಶ್ರಯ ನೀಡುತ್ತಿಲ್ಲ? ಅವರು ಇಸ್ಲಾಂ ಧರ್ಮದವರಲ್ಲವೇ? ದೂರದಲ್ಲಿರುವ ಮತ್ತು ಭಿನ್ನ ಸಂಸ್ಕೃತಿಯುಳ್ಳ ಅಮೇರಿಕ, ಯು.ಕೆ, ಯುರೋಪ್ ದೇಶಗಳಿಗೆ ಏಕೆ ಈ ನಿರಾಶ್ರಿತರು ಲಗ್ಗೆ ಇಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಅರಬ್ ರಾಷ್ಟ್ರಗಳಿಗೂ ಸಾಮಾಜಿಕ ಜವಾಬ್ದಾರಿಗಳು ಇರಬೇಕಲ್ಲವೇ?

ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಅಧಿಕವಾದ ಅನಿಲ ಮತ್ತು ತೈಲ ಸಂಪನ್ಮೂಲಗಳನ್ನು ಒಳಗೊಂಡು ಅದನ್ನು ಸರಿಯಾಗಿ ವ್ಯವಸ್ಥಿತವಾಗಿ ಬಳಸಿ, ದಕ್ಷ ಆಡಳಿತವನ್ನು ನೀಡುತ್ತಾ ಬಂದಿದೆ. ಈ ಸಂಯುಕ್ತ ಅರಬ್ ರಾಷ್ಟ ಇಷ್ಟರ ಮಟ್ಟಿಗೆ ಬೆಳೆಯಲು ನೈಸರ್ಗಿಕ ಸಂಪನ್ಮೂಲಗಳಷ್ಟೇ ಕಾರಣವಲ್ಲ. ಇಲ್ಲಿ ಸ್ಥಿರವಾದ ರಾಜಕಾರಣವಿದೆ, ನಾಯಕತ್ವವಿದೆ. ಅಬುದಾಬಿಯ ರಾಜರು ಈ ಸಂಯುಕ್ತ ದೇಶದ ಅಧ್ಯಕ್ಷರು. ದುಬೈ ರಾಜ ಇಲ್ಲಿಯ ಪ್ರಧಾನಿ. ಅಬುದಾಬಿ ಈ ರಾಷ್ಟ್ರದ ರಾಜಧಾನಿ. ಇಲ್ಲಿಯಾ ಫೆಡರಲ್ ನ್ಯಾಷನಲ್ ಕೌನ್ಸಿಲ್ ಆಡಳಿತ ನಡೆಸುತ್ತದೆ. ೫೦% ಸದಸ್ಯರನ್ನು ನೇಮಕ ಮಾಡಲಾಗುತ್ತದೆ, ಉಳಿದರ್ಧ ಸದಸ್ಯರನ್ನು ಚುನಾಯಿಸಲಾಗುತ್ತದೆ. ಕೆಲವು ಮಧ್ಯಪೂರ್ವ ರಾಷ್ಟ್ರಗಳಲ್ಲಿ ಅರಬ್ ಸ್ಪ್ರಿಂಗ್ ಎಂಬ ಸರಕಾರದ ವಿರುದ್ಧ ನಡೆದ ಚಳುವಳಿ ಮತ್ತು ಪ್ರತಿಭಟನೆ ಈ ಅರಬ್ ಸಂಯುಕ್ತ ರಾಷ್ಟ್ರದಲ್ಲಿ ನಡೆದಿಲ್ಲ ಎಂಬುದನ್ನು ಗಮನಿಸಬೇಕು. ಇದಕ್ಕೆ ಕಾರಣವೆಂದರೆ ಇಲ್ಲಿರುವ ಹೆಚ್ಚಿನ ನಿವಾಸಿಗಳಲ್ಲಾ ಹೊರಗಿನವರೇ, ಅವರಿಗೆ ಪ್ರತಿಭಟಿಸುವ ಹಕ್ಕಿಲ್ಲ. ಪ್ರತಿಭಟಿಸಿದರೆ ಎಮಿರಾಟಿಗಳೇ ಪ್ರತಿಭಟಿಸಬೇಕು. ಎಮಿರಾಟಿ ಸಮುದಾಯದ ಕೆಲವರು ಪ್ರಭುತ್ವವನ್ನು ಪ್ರಶ್ನಿಸಿರುವ ಪ್ರಸಂಗಗಳಿವೆ, ಅದನ್ನು ಹತ್ತಿಕ್ಕಿ ಹತೋಟಿಯಲ್ಲಿಡಲಾಗಿದೆ. ಅನಿಲ ಮತ್ತು ತೈಲ ಸಂಪನ್ಮೂಲಗಳು ಶಾಶ್ವತವಲ್ಲ. ಮೇಲಾಗಿ ವಿಶ್ವದಲ್ಲೇ ಫಾಸ್ಸಿಲ್ ಇಂಧನ ಬಳಕೆ ಕಡಿಮೆ ಮಾಡಿ ಜಾಗತಿಕ ತಾಪಮಾನವನ್ನು ಹತೋಟಿಯಲ್ಲಿ ಇಡಲು ನಿರ್ಬಂಧನೆಗಳು ಮೂಡುತ್ತಿವೆ. ಈ ಹಿನ್ನಲೆಯಲ್ಲಿ ಅರಬ್ ಸಂಯುಕ್ತ ರಾಷ್ಟ್ರವು ಪ್ರವಾಸೋದ್ಯಮ, ವಿಮಾನ ಸಾರಿಗೆ, ಟೆಕ್ ಕಂಪನಿಗಳ ಉದ್ಯಮ, ಕೃಷಿ ಮತ್ತು ಇನ್ನಿತರ ಆದಾಯಗಳ ಕಡೆ ಗಮನ ಹರಿಸಬೇಕಾಗಿದೆ. ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ, ಇವುಗಳ ನಡುವೆ ಮಾನವೀಯ ಹಕ್ಕುಗಳನ್ನು, ಇಸ್ಲಾಂ ಧರ್ಮದ ಕಟ್ಟು ನಿಟ್ಟುಗಳನ್ನು, ಜಾಗತೀಕರಣ ತರುವ ಬದಲಾವಣೆಗಳನ್ನು, ಮತ್ತು ಇತರ ಸವಲಗಳನ್ನು ಎದುರಿಸಬೇಕಾಗಿದೆ. ಉದಾರವಾದ ನೀತಿಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. 'ಪರಿವರ್ತನೆ ಜಗದ ನಿಯಮ' ಎಂಬ ವಿಚಾರ ಅರಬ್ಬರನ್ನೂ ತಟ್ಟುತ್ತಿದೆ.

***






ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು (UAE)

ಡಾ. ಜಿ. ಎಸ್. ಶಿವಪ್ರಸಾದ್  

ಕಳೆದ ಕೆಲವು ವಾರಗಳ ಹಿಂದೆ ನಾನು ಸಂಯುಕ್ತ ಅರಬ್ ಸಂಸ್ಥಾನಗಳ ರಾಷ್ಟ್ರದಲ್ಲಿ (UAE) ಪ್ರವಾಸ ಕೈಗೊಂಡಿದ್ದು ಅದರ ಬಗ್ಗೆ ಬರೆದಿರುವ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದು ಪ್ರವಾಸ ಕಥನ ಅನ್ನುವುದಕ್ಕಿಂದಂತ ಒಂದು ವೈಚಾರಿಕ ಲೇಖನವೆಂದು ನಾನು ಭಾವಿಸುತ್ತೇನೆ. ನಾವು ವೀಕ್ಷಸಿದ ಜನಪ್ರೀಯ ಪ್ರೇಕ್ಷಣೀಯ ತಾಣಗಳನ್ನು, ಅಲ್ಲಿಯ ನಿಸರ್ಗ ಸೌಂದರ್ಯವನ್ನು ಮತ್ತು ಅಲ್ಲಿ ನಮಗಾದ ಅನುಭವಗಳನ್ನು ಚಿತ್ರಗಳ ಜೊತೆ ಓದುಗರೊಂದಿಗೆ ಬರಹದಲ್ಲಿ ಹಂಚಿಕೊಂಡಾಗ ಅದು ಪ್ರವಾಸ ಕಥನವಾಗುತ್ತದೆ.  ಆದರೆ ಈ ನನ್ನ ಬರಹದಲ್ಲಿ ಹೆಚ್ಚಾಗಿ ನಾನು ಪ್ರವಾಸ ಮಾಡಿದ ದೇಶದ ಇತಿಹಾಸ, ಜನ ಜೀವನ ಮತ್ತು ಸಂಸ್ಕೃತಿಗಳ ಬಗ್ಗೆ ಪರಿಚಯಮಾಡಿಕೊಟ್ಟು ಅದರೊಡನೆ ನನ್ನ ಸ್ವಂತ ಅನಿಸಿಕೆಗಳನ್ನು ಬೆರೆಸಿ ಆದಷ್ಟು ವಿಮರ್ಶಾತ್ಮಕವಾದ ಲೇಖನವಾಗಿ ಪ್ರಸ್ತುತಿ ಪಡಿಸುವುದು ನನ್ನ ಉದ್ದೇಶವಾಗಿದೆ. ಇಲ್ಲಿ ಸ್ವಲ್ಪಮಟ್ಟಿಗೆ ಪ್ರವಾಸ ಕಥನ ಸೇರಿಕೊಂಡಿರುವುದು ಅನಿವಾರ್ಯವಾಗಿದೆ. ಈ ಬರಹವು ಹಲವಾರು ವಿಚಾರವನ್ನು ಒಳಗೊಂಡು ದೀರ್ಘ ಬರಹವಾದದ್ದರಿಂದ ಇದನ್ನು ಎರಡು ಕಂತುಗಳಲ್ಲಿ ಪ್ರಕಟಪಡಿಸಲಾಗಿದೆ. 
'ಬದಲಾಗುತ್ತಿರುವ ಸಂಯುಕ್ತ ಅರಬ್ ಸಂಸ್ಥಾನಗಳು ಭಾಗ ೧' ಎಂಬ ಈ ಬರಹವನ್ನು ಓದಿ ಮತ್ತು ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

- ಸಂ
ಮೂರು  ದಶಕಗಳ ಹಿಂದೆ ಅರಬ್ ಸಂಸ್ಥಾನಗಳೆಂದರೆ ಅಲ್ಲೇನಿದೆ ? ಬರೇ ಮರುಭೂಮಿ, ಒಂಟೆಗಳು ಮತ್ತು ನೆಲೆಯಿಲ್ಲದ ಅಲೆಮಾರಿ ಬೆಡೊವಿನ್ ಅರಬ್ಬರು ಎಂಬ ಕಲ್ಪನೆಗಳಿತ್ತು. ಅಲ್ಲಿಯ ಜನ ಜೀವನದ ಬಗ್ಗೆ, ಕಟುವಾದ ಕೈಕಾಲು ತುಂಡುಮಾಡುವ, ಚಾಟಿ ಏಟು ನೀಡುವ, ಕಲ್ಲಿನಲ್ಲಿ ಹೊಡೆದು ಸಾಯಿಸುವ ಟ್ರೈಬಲ್ ಶಿಕ್ಷೆಗಳ ಬಗ್ಗೆ ಅಂಜಿಕೆಗಳಿತ್ತು. ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ಇಂಡಿಯಾ ಎಂದರೆ ಭಿಕ್ಷುಕರು, ಬೀದಿಯಲ್ಲಿ ದನಗಳು, ಹಾವಾಡಿಗರು, ಧೂಳು, ಕೊಳಕು ಎಂಬ ಕಲ್ಪನೆಗಳು ಇದ್ದಂತೆ! ಹಿಂದೆ ಅರಬ್ ರಾಷ್ಟ್ರಗಳೆಂದರೆ ಯಾವಾಗಲು ಜಗಳವಾಡಿಕೊಂಡಿದ್ದ ಇರಾನ್, ಇರಾಕ್ ಅಥವಾ ಶ್ರೀಮಂತ ದೇಶವಾದ ಸೌದಿ ಅಷ್ಟೇ ನಮಗೆ ತಿಳಿದಿತ್ತು.  ದುಬೈ ಅಬುದಾಬಿ ಎಂಬ ನಗರಗಳನ್ನು ಕೇಳಿರಲಿಲ್ಲ. ನನ್ನ ಈ ಬರಹದಲ್ಲಿ ಮುಖ್ಯ ವಿಷಯ ವಸ್ತುವಾದ ಸಂಯುಕ್ತ ಅರಬ್ ಸಂಸ್ಥಾನಗಳ 
ಈ ರಾಷ್ಟ್ರದ (United Arab Emirates: UAE) ಬಗ್ಗೆ ಹೆಚ್ಚಿನ ಅರಿವು ಇರಲಿಲ್ಲ. ಏಕೆಂದರೆ ಈ ದೇಶವು ಅಸ್ತಿತ್ವಕ್ಕೆ ಬಂದದ್ದು ೧೯೭೧ ರಲ್ಲಿ. ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದಾಗ ಇದು ಇನ್ನು ಕಣ್ತೆರೆಯುತ್ತಿರುವ ರಾಷ್ಟ್ರ. ಹಿಂದೆ ಈ ಪ್ರದೇಶವು ಸ್ಥಳೀಯ ಸಣ್ಣ-ಪುಟ್ಟ ರಾಜಮನತನದ ಸ್ವಾಧೀನದಲ್ಲಿದ್ದು ಕಿಂಗ್ಡಮ್ ಅಥವಾ ಶೇಕ್ ಡಾಮ್ ಆಗಿತ್ತು. ಸುಮಾರು ೫೦೦ ವರ್ಷಗಳ ಹಿಂದೆ ಈ ಪ್ರದೇಶವು ಪೋರ್ಚುಗೀಸರ ಆಡಳಿತಕ್ಕೆ ಒಳಪಟ್ಟಿತ್ತು. ಹಿಂದೆ ಸಾಗರದಡಿಯ ಪರ್ಲ್(ಮುತ್ತು) ಟ್ರೇಡಿಂಗ್ ಇಲ್ಲಿಯ ಮುಖ್ಯ ವಾಣಿಜ್ಯ ವ್ಯಾಪಾರವಾಗಿ ಆದಾಯವನ್ನು ತರುತ್ತಿತ್ತು. ಪರ್ಷಿಯನ್ ಗಲ್ಫ್ ಅಂಚಿನ ಇಲ್ಲಿಯ ಜನರು, ವ್ಯಾಪಾರಿಗಳು, ಕಡಲ್ಗಳ್ಳರು ಆಗಾಗ್ಗೆ ಸಂಘರ್ಷಣೆಯಲ್ಲಿ ತೊಡಗಿದ್ದು ಅಶಾಂತಿ ನೆಲೆಸಿತ್ತು. ಪೋರ್ಚುಗೀಸರು ಇಲ್ಲಿಯ ಲಾಭದಾಯಕ ಅವಕಾಶವನ್ನು ಗ್ರಹಿಸಿ, ಆಕ್ರಮಿಸಿ ಕೋಟೆಗಳನ್ನು ಕಟ್ಟಿದರು, ದಬ್ಬಾಳಿಕೆಯಲ್ಲಿ ತೆರೆಗೆ ವಿಧಿಸಲು ಶುರುಮಾಡಿದರು. ನಂತರದ ಕೆಲವು ವರುಷಗಳಲ್ಲಿ ಅರಬ್ಬರ ಒಳಜಗಳವನ್ನು ಬಗೆಹರಿಸಲು ಮತ್ತು ಆಶ್ರಯ ನೀಡಲು ಬ್ರಿಟಿಷರು ಮುಂದಾದರು, ಕಾದಾಡುತ್ತಿರುವ ಅರಬ್ಬರಲ್ಲಿ ಶಾಂತಿಯ ಒಪ್ಪಂದಗಳನ್ನು ತಂದು ಈ ಪ್ರದೇಶಗಳಲ್ಲಿ ಸ್ಥಿರತೆಯನ್ನು ತಂದುಕೊಟ್ಟರು.

೧೯೩೦ರಲ್ಲಿ ಈ ನಾಡಿನಲ್ಲಿ ಅನಿಲ ಮತ್ತು ತೈಲ ಸಂಪನ್ಮೂಲಗಳಿವೆಯೆಂದೇ ತಿಳಿದುಬಂತು. ಇದು ಅರಬ್ಬರ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಅಂದಹಾಗೆ ಈ ಪ್ರದೇಶವು ಅನಾದಿಕಾಲದಿಂದಲೂ ಪೂರ್ವ ಮತ್ತು ಪಶ್ಚಿಮ ವಾಣಿಜ್ಯಗಳು ಸಂಧಿಸುವ ತಾಣವಾಗಿತ್ತು. ಭೌಗೋಳಿಕವಾಗಿ ವಾಣಿಜ್ಯ ದೃಷ್ಟಿಯಿಂದ ಅನುಕೂಲಕರವಾಗಿತ್ತು. ಬ್ರಿಟಿಷ್ ಸಂಸ್ಥೆಗಳಿಗೆ ಇಲ್ಲಿಯ ತೈಲ ಅನಿಲ ನಿರ್ವಾಹಣ ಪರ್ಮಿಟ್ ಗಳನ್ನು ಕೊಟ್ಟಿದ್ದು ೬೦ರ ದಶಕದಲ್ಲಿ ಅಮೇರಿಕ ಕಂಪನಿಗಳು ನಿಧಾನಕ್ಕೆ ಆ ಕಂಟ್ರಾಕ್ಟುಗಳನ್ನು ಪಡೆದವು. ೧೯೬೮ರ ಸಮಯದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಈ ಶೇಕ್ ರಾಜ್ಯಗಳಿಗೆ ರಕ್ಷಣೆ ಮತ್ತು ಆಶ್ರಯ ಒದಗಿಸುವುದು ಕಷ್ಟವಾಗತೊಡಗಿತು. ತಾವು ನೀಡುತ್ತಿದ್ದ ಆಶ್ರಯವನ್ನು ರದ್ದುಪಡಿಸಿ, ಅಲ್ಲಿಯ ರಕ್ಷಣಾ ವ್ಯವಸ್ಥೆಯನ್ನು, ಒಪ್ಪಂದವನ್ನು ಕೊನೆಗಾಣಿಸುವ ನಿರ್ಧಾರವನ್ನು ಅಂದಿನ ಪ್ರಧಾನಿ ಹೆರಾಲ್ಡ್ ವಿಲ್ಸನ್ ಬಹಿರಂಗಪಡಿಸಿದರು. ಅನಿಲ ತೈಲ ಸಂಪನ್ಮೂಲಗಳನ್ನು ಹೊಂದಿರುವ ಈ ರಾಷ್ಟ್ರಗಳ ನಾಯಕರು ತಮ್ಮ ಮುಂದಿರುವ ಉಜ್ವಲ ಭವಿಷ್ಯವನ್ನು ಮತ್ತು ಸಾಧ್ಯತೆಗಳನ್ನು ಕಂಡುಕೊಂಡು ೧ನೇ ಡಿಸೆಂಬರ್ ೧೯೭೧ ರಲ್ಲಿ ಸಂಯುಕ್ತ ಅರಬ್ ಸಂಸ್ಥಾನಗಳಾದ ಈ ರಾಷ್ಟ್ರವನ್ನು (UAE) ಹುಟ್ಟುಹಾಕಿದರು. ಹಿಂದೆ ಈ ಒಕ್ಕೂಟವನ್ನು ಸೇರಬೇಕಾಗಿದ್ದ ಕತಾರ್ ಮತ್ತು ಬಹರೈನ್ ದೇಶಗಳು ತಮ್ಮದೇ ಆದ ಸ್ವಾತಂತ್ರ್ಯವನ್ನು ಪಡೆದುಕೊಂಡವು. ಈ ಸಂಯುಕ್ತ ಅರಬ್ ಸಂಸ್ಥಾನಗಳ ಈ ರಾಷ್ಟ್ರದಲ್ಲಿ ಅಬುದಾಬಿ, ದುಬೈ, ಶಾರ್ಜಾ, ಅಜ್ಮಾನ್, ಫುಜೈರ, ಉಮ್ ಅಲ ಕ್ಯೋವೆನ್, ಮತ್ತು ರಾಸ್ ಎಲ್ ಕೈಮ ಎಂಬ ಏಳು ರಾಜಮನೆತನಗಳು ಸೇರಿಕೊಂಡವು. ಅಬುದಾಬಿಯ ರಾಜರಾಗಿದ್ದ ಶೇಕ್ ಜಾಯೀದ್ ಬಿನ್ ಸುಲ್ತಾನ್ ಅಲ ನಹ್ಯಾನ್ ಅವರು ಈ ಸಂಯುಕ್ತ ಅರಬ್ ರಾಷ್ಟ್ರವನ್ನು ಹುಟ್ಟುಹಾಕುವಲ್ಲಿ ನೇತಾರರಾಗಿದ್ದು ಈ ರಾಷ್ಟ್ರದ ಮೊದಲ ಅಧ್ಯಕ್ಷರಾಗಿದ್ದರು. ದುಬೈ ಮತ್ತಿತರ ನಗರಗಳ ಮುಖ್ಯ ರಸ್ತೆಗಳಿಗೆ ಮತ್ತು ಅಬುದಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟು ಗೌರವಿಸಲಾಗಿದೆ. ಹಿಂದೆ ಒಂದು ನೆಲೆಯಲ್ಲಿ ನಿಲ್ಲದೆ, ಅಲೆಮಾರಿ ಬುಡಕಟ್ಟಿನ ಜನಾಂಗದವರಾಗಿ, ಜಂಗಮರಾಗಿದ್ದ ಈ ಜನ ತಮ್ಮ ತೈಲ ಅನಿಲ ಸಂಪನ್ಮೂಲಗಳಿಂದ ಶ್ರೀಮಂತರಾಗಿ ಒಂದು ಮರುಭೂಮಿ ಪ್ರದೇಶವನ್ನು ಕಂಗೊಳಿಸುವ ನೂತನ ನಗರಗಳಾಗಿ, ಸಮುದ್ರದನೀರನ್ನು ಸಿಹಿನೀರಾಗಿ ಪರಿವರ್ತಿಸಿ ಹಸಿರುಮೂಡಿಸಿದ್ದಾರೆ. ಸಂಪನ್ಮೂಲಗಳಿಂದ ಬಂದ ಹಣದಲ್ಲಿ ರಸ್ತೆ, ಆಸ್ಪತ್ರೆ, ಶಾಲಾ ಕಾಲೇಜು ಮತ್ತು ಇತರ ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಕಟ್ಟಿದ್ದಾರೆ. ತೈಲದಿಂದ ಬರುವ ಆದಾಯವನ್ನು ಹೊರತಾಗಿ ಮಲ್ಟಿ ನ್ಯಾಷನಲ್ ವಾಣಿಜ್ಯ ಸಂಸ್ಥೆಗಳಿಗೆ, ಖಾಸಗಿ ಉದ್ದಿಮೆದಾರರಿಗೆ ಕಂಪನಿಗಳನ್ನು ಹೂಡಲು ಅವಕಾಶವನ್ನು ಕಲ್ಪಿಸಿ ವಾಣಿಜ್ಯ ವ್ಯವಹಾರಗಳು ಸುಗಮವಾಗಿ ಸಾಗಿವೆ. ಇತ್ತೀಚಿನ ವರುಷಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿ ಅದರಿಂದ ಈ ದೇಶಕಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಇಲ್ಲಿ ಹಣಹೂಡಿದವರಿಗೆ ತೆರಿಗೆಯಿಂದ ಸ್ವಲ್ಪಮಟ್ಟಿಗೆ ಮುಕ್ತಿಯಿದೆ. ಹಣ, ಉದ್ಯೋಗ ಅವಕಾಶ, ರಾಜಕೀಯ ಸ್ಥಿರತೆ, ದೂರದೃಷ್ಟಿ, ಇಲ್ಲಿಯ ಸರ್ವತೋಮುಖ ಬೆಳವಣಿಗೆಗೆ, ಅಭಿವೃದ್ಧಿಗೆ ಕಾರಣವಾಗಿದೆ.

ನನಗೆ ಈ ಸಂಯುಕ್ತ ಅರಬ್ ರಾಷ್ಟ್ರದ ಪರಿಚಯವಾದದ್ದು ನಾನು ಇಂಗ್ಲೆಂಡಿನಿಂದ ಇಂಡಿಯಾಗೆ ಹೋಗಿ ಬರಲು ಬಳಸುತ್ತಿದ್ದ ಎಮಿರೇಟ್ಸ್, ಎತಿಹಾಡ್ ವಿಮಾನ ಕಂಪನಿಗಳಿಂದ. ಬೆಂಗಳೂರಿಗೆ ಹೋಗುವ ಮಾರ್ಗದಲ್ಲೇ ಅನಾಯಾಸವಾಗಿ ಮೂರು ದಿವಸಗಳ ಮಟ್ಟಿಗೆ ಪ್ರಯಾಣದಲ್ಲಿ ಬ್ರೇಕ್ ಪಡೆದು ಎರಡು ಬಾರಿ ದುಬೈ ನಗರವನ್ನು ವೀಕ್ಷಿಸಿ ಬೆರಗಾಗಿದ್ದೆ. ಅಷ್ಟೇ ಅಲ್ಲದೆ ಇಲ್ಲಿಯ ಅದ್ವಿತೀಯ ಮನುಷ್ಯ ಪ್ರಯತ್ನಗಳನ್ನು ಮೆಚ್ಚಿಕೊಂಡು ಮುಂದೊಮ್ಮೆ ಧೀರ್ಘ ಪ್ರವಾಸದಲ್ಲಿ ಇಲ್ಲಿಯ ಇತರ ನಗರಗಳನ್ನು ಒಳನಾಡ ಪ್ರದೇಶಗಳನ್ನು ವೀಕ್ಷಸಬೇಕೆಂಬ ಹಂಬಲ ಮೂಡಿಬಂತು. ಇದಕ್ಕೆ ಪೂರಕವಾಗಿ ಹಿಂದೆ ನಾವಿದ್ದ ಇಂಗ್ಲೆಂಡಿನ ವುಲ್ವರ್ಹ್ಯಾಂಪ್ಟಾನ್ ಎಂಬ ನಗರದಲ್ಲಿ ನಿವಾಸಿಗಳಾಗಿದ್ದು, ನಮ್ಮ ಮಿತ್ರರಾದ ಡಾ.ರಮೇಶ್ ಮತ್ತು ಅವರ ಪತ್ನಿ ಅನ್ನಪೂರ್ಣ ಅವರು ಈಗ ಅಬುದಾಬಿ ಪಕ್ಕದ ಅಲೈನ್ ನಗರದಲ್ಲಿ ವೃತ್ತಿಯಿಂದಾಗಿ ನೆಲೆಸಿದ್ದು ನಮಗೆ ಬರಲು ಆಹ್ವಾನವನ್ನು ನೀಡಿದರು. ೨೦೨೪ರ ಫೆಬ್ರುವರಿ ತಿಂಗಳ ಮೊದಲವಾರದಲ್ಲಿ ನಾನು ಮತ್ತು ನನ್ನ ಶ್ರೀಮತಿ ಡಾ. ಪೂರ್ಣಿಮಾ ಈ ದೇಶದಲ್ಲಿ ಹತ್ತು ದಿವಸಗಳ ಪ್ರವಾಸವನ್ನು ಕೈಗೊಂಡೆವು. ಪ್ರೇಕ್ಷಣೀಯ ತಾಣಗಳನ್ನು ನೋಡುವುದರ ಜೊತೆಗೆ ಇಲ್ಲಿಯ ದಿನ ನಿತ್ಯ ಬದುಕಿನ ಅನುಭವವನ್ನು ಸಾಧ್ಯವಾದಷ್ಟು ಹತ್ತಿರದಿಂದ ಕಾಣುವ ಕುತೂಹಲ ಮತ್ತು ಹಂಬಲ ನಮ್ಮದಾಗಿತ್ತು.

ಅಬುದಾಬಿ ವಿಮಾನನಿಲ್ದಾಣದಲ್ಲಿ ಡಾ. ರಮೇಶ್ ಅವರು ಕಳುಹಿಸಿಕೊಟ್ಟ ಶಿಜೊ ಎಂಬ ಮಲೆಯಾಳಿ, ಸುಶೀಕ್ಷಿತ, ಸಜ್ಜನ್ ಡ್ರೈವರ್ ಬಂದು ವಿನಮ್ರವಾಗಿ ಸ್ವಾಗತಿಸಿ, ನಮ್ಮ ಲಗೇಜುಗಳನ್ನು ಕಾರಿಗೆ ವರ್ಗಾಯಿಸಲು ನೆರವು ನೀಡಿ, ತನ್ನ ಏಳು ಸೀಟಿನ ಭವ್ಯವಾದ ಟೊಯೋಟಾ ಕಾರಿನಲ್ಲಿ ನಮ್ಮನ್ನು ಕುಳ್ಳಿರಿಸಿಕೊಂಡು ಅಲೈನ್ ಹೆದ್ದಾರಿಯನ್ನು ಹಿಡಿದ. ಇಂಗ್ಲೆಂಡಿನಂತಹ ಪುಟ್ಟ ದೇಶದಲ್ಲಿನ ಪುಟ್ಟ ಪುಟ್ಟ ಕಾರುಗಳನ್ನು ಕಂಡಿರುವ ನಮಗೆ, ಪೆಟ್ರೋಲನ್ನು ಇನ್ನಿಲ್ಲದಂತೆ ಕುಡಿದು ಬಿಡುವ ಇಲ್ಲಿಯ ದೈತ್ಯಾಕಾರದ ಕಾರುಗಳು, ಆರು ಎಂಟು ಲೇನ್ ರಸ್ತೆಗಳು, ೧೬೦ ಕಿಮಿ ವೇಗದಲ್ಲಿ ಸಾಗುವ ವಾಹನಗಳು ಅಚ್ಚರಿಯೊಡನೆ ಸ್ವಲ್ಪ ಭಯವನ್ನೂ ಮೂಡಿಸಿತು. ಪೆಟ್ರೋಲ್ ಬೆಲೆ ಎಲ್ಲ ದೇಶಗಳಲ್ಲಿ ಹೆಚ್ಚಾಗಿರುವಾಗ ಇಲ್ಲಿ ಅದರ ಬೆಲೆ ಅಗ್ಗವಾಗಿದೆ. ಹೀಗಾಗಿ ಈ ದೇಶದಲ್ಲಿ ನೆಲೆಸಿರುವ ಜನಕ್ಕೆ ಅದರ ಬಗ್ಗೆ ಚಿಂತೆಯೇ ಇಲ್ಲ. 'ಘೋಡಾ ಹೈ ಮೈದಾನ್ ಹೈ' ಎಂಬ ಹಿಂದಿ ಉಕ್ತಿ ನೆನಪಿಗೆ ಬಂತು. ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಯೂರೋಪಿನ ಹಲವಾರು ದೇಶಗಳು ಈಗ ಚಿಕ್ಕ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತಿರುವಾಗ ಈ ಅರಬ್ಬರು ಮತ್ತು ಅಮೆರಿಕನ್ನರು ಭಾರೀಗಾತ್ರದ ಕಾರುಗಳಲ್ಲಿ ಓಡಾಡುತ್ತಿದ್ದಾರೆ. ನಗರ-ನಗರಗಳನ್ನು ಜೋಡಿಸಿರುವ ಹೆದ್ದಾರಿಗಳಲ್ಲಿ ನೂರಾರು ಮೈಲಿ ಉದ್ದದವರೆಗೆ ಸಾಲು ವಿದ್ಯುತ್ ದೀಪಗಳನ್ನು ಇಡೀ ರಾತ್ರಿ ಹಚ್ಚುತ್ತಾರೆ. ಪ್ರಪಂಚದ ಸಂಪನ್ಮೂಲದ ಬಳಕೆಯ ಬಗ್ಗೆ, ಪರಿಸರದ ಬಗ್ಗೆ ಕಾಳಜಿ ಇವರಿಗಿದೆಯೇ ಎಂಬ ಅನುಮಾನ ಉಂಟಾಗುವುದು ಸಹಜ. ಇತ್ತೀಚಿನ ಜಾಗತಿಕ ತಾಪಮಾನದ ಬಗ್ಗೆ ಚರ್ಚಿಸುವ ಕಾಪ್ ೨೮ ಎಂಬ ೨೦೨೩ ವರ್ಷದ ಸಮಾವೇಶವನ್ನು ದುಬೈನಲ್ಲಿ ನಡೆಸಿದ್ದು ಅದನ್ನು ಹಲವಾರು ದೇಶಗಳು ಪ್ರಶ್ನಿಸಿವೆ. ಈ ಅರಬ್ ರಾಷ್ತ್ರ ೨೦೫೦ರ ಹೊತ್ತಿಗೆ ತಮ್ಮ ಫಾಸಿಲ್ ಇಂಧನದ ಉಪಯೋಗ ಅರ್ಧದಷ್ಟು ಕಡಿಮೆಮಾಡಿ ಪರಿಸರಕ್ಕೆ ಪೂರಕವಾಗುವ ಮತ್ತು ಕಾರ್ಬನ್ ಹೆಜ್ಜೆ ಗುರುತನ್ನು ಕಡಿಮೆಮಾಡುವ ನಿರ್ಧಾರವನ್ನು ಕೈಗೆತ್ತಿಕೊಂಡಿರುವುದು ಸಮಾಧಾನಕರವಾದ ವಿಚಾರ. ಈ ಆಲೋಚನಗಳ ನಡುವೆ ಪ್ರಯಾಣಮಾಡಿ ಒಂದು ಗಂಟೆಯ ಸಮಯದನಂತರ ಒಂದು ಚಿಕ್ಕ ಊರನ್ನು ಹೊಕ್ಕು ಅಲ್ಲಿರುವ ಅಂಗಡಿಸಾಲಿನಲ್ಲಿದ್ದ ಚಿಕ್ಕ ರೆಸ್ಟೋರಾಂಟಿನಲ್ಲಿ ಶಿಜೊ ನೀಡಿದ ಆದೇಶದ ಮೇಲೆ ಒಬ್ಬ ಮಲೆಯಾಳಿ ಹುಡುಗ ಮೂರು ಕಪ್ ಖಡಕ್ ಚಾ ವನ್ನು ಕಾರಿಗೇ ತಂದುಕೊಟ್ಟ. ಒಂದೆರಡು ಗುಟುಕು ಹೀರಿದಾಗ ಚಾ ಒಳಗಿನ ಏಲಕ್ಕಿ ಘಮಲು, ಸಿಹಿ ರುಚಿ, ಗಟ್ಟಿಯಾದ ಹಾಲು ನನ್ನನ್ನು ಕೂಡಲೇ ಕೇರಳದ ವೈನಾಡಿಗೆ ಒಯ್ದಿತ್ತು. ಪಟ್ಟ-ಪಟ್ಟಿ ಪಂಚೆಯ ಮಲಯಾಳಿ ಕಾಕಾಗಳು, ಹಸಿರು ಬೆಟ್ಟಗಳು, ಹೆಮ್ಮರಗಳು ಅದರ ನೆರಳಲ್ಲಿ ಬೆಳೆಯುವ, ಏಲಕ್ಕಿಗಿಡಗಳು ಅದರ ಉದ್ದದ ಹಸುರಿನ ತೆನೆಗಳು ಎಲ್ಲಾ ನನ್ನ ಸ್ಮೃತಿಯಲ್ಲಿ ಹಾದುಹೋದವು. ವಾಸ್ತವದಲ್ಲಿ ನೋಡಿದಾಗ ನನ್ನ ಸುತ್ತ ಮರುಭೂಮಿಯ ರಾಶಿರಾಶಿ ಮರಳು, ಮಸೀದಿಗಳು, ಮಿನಾರೆಟ್ಟುಗಳು, ಅರಬ್ ಜನರು! ಎಲ್ಲಿಯ ಖಡಕ್-ಏಲಕ್ಕಿ ಚಾ ಎಲ್ಲಿಯ ಮರಳುಗಾಡು! ಎತ್ತಣಿಂದೆತ್ತ ಸಂಬಂಧವಯ್ಯ?

ದಾರಿಯುದ್ದಕ್ಕೂ ಬಂಜರು ಭೂಮಿ. ಅಲೆ ಅಲೆಯಾಗಿ ಹಬ್ಬಿರುವ ಮರಳಿನ ದಿಣ್ಣೆಗಳು. ಮರಳಲ್ಲಿ ಗಾಳಿ ಕೆತ್ತಿದ ಚಿತ್ತಾರಗಳು, ಮಕ್ಕಳು ಸ್ಲೇಟಿನ ಮೇಲೆ ಹಳೆ ಚಿತ್ರಗಳನ್ನು ಅಳಿಸಿ ಮತ್ತೆ ಹೊಸ ಚಿತ್ರಗಳನ್ನು ಮೂಡಿಸುವಂತೆ ಗಾಳಿ ಮತ್ತು ಮರಳು ಆಟವಾಡುತ್ತಿದ್ದವು. ನಡುವೆ ನಿರ್ಜನ ಪ್ರದೇಶಗಳು, ಹತ್ತಾರು ಮೈಲಿಗೊಂದು ನಾಗರೀಕತೆಯ ಹತ್ತಿರ ನಾವಿದ್ದೇವೆಂದು ಖಾತ್ರಿಪಡಿಸುವ ಪುಟ್ಟ ತಲೆ, ಎರಡು ಕಾಲು ಮತ್ತು ಎರಡು ಕೈಯನ್ನು ಕೆಳಗೆ ಬಿಟ್ಟಂತಹ ಎಲೆಕ್ಟ್ರಿಕ್ ಪೈಲಾನ್ ಗಳು, ಅದರಿಂದ ತೂಗಿರುವ ವಿದ್ಯುತ್ ತಂತಿಗಳು ಇವು ಇಲ್ಲಿಯ ನೋಟ. ಕೆಲವೊಮ್ಮೆ ಸಮತಟ್ಟಾದ ಪ್ರದೇಶದಲ್ಲಿ ರಸ್ತೆ ಬದಿಯ ಬೇಲಿಯ ಆಚೆಗೆ ತೀವ್ರ ಗತಿಯಲ್ಲಿ ಸಾಗುವ ವಾಹನಗಳನ್ನು ನಿರ್ಲಕ್ಷಿಸಿ ಕೆಲವು ಒಂಟೆಗಳು ತಮ್ಮದೇ ಸಾವಧಾನದಲ್ಲಿ ಒಣಗಿದ್ದ ಕುರುಚಲು ಹುಲ್ಲನ್ನು ಮೇಯುತ್ತಾ, ಹುಲ್ಲನ್ನು ಈ ದವಡೆಯಿಂದ ಆ ದವಡೆಗೆ ವರ್ಗಾಯಿಸಿ, ನಮ್ಮ ಹಳ್ಳಿಯ ವೃದ್ದರು ಹೊಗೆಸೊಪ್ಪನ್ನು ಮೇಯುವಂತೆ ಜಗಿಯುತ್ತಾ ದಿವ್ಯ ಧ್ಯಾನ ಸ್ಥಿತಿಯಲ್ಲಿ ಮಗ್ನರಾಗಿದ್ದವು. ಒಂಟೆಗಳಿಗೆ ಅವಸರ ಎಂಬ ಪದ ಅದರ ಡಿಕ್ಷನರಿಯಲ್ಲಿ ಇಲ್ಲ ಎಂಬುದು ನನ್ನ ಅನಿಸಿಕೆ. ಇಂತಹ ಮಂದಗತಿಯ ಒಂಟೆಗಳನ್ನು ಹಿಡಿದು ಅರಬ್ಬರು ಹೇಗೆ ಕ್ಯಾಮಲ್ ರೇಸ್ ನಡೆಸುತ್ತಾರೋ ನಾ ತಿಳಿಯೆ. ಹಿಂದೆ ಶಿಶುಗಳನ್ನು ಒಂಟೆಯ ಹೊಟ್ಟೆಗೆ ಕಟ್ಟಿ ಕ್ಯಾಮಲ್ ರೇಸ್ ನಡೆಸುತ್ತಿದ್ದು ಈಗ ಆ ಪದ್ದತಿಯನ್ನು ಬಿಟ್ಟು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳೆಸುತ್ತಿದ್ದಾರೆ ಎಂದು ಕೇಳಿದ್ದೇನೆ. ಮಕ್ಕಳು ಹೆದರಿಕೆಯಿಂದ ಚೀರುತ್ತಿದ್ದಾಗ ಗಾಬರಿಗೊಂಡ ಒಂಟೆಗಳು ಜೋರಾಗಿ ಓಡುತ್ತಿದ್ದವು. ಆ ಕ್ರೂರ ಪದ್ಧತಿಯನ್ನು ಈಗ ಕೈ ಬಿಟ್ಟಿರುವುದು ಒಳ್ಳೆಯ ನಿರ್ಧಾರ.

ನಾವು ಅಬುದಾಬಿಯಿಂದ ಅಲೈನ್ ವರಿಗೆ ಕ್ರಯಿಸಿದ ದಾರಿಯಲ್ಲಿ ನೂರಾರು ಕಿಲೋ ಮೀಟರ್ ರಸ್ತೆಯ ಎರಡು ಬದಿಯಲ್ಲಿ ಹಸಿರು ಮರಗಳ ಸಾಲು ಮತ್ತು ರಸ್ತೆ ಮಧ್ಯದ ಡಿವೈಡರ್ ಜಗದಲ್ಲಿ ಸಾಲಾಗಿ ನಿಂತ ಈಚಲು ಮರ ಜಾತಿಯ ಡೇಟ್ಸ್ ಮರಗಳನ್ನು ಕಂಡು ಸೋಜಿಗವಾಯಿತು. "ಬೆಟ್ಟದ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ?" ಎಂಬ ದಾಸರ ಪದ ನೆನೆಪಿಗೆ ಬರುತ್ತಿದಂತೆ, ಶಿಜೊ "ಸಾರ್ ರಸ್ತೆ ಪಕ್ಕದಲ್ಲಿರುವ ಮರದ ಬುಡಗಳನ್ನು ಗಮನಿಸಿ, ಅಲ್ಲಿ ಇರುವ ಪೈಪ್ ಗಳನ್ನೂ ನೋಡಿ, ಅರಬ್ಬರು ನೂರಾರು ಮೈಲಿ ಪೈಪ್ಗಳನ್ನು ಎಳೆದು ಈ ಗಿಡಗಳಿಗೆ ಮರುಭೂಮಿಯಲ್ಲಿ ನೀರುಣಿಸುತ್ತಿದ್ದಾರೆ” ಎಂದು ನನ್ನ ಗಮನವನ್ನು ಸೆಳೆದ. ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದಾಗ ದೈವವನ್ನಷ್ಟೇ ನೆನೆಯುವ ನಮ್ಮ ಆಧ್ಯಾತ್ಮಿಕ ಪ್ರಜ್ಞೆಯಿಂದ ಹೊರಬಂದು ವಾಸ್ತವಬದುಕಿನ ಮುಂದಿರುವ ಮನುಷ್ಯ ಪ್ರಯತ್ನವನ್ನು ಕಂಡು ಬೆರಗಾದೆ. ಮನದಲ್ಲೇ ಭೇಷ್ ಎಂದು ಪ್ರಶಂಸಿದೆ. ಇಲ್ಲಿ ಮಳೆ ಹೆಚ್ಚಾಗಿ ಬರುವುದಿಲ್ಲ, ಇದು ಮರುಭೂಮಿ ಹೀಗಿದ್ದರೂ ನೀರು ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ದೇಶದಲ್ಲಿ ನದಿಗಳಲ್ಲಿಲ್ಲ. ಹಾಜರ್ ಬೆಟ್ಟ ಹಾದುಹೋಗುವ ದಕ್ಷಿಣ ಪ್ರದೇಶದಲ್ಲಿ ಕೆಲವು ಅಣೆಕಟ್ಟುಗಳನ್ನು ಕಟ್ಟಿ ನೀರನ್ನು ಶೇಖರಿಸಿದ್ದಾರೆ. ಬಹಳಷ್ಟು ವೇಸ್ಟ್ ನೀರನ್ನು ರಿಸೈಕಲ್ ಮಾಡಿ ಗಿಡ ಮರಗಳಿಗೆ ಬಳಸುತ್ತಾರೆ. ಉಳಿದಂತೆ ಇವರು ಸಮುದ್ರದ ನೀರನ್ನು ಆಧುನಿಕ ತಂತ್ರಜ್ಞಾನದಲ್ಲಿ ದೇಶದುದ್ದಕ್ಕೂ ಸುಮಾರು ೭೦ ಡೀಸಲಿನೇಷನ್ ಘಟಕಗಳನ್ನು ಸ್ಥಾಪಿಸಿ ಅದರಲ್ಲಿ ಸಿಹಿ ನೀರನ್ನು ಉತ್ಪತ್ತಿ ಮಾಡುತ್ತಾರೆ. ಪ್ರವಾಸಿತಾಣಗಳಲ್ಲಿ, ನಗರದ ಪ್ರಮುಖ ರಸ್ತೆಗಳಲ್ಲಿ ಹೂವಿನ ಗಿಡಗಳನ್ನು ನೆಟ್ಟು ಅಂದಗೊಳಿಸಿದ್ದಾರೆ. ದುಬೈನಲ್ಲಿರುವ ಮಿರಾಕಲ್ ಗಾರ್ಡನ್ ಎಂಬ ಅದ್ಭುತ ಹೂಗಳ ಉದ್ಯಾನ ಇವರ ನಿಸರ್ಗಪ್ರೀತಿಗೆ ಸಾಕ್ಷಿಯಾಗಿದೆ. ಇದು ದುಬೈಗೆ ಹೋಗುವ ಎಲ್ಲ ಪ್ರವಾಸಿಗಳು ನೋಡಲೇ ಬೇಕಾದ ಉದ್ಯಾನವನ.

ನಾವು ಅಲೈನ್ ನಗರವನ್ನು ಪ್ರವೇಶಿಸಿದಂತೆ ಅದು ಸಂಯುಕ್ತ ಅರಬ್ ರಾಷ್ಟ್ರದಲ್ಲಿನ ಅತ್ಯಂತ ಹಸಿರು ನಗರವೆಂದು ತಿಳಿಯುತ್ತದೆ. ನಮ್ಮ ಮಿತ್ರರಾದ ಡಾ.ರಮೇಶ್ ಅವರು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ತಜ್ಞ ವೈದ್ಯರಾಗಿದ್ದು ಅವರಿಗೆ ಅನುಕೂಲವಾದ ಮನೆಯನ್ನು ಸರ್ಕಾರ ಒದಗಿಸಿದೆ. ಇಲ್ಲಿ ಅನುಕೂಲವಾದ ಎಂಬ ಪದಕ್ಕೆ ವಿಶೇಷ ಅರ್ಥ ಇರಬಹುದು. ನಮ್ಮ ಈ ಅತಿಥಿಗಳ ಬಹು ಅಂತಸ್ತಿನ ಮನೆ ಸುಂದರವಾಗಿ, ಹಿರಿದಾಗಿ ಭವ್ಯವಾಗಿದೆ. ಅರಬ್ ಜನರು ತಮ್ಮ ವಾಸಕ್ಕೆಂದು ಕಟ್ಟಿಕೊಂಡಿದ್ದು ನಂತರದಲ್ಲಿ ಅದನ್ನು ಬಾಡಿಗೆ ಕೊಟ್ಟಂತೆ ಕಾಣುತ್ತದೆ. ಕುಟುಂಬವರ್ಗದವರಿಗೆ, ಹೆಂಗಸರಿಗೆ ಒಂದು ಪ್ರವೇಶ ದ್ವಾರ, ಕುಟುಂಬದ ಹೊರಗಿನ ಗಂಡಸರಿಗೆ ಇನ್ನೊಂದು ಪ್ರವೇಶದ್ವಾರ, ಕೆಲಸದವರು ಪ್ರವೇಶಿಸಲು ಬೇರೊಂದು ದ್ವಾರ! ಇನ್ನು ಮನೆಯೊಳಗೆ ಲೆಕ್ಕವಿಲ್ಲದಷ್ಟು ಕೋಣೆಗಳು ಎನ್ನಬಹುದು. ಇಲ್ಲಿ ಎಲ್ಲರ ಮನೆಯ ಕಾಂಪೌಂಡ್ ಗೋಡೆ ಎತ್ತರವನ್ನು ಗಮನಿಸಿದರೆ ಚಿತ್ರದುರ್ಗದ ಕೋಟೆ ಅಥವಾ ಬೆಂಗಳೂರಿನ ಸೆಂಟ್ರಲ್ ಜೈಲ್ ಜ್ಞಾಪಕಕ್ಕೆ ಬರುತ್ತದೆ. ಮನೆಯೊಳಗೇ ಯಾರಿದ್ದಾರೆ, ಮಕ್ಕಳಿದ್ದಾರೆಯೇ, ಗಿಡ ಮರಗಳು ಹೇಗಿವೆ ಇದರ ಸುಳಿವೇ ಸಿಗುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ಮಾತನಾಡಿಸುವುದಿರಲಿ ಕಾಣುವುದೂ ಕಷ್ಟ. ಇಡೀ ಮನೆ ತನಗೆ ತಾನೇ ಬುರುಕಾ ಹಾಕಿ ಕೂತಂತೆ ಭಾಸವಾಗುತ್ತದೆ.

ಡಾ. ರಮೇಶ್ ಮತ್ತು ಅನು ಅವರ ಮನೆಯಲ್ಲಿ ಆಕರ್ಷಕವಾಗಿರುವುದು ಮನೆಯ ಮುಂದಿನ ಹಸುರಿನ ಹಾಸು ಮತ್ತು ಗಿಡಗಳು, ಮರಗಳು, ಚಿಲಿಪಿಲಿ ಗುಟ್ಟುವ ತರಾವರಿ ಹಕ್ಕಿಗಳು. ಇಲ್ಲಿ ದಾಳಿಂಬೆ, ನಿಂಬೆ ಗಿಡ, ನುಗ್ಗೆಕಾಯಿ ಮರಗಳು, ದಾಸಿವಾಳ ಮತ್ತು ಕಣಗಲೆ ಗಿಡಗಳು ಇವೆ. ಅವರ ಕಾಂಪೌಂಡ್ ಒಳಗೆ ನಿಂತಾಗ ನಾವು ಒಂದು ಮರುಭೂಮಿಯಲ್ಲಿದ್ದೇವೆ ಎಂಬ ವಿಚಾರ ಮರೆತುಹೋಗುತ್ತದೆ. ಅಂದಹಾಗೆ ಈ ದೇಶದ ಒಳನಾಡಿನಲ್ಲಿ ನವೆಂಬರ್ ತಿಂಗಳಿಂದ ಮೇ ತಿಂಗಳಿನವರೆಗೆ ಹವಾಮಾನ ಒಂದು ಹದದಲ್ಲಿ ಇದ್ದು ಆಮೇಲೆ ಕಡು ಬೇಸಿಗೆ ಶುರುವಾಗುತ್ತದೆ. ಬೇಸಿಗೆಯಲ್ಲಿ ನೀರುಣಿಸಿದರೂ ಬಿಸಿಲಿನ ಝಳಕ್ಕೆ ಒಣಗಿದ ಮರ ಗಿಡಗಳು ಚಳಿಗಾಲಕ್ಕೆ ಮತ್ತೆ ಚಿಗುರುತ್ತವೆ ಎಂದು ಕೇಳಿದಾಗ ಖುಷಿಯಾಯಿತು. ನಾವು ಇಲ್ಲಿ ತಂಗಿದ್ದಾಗ ಅಲೈನ್ ನಗರದಲ್ಲಿ ಒಂದು ರಾತ್ರಿ ವಿಪರೀತ ಬಿರುಗಾಳಿ, ಗುಡುಗು ಸಿಡಿಲಿನೊಂದಿಗೆ ಹುಯ್ದ ಆಲಿಕಲ್ಲು ಮಳೆ ಗಾಬರಿಹುಟ್ಟಿಸಿತು. ಒಂದೊಂದು ಅಲಿ ಕಲ್ಲು ಒಂದು ಟೆನಿಸ್ ಬಾಲ್ ಅಳತೆಗಿಂತ ಹೆಚ್ಚಿದ್ದು ಕೆಲವು ಒಂದು ಇಟ್ಟಿಗೆ ಗಾತ್ರದ್ದಾಗಿದ್ದು ಬೀಸುವ ಬಿರುಗಾಳಿಯಲ್ಲಿ ರಮೇಶ್ ಅವರ ಮನೆಯ ಕೆಲವು ಸೆಕ್ಯೂರಿಟಿ ಕ್ಯಾಮರಾಗಳನ್ನು, ಹೂವಿನ ಕುಂಡಗಳನ್ನು ಒಡೆದು ಚೂರು ಮಾಡಿದವು. ಅಲೈನ್ ನಗರದಲ್ಲಿ ಮರುದಿನ ಜಜ್ಜಿ ಹೋದ ಕಾರುಗಳನ್ನು, ಪುಡಿಯಾದ ಗಾಜುಗಳನ್ನು ನೋಡಿ ಚಕಿತರಾದೆವು. ರಸ್ತೆಗಳಲ್ಲಿ ನೀರು ನಿಂತು, ಚರಂಡಿಗಳು ರಭಸದ ನದಿಗಳಾಗಿದ್ದವು. ಸರಕಾರದ ಆದೇಶದಂತೆ ಒಂದೆರಡು ದಿನ ಎಲ್ಲ ಮನೆಯಲ್ಲೇ ಉಳಿಯಬೇಕಾಯಿತು. ಈ ರೀತಿಯ ಅನಿರೀಕ್ಷಿತ ಮಳೆ, ಫ್ಲಾಶ್ ಫ್ಲಡ್ ಇಲ್ಲಿ ಆಗಾಗ್ಗೆ ಬರುವುದು ಉಂಟು. ನಾನು ವಾಟ್ಸಾಪಿನ ವಿಡಿಯೋ ಚಿತ್ರಗಳನ್ನು ಹಿಂದೆ ನೋಡಿದ್ದೆ. ರಮೇಶ್ ದಂಪತಿಗಳು ತಿಳಿಸಿದಂತೆ ಈ ರೀತಿಯ ಅತಿಯಾದ ಪ್ರಕೃತಿ ವಿಕೋಪ ವಿರಳ. ಅದರ ಮಧ್ಯೆ ನಾವಲ್ಲಿದ್ದು ಪಡೆದ ಅನುಭವ ನಮ್ಮ ಪಾಲಿಗೆ ವಿಶೇಷವಾಗಿತ್ತು. ಇಂಗ್ಲೆಂಡಿನಲ್ಲಿ ಸದಾ ಸುರಿಯುವ ಮಳೆಯನ್ನು ತಪ್ಪಿಸಿಕೊಂಡು ಮರುಭೂಮಿಗೆ ಹೋದರೂ ನಮ್ಮ ದುರಾದೃಷ್ಟಕ್ಕೆ ಅಲ್ಲೂ ಮಳೆ ಬರಬೇಕೆ? ಇನ್ನೊಂದು ಸ್ವಾರಸ್ಯಕರವಾದ ಸಂಗತಿ; ಈ ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ 'ಕ್ಲೌಡ್ ಸೀಡಿಂಗ್' ಎಂಬ ನೂತನ ತಂತ್ರಜ್ಞಾನದಲ್ಲಿ ವಿಶೇಷವಾದ ವಿಮಾನದಲ್ಲಿ ಮೇಲೇರಿ ತಮ್ಮ ಆಕಾಶದಲ್ಲಿ ಹಾದು ಹೋಗುತ್ತಿರುವ ದಟ್ಟ ಮೋಡಗಳ ಮೇಲೆ ಕೆಲವು ರಾಸಾಯನಿಕ ಲವಣೆಗಳನ್ನು ಉದುರಿಸಿ ಆವಿಗಟ್ಟಿರುವ ಮೋಡವನ್ನು ಕರಗಿಸಿ ಮಳೆಬೀಳುವಂತೆ ಮಾಡುತ್ತಾರೆ. ಈ ರೀತಿಯ ಕೃತಕ ಮಳೆ ಬರಿಸುವ ಪ್ರಯತ್ನವನ್ನು ಆಗಾಗ್ಗೆ ಮಾಡುತ್ತಾರೆ ಎಂದು ತಿಳಿದು ಅಚ್ಚರಿಗೊಂಡೆ. ಪ್ರಕೃತಿಗೆ ತನ್ನದೇ ಆದ ನಿಯಮಗಳಿವೆ, ಅದನ್ನು ಹತ್ತಿಕ್ಕಿ ಮನುಷ್ಯ ತನ್ನ ಅನುಕೂಲಕ್ಕೆ ಹಸ್ತಾಕ್ಷೇಪ ಮಾಡುವು ಸರಿಯೇ? ಅದರ ಪರಿಣಾಮಗಳೇನು? ಎಂಬ ನೈತಿಕ ಪ್ರಶ್ನೆಗಳು ನನ್ನನ್ನು ಕಾಡಿವೆ.

ನಮ್ಮ ಗೆಳೆಯರಾದ ರಮೇಶ್ ದಂಪತಿಗಳು ತಮ್ಮ ಹಸಿರಾದ ಅಲೈನ್ ನಗರವನ್ನು ಕೂಲಂಕುಷವಾಗಿ ನಮಗೆ
ಪರಿಚಯಿಸಿದರು. ಅಲೈನ್ ಮೈಸೂರು ಮತ್ತು ಧಾರವಾಡದ ರೀತಿಯಲ್ಲಿ ಸಾಂಸ್ಕೃತಿಕ ಕೇಂದ್ರ. ಇಲ್ಲಿ ಸ್ಥಳೀಯ ಎಮಿರಾಟಿಗಳೇ ಹೆಚ್ಚು. ದುಬೈ ಅಬುದಾಬಿ ನಗರದಷ್ಟು ದಟ್ಟವಾಗಿಲ್ಲ ಬದಲಾಗಿ ಮೈಸೂರಿನಂತೆ ವಿಶಾಲವಾಗಿ ಹಬ್ಬಿಕೊಂಡಿದೆ. ಈ ಊರ ಸರಹದ್ದಿನ ಒಳಗೇ ಇರುವ ಮೂರು ಸಾವಿರ ಅಡಿ ಎತ್ತರದ ಝಬೀಲ್ ಹಫೀತ್ ಎಂಬ ಬೆಟ್ಟ ಮೈಸೂರಿನ ಚಾಮುಂಡಿಬೆಟ್ಟವನ್ನು ನೆನಪಿಗೆ ತರುವಂತಿದೆ. ಇಲ್ಲಿ ಯಾವುದೇ ಕಟ್ಟಡವನ್ನು ಮೂರು ಅಂತಸ್ತಿನ ಮೇಲೆ ಕಟ್ಟುವಂತಿಲ್ಲ. ಎಲ್ಲ ಕಟ್ಟಡಗಳ ವಿನ್ಯಾಸ ಸ್ಥಳೀಯ ಅರಬ್ ಶೈಲಿಯಲ್ಲಿ ಕಟ್ಟಲಾಗಿದ್ದು ಸುಂದರವಾಗಿದೆ. ನಗರದ ಬಹುಪಾಲು ರಸ್ತೆಗಳು ವಿಶಾಲವಾದ ಶುಭ್ರವಾದ ಜೋಡಿರಸ್ತೆಗಳು. ರಸ್ತೆಗಳ ಬದಿಯಲ್ಲಿ ಸಾಲು ಮರಗಳು ಮತ್ತು ಸಾಕಷ್ಟು ಹೂವಿನ ಗಿಡಗಳು ಇದ್ದು ಸುಂದರವಾಗಿದೆ. ದುಬೈನಲ್ಲಿ ಕಾಣುವ ಆಧುನಿಕ ಗ್ಲಾಸ್ ಮತ್ತು ಸ್ಟೀಲ್ ಬಳಸಿ ಕಟ್ಟಿರುವ ಸ್ಕೈ ಸ್ಕ್ರೇಪರ್ ಕಟ್ಟಡಗಳು ಇಲ್ಲಿ ಕಾಣುವುದಿಲ್ಲ. ಅರಬ್ ದೊರೆಗಳು ತಮ್ಮ ಎರಡನೇ ಮನೆಯನ್ನು, ನಿವೃತ್ತ ಪ್ರತಿಷ್ಠಿತರು ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿ ಎಲ್ಲ ವಾಹನ ಚಾಲಕರು ನಿಯಮವನ್ನು ಪಾಲಿಸುತ್ತಾರೆ, ಬೆಂಗಳೂರಿನ ರಸ್ತೆಯಲ್ಲಿ ಕಾಣುವ ಅಸಹನೆ, ನುಗ್ಗಾಟ, ಕರ್ಕಶಗಳಿಲ್ಲ. ವಾಹನ ಓಡಿಸುವವರು ನಮ್ಮ ಇಂಡಿಯಾ ಪಾಕಿಸ್ತಾನದ ಡ್ರೈವರ್ಗಳೇ, ಇವರೆಲ್ಲ ಅಂತಹ ಸುಶಿಕ್ಷಿತರಲ್ಲ. ನಮ್ಮ ಡ್ರೈವಿಂಗ್ ಶೈಲಿ, ಸ್ವಭಾವ ಅಲ್ಲಿಗೂ ಇಲ್ಲಿಗೂ ಹೇಗೆ ಬದಲಾಗಿದೆ ಎಂಬ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಮೂಡಿದವು. ವ್ಯತಾಸ ಇಷ್ಟೇ; ಇಂಡಿಯದಲ್ಲಿ ಲಂಚಕೋರತನವಿದೆ, ಶಿಕ್ಷೆ ವಿಧಿಸಲು ಸಾಧ್ಯವಿಲ್ಲ, ವಿಪರೀತ ಜನಸಂದಣಿ, ನಮ್ಮ ಮಹಾ ನಗರಗಳು ತೀವ್ರ ಗತಿಯಲ್ಲಿ ಹತೋಟಿ ತಪ್ಪಿ ಬೆಳೆಯುತ್ತಿವೆ, ರಸ್ತೆಯನ್ನು ಹಿಗ್ಗಿಸಲು ಸಾಧ್ಯವಿಲ್ಲ, ಹಿಗ್ಗಿಸಿದರೆ ಇನ್ನು ಹೆಚ್ಚು ವಾಹನಗಳು ಬಂದು ಸೇರಿಕೊಳ್ಳುತ್ತವೆ. ಮೋಟಾರ್ ಬೈಕುಗಳು, ಆಟೋ ರಿಕ್ಷಾಗಳು, ಕಾರುಗಳು, ಓಲಾ ಊಬರ್ ಟ್ಯಾಕ್ಸಿಗಳು, ಬಸ್ಸುಗಳು, ಲಾರಿಗಳು ಹೀಗೆ ರಸ್ತೆಯಲ್ಲಿ ತರಾವರಿ ವಾಹನಗಳಿವೆ. ಎಲ್ಲರಿಗೂ ಅವಸರ, ಶಿಸ್ತಿನ ಬಗ್ಗೆ ತಿಳುವಳಿಕೆ ಇಲ್ಲ, ಇದ್ದರೂ ಪಾಲಿಸುವುದಿಲ್ಲ. ಒಟ್ಟಾರೆ ಅವ್ಯವಸ್ಥೆಯನ್ನು ಒಪ್ಪಿಕೊಂಡು ಬದುಕುತ್ತಿದ್ದೇವೆ. ಬೆಂಗಳೂರಿನಲ್ಲೇ ಎಲ್ಲಾ ಬೆಳೆವಣಿಗೆಯನ್ನು ಉತ್ತೇಜಿಸುವ ಬದಲು ಡಿಸ್ಟ್ರಿಕ್ಟ್ ಕೇಂದ್ರಿತ ಬೆಳವಣಿಗೆ ನಡೆಯಬೇಕಾಗಿದೆ. ಆಯೋಜಕರಿಗೆ ದೂರ ದೃಷ್ಟಿ ಬೇಕಾಗಿದೆ. ಭಾರತ ಆರ್ಥಿಕ ಪ್ರಗತಿಯನ್ನು ದಾಖಲಿಸಿದ್ದರೂ ಅದು ಇನ್ನೂ ಅಭಿವೃದ್ದಿಗೊಳ್ಳಬೇಕಾದ ದೇಶ.

***

ಮುಂದುವರೆಯುವುದು…. ಈ ಬರಹದ ೨ನೇ ಭಾಗವನ್ನು ಮುಂದಿನ ಶುಕ್ರವಾರ ನಿರೀಕ್ಷಿಸಿ

ಕೈ ಹಿಡಿದು ನಡೆಸಿದ ಗುರುವಿನ ಕುರಿತು..

ಎಲ್ಲರಿಗೂ ನಮಸ್ಕಾರ,
ನಾನು ಇಂದು ಬರೆಯುತ್ತಿರುವುದು, ನನ್ನ ಪ್ರೀತಿಯ ಗುರುಗಳಾದ ಡಾ. ಶಾಲಿನಿ ರಘುನಾಥ್ ಅವರ ಕುರಿತು. ಡಾ. ಶಾಲಿನಿ ರಘುನಾಥ್ ಅವರು
ನಮ್ಮ ಕನ್ನಡ ನಾಡಿನ ಹೆಸರಾಂತ ಜಾನಪದ ವಿದ್ವಾಂಸರು. ಭಾಷಾ ವಿಜ್ಞಾನದಲ್ಲಿ ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ.
ಜಾನಪದ ಸಂಶೋಧನೆ ಮತ್ತು ಸಂಗ್ರಹಕಾರ್ಯದಲ್ಲೂ ಅವರು ತಮ್ಮ ವಿಶೇಷ ಛಾಪು ಮೂಡಿಸಿದ್ದಾರೆ. ತಮ್ಮ ಉದ್ಯೋಗವನ್ನು ತಪಸ್ಸಿನಂತೆ
ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಧ್ಯಯನದ ರುಚಿ ಹತ್ತಿಸಿದವರು. ಕಲಿತ ವಿದ್ಯೆಯನ್ನು ಬದುಕಿಗೆ ಅಳವಡಿಸಿಕೊಂಡು ನಿರಂತರವಾಗಿ ಚಿಂತನೆ ಮಾಡುವ ಹಾದಿಯಲ್ಲಿ ನನ್ನನು ಕೈಹಿಡಿದು ನಡೆಸಿದವರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರ ವಿದ್ಯಾರ್ಥಿಯಾಗಿ ನಾನು
ಕಳೆದ ಎರಡು ವರ್ಷಗಳು ಆ ನಂತರದ ಈ 14 ವರ್ಷಗಳೂ ನನ್ನನು ಅದೇ ಕಲಿಕೆಯ ಹಾದಿಯಲ್ಲಿಟ್ಟಿವೆ. ಅಂತಹ ಗುರುವಿನ ಜೊತೆಗೆ ನನ್ನ ಒಡನಾಟದ ಕುರಿತು ನನ್ನ ಈ ಲೇಖನ.
- ಅಮಿತಾ ರವಿಕಿರಣ್
ಚಿತ್ರಕೃಪೆ; ಗೂಗಲ್
ಪದವಿಯು ಮುಗಿದು ನಾಲ್ಕು ವರ್ಷಗಳ ಧೀರ್ಘ ಅಂತರದ ನಂತರ ಮತ್ತೆ ಕಾಲೇಜ್ ಸೇರಿಕೊಳ್ಳುವ ಸುಯೋಗ ಬಂದಿತ್ತು ಕಲಿಯಬೇಕೆಂಬ ಆಸೆ
ಇತ್ತಾದರೂ ಅದನ್ನು ಆಚರಣೆಗೆ ಹೇಗೆ ತರುವುದು ಎಂಬುದು ತಿಳಿದಿರಲಿಲ್ಲ. ಪದವಿ ಪಡೆದಿದ್ದು ಸಂಗೀತದಲ್ಲಿ ಆದರೆ ಸ್ನಾತಕೋತ್ತರ
ಅಧ್ಯಯನವನ್ನು ಸಂಗೀತದಲ್ಲೇ ಮುಂದುವರಿಸುವ ಮನಸ್ಸಿರಲಿಲ್ಲ ಸಂಗೀತ ಬಿಡುವ ಮನಸ್ಸು ಇರಲಿಲ್ಲ. ಈ ನಡುವೆ ಅತಿಯಾಗಿ ನನ್ನ ಮನಸನ್ನ
ಆವರಿಸಿದ್ದ ವಿಷಯ ಜಾನಪದ. ಆಗ ನನಗೆ ಜನಪದ ಜಾನಪದ ದ ನಡುವಿನ ವ್ಯತ್ಯಾಸವು ತಿಳಿದಿರಲಿಲ್ಲ.
ನನ್ನ ದನಿ ಕೇಳಿದ ಹಲವು ಮಂದಿ ಜನಪದ ಸಂಗೀತವನ್ನು ಮುಂದುವರಿಸಿಕೊಂಡು ಹೋಗು ಎಂದು ಹೇಳುತ್ತಿದ್ದರು ಮತ್ತು ಯಾವ
ಕಾರ್ಯಕ್ರಮಕ್ಕೆ ಹೋದರೂ ಜಾನಪದ ಗೀತೆಗಳನ್ನು ಹಾಡು ಎಂಬ ಅಪೇಕ್ಷೆ ಮುಂದಿಡುತ್ತಿದ್ದರು. ಆ ಒಂದು ಹಿನ್ನೆಲೆಯಲ್ಲಿ ಜನಪದ ಸಂಗೀತದ
ಬಗೆಗೆ ಏನಾದರು ಹೆಚ್ಚಿನದ್ದು ಕಲಿಯಬೇಕು ಎಂಬ ಸ್ಪಷ್ಟ ಉದ್ದೇಶದೊಂದಿಗೆ ನಾನು ಜಾನಪದ ಅಧ್ಯಯನ ಪೀಠದ ಹೊಸ್ತಿಲನ್ನು ತುಳಿದಿದ್ದೆ.

ಆ ದಿನ ನಮ್ಮ ಪ್ರವೇಶ ಪ್ರಕ್ರಿಯೆ ಆರಂಭವಾದ ದಿನ. ನಾನು ಮೊದಲ ಬಾರಿ ಶಾಲಿನಿ ಮೇಡಂ ಅವರನ್ನು ನೋಡಿದ್ದು ಹಸಿರು ಕೆಂಪಂಚಿನ
ಧಾರವಾಡ ಸೀರೆಯಲ್ಲಿ ನಗು ಮೊಗದಿಂದ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿದ್ದರು. ಅದೆಷ್ಟು ಸರಳತೆಯಿಂದ ಅವರು ನಮ್ಮೊಂದಿಗೆ
ಮಾತನಾಡಿದ್ದರೆಂದರೆ, ಅವರು ಅಧ್ಯಯನ ಪೀಠದ ಅಧ್ಯಕ್ಷೆ ಎಂಬುದು ನನಗೆ ತಿಳಿಯಲೇ ಇಲ್ಲ.
ಅಡ್ಮಿಷನ್ ಆಗಿ ಮನೆಗೆ ಹೋದಾಗ ಅದೇ ತಿಂಗಳ ಕಸ್ತೂರಿ ಮಾಸಪತ್ರಿಕೆಯಲಿ ಭಾಷಾ ಶಾಸ್ತ್ರ ಕುರಿತಾದ ಒಂದು ಲೇಖನದಲ್ಲಿ ಅವರ ಹೆಸರು
ಉಲ್ಲೇಖಿಸಲಾಗಿತ್ತು. ಅವರಲ್ಲಿರುವ ಅಪರೂಪದ ಪುಸ್ತಕ ಸಂಗ್ರಹದ ಬಗ್ಗೆ ಲೇಖಕ ತುಂಬಾ ಚನ್ನಾಗಿ ಬರೆದಿದ್ದರು. ಅವರೇ ಇವರು ಎಂದು
ತಿಳಿದಾಗ ಮನಸ್ಸು ಸಂಭ್ರಮಿಸಿತ್ತು.

ಕಾಲೇಜ್ ಶುರುವಾದ ನಂತರ ನಾವು ಅವರನ್ನು ಭೇಟಿ ಮಾಡಲು ಅವರ ಚೇಂಬರ್ ಗೆ ಹೋದಾಗ ಅವರು ಮಾತನಾಡಿದ ಶೈಲಿ, ಅವರ
ಆತ್ಮೀಯತೆ ನನ್ನ ಶಿಕ್ಷಣ ಮುಂದುವರಿಸುವ ಕುರಿತು ಇದ್ದ ಹಲವು ದುಗುಡ ಕಡಿಮೆ ಮಾಡಿದ್ದವು. ಜೊತೆಗೆ ಅಷ್ಟೇ ಕಳಕಳಿಯಲ್ಲಿ ಹೇಳಿದ್ದರು.
ಜಾನಪದವನ್ನು ಸುಲಭ , ಡಿಗ್ರಿ ಮುಗಿಸಲು ಒಂದು ಸರಳ ವಿಷಯ ಎಂಬ ಭಾವನೆ ಸಾಮಾನ್ಯ. ಮತ್ತು ಅಧ್ಯಯನ ಪೀಠಕ್ಕೆ ಬರುವ ಹಲವರಲ್ಲಿ
ಈ ಆಲೋಚನೆಯೇ ಇರುತ್ತದೆ ಆದರೆ ನೀವು ಅದನ್ನು ನಿಜಕ್ಕೂ ಇಷ್ಟಪಟ್ಟು ಅಭ್ಯ್ಯಸಿಸಿ ಏನಾದರು ಹೊಸ ದಿಶೆಯಲ್ಲಿ ಆಲೋಚಿಸಬೇಕು. ಬರೀ
ಜಾಬ್ ಗಿಟ್ಟಿಸಲು ಒಂದು ಡಿಗ್ರಿ ಅಂದುಕೊಳ್ಳದೆ ಪ್ರೀತಿಯಿಂದ ಅಧ್ಯಯನ ಶುರು ಮಾಡಿ, ಎಲ್ಲಿ ನೋಡಿದರೂ ನಿಮಗೆ ಜನಪದವೇ ಕಾಣಬೇಕು. ಈ
ವಿಷಯವನ್ನು ಮನದಟ್ಟು ಮಾಡಿಕೊಂಡೆ ಕ್ಲಾಸಿಗೆ ಬನ್ನಿ ಮತ್ತು ತರಗತಿಗಳನ್ನು ತಪ್ಪಿಸಬೇಡಿ ಅಂದರು.

ಮೊದಲ ಸೆಮಿಸ್ಟರ್ ನಲ್ಲಿ ಜಗತ್ತಿನ ಜಾನಪದ ಇತಿಹಾಸ ಎಂಬ ವಿಷದೊಂದಿಗೆ ಮೇಡಂ ಮೊದಲಬಾರಿ ನಮ್ಮ ಮುಂದಿದ್ದರು , ಯುರೋಪ್
ಅಮೇರಿಕ ಮತ್ತು ರಷ್ಯ ಭಾರತದ ಜನಪದ ಇತಿಹಾಸವನ್ನು ಹೇಳುವುದರೊಂದಿಗೆ ಇತಿಹಾಸ ಓದುವುದು ನಮ್ಮ ವರ್ತಮಾನಕ್ಕೆ ಹೇಗೆ
ಉಪಯೋಗಕಾರಿ ? ಅನ್ನುವ ವಿಷಯವನ್ನು ಅದೆಷ್ಟೋ ಉದಾಹರಣೆಗಳೊಂದಿಗೆ ವಿವರಿಸಿದ್ದರು ಅದರಲ್ಲೂ ಎಂದೋ ಕಳೆದು ಹೋದ ಫಿನ್ಲ್ಯಾಂಡ್
ನ ಕಲೆವಾಲ್ ಎಂಬುವ ಕಥನಗೀತೆಯನ್ನು ಸಂಪಾದಿಸಿದ ರೀತಿ ಅದು ಅಲ್ಲಿನ ಜನಮಾನಸದ ಮೇಲೆ ಬೀರಿದ ಪರಿಣಾಮ. ಮತ್ತು ಅದೇ
ಕ್ರಮವನ್ನು ಬಳಸಿ ತುಳುನಾಡಿನ ಸಿರಿ ಪಾಡ್ದನಗಳನ್ನು ಸಂಗ್ರಹಿಸಿದ ಕ್ರಮವನ್ನು ಅದರ ಸುತ್ತಲಿನ ವಿಷಯವನ್ನು ಮನಮುಟ್ಟುವಂತೆ
ಅರ್ಥಮಾಡಿಸಿದ್ದರು.

ನಾನು ಎಂ ಎ ಸೇರಿಕೊಂಡ ವರುಷವೇ ಮೊದಲಬಾರಿ ವಿಶ್ವವಿದ್ಯಾಲಯ ಮುಕ್ತ ವಿಷಯೊಂದನ್ನು ಆಯ್ಕೆಮಾಡಿಕೊಳ್ಳುವ ಹೊಸ ವಿಧಾನವನ್ನು
ಪರಿಚಯಿಸಿತ್ತು. ಅದನ್ನು open elective subject ಎಂದು ಕರೆದಿದ್ದರು ನಾವು ಆಯ್ದುಕೊಂಡ ವಿಷಯದ ಜೊತೆಗೆ open elective ವಿಷಯದ
ತರಗತಿಯ ಹಾಜರಿ ಮತ್ತು ಅದರ ಅಂಕಗಳು ಮುಖ್ಯವಾಗಿದ್ದವು. ಆ ಹೊತ್ತಿನಲ್ಲಿ ನನ್ನ ಕರೆದು ಮೇಡಂ ಹೇಳಿದ್ದರು 'ಯಾವ ವಿಷಯ ತಗೋಬೇಕು ಅನ್ನುವುದರ ಬಗ್ಗೆ ನಿಮಗೆ ಪೂರ್ಣ ಸ್ವಾತಂತ್ರವಿದೆ ಆದರೆ ನಿಮಗೊಂದು ಸಲಹೆ ಕೊಡುತ್ತೇನೆ. ಯಾವುದಾದರು ವಿದೇಶಿ
ಭಾಷೆಯನ್ನು ಆಯ್ಕೆಮಾಡಿ. ಅದರಿಂದ ನಿಮ್ಮ ಕಲಿಕೆ ಇನ್ನು ಉತ್ತಮಗೊಳ್ಳುತ್ತದೆ, ಮತ್ತು ಜಾನಪದ ವಿಧ್ಯಾರ್ಥಿಗಳು ಆಂಗ್ಲ ಭಾಷೆ ಮತ್ತು ಇತರ
ಭಾಷೆಗಳನ್ನು ಕಲಿಯಬೇಕು ಅದರಿಂದ ಅಧ್ಯಯನದಲ್ಲಿ ಹೊಸತನ ಕಾಣ ಸಿಗುತ್ತದೆ ಎಂದರು. ಅವರ ಮಾತಿನ ಅರ್ಥ,ದೂರದರ್ಶಿತ್ವ ಆಗ ನನಗೆ ನಿಜಕ್ಕೂ ಅರ್ಥವಾಗಿರಲಿಲ್ಲ. ಆದರೆ ಅವರ ಮಾತನ್ನು ಮೀರದೆ ಅವರ ಸಲಹೆಯಂತೆ ನಾನು ಕ್ರಮವಾಗಿ ಜರ್ಮನ್ ಮತ್ತು ಫ್ರೆಂಚ್ ಭಾಷೆಗಳನ್ನು ಆಯ್ಕೆ ಮಾಡಿಕೊಂಡು ಆ ಭಾಷೆಗಳ ಪ್ರಾರಂಭಿಕ ಕಲಿಕೆ ಮಾಡಲು ಸಾಧ್ಯವಾಯಿತು ,

`The dream begins with a teacher who believes in you ,who tugs and pushes and leads you to the next plateau sometimes poking you with a sharp stick' ಅನ್ನುವ ಮಾತು ಅದೆಷ್ಟು ಸತ್ಯ ನನ್ನಲ್ಲಿ ಅವರು ಕನಸುಗಳನ್ನು ಬಿತ್ತುತ್ತಿದ್ದರು ಸ್ನಾತಕೋತ್ತರ ಜಾನಪದ ಪದವಿ ಪಡೆದವರಿಗೆ ಲೆಕ್ಚರರಿಕೆ ಒಂದೇ ಆಯ್ಕೆ ಅಲ್ಲ! ಅದಲ್ಲದೆ ಹಲವಾರು ಕ್ರಿಯಾಶೀಲ ಕ್ಷೇತ್ರಗಳು ಕಾಯುತ್ತಿವೆ. ಆದರೆ ನಾವು ಅದರ ಬಗ್ಗೆ ಧೇನಿಸುತ್ತಿರಬೇಕು. ಸದಾಕಾಲ ಒಂದು ಎಚ್ಚರಿಕೆ ನಮ್ಮಲ್ಲಿರಬೇಕು. ಆ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ? ಯಾಕೆ ಹೀಗಲ್ಲದಿದ್ದರೆ ಹೇಗೆ ಆಗಬಹುದಿತ್ತು? ಅನ್ನುವ ಪ್ರಶ್ನೆಗಳನ್ನು ಪ್ರತಿ ವಿಷಯಕ್ಕೂ ನಮ್ಮನ್ನು ನಾವು ಕೇಳಿಕೊಳ್ಳಬೇಕು ಅದು ನಮ್ಮ ಆಲೋಚನೆಯನ್ನು ಮೊನಚು ಮಾಡುತ್ತದೆ ಎಂಬುದು ವಿದ್ಯಾರ್ಥಿಗಳಿಗೆಲ್ಲರಿಗೂ ಅವರು ಹೇಳುತ್ತಿದ್ದ ಕಿವಿಮಾತು.

ವಿರಾಮವಿರದ ಅವರ ದಿನಚರಿಯಲ್ಲೂ ಕ್ಲಾಸ್ ಗೆ ಒಮ್ಮೆಲೇ ಬಂದು ಯಾವುದಾದರೂ ವಿಷಯಗಳನ್ನು ಕೊಟ್ಟು ಅದರ ಬಗ್ಗೆ ಬರೆದು ತರಲು
ಹೇಳುತ್ತಿದ್ದರು ಮತ್ತು ಪ್ರತಿ ಬರಹವನ್ನು ಕೂಲಂಕಷವಾಗಿ ಪರಿಶಿಲಿಸಿ ತಿದ್ದುಪಡಿ ಹೇಳುತಿದ್ದರು.
ಆ ನಿಟ್ಟಿನಲ್ಲಿ ನಾನು ಹಲವು ಚಿಕ್ಕಪುಟ್ಟ ಲೇಖನ ಬರೆಯುತ್ತಿದ್ದೆ. ಅದರಲ್ಲಿ ಮುಖ್ಯವಾದದ್ದು ಚಿತ್ರರಂಗ ಮತ್ತು ಜಾನಪದ ಎಂಬ ವಿಷಯದ ಬಗ್ಗೆ
ವಿವರವಾಗಿ ಬರೆದ ನಿಬಂಧ. ಅದನ್ನು ನೆನೆಸಿಕೊಂಡರೆ ಈಗಲೂ ನನಗೆ ನಗು ಬರುತ್ತದೆ. ಸಾಕಷ್ಟು ವಿಷಯಗಳನ್ನು ಇಂಟರ್ನೆಟ್ ನಿಂದ
ಸಂಗ್ರಹಿಸಿದ್ದೆ. ಮೇಡಂ ಅವರಿಂದ ಸಾಕಷ್ಟು ಮೆಚ್ಚುಗೆಯನ್ನೂ ನಿರೀಕ್ಷಿಸಿದ್ದೆ. ಆದರೆ ಅವರು ಮಾತ್ರ 'ಸಂಗ್ರಹ ಚನ್ನಾಗಿದೆ ತುಂಬಾ ವಿಷಯ ಹುಡುಕಿದೀರಿ ಅನ್ನೋದನ್ನು ಬಿಟ್ಟು ಬೇರೇನೂ ಹೇಳಲೇ ಇಲ್ಲ. ನನಗೆ ನಿಜಕ್ಕೂ ಬೇಜಾರಾಗಿತ್ತು.
ಕೆಲವು ವಾರಗಳ ನಂತರ ನನ್ನ ಕರೆದು ಹೇಳಿದರು ‘ನೀವು ತುಂಬಾ ಶ್ರಮ ಪಡ್ತೀರಿ,ವಿಷಯ ಸಂಗ್ರಹಿಸ್ತೀರಿ ಬರೀತೀರಿ ಕೂಡ ಆದರೆ ಅದನ್ನು
ವ್ಯವಸ್ತಿತವಾಗಿ ಜೋಡಿಸುವುದರಲ್ಲಿ ಮುಗ್ಗರಿಸುತ್ತೀರಿ ಇದೊಂಥರ ಇಟ್ಟಿಗೆ ಸಿಮೆಂಟ್ ಕಲ್ಲು ಎಲ್ಲ ವನ್ನು ತಂದು ರಾಶಿ ಹಾಕಿ ಒಮ್ಮೆಲೇ ಮನೆ
ಕಟ್ಟುವ ಹುರುಪಿನಂತೆ. ಆದರೆ ಮನೆ ಕಟ್ಟಲು ಒಂದು ಕ್ರಮವಿದೆ ಅದನ್ನು ನೀವು ಕಲಿಬೇಕು ಅದಕ್ಕೆ ನೀವು ಬಹಳ ಓದಬೇಕು ಅಂದು ತಮ್ಮಲ್ಲಿದ್ದ
ಹಲವಾರು ಪುಸ್ತಕಗಳನ್ನು ನನಗೆ ಓದಲು ಕೊಟ್ಟಿದ್ದರು. ಬರವಣಿಗೆಯ ಮುನ್ನ ಸಂಗ್ರಹಿಸಿದ ವಿಷಯವನ್ನು ಹೇಗೆ ವಿಂಗಡಿಸುವುದು. ಕ್ರಮವಾಗಿ
ಜೋಡಿಸುವುದು ಮತ್ತು ನಿರೂಪಿಸುವುದು ಹೇಗೆ ಅನ್ನುವುದನ್ನು ಉದಾಹರಣೆಗಳ ಸಮೇತ ವಿವರಿಸಿದ್ದರು.

'A teacher is who gives you something to take home to Think about ,besides homework'
ಅವರು ಕಲಿಸುತ್ತಿದ್ದುದೆ ಹಾಗೆ, ಪಾಠಗಳು ನಿಮಿತ್ಯ ಮಾತ್ರ ಆದರೆ ನಿಜವಾದ ಪಾಠಶಾಲೆ ಸಮಾಜ, ಜನಪದವನ್ನು ನಾಲ್ಕು ಗೋಡೆಗಳ ಮಧ್ಯೆ
ಕುಳಿತು ಕಲಿಯಾಲಾಗದು, ನಿಮಗೆ ಅದರ ಗುಂಗು ಹಿಡಿಯಬೇಕು ಅನ್ನುತ್ತಿದ್ದರು ಮತ್ತು ಅದು ನನಗೆ ಹಿಡಿದೇ ಬಿಟ್ಟಿತು. ಕಾಲೇಜಿಗೆ ಹೋಗಲು
ನಾನು ದಿನ ಮುಂಡಗೊಡಿನಿಂದ ಧಾರವಾಡಕ್ಕೆ, ಮತ್ತೆ ವಾಪಸ್ ಮನೆಗೆ ಬರಲು ಬಸ್ನಲ್ಲಿ 150ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಆ
ಪಯಣದಲ್ಲಿ ದಿನದ ನಾಲ್ಕು ಘಂಟೆಗಳು ವ್ಯಯವಾಗುತಿದ್ದವು, ಅಷ್ಟು ಸಮಯ ನನ್ನ ಆಲೋಚನೆ ಓದು ಬರೀ ಜನಪದವೇ. ಕುರಿಮಂದೆಯ
ಹೆಣ್ಣುಮಗಳ ಕಿವಿಯಲ್ಲಿಯುವ ಬುಗುಡಿ ಯಿಂದ ಅದ್ಯಾರೊ ಹಿಡಿದು ಬಂದ ಕಸೂತಿ ಚೀಲದವರೆಗೆ. ಆಟೋ ರಿಕ್ಷಾ ಹಿಂಬದಿಯ ತಮಾಷೆ
ಬರಹಗಳಿಂದ ಹಿಡಿದು, ಜಗಳದಲ್ಲಿ ಬಳಸಲ್ಪಡುವ ಬೈಗುಳದಲ್ಲಿಯೂ, ಎಲ್ಲಿ ನೋಡಿದರಲ್ಲಿ ಜನಪದವೇ ಕಾಣುತಿತ್ತು.

ಮೇಡಂ ಅವರು ನನ್ನ ಮೇಲೆ ಅಷ್ಟು ಪರಿಣಾಮ ಬೀರಿದ್ದರು ಮಾತಿನಲ್ಲಿ, ಹಾಡಿನಲ್ಲಿ,ಕುಣಿತದಲ್ಲಿ ,ನಡೆಯಲ್ಲಿ ,ಹಿತ್ತಲ ಕಸದಲ್ಲೂ ಜನಪದೀಯ
ಅಂಶಗಳು ಕುಣಿದಾಡುತ್ತಿದ್ದವು. ಆಗ ನನ್ನ ಮನಸು ಬುದ್ದಿ ಅನುಭವಿಸಿದ ಆ ಖುಷಿ, ಆತ್ಮ ಸಂತೃಪ್ತಿಯನ್ನು ಬರಹದಲ್ಲಿ ಹಿಡಿದಿದಲಾಗದು. ಇಷ್ಟು
ವರ್ಷ ನಾನು ಹುಡುಕುತ್ತಿದ್ದುದು ಇದೆ ಏನೋ ಅನ್ನ್ನಿಸುವುದಕ್ಕೆ ಶುರುವಾಗಿದ್ದು ನನ್ನ ಎಲ್ಲ ಚಡಪಡಿಕೆಗಳಿಗೆ ಉತ್ತರ ಜಾನಪದ ಮಾತ್ರವೇ
ನೀಡಬಲ್ಲದು ಎಂಬ ಸತ್ಯ ಅರಿವಾಗಿತ್ತು.

ಇದೆ ಸಮಯದಲ್ಲಿ ಮೇಡಂ ಅವರ ಮತ್ತೊಂದು ಯೋಜನೆಯಿಂದ ನಾನು ಜಾನಪದದ ಮತ್ತೂಂದು ಮಗ್ಗಲು ನೋಡುವಂತಾಯಿತು. ಪ್ರವಾಸೋದ್ಯಮ ಮತ್ತು ಜಾನಪದ ಎಂಬ ವಿಷಯದ ಮೇಲೆ ಮೂರು ದಿನಗಳ ಕಾರ್ಯಾಗಾರ, ನನ್ನ ಸ್ನಾತಕೋತ್ತರ ಅಧ್ಯಯನದ ಇನ್ನೊಂದು ತಿರುವು ಅದು.
ಅಲ್ಲಿ ನಾ ತಿಳಿದ ,ನೋಡಿದ ,ಕಲಿತ ವಿಷಯ ಹಲವು ಅಲ್ಲಿಯ ತನಕ ಸಂಗೀತ ಮತ್ತು ಜಾನಪದವನ್ನು ಜೊತೆಮಾಡಿ ಅದನ್ನೇ ನನ್ನ ಮುಖ್ಯ
ಅಧ್ಯಯನದ ವಿಷಯವನ್ನಾಗಿ ಮಾಡಿಕೊಳ್ಳಬೇಕು, ಸಂಶೋಧನೆಗೆ ಅಣಿಯಾಗಬೇಕು ಅಂದುಕೊಂಡ ನನಗೆ ಜನಪದ ವೈದ್ಯದ ಮೇಲೆ ಪ್ರೀತಿ
ಹುಟ್ಟಿತು. ಅದಕ್ಕೆ ಕಾರಣವಾಗಿದ್ದು ಹೊನ್ನಾವರದ ಜನಪದ ತಜ್ಞೆ ಶ್ರೀಮತಿ ಶಾಂತಿ ನಾಯಕ್ .

ಸೆಮಿನಾರ್ ಮುಗಿಸಿ ಬಂದ ದಿನದಿಂದಲೇ ನಾನು ಮೇಡಂ ಅವರ ಬೆನ್ನು ಬಿದ್ದೆ. ಜನಪದ ವೈದ್ಯದ ಕುರಿತು ಅವರಲ್ಲಿದ್ದ ಅಪರೂಪದ ಪುಸ್ತಕಗಳು
,ಲೇಖನಗಳು, ಅವರಿಗೆ ತಿಳಿದಿದ್ದ ಹಲವಾರು ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಚರ್ಚಿಸುತ್ತಿದ್ದರು.ಮತ್ತು ಜನಪದ ವೈದ್ಯದ ಕುರಿತು
ಸಂಶೋಧನೆ ಅಥವಾ ಅಧ್ಯಯನ ಮಾಡುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಮೊದಲೇ ಅವರು ನನಗೆ ಎಚ್ಚರಿಸಲು ಮರೆಯಲಿಲ್ಲ.
ಅವರ ಕಾರಣದಿಂದಲೇ ನಾನು ಶಾಂತಿ ನಾಯಕ್ ,ಏನ್ ಆರ್ ನಾಯಕ್, ಅರವಿಂದ್ ನಾವಡ, ಅಂಬಳಿಕೆ ಹಿರಿಯಣ್ಣ ,ಮತ್ತು ಜಾನಪದ ಲೋಕದ ಹಲವು ದಿಗ್ಗಜರನ್ನು ಭೇಟಿ ಮಾಡಿದೆ.
ಸಮೂಹ ಸಂವಹನ ಮಾಧ್ಯಮಗಳು ಮತ್ತು ಜಾನಪದ ಎಂಬ ವಿಷಯದ ಬಗ್ಗೆ ವಿಚಾರ ಕಮ್ಮಟ ಏರ್ಪಡಿಸಿದಾಗ ಅಲ್ಲಿ ಚರ್ಚಿಸಬೇಕಾದ
ವಿಷಯಗಳನ್ನು ಮೇಡಂ ಅದೆಷ್ಟು ಚನ್ನಾಗಿ ಆಯ್ಕೆ ಮಾಡಿದ್ದಾರೆ ವಾಹ್ ಅನ್ನಿಸುತ್ತಿತ್ತು. ಪ್ರತಿಯೊಂದು ವಿಷಯವು ಅನನ್ಯ. ಟಿ ಎಸ ನಾಗಭರಣ
ಅವರನ್ನು ನೇರ ಸಂವಾದಕ್ಕೆ ಕರೆದು ಅದೆಷ್ಟು ಚಂದದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳ ಮುಂದೆ ಇಟ್ಟಿದ್ದರು ಮತ್ತು ಅದು ಅಷ್ಟೇ
ಉಪಯುಕ್ತವಾಗಿತ್ತು.
ಅಂಥದೇ ಇನ್ನೊಂದು ಅನನ್ಯ ಕಾರ್ಯಕ್ರಮ ಶಿರಸಿಯ ಅಜ್ಜಿಮನೆಯಲ್ಲಿ ನಡೆದ ಸ್ಥಳೀಯ ಪರಂಪರಾಗತ ಜ್ಞಾನ ಮತ್ತು ಆರೋಗ್ಯ. ಇಲ್ಲಿ
ಚರ್ಚಿತವಾದ ವಿಷಯಗಳೂ ಅಷ್ಟೇ ಈಗಲೂ ಹಸಿರು ಹಸಿರು ಕೆಲವೊಮ್ಮೆ ಶಿಬಿರದ ನಡುವೆ ಮೇಡಂ ನಮಗೆ ವಿಷಯ ಸಂಬಂಧಿ ಪ್ರಶ್ನೆ
ಕೇಳುತ್ತಿದ್ದರು, ಮತ್ತು ಸಂಪನ್ಮೂಲ ವ್ಯಕ್ತಿ ಮಾತನಾಡುತ್ತಿರುವ ವಿಷಯಕ್ಕೆ ನಾವು ಎಷ್ಟರ ಮಟ್ಟಿಗೆ ಕನೆಕ್ಟ್ ಆಗಿದ್ದೇವೆ ಎಂಬುದನ್ನು ಸೂಕ್ಷ್ಮವಾಗಿ
ಪರಿಶೀಲಿಸುತ್ತಿದ್ದರು , ಈ ದಿಸೆಯಲ್ಲಿ ನಾವು ಭೇಟಿಯಾದದ್ದು ಅಪರೂಪದ ವಿಜ್ಞಾನಿ ಪಲ್ಲತಡ್ಕ ಕೇಶವ ಭಟ್ಟ್ ಅವರನ್ನ , ಈ ರೀತಿಯ ಅನನ್ಯ
ವಿಚಾರ ಮತ್ತು ದೃಷ್ಟಿಕೋನ ಮತ್ತು ಸರಳತೆ ಮೇಡಂ ಅವರನ್ನು ಮತ್ತೂ ಹೆಚ್ಚು ಗೌರವಿಸುವಂತೆ ಮಾಡುತ್ತಿದ್ದವು ,

ಆ ವರೆಗೆ ಮೇಡಂ ಅಂದರೆ ನನಗೆ ನನ್ನ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆ ರೂಪದಲ್ಲೇ ಕಂಡಿದ್ದರು. ಅವರು ಯಾವತ್ತು ಸಿಟ್ಟು ಮಾಡಿದ್ದು,
ಜೋರಾಗಿ ಮಾತಾಡಿದ್ದು,ತಾಳ್ಮೆ ಕಳೆದುಕೊಂಡಿದ್ದು ನಾನು ನೋಡೇ ಇಲ್ಲ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಅವರೊಂದು ಹೊಸ ವಿಚಾರ ಹುಡುಕಿ
ಅದನ್ನು ಹಿಂಬಾಲಿಸಲು ಹೊರಡುತ್ತಿರುವಂತೆ ನನಗೆ ಭಾಸವಾಗುತಿತ್ತು.
ಅದು ನನ್ನ ಕೊನೆ ಸೆಮಿಸ್ಟರ್. ನಾವು ಕ್ಷೇತ್ರ ಕಾರ್ಯ ಮಾಡಿ ನಿಬಂಧವಿ ಬರೆದು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಬೇಕಿತ್ತು. ನಾನು ಆಯ್ದು
ಕೊಂಡಿದ್ದು ಬಾಣಂತಿ, ನವಜಾತ ಶಿಶುವಿನ ಆರೈಕೆ ಮತ್ತು ಜನಪದ ವೈದ್ಯ ಪದ್ಧತಿ. ಆಗ ಮಾತ್ರ ಮೇಡಂ ಅವರ ಇನ್ನೊಂದು ರೂಪ ನೋಡಿದ್ದು.
ನಾನು ಅತಿ ಭಾವುಕಿ, ಸಿನಿಮ ಕಾದಂಬರಿ ಭಾವಗೀತೆ,ಗಝಲ್ ಹುಚ್ಚು ಇದ್ದಿದ್ದಕ್ಕೋ ಏನೋ ನನ್ನ ಬರವಣಿಗೆ ಒಂದು ವಿಚಿತ್ರ ಧಾಟಿಯಲ್ಲಿ
ಇರುತಿತ್ತು.

ರಜಾ ಅರ್ಜಿಯನ್ನೂ ಕವಿತೆಯಂತೆ ಬರೆಯುತ್ತಿದ್ದೆ. ನಿಬಂದ ಬರೆಯುವಾಗ ನನ್ನ ಅದೇ ಬರವಣಿಗೆ ಮುಂದುವರಿಯಿತು , ಮೇಡಂ ನಾಲ್ಕು ಬಾರಿ
ನನ್ನ ಕರಡು ಪ್ರತಿಯನ್ನು ಸರಿ ಇಲ್ಲ ಎಂದು ಮರಳಿಸಿ ಬಿಟ್ಟರು. ಅದು ಕೊನೆ ಹಂತ ನನ್ನಲ್ಲಿ ಸಾಕಷ್ಟು ಮಾಹಿತಿ ಇತ್ತು ಬರವಣಿಗೆ ಸಂಪೂರ್ಣ
ಗೊಂಡಿತ್ತು. ಯಾಕೆ ?ಏನು ತಪ್ಪು ಎಂಬುದು ಅರಿವಿಗೆ ಬರಲಿಲ್ಲ ,ಮತ್ತೆ ಕೊಟ್ಟೆ ಆಗ ಅಂದರು; ನಿಮ್ಮ ತಪ್ಪು ನಿಮಗೆ ಗೊತ್ತಾಗುತ್ತೆ ಅಂದುಕೊಂಡೆ.
ನೀವು ಅದನ್ನು ಗಮನಿಸಿಯೇ ಇಲ್ಲ ಆದಷ್ಟು ಸರಳ ವಾಕ್ಯಗಳನ್ನು ಬಳಸಿ. ನೇರ ವಿಷಯಗಳನ್ನು ಹೇಳುವಾಗ ಅಷ್ಟೇ ದೃಡವಾಗಿ ನೇರವಾಗಿ
ಹೇಳಬೇಕು ಮತ್ತು ಅದಕ್ಕೊಂದು ಚೌಕಟ್ಟಿರಬೇಕು ಎಲ್ಲೆಂದರಲ್ಲಿ ಹೇಗೆ ಬೇಕೋ ಹಾಗೆ ಬರೆಯೋದಲ್ಲ ಅಂದು ಮತ್ತೆ ವಾಪಸ್ ಮಾಡಿದ್ದರು.
ಬಸ್ಸಿನಲ್ಲಿ ಕುಳಿತು ಮತ್ತೆ ಹಾಳೆಗಳನ್ನು ತಿರುವಿದೆ ಪ್ರತಿ ಪುಟದಲ್ಲೂ ಅವರ ಅಕ್ಷರಗಳು. ಅಷ್ಟೂ ಪುಟಗಳನ್ನು ಓದಿ ಮಾರ್ಕ್ ಮಾಡಿ ಕೊಟ್ಟಿದ್ದರು.
ಅದನ್ನು ಹೇಗೆ ಬರೆಯಬಹುದು ಅನ್ನುವುದನ್ನು ಸೂಚ್ಯವಾಗಿ ಹೇಳಿದ್ದರು ಆಗಲೇ ಅನ್ನಿಸಿದ್ದು, ಕಾವ್ಯಾತ್ಮಕ ಬರವಣಿಗೆ ಮತ್ತು ನೇರ ಬರವಣಿಗೆ
ಅದೆಷ್ಟು ದೂರ ದೂರ. ಸ್ವಲ್ಪ ಆಯ ತಪ್ಪಿದರು ಅರ್ಥ ಅಪಾರ್ಥ ಆಗುವ ಸಂಭವ ಇರುತ್ತದೆ ಅಧ್ಯಯನ ಪ್ರಬಂಧ ಲಲಿತ ಪ್ರಬಂಧವಾಗುವ
ಸಾಧ್ಯತೆ ಇರುತ್ತದೆ. ಅದನ್ನು ಮೇಡಂ ನನಗೆ ಅದೆಷ್ಟು ಚನ್ನಾಗಿ ಅರ್ಥ ಮಾಡಿಸಿದ್ದರು.

ಜಾನಪದ ದ ಬಗ್ಗೆ ಮಾತಾಡುವ ಹಲವರು ಜನಪದ ಕಲಾವಿದರನ್ನು ನಡೆಸಿಕೊಳ್ಳುವ ರೀತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಜನಪದ
ಉಳಿಸಿ ಬೆಳೆಸಿ ಅನ್ನುತ್ತಾ ಭಾಷಣ ಮಾಡಿ ಹಾರ ತುರಾಯಿ ಹಾಕಿಸಿಕೊಂಡು, ಕಾರಿಡಾರಿನಲ್ಲಿ ನಡೆಯುವಾಗ ಅದೇ ಮಗ್ಗುಲಲ್ಲಿ ಕುಳಿತ ಜನಪದ
ಕಲಾವಿದರಿಗೆ ನಕ್ಕು ನಮಸ್ಕರಿಸಿದ ದೊಡ್ಡ ವಿದ್ವಾಂಸರೂ ಈ ಕ್ಷೇತ್ರದಲ್ಲಿ ಇದ್ದಾರೆ.
ಅಂಥಹ ಸಂದರ್ಭದಲ್ಲಿ ನಮ್ಮ ವಿಶ್ವವಿದ್ಯಾಲಯಕ್ಕೆ ಜನಪದ ಕಲೆಗಳು ಪ್ರಾಯೋಗಿಕ ಪರೀಕ್ಷೆಗಳಿಗೆಂದು ಹಾಲಕ್ಕಿ ಸುಗ್ಗಿ, ಕೋಲಾಟ ಕಲಿಸಲು ಬಂದ ಕಲಾವಿದರನ್ನು ಅದೆಷ್ಟು ಆತ್ಮೀಯವಾಗಿ ಮಾತನಾಡಿಸಿ, ಅವರ ಯೋಗಕ್ಷೇಮ ವಿಚಾರಿಸಿ ,ಅವರೊಂದಿಗೆ ಅದೆಷ್ಟು ಸರಳತೆಯಿಂದ
ಸಜ್ಜನಿಕೆಯಿಂದ ವರ್ತಿಸುವ ಮೇಡಂ.ಅವರ ಊಟ ತಿಂಡಿ ವಸತಿ ಬಗೆಗೆ ಮನೆ ಮಂದಿಯ ಬಗ್ಗೆ ವಹಿಸುವ ಕಾಳಜಿಯನ್ನೇ ತೋರಿಸುವುದು
ನೋಡಿದಾಗ ಅವರು ತುಂಬಿದ ಕೊಡ ಅನಿಸಿದ್ದು ಅದೆಷ್ಟು ಸಲವೂ.

ಹಾಗೆ ಒಂದು ದಿನ ಅವರ ಆಫೀಸ್ ನಲ್ಲಿ ನಾನು ಯಾವುದೊ ವಿಷಯ ಅವರೊಂದಿಗೆ ಚರ್ಚಿಸುತ್ತಿದ್ದಾಗ ,ಆಗಷ್ಟೇ ಪಿ ಹೆಚ್ ಡಿ ಸೇರಿಕೊಂಡ ನನ್ನ
ಸಿನಿಯರ್ ಒಬ್ಬರಿಗೆ ಲಕೊಟೆ ಒಂದನ್ನು ಕೊಟ್ಟರು. ನಿಮ್ಮ ಸ್ಕಾಲರ್ಷಿಪ್ ಬರೋತನಕ ಸುಮಾರು ಕೆಲಸ ಮಾಡಲಿಕ್ಕೆ ಇರುತ್ತದೆ, ಮತ್ತು ಖರ್ಚು
ಆಗುತ್ತೆ ಇದು ನನ್ನ ಪುಟ್ಟ ಸಹಾಯ ನಿಮಗೆ.ಅಧ್ಯಯನ ಚೆನ್ನಾಗಿ ನಡೀಲಿ ಎಂದು ಆಶೀರ್ವದಿಸಿದರು. ಆ ವಿದ್ಯಾರ್ಥಿ ಹೊರಗೆ ಹೋದ ನಂತರ
ಪ್ರತಿ ವರ್ಷ ಯೋಗ್ಯ ಅನಿಸಿದ ಒಬ್ಬ ವಿದ್ಯಾರ್ಥಿಗೆ ನನ್ನ ಪತಿಯ ಸ್ಮರಣಾರ್ಥ ಒಂದಷ್ಟು ಸಹಾಯ ಮಾಡ್ತೇನೆ ನನ್ನ ಮನಸಿನ ನೆಮ್ಮದಿಗೆ ಅಂದರು ಆ ದಿನ ಅವರ ಮತ್ತೊಂದು ಅನನ್ಯತೆ ನನಗೆ ಕಾಣಿಸಿತ್ತು.

ನನಗನಿಸಿದ ಪ್ರಕಾರ ಅವರ ಸೃಜನ ಶೀಲತೆ ,ಮತ್ತು ನವೀನ ಆಲೋಚನೆಗಳು ಅವುಗಳನ್ನು ಕಾರ್ಯಗತ ಮಾಡುವಲ್ಲಿ ಹಲವಾರು ಬಾರಿ
ಪೂರಕ ವಾತಾವರಣ ಇರುತ್ತಿರಲಿಲ್ಲ ಸಿಬ್ಬಂದಿ ಸಹಕಾರ ,ಕೆಲವೊಮ್ಮೆ ವಿದ್ಯಾರ್ಥಿಗಳ ನಿರಾಸಕ್ತಿ ಅವರಿಗೆ ಬೇಸರ ತರುತ್ತಿತ್ತು, ಆದರೆ ಎಂದು ಆ
ಕಾರಣ ಕೊಟ್ಟು ಯಾವುದೇ ಯೋಜನೆಯನ್ನು ಅವರು ಕೈಬಿಟ್ಟಿಲ್ಲ. ಜನಪದ ಸಂಗ್ರಹಾಲಯ ಮತ್ತು ಅದಕ್ಕೆ ವಸ್ತುಗಳನ್ನು ಪೇರಿಸುವ ಕೆಲಸದಲ್ಲಿ
ಅವರು ತೋರಿಸುತ್ತಿದ್ದ ಆಸಕ್ತಿ ಪುಟ್ಟ ಮಗು ಹೊಸ ವಿಷಯಕ್ಕೆ ತೋರುವ ಉತ್ಸಾಹದಂಥದ್ದು.

ಒಮ್ಮೆ ನನಗೆ ರಂಗಗೀತೆ ಗಳ ಬಗ್ಗೆ ಸ್ವಲ್ಪ ವಿವರಣೆಗಳು ಬೇಕಿದ್ದವು. ನಾನು ಅವರನ್ನು ಆ ಬಗ್ಗೆ ಕೇಳಿದ್ದೆ ಮತ್ತು ಅದನ್ನು ಮರೆತು ಬಿಟ್ಟಿದ್ದೆ. ಆದರೆ
ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕ ಹುಡುಕಿ ಮತ್ತೆ ಸಂಜೆ ನನಗೆ ಫೋನ್ ಮಾಡಿದ್ದರು ನಾಳೆ ಪುಸ್ತಕ ತಗೊಂಡ್ ಹೋಗು ಅದು ಸಿಕ್ಕಿದೆ ಎಂದಾಗ ಅವರು ಆಸಕ್ತ ವಿದ್ಯಾರ್ಥಿಗಳಿಗಾಗಿ ಕೊಡುತ್ತಿದ್ದ ಸಮಯ ಮತ್ತು ಪ್ರಾಮುಖ್ಯತೆ ಅರಿವಿಗೆ ಬಂದಿತ್ತು.
ಕಲಿಯುವ ಮನಸ್ಸಿರುವ ವಿದ್ಯಾರ್ಥಿಗೆ ಇಂಥ ಒಬ್ಬ ಗುರು ದಕ್ಕಿದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲ ವಾದಂತೆಯೇ. ಕಲಿಯುವ ಪಾಠ
ಪಾಠವಾಗಿರದೆ ಅದು ಬದುಕಿಗೆ ಇಂಬುಕೊಡುವ ವಿದ್ಯೆಯಾಗಿತ್ತದೆ.

ನನ್ನ ನೆರವೇರದ ಆಸೆ ಎಂದರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಬೇಕು ಎಂಬುದು. ಸ್ನಾತಕೋತ್ತರ ಅಧ್ಯಯನ ಮುಗಿದ ನಂತರ ನಾನು ಬೆಲ್ಫಾಸ್ಟ್ ಬಂದು ಸೇರಿದೆ. ವಿಶ್ವವಿದ್ಯಾಲಯದ ಕೆಲವು ನಿಯಮಗಳು ಕಲಿಯುವ ತುಡಿತವಿರುವ ವಿದ್ಯಾರ್ಥಿಗಳಿಗೆ ಬೇಲಿ ಹಾಕಿಬಿಡುತ್ತವೆ.
ಆದರೂ ಇಂದಿಗೂ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವೆ. ನಾನು ಇಷ್ಟ ಪಟ್ಟು ಆಯ್ಕೆ ಮಾಡಿಕೊಂಡ ಜನಪದ ನನ್ನ ಕೈಹಿಡಿದು
ಮುನ್ನಡೆಸಿದೆ ಈಗಲೂ ನಾ ಅವರಿಗೆ ಫೋನ್ ಮೂಲಕ ಸಂಪರ್ಕಿಸಿದರೆ ಅದೇ ಆತ್ಮೀಯತೆ ಅಷ್ಟೇ ಆಪ್ಯಾಯತೆ ಅಕ್ಕರೆ. “ಶಾನಭಾಗ್ ಊರಿಗೆ
ಬಂದೀರ?” ಎನ್ನುತ್ತಲೇ ಮಾತು ಶುರುಮಾಡಿ ಅದೆಷ್ಟು ವಿಷಯ, ಉಲ್ಲೇಖ, ನೆನಪು ಹಂಚಿಕೊಳ್ತಾರೆ. ನನ್ನ ಬಾಲಿಶ ಪ್ರಶ್ನೆಗಳಿಗೆ ತಾಳ್ಮೆಯಿಂದ
ಉತ್ತರಿಸುತ್ತಾರೆ , ಅವರ ಶಿಷ್ಯೆ ಅವರ ವಿದ್ಯಾರ್ಥಿನಿ ಅನ್ನಲು ನನಗೆ ಯಾವತ್ತಿಗೂ ಹೆಮ್ಮೆ.

ಎರಡು ಕವನಗಳು

ರಾಮ ರಾಮ

ಈ ಭವ್ಯ ರಾಮ ಮಂದಿರ

ಬೇಕೆಂದನೆ ಆ ದಿವ್ಯ ರಾಮ ಚಂದಿರ

ಮನೆ ಮನೆಯಲ್ಲೂ ನಾನಿರುವೆನೆಂದ
ಮನ ಮನದಲ್ಲೂ ನಾ ನಗುವೆನೆಂದ
ಮನೆಗೊಂದು ಇಟ್ಟಿಗೆ ಕಂಭ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

ಅಮ್ಮ ನೊಂದ ಮಾತಿಗೆ ರಾಜ್ಯ ಕೊಟ್ಟ
ಅಗಸನೆಂದ ನೀತಿಗೆ ಹೆಂಡತಿ ಬಿಟ್ಟ
ರಹೀಮನಿಗೆಂದು ಬಿಟ್ಟ ಸ್ಥಾನ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

ಕಾವಿ ಕೇಸರಿ ದರ್ಪದಿ ಆವನೆಂದೂ ಉಡಲಿಲ್ಲ
ಭಸ್ಮ ಕುಂಕುಮಾದಿ ಹಣೆಯಲ್ಲಿ ಧರಿಸಿಲ್ಲ
ಈ ವೇಷ ಈ ರೋಷ ಅವ ಕೇಳ್ದನೇ
ಮನದೊಳಗೆ ಇದ ನೋಡಿ ನಕ್ಕನೇ

  • ಡಾ. ಗುರುಪ್ರಸಾದ್ ಪಟ್ವಾಲ್

——————————————————————————————————————–

ಆನಂದದ ಬೇನೆ

ನನ್ನ ಕಣ್ ಹೃನ್ಮನಗಳನು ಸೂಜಿಗಲ್ಲಿನಂತೆ ಸೆಳೆಯುವ ಸುಂದರ ಸುಮಗಳೇ

(ಚಿತ್ರಕೃಪೆ: ವಿಜಯನರಸಿಂಹ)

ನಿಮ್ಮನು ದಿನವೂ ನೋಡುತಿರುವಾಸೆ

ನಿಮ್ಮೊಂದಿಗೆ ದಿನವೂ ಮಾತಾಡುವಾಸೆ

ನನ್ನ ನಿತ್ಯದ ಆಗು ಹೋಗುಗಳನು ನಿಮಗೆ ಹೇಳುವಾಸೆ

ನನ್ನ ಇಷ್ಟ ಕಷ್ಟಗಳನು ನಿಮಗೆ ತಿಳಿಸುವಾಸೆ

ನನ್ನ ಸುಖ ದುಃಖಗಳನು ಹಂಚಿಕೊಳುವಾಸೆ

ನನ್ನ ಪ್ರತಿಯೊಂದು ನಿರ್ಧಾರದ ಪರಿಣಾಮಗಳನು ಕಡೆಯುವಾಸೆ

ನನ್ನ ಚಿಂತೆಗಳ ಕಾರಣಗಳನು ನಿಮ್ಮೊಂದಿಗೆ ಮಂಥಿಸುವಾಸೆ

ನನ್ನ ಸುತ್ತಲಿನ ಜಗದ ಜನರ ಕುಟಿಲತೆಯನ್ನು ಕುಟುಕುವಾಸೆ

ನನ್ನೊಳಗಿನ ಎಲ್ಲ ಭಾವಗಳನು ತಿಳಿನೀರಿನ ಕೊಳದ ರೀತಿ ನಿಮಗೆ ತೋರುವಾಸೆ

(ಚಿತ್ರಕೃಪೆ: ರಾಮ್)

ನನ್ನ ತಪ್ಪುಗಳನು ತಿದ್ದಿಕೊಳುವ ಬಗೆಗಳನು ನಿಮ್ಮಿಂದ ಕೇಳುವಾಸೆ

ನನ್ನ ಭೂತ, ವರ್ತಮಾನ, ಭವಿತವ್ಯಗಳನು ತೆರೆದಿಡುವಾಸೆ

ಆದರೆ ನಿಮ್ಮ ಸುಂದರ ನಗೆ ಮೊಗಗಳು ನನ್ನನ್ನು ಮೂಕನಾಗಿಸಿಬಿಡುತ್ತವೆ

ಆಗ ನೀವೂ ಮೂಕ , ನಾನೂ ಮೂಕ

ಇರಲಿ ಬಿಡಿ ಹೀಗೆ ನನ್ನ ನಿಮ್ಮ ನಡುವಿನ ಮೂಕ ಸಂವೇದನೆ

ಇದರ ಆನಂದವನು ನಾನು ಹೀಗೇ ಸವಿಯುವ ಬೇನೆ

🖋ವಿಜಯನರಸಿಂಹ

ಸೌಂದರ್ಯ ಸಾಹಸ ಸಂಮೋಹಕ – ರಾಧಿಕಾ ಜೋಶಿ

”ಯೂರೋಪಿನ ಅತ್ಯಂತ ಸುಂದರ ದೇಶಗಳಲ್ಲೊಂದು’ ಎನ್ನುವ ಖ್ಯಾತಿಯ ಸ್ವಿಜ್ಜರ್ ಲ್ಯಾಂಡ್ ಒಮ್ಮೆಯಾದರೂ ಆಯುಷ್ಯದಲ್ಲಿ ನೋಡ ಬೇಕಾದ ಸ್ಠಳ ಅಂತ ಬಹಳ ಜನರ ಮತ. ವರ್ಣನೆಗೆ ನಿಲುಕದ ಪ್ರಕೃತಿ ಸೌಂದರ್ಯ, ಸ್ವಚ್ಛತೆ, ಸಮಯನಿಷ್ಠೆಗಳಿಗೆ ಹೆಸರುವಾಸಿಯಾದ ನಾಡು ಅದು. ಅದು ಬರೀ ಚಾಕಲೇಟು, ಗಡಿಯಾರಗಳು (ಕುಕ್ಕೂ ಕ್ಲಾಕ್ ಸಹ) ಮತ್ತು precision engineering ಗೆ ಅಷ್ಟೇ ಅದರ ಪ್ರಸಿದ್ಧಿ ಸೀಮಿತವಲ್ಲ. ಒಂದು ಕಾಲಕ್ಕೆ ’See Naples and Die' ಅನ್ನುವ ಉತ್ಪ್ರೇಕ್ಷೆಯಿತ್ತು. ಅದೇ ಪಟ್ಟಿಯಲ್ಲೇ ಆಲ್ಪ್ಸ್ ಮಡಿಲಲ್ಲಿ ಪವಡಿಸಿರುವ ಈ ದೇಶದ ಎಷ್ಟೋ ಸ್ಥಳಗಳಿಗಳಿಗೂ ಈ ಪಟ್ಟವನ್ನು ಕಟ್ಟಬಹುದೇನೋ. ಇತ್ತೀಚೆಗೆ ಅಲ್ಲಿಗೆ ಹೋಗಿ ಬಂದ ರಾಧಿಕಾ ಜೋಶಿಯವರು ಈ ಚಿಕ್ಕ ಲೇಖನದಲ್ಲಿ ಮುಂದೆ ಬರಲಿರುವ ಪ್ರವಾಸ ಕಥನಕ್ಕೆ ಪೀಠಿಕೆಯೇನೊ ಅನ್ನುವಂತೆ ಬರಹ-ಕವಿತೆ-ಫೋಟೊಗಳ ಚಿತ್ತಾರವನ್ನು ಕೊಟ್ಟಿದ್ದಾರೆ. ಅವರು ’ಆಲ್ಪ್ಸ್ ನ ಎದುರಲ್ಲಿ ತಮ್ಮ ಅಲ್ಪತೆಯನ್ನು’ ಕಂಡವರು! ಅವರ ಬರಹದಲ್ಲಿ ಅವರ ರೈಲು ಪ್ರವಾಸದ ನಕ್ಷೆ ಸಹ ಇದೆ. ಅದರಲ್ಲಿ ಅಲ್ಲಿಯ ಸೌಂದರ್ಯಕ್ಕೆ ಮಾರುಹೋದದ್ದನ್ನು ಕಾಣಬಹುದು.  ರಾಧಿಕಾ ಅವರು ’ಅನಿವಾಸಿ’ಗೆ ಹೊಸಬರಲ್ಲ. ಹಿಂದೆ ಅನೇಕ ಲೇಖನಗಳನ್ನು ಕೊಟ್ಟಿದ್ದಾರೆ. ಇಲ್ಲಿ ಕೆಲವರು ಹೊಸದಾಗಿ ಸೇರಿರಬಹುದೆಂದು ನನ್ನ ಸಲಹೆಯ ಮೇರೆಗೆ ಮತ್ತೆ ತಮ್ಮ ಕಿರುಪರಿಚಯದಿಂದ ಲೇಖನವನ್ನು ಪ್ರಾರಂಭ ಮಾಡಿದ್ದಾರೆ. ಅವರದು ತಮ್ಮದೇ ಒಂದು ಬ್ಲಾಗ್ ಸಹ ಇದ್ದು ಅದರಲ್ಲಿ ಆಗಾಗ ಬರೆಯುತ್ತಿರುತ್ತಾರೆ. (ಸಂಪಾದಕ)
ನನ್ನ ಪರಿಚಯ: 

ಮೂಲತಃ ಹುಬ್ಬಳ್ಳಿ ನನ್ನ ಊರಾದರು, ಮೈಸೂರಿನಲ್ಲಿ ನನ್ನ ಪ್ರಾಥಮಿಕ ಹಾಗು ಉನ್ನತ ವಿದ್ಯಾಭ್ಯಾಸ ಹೀಗಾಗಿ ಅದೇ ತವರು ಎಂಬ ಭಾವನೆ. ಸುಮಾರು 14 ವರ್ಷಗಳಿಂದ ಲಂಡನ್ ವಾಸಿ. ವೃತ್ತಿ ಇಂದ ಅಕೌಂಟೆಂಟ್ (ಸಿಎ). ಈಗ ಕೆಲವು ವರುಷಗಳಿಂದ
ಅಧ್ಯಾಪಕಿ ಆಗಿ ವೃತ್ತಿ ನಿರತಳಾಗಿದ್ದೇನೆ. ಪುಟ್ಟ ಕವನಗಳು ಬರೆಯುವುದು ನನ್ನ ಹವ್ಯಾಸ.

ರಾಧಿಕಾ ಜೋಶಿ
ಹಿಮಭರಿತ ಶೃಂಗ ಆಹಾ! ಇದೆ ಸ್ವರ್ಗ
ಇಂತಹ ಅದ್ಭುತ ದೃಶ್ಯ ನನ್ನ ಬಂಧಿಸಿ
ಕಣ್ಣ್ಮನ ಸೆಳೆದು ಎಲ್ಲವು ನಿಶಬ್ದವಾಗಿಸಿ
ಪರ್ವತ ಶ್ರೇಣಿಗಳ ಆ ರಮ್ಯ ದರ್ಶನ
ನಾನು ಮತ್ತು ನನ್ನ ಅಲ್ಪತೆಯ ನಿದರ್ಶನ
ಮಂತ್ರ ಮುಗ್ಧಳಾಗಿ ನಿಂದು
ಹಿಮದ ಸೊಬಗಿನಲ್ಲಿ ನಡೆದು
ಶೀತಲ ಹವೆಯು ಮೊದಲಬಾರಿಗೆ ಮನ ಸೆಳೆದು
ಹೃದಯ ಮಿಡಿತದ ಹೊರತು ಮತ್ತೇನು ಕೇಳದು
ಇದಕ್ಕಿಂತ ಇನ್ನೇನು ಪವಿತ್ರ ನಿಷ್ಕಲ್ಮಶ
ಉತ್ತುಂಗದ ವಜ್ರಕಾಯ ಸಾಹಸದ ವಿಸ್ಮಯ
ಸೂರ್ಯನ ಆ ತೀಕ್ಷ್ಣ ಕಿರಣ
ಎಲ್ಲವು ಮುತ್ತು ವಜ್ರಗಳ ಆಭರಣ
ಆ ಶಿಖರಗಳು ಪ್ರತಿಧ್ವನಿಸುವ ಭಯವು
ಅಲ್ಲೇ ಐಕ್ಯವಾದ ನನ್ನ ಮನವು
ಮರುಕಳಿಸಲಿ ಶಾಂತಿ ನೆಮ್ಮದಿಯ ಆ ನಿಮಿಷಗಳು
ಆಲ್ಪ್ಸ್ ನ ನಯನ ಮನೋಹರ ಆ ಕ್ಷಣಗಳು
ಹಿಮಭರಿತ ಶೃಂಗ ಆಹಾ! ಅದೇ ಸ್ವರ್ಗ

ರಾಧಿಕಾ ಜೋಶಿ

ಲೇಖನ ಮತ್ತು ಚಿತ್ರ ಕೃಪೆ: ಲೇಖಕಿ.

ನಾಲ್ಕು ಕವಿತೆಗಳು

ಕಳೆದೆರೆಡು ವಾರಗಳಿಂದ ಶುರುವಾದ ಅನಿವಾಸಿಯಲ್ಲಿ ಕವನಗಳ ಸುರಿಮಳೆ ಇನ್ನೂ ನಿಲ್ಲುವ ಹಾಗೆ ಕಾಣುತ್ತಿಲ್ಲ. ಈ ವಾರವೂ ಕೂಡ ಇತ್ತೀಚೆ ಜರುಗಿದ ಅನಿವಾಸಿ ವೈದ್ಯ ಕವಿಗೋಷ್ಠಿಯ ಎರಡು ಕವನಗಳಿವೆ; ಅದಕ್ಕೆ ಪೂರಕವಾಗಿ ನಾನು ಅನುವಾದಿಸಿದ ಕವನವನ್ನೂ ಪ್ರಕಟಿಸುತ್ತಿದ್ದೇನೆ. ಜೊತೆಗೆ ತುಂಬ ದಿನಗಳಾದ ಮೇಲೆ ಮತ್ತೆ ಪ್ರೇಮಲತ ಅವರು ಅನಿವಾಸಿಗೆ ಕವನವೊಂದನ್ನು ಕಳಿಸಿದ್ದಾರೆ. ಪ್ರತಿಕ್ರಿಯೆಗಳನ್ನು ಮಾತ್ರ ಮರೆಯಬೇಡಿ. – ಕೇಶವ

ಇದು ತರವೇ? – ಡಾ ಪ್ರೇಮಲತ

ಕನ್ನಡ ಸಾಹಿತ್ಯದಲ್ಲಿ ದಿಟ್ಟವಾದ ಹೆಜ್ಜೆಗುರುತು ಮೂಡಿಸಿದ ಕೆಲವೇ ಕೆಲವು ಅನಿವಾಸಿ ಕನ್ನಡಿಗರಲ್ಲಿ ಡಾ ಪ್ರೇಮಲತ ಮುಖ್ಯವಾಗಿ ಕಾಣುತ್ತಾರೆ. ಯು ಕೆ ಯಲ್ಲಿದ್ದು ಕಥಾಸಂಕಲನಗಳನ್ನು ಪ್ರಕಟಿಸಿದವರು ಇವರೊಬ್ಬರೆ. ಇವರು ಬರೆಯುವ ಕವಿತೆಗಳು ತುಂಬ ಉತ್ಕಟ, ಒಂದೇ ಉಸುರಿಗೆ ಬರೆದಂತೆ ಇರುತ್ತವೆ, ಹೊಸ ಪ್ರತಿಮೆಗಳನ್ನು ಹಠಾತ್ತಾಗಿ ತರುತ್ತಾರೆ, ಹಳೆಯ ಪ್ರತಿಮೆಗಳನ್ನು ಒಡೆಯುತ್ತಾರೆ. ಅವರ ಕವನ ಸಂಕಲನವೊಂದು ಬೇಗ ಬರಲಿ ಎಂದು ಹಾರೈಸುತ್ತ, ಅವರ ಒಂದು ಕವಿತೆ ನಿಮ್ಮ ಓದಿಗೆ.

ಚಿತ್ರರಚನೆ: ಸಂಪಾದಕರ ಆದೇಶದ ಮೇಲೆ ಕೃತಕ ಬುದ್ಧಿಮತ್ತೆ ರಚಿಸಿದ್ದು

ಯಾವಾಗ.. ಯಾಕೆ.. ಹುಟ್ಟಿತೋ ಪ್ರೀತಿ
ಇವನಿಗೆಂದು ಎಲ್ಲಿ ಹುದುಗಿತ್ತೋ ತಿಳಿದಿದ್ದರೆ
ಮನ ಬರಿದುಮಾಡಿಕೊಂಡೇ ಭೇಟಿ ಮಾಡುತ್ತಿದ್ದೆ

ಹಗಲು, ರಾತ್ರಿ ಕಣ್ಣೆವೆ ಬಿಚ್ಚಿಕೊಂಡೇ ಕಾಣುವ
ಕನಸುಗಳಲಿ ಇವನು ತುಂಬಿಕೊಳ್ಳುವನೆಂದು ಗೊತ್ತಿದ್ದರೆ
ಕಟ್ಟಿಹಾಕಿ, ಹೊರದೂಡಲು ಅನುವಾಗುತ್ತಿದ್ದೆ

ಹೃದಯ ಕಂಗೆಡಿಸಿರುವ ಮರುಳ ಮನಸಿನ ಪ್ರೀತಿ
ನನ್ನಲಿ ಮಾತ್ರ ಮನೆಮಾಡಿ, ಇಡಿಯಾಗಿ ದಹಿಸಿ
ಇವನ ಹಾಯಾಗಿರಲು ಬಿಡುವುದಾದರೂ ತರವೇ?

ಎದುರಿಲ್ಲದೆ, ಕೈಗೆ ಸಿಗದೆ, ಮೈ ಹಿಂಡುವ ಇವನ
ಮನಕೂ ನನ್ನಂಥದೇ ಬಾಣ ತಗುಲಿ ಘಾಸಿಯಾಗಲಿ
ಎಂದು ಬಯಸಿ, ದೀಪ ಹಚ್ಚಿಡಬಹುದೇ?

ಬರುವಾಗ ಬರಲೇನೆಂದು ಕೇಳಿ ಬರಲಿಲ್ಲ
ಹಿಂತಿರುಗಿಬಿಡೆಂದರೆ ಕೇಳುವುದೂ ಇಲ್ಲ
ಈ ಪ್ರೀತಿಯ ಹೊರದಬ್ಬಲು ನನ್ನ ತರ್ಕಕೆ ಶಕ್ತಿಯಿಲ್ಲ

ವಾಸ್ತವಕ್ಕೇನು ಗೊತ್ತು ಕನಸುಗಳ ರಂಗು
ಬೆರಗಿನ ಮೈ-ಮರೆಸುವ ಸೆಳೆತದ ಕವನದ ಗುಂಗು
ಗಟ್ಟಿಯಾಗಿ ತಬ್ಬಿರುವಾಗ ಬಿಡುಗಡೆಯಾದರೂ ಹೇಗೆ?

——————————————————————-

ಇಂಚರ – ಡಾ. ಗುರುಪ್ರಸಾದ್ ಪಟ್ವಾಲ್

ಈ ವಾರದ ಅನಿವಾಸಿಯಲ್ಲಿ ಡಾ. ಗುರುಪ್ರಸಾದ್ ಪಟ್ವಾಲ್ ಬರೆದ, ಪ್ರಾಸಬದ್ಧವಾದ, ನವೋದಯ ಕಾಲದ ಕವನಗಳನ್ನು ನೆನಪಿಸುವ ಅನಿವಾಸಿಗಳ ಪಾಡಿನ ಕವಿತೆಯಿದೆ. ಡಾ. ಗುರುಪ್ರಸಾದ್ ಅನಿವಾಸಿಗೆ ಹೊಸಬರಲ್ಲ. ವೃತ್ತಿಯಿಂದ ವೈದ್ಯರು, ಪ್ರವೃತ್ತಿಯಿಂದ ಯಕ್ಷಗಾನ ಪ್ರವೀಣರು. ಗಾಯಕರು ಮತ್ತು ನಾಟಕಕಾರರು. ಇನ್ನೂ ಹೀಗೇ ಹೆಚ್ಚು ಹೆಚ್ಚು ಕವನಗಳನ್ನು ಬರೆಯಬೇಕೆಂದು ಆಶಿಸುತ್ತೇನೆ.

ಚಿತ್ರರಚನೆ: ಸಂಪಾದಕರ ಆದೇಶದ ಮೇಲೆ ಕೃತಕ ಬುದ್ಧಿಮತ್ತೆ ರಚಿಸಿದ್ದು

ಮರದ ಕೊಂಬೆಯಲಿ ಕೂತು ಅಣಕಿಸಿದಳಾ ಹಕ್ಕಿ
ಇಂಚರದಲೇ ಹೇಳಿದಳು ಮಾತನು ನನ್ನೆದೆಯನು ಕುಕ್ಕಿ
ನಿನ್ನನೆಲ್ಲೋ ನೋಡಿಹೆ ನಿಮ್ಮೂರಿಂದಲೇ ನಾ ಬಂದಿಹೆ
ಕೇಳಿದಳು ಆ ಸಪ್ತ ಸಾಗರ ನೀ ದಾಟಿ ಬಂದು
ಹಂಗಿಸಿದಳು ಅರಿತೆಯಾ ನೀ ಯಾರು ಎಂದು
ನಾ ಹಾರಿದೆ ಕಾಳನ್ನರಸಿ ನೀ ಓಡಿದೆ ಏನನ್ನರಸಿ

ತೆಂಗು ಮತ್ತಲಿ ನಲಿದಿದೆ ತೆರೆಯ ಅಲೆಯ ಸಂಗೀತಕೆ
ಇಂದಿಗೂ ಅಷ್ಟೇ ಸೊಬಗು ನೋಡುವ ಬವಣೆ ನಿನಗೇತಕೆ
ಆಡಿದ ಬಯಲು ಓಡುತ ನಲಿದಿಹ ಗದ್ದೆಯ ಅಂಚು
ಕಾಯುತಿದೆ ಬೆಳಕ ಚೆಲ್ಲಲು ಮುಂಗಾರಿನ ಕೋಲ್ಮಿಂಚು
ಹಬ್ಬದಿ ಅಪ್ಪನೊಡೆ ಕೊಯ್ದ ಆ ಬತ್ತದ ತೆನೆ
ಅಮ್ಮ ಹಾಲಿಟ್ಟು ಮರೆತಳು ಉಕ್ಕಿತು ನೆನೆಪಿನೆ ಕೆನೆ

ಮಂಗ ಬಾಳೆ ಕೀಳಲು ಅಟ್ಟಿದಳಮ್ಮ ಕೂಗಿ
ಮಗ ಬಂದರೆ ತಿಂದಾನು ಕಾಯುವಳು ಮಾಗಿ
ಅಷ್ಟಮಿಯ ಉಂಡೆಯಿಲ್ಲ ಚೌತಿಗೆ ಕೊಟ್ಟೆ ಕಡಬಿಲ್ಲ
ಆ ಮರೆತ ಲೋಕದ ಅವಧಾನಕ್ಕೆ ನಿನಗಿಂದು ಬಿಡುವಿಲ್ಲ
ಮನೆ ಮುಂದೆ ನಲಿಯರಿಂದು ಹುಲಿ ವೇಷದ ಗುಂಪು
ಸಂಜೆಗೆಂಪಲಿ ನಿನ್ನ ನೆನಪೇ ಅವಳೊಡಲಿನ ತಂಪು

ನಿಮ್ಮೂರಿನ ಮುಂಗಾರಿನ ಹೊನ್ನೀರಲಿ ನೀ ಚಿಗುರಿ
ನಿನ್ನೆಲ್ಲಿಗೆ ಕೊಂಡೊಯ್ದಿತೋ ತಿರುಗುವ ಕಾಲದ ಬುಗುರಿ
ಇದಾವ ಪಂಜರ ಈ ಮಾಯೆ ನಾನೊಲ್ಲೆ
ಇದ ಮುರಿಯೆ ನೀ ಅರಿವೆ ನಾ ನಿನ್ನ ಬಲ್ಲೆ
ಇಲ್ಲಿ ನನಗೊಂದು ಮರ ನನಗಾವುದೋ ದೇಶ
ಅಲ್ಲಿ ನಿನ್ನೊಲವಿನ ರಂಗಸ್ಥಳ ಕಾದಿದೆ ನಿನ್ನ ಪ್ರವೇಶ

—————————————————————

ಚಳಿಗಾಲದ ಚಿತ್ರಗಳು – ಡಾ ರಾಮಶರಣ ಲಕ್ಷ್ಮೀನಾರಾಯಣ

ಇತ್ತೀಚೆಗೆ ಜರುಗಿದ ಅನಿವಾಸಿ ವೈದ್ಯರ ಕವಿಗೋಷ್ಠಿಯಲ್ಲಿ ಡಾ ರಾಮಶರಣ ಲಕ್ಷ್ಮೀನಾರಾಯಣ ಅವರು ಎರಡು ಕವನಗಳನ್ನು ವಾಚಿಸಿದರು. ಅವುಗಳಲ್ಲಿ ಒಂದು ಕವನ ನಿಮ್ಮ ಓದಿಗೆ. ರಾಮಶರಣ ಅನಿವಾಸಿಯ ಸಕ್ರಿಯ ಸದಸ್ಯರು. ಲೇಖನ ಮತ್ತು ಸಂಘಟನೆಯಲ್ಲಿ ಎತ್ತಿದ ಕೈ. ಆಗಾಗ ಕವನಗಳನ್ನೂ ಬರೆಯುತ್ತಾರೆ. ತುಂಬ ಓದಿಕೊಂಡಿದ್ದಾರೆ ಮತ್ತು ಚಿಂತಕ.

ಚಿತ್ರರಚನೆ: ಸಂಪಾದಕರ ಆದೇಶದ ಮೇಲೆ ಕೃತಕ ಬುದ್ಧಿಮತ್ತೆ ರಚಿಸಿದ್ದು

ಹಸಿರಿಲ್ಲದ ರೆಂಬೆಗಳು, ಕಳೆ ಇಲ್ಲದ ತೋಟಗಳು
ಮಂಜಿನ ಹಾದಿಯಲಿ ಕಪ್ಪು ಜಾಕೆಟ್ಟಿನ ಕಂದಮ್ಮಗಳು
ಕರ್ಟನ್ ತೆರೆಯದ ಮುಚ್ಚಿದ ಕಿಟಕಿಗಳು
ಹಗಲಲ್ಲೇ ದೀಪ ಹತ್ತಿಸಿ-ಹರಿಯುವ ಕಾರುಗಳು

ಫ್ರಿಜ್ಜಿನಲ್ಲಿಟ್ಟ ಗ್ಲಾಸದುವೆ ಕೊರೆಯುವ ತಂಗಾಳಿ
ತುಳುಕಲು ಕಾದಿವೆ ಮೋಡ ತೊಟ್ಟಿಗಳ ಪಾಳಿ
ಕಮರಿದ ಜೀವಕ್ಕೆ ಬೇಕೆನಿಸಿದೆ ಹಿಮಪಾತ
ಎಂದೊಡನೆ ಹಿಮದ ಕಣ ಕೆನ್ನೆಗಿತ್ತಿದೆ ಮುತ್ತ

ಬೆಂಚು-ಕೊಂಬೆಗಳ ಮೇಲೆಲ್ಲ ಬೆಳ್ಮಣ್ಣಿನ ಚಾದರ
ಅಂಗಳದ ತುಂಬೆಲ್ಲ ರಾಬಿನ್, ರೆನ್ ಗಳ ಇಂಚರ
ಇಳಿಜಾರುಗಳಲಿ ಚಿಣ್ಣರ ಸ್ಲೆಡ್ಜ್ಜುಗಳ ಕಾರುಬಾರು
ಹಿತ್ತಲು, ಮೈದಾನಗಳಲಿ ಸ್ನೋ ಮೆನ್ನುಗಳದೇ ದರಬಾರು

ಇರುಳೆಲ್ಲ ಹಗಲಾಯಿತು ಹಿಮಗನ್ನಡಿಯಲ್ಲಿ
ಐಸ್ ರಿಂಕಿನ ಅನುಭವವದು ನೆಲಗನ್ನಡಿಯಲ್ಲಿ
ಮಳೆರಾಯನು ಧಾವಿಸುವ ಬಿರುಗಾಳಿಯ ಬೆನ್ನೇರಿ
ಎಲ್ಲೆಡೆ ಹಾಹಾಕಾರ ತೊರೆ ನದಿಗಳು ಉಕ್ಕೇರಿ

—————————————————————-

ನೀರುಮುಳುಕ – ಕೇಶವ ಕುಲಕರ್ಣಿ

ಚಿತ್ರರಚನೆ: ಸಂಪಾದಕರ ಆದೇಶದ ಮೇಲೆ ಕೃತಕ ಬುದ್ಧಿಮತ್ತೆ ರಚಿಸಿದ್ದು

ಹೆಪ್ಪುಗಟ್ಟುವಂಥ ಚಳಿಗಾಲ
ನಡೆದೆ ದೇವದಾರುಗಳ ಕಾಡಿನಲ್ಲಿ
ಕಂಡೆ ಜಲಪಾತದಡಿಯಲ್ಲಿ
ಒಂಟಿ ಹಕ್ಕಿ.

ಹಸಿಬಂಡೆ ಮೇಲೆ ಹೊಳೆಯುತ್ತಿತ್ತು
ಹುಚ್ಚು ನೀರು ಸೋಕಿದಾಗ
ಹೊರ ಹಿಂಡಿತು ಕೊರಳಿಂದ
ಮೈಮರೆತಂತೆ ನಿಲ್ಲದ ಗಾನ

ಕೊಟ್ಟೆನೆನಲು ನನ್ನದಲ್ಲದು
ಹೇಗೆ ಪುಸಲಾಯಿಸಲಿ ಕೈಗೆ ಸಿಗೆಂದು
ಅದಕ್ಕೆ ನೀರನಾಳವೂ ಗೊತ್ತು
ನೆಲದ ಮೇಲೆ ನಿಂತು ಕೊರಳೆತ್ತಲೂ

————————————————-

ಅನಿವಾಸಿ ಭಾರತೀಯ ವೈದ್ಯ ಕವಿಗೋಷ್ಠಿ – ಭಾಗ 2; ಆಯ್ದ ಕವನಗಳು

ನಮಸ್ಕಾರ ಎಲ್ಲರಿಗೂ. 
ಇವತ್ತಿನ ಆವೃತ್ತಿಯಲ್ಲಿ ಅನಿವಾಸಿ ಭಾರತೀಯ ವೈದ್ಯ ಕವಿಗೋಷ್ಠಿಯ ಎರಡನೆಯ ಅಂತಿಮ ಭಾಗವಿದೆ. ಇಲ್ಲಿ ನಮ್ಮ ಅನಿವಾಸಿ ಗುಂಪಿನ ಇಬ್ಬರು ಕವಿಗಳ ಕವನಗಳೊಂದಿಗೆ, ಆಯೊಜಕರಾಗಿದ್ದ ಡಾ. ಗಡ್ಡಿ ದಿವಾಕರ ಹಾಗೂ ಡಾ. ವೀಣಾ ಎನ್ ಸುಳ್ಯ ಅವರ ರಚನೆಗಳೂ ಇವೆ. ಕಾರ್ಯಕ್ರಮವನ್ನು ಸುರಳೀತವಾಗಿ ನಡೆಸಿಕೊಡುವ ಜವಾಬ್ದಾರಿಯ ಜೊತೆಗೆ, ಎರಡು ಒಳ್ಳೆಯ ಕವನಗಳನ್ನು ಅಂದಿನ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಿದ್ದಕ್ಕೂ, ಅವನ್ನು ಅನಿವಾಸಿ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿಸಿದ್ದಕ್ಕೂ ಡಾ. ದಿವಾಕರ ಹಾಗೂ ಡಾ. ಸುಳ್ಯ ಅವರಿಗೆ ನನ್ನ ಕೃತಜ್ಞತೆಗಳು.
ಹೆಚ್ಚೇನೂ ಬರೆಯುವುದು ಬೇಕಿಲ್ಲ ಸಂಪಾದಕನಿಗೆ. ಮುಂದಿನ ಕೆಲಸ ನಿಮ್ಮದು, ಪ್ರಸ್ತುತಿಯನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸುವುದು.
- ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ).

*********************************************************

ರಾಮಶರಣ ಲಕ್ಷ್ಮೀನಾರಾಯಣ: ಅನಿವಾಸಿಯ ಸಕ್ರಿಯ ಸದಸ್ಯರಾದ ರಾಮ್ ಬಗ್ಗೆ ಹೇಳುವುದು ಬೇಕೇ? ಮಡಿಕೇರಿಯಲ್ಲಿ ಹುಟ್ಟಿ, ಅಂಕೋಲಾ ಮತ್ತು ದಾಂಡೇಲಿಯಲ್ಲಿ ಬೆಳೆದು, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಪದವಿ ಪಡೆದರು. ಮುಂಬೈನಲ್ಲಿ ಜನರಲ್ ಮೆಡಿಸಿನ್ ಎಂಡಿ ಮುಗಿಸಿ, ಪ್ರಸ್ತುತ ಯುಕೆಯಲ್ಲಿ ರುಮಟಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು 2024 ರ ವೈದ್ಯ ಸಂಪದ ಸಂಪಾದಕೀಯ ಮಂಡಳಿಯಲ್ಲಿ NRI ವೈದ್ಯ ವಿಭಾಗದ ಸಹ ಸಂಪಾದಕರಾಗಿದ್ದಾರೆ.

ಉಡುಗೊರೆ


ಅಪ್ಪ-ಅಮ್ಮ ಮಾಡಿದ ಕೋಪ,ಮಾಸ್ತರರ ಬೆತ್ತ
ಬಿಸಿಲಲ್ಲಿ ಅಜ್ಜಿ ಕೊಟ್ಟ ಮಜ್ಜಿಗೆ
ಇಂದು ತುಪ್ಪಟ ಹಾಸಿದ ಹಾಸಿಗೆ

ಜೊತೆಗಾರನ ತೋಳು, ಮಗುವಿನ ಮುಗ್ಧ ನಗು
ಗಟ್ಟಿ ಗೆಳೆಯರ ಪೊಗರು
ಇದ್ದರೆ ಸಂಸಾರ ಹಗುರು

ಲಿಂಗ ಭೇದವಿಲ್ಲದ ಪ್ರೀತಿ, ಮತಭೇದವಿಲ್ಲದ ದೋಸ್ತಿ
ವೀಸಾ ಹಮ್ಮಿಲ್ಲದೇ ಹಾರುವ ಹಕ್ಕಿಗಳ ವ್ಯಾಪ್ತಿ
ಒರೆಯಿಡದೇ ಬೆರೆತ ತೃಪ್ತಿ

ಸೋತು ಕಲಿತ ಪಾಠ, ಸ್ಪರ್ಧೆಯಿಲ್ಲದ ಓಟ
ಹಸಿರೇ ಹರಿಯುವ ನೋಟ
ಕೈಗೆಟುಕುವ ಹಣ್ಣಿನ ತೋಟ

ಬಕಾಸುರನಾಗದ ಬದುಕು, ಜಗ ಸುತ್ತಿ ಬರದ ಸರಕು
ಪೋಲಾಗದ ನೀರು, ಹಂಚಿ ಕುಡಿದರೆ ಸಾರು
ಉಳಿದೀತು ಬರಡಲ್ಲದ ನಾಡು

ಗೀತೆ, ಬೈಬಲ್, ಕುರಾನ್, ಗ್ರಂಥ ಸಾಹಿಬ್ ಗಳ ಸಾರ
ಬುದ್ಧ, ಶರಣರ ಉದ್ಗಾರ
ಸಂತೃಪ್ತ ಜೀವನಕೆ ಆಧಾರ

-ರಾಂ.

****************************

ಡಾ. ಶಿವಶಂಕರ ಮೇಟಿ: ಅನಿವಾಸಿಯ ಬಳಗಕ್ಕೆ ತಮ್ಮ ಕಥೆ-ಕವನಗಳ ಮೂಲಕ ಈಗಾಗಲೇ ಪರಿಚಿತರಾಗಿರುವ ಮೇಟಿಯವರ ಹುಟ್ಟೂರು – ಬೆಳಗಾವಿ  ಜಿಲ್ಲೆಯ ಧೂಪದಾಳ ಎಂಬ ಹಳ್ಳಿ. ಎಂ ಬಿ ಬಿ ಎಸ್ ಮಾಡಿದ್ದು ಕೆ ಎಂ ಸಿ  ಹುಬ್ಬಳ್ಳಿಯಿಂದ; ಸದ್ಯ  ನೆಲೆಸಿರುವುದು – ಸ್ಕಾಟ್ಲೆಂಡಿನ ಗ್ಲ್ಯಾಸ್ಗೋ ಪಟ್ಟಣದಲ್ಲಿ. ವೃತ್ತಿ – ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ.

ನಲ್ಲೆಗೊಂದು ನಲ್ಮೆಯ ಕವನ


ರವಿವರ್ಮನ ಕುಂಚದಲ್ಲಿ ಬಳಕಿರುವ ಬಾಲೆ ನೀನು
ಕಾಳಿದಾಸನ ಕಲ್ಪನೆ ನೀನು
ನಿನ್ನಂದವ ಬಣ್ಣಿಸಲೆನಗೆ ಈ ಜನ್ಮ ಸಾಲದಿನ್ನು
ಮರು ಜನ್ಮ ಬಾರದೇನು?

ಬೇಲೂರಿನ ಶಿಲೆಗಳಲ್ಲಿ
ಶಿಲ್ಪಿಗಳ ಕಲ್ಪನೆಯಲ್ಲಿ
ಏನೋ ಒಂದು ಕೊರತೆ ಇತ್ತು
ಏನೋ ಒಂದು ಕೊರತೆ ಇತ್ತು!!
ಬಾಲೆಯರ ಸಾಲಿನಲ್ಲಿ ನಿನಗೂ
ಒಂದು ಸ್ಥಳ ಬೇಕಿತ್ತು

ಯಮುನಾ ನದಿ ತೀರದಲ್ಲಿ
ಶಿಲ್ಪಿಗಳ ಮನಸಿನಲ್ಲಿ
ಏನೋ ಒಂದು ಕೊರತೆ ಇತ್ತು
ಏನೋ ಒಂದು ಕೊರತೆ ಇತ್ತು!!
ತಾಜಮಹಲಿನ ಗೋಡೆಯ ಮೇಲೆ
ನಿನ್ನ ಬಿಂಬಕೆ ಸ್ಥಳ ಬೇಕಿತ್ತು

- ಶಿವಶಂಕರ ಮೇಟಿ.

*********************************

ಡಾ. ಗಡ್ಡಿ ದಿವಾಕರ: ಮೂಲತಃ ಬಳ್ಳಾರಿಯವರಾದ ಡಾ। ಗಡ್ಡಿ ದಿವಾಕರ ಇವರು ತಮ್ಮ ಎಂಬಿಬಿಎಸ್ ಹಾಗೂ ಎಂಎಸ್ (ಶಸ್ತ್ರ ಚಿಕಿತ್ಸೆ) ಪದವಿಯನ್ನು ಬಳ್ಳಾರಿಯ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ (ಈಗ ವಿಮ್ಸ್ ಅಂದರೆ ವಿಜಯನಗರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ದಲ್ಲಿ ಪಡೆದ ನಂತರ ಮಕ್ಕಳ ಶಸ್ತ್ರಚಿಕಿತ್ಸೆಯಲ್ಲಿ ಎಂ.ಸಿಎಚ್. ಪದವಿಯನ್ನು ಮುಂಬೈನ ಸೇಟ್ ಜಿ ಎಸ್ ಮೆಡಿಕಲ್ ಕಾಲೇಜಿನಿಂದ ಪಡೆದಿದ್ದಾರೆ. ಪ್ರಸ್ತುತ ಬಳ್ಳಾರಿಯ ವಿಮ್ಸ್ ನಲ್ಲಿಯೇ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಕನ್ನಡದಲ್ಲಿ ಆಸಕ್ತಿ ಹಾಗೂ ಭಾರತೀಯ ವೈದ್ಯ ಸಂಘದ ಹಾಗೂ ಐಎಂಎ ಕನ್ನಡ ವೈದ್ಯ ಬರಹಗಾರರ ಸಂಘದ ಸಕ್ರಿಯ ಸದಸ್ಯರು ಆಗಿದ್ದಾರೆ. ಬಳ್ಳಾರಿಯಲ್ಲಿ ೨೦೨೨ ರಲ್ಲಿ ನಡೆದ ಸಂಗಮ ಅಂತರರಾಷ್ಟ್ರೀಯ ಕವಿ ಸಮ್ಮೇಳನದ ಆಯೋಜಕ ತಂಡದ ಸದಸ್ಯರೂ ಹೌದು.

ಸಪ್ತಸಾಗರದಾಚೆ


ಸಪ್ತಸಾಗರದಾಚೆ ಬದುಕು
ಅರಸಿ ವಲಸೆ ಹೋದವರು,
ಮಾಂಸಮಜ್ಜೆಗಳ
ತನುವಿಹುದಿಲ್ಲಿ
ಮನವೆಲ್ಲ ತಾಯ್ನೆಲದಲ್ಲಿ!

ಹೆತ್ತವರು ಒಡಹುಟ್ಟಿದವರು
ಎಲ್ಲ ತಾಯ್ನೆಲದಲ್ಲಿ,
ನಿತ್ಯನಿರತರು ನಾವು
ಪರಕೀಯರಾಗಿ ಪರದೇಶದಲ್ಲಿ
ಜೋಳಿಗೆ ತುಂಬುವಲ್ಲಿ !

ಅಮ್ಮನ ಕೈತುತ್ತಿನ ಬಯಕೆ
ಅಪ್ಪನ ಸಾಂತ್ವಾನಕ್ಕೆ ಚಡಪಡಿಕೆ,
ಅಂಬೆಗಾಲಿಟ್ಟು ಆಡಿದ
ತಾಯ್ನಾಡು
ಕೈಬೀಸಿ ಕರೆದಂತಿದೆ ನೋಡು!

ವಯಸ್ಸು ನಿರ್ದಾಕ್ಷಿಣ್ಯ
ಅಮ್ಮನಿಗೆ ಮಧುಮೇಹ
ಅಪ್ಪನಿಗೆ ವಯಸ್ಸಿನ ಕ್ಷಯ!
ನಾವು ಊರುಗೋಲಾಗದ ಸಂಧಿವಾತ
ಹಿತಸಾಂತ್ವಾನ ಕೇವಲ
ಬಾನುಲಿಗೆ ಸೀಮಿತ!

ಅಪ್ಪನ ಉಸಿರು ನಿದ್ದೆಯಲೆ ನಿಂತಂತೆ ದುಸ್ವಪ್ನ,
ಅಪರಾಧಿ ಭಾವದಲಿ
ಮನ ಕನಸಲ್ಲೆ ಮಾಡಿದೆ ಕಾಲ್ಜಾರಿ
ಬೀಳುವ ಅಮ್ಮನ ಹಿಡಿಯುವ ಯತ್ನ!

ಇದ್ದುಇಲ್ಲದ ಬದುಕು
ಸಪ್ತಸಾಗರದಾಚೆ
ಮುಟ್ಟಿದೆ ಸಾಗಿ,
ನಡೆದಿದೆ ಜೀವಚ್ಛವವಾಗಿ
ಹಾಗೆ ಸುಮ್ಮನೆ!

- ಡಾ॥ ಗಡ್ಡಿ ದಿವಾಕರ.

*****************************

ಡಾ. ವೀಣಾ ಎನ್ ಸುಳ್ಯ: ವೃತ್ತಿಯಲ್ಲಿ ಸ್ತ್ರೀ ಆರೋಗ್ಯ ಹಾಗೂ ಪ್ರಸೂತಿ ತಜ್ಞೆ. ಪ್ರವೃತ್ತಿಯಿಂದ ಲೇಖಕಿ, ಕಲಾವಿದೆ.  ಕೃತಿಗಳು: ಸ್ತ್ರೀ ಸ್ವಾಸ್ಥ್ಯ, ಭಾವಾರ್ಣವ, ಹೃದಯಾರ್ಣವ, ಪಾಂಚಜನ್ಯದ ಘೋಷ, ಭಾವಯಾನ (ಗಝಲ್ ಲೋಕದಲ್ಲಿ ಒಂದು ಪಯಣ), ಕುಣಿಯೋಣು ಬಾರ (ಶಿಶುಗೀತೆ) ಎಂಬ ಕವನ ಸಂಕಲನ.  ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆ ಜೊತೆಗೆ ವಿವಿಧ  ಶಾಲಾಕಾಲೇಜುಗಳಲ್ಲಿ  ಕವಿ-ಕೃತಿ-ಬದುಕು ಬಗ್ಗೆ, ಸಾಹಿತ್ಯದ ವಿಚಾರಗಳ  ಕಾರ್ಯಕ್ರಮ ಸಂಘಟನೆ;  ಭಾರತೀಯ ವೈದ್ಯಕೀಯ ಸಂಘ,  ಕನ್ನಡ ವೈದ್ಯ ಬರಹಗಾರರ ವೇದಿಕೆ  ಮತ್ತು ವಾಸವಿ ಸಾಹಿತ್ಯ ಕಲಾ ವೇದಿಕೆ ವತಿಯಿಂದ “ಸಾಹಿತಿಗಳಿಗೊಂದು ಸಂಜೆ” ಎಂಬ ವಿಶೇಷ ಆನ್ ಲೈನ್ ಕಾರ್ಯಕ್ರಮವನ್ನ ಪ್ರತಿ ಭಾನುವಾರ.  ಜೊತೆಗೆ ವಾಸವಿ ಸಾಹಿತ್ಯ ಕಲಾ ವೇದಿಕೆ ವತಿಯಿಂದ 200ಕ್ಕೂ ಹೆಚ್ಚು ಸರಣಿ ಕಾರ್ಯಕ್ರಮ; ವೈದ್ಯಕೀಯ, ಸಾಹಿತ್ಯ, ಸಂಗೀತ, ಯಕ್ಷಗಾನ, ಸಂಘಟನೆ  ಸೇರಿದಂತೆ ನಿರಂತರ ಕ್ರಿಯಾಶೀಲರಾಗಿ ಇರುವವರು.

ಭೋಗದಲಿ ಮುಳುಗದಿರಿ 


ಜಗದ ಬಯಕೆಯು ಜೀವ ತಳೆಯುತ
ಹುಟ್ಟಿ ಬಂದಿಹ ಮನುಜ ಕುಲಜರೆ
ಮರೆತು ಬಿಟ್ಟಿರೆ ಬಂದ ಕಜ್ಜವ ಮುಳುಗಿ ಭೋಗದಲಿ|
ತಂದೆ ತಾಯಿಯ ನೀತಿ ನಿಯಮದ
ಮಾತ ಕೇಳುತ ಬೆಳೆದು ಬಂದರೂ
ಎಲ್ಲಿ ಹೋಯಿತು ಸತ್ಯ ತ್ಯಾಗದ ಶಾಂತಿ ಮಂತ್ರವದು||

ಎಲ್ಲಿ ನೋಡಲು ಅಲ್ಲಿ ನಡೆಯುವ
ಮೋಸ ಜಾಲದ ಕುಟಿಲ ತಂತ್ರವ
ನೋಡು ನೋಡುತ ಶಿಥಿಲವಾಗಿದೆ ಮನದ ಭಾವಗಳು|
ಮನದ ಕಣ್ಣನು ಒಮ್ಮೆ ತೆರೆಯುತ
ನಡೆದು ಬಂದಿಹ ದಾರಿ ನೋಡಲು
ತಪ್ಪು ಸರಿಗಳ ಮುಸುಕು ಸರಿಯಲು ನಿಜವು ಕಾಣುವುದು||

- ಡಾ. ವೀಣಾ ಎನ್ ಸುಳ್ಯ

***********************************************************

ಅನಿವಾಸಿ ಭಾರತೀಯ ವೈದ್ಯ ಕವಿಗೋಷ್ಠಿ – ಭಾಗ 1; ಆಯ್ದ ಕವನಗಳು

ಪ್ರಿಯರೇ, ನಮಸ್ಕಾರ. ಹೊಸವರ್ಷದ ಶುಭಾಶಯಗಳು (ನನ್ನಿಂದ). ಹೋದ ವಾರ ಭಾರತೀಯ ವೈದ್ಯ ಸಂಘದ ಕರ್ನಾಟಕ ಶಾಖೆಯ ವತಿಯಿಂದ ಆಯೋಜಿತವಾದ ಅನಿವಾಸಿ ಭಾರತೀಯ ಕವಿಗೋಷ್ಠಿ ನಡೆಯಿತು. ಇದರಲ್ಲಿ ಹಲವಾರು ಭಾರತೀಯ ಮೂಲದ ಕವಿ-ಕವಯತ್ರಿಯರು ತಮ್ಮ ಕವನಗಳನ್ನು ಓದಿದರು.  ಅಮೇರಿಕಾ, ಇಂಗ್ಲಂಡ್ ಮತ್ತು ಕತಾರ್ ದೇಶವಾಸಿಗಳಾಗಿರುವ ಕವಿಗಳ ಕವನಗಳು ವಿವಿಧ ವಿಷಯಗಳ ಮೇಲಿದ್ದು,  ಅವುಗಳ ಕನ್ಸ್ಟ್ರಕ್ಷನ್, ಭಾಷೆ, ಪದಲಾಲಿತ್ಯ ಆಕರ್ಷಕವಾಗಿದ್ದವು. ಇಂಗ್ಲಂಡಿನ ಕವಿಗಳ ಪರಿಚಯ ಅನಿವಾಸಿ ಗುಂಪಿನ ಮೂಲಕ ನನಗೆ ಇದೆ, ಡಾ. ಜಯಕೀರ್ತಿ ರಂಗಯ್ಯ ಅವರನ್ನು ಹೊರತುಪಡಿಸಿ.  ಕೊನೆಯಲ್ಲಿ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಅಮೆರಿಕದ ಡಾ. ತ್ರಿವೇಣಿ ಶ್ರೀನಿವಾಸರಾವ್ ಅವರು, ಪ್ರತಿ ಕವನದ ವಿಮರ್ಶೆ ಮಾಡಿದರು. ಡಾ. ಗಡ್ಡಿ ದಿವಾಕರ್ ಅವರು ಕಾರ್ಯಕ್ರಮವನ್ನು ಸಮಯ ತಪ್ಪದಂತೆ, ಇನ್ನೊಬ್ಬ ವೈದ್ಯಕವಯಿತ್ರಿ ಡಾ. ವೀಣಾ ಎನ್ ಸುಳ್ಯ ಅವರ ಸಹಯೋಗದಲ್ಲಿ ನಡೆಸಿಕೊಟ್ಟರು.   ಅದರಲ್ಲಿನ ಆಯ್ದ ಕವನಗಳನ್ನು ಇಂದಿನ ಬ್ಲಾಗಿನಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ, ಆಯಾ ಕವಿಗಳ ಪರಿಚಯದೊಂದಿಗೆ. ಈ ಕಾರ್ಯಕ್ರಮದ ಹಿನ್ನೆಲೆಯನ್ನು ಬರೆದು ಕೊಟ್ಟ ಮಿತ್ರ ರಾಮಶರಣರಿಗೆ ವಂದನೆಗಳು. 
ಕವನಗಳನ್ನು ಎರಡು ಆವೃತ್ತಿಗಳಲ್ಲಿ ಭಾಗ ಮಾಡಿ ಹಾಕುತ್ತಿದ್ದೇನೆ. ಎಂದಿನಂತೆ ಓದಿ ನಿಮ್ಮ ಅನಿಸಿಕೆ ಬರೆಯುವುದು.
ಧನ್ಯವಾದಗಳೊಂದಿಗೆ – ಲಕ್ಷ್ಮಿನಾರಾಯಣ ಗುಡೂರ, ವಾರದ ಸಂಪಾದಕ.

**************************************************************

ಹಿನ್ನೆಲೆ: (ಕೃಪೆ: ಡಾ. ರಾಮಶರಣ ಲಕ್ಷ್ಮೀನಾರಾಯಣ) 
ಭಾರತೀಯ ವೈದ್ಯ ಸಂಘದ ಕರ್ನಾಟಕ ಘಟಕ ವೈದ್ಯ ಬರಹಗಾರರ ಸಮಿತಿಯನ್ನು ಸುಮಾರು ೫ ವರ್ಷಗಳ ಹಿಂದೆ ಪ್ರಾರಂಭಿಸಿತು. ಈ ಸಮಿತಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಕೋವಿಡ್ ಸಮಯದಲ್ಲಿ ವೈದ್ಯ ಕವಿ ಸಮ್ಮೇಳನವನ್ನೂ ನಡೆಸಿತ್ತು. ಎರಡು ವರ್ಷಗಳ ಹಿಂದೆ ವೈದ್ಯ ಸಂಪದ ಎಂಬ ದ್ವೈ ಮಾಸಿಕ ಪತ್ರಿಕೆಯನ್ನು ಅಂತರ್ಜಾಲದಲ್ಲಿ ಪ್ರಕಟಿಸುತ್ತಿದೆ. ಅನಿವಾಸಿಯಾ ಸದಸ್ಯರಾದ ಡಾ. ಕೇಶವ ಕುಲಕರ್ಣಿ ಈ ಸಂಚಿಕೆಯ ಮೊತ್ತ ಮೊದಲ ಅನಿವಾಸಿ ಭಾರತೀಯ ವಿಭಾಗದ ಸಂಪಾದಕರಾಗಿ ೨೦೨೨ರಲ್ಲಿ ಕಾರ್ಯನಿರ್ವಹಿಸಿದರು. ಆಗ ಅವರು ಈ ಪತ್ರಿಕೆಯ ಸಂಚಿಕೆಗಳನ್ನು ವಾಟ್ಸ್ಯಾಪ್ ಮೂಲಕ ನಮ್ಮೊಡನೆ ಹಂಚಿಕೊಂಡಿದ್ದು ನೆನಪಿರಬಹುದು. ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷೆ ಡಾ. ವೀಣಾ ಸುಳ್ಯ ಅನಿವಾಸಿ ವೈದ್ಯರನ್ನು ಒಟ್ಟುಗೂಡಿಸಿ ಕವಿ ಸಮ್ಮೇಳನವನ್ನು ಜಾಲ ತಾಣದಲ್ಲಿ ನಡೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರೇ, ಡಾ. ಗಡ್ಡಿ ದಿವಾಕರ್ ಅವರನ್ನು ನಿರ್ವಾಹಕರನ್ನಾಗಿ ನಿಯೋಜಿಸಿದರು. ಈಗಿನ ವೈದ್ಯ ಸಂಪದದ ಅನಿವಾಸಿ ವಿಭಾಗದ ಸಂಪಾದಕರ ಹಾಗೂ ತಮ್ಮ ಸಂಪರ್ಕ ಜಾಲದ ಮೂಲಕ ವೈದ್ಯ ಬರಹಗಾರರನ್ನು ಕಲೆ ಹಾಕಿದರು. ಒಪ್ಪಿಕೊಂಡ ಕವಿಗಳಿಂದ ಕವನಗಳನ್ನು ಪಡೆದುಕೊಂಡು, ಅಧ್ಯಕ್ಷರಾದ ಅಮೆರಿಕೆಯಲ್ಲಿ ನೆಲೆಸಿರುವ ತ್ರಿವೇಣಿ ರಾವ್ ಅವರಿಗೆ ಅವನ್ನು ತಲುಪಿಸಲಾಗಿತ್ತು. ಮೊದಲೇ ನಿಗದಿ ಪಡಿಸಿದ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರವಿವಾರ ಮಧ್ಯಾಹ್ನ ೨:೩೦ಕ್ಕೆ ಪ್ರಾರಂಭವಾಯಿತು.

****************************

ಡಾ. ಮುರಳಿ ಹತ್ವಾರ ಅವರ ಮೂಲ ಕೋಟೇಶ್ವರ. ಬೆಳೆದ ಊರು ಬಳ್ಳಾರಿ. ಬೆಂಗಳೂರು, ಬಳ್ಳಾರಿಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಮುರಳಿ, ಈಗ ಲಂಡನ್ನಿನಲ್ಲಿ ಹಾರ್ಮೋನು ವೈದ್ಯರಾಗಿ ಕಾರ್ಯನಿರತರಾಗಿದ್ದಾರೆ. ಮುರಳಿ ನಮ್ಮ ಅನಿವಾಸಿ ಬ್ಲಾಗಿನ ಓದುಗರಿಗೆ, ತಮ್ಮ ಕವನ, ಹೈಕುಗಳ ಮೂಲಕ ಈಗಾಗಲೇ ಚಿರಪರಿಚಿತರಾಗಿದ್ದಾರೆ.

ಹೆಜ್ಜೆಗಳು:

ನಿನ್ನೆ ನಡೆದ ಹೆಜ್ಜೆಗಳ ಗುರುತು
ಹಿಡಿಯಲು ಮತ್ತೆ ಮರಳುವಾಸೆ
ಅಳಿಸಿದ ಅಲೆಗಳಲ್ಲಿ ಅದನ್ನು
ಹುಡುಕುವದು ಹೇಗೆ?

ಹೆಜ್ಜೆಗಳ ದಾರಿ ಎಳೆದ ಮೋಡಗಳೆಲ್ಲ
ಮಳೆಯಾಗಿ ಮರೆಯಾಗಿವೆ
ಸುಡುವ ಬಿಸಿಲಿನ ಸೂರ್ಯ
ಸರಿದಂತೆ ಹೊರಳುವ ನೆರಳಿನ ದಿಕ್ಕು,
ನಕ್ಷತ್ರಗಳ ಬೆಳಕು ಹೇಳುವ ದಾರಿ
ತಿಳಿಯುವುದು ಹೇಗೆ?

ಎಷ್ಟು ಸದ್ದಿನ ಹೆಜ್ಜೆಗಳು!
ಒಂದು ಊರುವದರಲ್ಲಿ ಮತ್ತೊಂದು
ಬೇಗ! ಬೇಗ! ಬೇಗ!
ಮುಂದೆ ಹೋದಷ್ಟೂ ಅವಸರ,
ದಾರಿಯ ಹೂಗಳ ಪರಿಮಳವೂ ತಿಳಿಯದಷ್ಟು.
ಬೇಲಿಯ ಮುಳ್ಳುಗಳ ಕಲೆ ಮೈತುಂಬಾ.

ಯಾವ ಹೆಜ್ಜೆಯ ಜಾಡು, ಯಾವ ನೆರಳಿನ ಛಾಯೆ?
ನಿನ್ನೆಯೋ? ನಾಳೆಯೋ?
ನಂಬಿಕೆಯ ದೀವಿಗೆಯೊ? ಕಲ್ಪನೆಯ ಮಾಯೆಯೋ? ಎಲ್ಲ ಬೆಳಕೀಗ ಶೂನ್ಯ; ಮನಸು ಮುಳುಗಿದ ಗುಡ್ಡೆ.
ಹೊಸ ಉಸಿರಿನ ಹುಡುಕಾಟ
ನೀರ ದಾಟಿಸುವ ಸೇತುವೆಯ ಕಟ್ಟ ಬೇಕಿನ್ನೂ

ಕಾಲಿನಡಿ ಸರಿದ ನೀರು, ತೊಯ್ದ ಮಣ್ಣಿನ ಸ್ಪರ್ಶ
ಮೈ ಸೋಕಿದ ತಂಗಾಳಿ, ಕಣ್ತೆರೆಯೆ ಆಗಸದ ಕೆಂಪು
ಸುತ್ತ ತರತರದ ಕಂಪಿನ ಹೂಗಳು
ಉಸಿರೆಳೆದು ನಿಂತ ಮನದೊಳಗೆ ಹೊಸ ರೆಕ್ಕೆಗಳು

ಕಾಲು ಮುಟ್ಟಿದ ಅಲೆ ಕರೆದು ಹೇಳಿತು:
ಈ ಹೆಜ್ಜೆಯ ಗುರುತು ನೀನೆ ಇಟ್ಟುಕೋ.

- ಡಾ. ಮುರಳಿ ಹತ್ವಾರ್

**************************************

ಡಾ. ಜಯಕೀರ್ತಿ ರಂಗಯ್ಯ: ಹುಟ್ಟಿದ್ದು, ಬೆಳೆದಿದ್ದು: ಚಿಕ್ಕನಾಯಕನ ಹಳ್ಳಿ, ತುಮಕೂರು ಜಿಲ್ಲೆ. ಓದಿದ್ದು: ಎಂ.ಬಿ.ಬಿ.ಎಸ್ (ಬಿ.ಎಂ.ಸಿ) ಎಂ.ಡಿ. ಮೈಕ್ರೋಬಯಾಲಜಿ (ಜಿಪ್ಮರ್, ಪಾಂಡಿಚೆರಿ), ಎಫ್.ಆರ್.ಸಿ.ಪ್ಯಾಥ್ (ಯು.ಕೆ) ಕರ್ಮಸ್ಥಳ: ಎಪ್ಸಂ & ಸೇಂಟ್ ಹೆಲಿಯರ್ ಆಸ್ಪತ್ರೆ. ಲಂಡನ್

ವೀರಸನ್ಯಾಸಿಗೂಂದು ನುಡಿನಮನ

ಎಂಥ ಕಾಂತಿ, ಏನು ಶಾಂತಿ
ನಿಮ್ಮ ಕಣ್ಣ ನೋಟದಲಿ

ಕೋಟಿ ಸೂರ್ಯ ಸಮಪ್ರಭೆ
ಸಪ್ತ ಋಷಿಯ ಮೊಗದಲಿ

ಎಂಥ ಕೆಚ್ಚು, ಏನು ಶೌರ್ಯ
ನಿಮ್ಮ ಪ್ರತೀ ಮಾತಲಿ

ತಾಯಿ-ತಂದೆ, ಬಂಧ ಹರಿದೆ
ಸುಖದ ಬಾಳು, ಸಂಸಾರ ತೂರೆದೆ

ಗುರುವ ಪಡೆದು, ಕಾವಿ ತೂಟ್ಟೆ
ಜನರ ಪೂರೆವ, ಶಪಥವಿಟ್ಟೆ

ದೇಶ ಪೂರ ನಿಮ್ಮ ಹೆಜ್ಜೆ
ದೇಶದೊರಗೂ ಅದರ ಸದ್ದು

ಲೋಲುಪತೆಯ ಪರದೇಶದಲ್ಲೂ
ನಾಡ ಜನರ ಚಿಂತೆ ನಿಮಗೆ

ಅನ್ನ-ನೀರು,ನಿದ್ರೆ-ಭೋಗ ಎಲ್ಲ ತೃಣ
ಜೀವಾತ್ಮನ ಸೇವೆಯಲಿ

ಪತಂಜಲಿಯ ಮರೆತ ಮಣ್ಣಿನಲ್ಲಿ
ಯೋಗಸೂತ್ರದೊಸಬೆಳೆ

ಭಕ್ತಿ-ಕರ್ಮ, ಜ್ಞಾನಯೋಗ
ಶಕ್ತಿಯಿರೆ, ರಾಜಯೋಗ

ತಾಳ್ಮೆ, ತುಡಿತ, ಅಖಂಡ ಪ್ರೀತಿ
ನೀವು ಕೊಟ್ಟ ಮಹಾಮಂತ್ರ

ಕೀರ್ತಿ, ಕನಕ ಮೋಹ-ದಾಹ
ಜಯಿಸೊ ವಿವೇಕ ನೀಡು ತಂದೆ,
ಯುಗಪುರುಷನ ಕಂದನೇ!

- ಡಾ। ಜಯಕೀರ್ತಿ ರಂಗಯ್ಯ , ಯು.ಕೆ.

*************************************

ಡಾ. ಸವಿತಾ ಕಲ್ಯಾ: ಹುಟ್ಟಿದ್ದು, ಬೆಳೆದಿದ್ದು ಮೈಸೂರಿನಲ್ಲಿ. ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ / ಜೆಎಸ್ಎಸ್ ವೈದ್ಯಕೀಯ ಕಾಲೇಜಿನಲ್ಲಿ ಪದವಿ. ರೈಟ್ ರಾಜ್ಯ ವಿಶ್ವವಿದ್ಯಾಲಯ, ಡೇಟನ್, ಒಹಾಯೊದಲ್ಲಿ  ಆಂತರಿಕ ವೈದ್ಯಕೀಯದಲ್ಲಿ ರೆಸಿಡೆನ್ಸಿ: ಸಂಧಿವಾತಶಾಸ್ತ್ರದಲ್ಲಿ ಫೆಲೋಶಿಪ್: ವಿಸ್ಕಾನ್ಸಿನ್ ವೈದ್ಯಕೀಯ ಕಾಲೇಜು, ಮಿಲ್ವಾಕೀ . ಅರಿಜೋನಾದ ಫೀನಿಕ್ಸ್‌ನಲ್ಲಿರುವ ಕ್ರೈಟನ್ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ವ್ಯಾಲಿ ವೈಸ್ ಹೆಲ್ತ್‌ಕೇರ್ ಸೆಂಟರ್‌ನಲ್ಲಿ ಸಿಬ್ಬಂದಿ ಸಂಧಿವಾತಶಾಸ್ತ್ರಜ್ಞರಾಗಿದ್ದಾರೆ. ಹವ್ಯಾಸಗಳಲ್ಲಿ ಪ್ರದರ್ಶನ, ವಿಶೇಷವಾಗಿ ಕನ್ನಡದಲ್ಲಿ ಬರೆಯುವುದು ಸೇರಿವೆ. ಯೂಟ್ಯೂಬ್‌ನಲ್ಲಿ ಇವರು ಬರೆದು,ನಟಿಸಿದ  ” NRI, non respected Indian ” ಹಾಗು ಅಕ್ಕ ನಾಟಕ ಹೆಚ್ಚು ಗುರುತಿಸಲ್ಪಟ್ಟಿವೆ.

ಅರ್ಹತೆಗೆ ಪಟ್ಟ

ಜೀವನ ಚದುರಂಗದಾಟ
ರಾಜನಿಗೆ ಒಂದೇ ಚೌಕದೋಟ
ರಕ್ಷಿಸುವಳು ರಾಣಿ ಆಡಿ ಪರದಾಟ
ಆದರೂ ಕಟ್ಟುವೆವು ರಾಜನಿಗೆ ಪಟ್ಟ

ಪುಟ್ಟಿ ಹುಟ್ಟಿದರೆ ಬೇಡುವೆವು ಪುಟ್ಟ
ಪುಟ್ಟಿಗೆ ಮನೆ ತವರೆಂದು ಮಾಡುವೆವು ಮನದಟ್ಟ
ಹೊರುವಳು ಆಮನೆ ಈಮನೆ ಭಾರದ ಬೆಟ್ಟ
ಆದರೂ ಕುಲೋದ್ಧಾರಕನೆಂಬ ಬಿರುದ ಪುಟ್ಟನೇತೊಟ್ಟ

ಪುಟ್ಟಿ ಮಾತನಾಡಿದರೆ ವಾಯಾಡಿ, ನಲಿದರೆ ವಯ್ಯಾರಿ
ಕೋಪ ತೋರಿದರೆ ಬಜಾರಿ , ಬಾಯಿ ಮುಚ್ಚೆ ರಾಜಕುಮಾರಿ
ಕೆಂಡ ಕಾರಿದರೆ ಕಾಳಿ, ಅನ್ಯಾಯ ವಿರೋಧಿಸಿದರೆ ಮನೆಹಾಳಿ
ಸಹಸ್ರನಾಮದ ನಡುವೆ ಮನಬಿಚ್ಚಿ ಹೇಗೆ ಬಾಳಿಯಾಳು ಹೇಳಿ

ಪುಟ್ಟ ಹುಟ್ಟಿದ್ದಕ್ಕೆ ಜಾಣ, ಅಪ್ಪ ಅಮ್ಮಗೆ ಆಭರಣ
ಮನೆತನದ ಹೆಸರು ಮುಂದುವರೆಸುವ ರಾಮಬಾಣ
ಮಗನ ಹೆರದಿದ್ದರೆ ಕೊರಗುವರು ಇಡೀ ಕುಲವೇ ಭಣಭಣ
ಕಾಲಾನುಕಾಲದಿಂದ ಭೇದಬಗೆಯುತಿದೆ ಸಮಾಜದ ಕಣಕಣ

ಪುಟ್ಟನಂತೆಯೇ ಪುಟ್ಟಿಯೂ ದೇವರ ವರ
ಎತ್ತಾಡಿಸಿ ಪ್ರೋತ್ಸಾಹಿಸಿ ಒಂದೇ ತರ
ಇಡೀ ಕುಲಕೆ ಪುಟ್ಟಿ ನೆರಳನೀಡುವ ಮರ
ಹೊಸ ಜೀವವ ಪೋಣಿಸುವ ಮುತ್ತಿನ ಸರ

ಕಣ್ಣು ತೆರೆದು ತೀರಿಸೋಣ ಪುಟ್ಟಿಯರಿಗೆ ಮಾಡಿದ ನಷ್ಟ
ಭೇದ ತಿಳಿಯದೇ ಮಾಡಿದರು ಸಹಿಸುವುದು ಕಷ್ಟ
ಆರತಿಯೋ ಕೀರುತಿಯೋ ಅವರವರ ಇಷ್ಟ
ಇದ ಮುಂದಿನ ಪೀಳಿಗೆಗೆ ಮಾಡೋಣ ಸ್ಪಷ್ಟ

ಸಮಾನರು ಪುಟ್ಟಿ ಪುಟ್ಟ
ಕಟ್ಟೋಣ ಅರ್ಹತೆಗೆ ಪಟ್ಟ

- ಡಾ। ಸವಿತಾ ಕಲ್ಯಾ, ಯು.ಎಸ್.ಎ

***********************************

ಡಾ. ಮೀನಾ ಸುಬ್ಬರಾವ್: ಮೂಲತಃ ಕಡೂರಿನವರು. ಹುಟ್ಟಿ, ಬೆಳೆದುದೆಲ್ಲಾ  ಕಡೂರು, ನಂತರ ನ್ಯಾಶನಲ್ ಕಾಲೇಜ್ ಬೆಂಗಳೂರು ಮತ್ತು ಮೈಸೂರು ವೈದ್ಯಕೀಯ ವಿದ್ಯಾಲಯಗಳಲಿ ವ್ಯಾಸಂಗ. ಅಮೇರಿಕಾದ ಲಾಸ್ ಆಂಜಲೀಸ್ನಲ್ಲಿ ಮಕ್ಕಳ ಆರೋಗ್ಯ ಶಾಸ್ತ್ರದಲ್ಲಿ ( ಪೀಡಿಯಾಟ್ರಿಕ್ಸ್) ರೆಸಿಡೆನ್ಸಿ ಮುಗಿಸಿ ಸುಂದರವಾದ ಕ್ಯಾಲಿಫೋರ್ನಿಯಾದ ಮಧ್ಯ ಕರಾವಳಿ/ ಸ್ಟೈನ್ಬೆಕ್ ದೇಶ ಎಂದೇ ಹೆಸರಾಗಿರುವ ಮಾಂಟೆರೆ ಪ್ರದೇಶದಲ್ಲಿ ವಾಸ ಮತ್ತು ಮಕ್ಕಳ ತಜ್ಞೆಯಾಗಿ ಸೇವೆ ಸಲ್ಲಿಸುತಿದ್ದಾರೆ. ಕನ್ನಡದಲಿ ಕಥೆ, ಕವನ, ಪ್ರಬಂಧ, ಹಾಸ್ಯ ಮುಂತಾದ ರೂಪಕಗಳ ಬರೆದು ಸಂಪದ, ದಟ್ಸಕನ್ನಡ, ತನುಮನ ಬ್ಲಾಗ್ ಮುಂತಾದ ಜಾಲತಾಣಗಳಲಿ ಪ್ರಕಟಿಸಿದ್ದಾರೆ. ಸುಮಾರು ಭಕ್ತಿಗೀತೆಗಳ ರಚನೆ ಮಾಡಿ ಮೊದಲ 9 – ಹಾಡುಗಳ ಒಂದು ಆಲ್ಬಮ್ ಪುತ್ತೂರು ನರಸಿಂಹ ನಾಯಕರ ಸಂಗೀತ ಸಂಯೋಜನೆ, ಗಾಯನದಲ್ಲಿ ಧ್ವನಿ ಮುಗ್ರಿತವಾಗಿ ಪ್ರಕಟವಾಗಿದೆ. ಕನ್ನಡ ಕೂಟದ ಸಂಚಿಕೆಗಳು, ಕನ್ನಡ ಸಾಹಿತ್ಯ ರಂಗದ ( ಅಮೇರಿಕಾ) ಪುಸ್ತಕಗಳಲ್ಲೂ ಲೇಖನ, ಕಥೆಗಳು ಮತ್ತು ಇತರೆ ಬರಹಗಳು ಪ್ರಕಟವಾಗಿವೆ.

ಒಲವು!! (ದಿವ್ಯ ಅನುರಾಗ)

ಒಲಿದೆ ನೀನು ಒಂದು ಕ್ಷಣಕೆ ನನ್ನ ಬಾಳ ಪಥದಲಿ
ನಡೆದೆ ನಾನು ಅದರ ಮೇಲೆ ನನ್ನ ಬಾಳ ರಥದಲಿ!

ಸವಿನೆನಪು ಸಾಕೊಂದು ಬಾಳಿನಾ ಅರ್ಥಕೆ
ಸವಿಯುತಿರೆ ಸಾಗಿಹುದು ಬದುಕಿನಾ ಪತಾಕೆ!

ಆ ಮಧುರ ಅನುಭವವು ಅಮರವಾಗಿದೆ ಮನಕೆ
ಆ ಅಧರ ಅದರುವಿಕೆ ಅರಸುತಿದೆ ಜೀವಕೆ!

ಬರದಿರಳು ನಿದಿರೆಯು ನಿನ್ನಂದ ನೆನೆಯದೆ
ಹಗಲಿರುಳು ಸಾಗದು ಮಕರಂದ ಸವಿಯದೆ!

ಎಲ್ಲಿ ನೋಡಿದರಲ್ಲಿ ನೀ ನನ್ನ ನೋಟವಾಗಿರುವೆ
ಏನು ಮಾಡಿದರೂ ನೀ ನನ್ನ ಆಟವಾಗಿರುವೆ!

ನೀ ನಡೆಸುತಿರುವೆ ಬದುಕನು ಬರಡಾಗಿಸದೆ
ನೀ ಬಡಿಸುತಿರುವೆ ಅರಿವನು ಬರಿದಾಗಿಸದೆ!

ಮತ್ತೊಮ್ಮೆ ಬಾ ನೀನು ಭವ್ಯ ಭಾವಗಳ ಹೊತ್ತು
ಇನ್ನೊಮ್ಮೆ ಕೊಡು ನೀನು ದಿವ್ಯ ಅನುರಾಗದ ತುತ್ತು!

ನಗುತಿರು ಎಂದೆಂದೂ, ಬರಲಿ ಏನೊಂದು
ಸಾಗುತಿರು ಬಾಳಿನಲಿ ಬರಲಿ ನೂರೊಂದು

ನುಡಿದೆ ಈ ದಿವ್ಯ ವಾಣಿಯ ನೀನಂದು ಬಿಡಿಸಿ ಮನದಾಳದ ಚಂಚಲತೆಯ ಚೆಂಡು

- ಡಾ. ಮೀನಾ ಸುಬ್ಬರಾವ್.

***********************************************

ಜೋಗುಳ- ಶ್ರೀರಕ್ಷೆ


ನಮಸ್ಕಾರ ಅನಿವಾಸಿ ಬಳಗಕ್ಕೆ.

ಜೀವನದಲ್ಲಿ ಒಮ್ಮೆಯಾದರೂ ಜೋಗುಳ ಕೇಳದ, ಜೋಗುಳ ಹಾಡದ ವ್ಯಕ್ತಿಗಳು ಇರಲಿಕ್ಕಿಲ್ಲ. ಇಂದಿನ ಸಂಚಿಕೆಯ ಬರಹಗಳು ಹಾಗೂ ನಮ್ಮ ಅನಿವಾಸಿಯ ಹೆಮ್ಮೆಯ ಹಾಡುಗಾರ್ತಿ ಅಮಿತಾ ಅವರ ಅತ್ಯಪರೂಪದ ಜೋಗುಳ ಪದ ನಿಮ್ಮನ್ನೂ ನಿಮ್ಮ ಬಾಲ್ಯಕ್ಕೋ,ನಿಮ್ಮ ಮಕ್ಕಳ ಬಾಲ್ಯಕ್ಕೋ ಖಂಡಿತ ಕರೆದೊಯ್ಯಬಹುದೆಂಬ ನಂಬಿಕೆಯೊಂದಿಗೆ,
~ ಸಂಪಾದಕಿ

ಈ ‘ಜೋ ಜೋ ಜೋ ಜೋ’  ಜೋಗುಳ, ಲಾಲಿ ಅನ್ನೋ ಪದ ಕೇಳಿದ್ರೇನೇ  ಒಂಥರಾ ತೂಗಿದ್ಹಂಗ ಅನಿಸಿ ಕಣ್ರೆಪ್ಪೆ ಭಾರ ಆದ್ಹಂಗ ಆಗತದ. ದಾಸರ ಭಕ್ತಿ ಗೀತೆಗಳು, ಜಾನಪದ, ಕವಿಗಳ ಭಾವಗೀತೆಗಳು ಕೊನೆಗೆ ಸಿನೆಮಾ ಹಾಡುಗಳು..ಹೀಂಗ ಎಲ್ಲ ಪ್ರಕಾರಗಳಲ್ಲೂ ಲಾಲಿ ಹಾಡು, ಜೋಗುಳ  ಅಷ್ಟೇ ಸಶಕ್ತವಾಗಿ, ಸುಂದರವಾಗಿ ಮೂಡಿ ಬಂದಿದ್ದು ಭಾಳ ಸೋಜಿಗ ಅನಸತದ ನನಗ.  ‘ಜೋ ಜೋ ಶ್ರೀ ಕೃಷ್ಣಾ ಪರಮಾನಂದ’ ಎಂಬಂಥ ದಾಸರ ಪದಗಳಿರಲಿ, ‘ಅತ್ತರೆ  ಅಳಲವ್ವಾ ಈ ಕೂಸು ನನಗಿರಲಿ’ ಎಂಬಂಥ ಜಾನಪದವಿರಲಿ, ‘ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ’  ಎನ್ನುವ ಕವಿ ಭಾವವಿರಲಿ, ‘ಲಾಲಿ ಲಾಲಿ ಸುಕುಮಾರ ಲಾಲಿ ಮುದ್ದು ಬಂಗಾರ’ ಎನ್ನುವಂಥ ಚಲನಚಿತ್ರ ಗೀತೆಗಳಿರಲಿ ..ಅಲ್ಲೆಲ್ಲಾ ಹರಿದಿರುವುದು ವಾತ್ಸಲ್ಯದ ಹೊನಲೇ. ಮಾಂಸದ ಮುದ್ದೆಯೊಂದು ಕಣ್ಣು-ಮೂಗುಗಳ ಚಿತ್ರ ಬರೆಸಿಕೊಂಡು ಈ ಜಗತ್ತಿಗೆ ಬಂದು ನಮ್ಮ ‘ ಜಗತ್ತೇ’ ಆಗಿ ಬಿಡುವುದು ಅದ್ಯಾವ ಮಾಯೆಯೋ ಕಾಣೆ. 

ನಾನು ಇಲ್ಲಿ ಗಮನಿಸಿದ್ದು ಎರಡು ಅಂಶಗಳನ್ನು. ಒಂದು ತಾಯಿ ಆದಾಕಿ ತನ್ನ ಕಂದನಲ್ಲೇ ಭಗವಂತನನ್ನು ಕಂಡು ಆ ಭಾವವನ್ನು ದೈವೀಕತೆಗೇರಿಸುವ ಪರಿ .
“ ಅಳುವ ಕಂದನ ತುಟಿಯು ಹವಳದ ಕುಡಿಹಂಗ
ಕುಡಿಹುಬ್ಬು ಬೇವಿನೆಸಳ್ಹಂಗ| ಕಣ್ಣೋಟ ಶಿವನ ಕೈಯಲಗು ಹೊಳೆದ್ಹಂಗ|”
ಇಲ್ಲಿ ಮರ್ತ್ಯವನ್ನು ಅಮರ್ತ್ಯಕ್ಕೇರಿಸುತ್ತಿದ್ದಾಳೆ. ತನ್ನ ಕಂದನ ಕಣ್ ಹೊಳಪಲ್ಲಿ ಕೈಲಾಸದ ಪರಶಿವನ ಕೈಯ ತ್ರಿಶೂಲದ ಹೊಳಪು ಕಾಣುತ್ತಿದ್ದಾಳೆ .
ಇನ್ನೊಂದು ಇದಕ್ಕೆ ವಿಪರೀತವಾಗಿ ಮೂಲೋಕದೊಡೆಯನನ್ನು ಭೂಮಿಗೆಳೆತಂದು ಅವನಿಗೆ ಶಿಶುತನವನ್ನು ಆರೋಪಿಸುವುದು.
‘ ಗುಣನಿಧಿಯೇ ನಿನ್ನನೆತ್ತಿಕೊಂಡಿದ್ದರೆ ಮನೆಯ ಕೆಲಸವನಾರು ಮಾಡುವರಯ್ಯ? ಮನಕೆ ಸುಖನಿದ್ರೆ ತಂದುಕೋ ಬೇಗ ಫಣಿಶಯನನೇ ನಿನ್ನ ಪಾಡಿ ತೂಗುವೆನಯ್ಯ”
ಇಲ್ಲಿ ತಾಯ ಕೈಬಿಡದೇ ರಗಳೆ ಮಾಡುವ ಕಂದನ ಗುಣವನ್ನು ಭಗವಂತನಿಗೆ ಆರೋಪಿಸಲಾಗಿದೆ.
ಈ ಜೋಗುಳಗಳಲ್ಲಿ ತಾಯ್ತನದ ಧನ್ಯತೆಯ ಭಾವ, ಮುಂದಿನ ಹಸನಾದ ಭವಿತವ್ಯದ ಹಾರೈಕೆ- ಹರಕೆಗಳು, ತನ್ನ ಮಗುವಿನ ಬಗೆಗಿನ ಅಭಿಮಾನ ಎಲ್ಲವುಗಳನ್ನೂ ಕಾಣಬಹುದಾಗಿದೆ. ಈ ಕೆಳಗಿನ ಪದ್ಯಗಳನ್ನು ನೋಡಿ..
1) ‘ಅತ್ತು ಕಾಡುವನಲ್ಲ, ಮತ್ತೆ ಬೇಡುವನಲ್ಲ, ‘ಎತ್ತಿಕೋ’ ಎಂಬಂಥ ಹಟವಿಲ್ಲ..ಕಂದನ(ತನ್ನ ಮಗುವಿನ ಹೆಸರನ್ನು ಇಲ್ಲಿ ಹೇಳಬಹುದು ‘ಕಂದನ’ ಬದಲಿಗೆ) ಲಕ್ಷಣಕ ಲಕ್ಷ್ಮಿ ಒಲತಾಳು.(ಅಭಿಮಾನ,ಹೆಮ್ಮೆಯ ಭಾವ)
2) ‘ಅತ್ತರೆ ಅಳಲವ್ವಾ ಈ ಕೂಸು ನನಗಿರಲಿ.
ಕೆಟ್ಟರೆ ಕೆಡಲವ್ವ ಮನೆಗೆಲಸ
ಕಂದಮ್ಮನಂಥ ಮಕ್ಕಳಿರಲವ್ವ ಮನೆತುಂಬ’ (ವಾತ್ಸಲ್ಯದ ಧನ್ಯತಾ ಭಾವ)
3) ಆಡುತಾಡುತ ಹೋಗಿ ಜೋಡೆರಢು ಮನೆಕಟ್ಟಿ ಬೇಡ್ಯಾಳ ಬೆಲ್ಲ-ಬ್ಯಾಳಿಯ..ಮಾಡ್ಯಾಳ ಮಾಮಾನ ಮದುವೀಯ..(ಭವಿಷ್ಯದ ಹಾರೈಕೆ)
ಇಲ್ಲಿ ಸಂದರ್ಭಕ್ಕನುಸಾರವಾಗಿ ಅಣ್ಣನ ಮುಂಜಿ, ಸೋದರತ್ತೆಯೋ, ಮಾಂಶಿಯರದೋ ಮದುವೆ, ಸೀಮಂತವೋ ಯಾವುದನ್ನಾದರೂ ಸೇರಿಸಿಕೊಳ್ಳಬಹುದು. ಮನೆಗೆ ಬಂದ ಹೊಸ ಕಂದಮ್ಮ ಸುತ್ತಲಿನವರ ಭಾಗ್ಯದ ಬೆಳಕಾಗಲಿ ಎಂಬುದು ಹಡೆದವಳ ಆಶಯ.
ತೀರ ಪುಟ್ಟ ಮಗುವಿಗೆ ಜೋಗುಳದ ರಿದಮ್, ಅಮ್ಮನ ದನಿ, ಮತ್ತು ಆ ಲಯಬದ್ಧವಾದ ಜೋಳಿಗೆಯ ತೂಗುವಿಕೆಗೆ ನಿದ್ದೆ ಬರುತ್ತದೇನೋ? ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ‘ಹಂಗಂದ್ರ’ ಅಂತ ಹಾಡಿನ ಅರ್ಥವನ್ನೂ ಕೇಳಿ ತಮಗೆ ತಿಳಿದ ನೆಲೆಯೊಳಗೆ ಕಲ್ಪನಾವಿಸ್ತಾರ ಮಾಡಿಕೊಳ್ಳುತ್ತವೇನೋ ಮಕ್ಕಳು.
ನನ್ನ ಅವಳಿ ಮಕ್ಕಳಿಬ್ಬರಿಗೂ ‘ಪಾಲಗಡಲದೊಳು ಪವಡಿಸಿದವನೇ, ಆಲದೆಲೆಯ ಮೇಲೆ ಮಲಗಿದ ಶಿಶುವೆ’ ಎನ್ನುವ ಪುರಂದರ ದಾಸರ ಹಾಡು ಇಷ್ಟ ವಾಗುತ್ತಿತ್ತು. ಅಷ್ಟಿಷ್ಟು ಅರ್ಥವನ್ನೂ ಹೇಳಿದ್ದೆ. ಅವರು ಸುಮಾರು ಮೂರು- ಮೂರೂವರೆ ವರ್ಷ ದವರಿದ್ದಾಗ ಮಾತು ಮಾತಿಗೊಮ್ಮೆ ಸಿಪ್ಪರ್ ನಲ್ಲಿ ಹಾಲು ಕುಡಿಯಲು ಕೇಳವ್ರು. ಹಾಲು ಕುಡಿದರೆ ಊಟಕ್ಕೆ ಕಿರಿಕಿರಿ ಮಾಡುತ್ತಾರೆಂದು ನಾನು ‘ಹಾಲು ಖಾಲಿ ಆಗ್ಯಾವ’ ಅಂತಲೋ , ‘ಸ್ವಲ್ಪೇ ಅವ ಅಜ್ಜಾಗ ಛಾಕ್ಕ ಬೇಕು’ ಅಂತಲೋ, ‘ಅಯ್ಯ , ಈಗಷ್ಟೇ ಎಲ್ಲಾ ಹೆಪ್ಪು ಹಾಕಿದೆ’ ಅಂತಲೋ ಹೇಳಿ ಜಬರದಸ್ತಿ ಅನ್ನ, ಚಪಾತಿ ಊಟ ಮಾಡಿಸುತ್ತಿದ್ದೆ. ಒಮ್ಮೆ ನನ್ನ ಮಗಳು ಅಕ್ಷತಾ ‘ಅವಾ ಕೃಷ್ಣ ಎಷ್ಟು ಲಕ್ಕಿ ಇದ್ದಾನಲಾ ಅಮ್ಮಾ, ಅವರ ಮನ್ಯಾಗ ಹಾಲಿನ ಸಮುದ್ರನೇ ಇರತದ. ಹಾಲು ಖಾಲಿನೇ ಆಗಂಗಿಲ್ಲ. ಯಾವಾಗ ಬೇಕು ಆವಾಗ ಮಂಚದ ಮ್ಯಾಲಿಂದ ಬಗ್ಗೂದು..ಸಿಪ್ಪರ್ ತುಂಬಿಕೊಳ್ಳೂದು.. ಹಾಲು ಕುಡಿಯೂದು..ಮಸ್ತ್ ಅಲಾ ಅಮ್ಮಾ?” ಎಂದು ಹೊಳೆವ ಕನಸುಗಂಗಳಿಂದ ನುಡಿದು ನಂಗ ದಂಗ ಬಡಿಸಿದ್ಲು.
ಒಟ್ಟಿನಲ್ಲಿ ದೇಶ-ಭಾಷೆಗಳ ಹಂಗಿಲ್ಲದ ಸುಂದರ ಭಾವಯಾನ ಈ ಜೋಗುಳ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಮ್ಮನ ಮಡಿಲೋ, ಜೋಳಿಗೆಯೋ, ತೊಟ್ಟಿಲೋ, ಕ್ಯ್ರಾಡಲ್ಲೋ, ಕ್ರಿಬ್ಬೋ, ಬೆಡ್ಡೋ ಏನೇ ಇರಲಿ ಜೋಗುಳದ ಸೊಗಡೆಂದೂ ಮಾಸದಿರಲಿ. ಅಂತೆಯೇ ತುಂಬ ಆಪ್ತವಾದ ಈ ರಕ್ಷೆಗಳು-ಹರಕೆಗಳು ತಮ್ಮ ಧನಾತ್ಮಕ ತರಂಗಗಳನ್ನು ವಿಶ್ವದೆಲ್ಲೆಡೆ ಪಸರಿಸುತ್ತಿರಲಿ.
“ಆ ರಕ್ಷಿ, ಈ ರಕ್ಷಿ , ಕಣ್ಣಿಗೆ ಕಾಮನ ರಕ್ಷಿ, ಬೆನ್ನಿಗೆ ಭೀಮನ ರಕ್ಷಿ, ಮೂಗಿಗೆ ಮುಕುಂದನ ರಕ್ಷಿ, ಮಂಡಿಗೆ ಮಾಧವನ ರಕ್ಷಿ, ಕುಂಡಿಗೆ ಕೂರ್ಮನ ರಕ್ಷಿ, ರಟ್ಟಿಗೆ ರಾಮನ ರಕ್ಷಿ, ಹೊಟ್ಟಿಗೆ ವಿಠಲನ ರಕ್ಷಿ, ಕೈಗೆ ಕೃಷ್ಣನ ರಕ್ಷಿ, ಕಾಲಿಗೆ ಕಲ್ಕಿ ರಕ್ಷಿ..ಎಲ್ಲಾರ ರಕ್ಷಿ ನಮ್ಮ ಕಂದಮ್ಮಗ”.. ಅಳ್ನೆತ್ತಿಗೆ ನಸುಬಿಸಿ ಎಣ್ಣೆಯೊತ್ತಿಸಿಕೊಂಡು, ಅಜ್ಜಿಯ ತೊಡೆಯ ಮೇಲೆ ಮಲಗಿ ಹದವಾದ ಬಿಸಿನೀರೆರೆಸಿಕೊಂಡು ‘ಹೋ’ ಎಂದು ದನಿ ತೆಗೆದು ಅತ್ತು ಸುಸ್ತಾದ ಕಂದಮ್ಮನನ್ನು ಅಜ್ಜನ ಹಳೆಯ ಮೆತ್ತನೆಯ ಧೋತರ ತುಂಡಿನಲ್ಲಿ ಹೊರಕೋಣೆಗೆ ಸುತ್ತಿ ತಂದಾದ ಮೇಲೆ ಘಮ್ಮನೆಯ ಲೋಬಾನದ ಹೊಗೆ ಹಾಕುತ್ತ ಅಜ್ಜಿಯೋ, ಅಮ್ಮನೋ, ಮತ್ತ್ಯಾರೋ ತಾಯಂಥಕರಣದವರೋ ಈ ರಕ್ಷಾ ಮಂತ್ರವನ್ನು ಹೇಳೇ ಹೇಳುತ್ತಿದ್ದರು.

ಸಾಕಷ್ಟು ದೊಡ್ಡವರಾದ ಮೇಲೂ ‘ ಕಲ್ಲಾಗು, ಗುಂಡಾಗು, ಕರಕಿ ಬೇರಾಗು, ಅಗಸಿ ಮುಂದಿನ ಬೋರ್ಗಲ್ಲಾಗು..ಶ್ರೀರಾಮ ರಕ್ಷಿ..ಜಯರಾಮ ರಕ್ಷಿ” ಎನ್ನುವ ಈ ರಕ್ಷೆ ಇಲ್ಲದೇ ಹಬ್ಬ- ಹುಣ್ಣಿಮೆಗಳಂದು, ರವಿವಾರದ ರಜಾ ದಿನಗಳಂದು ನಮ್ಮ ನೆತ್ತಿಗೂ ಎಣ್ಣೆ ಬಿಸಿನೀರು ಬೀಳುತ್ತಿರಲಿಲ್ಲ.
‘ರೋಮರೋಮಗಳಲ್ಲಿ ಭೀಮರಕ್ಷಿಯ ಬಲ ಕೊರಳಾಗ ಕಟ್ಟೀರಿ ಒಂದಾನ’ ತಮ್ಮ ‘ಕರಡಿ ಕುಣಿತ’ದಲ್ಲಿ ಬೇಂದ್ರೆಯವರು ಹಾಡಿದಂತೆ ನಾವೂ ಕೂಡ ಸಣ್ಣವರಿದ್ದಾಗ ಕರಿದಾರದ ಕೊರಳ ತಾಯತದಲ್ಲಿ ಈ ಕರಡಿ ಕೂದಲಿನ ಭೀಮರಕ್ಷೆಯನ್ನು ಕಟ್ಟಿಕೊಂಡೇ ಬೆಳೆದವರು.
“ ನೀನಾವ ಧರ್ಮಂ ಗುರಿಗೆಯ್ದು ಹೊರಟಿಹೆಯೋ ಆ ಧರ್ಮದೇವತೆಯೇ ರಕ್ಷೆಯಾಗಲಿ ನಿನಗೆ!
ನೀಂ ಪೂಜೆಗೈದಿರ್ಪ ದೇವಾನುದೇವತೆಗಳೆಲ್ಲರೂ ನಿನಗಕ್ಕೆ ರಕ್ಷೆ!
ಮಾತಾಪ್ರೀತಿ,ಪಿತೃಭಕ್ತಿ, ಜನದೊಲ್ಮೆಗಳ್ ಚಿರಜೀವವಂ ನಿನಗೆ ದಯೆಗೈಯ್ಯೆ!
ಗಿರಿವನಂ ಪಕ್ಷಿಪನ್ನಗರೆಲ್ಲರುಂ ರಕ್ಷೆಯಕ್ಕಯ್ ನಿನಗೆ!
ರಕ್ಷಿಸಲಿ ಹಗಲಿರುಳು ಬೈಗುಬೆಳಗುಗಳಿನಂ ಶಶಿ ತಾರೆ ಸಪ್ತರ್ಷಿ ಮಂಡಲಂ ದಿಕ್ಪಾಲ ದೇವದಾನವರೆಲ್ಲರುಂ ರಕ್ಷಿಸಲಿ!
ಕ್ರಿಮಿಕೀಟ ಕಪಿ ಚೇಳುಗಳ್ ಹುಲಿ ಸಿಂಹನಕ್ಕಲಂ ಕಾಳ್ಕೋಣ ಮೊದಲಪ್ಪ ವಿಷಜಂತು ಕೋಳ್ಮಿಗಂಗಳ್ ಕಾಪಾಡಲಿ ನನ್ನ ಮೊಲೆವಾಲ ಮೂರ್ತಿಯಂ ರವಿಕುಲ ಲಲಾಮನೀ ರಾಮಾಭಿರಾಮನುಂ !
ಮಗುವು ಮಜ್ಜನಕಿಳಿಯುವಂದು ಜಲದೇವಿಯರೇ, ಮಕರ ನಕ್ರಗಳಿಂದೆ ರಕ್ಷಿಸಿಂ! ರಕ್ಷಿಸಿಂ ಕಾಂತಾರದಧಿದೇವಿಯರೇ, ಕಂದನಡವಿಯೊಳ್..ಪುತ್ತಿನೆಡೆ ಪವಡಿಸಿರೆ, ಮತ್ತೆ ಮರಗಳ ಕೆಳಗೆ ತಂಪು ನೆಳಲೊಳ್ ಮಲಗಿರಲ್ಕೆ! ತಾಯೊಲವಾಣೆ ನಿಮಗೆ, ಓ ಸಿಡಿಲ್ಮಿಂಚು, ಬಿರುಗಾಳಿಗಳೇ ಕೇಳಿಮ್ ಹೆತ್ತು ಹೊರೆದೀ ಹೃದಯದಭಿಶಾಪಂ ನಿಮಗಕ್ಕೆ ಹಸುಳೆ ರಾಮಗೆ ನಿಮ್ಮ ಕತದಿಂದೆ ಭವಿಸಿದಡೆ ಕೇಡು! ಓ ವಿಧಿಯೇ, ಹೇ ಸರ್ವಲೋಕಪ್ರಭೂ, ಕೊಳ್ಳಿದೋ ನಿವೇದಿಸುವೆನಾತ್ಮದೊಲುಮೆಯಂ ರಾಮ ಮಂಗಲ ಕಾರಣಂ ತವ ಚರಣ ತಲಕೆ”!

ವನವಾಸಕ್ಕೆ ಹೊರಟುನಿಂತ ರಾಮಚಂದ್ರನಿಗೆ ಕೌಸಲ್ಯೆ ನೀಡಿದ ಹರಕೆ-ರಕ್ಷೆಯಿದು. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ದ ಅಯೋಧ್ಯಾ ಸಂಪುಟದಲ್ಲಿ ಬರುವ ಅತ್ಯಂತ ಹೃದಯಸ್ಪರ್ಶಿ ಭಾಗವಿದು. ಮಗನಾದವನು ದೇವಾಧಿದೇವನಾದರೇನು ತಾಯ್ ಕರುಳಿಗೆ ಅವನು ಹಸುಳೆಯೇ ತಾನೇ?

ಇಡಿಯ ಭರತವರ್ಷ ಅಯೋಧ್ಯಾನಗರಿಯ ರಾಮಲಲ್ಲಾನ ಸಂಭ್ರಮೋತ್ಸಾಹದಲ್ಲಿದೆ. ಜಾತಿ-ವರ್ಗ-ವರ್ಣ-ಪಂಥ-ರಾಜಕಾರಣ ಎಲ್ಲ ರಾಜಕೀಯಗಳಾಚೆಯೂ ಪುರುಷೋತ್ತಮನಾದ ಆ ‘ಶ್ರೀ ಸಂಸಾರಿ’ ಯ ರಕ್ಷೆ ಮನುಷ್ಯತ್ವವನ್ನು, ಜೀವನ ಮೌಲ್ಯಗಳನ್ನು ಪೊರೆಯಲೆಂಬ ಸದಾಶಯಗಳೊಂದಿಗೆ..

“ ಶ್ರೀರಾಮ ರಕ್ಷಿ..ಜಯರಾಮ ರಕ್ಷಿ”.

ಜನಪದ ಜೋಗುಳ ಪದ – ಅಮಿತಾ ರವಿಕಿರಣ

ಬಕಿಂಗ್ಹ್ಯಾಮ್ ಅರಮನೆಯಲ್ಲಿ ಗೌರವಿಸಲ್ಪಟ್ಟ ಕನ್ನಡಿಗ ಶುಶ್ರೂಷಕ -ಬಿ ಎಸ್ ತಿಪ್ಪೇಸ್ವಾಮಿ ಲೇಖನ

ಬಿ ಎಸ್ ತಿಪ್ಪೇಸ್ವಾಮಿ
ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ ಅವರು ಮೂಲತಃ ಚನ್ನಗಿರಿ ತಾಲೂಕಿನ ಬಿಲ್ಲಹಳ್ಳಿಯವರು. ತಾವರೆಕೆರೆಯಲ್ಲಿ ತನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ ಮುಗಿಸಿ ಕುವೆಂಪು ವಿಶ್ವವಿದ್ಯಾಲಯದಿಂದ ನರ್ಸಿಂಗ್ ಪದವಿ ಗಳಿಸಿ ಭಾರತದಲ್ಲಿ ಹಲವು ವರ್ಷಗಳ ಶುಶ್ರೂಷಕರೆಂದು ಕೆಲಸ ಮಾಡಿ ಯುಕೆಗೆ ಬಂದು ಎರಡೂವರೆ ದಶಕಗಳಿಂದ ಯು ಕೆ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗ,  ರೆಸ್ಪಿರೇಟರಿ ಮತ್ತು ಟಿ. ಬಿ. ವಿಭಾಗಗಳಲ್ಲೂ ಅನೆಕ ವರ್ಷಗಳ ಅನುಭವವಿದೆ. ಅಲರ್ಜಿ ಶುಶ್ರೂಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಸದ್ಯ ಹಾಮರ್ಟನ್ NHS ಆಸ್ಪತ್ರೆಯಲ್ಲಿ ಸ್ಪೆಷ್ಯಾಲಿಸ್ಟ್ ಅಲರ್ಜಿ ಲೀಡ್ ನರ್ಸ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲಿನಿಂದಲೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದವರು, ಕನ್ನಡ ಬಳಗ ಯು ಕೆ ದಲ್ಲೂ ಸೇವೆ ಸಲ್ಲಿಸಿದ ಉತ್ಸಾಹಿ ಕನ್ನಡಿಗರು ಇವರು. ಲಂಡನ್ನಿನ ಬಕಿಂಗ್ ಹ್ಯಾಮ್ ಪ್ಯಾಲಸ್ ವತಿಯಿಂದ ಬಾಲ್ರೂಮಿನಲ್ಲಿ ಔತಣಕೂಟಕ್ಕೆ ಆಮಂತ್ರಣ ಸಂಪಾದಿಸಿದ ಆಯ್ದ ಶುಶ್ರೂಷಕರುಗಳಲ್ಲಿ ಇವರು ಒಬ್ಬರು ಎನ್ನುವದು ಹೆಮ್ಮೆಯ ವಿಷಯ. (ಸಂ)


ಭಾವನೆಯ ಸುಳಿಯಲ್ಲಿ ನನ್ನದೊಂದು ಪಯಣ -ಬಿ ಎಸ್ ತಿಪ್ಪೇಸ್ವಾಮಿ 

ಎಂದಿನಂತೆ ೧೧ನೇ ಅಕ್ಟೋಬರ್ ೨೦೨೩ರಂದು ಕ್ಲಿನಿಕ್ ಮುಗಿಸಿ ಸಂಜೆ ಸುಮಾರು ೪ ಘಂಟೆಗೆ ಕೆಲಸದ  ಇಮೇಲ್ ಪರಿಶೀಲಿಸುತ್ತಿರುವಾಗ   ರೂತ್ ಶಿವನೇಶನ್, ನಮ್ಮ  ಸಿಬ್ಬಂದಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಿಂದ ಒಂದು ಇಮೇಲ್ ಸಂದೇಶ ಕಂಡು ನನಗೆ ನಂಬಲಾಗಲಿಲ್ಲ. ನನ್ನ ಜೊತೆಗಿದ್ದ ಇಬ್ಬರು ಸಹೋದ್ಯೋಗಿಯರಿಂದ ಆ ಇಮೇಲ್ ಪುನರ್ ಪರಿಶೀಲಿಸಿ ಸಂದೇಶ ಖಚಿತವೆಂದು ಖಾತ್ರಿಯಾಯ್ತು. ರೂತ್ ನ ಇಮೇಲ್ ಪ್ರಕಾರ ನಾನು ೧೪ ನವೆಂಬರ್ ೨೦೨೩ರಂದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಬ್ರಿಟನ್ ದೇಶದ ರಾಜರಾದ ಗೌರವಾನ್ವಿತ ಚಾರ್ಲ್ಸ್ ಫಿಲಿಪ್ ಆರ್ಥರ್ ಜಾರ್ಜ್ ರವರು  ಬ್ರಿಟನ್ನಲ್ಲಿ ನೆಲೆಸಿರುವ ಅಂತರರಾಷ್ಟ್ರೀಯ ಶುಶ್ರೂಷಕರಿಗೆ ಏರ್ಪಡಿಸಿದ್ದ ಔತಣಕೂಟದ ಆಮಂತ್ರಣವಾಗಿತ್ತು.  ನನಗೇಕೆ ಈ ಆಮಂತ್ರಣ? ಎಂದು ರುತ್ ಗೆ ಮರು ಪ್ರಶ್ನಿಸಿದೆ. ಅದಕ್ಕುತ್ತರಿಸಿದ ರುತ್, ಅಂತರರಾಷ್ಟ್ರೀಯ ಶುಶ್ರೂಷಕರಿಗೆ ನೀನು ಇದುವರೆವಿಗೂ ಸಲ್ಲಿಸಿರುವ ಸೇವೆಗೆ ಬ್ರಿಟನ್ ರಾಜರಿಂದ ಇದೊಂದು ವಿಶೇಷ ಕೊಡುಗೆ ಎಂದರು. ನನಗೆ ಆನಂದ ತಡೆಯಲಾಗದೆ ಕಣ್ಣೀರು ತಾನಾಗಿಯೇ ಹರಿಯತೊಡಗಿದವು. ನವೆಂಬರ್ ೧೪ರಂದು ದೀಪಾವಳಿ ಹಬ್ಬವಿದೆ, ನಮ್ಮ ಅಪ್ಪಾಜಿ ಅಗಲಿದ ನಂತರ ಇದು ಅವರ ಮೊದಲನೇ ಹಿರಿಯರ ಪೂಜೆ, ಅವರ ಪೂಜೆ ಮಾಡಲು ತಂದೆಯ ಶಿವಲಿಂಗ ಕರಡಿಗೆ ಧರಿಸಿದ್ದ ಹಿರಿಯ ಮಗನಾಗಿ ನಾನು ನಿರ್ಧರಿಸಿ ಕೇವಲ ೭ ದಿನಗಳ ಮುಂಚೆ ಲಂಡನ್ನಿಂದ ಬೆಂಗಳೂರಿಗೆ ನವೆಂಬರ್ ೧೦ರಂದು ಪ್ರಯಾಣಿಸಲು ವಿಮಾನದ ಟಿಕೆಟ್ ಖರೀದಿಸಿದ್ದೆ. ನಾ ಬರುವ ವಿಷಯ ಅಮ್ಮನಿಗೆ ಮುಂಚೆ ತಿಳಿಸಿರಲಿಲ್ಲವಾದರೂ ಅರಮನೆಯ ಆಮಂತ್ರಣ ಕಂಡೊಡನೆ ಅಮ್ಮ ಹಾಗೂ ತಮ್ಮನೊಂದಿಗೆ ಈ ವಿಷಯ ಹಂಚಿಕೊಂಡೆ. ಅವರಿಬ್ಬರೂ ಒಂದೇ ಉತ್ತರ ಕೊಟ್ಟು “ರಾಜ ಮನೆಯ ಆಮಂತ್ರಣ ಜೀವನದಲ್ಲಿ ಸಿಗುವ ಏಕೈಕ ಅವಕಾಶ”, ನಿನ್ನ ತಂದೆ ಇದ್ದಿದ್ದರೆ ಅವರು ಅದೆಷ್ಟೋ ಸಂತೋಷಗೊಳ್ಳುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜರನ್ನು ಭೇಟಿಯಾಗಿ ಬಾ, ಜೊತೆಗೆ ಶಿವಲಿಂಗ ಧರಿಸಿ ಹೋಗು. ಆಗ ನಿನ್ನ ತಂದೆ ನಿನ್ನೊಡನೆಯೇ ಇದ್ದಾರೆ ಎಂಬ ಅನುಭವದ ಜೊತೆಗೆ ಅವರ ಆತ್ಮಕ್ಕೆ ನೀನು ಸಲ್ಲಿಸುವ ಅತ್ಯಂತ ಶ್ರೇಷ್ಠ ಮಟ್ಟದ ಗೌರವ ಎಂದರು. ಅವರ ಮಾತು ಕೇಳಿ ನನ್ನ ಭಾವುಕತೆ ಇನ್ನೂಮಿಗಿಲೇರಿತು. ಸಂಜೆ ಸುಮಾರು ೬ ಘಂಟೆಯಾಗಿತ್ತು. ನನ್ನ ಆತ್ಮೀಯ ಗೆಳೆಯರಿಗೆ ಹಾಗೂ ಸಹೋದ್ಯೋಗಿಗಳೊಡನೆ ಈ ವಿಷಯವನ್ನು ಹಂಚಿಕೊಂಡೆ. ಅವರೆಲ್ಲರೂ ತುಂಬಾ ಸಂತೋಷದ ಜೊತೆಗೆ ನನ್ನ ೨೩ ವರ್ಷಗಳ ಕಾಲ ಬ್ರಿಟನ್ನಲ್ಲಿ ನೆಲೆಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶುಶ್ರೂಷಕರಿಗೆ, ಅಧಿಕೃತವಾಗಿ ಭಾರತದಲ್ಲಿ ನಾನು ಹಮ್ಮಿಕೊಂಡ ನನ್ನ ಹಲವಾರು ಕಾರ್ಯಕ್ರಮಗಳನ್ನು ಹೆಸರಿಡಿದು ಶ್ಲಾಘಿಸುತ್ತ “ಈ ಗೌರವಕ್ಕೆ ನೀನು ಅತ್ಯಂತ ಅರ್ಹತೆಯುಳ್ಳವನು” ಎಂದು ಪ್ರೋತ್ಸಾಹಿಸಿದರು.

ಬ್ರಿಟನ್ನಿನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಭಾರತದ ಶುಶ್ರೂಷಕರು (Nurses)

ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಸುಮಾರು ೭ ಲಕ್ಷಕ್ಕೂ ಹೆಚ್ಚು  ಶುಶ್ರೂಷಕರು ಪ್ರತಿ ವರ್ಷ ಪದವಿಗಳಿಸಿ, ಪ್ರಪಂಚದಲ್ಲೇ ಅತಿ ಹೆಚ್ಚು ಶುಶ್ರೂಷಕರು ಹೊರಹೊಮ್ಮುವ ರಾಷ್ಟ್ರ ಎಂಬುದು ಹೆಮ್ಮೆಯ ವಿಷಯವಾದರೂ ಸಹ ಅವರಲ್ಲಿ ೧೦ಕ್ಕೆ ೮ ಜನರು ಹೊರರಾಷ್ಟ್ರಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಬ್ರಿಟನ್ನಷ್ಟೇ ಜನ ಸಂಖ್ಯೆ ಇದೆ. ೬ ಕೋಟಿ ಜನ ಸಂಖ್ಯೆ ಇರುವ ಕರ್ನಾಟಕದ ಸರ್ಕಾರೀ ಆಸ್ಪತ್ರೆಗಳಲ್ಲಿ ಹಾಲಿ ಸೇವೆ ಸಲ್ಲಿಸುವ ಶುಶ್ರೂಷಕರ ಸಂಖ್ಯೆ ೧೫ ಸಾವಿರವಾದರೆ ಅಷ್ಟೇ ಜನಸಂಖ್ಯೆ ಇರುವ ಬ್ರಿಟನ್ನ ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಸುಮಾರು ೬ ಲಕ್ಷಕ್ಕೂ ಅಧಿಕ ಶುಶ್ರೂಷಕರು ಕೆಲಸದಲ್ಲಿದ್ದಾರೆ. ಈ ೬ ಲಕ್ಷದಲ್ಲಿ ಶೇಕಡಾ ೧೫-೨೦ರಷ್ಟು ಶುಶ್ರೂಷಕರು ಭಾರತೀಯ ಮೂಲದವರು ಎಂಬುದು ಹೆಮ್ಮೆ ಎನಿಸದರೂ, ನಾಡಿನಲ್ಲಿ ಅವಕಾಶಗಳ ಕುಂದು ಕೊರತೆ, ಅತಿ ಕಡಿಮೆ ಸಂಬಳ, ಶುಶ್ರೂಷಕರಿಗೆ ಸಮಾಜದಲ್ಲಿರುವ ಕಳಪೆ ಮನ್ನಣೆ, ಸರಬರಾಜು ಹಾಗೂ ಸಲಕರಣೆಗಳ ಕೊರತೆ, ಪುರಾವೆ ಆಧಾರಿತ ಅಭ್ಯಾಸಗಳ ಕೊರತೆ, ವೈದ್ಯರ ಪ್ರಾಬಲ್ಯ ಹಾಗೂ ಶುಶ್ರೂಷಕರಿಗೆ ಆಸ್ಪ್ರತ್ರೆಗಳಲ್ಲಿ ಆಡಳಿತಾಧಿಕಾರಿಗಳಾಗುವ ಅವಕಾಶಗಳ ಕೊರತೆ ಇವೆಲ್ಲವೂ ಕೂಡ ಪ್ರತಿಯೊಬ್ಬ ಭಾರತೀಯ ಶುಶ್ರೂಷಕರು ಅನುಭವಿಸುವ ಸತ್ಯ ಸಂಗತಿ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಕಳೆದ ೨೦ ವರ್ಷಗಳಲ್ಲಿ ಸುಮಾರು ೨ ಸಾವಿರಕ್ಕೂ ಹೆಚ್ಚು ಶುಶ್ರೂಷಕರಿಗೆ ಹಾಗೂ ಶುಶ್ರೂಷಕ ವಿದ್ಯಾರ್ಥಿಯರಿಗೆ ತಮ್ಮವೃತ್ತಿಪರ ಜೀವನವನ್ನು ಹೇಗೆ ಸುಧಾರಿಸುವುದು, ಪುರಾವೆ ಆಧಾರಿತ ಅಭ್ಯಾಸಗಳನ್ನು ಹೇಗೆ ಜಾರಿಗೆ ತರುವುದು, ವೃತ್ತಿಯಲ್ಲಿ ನಾಯಕತ್ವ ಅವಕಾಶಗಳನ್ನು ಹೇಗೆ ಕಲ್ಪಿಸಿಕೊಳ್ಳಬಹುದು, ಸಮಾಜದಲ್ಲಿ ಆರೋಗ್ಯದ ಸುಧಾರಣೆ ತರಲು ಶುಶ್ರೂಷಕರ ಪಾತ್ರವೇನೆಂಬುದನ್ನು ಕುರಿತು ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸುತ್ತಾ ಬಂದಿದ್ದೇನೆ. ಇದಕ್ಕೆ ನನ್ನಸ್ಥಳೀಯ ಹಾಗೂ ಭಾರತೀಯ ಮೂಲದ ಸಹೋದ್ಯೋಗಿಗಳೂ ಸಹ ಸಾಕಷ್ಟು ಸಹಕರಿಸಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಹೊಸದಾಗಿ ವೃತ್ತಿ ಆರಂಭಿಸುವ ಪ್ರತಿ ಅಂತರರಾಷ್ಟ್ರೀಯ ಶುಶ್ರೂಷಕರಿಗೂ ಸಹ ನನ್ನ ವೈಯುಕ್ತಿಕ ಮಟ್ಟದಲ್ಲಿ ಇಲ್ಲಿ ನೆಲೆಸಲು ಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ, ದೇಶದ ರೀತಿ ನೀತಿಗಳ ಬಗ್ಗೆ, ಆರೋಗ್ಯ ಹಾಗೂ ಸುರಕ್ಷತೆ ಬಗ್ಗೆ ಪ್ರತಿ ತಿಂಗಳೂ ಮುಖಾಮುಖಿ ಭೇಟಿಯಾಗಿ ತಿಳಿಸುತ್ತೇನೆ.  ಕೋವಿಡ್ ಅವಧಿಯಲ್ಲಿ, ಸ್ಥಳೀಯ ಹಾಗೂ ಭಾರತೀಯ ಸಹೋದ್ಯೋಗಿಗಳು ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ ಸುಮಾರು ನೂರಕ್ಕೂ ಹೆಚ್ಚು ಕೋವಿಡ್ ರೋಗಿಗಳನ್ನು ಮನೆಯಲ್ಲಿಯೇ ಚಿಕಿತ್ಸೆ ಕೊಟ್ಟು  ಗುಣಮುಖರಾಗುವವರೆಗೂ ದೂರವಾಣಿ ಕರೆಗಳ ಮೂಲಕ ಸಲಹೆ ನೀಡುವುದರ ಜೊತೆಗೆ ಅವರು ಸಾಂಕ್ರಾಮಿಕ ರೋಗದಿಂದಾದ ಮಾನಸಿಕ ಖಿನ್ನತೆಯಿಂದ ಹೊರಬರಲು  ಅತ್ಮಸ್ಥೈರ್ಯ ತುಂಬಿದ್ದೆವು.

ನನ್ನ ಪಯಣ

ಚಿಕ್ಕಂದಿನಿಂದಲೂ ಹಿರಿಮಗನಾಗಿ ನನ್ನ ತಂದೆ ಪಟ್ಟ ಪರಿಶ್ರಮಗಳು ಹಲವಾರು. ಕಡುಬಡತನದ ಕುಟುಂಬದಲ್ಲಿ ಬೆಳೆದ ನನ್ನ ತಂದೆ ಅವರ ಕುಟುಂಬದಲ್ಲಿಯೇ ಮೊದಲನೇ ಪದವೀಧರರಾಗಿ ಒಡಹುಟ್ಟಿದವರೆಲ್ಲರನ್ನು ಆರ್ಥಿಕವಾಗಿ ಪ್ರೋತ್ಸಾಹಿಸಿ ವೃತ್ತಿಪರರನ್ನಾಗಿ ಅಲ್ಲದೆ, ಅವರನ್ನು ಕೌಟುಂಬಿಕವಾಗಿ ನೆಲೆಸಲು ಪಟ್ಟ ಕಷ್ಟಗಳನ್ನು ನೋಡುತ್ತಲೇ ಕಳೆದಿತ್ತು ನನ್ನ ಬಾಲ್ಯ ಹಾಗೂ ಪ್ರೌಡಾವಸ್ಥೆ. ಚನ್ನಗಿರಿ ತಾಲೂಕು, ತಾವರೆಕೆರೆಯಲ್ಲಿ ನನ್ನ ಪ್ರಾಥಮಿಕ ಹಾಗೂ ಮಾಧ್ಯಮ ಶಿಕ್ಷಣ. ಹಟ್ಟಿಕಸ, ಹಸು, ಎಮ್ಮೆ ಸೆಗಣಿ ಬಾಚಿ, ದನಕರುಗಳಿಗೆ ಹುಲ್ಲು ನೀರು ಕುಡಿಸಿ ನಂತರ ಶಾಲೆಗೆ ಹೋಗಿ ಬಂದು, ಸಂಜೆ ಅಮ್ಮ ಕಟ್ಟಿಟ್ಟ ಹುಲ್ಲಿನ ಪೆಂಡಿಯೊಂದಿಗೆ ಹಿಂದಿರುಗಿ, ಅಪ್ಪಾಜಿ ಬೆಳೆಸಿದ ತರಕಾರಿ ಗಿಡಗಳಿಗೆ ನೀರುಣಿಸಿ, ನನ್ನ ಪಠ್ಯೇತರ ಕಾರ್ಯಗಳನ್ನು ಮುಗಿಸಿ ರಾತ್ರಿ ಊಟ ಮುಗಿಸಿ, ಅಪ್ಪನ ಕಾಲೊತ್ತುತ್ತ ಅವರ ಕಥೆಗಳನ್ನು ಕೇಳುತ್ತ ಮಲಗುವುದು ನನಗೆ ಈಗಲೂ ಸವಿನೆನಪು.

ಅವಿಭಕ್ತ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ  ತಂದೆಯವರು, ಶ್ರೇಷ್ಠ ಕೌಟುಂಬಿಕ ಹಾಗೂ ವೃತ್ತಿಪರ ಮೌಲ್ಯಗಳ ಜೊತೆಗೆ, ಒಳ್ಳೆಯ ಸಾಮಾಜಿಕ ನಿಲುವು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಸಾಕಷ್ಟು ಶ್ರಮಿಸಿದ್ದರು. ಮಕ್ಕಳಿಗೆ ಆಸ್ತಿ ಬೇಡ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಎನ್ನುವ ತತ್ವವನ್ನ ಕಾರ್ಯರೂಪಕ್ಕೆ ತಂದ ನಮ್ಮ ತಂದೆ “ಸಫಾರಿ ಸಿದ್ದರಾಮಣ್ಣ” ಎಂದೇ ಹೆಸರುವಾಸಿಯಾಗಿದ್ದರು.. ಈ ಎಲ್ಲಾ ಪೀಠಿಕೆ ಏಕೆಂದರೆ, ತಂದೆಯವರ ಮಾತು ವೇದ ವಾಕ್ಯವೆಂದು ಅವರ ಹೇಳಿದ ದಾರಿಯಲ್ಲೇ ನಡೆದು ಬಂದೆ. ಅವರ ಹಾಗೂ ಅವರ ಪೂಜ್ಯ ಗುರುಗಳಾದ ದಿವಂಗತ ಶ್ರೀ ಬಿ ಜಿ ನಾಗರಾಜ್ ರವರ ಸಲಹೆಯಂತೆ ನನ್ನ ಶುಶ್ರೂಷಕ ಪದವಿಯನ್ನು ಕುವೆಂಪು ವಿಶ್ವವಿದ್ಯಾನಿಲಯದಿಂದ ೧೯೯೮ ನೇ ಸಾಲಿನಲ್ಲಿ ಗಳಿಸಿದೆ. ನನ್ನ ವೃತ್ತಿಪರ ಶಿಕ್ಷಣ ಕರ್ನಾಟಕ ಶುಶ್ರೂಷಕ ಪರಿಷತ್ತಿನಲ್ಲಿ ನೋಂದಣಿಯಾದ ದಿನವೇ ನನಗೆ ಕೆಲಸದ ಪ್ರಸ್ತಾಪ ಪತ್ರದ ಜೊತೆಗೆ ೧೦ ದಿನಗಳ ಮುಂಗಡ ಸಂಬಳವನ್ನು ಒಂದು ಶುಶ್ರೂಷಕ ವಿದ್ಯಾಸಂಸ್ಥೆಯ ಅಧ್ಯಕ್ಷರು ನನ್ನ ತಂದೆಯ ಮುಂದೆಯೇ ನೀಡಿದಾಗ ನನಗಿಂತ ನನ್ನ ತಂದೆಯವರ ಆನಂದಕ್ಕೆ ಪಾರವೇ ಇಲ್ಲವಾಗಿತ್ತು. ಕೇವಲ ೬ ತಿಂಗಳು ಅನುಭವವಿದ್ದರೂ ಕೂಡ, ೨೦೦೦  ಇಸವಿಯಲ್ಲಿ ಒರಿಸ್ಸಾದಲ್ಲಿ ನಡೆದ ಚಂಡಮಾರುತ ದುರಂತದಲ್ಲಿ ವೈದ್ಯಕೀಯ ನೆರವು ನೀಡಲು ರಚಿಸಿದ ಮಣಿಪಾಲ ಆಸ್ಪತ್ರೆ  ವೈದ್ಯಕೀಯ ವಿಪತ್ತು ನಿರ್ವಹಣಾ ತಂಡದಲ್ಲಿ ನನ್ನನ್ನು ಆಯ್ಕೆ ಮಾಡಿದ್ದರು. ಆಗಲೂ ಸಹ ನಾನು ಮೇಲೆ ರೂತ್ ನ ಪ್ರಶ್ನಿಸಿದಂತೆ, ಮಣಿಪಾಲ ಆಸ್ಪತ್ರೆ, ಬೆಂಗಳೂರಿನ ನರ್ಸಿಂಗ್ ಡೈರೆಕ್ಟರ್ ಆಗಿದ್ದ ಶ್ರೀಮತಿ ಶ್ರೀದೇವಿ ವಾರಿಯರ್ ಅವರನ್ನು ಪ್ರಶ್ನಿಸಿದೆ “ನನಗಿಂತಲೂ ಹತ್ತಾರು ವರ್ಷ ಅನುಭವವಿರುವ ಹಿರಿಯ ಶುಶ್ರೂಷಕರಿರುವಾಗ ನನ್ನನ್ನೇಕೆ ಆಯ್ಕೆ ಮಾಡಿದ್ದೀರಿ?” ಎಂದೆ. ಅದುಕ್ಕುತ್ತರಿಸಿದ ಅವರು, ನಿನ್ನಲ್ಲಿರುವ ಅನುಭವಕ್ಕಿಂತ ನಿನಗಿರುವ ಅನುಕಂಪ  ಹಾಗೂ ವೃತ್ತಿಪರತೆ ನಿನಗೆ ಈ ಅವಕಾಶ ನೀಡಿದೆ ಎಂದರು. ಅವರ ಆ ಮಾತು ನನಗೆ ಹತ್ತಾನೆ ಬಲವನ್ನು ಅನುಗ್ರಹಿಸಿದಂತಾಯಿತು. ಒರಿಸ್ಸಾದ ೧೦ ದಿನಗಳ ಸೇವೆ ಇಂದಿಗೂ ಅವಿಸ್ಮರಣೀಯ. ನಮ್ಮೊಂದಿಗೆ ಭಾರತೀಯ ಸೇನೆಯ ಮುಖ್ಯಸ್ಥರು, ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳು, ಒರಿಸ್ಸಾ ಆರೋಗ್ಯ ಸಚಿವರು ಹಾಗೂ ಅವರ ಕಾರ್ಯದರ್ಶಿಗಳು ಇಂತಹ ಮಹಾ ಗಣ್ಯವಕ್ತಿಗಳೊಡನೆ ದೈನಂದಿನ ಚಟುವಟಿಕೆಗಳ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರೊಡನೆ ಅದೇ ಸೇನಾ ಅತಿಥಿ ಗೃಹದಲ್ಲಿ ವಾಸ್ತವಿಸಿದ ನೆನಪು ಅಜರಾಮರ. ಅದೃಷ್ಟವೆಂದರೆ, ನಮಗೆ ಬೇಕಾದ ಎಲ್ಲಾ ಸಹಾಯ ಅಲ್ಲಿನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು ನೀಡಿದ್ದರಿಂದ  ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಗರಿಷ್ಟ ಸಂಖ್ಯೆಯಷ್ಟು ರೋಗಿಗಳನ್ನು ಚಿಕಿತ್ಸಿದ್ದಲ್ಲದೆ, ಅವರ ಕುಟುಂಬಗಳಿಗೆ ಬೇಕಾಗುವ ಊಟ ಹಾಗೂ ತಾತ್ಕಾಲಿಕ ವಸತಿಯ ವ್ಯವಸ್ಥೆಯನ್ನು ಮಾಡುವ ಸದಾವಕಾಶ ನಮಗೆ ದೊರಕಿತು. ಅಲ್ಲಿಂದ ಹಿಂದಿರುಗಿದಾಗ ನಮ್ಮ ತಂಡದ ಎಲ್ಲರನ್ನು ಸ್ವಾಗತಿಸುತ್ತಿರುವ ಒಂದು ಬ್ಯಾನರ್ ಮಣಿಪಾಲ ಆಸ್ಪತ್ರೆಯ ಮುಂದೆ ಪ್ರದರ್ಶಿಸಿಲಾಗಿತ್ತು.  ಅಲ್ಲಿನ ಸಾವು ನೋವಿನ ಘಟನೆಗಳನ್ನು ಹಾಗೂ ನಮ್ಮ ಅನುಭವವನ್ನು ಹಂಚಿಕೊಳ್ಳಲು ಸ್ವತಃ ಒರಿಸ್ಸಾದ ಆರೋಗ್ಯ ಸಚಿವರು ಬೆಂಗಳೂರಿಗೆ ಭೇಟಿ ನೀಡಿ ನಮ್ಮೆಲ್ಲರನ್ನೂ ಅವರ ಅತಿಥಿ ಗೃಹಕ್ಕೆ ಆಹ್ವಾನಿಸಿ, ಎಲ್ಲಾ ಮಾಹಿತಿಯನ್ನು ಸಂಗ್ರಹಿಸುವುದರ ಜೊತೆಗೆ ನಮ್ಮೆಲ್ಲರ ಕರ್ತವ್ಯ  ನಿಷ್ಠೆಯನ್ನು ಶ್ಲಾಘಿಸಿದ್ದರು.

ಲಂಡನ್ನಿಗೆ ಹೊರಟ ಕನ್ನಡದ ಶುಶ್ರೂಷಕ

ಒರಿಸ್ಸಾದ ಅನುಭವ ಇನ್ನೂ ಹಸಿಯಿರುವಾಗಲೇ ಲಂಡನ್ ನಗರದಲ್ಲಿರುವ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಸಂದರ್ಶನಕ್ಕೆ ಆಮಂತ್ರಣ ಬಂದಿತ್ತು. ಅಂದು ಬೆಳಿಗ್ಗೆ ಯುಗಾದಿ ಹಬ್ಬದ ಸಲುವಾಗಿ, ನನ್ನ ವೇತನದಲ್ಲುಳಿಸಿದ  ೧೦,೦೦೦ ರೂಪಾಯಿಗಳನ್ನು ನನ್ನ ತಂದೆತಾಯಿಯರ ಕೈಲಿತ್ತು ನಮಸ್ಕರಿಸಿ ಹಬ್ಬದ ಆಚರಣೆಯಲ್ಲಿದ್ದಾಗ ಬೆಂಗಳೂರಿಂದ ದೆಹಲಿಗೆ ಹೊರಡಲು ಕರೆ ಬಂತು. ಕೇವಲ ೮ ತಿಂಗಳ ಅನುಭವದ     ನಾನು, ದೆಹಲಿಯ ಲೀ ಮೆರಿಡಿಯನ್ ಹೋಟೆಲ್ನಲ್ಲಿ ಸಂದರ್ಶನಕ್ಕೆ  ಎಂದು ಬಂದಿದ್ದ ೩,೫೦೦ ಶುಶ್ರೂಷಕರಲ್ಲಿ ಅತ್ಯಂತ ಕಡಿಮೆ ಅನುಭವಿಯಾಗಿದ್ದರೂ ಕೂಡ, ಬ್ರಿಟನ್ ದೇಶದಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷಿಯಾಗಿದ್ದೆ. ೩ ದಿನದ ಸಂದರ್ಶನದಲ್ಲಿ ೮೦ ಜನರ ಆಯ್ಕೆ ಮಾಡುವುದಾಗಿ ETI ಕಂಪನಿ ಡೈರೆಕ್ಟರ್ ಜಾನಿ ಭಂಡಾರಿಯವರು ತಿಳಿಸಿದ್ದರು. ಆದರೆ ಕೊನೆಗೆ ಅವರು ಆಯ್ಕೆ ಮಾಡಿದ್ದು ೮ ಜನ. ಅದರಲ್ಲಿ ನಾನು ಮೊದಲನೆಯವನು ಎಂದು ಹೋಟೆಲ್ ಸಭಾಂಗಣದಲ್ಲಿ ಎಲ್ಲರ ಮುಂದೆ ಧೃಡಪಡಿಸಿದರು ಜಾನಿ ಭಂಡಾರಿ. ಮತ್ತೊಮ್ಮೆ ಅದೇ ಪ್ರಶ್ನೆ, ನಾನೇ ಏಕೆ? ಜಾನಿ ಉತ್ತರಿಸಿದ್ದು “ನಿನ್ನಲ್ಲಿರುವ ಕೆಲಸದ ಬಗೆಗಿನ ಉತ್ಸಾಹ ಹಾಗೂ ಅದನ್ನು ಸಂದರ್ಶನದಲ್ಲಿ ಉದಾಹರಣೆಗಳೊಂದಿಗೆ ವಿವರಿಸಿದ ಬಗೆ ವಿಪ್ಪ್ಸ್ ಕ್ರಾಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ವೆಂಡಿ ಹಿಕ್ಕಿ ಅವರಿಗೆ ತುಂಬಾ ಹಿಡಿಸಿದೆ. ನೀನು ನಿನ್ನೆಲ್ಲ ಸಹೋದ್ಯೋಗಿಗಳಿಗೆ ಸಂದರ್ಶನದಲ್ಲಿ ಹೇಗೆ ಉತ್ತರಿಸಬೇಕು ಎನ್ನುವುದಕ್ಕೆ ಮಾದರಿ” ಎಂದು ಎಲ್ಲರೆದುರು ಹಂಚಿಕೊಂಡರು.

೩ನೇ ಜುಲೈ ೨೦೦೦ ದಂದು ನನ್ನ ಶುಶ್ರೂಷಕ ವೃತ್ತಿ ಬ್ರಿಟನ್ನಲ್ಲಿ ಆರಂಭಿಸಿತ್ತು. ಭಾರತೀಯ ಹಾಗೂ ಫಿಲಿಫೈನ್ಸ್ ದೇಶದ ಶುಶ್ರೂಷಕರು ಸಾಕಷ್ಟು ಸಂಖ್ಯೆಯಲ್ಲಿ ಬ್ರಿಟನ್ಗೆ ಆಗಮಿಸಿದರು. ಮುಂದಿನ ೧೨ ತಿಂಗಳಲ್ಲಿ ನನ್ನ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದ ೭೦೦ ಶುಶ್ರೂಷಕರಲ್ಲಿ ೪೫೦ ಮಂದಿ ಮಣಿಪಾಲ ಆಸ್ಪತ್ರೆಯಿಂದ ಬ್ರಿಟನ್ಗೆ ಬಂದು ನೆಲೆಸಿದರು.  ಕಂಡರಿಯದ ನಾಡಿನಲ್ಲಿ, ಓದುವುದಕ್ಕಷ್ಟೇ ಸೀಮಿತವಾಗಿದ್ದ ಇಂಗ್ಲಿಷ್ ಭಾಷೆಯನ್ನು ಈಗ ಆಡು ಭಾಷೆಯಾಗಿ ಅರಗಿಸಿಕೊಳ್ಳಲು ಹರಸಾಹಸ ಪಡುವುದರ ಜೊತೆಗೆ, ಬ್ರಿಟನ್ನಿನ ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಹೊಂದಿಕೊಳ್ಳಲು ಸಹಾಯಿಸಿದ ನನ್ನ ಇಲ್ಲಿನ ಸಹೋದ್ಯೋಗಿಗಳಿಗೆ ಎಂದಿಂದಿಗೂ ಚಿರಋಣಿ. ಅದೇ ರೀತಿ, ನಮ್ಮ್ಮೆಲ್ಲರ ಅನುಭವಗಳನ್ನು ಆಧಾರವಾಗಿರಿಸಿಕೊಂಡು, ಇಲ್ಲಿನ ನ್ಯಾಷನಲ್ ಹೆಲ್ತ್ ಸರ್ವಿಸ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಶ್ರಮಿಸಿದೆವು. ನಮ್ಮ  ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವ ಸಮಯದಲ್ಲಿ  ಸುಧಾರಣೆ, ವಾರ್ಡ್ನಲ್ಲಿ ಶುಶ್ರೂಷಕರ ನಿರ್ವಹಣೆಯಲ್ಲಿ ಸ್ವಾಯತ್ತತೆ, ನುರಿತ ಶುಶ್ರೂಷಕರು ತಮ್ಮ ಪದವಿ ಹಾಗೂ ಅನುಭವದ ಆಧಾರದ ಮೇಲೆ ಸ್ಪೆಷಲಿಸ್ಟ್ ನರ್ಸಿಂಗ್ ಹಾಗೂ ನರ್ಸ್ ಪ್ರಾಕ್ಟಿಷನರ್ ವೃತ್ತಿಯಲ್ಲಿ ಅಳವಡಿಸಿಕೊಳ್ಳಲು ಬೇಕಾಗುವ ಅರ್ಹತೆಗಳು ಹಾಗೂ ಅನುಭವಗಳನ್ನು ನಾನು ಹಲವಾರು ಸಹೋದ್ಯೋಗಿಗಳೊಂದಿಗೆ ಸ್ಥಳೀಯವಾಗಿ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಂಚಿಕೊಂಡಿದ್ದೇನೆ.

ಅರಸನ ಕೈ ಕುಲುಕಿಸಿದ ಸೆಗಣಿ ಬಾಚಿದ ಕೈಗಳು!

ಕರ್ತವ್ಯ ನಿಷ್ಠೆ ಹಾಗೂ ಸೇವಾ ಮನೋಭಾವನೆ ನನ್ನ ತಂದೆ ತಾಯಿಯಿಂದ  ಬಳುವಳಿಯಾಗಿ ಬಂದಿದೆ ಎಂಬುದು ನನ್ನ ಭಾವನೆ. ಆದ್ದರಿಂದ, ರಾಜರ ಅರಮನೆಯ ಆಮಂತ್ರಣ ನನಗೆ ಬಯಸದೆ ಬಂದ ಭಾಗ್ಯವಾದರೂ ಅದು ನನ್ನ ಗೌರವಯುತ ತಂದೆಗೆ ಅವರು ದಿವಂಗತರಾದ ನಂತರ ಅವರ ಪಾದಾರವಿಂದಗಳಿಗೆ ಅರ್ಪಿಸುವ ವಿಶೇಷ ಕೊಡುಗೆ. ಅಂದು ಅರಸರನ್ನು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಎರಡು ಬಾರಿ ಭೇಟಿಯಾಗಿ ಅವರ ಹ್ಯಾಂಡ್ ಶೇಕ್ ಮಾಡಿದ  ಕ್ಷಣ ನೆನೆದೊಡನೆ ನನ್ನೀ ಸೆಗಣಿ ಬಾಚಿದ ಕೈಗಳು ಅರಸನ ಕೈ ಕುಲುಕಿಸುವ ಮಟ್ಟಕ್ಕೆ ಮುಟ್ಟಿದ್ದು ಈ ಜೀವನದಲ್ಲಿ ನನಗೆ ಸಂಪೂರ್ಣ ಸಾರ್ಥಕತೆಯನ್ನು ಕಲ್ಪಿಸಿದೆ. ಅರಸರಿಗೆ ಹುಟ್ಟು ಹಬ್ಬದ ಶುಭಾಷಯಗಳನ್ನು ಹಾರೈಸಿ,  ಅರಸರಿಂದ “ನಿಮ್ಮ ಸೇವೆಗೆ ನನ್ನ ನಮನ” ಎಂಬ ನುಡಿಮುತ್ತುಗಳು ಅವರ ಬಾಯಿಂದ ಹೊಮ್ಮಿದಾಗ, ನನಗೆ ಅನಿಸಿದ್ದು ಅದು ಬರೀ ನನ್ನ ಭಾವನೆಗಳಷ್ಟೇ ಅಲ್ಲ ಅದು ಪ್ರತಿಯೊಬ್ಬ ಭಾರತೀಯ ಮೂಲದ ಶುಶ್ರೂಷಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಲ್ಲಿಸುವ ಸೇವೆಯ ಹೆಗ್ಗಳಿಕೆ ಹಾಗೂ ಹಿರಿಮೆ.

ರಾಜರ ಭೇಟಿ, ನನ್ನ ಬದುಕಿನಲ್ಲಿ “ಸಾರ್ಥಕತೆಯ ಕಾರ್ತಿಕೋತ್ಸವದಷ್ಟೇ” ಸಂತಸ ತಂದಿದೆ. ನನ್ನೀ ಯಶಸ್ಸಿನ ಕೀರ್ತಿಯನ್ನು ಈ ಜಗತ್ತಿಗೆ ಪರಿಚಯಿಸಿದ ನನ್ನ ತಂದೆತಾಯಿಯರಿಗೆ ಅರ್ಪಿಸುತ್ತ ನನ್ನ ಪೂಜ್ಯ ತಂದೆ ಸಫಾರಿ ಸಿದ್ದರಾಮಪ್ಪನವರಿಗೆ ಮತ್ತೊಮ್ಮೆ ನನ್ನ ನುಡಿನಮನಗಳೊಂದಿಗೆ….

ತಿಪ್ಪೇಸ್ವಾಮಿ ಬಿಲ್ಲಹಳ್ಳಿ ಸಿದ್ದರಾಮಪ್ಪ

ಮೂರನೆಯ ಸಾಲಿನಲ್ಲಿ ಲೇಖಕರು!

ಲಿಂಕ್ ಗಳು

ಬಕಿಂಗ್ ಹ್ಯಾಮ್ ಪ್ಯಾಲೇಸ್ ಅರಸರ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟಿತಗೊಂಡ ಕೆಲವು ಲಿಂಕ್ ಈ ಕೆಳಗಿವೆ:

King’s birthday coverage: 

https://intranet.homerton.nhs.uk/news/allergy-lead-nurse-thippeswamy-represents-global-nursing-to-the-king-8514

ಲಹರಿ- ಕಾಡುವ ಘಮಗಳ ಗುಂಗಿನಲ್ಲಿ,

ಚಿತ್ರಕೃಪೆ; ಗೂಗಲ್
ಕಾಡುವ ಘಮಗಳು 

ಮನುಷ್ಯನಿಗೆ ದೇವರು ಕೊಟ್ಟ ಮಹತ್ತರ ಉಡುಗೊರೆ ಮೂಗು. ಅದಿಲ್ಲದೆ ನಾವು ಹೇಗೆ ಉಸಿರಾಡುತ್ತಿದ್ದೆವು ಅನ್ನುವ
ಮೂಲಭೂತ ಪ್ರಶ್ನೆಗೂ ಮೊದಲು, ಪ್ರಕೃತಿಯ ಅದೆಷ್ಟೋ ಸ್ವಾರಸ್ಯ ನಮ್ಮ ಅರಿವಿಗೆ ಬರುತ್ತಿರಲಿಲ್ಲವೇನೋ ಬಂದರೂ
ಅದು ದೀರ್ಘಕಾಲ ನೆನಪಲ್ಲಿ ಉಳಿಯುವುದು ಕಷ್ಟ ಇತ್ತೇನೋ ಅನ್ನುವ ಯೋಚನೆ ಒಮ್ಮೆಲೇ ಮಿಂಚಿಮಾಯವಾಗುತ್ತದೆ. ಅದಕ್ಕಂತಲೇ ದೇವರಿಗೆ Special thanks ಹೇಳಲೇ ಬೇಕು.
ನಮಗೆ ಉಸಿರಾಡಲು,ಆಘ್ರಾಣಿಸಲು,ಮುಖಕ್ಕೊಂದು ಮೂಗು ಕೊಟ್ಟಿರುವುದಕ್ಕೆ! ಮೂಗಿರುವುದರಿಂದಲೇ ಅಲ್ವೇ ಪ್ರತಿಯೊಂದು ಘಟನೆ
ಪ್ರತಿಯೊಬ್ಬ ವ್ಯಕ್ತಿ, ಹೂವು, ಪ್ರಾಣಿ ಸ್ಥಳಗಳು .ಕೆಲವೊಮ್ಮೆ ಘಟನೆಗಳು ಘಮಗಳೊಂದಿಗೆ ಬೆಸೆದು ಮನಸಿನಲ್ಲಿ ಅಳಿಸದ ಹಚ್ಚೆಯಂತೆ ಅಚ್ಚಾಗಿ
ಬಿಡುವುದು?

ಕೆಲವರಿಗೆ ಈ ಘಮ, ವಾಸನೆ, ಕಂಪು, ಪರಿಮಳಗಳು ಅಷ್ಟಾಗಿ ಕಾಡಿರಲಿಕ್ಕಿಲ್ಲ. ಅಥವಾ ಹಲವರು ಆ ಬಗ್ಗೆ ಯೋಚಿಸಿಯೇ ಇರಲಿಕ್ಕಿಲ್ಲ. ಆದರೆ ಭೂಮಿಯ ಮೇಲೆ ಒಂದಷ್ಟು ಜನ ನನ್ನಂಥವರೂ ಇರುತ್ತಾರೆ. ಘಮದ ಗುಂಗಿನಲ್ಲಿ ಬದುಕುವವರು.ಬುದ್ಧಿ ಕೊಟ್ಟನೋ ಇಲ್ವೋ ದೇವರು, ಮೂಗು ಮತ್ತು ಕಣ್ಣು ಮಾತ್ರ ಸಿಕ್ಕಾಪಟ್ಟೆ ಚುರುಕಾಗಿರಲಿ ಎಂದು ಹರಸಿಬಿಟ್ಟ.

ಸಾರಿನಲ್ಲಿ ಅಪ್ಪಿತಪ್ಪಿ ಜೀರಿಗೆ ಜೊತೆಗೆ ಎರಡು ಕಾಳು ಮೆಂತ್ಯೆ ಹವೀಜ ಬಿದ್ದರೂ ಸಾಕು ರುಚಿ ನೋಡುವ ಮೊದಲೇ ನಾ ಅಮ್ಮನಿಗೆ ಹೇಳಿ ಬಿಡುತ್ತಿದ್ದೆ. ಈ ವಿಷಯಕ್ಕೆ ಮಾತ್ರ ನನಗೂ ಅಮ್ಮನಿಗೂ ಆಗೀಗ ಜಗಳ ಆಗತಿತ್ತು. ಊಟಕ್ಕೆ ಕೂಡುವಾಗ ಉಪ್ಪಿನಕಾಯಿ ದಿಟ್ಟಿಸಿದೆ ಎಂದರೆ ಎಲ್ಲಿ ಊಟದ ನಡುವೆ ಹುಳ ಗಿಳ ಅಂದು ಬಿಡುವೆನೋ ಅಂತ ಆಕೆಗೆ ಆತಂಕವಾಗತಿತ್ತು. ಯಾರಿಗೂ ಕಾಣದ್ದು, ಯಾರ ಮೂಗಿಗೆ ನಿಲುಕದ್ದು ಅದು ಹೇಗೆ ನನಗೇ ಕಾಣಿಸುತ್ತಿತ್ತೋ, ನನ್ನ ಮೂಗಿಗೆ ಅಡರುತಿತ್ತೋ ಆ ದೇವರೇ ಬಲ್ಲ.

ಊಟದ ವಿಷಯ ಮಾತ್ರವಲ್ಲ ಈ ಘಮ ಮತ್ತು ಅದನ್ನು ನೆನಪಿಟ್ಟು ಆ ಜಾಗೆ, ವ್ಯಕ್ತಿ,ಘಟನೆಯೊಂದಿಗೆ ಚಂದದಲ್ಲಿ ಮಿದುಳಿನ ಅದ್ಯಾವ ಡ್ರೈವ್ ನಲ್ಲಿ save ಮಾಡಿ ಕೊಂಡಿದೆಯೋ ಈ ಮನಸು ಮೂಗು. ಕಣ್ಣು ಮುಚ್ಚಿ ಧ್ಯಾನಿಸಿದರೆ ಆ ಘಮ ತನ್ನಿಂತಾನೇ ಫೋಟೋ ಆಲ್ಬಂ ತರಹ ತೆರೆದುಕೊಳ್ಳುತ್ತದೆ. ಯಾವಾಗಲೋ ಇಂಥದ್ದೊಂದಿಷ್ಟು ನನ್ನ ಕಾಡುವ ಘಮಗಳನ್ನು ಪಟ್ಟಿ ಮಾಡಿಟ್ಟಿದ್ದೆ. ಅವನ್ನು ಇಲ್ಲಿ ಇಂದು ಬರೆಯೋಣ ಅನ್ನಿಸಿತು.

ಮೊದಲ ಮಳೆ
ಇದು ಎಲ್ಲರಿಗು ಆಗಿರೋ ಅನುಭವ. ಮೊದಲ ಮಳೆ ಬಂದಾಗ ಬರೊ ಹಸಿಮಣ್ಣ ವಾಸನೆ. ಎಲ್ಲರಿಗೂ ಈ ಘಮದೊಂದಿಗೆ ಅಪರೂಪದಲ್ಲಿ ಅಪರೂಪದ ನೆನಪುಗಳಿರಬಹುದು. ನನಗೆ ಈ ಕಂಪು ನೆನಸಿಕೊಂಡರೆ,ನಾವು ಸಿರಸಿ ರಸ್ತೆಯ ನಮ್ಮ ಆ ಹಳೇ ಮನೆಯಲ್ಲಿರುವಾಗ, ಸೋರುತ್ತಿದ್ದ ಮಾಡು ಮೇಲಿಂದ ಬೀಳುವ ನೀರ ಹನಿಗಳನ್ನು ನೇರವಾಗಿ ತನ್ನೆಡೆಗೆ ಸೆಳೆದುಕೊಳ್ಳುತ್ತಿದ್ದ ಅಲ್ಯೂಮಿನಿಯಂ ಪಾತ್ರೆಗಳು. ಅದೇ ಸಮಯಕ್ಕೆ ಅಮ್ಮ ಮಾಡಿ ಕೊಡುತ್ತಿದ್ದ ಸಬ್ಬಸಿಗೆ ಪಲ್ಯ, ಅಕ್ಕಿರೊಟ್ಟಿ. ಕೆರೆಮೀನಿನ ಸಾರು ಮಡಕೆಯಲ್ಲಿ ಕುದ್ದ ಘಮ. ಮಳೆ ನಿಂತ ಮೇಲೆ ಹಿತ್ತಲಲ್ಲಿ
ಬರುತ್ತಿದ್ದ ಕಂಚಿ ಹೂವಿನ ವಿಲಕ್ಷಣ ಘಮ ಉಪ್ಪುನೀರನಲ್ಲಿ ಹಾಕಿಟ್ಟ ಕಳಿಲೆ,ಹಲಸಿನ ತೊಳೆ,ಮಾವಿನಕಾಯಿ ,ಅಡಿಗೆಗಳು ಅದಕ್ಕೊಂದು ತೆಂಗಿನೆಣ್ಣೆ ಬೆಳ್ಳುಳ್ಳಿ ಒಗ್ಗರಣೆ.ಆಹ್ಹ್ ! ಆ ಮಳೆ ಘಮ ಹೀರದೆ ಅದೆಷ್ಟೋ ಕಾಲವಾಯಿತು.ಪ್ಯಾಟ್ರಿಕೋರ್ ಅನ್ನುವ ಮಳೆ ಮಣ್ಣಿನ ಘಮದ ಅತ್ತರು ಮಾರುಕಟ್ಟೆಗೆ ಬಂದಿದೆಯಂತೆ. ಅದನ್ನೊಮ್ಮೆ ಕೊಂಡು ತರಬೇಕು.

ದೇವಿಮನೆ ಘಟ್ಟ.
ಅದು ನೆನಪಾಗೋದೆ ಅದರ ಕಾಡು ಹೂಗಳ ಘಮದಿಂದ. ಶಿರಸಿ ಮತ್ತು ಕುಮಟೆ ಪೇಟೆ ಗಳನ್ನೂ ಸೇರಿಸುವ
ಈ ಘಟ್ಟದ ತಿರುವು ಮುರುವು ೬೬ ಕಿಲೋಮೀಟರ್ ಕಾಡಿನ ಹಾದಿ ಬರಿ ಹಸಿರು ನೋಡುತ್ತಾ, ಕಾಡು ಹೂಗಳ ಪೇರಳೆ,ಕಿತ್ತಳೆ ಹಣ್ಣುಗಳ ಘಮದ ಗುಂಗಿನಲ್ಲಿ ಕಳೆದು ಬಿಡುತ್ತಿದ್ದೆ. ಇನ್ನೇನು ಅಘನಾಶಿನಿ ಬಂದೆ ಬಿಡ್ತಾಳೆ. ಆಕೆಯ ಮತ್ತುಶರಾವತಿ ನದಿಯ ಹೆಸರನ್ನು ಕೇಳಿದ ಕೊಡಲೇ ನೆನಪಾಗೋದು ಹಸಿ.ತಾಜಾ ಮೀನಿನ ಘಮ.ಜೊತೆಗೆ ಕೆಂಪು ಮಣ್ಣು(ಮೀನುತಿನ್ನದವರಿಗೆ ಈ ಘಮದ ಭಾಗ್ಯ ಇಲ್ಲ ಮೂಗಿಗೆ ಕರವಸ್ತ್ರ). ಕುಮಟೆಯ ಬಸ್ಸ್ ನಿಲ್ದಾಣದಲ್ಲಿ ಮಾರಲು ಬರುತ್ತಿದ್ದ ಹಾಲಕ್ಕಿ ಒಕ್ಕಲತಿಯರ ಬಟ್ಟಿಯಲ್ಲಿದ್ದ ಜಾಜಿ,ಬಕುಲಾ,ಸುರಗಿ ಕಂಪು. ಜೀವ ಇರುವ ಒರೆಗೂ ಈ ನೆನಪ ಘಮ ಶಾಶ್ವತ.

ಮಂಗಳೂರು ಮಲ್ಲಿಗೆ.
ಈ ಘಮ ಎಂದಕೂಡಲೇ ನೆನೆಪಗೋದು ದಕ್ಷಿಣಕನ್ನಡ ಸೀಮೆಯ ಮದುವೆಗಳು. ದರ್ಶನ, ದೈವದಮನೆ,ಬೇಸಿಗೆಯ ಧಗೆಯಲ್ಲೂ ಬೆವರ ಧಾರೆ ಹರಿಸುತ್ತಲೇ, ಜಗಮಗಿಸುವ ಸೀರೆ ಉಟ್ಟು, ಚಿನ್ನ ಧರಿಸಿದ ಭಗಿನಿಯರೂ, ಬಸ್ಸಿಗೆ ಕಾದು ಜನ ಜಂಗುಳಿಯಲ್ಲಿ ಅಡೆಗೋ ನಿಲ್ಲಲು ಒಂದು ಜಾಗ ಸಿಕ್ಕಾಗ ನೂರಾರು ಪರ್ಫ್ಯೂಮ್ ಗಳು ಬಸ್ಸಿನಲ್ಲಿ ಮಾತಿಗಿಳಿದಿವೆಯೇನೋ ಅನ್ನಿಸುವ ಮರುಗಳಿಗೆ ಮದುವೆ ಹಾಲ್ ತಲುಪಿ,
ಭೋಜನ ಮುಗಿಸಿ ಊಟದ ಬಗ್ಗೆ ಸಾರಿಗೆ ಉಪ್ಪು ಕಮ್ಮಿ ಪಾಯಶಕ್ಕೆ ಬೆಲ್ಲ ಜಾಸ್ತಿ ಅಂದು ಕಾಮೆಂಟ್ ಒಗೆದು ಬರುವ ಆಮಂತ್ರಿತರು.
ಚಿಕ್ಕವರಿದ್ದಾಗ ತಲೆತುಂಬ ಮಲ್ಲಿಗೆ ಮುಡಿಸಿಕೊಂಡು ಕನ್ನಡಿಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದು ನೆನಪಾಗುತ್ತದೆ. ಒಣಗಿ ಹೋದರೂ ಘಮ ಬಿಡದ ಆ ಮಲ್ಲಿಗೆಯ ಗುಣಗಾನ ಮಾಡಿದಷ್ಟೂ ಕಡಿಮೆ.


ಊದಬತ್ತಿ (ಅಗರಬತ್ತಿ)
ಕೆಲವು ಅಗರಬತ್ತಿಗಳು ಎಷ್ಟು ಮರೆತರು ಆ ಘಟನೆ ಯೊಂದಿಗೆ ನೆನೆಪಿನಲ್ಲೇ ಘಮಘಮಿಸುತ್ತವೆ. ಚವತಿ ಹಬ್ಬದಂದು ಪಪ್ಪ ಅದ್ಯಾವುದೋ ಸಿಟ್ಟಿನಲ್ಲಿ ನನಗೂ ತಂಗಿಗೂ ಹೊಡೆದದ್ದು.ಪರೀಕ್ಷೆ ಹೊತ್ತಿಗೆ ಹುಷಾರುತಪ್ಪಿ ಆಸ್ಪತ್ರೆಯ ಅತಿಥಿ ಆಗಿದ್ದು. ಆ ಸಮಯದಲ್ಲಿ ಮನೆಯಲ್ಲಿ ಹೆಚ್ಚುತ್ತಿದ್ದ ಆ ಊದಬತ್ತಿಯ ಘಮ ಈಗ ಆಘ್ರಾಣಿಸಿದರೂ, ನೆನಪಿಸಿಕೊಂಡರೂ ಮತ್ತೆ ವಾಕರಿಕೆ ಬರುವುದಂತೂ ನಿಜ.


ಕಾಫಿ ಘಮ
ಇವರೂಂದಿಗೆ ಹಸಿದ ಹೊಟ್ಟೆಯಲ್ಲಿ ಬೆಂಗಳೂರು, ಲಾಲಬಾಗ್ ಸುತ್ತಾಡಿ ಕೊನೆಯಲ್ಲಿ ನಾಚಿ ನಾಚಿ ಹಸಿದ ವಿಷಯ ಹೇಳಿ ಅಕ್ಕಿರೊಟ್ಟಿ ತಿಂದಿದ್ದು. ಎದೆತುಂಬಿ ಹಾಡುವೆನು,ಎಂದೂ ಮರೆಯದ ಹಾಡು,ಮನತುಂಬಿ ಹಾಡುವೆನು ಕಾರ್ಯಕ್ರಮಗಳ ಚಿತ್ರೀಕರಣ. ಅಲ್ಲಿ ಪುಟ್ಟ ಲೋಟದ ತುಂಬ ಕೊಡುತ್ತಿದ್ದ ಆ ಸಕ್ಕರೆಪಾಕದಂತಿದ್ದ ಕಾಫಿ ಘಮ.. ಕಾಫಿ ಎಂದರೇ ಬೆಂಗಳೂರು ಅನ್ನಿಸುವಂತೆ ಮಾಡಿದೆ. ಒಗ್ಗರಣೆ ಮಧ್ಯಾನ್ಹ ಹೊತ್ತು ಆಕಾಶವಾಣಿ ಬಿತ್ತರಿಸುವ ೮೦ ರ ದಶಕದ ಹಾಡುಗಳು.ಮತ್ತು ಕುಂದಾಪುರದ ಕೋಣಿಯಲ್ಲಿ ಅಜ್ಜಿ ಕೊದ್ದೆಲ್ ಮತ್ತು ಬಟಾಟೆ ಪದಾರ್ಥಕ್ಕೆ ಹಾಕುತ್ತಿದ್ದ ಬೆಳ್ಳುಳ್ಳಿ ಒಗ್ಗರಣೆ ಘಮ.ಈಗಲೂ ಆ ಹಾಡುಗಳನ್ನು ಕೇಳಿದಾಗ ಆ ಹಿತವಾದ ಘಮ ಅಜ್ಜಿ ಮನೆ ನನ್ನ ಮುದ್ದಿಸಿ ಅಟ್ಟಕ್ಕೇರಿಸಿ ಇಟ್ಟಿರುವ ಅಜ್ಜಿ ನೆನಪಾಗಿ ಬಿಡುತ್ತಾರೆ.

ದುಂಡುಮಲ್ಲಿಗೆ
ಅದು ಯಾವಕಾಲದಲ್ಲೂ ನನಗೆ ನೆನಪಾಗಿ ಕಾಡುವುದು. ಹಳೆಮನೆಯ ಹಿತ್ತಲಲ್ಲಿ ಹಬ್ಬಿದ್ದ ಹಂದರದಲ್ಲಿ ಬಿಳಿ ಚಿಕ್ಕೆಗಳಂತೆ ತಾಮುಂದು ನಾ ಮುಂದು ಎಂದು ಅರಳುತ್ತಿದ್ದವು ಅವು. ಬೇಸಿಗೆಯ ಬಿಸಿಗಾಳಿ ಅದರೊಂದಿಗೆ ದುಂಡುಮಲ್ಲಿಗೆಯ ಘಮ. ತುಳಸಿ ಕಟ್ಟೆಯಮೇಲೆ ಕುಳಿತು ಬೆಳದಿಂಗಳ ಬೆಳಕಲ್ಲಿ ನನ್ನ ಉದ್ದ ಕೂದಲ ನೆರಳು ನೋಡಿ ಖುಷಿ ಪಡುವ ಕ್ಷಣ. ಅಂಗಳದಲ್ಲಿ ಕೂತು ಬೆಳದಿಂಗಳೂಟ ಮಾಡುವ ಆ ಉಮೇದಿಯ ದಿನಗಳು. ಈಗ ಹಳೆ ಮನೆಯೂ ಇಲ್ಲ ಮಲ್ಲಿಗೆ ಹಂದರವೂ ಇಲ್ಲ. ಘಮ ಮಾತ್ರ ಹಾಗೆ ಉಳಿದು ಹೋಗಿದೆ.

ಅತ್ತರು
ಆಕೆಯ ಹೆಸರು ಡಯಾನಾ ಉತ್ತರಕನ್ನಡದ ಕೊಂಕಣಿಗರ ಸಂಸ್ಕೃತಿಯ ಬಗ್ಗೆ PhD ಅಧ್ಯಯನ ಮಾಡುತ್ತಿದ್ದಳು.ನಮ್ಮ
ಮನೆಗೆ ಸುಮಾರು ದಿನ ವಿಷಯ ಸಂಗ್ರಹಣೆ ಕ್ಷೇತ್ರಕಾರ್ಯ ಸಂದರ್ಶನಮಾಡಲು ಬಂದಿದ್ದಳು. ನಾನಿನ್ನೂ ಆಗ ೩ನೇ ತರಗತಿಯಲ್ಲಿದ್ದೆ. ಕಣ್ಣುಮುಚ್ಚಿಯೂ ಮನೆ ಬಾಗಿಲಿಗೆ ಬಂದವರು ಅವರೇ ಎಂದು ನಾನು ಹೇಳುತ್ತಿದ್ದೆ, ಕಣ್ಣಿಗಿಂತ ನನ್ನ ಮೂಗು ಆಕೆಯನ್ನು, ಆಕೆ ಹಾಕಿಕೊಳ್ಳುತ್ತಿದ್ದ
ಒಂದು ಸುಗಂಧದ್ರವ್ಯದಿಂದ ಇಂದಿಗೂ ನೆನಪಿಟ್ಟುಕೊಂಡಿದೆ.

ಮಗುವಿನ ಘಮ
ನನ್ನ ಬದುಕಲ್ಲಿ ಮೊದಲು ನೋಡಿದ ಮಗು ಅದು. ನನ್ನ ಸುಲೋಚನ ಅತ್ತೆಯ ಮೊದಲ ಮಗು. ಅದರ ಮುದ್ದು ಕೈಗಳು ಕೆಂಪುಗಟ್ಟಿದ ಕಾಲು,ಮಗು ಎಂದರೆ ಜೀವವಿರುವ ಗೊಂಬೆ ಅನಿಸಿತ್ತು. ಎಲ್ಲಕ್ಕಿಂತ ಹೆಚ್ಹಾಗಿ ಅದರ ಹತ್ತಿರ ಬರುತ್ತಿದ್ದ ಬೇಬಿ ಪೌಡರ್ ಘಮ,ಮೈಗೆ ಹಚ್ಹುವ ಕೆಂಪು ಬೇರಿನ ಎಣ್ಣೆಸ್ನಾನ ಮಾಡಿ ಬಂದ ನಂತರ ಹಾಕುವ ಲೋಭಾನ ಗಂಧದ ಸಾಣೆಯಲ್ಲಿ ತೇಯುವ ಬಜೆ ಬೇರಿನ ಪರಿಮಳ ಎಳೆಮಗು ನನಗೆ ನೆನಪಾಗೋದೆ ಆ ಘಮ.

ಮಾವಿನಕಾಯಿ,
ನೆನಪು ಬಂತೆಂದರೆ ಸಾಲಾಗಿ ನೆನಪಾಗೋದು ವಾರ್ಷಿಕ ಪರೀಕ್ಷೆಗಳು,ಯುಗಾದಿ,ಆಲೀಕಲ್ಲ ಮಳೆ, ಗೆಳೆಯರೊಂದಿಗೆ ನೀರು
ಇಂಗುತ್ತಿರುವ ಹೊಂಡ ಕೆರೆಗಳಿಗೆ ಮೀನು ಹಿಡಿಯಲು ಹೋಗುವುದು ಕಪ್ಪೆಮರಿಗಳನ್ನ ತಂದು ಮನೆಯ ನೀರಿನ ತನಕ ನಲ್ಲಿ ಹಾಕುವುದು. ಮಾವಿನ ಸೊನೆ ಪುಟ್ಟ ಬಾಟಲಿಯಲ್ಲಿ ಸಂಗ್ರಹಿಸಿಟ್ಟು ಆಗೀಗ ಅದನ್ನು ತಂಬಳಿ ಮಾಡಲು ಬಳಸುವುದು ಜೊತೆಗೆ
ಆ ಸೀಜನ್ನಲ್ಲಿ ಪ್ರತಿದಿನ ಕಡ್ಡಾಯ ಎಂಬಂತೆ ಮಾಡುವ ಮಾವಿನಕಾಯಿ ಅಡುಗೆಗಳು.

ನನಗೆ ಈ ಕಾರಣಕ್ಕೆ ಹ್ಯಾರಿ ಪೊಟರ್ ಮತ್ತು Hogwarts School of Witchcraft and Wizardry ನಿಜವಾಗಿಯೂ ಇರಬಾರದಿತ್ತೆ? ಎಂದು ತೀವ್ರವಾಗಿ ಅನಿಸುವುದುಂಟು. ನನಗೆ ಹೆಚ್ಚೇನು ಬೇಡಿತ್ತು ಬೇಕೇನಿಸಿದಾಗೆಲ್ಲ ಈ ನನಪುಗಳನ್ನ, ಘಮಗಳನ್ನ ಫೋಟೋ ಆಲ್ಬಂ ನಂತೆ ಮತ್ತೆ ಮತ್ತೆ ಮುಟ್ಟಿ ತಟ್ಟಿ ನೋಡಿ ಮತ್ತೆ ಮತ್ತೆ ಆಘ್ರಾಣಿಸುವಂತೆ ಮಾಡುವ ಒಂದೆರಡು spells ಕಲಿಸಿಬಿಟ್ಟರೆ ಸಾಕಿತ್ತು.
ಈ ಘಮಗಳ ಕಥೆ ಮುಗಿಯುವಂಥದ್ದಲ್ಲ ಹೇಳಿದರೆ ಹೇಳುತ್ತಲೇ ಹೋಗಬಹುದು, ಮನೆಗೊಂದು ಘಮ. ಒಲಿದ ಮನಸಿಗೊಂದು ,ಮುನಿದ ಮನಸಿಗೆ ಮತ್ತೊಂದು ಘಮ. ಓಲೈಕೆಗೆ ಇನ್ನೊಂದು ಘಮ ಹೀಗೆ ಬದುಕೆಲ್ಲ ಘಮದ ಸೆರಗಲ್ಲಿನೆನಪಿನ ಘಮದಲ್ಲಿ.

- ಅಮಿತಾ ರವಿಕಿರಣ್

ರಸಋಷಿ ಸ್ಮರಣೆ ಹಾಗೂ ಪತ್ತೇದಾರಿ ಕಥೆ

ನಮಸ್ಕಾರ  ಅನಿವಾಸಿ ಬಂಧುಗಳೇ. ಇನ್ನೇನು ಈ ವರುಷದ ಅಂತಿಮ ಚರಣದಲ್ಲಿದ್ದೇವೆ. ಈ ಕಾಲಾವಧಿಯಲ್ಲಿ ನಮಗೆ ದಕ್ಕಿದ ಖುಷಿ-ಸಂತಸ- ನೆಮ್ಮದಿಯ ಕ್ಷಣಗಳಿಗೊಂದು ಹೃದಯಪೂರ್ವಕ  ನಮನಗಳನ್ನು ಸಲ್ಲಿಸೋಣ. ಕಷ್ಟ, ನೋವು, ದು:ಖಗಳು ನಮ್ಮನ್ನು ಮತ್ತಷ್ಟು ಗಟ್ಟಿ ಮಾಡಿದ್ದಕ್ಕಾಗಿಯೂ, ಕಲಿಸಿದ ಜೀವನಾನುಭವ ಪಾಠಕ್ಕಾಗಿಯೂ ವಿನೀತರಾಗಿರೋಣ. ಅಂತೆಯೇ ಬರುವ ಹೊಸ ವರುಷಕ್ಕಾಗಿ  ‘ ಹೊಸ ತಾನದ, ಹೊಸ ಗಾನದ ರಸಜೀವವ ತಾ ಅತಿಥಿ’ ಎಂದು ಮನದ ಮನೆಯನ್ನು ಹೊಸಬೆಳಕಿನ ಹೊಸಬಾಳಿಗಾಗಿ ತೆರೆದಿಡೋಣ. 


ಇಂದು ರಸಋಷಿ ಕುವೆಂಪು ಅವರ ಜನುಮದಿನ. ಕನ್ನಡದ ನಂದನವನದ ಕೋಗಿಲೆ ಈ ‘ಪರಪುಟ್ಟ’ನಿಗೆ ಕನ್ನಡಿಗರೆಲ್ಲರ ಭಾವನಮನಗಳು. ಇಂದಿನ ಅನಿವಾಸಿ ಸಂಚಿಕೆಯಲ್ಲಿ ಅವರ ‘ನೆನಪಿನ ದೋಣಿಯಲ್ಲಿ’ ಆತ್ಮಕಥನದಿಂದ ಆಯ್ದ ಒಂದೆರಡು ಭಾಗಗಳು ನಿಮ್ಮ ಓದಿಗಾಗಿ.

ಅಂತೆಯೇ ನಮ್ಮ ಅನಿವಾಸಿ ಕಥೆಗಾರ ಮೇಟಿಯವರಿಂದ ಒಂದು ಕುತೂಹಲಕಾರಿಯಾದ ಪತ್ತೇದಾರಿ ಕಥೆ ‘ಸಿ.ಐ.ಡಿ 999’. ನಿಲ್ಲದೇ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುತ್ತದೆ. ನೀವೂ ಓದಿ; ಓದಿನ ಖುಷಿ ಅನುಭವಿಸಿ. ಅನಿಸಿಕೆಗಳನ್ನು ಕಮೆಂಟಿಸಿ.

~ ಸಂಪಾದಕಿ

ನೆನಪಿನ ದೋಣಿಯಲ್ಲಿ

ಅವ್ವಗೆ ಹೆಮ್ಮೆ, ತನ್ನ ಮಗ ದೇವಂಗಿಗೌಡರ ಅಳಿಯ- ಇಂಗ್ಲೀಷ್ ಓದಿದ್ದ ಹೊಸಮನೆ ಮಂಜಪ್ಪಗೌಡರಂಥವರೂ ಹೊಗಳುವಂತೆ ಏನೇನೋ ಅದ್ಭುತವಾದದ್ದನ್ನು ಇಂಗ್ಲೀಷಿನಲ್ಲಿ ಬರೆಯುತ್ತಾನೆ ಎಂದು! ಒಂದು ದಿನ, ನಾನೊಬ್ಬನೇ ಅವರಿಗೆ ಮಾತಾಡಲು ಸಿಕ್ಕಿದ ಅಪೂರ್ವ ಸಂದರ್ಭದಲ್ಲಿ,(ಒಟ್ಟು ಕುಟುಂಬದ ಮಕ್ಕಳ ಬಾಳಿನಲ್ಲಿತಾಯಿಯೊಡನೆ ಮಾತಾಡಲು ಒಬ್ಬೊಬ್ಬರೇ ಸಿಗುವ ಏಕಾಂತ ಸಾಧ್ಯವೇ ಇಲ್ಲ!)  ಅವರು ತುಂಬ ಹಿಗ್ಗಿನಿಂದ , ಆದರೂ ಸಂಕೋಚದಿಂದ ಎಂಬಂತೆ ಕೇಳಿದರು.  ‘ ಪುಟ್ಟೂ, ನೀ ಇಂಗ್ಲೀಷಿನಲ್ಲಿ ಏನೇನೋ ಬರದೀಯಂತಲ್ಲಾ ದೇವಂಗಿ ಎಂಕ್ಟಯ್ಯಂಗೆ, ಅದೇನು ಬರೆದಿದ್ದೀಯಾ ಹೇಳೋ!’ ಅವರ ಪ್ರಶ್ನೆಯಲ್ಲಿ ತಮ್ಮ ಒಬ್ಬನೇ ಮಗನ ಮೇಲಿದ್ದ ಮುದ್ದೂ, ಹೆಮ್ಮೆಯೂ ಹೊಮ್ಮುವಂತಿತ್ತು ಆದರೆ ನನಗೆ ಅದು ಅತ್ಯಂತ ಅನಿರೀಕ್ಷಿತವಾಗಿತ್ತು. ಗೆಳೆಯರಿಗೆ ಬರೆದ ಕಾಗದ, ನಮ್ಮ ಸಾಹಿತ್ಯ ವಿಚಾರ, ನಮ್ಮ ತತ್ವಶಾಸ್ತ್ರದ ಓದು – ಇವೆಲ್ಲ ಅವ್ವನವರೆಗೆ ಹೋಗುವ ವಿಷಯವೇ ಆಗಿರಲಿಲ್ಲ. ನನ್ನ ಮನಸ್ಸಿಗೆ, ಅದೂ ಅ ಅಲ್ಲದೇ, ನನಗೇ ಬುದ್ಧಿ ಸ್ಪಷ್ಟವಿರದಿದ್ದ ಅದನ್ನು ಅವ್ವಗೆ ವಿವರಿಸುವುದು ಹೇಗೆ? ಹಸಿರು ಹುಲ್ಲಿನ ಮೇಲೆ ಇಬ್ಬನಿ ಎಳೆಬಿಸಿಲಲ್ಲಿ ಮಿರುಗುವ ಸಂಗತಿ, ಸಸಿನಟ್ಟಿ ಮಾಡಿ, ಕಳೆಕಿತ್ತು, ಗದ್ದೆಯಲ್ಲಿ ವರುಷವರುಷವೂ ತಿರುಗಾಡಿದ ಅನುಭವವಿರುವ ಅವ್ವಗೆ, ಹೆಕ್ಕಲು, ಗುಡ್ಡ, ಕಾಡುಗಳಲ್ಲಿ ಸಾವಿರಾರು ನೈಸರ್ಗಿಕ ದೈನಂದಿನ ವ್ಯಾಪಾರಗಳನ್ನು ಬೇಸರಬರುವಷ್ಟರಮಟ್ಟಿಗೆ ನೋಡುತ್ತಲೇ ಇರುವ ಅವ್ವನಿಗೆ ,ಯಾವ ದೊಡ್ಡ ವಿಷಯ ಎಂದು ಹೇಳುವುದು? ಅವ್ವನ ಸುತ್ತ ನನಗಿದ್ದ  ವಿಶಿಷ್ಟ ಭಾವನೆಯ ಪರಿವೇಷದ ವಿಫುಲೈಶ್ವರ್ಯದ ಇದಿರು ನಾನು ಕಾಗದದಲ್ಲಿ ಬರೆದಿದ್ದ ಸಂಗತಿ ತೀರ ಬಡಕಲಾಗಿ, ಅತ್ಯತಿ ಅಲ್ಪವಾಗಿ ತೋರಿತು. ನನಗೆ ಮುದುರಿಕೊಳ್ಳುವಷ್ಟು ನಾಚಿಕೆಯಾಯಿತು!! ನಾನೇನಾದರೂ ಹೇಳಲು ಹೊರಟರೆ ನನ್ನ ಪ್ರತಿಭೆಯ ವಿಚಾರವಾಗಿ ಅವರಿಗೆ ಉಂಟಾಗಿದ್ದ ‘ ಭ್ರಮಾ ಮಾಧುರ್ಯ’ ಸಂಪೂರ್ಣ ನಿರಸನವಾಗುತ್ತದೆಂದು ಭಾವಿಸಿ, ನಗುನಗುತ್ತ ‘ಎಂಥದೂ ಇಲ್ಲವ್ವಾ! ಎಂದು ಏನೇನೋ ಹೇಳಿ ನಾನೂ ನಕ್ಕು ಅವರನ್ನೂ ನಗಿಸಿಬಿಟ್ಟಿದ್ದೆ.


(ಪುಟ ಸಂಖ್ಯೆ 184-85)

ನನ್ನ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಒಂದು ಮಹೋನ್ನತ ಶಿಖರವಾಗಿರುವ ಸಂಚಿಕೆಗೆ ನಾನು ಕೊಟ್ಟಿರುವ ಹೆಸರು ನೇರವಾಗಿ ನನ್ನ ಅವ್ವನಿಂದಲೇ ಬಂದುದಾಗಿದೆ. ಅವ್ವ, ಯಾವುದಾದರೂ ತನಗೊದಗಿದ ಕಷ್ಟದ ಸಮಯದಲ್ಲಿ ಬೇರೆ ಯಾರಾದರೂ ತನ್ನಿಂದ ಏನಾದರೂ ಆಗಬೇಕೆಂದು ಕೇಳಿದಾಗ ‘ ಅಯ್ಯೋ ನಾನೇ ಓ ಲಕ್ಷ್ಮಣಾ! ಅಂತಿದ್ದೀನಪ್ಪಾ!’ ಎಂದು ಹೇಳುತ್ತಿದ್ದುದನ್ನು ನಾನು ಎಷ್ಟೋ ಬಾರಿ ಕೇಳಿದ್ದೆ. ಹಾಗಾಗಿ ‘ ಓ ಲಕ್ಷ್ಮಣಾ!’ ಎಂಬುದು ಏನೋ ಒಂದು ಕಷ್ಟಕ್ಕೋ, ಗೋಳಿಗೋ, ದುರಂತಕ್ಕೋ ವಾಕ್ ಪ್ರತಿಮೆಯಾಗಿ ಬಿಟ್ಟಿತ್ತು ನನ್ನ ಅಂತ:ಪ್ರಜ್ಞೆಯಲ್ಲಿ. ಶ್ರೀರಾಮಾಯಣ ದರ್ಶನದಲ್ಲಿ ಆ ಸಂಚಿಕೆಗೆ ಕೊಟ್ಟ ಶೀರ್ಷಿಕೆ ‘ ಓ ಲಕ್ಷ್ಮಣಾ!’ ಮಾತ್ರವಲ್ಲದೇ ಸಂಚಿಕೆಯ ಉದ್ದಕ್ಕೂ ‘ ಓ ಲಕ್ಷ್ಮಣಾ’ ಗೋಳ್ದನಿ ಬೇರೆಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಧ್ವನಿ ಪ್ರತಿಮೆಯಾಗಿ ಹೊಮ್ಮಿ , ಮಹಾಗೋಳಿಗೆ ಒಂದು ಶಬ್ದ ಪ್ರತೀಕವಾಗಿಬಿಟ್ಟಿದೆ.

(ಪುಟ ಸಂಖ್ಯೆ 186)

ಬೆಂಗಳೂರಿನಲ್ಲಿ ಸಿ ಐ ಡಿ ೯೯೯

1

ಡಾ. ವಿಕ್ರಂ ವೈದ್ಯನಾಗಿ ಪೊಲೀಸ್ ಆಫೀಸರ್ ಆಗಿದ್ದರೂ, ವೈದ್ಯಕೀಯ ಕಾಲೇಜಿನಲ್ಲಿ ಕಳೆದ ದಿನಗಳನ್ನು ಇನ್ನೂ ಮೆಲಕು ಹಾಕುತ್ತಿದ್ದನು. ವೈದ್ಯಕೀಯ ಗೆಳೆಯರಿಂದ ಇಪ್ಪತ್ತೈದು ವರುಷದ ಮರು ಮಿಲನದ ಆಹ್ವಾನ ಬಂದಾಗ ಥಟ್ಟನೆ ಒಪ್ಪಿಕೊಂಡಿದ್ದನು. ಮನೆಯವರ ಇಚ್ಛೆಯಂತೆ ವೈದ್ಯನಾದರೂ, ಪತ್ತೇದಾರಿಕೆ ವಿಷಯದಲ್ಲಿ ಮೊದಲಿನಿಂದಲೂ ಇದ್ದ ಆಸಕ್ತಿ, ಕೊನೆಗೂ ಅವನನ್ನು ಪೊಲೀಸ್ (ಕ್ರೈಂ ಬ್ರಾಂಚ್) ಇಲಾಖೆಗೆ ಕರೆದೊಯ್ದಿತ್ತು.
ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಆಯೋಜಿಸಿದ್ದ ಮರು ಮಿಲನಕ್ಕೆ ನಾಲ್ಕು ದಿನ ರಜೆ ಹಾಕಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದನು. ಪರದೇಶದಲ್ಲಿದ್ದ ಅವನ ಮೂರ್ನಾಲ್ಕು ಆತ್ಮೀಯ ಗೆಳೆಯರೂ ಸಹ ಬರಲು ಒಪ್ಪಿಕೊಂಡಿರುವ ವಿಷಯ ಇನ್ನೂ ಸಂತೋಷವನ್ನು ತಂದಿತ್ತು. ಮೊದಲ ದಿನದ ಕಾರ್ಯಕ್ರಮ ವೈದ್ಯಕೀಯ ಕಾಲೇಜಿನ ಆಡಿಟೋರಿಯಮ್ಮನಲ್ಲಿ ಇದ್ದರೆ, ಉಳಿದ ಎರಡು ದಿನಗಳನ್ನು ಊರ ಹೊರವಲಯದಲ್ಲಿ ಇದ್ದ ಐಷಾರಾಮಿ ಹೋಟೆಲಿನಲ್ಲಿ ಆಯೋಜಿಸಲಾಗಿತ್ತು.
ಡಾ. ವಿಕ್ರಂ ವೈದ್ಯಕೀಯ ಕಾಲೇಜನ್ನು ಸೇರಿದಾಗ ಬೆಳಗಿನ ಹತ್ತು ಗಂಟೆಯಾಗಿತ್ತು. ಮುಖ್ಯ ದ್ವಾರದ ಮೇಲೆ ಸುಂದರವಾದ ಸ್ವಾಗತ ಮಾಲೆ ತೂಗಾಡುತಲಿತ್ತು. ಅದರಲ್ಲಿದ್ದ ಒಂದೊಂದು ಪುಷ್ಪಗಳು ಅವನು ಕಾಲೇಜಿನಲ್ಲಿ ಕಳೆದ ದಿನಗಳ ಪ್ರತೀಕವಾಗಿ, ಇಡೀ ಪುಷ್ಪ ಹಾರವು ನೆನಪಿನ ಮಾಲೆಯಾಗಿ ಕಂಗೊಳಿಸಿತು. ಅನತಿ ದೂರದಲ್ಲಿ ಇವನಿಗಾಗಿಯೇ ಕಾಯುತ್ತ ನಿಂತಿದ್ದ ಅವನ ಜಿಗ್ರಿ ದೋಸ್ತರಾದ ಬಸು ಮತ್ತು ರವಿ 'ಹೋ' ಎಂದು ಓಡಿ ಬಂದು ಅಪ್ಪಿಕೊಂಡರು. ಆತ್ಮೀಯ ಗೆಳೆಯ ಬಸ್ಯಾ (ಬಸವರಾಜ) ತನ್ನ ಉತ್ತರ ಕರ್ನಾಟಕದ ಭಾಷೆಯಲ್ಲಿ "ಲೇ ನೀನು ಏನೂ ಉದ್ದೇಶ ಇಲ್ಲದೆ ಸುಮ್ಮನೆ ಬರಾವನಲ್ಲ, ನಾವೇನು ಕ್ರೈಂ ಮಾಡಿಲ್ಲ, ನಮ್ಮನ್ನ್ಯಾರನ್ನೂ ಅರೆಸ್ಟ್ ಮಾಡಾಕ ಬಂದಿಲ್ಲಲ್ಲ" ಎಂದು ಹಲ್ಲು ಕಿರಿದನು.
"ಯಪ್ಪಾ, ನೀವುಗಳೆಲ್ಲ ನನ್ನನ್ನ ಈ ಗೆಳೆತನದ ಕೊಂಡ್ಯಾಗ ಸಿಗಿಸಿ ಬಂಧಿಸಿ ಬಿಟ್ಟೀರಿ, ಇನ್ನ ನಾ ನಿಮ್ಮನ್ನ ಹ್ಯಾಂಗ ಅರೆಸ್ಟ್ ಮಾಡಲಿ. ನನ್ನ ಗೆಳೆತನ ಮಾಡಿದ್ದ ನಿಮ್ಮ ಕ್ರೈಂ. ಒಬ್ಬ ದೋಸ್ತ ಆಗಿ ನಿಮ್ಮನ್ನೆಲ್ಲ ಭೇಟಿ ಆಗಾಕ ಬಂದೀನಿ, ಪೊಲೀಸ್ ಆಫೀಸರ್ ಆಗಿ ಅಲ್ಲ” ಎಂದು ನಕ್ಕು ಮಾತು ಮುಗಿಸಿದ. ಅಷ್ಟರಲ್ಲಿಯೇ ರವ್ಯಾ(ರವಿ)
"ಕಾರ್ಯಕ್ರಮ ಚಾಲೂ ಆಗಾಕ ಇನ್ನೂ ಟೈಮ್ ಐತಿ, ಹಾಂಗ ಒಂದ ರೌಂಡ್ ಕಾಲೇಜಿನಾಗ ಸುತ್ತಾಡಕೊಂಡ ಬರಬಹುದಲ್ಲ?" ಅಂತ ಸಲಹೆ ಕೊಟ್ಟ. ಅವನ ಮಾತಿಗೆ ಎಲ್ಲರೂ ಒಪ್ಪಿಗೆ ಸೂಚಿಸಿ ಮುನ್ನೆಡೆದರು
ಹರಟೆಯ ಜಾಗವಾಗಿದ್ದ ಧ್ವಜದ ಕಟ್ಟೆ, ಓದುತ್ತಿದ್ದ ಲೈಬ್ರರಿ ಮತ್ತು ಲೆಕ್ಚರ್ ಹಾಲ್ ಗಳು ಎಲ್ಲವೂ ಬೇರೆ ಎನಿಸಿದವು. ಲೆಕ್ಚರ್ ಹಾಲ್ ನಲ್ಲಿದ್ದ ಆಧುನಿಕ ಡೆಸ್ಕಗಳನ್ನು ನೋಡಿ ಬಸ್ಯಾ ಅಂದನು "ಬೆಂಚುಗಳೇನೋ ಬದಲಿ ಆಗ್ಯಾವ ಆದರ ಜಾಗಾ ಮಾತ್ರ ಬದಲಿ ಆಗಿಲ್ಲ. ಆ, ಕಡೇ ಬೆಂಚುಗಳಾಗ ಇನ್ನೂ ನಮ್ಮಂತ ಉಡಾಳ ಹುಡುಗೋರ ಕುಂಡರತಾರ್ ಅಂತ ಅನ್ನಕೊಂಡೀನಿ" ಅಂತ ಹಳೆಯ ನೆನಪು ಮಾಡಿಕೊಂಡ.
"ಕಡೇ ಬೆಂಚುಗಳಾಗ ಕುಂಡ್ರುವ ಮಜಾನ ಬ್ಯಾರೆ. ಈಗ ನೋಡು, ಕಡೇ ಬೆಂಚುಗಳಾಗ ಕುಂಡ್ರುತ್ತಿದ್ದವರೆಲ್ಲ ತಲೆ ಓಡಿಸಿ ಕೋಟ್ಯಾಧಿಪತಿಗಳ ಆಗ್ಯಾರ, ಮುಂದಿನ ಬೆಂಚುಗಳಾಗ ಕುಂಡ್ರುತ್ತಿದ್ದವರೆಲ್ಲ ಹಗಲೂ ರಾತ್ರಿ ಓದಿ ಪ್ರೊಫೆಸ್ಸರ್ಸ್ ಆಗಿ, ಸರಕಾರಿ ಪಗಾರ ತಗೊಂದು, ಇನ್ನೂ ಕ್ವಾರ್ಟರ್ಸ್ ನಾಗ ಅದಾರ" ಅಂತೆಂದ ರವಿ.
"ಹಾಂಗೇನಿಲ್ಲಪ್ಪ, ಫೋರೆನ್ಸಿಕ್ ಮೆಡಿಸಿನ್ ಮುಖ್ಯಸ್ಥ ರಮೇಶನ ನೋಡು, ಹೆಣಾ ಕೊಯ್ಕೊಂತ ಎಷ್ಟ ಶ್ರೀಮಂತ ಆಗ್ಯಾನ್. ಮೆಡಿಸಿನ್ ಮುಖ್ಯಸ್ಥ ರಾಜೇಶನ ಜೊತೆಗೆ ಕೂಡಿ ಇಬ್ಬರೂ ಎರಡು ಐಷಾರಾಮ ಗೆಸ್ಟ್ ಹೌಸ್ ಮಾಡ್ಯಾರ. ಅದೇನೋ ಬಿಸಿನೆಸ್ ಮಾಡ್ತಾರ್ ಅಂತ ಸುದ್ದಿ. ವಿದ್ಯೆಯಿದ್ದರೂ ದುಡ್ಡು ಮಾಡಾಕ ಬುದ್ಧಿನೂ ಬೇಕನ್ನು" ಅಂತ ಬಸ್ಯಾ ಅವನ ಮಾತಿಗೆ ಎದುರು ಉತ್ತರ ಕೊಟ್ಟನು.
"ನೀವು ಹೇಳುವುದು ಖರೆ ಬಿಡು. ಈಗಿನ ಕಾಲದಾಗ ವೈದ್ಯಕೀಯ ವಿದ್ಯಾಭ್ಯಾಸ ಒಂದು ದೊಡ್ಡ ವ್ಯಾಪಾರನ ಆಗೈತಿ. ನಾಯಿಕೊಡೆಗಳಂಗ ಹುಟ್ಟಿಕೊಂಡ ಕಾಲೇಜುಗಳಾಗ ಸೀಟು ತಗೊಳ್ಳಾಕ ಕೋಟಿ ಗಂಟಲೇ ಖರ್ಚು ಮಾಡಿದ ಮ್ಯಾಗ, ರೊಕ್ಕಾ ಗಳಸಾಕ ಏನೇನೋ ಮಾಡಬೇಕಾಗತೈತಿ. ಎಲ್ಲಾ ದುರದೃಷ್ಟ" ಅಂತ ವಿಕ್ರಂ ವಿಷಾದ ವ್ಯಕ್ತಪಡಿಸಿದ. ಕೊನೆಯ ಬೆಂಚಿನ ವಿಷಯ ಎಲ್ಲೆಲ್ಲೋ ಹೋಗುತ್ತಿರುವದನ್ನು ನೋಡಿ .
“ಇರಲಿ ಬಿಡ್ರಪ್ಪಾ, ದುಡ್ಡು ಅಷ್ಟ ಜೀವನದಾಗ ಎಲ್ಲಾ ಅಲ್ಲ. ನೆಮ್ಮದಿ ಮುಖ್ಯ. ಕಡೇ ಬೆಂಚಿನ ಮಾತು ಎಲ್ಲೆಲ್ಲೋ ಹೋಗಿ ಬಿಟ್ಟತಿ ನೋಡ್ರಿ. ಮಜಾ ಮಾಡಾಕ ಬಂದಿವಿ, ನಡೀರಿ ಟೈಮ್ ಆತು, ಆಡಿಟೋರಿಯಂ ಕಡೆ ಹೋಗುನು" ಅಂತ ನಡೆದ ಚರ್ಚೆಗೆ ಅಂತ್ಯ ಹಾಕಿದ ರವಿ..
ಅವರೆಲ್ಲ ಆಡಿಟೋರಿಯಂ ಸೇರಿದಾಗ ಆಗಲೇ ಕಾರ್ಯಕ್ರಮ ಪ್ರಾರಂಭವಾಗಿತ್ತು. ಸ್ಟೇಜಿನ ಮೇಲೆ ಆಸನವಿದ್ದ, ಕೆಲವು ಪಾಠ ಕಲಿಸಿದ
ಗುರುಗಳಿಗೆ ಕಾಣಿಕೆಯನ್ನು ಕೊಡುತ್ತಿದ್ದರು ಸಹಪಾಠಿಗಳು. ಇಪ್ಪತ್ತೈದು ವರುಷವಾದರೂ ಯಾರೂ ಅಷ್ಟೊಂದು ಬದಲಾಗಿಲ್ಲ ಎಂದೆನಿಸಿತು ವಿಕ್ರಂನಿಗೆ. ಆದರೆ ಕೆಲವರು ಮಾತ್ರ ಗುರುತು ಸಿಗಲಿಲ್ಲ.
ಕೊನೆಯ ಸಾಲಿನಲ್ಲಿ ಕುಳಿತಿದ್ದವನತ್ತ ಕೈ ಮಾಡಿ ಪಿಸುಗುಟ್ಟಿದ ಬಸ್ಯಾ "ಅಲ್ಲಿ ನೋಡ್ರಪ್ಪಾ, ಚೋಪ್ರಾ ಎಷ್ಟು ಜೋರಾಗಿ ಬಂದಾನ ಮುಂಬೈಯಿಂದ, ಕೆಲವು ಸೀನಿಯರ್ಸ ಕೂಡ ಗಾಂಜಾ ಸೇದಕೋಂತ ಹಾಂಗ ಅಡ್ಡಾಡತಿದ್ದ. ಈಗ ನೋಡು ಮುಂಬೈಯಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್ ಅಂತ. ರಾಜಕೀಯದಲ್ಲೂ ಬಹಳ ಪ್ರಭಾವ ಐತಿ ಅಂತ. ಇನ್ನೇನು ಎಂ ಎಲ್ ಎ ಆದರೂ ಆಗಬಹುದಂತ ಸುದ್ದಿ. ನಾಳಿನ ಸಂಜೆಯ ಮನರಂಜನೆ ಕಾರ್ಯಕ್ರಮಕ್ಕ ಅವನದೇ ಸ್ಪಾನ್ಸರ್ ಅಂತ. ಅದ್ಯಾವದೋ ಸ್ಪೇಸಿಯಲ್ ಡಿಜೆ ಬ್ಯಾಂಡ್ ತರಸಾಕತ್ತಾನ ಅಂತ. ಅವನ ಹೆಸರಿನ್ಯಾಗ ನಾಳೆ ಎಲ್ಲಾರೂ ಮಸ್ತ್ ಡ್ಯಾನ್ಸ್ ಮಾಡಿ ಬಿಡೂನು” ಅಂತೆಂದ.
"ಲೇ ಯಪ್ಪಾ, ನೀ ಇನ್ನ ಎಂ ಬಿ ಬಿ ಎಸ್ ನಾಗಿನ ಚಾಳಿ ಬಿಟ್ಟಿಲ್ಲ ನೋಡು, ಹೆಂಗಸರಂಗ ಬರೀ ಬ್ಯಾರೆಯವರ ಬಗ್ಗೆನೇ ಗಾಸಿಪ್ ಮಾಡತಿರ್ತಿ" ಅಂತ ರವಿ ಅವನನ್ನು ಛೇಡಿಸಲು ಯತ್ನಿಸಿದ. ಕಾಲೇಜಿನಲ್ಲಿದ್ದ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರನ್ನೂ ನಗರದ ಹೊರವಲಯದಲ್ಲಿದ್ದ ಐಷಾರಾಮಿ ಹೋಟೆಲಗೆ ಕೊಂಡೊಯ್ಯಲು ಬಸ್ಸುಗಳು ತಯಾರಾಗಿದ್ದವು. ಮೇಲ್ವಿಚಾರಕರಾಗಿದ್ದ ರಮೇಶ್ ಮತ್ತು ರಾಜೇಶ್ ಇವರನ್ನು ಕಂಡು. "ಏನ್ರಪ್ಪ ತ್ರಿಮೂರ್ತಿಗಳಿರಾ ಹೇಗೆ ಇದ್ದೀರಾ? ನೀವು ಮೂವರಿಗೂ ಒಂದೇ ರೂಮ್ ಬುಕ್ ಮಾಡೀವಿ. ನಿಮ್ಮ ಹಾಸ್ಟೆಲಿನ ಜೀವನದ ನೆನಪು ಬರಲಿ ಅಂತ" ಎಂದೆಂದರು. ಅವರಿಗೆ ಧನ್ಯವಾದವನ್ನು ಹೇಳಿ ಬೇರೆಯವರೊಂದಿಗೆ ಹರಟೆ ಹೊಡೆಯುವಷ್ಟರಲ್ಲಿಯೇ ಬಸ್ಸುಗಳು ರೆಸಾರ್ಟನ್ನು ತಲುಪಿದ್ದವು.

2
ಒಂದೇ ರೂಮಿನಲ್ಲಿದ್ದು ಅಷ್ಟೊಂದು ಆತ್ಮೀಯವಾಗಿ ಮಾತನಾಡುತ್ತಿದ್ದರೂ, ಬಸ್ಯಾ ಮತ್ತು ರವಿಗೆ ವಿಕ್ರಂ ಏನೋ ಬಚ್ಚಿಡುತ್ತಿದ್ದಾನೆಂದು ಅನಿಸತೊಡಗಿತು. ಅರ್ಧ ಗಂಟೆಗೊಮ್ಮೆ ಫೊನನೆತ್ತಿಕೊಂಡು ಹೊರಗೆ ಹೋಗುತ್ತಿದ್ದ, ಒಳಗಡೆ ಬಂದು ಏನೋ ಬರೆದುಕೊಳ್ಳುತಿದ್ದ. ವಿಕ್ರಂ ಬಾತ್ ರೂಮಿನಲ್ಲಿದ್ದಾಗ ಅವನ ಫೋನು ಗುನಗುಟ್ಟತೊಡಗಿತ್ತು, ರವಿ ಫೋನಿನ ಸ್ಕ್ರಿನಿನತ್ತ ನೋಡಿದ, ಸಿ ಐ ಡಿ ಶಂಕರ್ ಅಂತ ಕಾಣಿಸತೊಡಗಿತ್ತು. ತರಾತುರಿಯಲ್ಲಿ ಬಂದು ವಿಕ್ರಂ ಫೊನನೆತ್ತಿಕೊಂಡು ಮತ್ತೆ ಹೊರಗೆ ಮಾಯವಾದ. ಕೊನೆಗೂ ಬಸ್ಯಾ ಅಂದ "ಏನಪ್ಪಾ ಫೋನಿನಲ್ಲಿ ಇಷ್ಟೊಂದು ಬುಸಿ ಆಗಿಬಿಟ್ಟಿ, ಸೈಲೆಂಟ್ ಮೋಡಿನಾಗ ಇಟ್ಟ ಬಿಡು, ಒಂದೆರಡು ಪೆಗ್ ಹಾಕಿ ಸಹಪಾಠಿಗಳ ರಸಮಂಜರಿ ಕಾರ್ಯಕ್ರಮದ ಸವಿ ಅನುಭವಿಸೋಣ " ಅಂತ.
"ಒಮ್ಮೊಮ್ಮೆ ಈ ಪೊಲೀಸ್ ನೌಕರಿನೂ ಡಾಕ್ಟರ್ ತರನ, ರಜಾ ಮ್ಯಾಲ ಇದ್ದರೂ ಸುಮ್ಮನ ಇರಾಕ ಬಿಡುಲ್ಲಾ. ಬಸ್ಯಾ ನಿನ್ನ ಐಡಿಯಾ ಚಲೋ ಐತಿ, ನಡೀರಿ” ಎಂತೆಂದ ವಿಕ್ರಂ. ಬಸುನ ವಿಚಾರಕ್ಕೆ ಸಮ್ಮತಿಸಿ ಅವರೆಲ್ಲಾ ಕೆಳಗೆ ಬಂದರು.
ರಸಮಂಜರಿ ಕಾರ್ಯಕ್ರಮ ಇನ್ನೇನು ಪ್ರಾರಂಭವಾಗುವ ತಯ್ಯಾರಿಯಲ್ಲಿತ್ತು, ಆಗಲೇ ಕೆಲವರು ಪೆಗ್ ಹಾಕಿ ಮುಂದಿನ ಪೆಗ್ ಗೆ 'ಚೀರ್ಸ್' ಅನ್ನುತ್ತಾ ಇದ್ದರು. ಪಕ್ಕದ ಹಾಲಿನಲ್ಲಿ ಇನ್ನೊಂದು ಕಾರ್ಯಕ್ರಮ ನಡೆದಿತ್ತು. ಬಹುಶ: ವೀಕ್ ಎಂಡ್ ಪಾರ್ಟಿ ಇರಬಹುದು. ತುಂಡು ಬಟ್ಟೆ ಹಾಕಿಕೊಂಡ ಹುಡುಗಿಯರು, ಹುಡುಗರ ಜೊತೆಗೆ ಒಳಗೆ ನುಗ್ಗುತ್ತಲಿದ್ದರು.
ಅದನ್ನೇ ವೀಕ್ಷಿಸುತ್ತ ರವಿ ಅಂದಾ "ದೇಶಾ ಬಾಳ ಬದಲಿ ಆಗಿ ಬಿಟ್ಟೈತಿ. ಈ ಹದಿ ಹರಿಯದ ಜನರು ‘ವೆಸ್ಟೆರ್ನ್ ಕಲ್ಚರ್’ ಕ್ಕಿಂತ ಎರಡು ಹೆಜ್ಜೆ ಮುಂದನ ಅದಾರ ನೋಡು"
"ಇಂಥಾ ಪಾರ್ಟಿಯೊಳಗ ಎಲ್ಲಾ ನಡಿತೈತಿ. ಡ್ರಗ್ಸ್ , ಮದ್ಯ ಇನ್ನೂ ಏನೇನೋ. ಆದರೂ ನಮ್ಮ ವಿಕ್ರಂ ನ ಡಿಪಾರ್ಟ್ಮೆಂಟ್ ಸುಮ್ಮನ ಕುಳತೈತಿ ನೋಡು" ಅಂತ ಬಸು ಅವನ ಕಾಲೆಳೆಯಲು ಪ್ರಯತ್ನಿಸಿದ
“ಇದು ಎಲ್ಲರಿಗೂ ಗೊತ್ತಿರುವ ಹಳೆಯ ವಿಷಯ, ಇದೊಂದು ದೊಡ್ಡ ಲಾಬಿ ಅಂತ ನಿನಗೂ ಗೊತ್ತು. ನನ್ನಂತ ನಿಯತ್ತಿನ ಆಫೀಸರ್ಸ್ ಏನಾದರು ಮಾಡಲಿಕ್ಕೆ ಹೋದರೆ ಏನ ಆಗತೈತಿ ಅಂತಾನೂ ಗೊತ್ತು”
ಅಷ್ಟರಲ್ಲಿಯೇ ರವಿ ಅಂದ "ಮೇಲಿನವರು ಏನೋ ಕಾರಣಾ ಹುಡುಕಿ ನಿಮ್ಮನ್ನ ಸಸ್ಪೆಂಡ್ ಮಾಡ್ತಾರ್ ಇಲ್ಲ ಅಂದ್ರ ನೀರ ಸಿಗದ ಜಾಗಕ್ಕ ವರ್ಗಾವಣೆ ಮಾಡ್ತಾರ್"
“ಹೌದಪ್ಪಾ, ಸಿಸ್ಟೆಮ್ ಬದಲಿ ಆಗಬೇಕು, ಬರೀ ಪೊಲೀಸ್ ಕ್ಷೇತ್ರದಲ್ಲಿ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ. ಆದರ ಯಾರು ಬದಲಿ ಮಾಡ್ತಾರ್?” ಅಂತ ತನ್ನ ಅಸಹಾಯಕತೆಯನ್ನು ತೋಡಿಕೊಂಡ ವಿಕ್ರಂ.
"ಇರಲಿ ಬಿಡಪ್ಪ, ಈಗ ನಮ್ಮನ್ನ ಬದಲಿ ಮಾಡಿಕೊಂಡ್ರ ಸಾಕು" ಅಂತ ರವಿ ಎಲ್ಲರಿಗೂ ಒಂದು ಪೆಗ್ ರೆಡಿ ಮಾಡಿದ. ಸ್ವಲ್ಪ ದೂರದಲ್ಲಿ
ಚೋಪ್ರಾ ಮತ್ತು ರಮೇಶ್ ಏರು ಧ್ವನಿಯಲ್ಲಿ ಜಗಳಾಡುತ್ತಿದ್ದದ್ದು ಅವರ ಗಮನಕ್ಕೆ ಬಾರದೆ ಇರಲಿಲ್ಲ. ಬಂದಾಗಿನಿಂದಲೂ ವಿಕ್ರಂ ಚೋಪ್ರಾನನ್ನು ತನ್ನ ಪತ್ತೇದಾರಿ ಕಣ್ಣುಗಳಿಂದ ಯಾಕೆ ವೀಕ್ಷಿಸುತ್ತಿರಬಹುದೆಂಬುವದು ಇವರಲ್ಲಿ ಕುತೂಹಲವನ್ನು ಹುಟ್ಟಿಸಿತ್ತು.

3
ಚೋಪ್ರಾನ ಮೇಲ್ವಿಚಾರಣೆಯಲ್ಲಿ ಎರಡನೆಯ ದಿನದ ಸಂಜೆಯ ಕಾರ್ಯಕ್ರಮಕ್ಕೆ ರಂಗು ಏರಿತ್ತು. ಬಣ್ಣ ಬಣ್ಣದ ಲೈಟುಗಳು ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತಿದ್ದರೆ ಅಷ್ಟೇ ಭರ್ಜರಿಯಾಗಿದ್ದ ಸೌಂಡ್ ಸಿಸ್ಟಮ್, ಆಲಿಸುತ್ತಿದ್ದವರ ಹೃದಯವನ್ನೇ ನಡುಗಿಸುತಲಿತ್ತು. ಹದಿ ಹರೆಯದ ಕಲಾವಿದರು ಎಲ್ಲ ಭಾಷೆಯ ಹಾಡುಗಳನ್ನು ಅವುಗಳಿಗೆ ತಕ್ಕ ಡ್ಯಾನ್ಸನೊಂದಿಗೆ ವೀಕ್ಷಕರಿಗೆ ಅರ್ಪಿಸುತಲಿದ್ದರು. ಪ್ರಭಾವ ಎಷ್ಟಿತ್ತೆಂದರೆ, ಕೆಲವರು ಕುಳಿತಲ್ಲಿಯೇ ಡಾನ್ಸ್ ಮಾಡುತ್ತಿದ್ದರೆ ಇನ್ನು ಕೆಲವರು ವಯಸ್ಸಿನ ಅಂತರ ಮರೆತು ಹುಚ್ಚೆದ್ದು ಕುಣಿಯತೊಡಗಿದ್ದರು. ಚೋಪ್ರಾ ಆಗಾಗ್ಗೆ ಸ್ಟೇಜು ಏರಿ ಹುಡುಗಿಯರೊಂದಿಗೆ ತಾಳ ಹಾಕುತ್ತಿದ್ದನು ' ಕಮಾನ್' ಎಂದು ಅರಚುತ್ತಿದ್ದನು.
ರವಿ ಮತ್ತು ಬಸು ಡ್ಯಾನ್ಸಿನಲ್ಲಿ ಮುಳುಗಿದ್ದರೆ, ವಿಕ್ರಂ ಒಂದು ಮೂಲೆಯಲ್ಲಿ ನಿಂತು ಎಲ್ಲವನ್ನೂ ವೀಕ್ಷಿಸುತ್ತಿದ್ದನು. ಬ್ಯಾಂಡ್ ಹುಡುಗಿಯರ ಗುಂಪೊಂದು ಹಳೆಯ ಕನ್ನಡ ಹಾಡಿಗೆ ಡಾನ್ಸ್ ಮಾಡುತಲಿತ್ತು. ಜೋಕೆ --- ನಾನು ಕತ್ತಿಯ ಅಂಚು --- ಅವರ ವೇಷ ಭೂಷಣಗಳೇ ಭಯಾನಕವೆನಿಸುತ್ತಿದ್ದವು. ಕೈಯಲ್ಲಿ ಒಂದು ಚೂರಿ, ಸೊಂಟದಲ್ಲಿ ಪಿಸ್ತೂಲು, ಮೈತುಂಬ ಕರಿಯ ಬಟ್ಟೆ , ಕಣ್ಣುಗಳಿಗೆ ಎರಡು ರಂದ್ರವಿದ್ದ ಕರಿಯ ಮುಖವಾಡ. ಚೋಪ್ರಾ ಮತ್ತೆ ಸ್ಟೇಜ್ ಏರಿ ಡಾನ್ಸ್ ಮಾಡತೊಡಗಿದನು. ಸ್ವಲ್ಪ ಸಮಯದಲ್ಲಿಯೇ ಗುಂಪಿನಲ್ಲಿದ್ದ ಮುಖ್ಯ ಡ್ಯಾನ್ಸರ್ ಸೊಂಟದಲ್ಲಿದ್ದ ಪಿಸ್ತೂಲು ತಗೆದು ಚೋಪ್ರಾನತ್ತ ಒಂದೇ ಸಮನೆ ಗುಂಡು ಹಾರಿಸಿ ಮಿಂಚಿನಂತೆ ಮಾಯವಾದಳು. ಚೋಪ್ರಾ ಎದೆ ಹಿಡಿದುಕೊಂಡು ನೆಲಕ್ಕೆ ಕುಸಿದನು. ಅವನ ಎದೆ ಮತ್ತು ಹೊಟ್ಟೆಯಿಂದ ರಕ್ತ ಚಿಮ್ಮುತ್ತಲಿತ್ತು. ಕ್ಷಣದಲ್ಲಿಯೇ ಎಲ್ಲೆಡೆಯೂ ಹಾಹಾಕಾರ ತುಂಬಿತು. ಎಲ್ಲರೂ ಹಾಲಿನಿಂದ ಹೊರಗೆ ಓಡತೊಡಗಿದರು. ವಿಕ್ರಂ ಹುಡುಗಿಯನ್ನು ಬೆನ್ನಟ್ಟಲು ಪ್ರಯತ್ನಿಸಿದನು, ಅವಳು ಕತ್ತಲೆಯಲ್ಲಿ ಇನ್ನಾರದೋ ಬೈಕಿನಲ್ಲಿ ಮಾಯವಾದಳು. ಆದರೆ ಅವಳ ಕೈಯಲ್ಲಿದ್ದ ಪಿಸ್ತೂಲನ್ನು ಪಡೆಯುದರಲ್ಲಿ ಯಶಸ್ವಿಯಾಗಿದ್ದನು.
ವಿಕ್ರಂ ಮರಳಿ ಹಾಲಿಗೆ ಬಂದಾಗ, ರಮೇಶ್ ಮತ್ತು ರಾಜೇಶ್ ಚೋಪ್ರಾನ ಆರೈಕೆ ಮಾಡುತಲಿದ್ದರು , ಇನ್ನಾರೋ ಅಂಬ್ಯುಲನ್ಸಗೆ ಕರೆ ಮಾಡುತಲಿದ್ದರು, ಮತ್ತಾರೋ ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸುವ ಪ್ರಯತ್ನದಲ್ಲಿದ್ದರು ಆದರೆ ಬಹು ಜನರು (ರವಿ ಮತ್ತು ಬಸು ಸೇರಿ) ಅಲ್ಲಿಂದ ಪಲಾಯನ ಮಾಡಿದ್ದರು. ರಾಜೇಶ್ ಚೀರುತಲಿದ್ದನು "ಇನ್ನೂ ಬದುಕಿದ್ದಾನೆ , ಆಂಬುಲೆನ್ಸ್, ಬೇಗ ಆಂಬುಲೆನ್ಸ್" ಎಂದು. ಅಷ್ಟರಲ್ಲಿಯೇ ಆಂಬುಲೆನ್ಸ್ ಬಂದಾಗಿತ್ತು, ಚೋಪ್ರಾನನ್ನು ಅಂಬ್ಯುಲನ್ಸಗೆ ಶಿಫ್ಟ್ ಮಾಡಿ, ರಮೇಶ್ ಮತ್ತು ರಾಜೇಶ್ ಚೋಪ್ರಾನ ಜೊತೆಗೆ ಆಂಬುಲೆನ್ಸ್ ಏರಿದರು. ವಿಕ್ರಂ ಸೂಕ್ಷ್ಮವಾಗಿ ಚೋಪ್ರಾ ಕುಸಿದಿದ್ದ ಜಾಗವನ್ನು ವೀಕ್ಷಿಸುತ್ತಿದ್ದನು. ಯಾರಿಗೂ ಅರಿವಾಗದ ಹಾಗೆ ಅಲ್ಲಿ ಬಿದ್ದಿದ್ದ ಒಂದು ಬುಲೆಟ್ಟನ್ನು, ರಕ್ತದ ಸ್ಯಾಂಪಲ್ ಅನ್ನು ಸಂಗ್ರಹಿಸಿದ್ದನು.
ವಿಕ್ರಮನ ಸಹಾಯಕ ಅವನ ಸಲಹೆಯಂತೆ ಆವಾಗಲೇ ಕಾರನ್ನು ತಂದು ಹೊರಗಡೆ ಕಾಯುತಲಿದ್ದ. ಕಾರಿನಲ್ಲಿ ಕುಳಿತು ಸಂಗ್ರಹಿಸಿದ ಬುಲೆಟ್ಟನ್ನು ಒಮ್ಮೆ ಒತ್ತಿ ನೋಡಿದ ವಿಕ್ರಂ. ಅವನಿಗೆ ಆಶ್ಚರ್ಯವೆನಿಸಿತು, ಅದು ನಕಲಿ ಪ್ಲಾಸ್ಟಿಕ್ ಬುಲ್ಲೆಟ್ ಆಗಿತ್ತು. ತಕ್ಷಣವೇ ರಕ್ತದಲ್ಲಿ ತೊಯ್ಯಿಸಿದ್ದ ಕರವಸ್ತ್ರವನ್ನು ಮುಟ್ಟಿ ನೋಡಿದ, ಅದು ಮನುಷ್ಟನ ರಕ್ತವೆನಿಸಲಿಲ್ಲ. 'ನೋ, ಇದರಲ್ಲೇನೋ ಕುತಂತ್ರವಿದೆ, ಪ್ಲಾಸ್ಟಿಕ್ ಬುಲೆಟ್ಟಿನಿಂದ ಅವನು ಸಾಯಲಾರ ಹಾಗೆಯೆ ಸೋರಿದ್ದ ರಕ್ತ ಅವನದಲ್ಲಾ'
ತಕ್ಷಣವೇ ಬಸ್ಯಾಗೆ ಫೋನು ಮಾಡಿದ
"ಎಲ್ಲಿದ್ದೀರಪ್ಪ, ಅರ್ಜೆಂಟಾಗಿ ನಿಮ್ಮ ಸಹಾಯ ಬೇಕು"
"ನಾವು ಇಲ್ಲೇ ಇನ್ನ ರೆಸಾರ್ಟದಾಗ ಇದ್ದೀವಿ. ನೀನೆಲ್ಲಿ ಮಾಯವಾಗಿದಿಯಪ್ಪ. ಯಾಕೋ ಭಯಾ ಆಗಾಕತ್ತೈತಿ"
ಎಂತೆಂದ ರವಿ.
"ನಾ ಎಲ್ಲಿ ಅದೀನಿ ಅಂತ ಹೇಳಾಕ ಆಗುಲ್ಲಾ, ಅಂಜುವ ಅವಶ್ಯಕತೆ ಇಲ್ಲಾ. ನೀವು ಈ ತಕ್ಷಣ ಬಾಡಿಗಿ ಕಾರ್ ಮಾಡಕೊಂಡು ಬಿ ಎಂ ಸಿ ಕಾಲೇಜಿನ ಕ್ಯಾಜುವಲ್ಟಿಗೆ ಹೋಗಬೇಕು, ಚೋಪ್ರಾನಿಗೆ ಏನಾಯಿತೆಂದು ನನಗೆ ಮರಳಿ ಇತ್ತ ಫೋನ್ ಮಾಡಬೇಕು" ಎಂದು ಹೇಳಿ ಫೋನಿಟ್ಟ.
ಅವನ ಸಲಹೆಯಂತೆ ಅವರು ಕ್ಯಾಜುವಲ್ಟಿಯನ್ನು ಮುಟ್ಟಿದ್ದರು.
ಇವರನ್ನು ಕಂಡು ರಾಜೇಶ್ ಅಂದ "ದುರದೃಷ್ಟವಶಾತ್ ಬದುಕಲಿಲ್ಲ, ಚೋಪ್ರಾ ಇನ್ನಿಲ್ಲ" ಅಂದ. ಪಕ್ಕದಲ್ಲಿಯೇ ಅವನ ಹೆಂಡತಿ ಕಣ್ಣೀರು ಸುರಿಸುತ್ತ ಕುಳಿತಿದ್ದಳು.
ಬಸ್ಯಾ ಮರಳಿ ವಿಕ್ರಮನಿಗೆ ಫೋನು ಮಾಡಿ
" ವಿಕ್ರಂ, ಹಿ ಇಸ್ ಡೆಡ್" ಎಂದು ಮಾತು ಮುಗಿಸಿದ.
"ನೀವೆಲ್ಲೂ ಹೋಗಕೂಡದು, ದಯವಿಟ್ಟು ನಾನು ಹೇಳಿದ್ದನ್ನು ಕೇಳ್ತಾ ಇರಿ. ನನಗೆ ನಿಮ್ಮ ಸಹಾಯ ಬೇಕು. ಮುಂದೇನಾಗುತ್ತೆ ಅಂತ ಅಲ್ಲೇ ಕಾಯ್ತಾ ಇರಿ. ನಾನು ಮತ್ತೆ ಕರೆ ಮಾಡ್ತೀನಿ" ಅಂತ ಫೋನ್ ಇಟ್ಟ.
ವಿಕ್ರಂ ರೆಸಾರ್ಟಿನ ಹೊರಗಡೆ,ಕಾರಿನಲ್ಲಿಯೇ ಕುಳಿತು ಎಲ್ಲವನ್ನೂ ವೀಕ್ಷಿಸುತಲಿದ್ದ. ಕೆಲವೇ ನಿಮಿಷಗಳಲ್ಲಿ ಪೊಲೀಸ್ ಜೀಪು ಬಂದಿತ್ತು. ಅದರಲ್ಲಿಂದ ಇನ್ಸ್ಪೆಕ್ಟರ್ ನಾಯಕ ತನ್ನ ಪಡೆಗಳೊಂದಿಗೆ ಕೆಳಗೆ ಇಳದಿದ್ದ. ಒಳಗಡೆ ಹೋಗಿ ಒಂದರ್ಧ ಗಂಟೆಯಲ್ಲಿ ಹೊರಗೆ ಬಂದು ಮತ್ತೆ ಜೀಪು ಹತ್ತಿದ. ವಿಕ್ರಮನಿಗೆ ಗೊತ್ತಿತ್ತು ಅವನೆಲ್ಲಿ ಹೊರಟಿರುವನೆಂದು. ತನ್ನ ಕಾರಿನೊಂದಿಗೆ ಅವನ ಜೀಪನ್ನು ಹಿಂಬಾಲಿಸತೊಡಗಿದನು.
ಜೀಪು ಕ್ಯಾಜುವಲ್ಟಿ ಮುಂದೆ ನಿಂತು ಕೊಂಡಿತು. ಅನತಿ ದೂರದಲ್ಲಿ ಕತ್ತಲಲ್ಲಿ ವಿಕ್ರಂ ಕಾರು ನಿಲ್ಲಿಸಿದ್ದ. ಅವನಿಗೆ ಅನಿಸತೊಡಗಿತು ಬಹುಶ ಇನ್ಸ್ಪೆಕ್ಟರ್ ನಾಯಕನೇ ಇನ್ವೆಸ್ಟಿಗೇಟಿಂಗ್ ಆಫೀಸರ್ ಇರಬಹುದೆಂದು. ಸ್ವಲ್ಪ ಸಮಯದ ನಂತರ ರವಿಗೆ ಮತ್ತೆ ಕರೆ ಮಾಡಿದ
"ಈಗ ಏನ ಆಗಾಕತ್ತೈತಿ?"
"ರಮೇಶ್ ಮತ್ತು ಇನ್ಸ್ಪೆಕ್ಟರ್ ಏನೋ ಮಾತಾಡಿಕೊಂಡರು, ಬಹುಶ ದೇಹವನ್ನು ಅರ್ಜೆಂಟ್ ಪೋಸ್ಟ್ ಮಾರ್ಟಮ್ ಗೆ ಒಯ್ಯಬಹುದು. ರಮೇಶ್ ಆಗಲೇ ಪೋಸ್ಟ್ ಮಾರ್ಟಮ್ ಕೋಣೆ ಕಡೆ ಹೊಂಟಾನು" ಎಂತೆಂದ ರವಿ. ಏನೂ ಮರು ಉತ್ತರ ಕೊಡದೇ ವಿಕ್ರಂ ಫೋನ್ ಇಟ್ಟ.
ನಡು ರಾತ್ರಿಯಲ್ಲೇಕೆ ಅರ್ಜೆಂಟ್ ಪೋಸ್ಟ್ ಮಾರ್ಟಮ್? ಕ್ರೈಂ ಬ್ರಾಂಚಿನ ಮಾರ್ಗಸೂಚಿಗಳನ್ನು ಅರಿತಿದ್ದ ವಿಕ್ರಮನಿಗೆ ತನ್ನ ಅನುಮಾನ ನಿಜವೆನಿಸತೊಡಗಿತು. ಕಾರನ್ನು ಇಳಿದು ಯಾರಿಗೂ ಗೊತ್ತಾಗದ ಹಾಗೆ ಪೋಸ್ಟ್ ಮಾರ್ಟಮ್ ಕೋಣೆಯತ್ತ ನಡೆದು ಸ್ವಲ್ಪ ದೂರದಲ್ಲಿ ಅಡಗಿ ಕುಳಿತ. ಸ್ವಲ್ಪ ಸಮಯದಲ್ಲಿಯೇ ಚೋಪ್ರಾನ ದೇಹವನ್ನು ತರಲಾಗಿತ್ತು. ಇನ್ಸ್ಪೆಕ್ಟರ್ ನಾಯಕ ಹೊರಗಡೆ ನಿಂತುಕೊಂಡ, ರಮೇಶ್ ದೇಹದೊಂದಿಗೆ ತನ್ನ ಸಹಾಯಕನ ಜೊತೆಗೆ ಒಳಗೆ ಹೋದ. ಒಂದು ಗಂಟೆಯ ನಂತರ ರಮೇಶ್ ಹೊರಗಡೆ ಬಂದ. ಜೊತೆಗೆ ಇನ್ನೊಬ್ಬ ಕಾಫಿನ್ನನ್ನು ಟ್ರಾಲಿಯ ಮೇಲೆ ದಬ್ಬುತ್ತ ಹೊರಗೆ ಬಂದ. ಅಷ್ಟರಲ್ಲಿಯೇ ಅಲ್ಲೊಂದು ದೊಡ್ಡ ಕಾರು ಬಂದು ನಿಂತಿತು. ಎಲ್ಲರೂ ಸೇರಿ ಕಾಫಿನ್ನನ್ನು ಕಾರಿನಲ್ಲಿ ಹಾಕಿದರು.
ವಿಕ್ರಂ ಸೂಕ್ಷ್ಮವಾಗಿ ಗಮಿನಿಸಿದ. ರಮೇಶ್ ಇಬ್ಬರೊಂದಿಗೆ ಹೊರಗಡೆ ಬಂದ. ಅವನು ಒಳಗೆ ಹೋಗಿದ್ದು ಒಬ್ಬನ ಜೊತೆಗೆ ಆದರೆ ಹೊರಗೆ ಬಂದಿದ್ದು ಇಬ್ಬರೊಂದಿಗೆ. ಹಾಗಾದರೆ ಈ ಎರಡನೆಯ ವ್ಯಕ್ತಿ ಯಾರು?? ಆ ಕಾಫಿನ್ನ ಕೋಣೆಯಲ್ಲಿ ಮೊದಲೇ ಹೇಗೆ ಬಂದು ಸೇರಿತ್ತು?
ಅವನಿಗೆ ಉತ್ತರ ಆಗಲೇ ಸಿಕ್ಕಿತ್ತು
ತಕ್ಷಣವೇ ಯಾರಿಗೂ ಕಾಣದ ಹಾಗೆ ತನ್ನ ಕಾರಿಗೆ ಮರಳಿ, ಬಸ್ಯಾ ಮತ್ತು ರವಿಗೆ ತನ್ನ ಕಾರಿನತ್ತ ಬರಲು ಹೇಳಿದ.
ಕಾರಿನಲ್ಲಿ ಕುಳಿತ ಬಸು ಮತ್ತು ರವಿ ಕೇಳಿದರು " ಅಲ್ಲಪ್ಪ , ನಮ್ಮನ್ನೆಲ್ಲಿ ಕರಕೊಂಡು ಹೊಂಟಿದಿ, ಏನ್ ನಡಿಯಾಕತ್ತೈತಿ ಅಂತ ಒಂದೂ ಗೊತ್ತಾಗವಾಲ್ದು ನಮಗ"
"ಎನೂ ಹೆದರಿಕೊಳ್ಳಬ್ಯಾಡರಿ. ನಿಮ್ಮನ್ನ ಈ ಕೇಸಿನಾಗ ತರುದಿಲ್ಲ. ನಿಮಗ ಒಂದು ವಿಚಿತ್ರ ತೋರಿಸಿ ಬಿಟ್ಟ ಬಿಡತೀನಿ"
"ಅದೇನಪ್ಪ ವಿಚಿತ್ರ?" ಅಂತ ಕೇಳಿದ ರವಿ
"ಚೋಪ್ರಾ ಸತ್ತಿಲ್ಲ, ಇನ್ನು ಜೀವಂತ ಅದಾನ ಇಷ್ಟರಲ್ಲಿಯೇ ಕಾಣಸತಾನ"ಅಂತೆಂದ.
"ವಾಟ್?" ಅಂತ ಇಬ್ಬರೂ ಉದ್ಗಾರ ಎಳೆದರು.
"ಈಗ ಎಲ್ಲಾ ಕಥೆ ಹೇಳ್ತಿನಿ ಕೇಳರಿ" ಅಂತಂದ ವಿಕ್ರಂ.
"ನನಗೇನೂ ಈ ಕಾರ್ಯಕ್ರಮಕ್ಕೆ ಬರುವ ಆಶೆ ಇರಲಿಲ್ಲ ಆದರೆ ಒಂದು ಕಾರ್ಯಾಚಾರಣೆಯ ಮೇಲೆ ಬಂದಿದ್ದೆ. ಮುಂಬೈ ಕ್ರೈಂ ಬ್ರಾಂಚಿನ ಆದೇಶದ ಮೇರೆಗೆ. ಚೋಪ್ರಾ ವೈದ್ಯಕೀಯ ಶಿಕ್ಷಣ ಮುಗಿದ ಮೇಲೆ ಒಬ್ಬ ದೊಡ್ಡ ಡ್ರಗ್ ಕಳ್ಳ ಸಾಗಾಣಿಕೆಕಾರನಾಗಿದ್ದ. ಅವನ ವ್ಯವಹಾರ ಕೇಂದ್ರಗಳು ದೇಶದಲ್ಲೆಲ್ಲ ಹಬ್ಬಿಕೊಂಡಿವೆ. ಅವನ ವಾರ್ಷಿಕ ಆದಾಯ ನೂರಾರು ಕೋಟಿಗಳು. ಬೆಂಗಳೂರಿನಲ್ಲಿ ರಮೇಶ್ ಮತ್ತು ರಾಜೇಶ್ ಅವನ ಪಾರ್ಟ್ನರ್ಸ್. ರಾಜಕೀಯದಲ್ಲಿ ಅವನು ಪ್ರಭಾವಿತ ವ್ಯಕ್ತಿ. ದುರದೃಷ್ಟವಶಾತ್ ಅವನು ಬೆಂಬಲಿಸುತ್ತಿದ್ದ ರಾಜಕೀಯ ಪಕ್ಷ ಕೆಲವು ತಿಂಗಳಗಳ ಹಿಂದೆ ಚುನಾವಣೆಯಲ್ಲಿ ಸೋತು ಹೋಯಿತು.
ಆಡಳಿತಾರೂಢ ಪಕ್ಷ ಅವನನ್ನು ಸಧ್ಯದರಲ್ಲಿಯೇ ಬಂಧಿಸುವ ತಯ್ಯಾರಿ ನಡೆಸಿತ್ತು. ಅವನಿಗೆ ವಿಷಯ ಹೇಗೋ ಗೊತ್ತಾಯಿತು. ಕೆಲವೇ ವಾರಗಳ ಹಿಂದೆ ತನ್ನೆಲ್ಲ ಆಸ್ತಿಯನ್ನು ಹೆಂಡತಿ ಹೆಸರಲ್ಲಿ ಬರೆದು ಬಿಟ್ಟ. ಇಷ್ಟರಲ್ಲಿಯೇ ದೇಶವನ್ನು ಬಿಟ್ಟು ದುಬೈಗೆ ಹಾರುವ ಯೋಚನೆಯನ್ನು ಮಾಡಿದ್ದ. ಮುಂಬೈ ಕ್ರೈಂ ಬ್ರಾಂಚ್ ಅವನೆಲ್ಲ ಚಲನವಲನಗಳನ್ನು ಆಲಿಸಿ ನನಗೆ ವರದಿಯನ್ನು ಕೊಡುತ್ತಲಿದ್ದರು. ಅವನ ವಿಮಾನ ಟಿಕೆಟ್ ಬುಕಿಂಗ್ ಗನ್ನು ಗುರುತಿಸಿದ್ದರು. ಅವನು ಬೆಂಗಳೂರಿಗೆ ಒಂದೇ ಕಡೆಯ ಟಿಕೆಟ್ ಬುಕ್ ಮಾಡಿದ್ದ, ಈಗ ಇಲ್ಲಿಂದ ಇನ್ನೇನು ಐದು ತಾಸುಗಳಲ್ಲಿ ಹಾರಲಿರುವ ದುಬೈ ವಿಮಾನಕ್ಕೂ ಒಂದೇ ಕಡೆಯ ಟಿಕೆಟನ್ನು ಬುಕ್ ಮಾಡಿದ್ದಾನೆ. ಅಂದರೆ ಅವನಿಗೆ ಮರಳಿ ಮುಂಬೈ ಗೆ ಹೋಗುವ ವಿಚಾರವಿಲ್ಲ. ಅದಕ್ಕೆ ತಕ್ಕಂತೆ ರಮೇಶ್ ಮತ್ತು ರಾಜೇಶ್ ಅವನಿಗೆ ಒಳ್ಳೆಯ ಉಪಾಯವನ್ನು ತಯ್ಯಾರು ಮಾಡಿದ್ದರು"
ಕಿವಿ ನಿಮರಿಸಿ ಕುತೂಹಲದಿಂದ ಇದನ್ನೆಲ್ಲಾ ಕೇಳುತ್ತಿದ್ದ ಅವರೆಂದರು
"ಅದೇನಪ್ಪ, ಅಂತ ಉಪಾಯ?" ಎಂದು
"ಉಪಾಯ ಬಹಳ ಸರಳವಾಗಿತ್ತು. ಮರು ಮಿಲನದ ಕಾರ್ಯಕ್ರಮವನ್ನು ತಮ್ಮ ಕಾರ್ಯಾಚರಣೆಯ ವೇದಿಕೆಯನ್ನಾಗಿ ಉಪಯೋಗಿಸುವದು. ಅವನು ರಕ್ತದಂತ ದ್ರವವನ್ನು ತಿಳುವಾದ ಪ್ಲಾಸ್ಟಿಕ್ ಲೆಯರಿನಲ್ಲಿ ತುಂಬಿ ತನ್ನ ಎದೆ ಮತ್ತು ಹೊಟ್ಟೆಗೆ ಕಟ್ಟಿಕೊಂಡು ಸ್ಟೇಜಿನ ಮೇಲೆ ಡ್ಯಾನ್ಸಿಗೆ ಬರುವದು, ಬೇರೆ ಡ್ಯಾನ್ಸರ್ ಅವನಿಗೆ ಹುಸಿಗುಂಡು ಹಾರಿಸಿ ಲೆಯರನ್ನು ಪಂಕ್ಚರ್ ಮಾಡುವದು, ಚೋಪ್ರಾ ನೆಲಕ್ಕೆ ಕುಸಿಯುವದು, ರಕ್ತದಂತ ದ್ರವ ಅವನ ಎದೆ ಮತ್ತು ಹೊಟ್ಟೆಯಿಂದ ಸೋರುವದು, ನೆರೆದ ಜನರ ಮುಂದೆ ಅವನ ಮೇಲೆ ಗುಂಡಿನ ದಾಳಿ ಆಯಿತೆಂದು ತೋರಿಸುವದು, ಕ್ಯಾಜುವಲ್ಟಿ ಆಫೀಸರ್ ಅವನು ಸತ್ತಿರವನೆಂದು ದೃಢಪಡಿಸುವದು, ಇನ್ವೆಸ್ಟಿಗೇಟಿಂಗ್ ಆಫೀಸರ್ ಅರ್ಜೆಂಟ್ ಪೋಸ್ಟ್ ಮಾರ್ಟಮ್ ಗೆ ಅನುಮತಿ ಕೊಡುವದು, ಪೋಸ್ಟ್ ಮಾರ್ಟಮ್ ನಾಟಕವಾಡಿ ಯಾವುದೊ ಅನಾಥ ಹೆಣವನ್ನು ಕಾಫಿನ್ನನಲ್ಲಿ ತುಂಬಿ ಚೋಪ್ರಾನನ್ನು ಹೊರ ಕಳಿಸುವದು, ಚೋಪ್ರಾ ಸುದ್ದಿಯು ಇನ್ನೂ ಟಿ ವಿ ಗಳಲ್ಲಿ ಹಬ್ಬುವದಕ್ಕಿಂತ ಮುಂಚೆಯೇ ವಿಮಾನ ನಿಲ್ದಾಣವನ್ನು ಸೇರಿ ದುಬೈಗೆ ಹಾರುವದು" ಎಂದು ಹೇಳಿ ಒಮ್ಮೆ ಅವರತ್ತ ನೋಡಿದ.
“ಎಷ್ಟು ಸರಳ ಉಪಾಯ, ಹಾಗೆಯೇ ಭಾಗಿಯಾದವರು ಬಹಳೇ ಕಡಿಮೆ ಜನ. ಇಬ್ವರು ವ್ಯವಹಾರದ ಪಾರ್ಟರ್ಸ್, ಒಬ್ಬ ಪೊಲೀಸ್ ಇನ್ಸ್ಪೆಕ್ಟರ್, ಒಬ್ಬ ಕ್ಯಾಜುವಲ್ಟಿ ಆಫೀಸರ್ ಮತ್ತು ಡಿ ಗ್ರೇಡ್ ಕೆಲಸುಗಾರ. ತೆರೆ ಮರೆಯಲ್ಲಿ ಯಾವುದೋ ರಾಜಕೀಯ ವ್ಯಕ್ತಿಯೂ ಇರಬಹುದು. ಇವರಿಗೆಲ್ಲ ಲಂಚ ಸುರಿಯಲು ಅವನಿಗೆ ಹಣದ ಕೊರತೆಯೇನು ಇರಲಿಲ್ಲ. ಹಾಗೆಯೇ ಎಲ್ಲ ನಡೆದಿದ್ದು ಮದ್ಯ ರಾತ್ರಿಯಲ್ಲಿ , ಪರ್ಫೆಕ್ಟ್ ಟೈಮಿಂಗ್"
ಆಶ್ಚರ್ಯಚಕಿತನಾಗಿ ಬಸು ಕೇಳಿದ "ಇದೆಲ್ಲಾ ನಿನಗ ಹ್ಯಾಂಗ್ ಗೊತ್ತಾಯಿತು" ಎಂದು.
"ಬಸ್ಯಾ, ನಾನು ಪತ್ತೇದಾರ. ಅಪರಾಧಿ ಎಷ್ಟೇ ಚಾಣಾಕ್ಷನಾಗಿದ್ದರೂ, ಪತ್ತೇದಾರನಿಗೆ ಸಹಾಯವಾಗುವ ಕೆಲವು ಸುಳಿವುಗಳನ್ನು ಬಿಟ್ಟು ಹೋಗಿರುತ್ತಾರೆ. ಡ್ಯಾನ್ಸರ್ ನಿಂದ ಸಿಕ್ಕ ನಕಲಿ ಪಿಸ್ತೂಲು, ಚೋಪ್ರಾನ ಹತ್ತಿರ ಬಿದ್ದಿದ್ದ ಪ್ಲಾಸ್ಟಿಕ್ ಬುಲ್ಲೆಟ್ ಮತ್ತು ಕರವಸ್ತ್ರದಲ್ಲಿ ಸಂಗ್ರಹಿಸಿದ ರಕ್ತದಂತ ದ್ರವ ಇವುಗಳೆಲ್ಲ ಸಾಕಾಗಿದ್ದವು ಅವನು ಸತ್ತಿಲ್ಲವೆಂದು ತಿಳಿಯಲು. ಹಾಗೆಯೇ ಮುಂದೇನಾಯಿತು ಅಂತ ನಿಮಗೆಲ್ಲ ಗೊತ್ತಲ್ಲ" ಅಂತೆಂದ
ಅಷ್ಟರಲ್ಲಿಯೇ ಅವನ ಕಾರು ವಿಮಾನ ನಿಲ್ದಾಣವನ್ನು ತಲುಪಿತ್ತು. ಅವನು ಕ್ರೈಂ ಬ್ರಾಂಚ್ ಐ ಡಿ ಹಿಡಿದುಕೊಂಡು ಚೆಕ್ ಇನ್ ಕೌಂಟರ್ ನತ್ತ ಧಾವಿಸುತ್ತಿದ್ದ. ಇವರಿಬ್ಬರೂ ಕುತೂಹಲದಿಂದ ಅವನನ್ನು ಹಿಂಬಾಲಿಸುತ್ತಿದ್ದರು. ಅವನೆಂದಂತೆ ಕೆಲವೇ ನಿಮಿಷಗಳಲ್ಲಿ ಸೂಟ್ಕೇಸ್ ನೊಂದಿಗೆ ಚೋಪ್ರಾ ಹಾಜರಾದ. ವಿಕ್ರಂ ನನ್ನು ಕಂಡು ಗಾಬರಿಯಾಗಿ ಓಡಲು ಪ್ರಯತ್ನಿಸಿದ. ಆದರೆ ವಿಕ್ರಂ ಅವನನ್ನು ತನ್ನ ಬಲಿಷ್ಠ ಕೈಯಲ್ಲಿ ಹಿಡಿದುಕೊಂಡು ಅಂದ "ಚೋಪ್ರಾ ನಿನ್ನ ಉಪಾಯವೇನೋ ಚನ್ನಾಗಿತ್ತು ಆದರೆ ನಿನ್ನ ಗ್ರಹಚಾರ ಸರಿಯಿರಲಿಲ್ಲ" ಎಂದು. ಬಸು ಮತ್ತು ರವಿ ಅನತಿ ದೂರದಲ್ಲಿ ನಿಂತು ಮೂಕರಾಗಿ ನೋಡುತ್ತಿದ್ದರು. ಅಷ್ಟರಲ್ಲಿಯೇ ಪೊಲೀಸ್ ಗುಂಪು ರಭಸದಿಂದ ಓಡಿ ಬರುತ್ತಲಿತ್ತು.

~ ಶಿವಶಂಕರ ಮೇಟಿ

ಬಾಲಿ : ಹಿಂದೂ ಮಹಾಸಾಗರದಲ್ಲೊಂದು ಅದ್ಭುತ ದ್ವೀಪ 

  • ರಾಮಶರಣ ಲಕ್ಷ್ಮೀನಾರಾಯಣ

(ಚಿತ್ರ ಕೃಪೆ: ವಿಕಿಪೀಡಿಯ)

ಬಾಲಿ ಪ್ರಧಾನವಾಗಿ ಹಿಂದೂ ದೇಶ. ಸಹಜವಾಗಿಯೇ ಇಲ್ಲಿನ ಸಂಸ್ಕೃತಿಯ ಮೇಲೆ ಭಾರತದ ಪ್ರಭಾವ ಅಗಾಧವಾಗಿದೆ. ಸುಮಾರು ಕ್ರಿ.ಶ ೧ನೇ ಶತಮಾನದಲ್ಲಿ ವ್ಯಾಪಾರಿಗಳು ಭಾರತದಿಂದ ಪಕ್ಕದ ದ್ವೀಪ ಜಾವಾಕ್ಕೆ ಬಂದಿಳಿದು, ತಮ್ಮೊಡನೆ ಭಾರತದ ಸಂಸ್ಕೃತಿಯನ್ನು ತಂದರು. ತದನಂತರ ಹಿಂದೂ ರಾಜ ಮನೆತನಗಳು ಬಾಲಿಯನ್ನೂ ಆಳಿದವು. ಇವೆರಡೂ ದ್ವೀಪಗಳ ನಡುವಿನ ಅಂತರ ಕೇವಲ ೨.೫ ಕಿ.ಮೀ ಅಷ್ಟೇ. ಆ ಹಾದಿಯಲ್ಲೇ ಭಾರತದ ನೃತ್ಯ ಪ್ರಕಾರಗಳೂ ಬಾಲಿಗೆ ಬಂದಿಳಿದವು. ನರ್ತಕರ ವೇಷಭೂಷಣಗಳು, ನೃತ್ಯ ರೂಪಕದ ಕಥಾ ಹಂದರ ಇವೆಲ್ಲ ಇದಕ್ಕೆ ಸಾಕ್ಷಿ. ಈ ಚಿಕ್ಕ ನಾಡಿನಲ್ಲಿ ಹಲವಾರು ಪ್ರಕಾರದ ನೃತ್ಯಗಳು ಪ್ರಚಲಿತವಾಗಿವೆ. ಕೆಲವು ಸಾಂಪ್ರದಾಯಿಕ ನೃತ್ಯಗಳನ್ನು ಇಲ್ಲಿನ ದೇವಸ್ಥಾನದ ಒಳ ಆವಾರಗಳಲ್ಲಿ ಕೇವಲ ಸ್ಥಳೀಯರ ಎದುರು ಪ್ರದರ್ಶಿಸಲ್ಪಡುತ್ತವೆ. ಇವುಗಳನ್ನು ನೋಡಲು ಪ್ರವಾಸಿಗರಿಗೆ ಅನುಮತಿ ಇಲ್ಲ.

ನಮ್ಮಂತಹ ಪ್ರವಾಸಿಗರಿಗೆ ಇಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರದರ್ಶಿಸುವ ನೃತ್ಯಗಳನ್ನು ವೀಕ್ಷಿಸುವ ಉತ್ತಮ ಅವಕಾಶಗಳಿವೆ. ಇವುಗಳ ಬಗ್ಗೆ ಬಾಲಿಗೆ ಹೋಗುವ ಮೊದಲು ಸ್ವಲ್ಪ ಮಾಹಿತಿ ತೆಗೆದುಕೊಂಡಿದ್ದೆವು. ನಾವು ಮೊದಲು ಪಯಣಿಸಿದ್ದು ದ್ವೀಪದ ದಕ್ಷಿಣ ತುದಿಯಲ್ಲಿದ್ದ ಬಿಂಗಿನ್ ಎಂಬಲ್ಲಿಗೆ. ಇಲ್ಲಿಂದ ಸುಮಾರು ೬ ಕಿ.ಮೀ ದೂರದಲ್ಲಿ ಉಲುವಾಟು ಎಂಬ ಊರಿದೆ. ಬಾಲಿ ಪ್ರವಾಸಿಗಳ ಆಯಸ್ಕಾಂತವಾಗಿದ್ದಲ್ಲದೇ, ತಿರುವು ಮುರುವಿನ ರಸ್ತೆಗಳೂ ಕಿರಿದಾಗಿರುವುದರಿಂದ ಈ ದೂರ ಕ್ರಮಿಸಲು ಸುಮಾರು ೩೦ ನಿಮಿಷ ಬೇಕಾಗುತ್ತದೆ. ಉಲುವಾಟು, ಸಾಗರ ತಟದ ಪ್ರಪಾತದಂಚಿನಲ್ಲಿ ನೇತಾಡುತ್ತಿರುವ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಇತ್ತೀಚೆಗೆ ಬಿ.ಬಿ.ಸಿ ಯಲ್ಲಿ ಪ್ರಸಾರವಾದ “ಅರ್ಥ್” ಸರಣಿಯಲ್ಲಿ, ಪ್ರವಾಸಿಗಳೊಡನೆ ಆಹಾರಕ್ಕೆ ವಿನಿಮಯದಾಟವಾಡುವ ಕೋತಿಗಳನ್ನು ನೀವು ನೋಡಿರಬಹದು. ಈ ಕೋತಿಗಳು  ಈ ದೇವಸ್ಥಾನದ ಆವಾರದಲ್ಲಿಯೇ ನೆಲಸಿವೆ. ಇದು ಸೂರ್ಯಾಸ್ತವನ್ನು ವೀಕ್ಷಿಸಲು ಪ್ರಶಸ್ತ ಸ್ಥಳ. ಇಲ್ಲಿ ಸೂರ್ಯಾಸ್ತದ ಸಮಯ “ಕೆಚಕ್” ನೃತ್ಯವನ್ನು ಪ್ರದರ್ಶಿಸುತ್ತಾರೆ. ಸೀತಾಪಹರಣದಿಂದ ರಾವಣ ವಧೆಯವರೆಗಿನ ರಾಮಾಯಣದ ಕಥಾವಸ್ತು ಈ ರೂಪಕದ ಮೂಲ ಹಂದರ. ಯಾವುದೇ ಹಾಡು, ವಾದ್ಯಗಳ ಉಪಯೋಗ ಇಲ್ಲಿಲ್ಲ; ಸುಮಾರು ೩೦-೪೦ ಪುರುಷರು ಲಯಬದ್ಧವಾಗಿ ಚಕ್-ಚಕ್ ಎಂದು ಬಾಯಲ್ಲಿ ಮಾಡುವ ಶಬ್ದವೇ ಇಡೀ ರೂಪಕಕ್ಕೆ ವಿಶಿಷ್ಟ ಅನುಭವ ಕೊಡುತ್ತದೆ. ಈ ಧ್ವನಿ ಕೋತಿ ಮಾಡುವ ಶಬ್ದವನ್ನು ಹೋಲುವುದರಲ್ಲಿ ಅನುಮಾನವಿಲ್ಲ. ರಾಮಾಯಣದ ಕಥೆ, ಕೋತಿಗಳ ಧ್ವನಿಯ ಹಿಮ್ಮೇಳ, ತುಂಟ ಕೋತಿಗಳ ಸಮ್ಮುಖದಲ್ಲಿ ನಡೆಯುವ ನೃತ್ಯ, ಇವನ್ನೆಲ ಗಮನಿಸಿದವರಿಗೆ ಇದು ಕಾಕತಳಿಯವೇ, ಇದೆಲ್ಲ ವಿಶೇಷವಾಗಿ ವಿನ್ಯಾಸಮಾಡಿದ್ದೇ ಎಂಬ ವಿಚಾರಗಳು ನೋಡುಗರ ಮನದಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ನನಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಹಿಮ್ಮೇಳದ ಪುರುಷರು ವರ್ತುಲಾಕಾರದ ವೇದಿಕೆಯ ಸುತ್ತ ಕುಳಿತಿರುತ್ತಾರೆ, ಇವರ ಮಧ್ಯದಲ್ಲಿ ನರ್ತಕರು ನರ್ತಿಸುತ್ತಾರೆ. ಹಿಮ್ಮೇಳದವರ ಧ್ವನಿಯಲ್ಲಿನ ಏರಿಳಿತವೇ ದೃಶ್ಯದ ಭಾವನೆಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಚಕ್ ಶಬ್ದಗುಚ್ಛಗಳ ವಿಶಿಷ್ಟ ಉಪಯೋಗ, ಸೂರ್ಯಾಸ್ತದ ಅದ್ಭುತ ಹಿನ್ನೆಲೆ ನೋಡುಗರಿಗೆ ಮರೆಯಲಾರದ ಅನುಭವವನ್ನು ಕೊಡುತ್ತದೆ; ನನಗಂತೂ ಕೊಟ್ಟಿತು (ವಿಡಿಯೋ ೧). 

(ಪ್ರಪಾತದಂಚಿನ ದೇವಸ್ಥಾನ, ಸೂರ್ಯಾಸ್ತಗಳ ಹಿನ್ನಲೆಯಲ್ಲಿ ಕೆಚಕ್ ನೃತ್ಯ; ಬಲಕ್ಕೆ – ಹನುಮಂತ ಕಟ್ಟೆಯೇರಿ ನಿಂತಿರುವುದು)

ಬಾಲಿ ದ್ವೀಪದ ಸರಿ ಸುಮಾರು ಮಧ್ಯ ಭಾಗದಲ್ಲಿರುವ ಉಬಡ್ ಇಲ್ಲಿನ ಸಾಂಸ್ಕೃತಿಕ ರಾಜಧಾನಿಯೆಂದೇ ಹೇಳಬಹುದು. ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ತಪ್ಪಲಿನಲ್ಲಿ ತಣ್ಣಗೆ ನೆಲೆಸಿರುವ ಊರು ಪ್ರವಾಸಿಗರಿಂದ ಗಿಜಿಗುಟ್ಟುತ್ತದೆ. ಇಲ್ಲಿ ಸರಸ್ವತಿ ದೇವಸ್ಥಾನ, ಕರಕುಶಲ ಕಲೆ, ಸುಂದರ ಚಿತ್ರಗಳನ್ನು ಮಾರುವ ಅಸಂಖ್ಯಾತ ಅಂಗಡಿಗಳು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರಗಳು. ಉಬಡ್ ಅರಮನೆಯ ಪ್ರಾಕಾರದಲ್ಲಿ ಪ್ರತಿ ಸಂಜೆ “ಲೆಗೊಂಗ್” ಎಂಬ ನೃತ್ಯ ಪ್ರಕಾರದ ಪ್ರದರ್ಶನ ನಡೆಯುತ್ತದೆ. ಇದು ಇಲ್ಲಿನ ಅತ್ಯಂತ ಹಳೆಯ ನೃತ್ಯ ಪದ್ಧತಿ. ಇದನ್ನು ರಾಜ ಮನೆತನದ ಮನರಂಜನೆಗಾಗಿ ಮೀಸಲಾಗಿತ್ತು. ಪ್ರತಿದಿನ ಬೇರೆ ಬೇರೆ ಕಥೆಗಳನ್ನಾಧರಿಸಿದ ರೂಪಕಗಳನ್ನು ಪ್ರದರ್ಶಿಸುತ್ತಾರೆ. ಈ ಪ್ರಕಾರದಲ್ಲಿ ಗಂಡಸರು- ಹೆಂಗಸರು ಜೊತೆಯಾಗಿಯೇ ನರ್ತಿಸುತ್ತಾರೆ. ನರ್ತಕರು ಚಿನ್ನದ ರೇಖೆಗಳಿಂದ ನವಿರಾದ ಕಸೂತಿ ಹಾಕಿದ ಹೊಳೆಯುವ ರೇಷ್ಮೆಯ ಬಟ್ಟೆಯನ್ನು, ಸೂಕ್ಷ್ಮವಾದ ವಿನ್ಯಾಸದ ಆಭರಣಗಳನ್ನು ಧರಿಸರುತ್ತಾರೆ. ಕಣ್ಣಿನ, ಹಸ್ತದ ಚಲನೆಗಳು ಈ ನೃತ್ಯದ ವೈಶಿಷ್ಟ್ಯ. ಗಮೆಲಾನ್ ಎಂಬ ಸ್ಥಳೀಯ ವಾದ್ಯ ಹಾಗೂ ಮೃದಂಗದಂತಹ ತಾಳ ವಾದ್ಯವನ್ನು ಹಿಮ್ಮೇಳವಾಗಿ ಉಪಯೋಗಿಸುತ್ತಾರೆ (ವಿಡಿಯೋ ೨). ನನಗೆ ಮುಖ್ಯವಾಗಿ ಕಂಡು ಬಂಡ ವ್ಯತ್ಯಾಸವೆಂದರೆ ಹಿಮ್ಮೇಳದಲ್ಲಿ ಹಾಡುಗಾರರಿರಲಿಲ್ಲ; ನಮ್ಮಲ್ಲಿನ ನೃತ್ಯ ಪ್ರಕಾರಗಳಲ್ಲಿರುವಷ್ಟು ಮುದ್ರೆಗಳ ಅಥವಾ ಹೆಜ್ಜೆಗಳ ವೈವಿಧ್ಯತೆ ಇರಲಿಲ್ಲ. ಸುಮಾರು ೯೦ ನಿಮಿಷಗಳ ಕಾಲ ಉಬಡ್ ಅರಮನೆಯ ಹಿನ್ನಲೆಯಲ್ಲಿ ಕಂಡ ಮನೋಹರ ನೃತ್ಯ ಪ್ರದರ್ಶನ ಬಾಲಿಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಾಗಿಲನ್ನು ತೆರೆದಿತ್ತು. ಇನ್ನೊಮ್ಮೆ ಈ ದೇಶಕ್ಕೆ ಭೇಟಿ ಕೊಡಬೇಕು, ಇನ್ನಷ್ಟು ಇಲ್ಲಿನ ಸಂಪತ್ತನ್ನು ಅನುಭವಿಸಬೇಕೆಂಬ ಅದಮ್ಯ ಬಯಕೆಗೆ ಒತ್ತಾಸೆ ಕೊಟ್ಟಿತು. ನಾವು ನೋಡಿದ ಪ್ರದರ್ಶನದಲ್ಲಿ ಮುಖ್ಯವಾಗಿ ಗರುಡ-ವಿಷ್ಣು ನೃತ್ಯವಿದ್ದರೂ (ವಿಡಿಯೋ ೩). ಅಂದು, ಮುಖವಾಡ ಧರಿಸಿ ಮಾಡುವ ಟೊಪೆಂಗ್ ನೃತ್ಯ, ಬೀಸಣಿಗೆಯನ್ನು ಉಪಯೋಗಿಸಿ ಮಾಡುವ ನೃತ್ಯ ಹಾಗೂ ಯುವ ದ್ವಯರ ಯೋಧ ನೃತ್ಯ (ಬಾರಿಸ್) ಪ್ರದರ್ಶನಗಳೂ ಸೇರಿದ್ದು, ವಿಶೇಷ ಬೋನಸ್ ಸಿಕ್ಕಂತಾಯಿತು.

ಕೆಳಗಿನ ಚಿತ್ರಗಳಲ್ಲಿ (ಎಡದಿಂದ ಬಲಕ್ಕೆ) ನರ್ತಕರ ಹಾವ ಭಾವ, ದಿರಿಸು, ಹಸ್ತ ಮುದ್ರೆ, ಮುಖವಾಡ ನೃತ್ಯ (ಟೊಪೆಂಗ್), ಯುವ ಯೋಧನ ಬಾರಿಸ್ ನೃತ್ಯ, ಬೀಸಣಿಗೆ ನೃತ್ಯ ಹಾಗೂ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಬಾಲಿ ವಾಸ್ತುಶಿಲ್ಪಗಳನ್ನು ಕಾಣಬಹುದು.

  • ರಾಮಶರಣ
ಕೆಚಕ್ ನೃತ್ಯ: ರಾವಣನ ಅಂತ್ಯ (ವಿಡಿಯೋ ೧)
ಲೆಗೊಂಗ್ ನೃತ್ಯ ಪ್ರದರ್ಶನದ ಮೊದಲು ಗಮೆಲಾನ್ ಹಿಮ್ಮೇಳದ ಝಲಕ್ (ವಿಡಿಯೋ ೨)
ಗರುಡ ವಾಹನ ನೃತ್ಯ: ಲೆಗೊಂಗ್ ಶೈಲಿ (ವಿಡಿಯೋ ೩)

ಗಾಜರ್ ಕಾ ಹಲ್ವಾ

ಕವನ-ಭಾವಯಾನ

ಬರೆಯಬೇಕು!

ಬರೆಯಲೇಬೇಕು ಹಾಗೆಂದು ಮಾಡಿಟ್ಟುಕೊಂಡ ವಿಷಯಗಳ ಪಟ್ಟಿ ದಿನದಿಂದ ದಿನಕ್ಕೆ ಉದ್ದವಾಗುತ್ತಲೇ ಇದೆ ಆದರೆ ಬರೆಯಲು ಮಾತ್ರ
ಆಗುತ್ತಿಲ್ಲ. ನನ್ನ ಪ್ರಾಥಮಿಕ ಶಾಲೆಯಲ್ಲಿ ಇದ್ದ ಅಕ್ಕವರು ಇಂಥಹ ‘ಆಗಲ್ಲ ಆಗ್ತಿಲ್ಲ’ ಅನ್ನೋ ಪದಗಳನ್ನ ಕೇಳಿದಾಗ ಹೇಳುತ್ತಿದ್ದ
‘ಕಳ್ಳಂಗೊಂದು ಪಿಳ್ಳೆ ನೆವ’ ಅನ್ನೋ ಗಾದೆ ಇತ್ತೀಚಿಗೆ ಪದೇ ಪದೇ ನೆನಪಾಗುತ್ತದೆ.
ಸಮಯವೇ ಸಿಗ್ತಿಲ್ಲ ಎನು ಮಾಡಲಿ? ಅನ್ನುವ ಮಾತನ್ನು ಮನಸು ಬುದ್ಧಿಗೆ, ಬುದ್ಧಿ ಮನಸಿಗೆ ಆಗೀಗ ಹೇಳಿಕೊಳ್ಳುತ್ತಲೇ
ಪ್ರೌಡಶಾಲಾ ದಿನಗಳಲ್ಲಿ ಭೂಗೋಳ ಮತ್ತು ಕನ್ನಡ ಪಾಠ ಮಾಡುತ್ತಿದ್ದ ಲಕ್ಷ್ಮಣ್ ಸರ್ ‘ಸಮಯ ಯಾರಿಗೂ ಈ ತನಕ ಸಿಕ್ಕಿಲ್ಲ,
ಮಾಡ್ಕೋಬೇಕು, ಏನಾದ್ರೂ ಕಲೀಬೇಕು, ಸಾಧಿಸಬೇಕು, ಬೇಕು ಅಂದ್ರ!’ ಅಂತ ಹೇಳತಿದ್ದುದು ಕೂಡ ಇಂಥ ಸಂದರ್ಭದಲ್ಲಿ
ನೆನಪಾಗುತ್ತದೆ.
ಜೊತೆಗೆ ಈ ಸೋಶಿಯಲ್ ಮೀಡಿಯಾ ಅನ್ನುವ ವರರೂಪಿ ಶಾಪದ ಛಾಯೆಯಿಂದ ದೂರ ಉಳಿಯಬೇಕೆಂದರೂ ಆಗದು. ಅಲ್ಲೂ
ಕೆಲವರಂತೂ ಅದೆಷ್ಟು ಚಂದ ಬರೆಯುತ್ತಾರೆಂದರೆ, ಬರೀ ಎರಡೇ ಸಾಲುಗಳಲ್ಲಿ ಸೀದಾ ಮನದ ಬಾಗಿಲ ಕದ ತಟ್ಟಿಬಿಡುತ್ತಾರೆ. ಹೊಟ್ಟೆಕಿಚ್ಚು
ಹುಟ್ಟಿಸುತ್ತಾರೆ. ಮರೆತೇಹೋದಂತಿರುವ ಬರವಣಿಗೆಯ ಕಡೆಗೆ ಗಮನ ಕೊಡುವಂತೆ ಮಾಡುತ್ತಾರೆ. ಒಂದೂ ಮಾತಾಡದೆ ಸಾವಿರ
ವಿಷಯಗಳ ಹಚ್ಚೆ ಹಾಕಿಬಿಡುತ್ತಾರೆ.
ಇತ್ತೀಚಿಗೆ ಅಂತಹುದೇ ಒಂದು ಫೇಸ್ಬುಕ್ ಖಾತೆಯ ಪೋಸ್ಟುಗಳ ಮಾಯೆಗೆ ನಾನು ಒಳಗಾಗಿರುವೆ. ಬೆಟ್ಟದ ಹೂವು ಎಂಬ ಹೆಸರಿನಿಂದ
ಬರೆಯುವ ಇವರು ಅವಳೋ/ ಅವನೋ ಗೊತ್ತಿಲ್ಲ. ಹಿಂದಿ, ಉರ್ದು ಪದ್ಯಗಳ ಸಾಲುಗಳನ್ನು ತುಂಬಾ ಸುಂದರವಾಗಿ
ಅನುವಾದಿಸುತ್ತಾರೆ.
ಒಮ್ಮೆ ಓದಿದರೆ ಆಯ್ತು, ಮತ್ತೆ ನಾವೇ ಹುಡುಕಿ ಹೋಗಿ ಓದುವಷ್ಟು ಬೆಚ್ಚಗಿರುತ್ತವೆ ಆ ಅನುವಾದಗಳು, ಜೊತೆಗೆ ಅವರೂ ಆಗೀಗ
ಅವರ ಸ್ವಂತದ ಕವಿತೆಗಳನ್ನೂ ಪೋಸ್ಟ್ ಮಾಡುತ್ತಾರೆ. ಕೆಲವೊಮ್ಮೆ ಹೇಳದೆ ಕೇಳದೆ ಫೇಸ್ಬುಕ್ ಗೆ ರಜೆ ಹಾಕಿ ನಾಪತ್ತೆಯಾಗುತ್ತಾರೆ.
ಇಂಥಹ ಹಲವು ಅನಾಮಿಕ, ಅನಾಮಧೇಯ ಅಕೌಂಟ್ ಗಳು ಚಂದದ ಪದ್ಯಗಳನ್ನು ಪೋಸ್ಟ್ ಮಾಡುತ್ತವೆ. ಆದರೆ ನನಗೆ ಬರೆಯಲು
ಹಚ್ಚಿದ್ದು ಮಾತ್ರ ಈ ಬೆಟ್ಟದ ಹೂವು.
ಅವರ ಪೋಸ್ಟ್ಗಳಿಂದಾಗಿ ನಾನು ಗುಲ್ಜಾರ್ ರನ್ನು ಓದಲು ಶುರು ಮಾಡಿದೆ, ಮತ್ತೆ ಆಗೊಮ್ಮೆ ಈಗೊಮ್ಮೆ ಅವರ ಕವಿತೆ, ನುಡಿ,
ಶಾಯರಿ, ಗಝಲ್ಗಳ ಭಾವಾನುವಾದ ಮಾಡಲು ಪ್ರಯತ್ನಿಸಿದೆ. ನಿಮ್ಮ ಓದಿಗೆ ಈ ಸಂಚಿಕೆಯಲ್ಲಿ ನಾನು ಅಂತರ್ಜಾಲದಲ್ಲಿ ಓದಿ
ಭಾವಾನುವಾದ ಮಾಡಿರುವ ಕೆಲವನ್ನು ಇಲ್ಲಿ ಲಗತ್ತಿಸಿದ್ದೇನೆ. ಓದಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಮರೆಯದಿರಿ.
ನಿಮ್ಮ
ಅಮಿತಾ ರವಿಕಿರಣ್

ತುಟಿಗಳಾಡಿದ ಪದಗಳಾಗಿದ್ದರೆ
ತಪ್ಪು ಹುಡುಕಬಹುದಿತ್ತು ಆದರೆ
ಅದೆಲ್ಲ ಹೇಳಿದ್ದು ಆಕೆಯ ಕಣ್ಣಾಲಿಗಳು.


ಕಣ್ಣುಗಳಾಗಿದ್ದಕ್ಕೆ ಸತ್ಯ ಹೇಳಿಬಿಟ್ಟವು,
ತುಟಿ ಉಸುರಿದ ಮಾತುಗಳಿಗಾಗಿ
ದೇವರ ಆಣೆ ಇತ್ತ ಮೇಲೂ
ವಾದ ವಿವಾದ ನಡೆಯುತ್ತವೆ ಇಲ್ಲಿ..


ಹೂವಿನಂತೆ ನಿನ್ನ ತುಟಿ ಅರಳಿ,
ನಿನ್ನ ದನಿಯ ಕಂಪು ಘಮಘಮಿಸಲಿ


ಈ ಒಂಟಿತನ ಎಷ್ಟು ಹಿತವಾಗಿದೆ ಗೊತ್ತಾ,
ಸಾವಿರ ಪ್ರಶ್ನೆಗಳ ಕೇಳುತ್ತಾದರೂ
ಉತ್ತರ ಬೇಕೆಂಬ ಹಠ ಮಾಡುವುದಿಲ್ಲ.


ಈ ಜಗದ ಕಣ್ಣಗೆ ನಾನು ವಿಚಿತ್ರ,
ವಿಕ್ಷಿಪ್ತಳೂ ಹೌದು
ಕಾರಣ, ನನಗೆಲ್ಲವೂ ನೆನಪಿರುತ್ತದೆ.


ನಿನ್ನಾ ಎಷ್ಟು ನಂಬ್ತೀನಿ ಗೊತ್ತಾ?
ತುಟಿ ಉಸುರುವಾಗ,
ಮನದ ತುಂಬಾ, ಸಂಶಯದ ಬಿಳಿಲುಗಳಲ್ಲಿ
ಭಯ ಜೋಕಾಲಿಯಾಡುತ್ತಿರುತ್ತದೆ.


ಪ್ರೀತಿ ಎಂದರೇನು?
ಎಂಬುದಷ್ಟೇ ನನ್ನ ಪ್ರಶ್ನೆಯಾಗಿತ್ತು.
ಅಸಫಲ ಇಚ್ಛೆಯ ನಿಟ್ಟುಸಿರು ಅನ್ನುವ ಉತ್ತರ
ನೀ ತೊರೆದ ಗಳಿಗೆ ತಿಳಿಸಿತು.


ಏನಾದರೊಂದು
ಮಾತಾಡುತ್ತಲೇ ಇರು,
ನೀ ಸುಮ್ಮನಿದ್ದರೆ
ಜನ ಕೇಳುತ್ತಾರೆ!


ಸಂಧ್ಯಾದೀಪಗಳ ದಾರಿಯಲ್ಲಿ

ಈ ವಾರದ ಸಂಚಿಕೆಯಲ್ಲಿ ಬೆಂಗಳೂರಿನ ನಿವೃತ್ತಿ-ನಂತರದ ಹಿರಿಯರ ಮನೆಯನ್ನು ಕುರಿತಾದ ನನ್ನ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇಲ್ಲಿ ಕೆಲವು ಹಿರಿಯ ನಾಗರೀಕರು  ಬದುಕಿನ ಸಂಧ್ಯಾ ಕಾಲದಲ್ಲಿ ಸವಾಲುಗಳನ್ನು ಎದುರಿಸಿ ಹೇಗೆ ಪರಿಹಾರ ಕಂಡುಕೊಂಡಿದ್ದಾರೆ,  ಅವರು ಹೇಗೆ ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿದ್ದಾರೆ 
ಮತ್ತು ಅವರ ಮುಂದಿರುವ ಆಯ್ಕೆಗಳೇನು? ಎಂಬುದನ್ನು ವಿಶ್ಲೇಷಿಸಿದ್ದೇನೆ. ಇಲ್ಲಿ ಭಾರತ ಮತ್ತು ಬ್ರಿಟನ್ನಿನ್ನ ಹಿರಿಯರ ಬದುಕನ್ನು ಒಂದಕ್ಕೊಂದು ಪರ್ಯಾಯವಾಗಿ ಇಟ್ಟು ನೋಡುವ ಪ್ರಯತ್ನ ನನ್ನದಾಗಿದೆ. ಹಿಂದೆ ನಾನು ಬರೆದ "ಬದಲಾಗುತ್ತಿರುವ ಸಮಾಜದಲ್ಲಿ ವೃದ್ಧರು' ಎಂಬ ಲೇಖನದ ಇನ್ನೊಂದು ಅಧ್ಯಾಯವೇ ಈ ಬರಹ ಎನ್ನಬಹುದು. ಬೆಂಗಳೂರಿನಲ್ಲಿ ನಾನು ಭೇಟಿನೀಡಿದ ‘ಪ್ರೈಮಸ್ ರಿಫ್ಲೆಕ್ಷನ್ಸ್’ ಎಂಬ ಹಿರಿಯರ ಮನೆಯ ಬಗ್ಗೆ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಬೆಂಗಳೂರಿನ ಇನ್ನೊಂದು ಹಿರಿಯರ ಮನೆ ‘ಸಂಧ್ಯಾದೀಪ’ ಕುರಿತಾದ ನನ್ನ ಕವನವನ್ನು ಇಲ್ಲಿ ಪ್ರಕಟಿಸಲಾಗಿದೆ. ಯೌವನ ಮತ್ತು ವೃದ್ಧಾಪ್ಯ ಇವೆರಡರ ಕೆಲವು ಅಭಿಮುಖಗಳನ್ನು ಚಿತ್ರಿಸುವ "ಅಂದು-ಇಂದು" ಎಂಬ ಡಾ. ರಘುನಾಥರ ಕವನ ಇಲ್ಲಿದೆ. ಕೊನೆಯದಾಗಿ ಪ್ರೈಮಸ್ ಹಿರಿಯರ ಮನೆಯ ಸಾಹಿತ್ಯಾಸಕ್ತ ನಿವಾಸಿಯಾದ ಪುಷ್ಪ ಅವರು ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಏಕೀಕರಣದ ಹಿನ್ನೆಲೆಯನ್ನು ಕುರಿತು ಬರೆದ ಲೇಖನ ಇಲ್ಲಿದೆ. ಕನ್ನಡ ರಾಜ್ಯೋತ್ಸವವಾಗಿ ಕೆಲವು ದಿನಗಳಾಗಿವೆ, ನಾವೆಲ್ಲಾ ಇನ್ನು ಅದರ ನೆನಪಿನ ಪರವಶತೆಯಲ್ಲಿರುವಾಗ ಈ ಬರಹ ಸಮಯೋಚಿತವಾಗಿದೆ ಎಂದು ಭಾವಿಸಿ ಪ್ರಕಟಿಸಲಾಗಿದೆ.


-ಸಂ
ಫೋಟೋ ಕೃಪೆ ಗೂಗಲ್
ಸಂಧ್ಯಾ ದೀಪಗಳ ದಾರಿಯಲ್ಲಿ

ಡಾ. ಜಿ. ಎಸ್. ಶಿವಪ್ರಸಾದ್

ಪಾಶ್ಚಿಮಾತ್ಯ ದೇಶಗಳಲ್ಲಿ ನರ್ಸಿಂಗಹೋಮ್ ಎಂದರೆ ಅನಾರೋಗ್ಯದಿಂದಾಗಿ ತಮ್ಮ ಸ್ವಾವಲಂಬನೆಯನ್ನು ಕಳೆದುಕೊಂಡು ಇತರರನ್ನು ಅವಲಂಬಿಸಿ ಬದುಕುತ್ತಿರುವ ಹಿರಿಯರ ಮನೆ ಎನ್ನ ಬಹುದು. ಇದು ಖಾಸಗಿ ಅಥವಾ ಸರ್ಕಾರ ನಡೆಸುತ್ತಿರುವ ಸಂಸ್ಥೆಯಾಗಿರುತ್ತದೆ. ತಕ್ಕ ಮಟ್ಟಿಗೆ ಗಟ್ಟುಮುಟ್ಟಾಗಿರುವ ಹಿರಿಯರು ದಂಪತಿಗಳಾಗಿ ಅಥವಾ ಒಬ್ಬಂಟಿಗರಾಗಿ ತಮ್ಮ ತಮ್ಮ ಮನೆಗಳಲ್ಲಿ ವಾಸಮಾಡುವುದು ಸಾಮಾನ್ಯ. ಇನ್ನು ಕೆಲವು ಹಣವಂತರು ತಮ್ಮ ದೊಡ್ಡ ಮನೆಗಳನ್ನು ಮಾರಿಕೊಂಡು ಆಕರ್ಷಕವಾಗಿರುವ, ಸೆಕ್ಯೂರಿಟಿ ಒದಗಿಸುವ, ಹೊಟೇಲಿನಂತೆ ಹಲವಾರು ಸೌಲಭ್ಯಗಳು ಇರುವ ಬಹು ಅಂತಸ್ತಿನ ರಿಟೈರ್ಮೆಂಟ್ ಹೋಮ್ ಗಳಲ್ಲಿ ವಾಸಮಾಡುತ್ತಾರೆ.

ಭಾರತದಲ್ಲಿ ಕಳೆದ ದಶಕಗಳ ಹಿಂದೆ ಜಾಯಿಂಟ್ ಫ್ಯಾಮಲಿ ವ್ಯವಸ್ಥೆ ಇದ್ದು, ಮಕ್ಕಳು, ಮೊಮ್ಮಕಳು ಹಿರಿಯರನ್ನು ಆತ್ಮೀಯವಾಗಿ ಪ್ರೀತಿ ಗೌರವಗಳಿಂದ ನೋಡಿಕೊಳ್ಳುತ್ತಿದ್ದರು. ಅದು ಸಮಾಜದ ನಿರೀಕ್ಷೆಯಾಗಿತ್ತು, ವ್ಯವಸ್ಥೆಯ ಅಂಗವಾಗಿತ್ತು. ಹಿರಿಯರು ತಾವು ಹಿಂದೆ ಕಟ್ಟಿಸಿದ ಮನೆಗೆ ಭಾವನಾತ್ಮಕ ಕಾರಣಗಳಿಂದ ಜೋತು ಬಿದ್ದು ಸಾಯುವತನಕ ಕಷ್ಟವೋ ಸುಖವೋ ಮಕ್ಕಳ ಜೊತೆಗೇ ಬದುಕುತ್ತಿದ್ದರು. ಹೆತ್ತವರು ಆಳಿದ ಮೇಲೆ ಆ ಮನೆ, ಅಸ್ತಿ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೋಗುತ್ತಿತ್ತು. ವಿವಾಹ ವಿಚ್ಛೇದನವನ್ನು ಸಮಾಜ ಒಪ್ಪುತ್ತಿರಲಿಲ್ಲ. ಹೀಗಾಗಿ ಹಿಂದಿನ ಕಾಲದಲ್ಲಿ ಸಂಸಾರಗಳು ಅವಿಭಾಜ್ಯ ಕುಟುಂಬಗಳಾಗಿ ಜೀವನ ನಡೆಸುತ್ತಿದ್ದವು. ಆ ತಲೆಮಾರಿಗೆ ವೃದ್ಧಾಶ್ರಮದ ಅಗತ್ಯವಿರಲಿಲ್ಲ. ಈಗಲೂ ಕೆಲವು ಸಂಸಾರಗಳು ಜಾಯಿಂಟ್ ಫ್ಯಾಮಿಲಿ ವ್ಯವಸ್ಥೆಯಲ್ಲಿ ಬದುಕುತ್ತಿವೆ. ಆದರೆ ಇಂದಿನ ಕೌಟುಂಬಿಕ ವ್ಯವಸ್ಥೆಯಲ್ಲಿ, ಬದಲಾಗುತ್ತಿರುವ ಭಾರತದಲ್ಲಿ, ಕಿರಿಯ ದಂಪತಿಗಳು ತಮ್ಮ ವೃತ್ತಿಯ ಒತ್ತಡದಿಂದಾಗಿ ಅಥವಾ ವಿದೇಶದಲ್ಲಿ ಇರಬೇಕಾದ ಪರಿಸ್ಥಿತಿಯಿಂದಾಗಿ ತಮ್ಮ ಹಿರಿಯ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದೇ ಇರುವ ಸನ್ನಿವೇಶಗಳಲ್ಲಿ ವೃದ್ಧಾಶ್ರಮಗಳು ಅನಿವಾರ್ಯವಾಗಿವೆ.

ಇನ್ನು ವಿದೇಶದಲ್ಲಿ ನೆಲೆಸಿರುವ ಭಾರತೀಯರು, ಕನ್ನಡಿಗರು ತಾವು ತಮ್ಮ ಸಂಧ್ಯಾ ಕಾಲದಲ್ಲಿ ಎಲ್ಲಿ ನೆಲೆಸುವುದು ಎಂಬ ದ್ವಂದದಲ್ಲಿ ಬದುಕುತ್ತಿದ್ದಾರೆ. ನಿವೃತ್ತಿ ಪಡೆದ ನಂತರ ಈ ವಿದೇಶದಲ್ಲಿ ಬದುಕುವ ಆಸಕ್ತಿ ಕೆಲವರಲ್ಲಿ ಕಡಿಮೆಯಾಗಿ ತಾಯ್ನಾಡಿನ ತುಡಿತ ಹೆಚ್ಚಾಗುವುದು ಸಹಜ. ಭಾಷೆ ಮತ್ತು ಸಾಂಸ್ಕೃತಿಕ ಪ್ರಜ್ಞೆ ಜಾಗೃತವಾಗಿರುವವರಿಗೆ ಇದು ಹೆಚ್ಚಿನ ಸಮಸ್ಯೆಯಾಗಬಹುದು. ಇಂಗ್ಲಿಷ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅಪ್ಪಿಕೊಂಡು ಬದುಕುತ್ತಿರುವವರಿಗೆ ಮತ್ತು ಬಲವಾದ ಸಾಂಸಾರಿಕ ನೆಂಟುಗಳು ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚಾಗಿರುವವರಿಗೆ ಭಾರತಕ್ಕೆ ಮರಳುವ ಹಂಬಲ ಕಡಿಮೆ ಎನ್ನಬಹುದು. ಈ ವಿಚಾರ ನಮ್ಮ ಮೊದಲನೇ ಪೀಳಿಗೆಯವರಿಗಷ್ಟೇ ಪ್ರಸ್ತುತ ಸಮಸ್ಯೆ.

ಭಾರತಕ್ಕೆ ಮರಳಿ ಬರುಲು ಇಚ್ಛಿಸುವ ಅನಿವಾಸಿಗಳು, ನಿವೃತ್ತಿಯಲ್ಲಿ ಸ್ವಲ್ಪ ಹಣ ಉಳಿಸಿಕೊಂಡವರು ಇಲ್ಲಿಯ ಚಳಿಗೆ ಬೇಸತ್ತು, ಇಳಿ ವಯಸ್ಸಿನಲ್ಲಿ ಭಾರತಕ್ಕೆ ಬಂದು ನೆಲಸ ಬಾರದೇಕೆ ಎಂದು ಆಲೋಚಿಸುತ್ತಿದ್ದಾರೆ. ಇನ್ನು ಇತ್ತೀಚಿಗೆ ನಿವೃತ್ತಿ ಪಡೆದು ಒಳ್ಳೆ ಆರೋಗ್ಯವನ್ನು ಕಾಪಾಡಿಕೊಂಡಿರುವವರು ಚಳಿಗಾಲದಲ್ಲಿ ಬ್ರಿಟನ್ನಿನ ಚಳಿಯನ್ನು ತಪ್ಪಿಸಿಕೊಂಡು ೪-೬ ತಿಂಗಳವರೆಗೆ ಭಾರತದಲ್ಲಿ ವಾಸಮಾಡುವ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ. ಅಲ್ಲೊಂದು ಫ್ಲ್ಯಾಟ್ ತೆಗೆದುಕೊಂಡು ಅಲ್ಲೂ-ಇಲ್ಲೂ ವಾಸವಾಗಿರುತ್ತಾ ‘ಬೆಸ್ಟ್ ಆಫ್ ಬೋತ್ ವರ್ಲ್ಡ್ಸ್’ ಎನ್ನುವ ಖುಷಿಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಒಂದು ವ್ಯವಸ್ಥೆ ಎಲ್ಲಿಯವರಗೆ ಎಂಬ ಪ್ರಶ್ನೆ ಮೂಡುತ್ತದೆ. ನನ್ನ ಅಂದಾಜಿನಲ್ಲಿ, ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಎನ್ನ ಬಹುದು. ಬ್ರಿಟನ್ನಿನಿಂದ ಭಾರತಕ್ಕೆ ಹಿಂದೆ ಮುಂದೆ ಪ್ರಯಾಣಿಸುವುದು ಚಿಕ್ಕ ವಯಸ್ಸಿನಲ್ಲಿ ಸರಾಗವಾದರೂ ಒಂದು ವಯಸ್ಸಾದ ಮೇಲೆ ಕಠಿಣವಾಗಬಹುದು. ಆರೋಗ್ಯ ಕೈಕೊಡಬಹುದು, ವಿಮಾನ ದರಗಳು ವರ್ಷ ವರ್ಷ ಹೆಚ್ಚಾಗುತ್ತಿದ್ದು ಒಂದು ಹಂತದಲ್ಲಿ ದುಬಾರಿ ಎನಿಸ ಬಹುದು. ಮುಂಬರುವ ಯಾವುದೋ ಒಂದು ಹಂತದಲ್ಲಿ ಈ ಹಿರಿಯರು ಎರಡು ಕಡೆ ವಾಸ ಮಾಡುವುದನ್ನು ಬಿಟ್ಟು ಒಂದೆಡೆ ನೆಲೆಸುವ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ.

ಹದಗೆಡುತ್ತಿರುವ ಅನಾರೋಗ್ಯದಿಂದ ತಮ್ಮ ದಿನ ನಿತ್ಯ ಬದುಕಿಗೆ ಇನ್ನೊಬ್ಬರನ್ನು ಅವಲಂಬಿಸಬೇಕಾದ ಸನ್ನಿವೇಶದಲ್ಲಿ, ಬ್ರಿಟನ್ನಿನಲ್ಲಿ ಸಾಕಷ್ಟು ಹಣ ತೆರಬೇಕಾಗುತ್ತದೆ. ನರ್ಸಿಂಗ್ ಹೋಂ ಸೇರಲು ತಮ್ಮ ತಮ್ಮ ಮನೆಗಳನ್ನು ಅಡವಿಡಬೇಕಾದ ಅನಿವಾರ್ಯವನ್ನು ಕಂಡಿದ್ದೇವೆ, ಕೇಳಿದ್ದೇವೆ. ಈ ನರ್ಸಿಂಗ್ ಹೋಮ್ ಅಥವಾ ರೆಸಿಡೆನ್ಶಿಯಲ್ ಹೋಂ ಗಳಲ್ಲಿ ಬ್ರಿಟಿಷ್ ಆಹಾರವನ್ನು ಸೇವಿಸುತ್ತಾ, ಗೊತ್ತು ಪರಿಚಯವಿಲ್ಲದ ಬೇರೊಂದು ಸಂಸ್ಕೃತಿಯ ಜನರೊಂದಿಗೆ ಬೆರೆಯುತ್ತಾ ಕೊನೆ ಘಳಿಗೆಯನ್ನು ಕಳೆಯುವುದು ಹೇಗೆ? ಎಂಬ ಚಿಂತೆ ಮೂಡುವುದು ಸಹಜವೇ. ತಮ್ಮ ತಮ್ಮ ಮನೆಗಳಲ್ಲೇ ಸಹಾಯಕ ಸಿಬಂದ್ಧಿಗಳನ್ನು ಇಟ್ಟುಕೊಂಡು ಬದುಕುವುದಕ್ಕೆ ಬಹಳ ಹಣ ಬೇಕು. ಈ ಹಿನ್ನೆಲೆಯಲ್ಲಿ ಇದರ ಅರ್ಧ ದುಡ್ಡಿಗೆ ಭಾರತದಲ್ಲಿ ಯಾವುದಾದರೂ ವೃದ್ಧಾಶ್ರಮದಲ್ಲಿ ಅಥವಾ ಫ್ಲ್ಯಾಟಿನಲ್ಲಿ ಸಹಾಯಕ ಸಿಬಂದ್ಧಿಯನ್ನು ಗೊತ್ತುಮಾಡಿಕೊಂಡು ಬದುಕಬಹುದು ಎಂಬ ಒಂದು ಆಯ್ಕೆ ನಮ್ಮ ಕಲ್ಪನೆಗೆ ಒದಗಿ ಬರುತ್ತಿದೆ. ಇದು ಸಾಧ್ಯ ಎಂದು ಕೆಲವು ಹಿರಿಯರು ತಮ್ಮ ಅನುಭವದಿಂದ ತಿಳಿಸಿದ್ದಾರೆ.

ಇದೇ ಒಂದು ಸನ್ನಿವೇಶದಲ್ಲಿ ಸಿಲುಕಿದ್ದ ನಮ್ಮ ಕನ್ನಡ ಬಳಗದ ಹಿರಿಯ ಸದಸ್ಯರು ಮತ್ತು ದಂಪತಿಗಳಾದ ಡಾ.ಅಪ್ಪಾಜಿ ಗೌಡ ಮತ್ತು ಡಾ.ಭಾನುಮತಿ ಅವರು ಬೆಂಗಳೂರಿಗೆ ತೆರಳಿ ಅಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಇರುವ ಪ್ರೈ ಮುಸ್ ರಿಫ್ಲೆಕ್ಷನ್ಸ್ ಎಂಬ ಹಿರಿಯರ ಮನೆ ಅಥವಾ ಆಶ್ರಯ ಸಂಕೀರ್ಣ ( Residential complex) ಎನ್ನಬಹುದಾದ ಸಂಸ್ಥೆಯಲ್ಲಿ ವಾಸವಾಗಿದ್ದರು. ಡಾ ಅಪ್ಪಾಜಿ ಅವರ ಅನಾರೋಗ್ಯ ಉಲ್ಪಣಗೊಂಡಾಗ ತಕ್ಕ ಮಟ್ಟಿಗೆ ಆರೋಗ್ಯವಂತರಾದ ಭಾನುಮತಿ ಆ ನಿರ್ಧಾರವನ್ನು ತೆಗೆದುಕೊಂಡು ಅಪ್ಪಾಜಿ ಅವರ ನಿಧನದ ಮುಂಚಿತ
ಹಲವಾರು ವರ್ಷಗಳನ್ನು ಗುಣಾತ್ಮಕ ಬದುಕಿನಲ್ಲಿ ಕಳೆದು ನೆಮ್ಮದಿಯನ್ನು ಪಡೆದುಕೊಂಡರು. ಈಗ ಭಾರತದಲ್ಲಿ ಆರೋಗ್ಯ ಸೌಲಭ್ಯಗಳು ಎಂದಿಗಿಂತ ಇಂದು ಚೆನ್ನಾಗಿವೆ. ಬ್ರಿಟನ್ನಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಕುಂದು ಕೊರತೆಗಳು ಹಿರಿಯ ನಾಗರೀಕರಿಗೆ ಅಸಮಾಧಾನವನ್ನು ಮತ್ತು ಆತಂಕವನ್ನು ಉಂಟುಮಾಡುತ್ತಿದೆ. ಹೀಗಿರುವಾಗ ಭಾರತದಲ್ಲಿ, ನಮ್ಮದೇ ನಾಡಿನಲ್ಲಿ ನಮ್ಮ ಸಂಧ್ಯಾಕಾಲವನ್ನು ಕಳೆಯುವುದು ಸಾಧ್ಯ ಎಂಬ ಅರಿವು ಉಂಟಾಗುತ್ತಿದೆ. ಎಲ್ಲ ದೇಶಗಳಲ್ಲೂ ಅಲ್ಲಲ್ಲಿಯ ಸಮಸ್ಯೆಗಳು ಇರುತ್ತವೆ. ಒಬ್ಬರಿಗೆ ಒಂದು ಆಯ್ಕೆ ಸೂಕ್ತವಾಗಿದ್ದಲ್ಲಿ ಅದು ಇನ್ನೊಬ್ಬರಿಗೆ ಅನುಕೂಲವಾಗದಿರಬಹುದು. ಹೀಗಾಗಿ ಅನಿವಾಸಿ ಹಿರಿಯರು ತಮ್ಮ ವೃದ್ಧಾಪ್ಯದಲ್ಲಿ ಎಲ್ಲಿ ಖಾಯಂ ಆಗಿ ನೆಲಸಬೇಕು ಎಂಬ ವಿಚಾರವನ್ನು ಅವರವರ ವೈಯುಕ್ತಿಕ ಅರೋಗ್ಯ, ಸಾಂಸಾರಿಕ ನೆಂಟುಗಳು, ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳು ನಿರ್ಧರಿಸುತ್ತವೆ.

ನಾನು ಕಂಡಿರುವ ಹಿರಿಯರ ಮನೆ ಸಮುಚ್ಛಯಗಳಲ್ಲಿ ಪ್ರೈಮಸ್ ಬಹಳ ಅನುಕೂಲವಾಗಿ ಉತ್ತಮ ಗುಣಮಟ್ಟದ್ದಾಗಿದೆ. ಇದು ಬೆಂಗಳೂರಿನ ಹೊರವಲಯದಲ್ಲಿದ್ದು ಪ್ರಶಾಂತವಾಗಿದೆ. ಕನಕಪುರ ರಸ್ತೆಯಲ್ಲಿರುವ ರವಿ ಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆಸುಪಾಸಿನಲ್ಲಿದೆ. ಇಲ್ಲಿ ಒಟ್ಟಾರೆ ೧೬೩ ಫ್ಲ್ಯಾಟ್ಗಳಿವೆ. ಫ್ಲ್ಯಾಟ್ಗಳನ್ನು ಕೊಂಡು ಅಲ್ಲಿ ವಾಸವಾಗಿರಬಹುದು. ಕೆಳಹಂತದಲ್ಲಿರುವ ಭೋಜನ ಶಾಲೆಯಲ್ಲಿ ಊಟ, ಉಪಹಾರ
ಇವುಗಳ ವ್ಯವಸ್ಥೆ ಇದೆ. ಕಟ್ಟಡದ ಸುತ್ತು ವಿಹರಿಸಲು ಸಾಧ್ಯವಿದೆ, ಅಲ್ಲೇ ಒಂದು ಸಣ್ಣ ದೇವಸ್ಥಾನವಿದೆ, ಲೈಬ್ರರಿ ಇದೆ, ಈಜುಕೊಳವಿದೆ, ಮತ್ತು ಒಂದು ಸಾರ್ವಜನಿಕ ಸಭಾಂಗಣವಿದೆ. ಈ ಸಮುಚ್ಚಯದಲ್ಲೇ ಒಂದು ಸಣ್ಣ ಅರೋಗ್ಯ ಕೇಂದ್ರವಿದ್ದು, ಬೆಳಗಿನಿಂದ ಸಂಜೆಯವರೆಗೆ ಒಬ್ಬ ವೈದ್ಯರಿರುತ್ತಾರೆ, ಉಳಿದಂತೆ ಒಬ್ಬ ನಿವಾಸಿ ನರ್ಸ್ ಇರುತ್ತಾರೆ.
ಇಲ್ಲಿಯ ನಿವಾಸಿಯೊಬ್ಬರು ಆಸ್ಪತ್ರೆಗೆ ಸೇರುವ ಸಂದರ್ಭ ಉಂಟಾದಲ್ಲಿ ಈ ಸಂಸ್ಥೆಗೇ ಸೇರಿದ ಆಂಬುಲೆನ್ಸ್ ಸೌಲಭ್ಯವಿದೆ. ರೋಗಿಯನ್ನು ವರ್ಗಾಯಿಸಿ ಆಸ್ಪತ್ರೆಗೆ ನೋಂದಾಯಿಸುವ ತನಕ, ಸಂಸ್ಥೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಮಕ್ಕಳು ಅಥವಾ ಸಂಬಂಧಿಗಳು ಬರುವವರೆಗೆ ಕಾಯುವ ಅವಶ್ಯಕತೆ ಇಲ್ಲ.

ಇಲ್ಲಿ ದೀಪಾವಳಿ, ರಾಜ್ಯೋತ್ಸವ ಸಮಾರಂಭಗಳು, ಪ್ರವಚನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕಳೆದ ವರ್ಷ ನನ್ನ ಪುಸ್ತಕದ ಬಗ್ಗೆ, ನನ್ನ ಸಮ್ಮುಖದಲ್ಲಿ ಒಂದು ಸಾಹಿತ್ಯ ಸಂವಾದವನ್ನು ಏರ್ಪಡಿಸಲಾಗಿತ್ತು ಎಂಬುದನ್ನು ಇಲ್ಲಿ ನೆನೆಯುತ್ತೇನೆ. ಈ ಹಿರಿಯರು ಸಂಗೀತ, ನೃತ್ಯ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರೂ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ವಿಶೇಷವಾದ ಸಂಗತಿ.

ಡಾ. ಭಾನುಮತಿಯವರು ಉತ್ತಮ ಸಂಘಟಕರು. ಹಿಂದೆ ಅವರು ಕನ್ನಡ ಬಳಗದ ಸಕ್ರಿಯ ಅಧ್ಯಕ್ಷರಾಗಿ ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳನ್ನು, ಮೈಲಿಗಲ್ಲು ಸಂಭ್ರಮಗಳನ್ನು ಆಯೋಜಿಸಿದ್ದಾರೆ, ಅವರು ಬಹಳ ಕ್ರಿಯಾಶೀಲರು. ಅವರು ಬೆಂಗಳೂರಿನ ಪ್ರೈಮಸ್ ಸಂಸ್ಥೆಯಲ್ಲಿ ಇದೇ ಕ್ರಿಯಾಶೀಲತೆಯನ್ನು ಇತರರೊಂದಿಗೆ ಹಂಚಿಕೊಂಡು ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಅವರ ನೇತೃತ್ವದಲ್ಲಿ ಅನೇಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹಿರಿಯರೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿರಿಯರು ಬದುಕಿನ ಪ್ರೀತಿಯನ್ನು ಉಳಿಸಿಕೊಂಡು, ಜೀವನೋತ್ಸಾಹದಲ್ಲಿ ಬದುಕುತ್ತಿರುವುದು ಶ್ಲಾಘನೀಯ. ಜೀವನದ ಸಂಧ್ಯಾಕಾಲದಲ್ಲಿ ಮೂಡುವ ಜಿಗುಪ್ಸೆ, ವೈರಾಗ್ಯ, ಒಂಟಿತನ, ಖಿನ್ನತೆಯನ್ನು ತರಬಹುದು. ಆದರೆ ಈ ಹಿರಿಯರು ತಮ್ಮ ಕಷ್ಟಗಳನ್ನು ಹತ್ತಿಕ್ಕಿ ತಮ್ಮ ಬದುಕನ್ನು ತಮಗೆ ಬೇಕಾದಂತೆ ರೂಪಿಸಿಕೊಂಡು ಖುಷಿಯಾಗಿದ್ದಾರೆ. ಇದು ಮೆಚ್ಚಬೇಕಾದ ಸಂಗತಿ. ಈ ಹಿರಿಯರಲ್ಲಿ ಒಂದು ನೆಮ್ಮದಿ ಇದೆ, ಸಂತೃಪ್ತಿ ಇದೆ ಎಂಬುದು ನನ್ನ ಗ್ರಹಿಕೆ. ಇಲ್ಲಿ ಒಬ್ಬರಿಗಿನೊಬ್ಬರು ಆಸರೆಯಾಗಿದ್ದಾರೆ. ಇಲ್ಲಿ ಪರಸ್ಪರ ಸಂಪರ್ಕ, ಪ್ರೀತಿ, ಕಾಳಜಿ ಮತ್ತು ವಿಶ್ವಾಸಗಳಿವೆ. ಎಲ್ಲರಿಗೂ ಎಲ್ಲರ ಪರಿಚಯವಿದೆ. ಒಂದು ರೀತಿ ನಮ್ಮ ಯು.ಕೆ ಕನ್ನಡ ಬಳಗದ ಸಮುದಾಯವಿದ್ದಂತೆ ಎನ್ನ ಬಹುದು. ನಾನು ಇಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದೇನೆ ಮತ್ತು ಇವರ ಒಡನಾಟವನ್ನು ಕಂಡಿದ್ದೇನೆ. ಅಪ್ಪಾಜಿ ಅವರು ವೀಲ್ ಚೇರಿನಲ್ಲಿ ಒಮ್ಮೆ ಭೋಜನ ಶಾಲೆಗೆ ಬಂದಾಗ ಅಲ್ಲಿಯ ಇತರ ನಿವಾಸಿಗಳು ಬಂದು ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಆತ್ಮೀಯ ಕುಶಲೋಪರಿಯಲ್ಲಿ ತೊಡಗಿದ್ದು ನನಗೆ ಇಂದಿಗೂ ನೆನಪಿದೆ. ಇಲ್ಲಿ ಹಿರಿಯರಿಗೆ ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಅನುಭವ ದೊರೆಯುತ್ತಿದೆ. ಈ ರೀತಿಯ ಒಂದು ಗುಣಮಟ್ಟದ ಆತ್ಮೀಯ ಬದುಕನ್ನು ಬ್ರಿಟನ್ನಿನ ಯಾವುದೇ ನರ್ಸಿಂಗ್ ಹೋಮ್ ಗಳಲ್ಲಿ ನಿರೀಕ್ಷಿಸುವುದು ಸಾಧ್ಯವಿಲ್ಲ. ಎಲ್ಲ ಸೌಲಭ್ಯಗಳು ದೊರೆತರು ಆ ಸಾಂಸ್ಕೃತಿಕ ಕೊರತೆ ನೀಗುವುದಿಲ್ಲ ಎಂಬುದು ಸತ್ಯ.

ಬ್ರಿಟನ್ನಿನಲ್ಲಿ ಮುಂದಕ್ಕೆ ಕನ್ನಡ ಬಳಗವೇ ಒಂದು ಹಿರಿಯರ ಮನೆಯನ್ನು ಕಟ್ಟ ಬಹುದಲ್ಲವೇ? ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಹಾದುಹೋಗಿದೆ. ಅದರ ಬಗ್ಗೆ ಎಲ್ಲ ಅನಿವಾಸಿ ಹಿರಿಯರು ಚಿಂತಿಸಬೇಕಾಗಿದೆ. ನಮ್ಮ ಕನ್ನಡ ಬಳಗದ ಅದೆಷ್ಟೋ ಹಿರಿಯರಿಗೆ ಬೆಂಗಳೂರಿನಲ್ಲಿ ಹೋಗಿ ಖಾಯಂ ಆಗಿ ನೆಲೆಸುವ ಆಸೆ ಇದ್ದರೂ ಅಲ್ಲಿ ಹೋಗಿ ಬದುಕಬಲ್ಲೆವು ಎಂಬ ಆತ್ಮ ವಿಶ್ವಾಸ ಇಲ್ಲದಿರಬಹುದು ಮತ್ತು ಬ್ರಿಟನ್ನಿನಲ್ಲಿರುವ ತಮ್ಮ ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ತೊರೆದು ಹೋಗುವುದು ಕಷ್ಟವಿರಬಹುದು. ಈ ಒಂದು ಹಿನ್ನೆಲೆಯಲ್ಲಿ ಬ್ರಿಟನ್ನಿನಲ್ಲಿ ನೆಲೆಸಿರುವ ಭಾರತೀಯರೇ, ಭಾರತೀಯರಿಗಾಗಿ ನಡೆಸ ಬಹುದಾದ ನರ್ಸಿಂಗಹೋಮ್ ಗಳ, ಸಂಧ್ಯಾ ದೀಪಗಳ ಅಗತ್ಯವಿದೆ.

ನಾನು ಇಲ್ಲಿಯವರೆಗೆ 'ಸಂಧ್ಯಾದೀಪ' ಎಂಬ ಪದವನ್ನು ಹಿರಿಯರ ಮನೆ ಎಂಬುದನ್ನು ಸೂಚಿಸಲು ಒಂದು ರೂಪಕವಾಗಿ ಬಳೆಸಿದ್ದೇನೆ. ಇದಕ್ಕೆ ಇನ್ನೊಂದು ಕಾರಣವಿದೆ. ನನ್ನ ತಾಯಿ ರುದ್ರಾಣಿ ಅವರು ೩೦ ವರ್ಷಗಳ ಹಿಂದೆಯೇ ಸಂಧ್ಯಾದೀಪ ಎಂಬ ವೃದ್ಧಾ ಶ್ರಮವನ್ನು ಬೆಂಗಳೂರಿನಲ್ಲಿ ಹುಟ್ಟು ಹಾಕಿದ್ದು ಅದು ಇಂದಿಗೂ ವೃದ್ಧರಿಗೆ ಆಶ್ರಯ ನೀಡುತ್ತಾ ಬಂದಿದೆ. ಆ ಸಂಸ್ಥೆಗೆ ನಾನು ಪ್ರೀತಿಯಿಂದ ಬರೆದುಕೊಟ್ಟ ಕವನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಒಂದು ಬರಹಕ್ಕೆ ನನ್ನ ಈ ಕವಿತೆ ಹೊಂದುವಂತಿದೆ ಎಂದು ಭಾವಿಸುತ್ತೇನೆ.

ಸಂಧ್ಯಾ ದೀಪ
ಡಾ. ಜಿ. ಎಸ್. ಶಿವಪ್ರಸಾದ್

ಪ್ರೀತಿ ವಾತ್ಸಲ್ಯದ ಸಂಧ್ಯಾದೀಪ
ಕರುಣೆಯ ಕುಡಿಯಲಿ ಉರಿಯುವ ದೀಪ
ಭರವಸೆ ನೀಡುವ ನಂದಾ ದೀಪ
ಕಾರ್ಮೋಡದ ಸಂಜೆಯ ದಾರಿಯ ದೀಪ

ಸವೆದಿಹ ಕೀಲಿಗೆ, ಮಬ್ಬಿನ ಕಣ್ಣಿಗೆ
ನಡುಗುವ ಕೈಯಿಗೆ, ಬಾಗಿದ ಬೆನ್ನಿಗೆ,
ಅಂದಿನ ತಪ್ಪಿಗೆ, ಇಂದಿನ ಮುಪ್ಪಿಗೆ
ಇನ್ನಿಲ್ಲ ಶಾಪ, ಪರಿತಾಪ

ಕಂಡರಿಯದ ಊರಿಗೆ ದೂರದ ಪಯಣ
ಬಸವಳಿದವರಿಗಿದು ಕೊನೆಯ ನಿಲ್ದಾಣ
ನಿರೀಕ್ಷೆಗೆ ಜಿಗುಪ್ಸೆಗೆ ವಿಶ್ರಾಂತಿಯ ತಾಣ
ಮಮತೆ ಆರೈಕೆಯ ಚಿಲುಮೆ ಇದು ಕಾಣ.
*
ವೃದ್ಧಾಪ್ಯದ ಬಗ್ಗೆ ಇನ್ನೊಂದು "ಅಂದು -ಇಂದು" ಎಂಬ ಪದ್ಯವನ್ನು ಇಲ್ಲಿ ಪ್ರಕಟಿಸಲಾಗಿದೆ. 

ಈ ಪದ್ಯವನ್ನು ಮೈಸೂರಿನಲ್ಲಿ ನೆಲೆಸಿರುವ ರೆಡಿಯಾಲಜಿಸ್ಟ್ ಡಾ. ರಘುನಾಥ್ ಅವರು ಅಂತರ್ಜಾಲದಲ್ಲಿ ಕಂಡ ಇಂಗ್ಲಿಷ್ ಪದ್ಯದಿಂದ ಪ್ರೇರಿತಗೊಂಡು ರಚಿಸಿದ್ದಾರೆ. ಇದನ್ನು ಹಂಚಿಕೊಂಡ ನಮ್ಮ ಬಳಗದ ಸದಸ್ಯರಾದ ಡಾ.ಮಂದಗೆರೆ ವಿಶ್ವನಾಥ್ ಅವರಿಗೆ ಕೃತಜ್ಞತೆಗಳು. ಪದ್ಯವು ಈ ಸಂದರ್ಭಕ್ಕೆ ಉಚಿತವಾಗಿದೆ ಎಂದು ಭಾವಿಸುತ್ತೇನೆ.

ಅಂದು – ಇಂದು
ಡಾ. ರಘುನಾಥ್

ಏಳುವುದೇ (ನಿದ್ದೆಯಿಂದ) ಕಷ್ಟ
ಈಗ ನಿದ್ದೆ ಮಾಡುವುದೇ ಕಷ್ಟ

ಆಗೆಲ್ಲ ಮೊಡವೆಯ ಯೋಚನೆ
ಈಗೆಲ್ಲ ಸುಕ್ಕಿನ ಯೋಚನೆ

ಅಂದು ಯಾರೂ ನಮಗೆ ಬೇಡ
ಇಂದು ಯಾರಾದರೂ ಇದ್ದರೆ ಸಾಕು

ಅಂದು ಯಾರ ಕೈ ಹಿಡಿಯಲೆಂದು
ಇಂದು ಯಾರಾದರೂ ಕೈ ಹಿಡಿದರೆ ಸಾಕೆಂದು

ಅಂದು ಸುಂದರತೆ ನೋಡುವ ತವಕಾಟ
ಇಂದು ನೋಡಿದರಲ್ಲಿ ಸುಂದರತೆ ಕಾಣುವ ಸೆಣಸಾಟ

ಅಂದು ನಾನೇ ಎಂದಿಗೂ
ಇಂದು ನನ್ನ ಸರದಿ ಎಂದಿಗೂ

ಅಂದು ಎಲ್ಲರ ಹೃದಯ ಮಿಡಿತ ನಾನೇ
ಇಂದು ಅದು ನಿಂತಿತೆಂಬ ಭಾವನೆ

*
ಕನ್ನಡ ರಾಜ್ಯೋತ್ಸವ; ಕೆಲವು ಐತಿಹಾಸಿಕ ಹಿನ್ನೆಲೆಗಳು

ಶ್ರೀಮತಿ ಪುಷ್ಪ , ಪ್ರೈಮಸ್ ಹಿರಿಯರ ಮನೆ

ಡಿ.ಎಲ್ ಪುಷ್ಪ ಅವರ ಪರಿಚಯ ಅವರ ಮಾತುಗಳಲ್ಲೇ ಹೀಗಿದೆ:
"ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ವೈದ್ಯರಾಗಿದ್ದ ನನ್ನ ತಂದೆಯವರಿಗಿದ್ದ ಕನ್ನಡ ಸಾಹಿತ್ಯದ ಆಳವಾದ ಅರಿವು ನನ್ನ ಮೇಲೆ ಪ್ರಭಾವ ಬೀರಿತು.ತಾಯಿಯವರಿಂದ ದೇವರನಾಮಗಳನ್ನು ಕಲಿತೆ. ಕನ್ನಡ ಮಾಧ್ಯಮ ದಲ್ಲಿ ಶಿಕ್ಷಣ ಪಡೆದ ನನಗೆ ಕನ್ನಡ ಕಾದಂಬರಿಗಳನ್ನು ಓದುವ ಹವ್ಯಾಸವಿತ್ತು. ಭಾವಗೀತೆಗಳನ್ನು ರೇಡಿಯೋದಲ್ಲಿ ಕೇಳಿ ಕಲಿಯುತ್ತಾ ಶ್ರೀಮತಿ ಎಚ್.ಆರ್.ಲೀಲಾವತಿಯವರ ಅಭಿಮಾನಿಯಾದೆ. ಸಂಗೀತ ಸ್ವಲ್ಪ ಗೊತ್ತು. ಮುಂದೆ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗಲೂ.ಕನ್ನಡದ ಪತ್ರಗಳಿಗೆ ಕನ್ನಡದಲ್ಲೇ ಉತ್ತರಿಸುತ್ತಿದ್ದೆ. ಈಗ ಸ್ವಲ್ಪ ಮಟ್ಟಿಗಾದರೂ ಕನ್ನಡ ಓದುವ ಭಾವಗೀತೆ ಕೇಳುವ ಹಾಡುವ ಹವ್ಯಾಸಗಳು ನನ್ನ ಬಾಳನ್ನು ಮುನ್ನಡೆಸುವ ಶಕ್ತಿಗಳಾಗಿವೆ"

***

ಕರ್ನಾಟಕ ರಾಜ್ಯೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಒಂದು ಸುಧೀರ್ಘ ಹೋರಾಟದ ಕಥೆ ಇದೆ. ಅಪಮಾನನವನ್ನು ಸಹಿಸಿದೇ ಸ್ವಾಭಿಮಾನವನ್ನು ಉಳಿಸಿಕೊಳ್ಳುವಲ್ಲಿ ಕನ್ನಡ ಸಂಸ್ಕೃತಿ ಉದಯವಾಗಿದೆ. ಪಲ್ಲವ ಕ್ಷತ್ರಿಯರಿಂದ ಆದ ಅಪಮಾನವನ್ನು ಸಹಸಿಕೊಳ್ಳದೇ ಸ್ವಾಭಿಮಾನದ ಕಿಚ್ಚಿನಿಂದ "ಶರ್ಮ" ಎಂಬ ಬ್ರಾಹ್ಮಣ ಸೂಚಿಕ ಪದವನ್ನು ತ್ಯಜಿಸಿ ಖಡ್ಗ ಹಿಡಿದು ಸೈನ್ಯ ಕಟ್ಟಿ ಹೋರಾಡಿ ಜಯಶೀಲನಾದವನೇ "ಮಯೂರ ವರ್ಮಾ", ಕನ್ನಡಿಗ ರಾಜವಂಶ ಕದಂಬರ ದೊರೆ. ಒಂದು ಸಂಸ್ಕೃತಿಯಂದರೆ ಆ ಜನಾಂಗದ ಜೀವನ ವಿಧಾನ, ಅದರ ಚರಿತ್ರೆ. ಸ್ವಾಭಿಮಾನ ಹಾಗೂ ಸಮದೃಷ್ಟಿಯುಳ್ಳವರಾಗಿದ್ದು, ಶೂರರು, ಉದಾರ ಹೃದಯಗಳೂ ಆಗಿದ್ದ ಚಾಲುಕ್ಯರು, ಹೊಯ್ಸಳರು ಮತ್ತು ರಾಷ್ಟ್ರಕೂಟ ದೊರೆಗಳ ಆಳ್ವಿಕೆಯಲ್ಲಿ ಸ್ವಂತಿಕೆಯನ್ನು ಮತ್ತು ಆತ್ಮವಿಶ್ವಾಸವನ್ನು ಬೆಳಸಿಕೊಂಡು ಕರ್ನಾಟಕ ಸಂಸ್ಕೃತಿ ರೂಪುಗೊಂಡಿತು. "ಮನುಷ್ಯ ಜಾತಿ ತಾನೊಂದೆ ವಲಂ" ಎಂಬುದು ಆದಿ ಕವಿ ಪಂಪನ ಮಾತು. ಮನುಷ್ಯವರ್ಗವೆಲ್ಲ ಒಂದು ಎಂಬ ತತ್ವವನ್ನು ತಮ್ಮ ಧರ್ಮದ ಚೌಕಟ್ಟಿನಲ್ಲೆ ಕನ್ನಡ ಜನ ಕಂಡಿದ್ದಾರೆ. ದಯೆಯೇ ಧರ್ಮದ ಮೂಲವೆಂದು ಬಸವಣ್ಣ ಹೇಳಿದ್ದರೆ, ಹೊಲಯ ಹೊರಗಿಹನೇ? ಊರೊಳಗಿಲ್ಲವೇ? ಎಂದು ಪುರಂದರದಾಸರು ಹೇಳಿದ್ದಾರೆ.

ಧಾರ್ಮಿಕ ಸಮನ್ವಯವಿದ್ದ ಕನ್ನಡನಾಡಿನಲ್ಲಿ ಶೈವ, ವೈಷ್ಣ , ಭೌದ್ಧ ,ಜೈನ ಮತಗಳ ಅಭಿವೃದ್ಧಿ ಹೊಂದಿದವು. ಅಪ್ರತಿಮ ಶಿಲ್ಪಕಲೆಯನ್ನೂಳಗೊಂಡ, ಬಾದಾಮಿ, ಐಹೊಳೆ ,ಪಟ್ಟದಕಲ್ಲು, ಬೇಲೂರು, ಹಳೇಬೀಡುಗಳ ದೇವಾಲಯಗಳು ನಿರ್ಮಾಣವಾದವು. ಪುರಂದರದಾಸರಂತ ವಾಗ್ಮಿಗಳಿಗೆ ಮತ್ತು ಪಂಪ, ರನ್ನ ಜನ್ನ , ನಾಗವರ್ಮ ಮತ್ತು ಕುಮಾರವ್ಯಾಸರಂಥ ಮಹಾ ಕವಿಗಳಿಗೆ ಜನ್ಮ ಕೊಟ್ಟ ನಾಡಿದು. ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಾಮಾನತೆಯನ್ನು ಸಾರಿದ ಬಸವಣ್ಣ, ಅಲ್ಲಮಪ್ರಭು ,ಅಕ್ಕಮಹಾದೇವಿಯವರನ್ನು ಹೇಗೆ ಮರೆಯಲಾದೀತು? ಹೀಗೆ ಎಲ್ಲ ರಂಗಗಳಲ್ಲಿಯೂ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕನ್ನಡ ಪ್ರದೇಶಗಳು ವಿಜಯನಗರ ಸಾಮ್ರಾಜ್ಯ ಪತನದ ನಂತರ ಕನ್ನಡಿಗರ ಕೈ ತಪ್ಪಿ ಮುಂಬೈ, ಹೈದರಾಬಾದ್, ಮದ್ರಾಸ್ ಪ್ರಾಂತ್ಯಗಳಲ್ಲಿ ಹಂಚಿಹೋದವು. ಕನ್ನಡಿಗರು ಎರಡನೇ ದರ್ಜೆಯ ಪ್ರಜೆಗಳಾದರು. ಭೌಗೋಳಿಕವಾಗಿ ಒಂದಾಗಬೇಕಾದ ಅವಶ್ಯಕತೆ ಉಂಟಾಯಿತು. ಹೀಗಾಗಿ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಾಜ್ಞರಾದವರು, ಸಾಹಿತಿಗಳು, ಕವಿಗಳು, ಕನ್ನಡ ಪತ್ರಿಕೆಗಳು, ಕನ್ನಡ ಸಂಘಟನೆಗಳು, ಕಲಾವಿದರು, ಕೃಷಿಕರು, ಸಾಮಾನ್ಯ ಜನರೆಲ್ಲರೂ ತಾವು ಒಂದುಗೂಡಬೇಕೆಂದು ಯೋಚಿಸಿ ಭಾವನಾತ್ಮಕವಾಗಿ ಹಾಗೂ ವೈಚಾರಿಕವಾಗಿ ಒಗ್ಗಟ್ಟಿನಿಂದ ಒಂದು ಚಳುವಳಿ ಪ್ರಾರಂಭಿಸಿದರು.

ಹೀಗೆ "ಕರ್ನಾಟಕ ಏಕೀಕರಣಕ್ಕಾಗಿ" ನಡೆದ ಚಳುವಳಿಯಲ್ಲಿನ ಕೆಲವು ಮುಜಲುಗಳನ್ನು ಗುರುತಿಸುವುದಾದರೆ ಭಾರತ ಸ್ವತಂತ್ರ ಹೋರಾಟದ ಜೊತೆ ಜೊತೆಗೆ ಸಮಾನಾಂತರವಾಗಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಯಿತು. ಅವು ಹೀಗಿವೆ;

೧)ಪ್ರಮುಖ ಸಾಹಿತಿಗಳಾದ ಆಲೂರು ವೆಂಕಟರಾವ್ (ಕನ್ನಡ ಕುಲ ಪುರೋಹಿತ ) ಅವರನ್ನು ಏಕೀಕರಣದ ಶಿಲ್ಪಿ ಎನ್ನಬಹುದು. ೧೯೦೭/೮ ರಲ್ಲಿ ಧಾರವಾಡದಲ್ಲಿ ಕನ್ನಡ ಲೇಖಕರ ಸಮ್ಮೇಳನ ನಡೆಸಿ ಲೇಖಕರು ತಮ್ಮ ಬರಹದ ಮೂಲಕ ಏಕೀಕರಣ ಚಳುವಳಿಯನ್ನು ಬೆಳಸುವಂತೆ ಕರೆ ನೀಡಿದರು. ಅವರ ಕಾದಂಬರಿ "ಕರ್ನಾಟಕ ಗಥ ವೈಭವ "ಏಕೀಕರಣದ ಬೈಬಲ್ " ಎಂದು ಹೇಳಲಾಗುತ್ತದೆ.

೨) ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರು ೧೯೧೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿ ಏಕೀಕರಣದ ಪರಿಕಲ್ಪನೆಗೆ ನಾಂದಿ ಹಾಡಿದರು.

೩) ೧೯೨೪ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಲುಗೊಳ ನಾರಾಯಣರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಗೀತೆಯನ್ನು ಪ್ರಾರ್ಥನೆಗೆ ಹಾಡಲಾಯಿತು. ಇದನ್ನೇ ಮುಂದೆ ಏಕೀಕರಣ ಗೀತೆಯಾಗಿ ಗುರುತಿಸಲಾಯಿತು.

೪)೧೯೨೬ರಲ್ಲಿ ಹಿಂದೂಸ್ತಾನ್ ಸೇವಾದಳದ ಎನ್. ಎಸ್ ಹರ್ಡಿಕರ್ ನೇತೃತ್ವದಲ್ಲಿ ಏಕೀಕರಣಕ್ಕೆ ಹಸ್ತಾಕ್ಷರ ಚಳುವಳಿ ನಡೆಯಿತು. ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿ ನವಂಬರ್ ೧ನೇ ದಿನಾಂಕದಂದು ನವಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಮುಂದೆ ಕೆಂಗಲ್ ಹನುಮಂತಯ್ಯನವರ ಮತ್ತು ಎಸ್. ನಿಜಲಿಂಗಪ್ಪನವರ ಪ್ರಯತ್ನದಿಂದ ೧೯೭೩ರ ನವಂಬರ್ ೧ನೇ ದಿನಾಂಕ "ಕರ್ನಾಟಕ " ವೆಂದು ನಾಡಿಗೆ ನಾಮಕರಣವಾಯಿತು. ಪ್ರತಿ ವರ್ಷ ಕರ್ನಾಟಕದ ಗತ ವೈಭವ ಮತ್ತು ಸಂಸ್ಕೃತಿಯನ್ನು ನೆನೆಪಿಸುವ ಸಲುವಾಗಿ ಮಾತ್ರವಲ್ಲದೆ ಕನ್ನಡಿಗರಿಗೆ ಒಂದು ಆಸ್ಮಿತೆಯನ್ನೂ, ಅಸ್ತಿತ್ವವನ್ನು ತಂದುಕೊಟ್ಟ ಎಲ್ಲ ಮಹನೀಯರ ಸ್ಮರಣೆಗಾಗಿ ಈ ರಾಜ್ಯೋತ್ಸವ ಆಚರಣೆ ಮುಖ್ಯವಾಗುತ್ತದೆ.

ಈ ಬರಹದ ಹಸ್ತಪ್ರತಿಯನ್ನು ಟೈಪ್ ಮಾಡಿಕೊಟ್ಟ ಅನಿವಾಸಿ ಬಳಗದ ರಾಮಮೂರ್ತಿ ಅವರಿಗೆ ಕೃತಜ್ಞತೆಗಳು

*


ಮಾಚು-ಪೀಕ್ಚೂ ಚಾರಣ – ಅನ್ನಪೂರ್ಣಾ ಆನಂದ್

ಇತಿಹಾಸ:

ದಕ್ಷಿಣ ಅಮೇರಿಕಾ ಖಂಡದ ಪೆರು ದೇಶದಲ್ಲಿರುವ ಕುಸ್ಕೋ ನಗರದ ಬಳಿ ಇರುವ ಮಾಚು-ಪೀಕ್ಚೂ (Machu-Picchu), ಇಂಕಾ (Inca) ಜನಾಂಗದ ಧಾರ್ಮಿಕ ಸ್ಥಳ. ಇಂಕಾ ನಾಗರೀಕತೆ ಸುಮಾರು ೧೩ನೇ ಶತಮಾನದಲ್ಲಿ ಹುಟ್ಟಿ, ಬೆಳದು, ಉತ್ತುಂಗಕ್ಕೇರಿ, ಸ್ಪೇನ್ ದೇಶದ ಧಾಳಿಯಿಂದ (೧೬ನೇ ಶತಮಾನ) ಪತನಗೊಂಡ ಬಹುಪ್ರಸಿದ್ಧ ನಾಗರೀಕತೆ ಮತ್ತು ಜನಾಂಗ. ೧೩ನೇ ಶತಮಾನದಲ್ಲಿ, ಪ್ರಪಂಚದ ಬೇರೆಡೆಗಳಲ್ಲಿ ನಾಗರೀಕತೆ ಬಹಳ ಮುಂದಿದ್ದರೂ, ಈ ಜನಾಂಗ, ಇದೆಲ್ಲದರಿಂದ ದೂರವಿದ್ದು, ತನ್ನದೇ ಆದ ರೀತಿಯಲ್ಲಿ ಬೆಳೆಯಿತು! ಬೆಟ್ಟಗುಡ್ಡಗಳಲ್ಲೇ ವಾಸಮಾಡುತ್ತಿದ್ದ ಈ ಜನಾಂಗ, ಕಡಿದಾದ ಜಾಗಗಳಲ್ಲಿ ಮನೆ, ಹಳ್ಳಿ, ಊರುಗಳನ್ನು ಕಟ್ಟಿ, ಈ ಗುಡ್ಡಗಳಲ್ಲಿ, ಮೆಟ್ಟಿಲುಗಳನ್ನು ಮಾಡಿ ವ್ಯವಸಾಯವನ್ನು ಮಾಡುತ್ತಿದ್ದರು. ಈ ವ್ಯವಸಾಯ ಕ್ಷೇತ್ರಗಳಿಗೆ ಮಳೆ ಮತ್ತು ಈ ಗುಡ್ಡದಳಿಂದ ಕರಗಿ, ಹರಿದು ಬರುವ ಮಂಜಿನ ನೀರನ್ನುಪಯೋಗಿಸಿ ದವಸ-ಧಾನ್ಯಗಳನ್ನು ಬೆಳೆಯುತ್ತಿದ್ದರು. ಇಂಟಿ (ಸೂರ್ಯ) ಇವರ ಮುಖ್ಯ ದೇವರು. ತಮ್ಮ ರಾಜನನ್ನು ಅವರು ಸೂರ್ಯನ ಮಗನೆಂದು ಭಾವಿಸುತ್ತಿದ್ದರು. “ಕ್ವೆಚುವಾ” (Quechua) ಇವರು ಬಳಸುತ್ತಿದ್ದ ಭಾಷೆ (ಈಗಲೂ ಈ ಭಾಷೆಯನ್ನು ಬಳಸುವ ಜನರು ಅಲ್ಪ ಸ್ವಲ್ಪ ಇದ್ದಾರೆ).

ಪ್ರಯಾಣ:

ಈ ಇಂಕಾ ಜನರ ಧಾರ್ಮಿಕ ಸ್ಥಳವಾದ ಮಾಚು – ಪೀಕ್ಚೂವನ್ನು ಕುಸ್ಕೋ ನಗರದಿಂದ ತಲುಪಲು ಇರುವ ದಾರಿಯೇ ಇಂಕಾ ಟ್ರೈಲ್ (Inca Trail).  ೩೯ ಕಿಲೋ ಮೀಟರ್ (೨೪ ಮೈಲಿ) ಉದ್ದದ ಈ ಹಾದಿಯನ್ನು ಸುಮಾರು ೩ ಅಥವಾ ೪ ದಿನಗಳಲ್ಲಿ ನಡೆಯಬಹುದು. ಸುಮಾರು ೩೦೦೦ ಮೀಟರ್ ಎತ್ತರದಿಂದ ಪ್ರಾರಂಭವಾಗುವ ಈ ಹಾದಿ, ೪೨೧೫ ಮೀಟರ್ (ಈ ಹಾದಿಯ ಉತ್ತುಂಗ) ತಲುಪಿ, ಮತ್ತೆ ೨೪೩೦ ಮೀಟರಿಗೆ ಇಳಿದರೆ ಸಿಗುವುದೀ ಜಗತ್ಪ್ರಸಿದ್ದ ಸ್ಥಳ. ಹಾದಿಯಲ್ಲಿ ಬಹಳಷ್ಟು ಇಂಕಾ ವಸಾಹತುಗಳು (settlements ) ಕಾಣಸಿಗುತ್ತವೆ. ಕ್ಲೌಡ್ ಫಾರೆಸ್ಟ್ ಮೂಲಕ ಹೋಗುವಾಗಲಂತೂ ವಿಶಿಷ್ಟವಾದ ಮರ, ಗಿಡ, ಹಕ್ಕಿಗಳು ಕಾಣಸಿಗುತ್ತವೆ. ಪ್ರತಿ ತಿರುವು ಮುರುವೂ ಅವರ್ಣನೀಯ ಪ್ರಕೃತಿ ಸೌಂದರ್ಯದಿಂದ ತುಂಬಿದೆ! ಆಂಡಿಸ್ (andes ) ಪರ್ವತ ಶ್ರೇಣಿಯನ್ನು ನೋಡುವಾಗ “ಹುಲುಮಾನವ” ಎಂಬ ಉಕ್ತಿಯ ಅರ್ಥ ಮನದಟ್ಟಾಗುತ್ತದೆ!

ಈ ಇಂಕಾ ಟ್ರೈಲ್-ಅನ್ನು ನಡೆಯುವ ಆಸೆ ಬಹಳ ವರ್ಷಗಳಿಂದ ಇತ್ತು. ಈ ವರ್ಷದ ಜನವರಿಯಲ್ಲಿ ಇದರ ಬಗ್ಗೆ ಬಹಳಷ್ಟು ವಿಷಯ ಸಂಗ್ರಹಿಸಿ, ನಾನು, ನನ್ನ ಪತಿ ಆನಂದ್, “Exodus ” ಎಂಬ ಯು.ಕೆ ಕಂಪನಿಯ ಮೂಲಕ ಈ ಪ್ರಯಾಣವನ್ನು ಕೈಗೊಳ್ಳುವ ನಿರ್ಧಾರ ಮಾಡಿದೆವು. ಈ ರೀತಿಯ ಪ್ರವಾಸಗಳಿಗೆ ಕಂಪನಿಗಳ ಮೂಲಕ ಹೋಗುವುದು ಅನುಕೂಲ. ಕ್ಯಾಂಪ್ ಸೈಟ್ಸ್, ಟೆಂಟ್ಸ್, ಟಾಲೆಟ್ಸ್, ಊಟ, ತಿಂಡಿ – ಹೀಗೆ ಎಲ್ಲದರ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಮಾಡುವುದದಿಂದ ಪ್ರಯಾಣದಲ್ಲಿ ಈ ಅವಶ್ಯಕತೆಗಳ ಬಗ್ಗೆ ಯೋಚನೆ ಮಾಡುವ ತಲೆನೋವು ತಪ್ಪುತ್ತದೆ. ಮೊದಲೇ ಕಷ್ಟಕರವಾದ ಪ್ರಯಾಣ, ಇದರ ಮಧ್ಯೆ ಈ ತಲೆಬಿಸಿ ಬೇಕೇ!

ಆಗಸ್ಟ್ ೨೫ರಿಂದ ೩೧ರ ವರೆಗೆ ಈ ಪ್ರಯಾಣವನ್ನು ನಾನು, ಆನಂದ್ ಮತ್ತೆ ನಮ್ಮೆರಡೂ ಮಕ್ಕಳು, ಮಾಡುವುದೆಂದು ನಿರ್ಧರಿಸಿದೆವು. ನಿಶ್ವಯಿಸಿದ ಕೆಲ ದಿನಗಳಲ್ಲೇ ನಾನು ಮತ್ತು ಆನಂದ್ ನಮ್ಮ ತಯಾರಿ ಪ್ರಾರಂಭಿಸಿದೆವು. ೪ ದಿನಗಳ ಕಾಲ ಸುಮಾರು ೭ – ೮ ಘಂಟೆ ನಡೆಯುವುದು ಅಷ್ಟು ಸುಲಭವಲ್ಲ! ತಯಾರಿಯಿಲ್ಲದೆ ಹೋದರೆ ಬಹಳ ಕಷ್ಟ! ಹಾಗಾಗಿ ವಾರಾಂತ್ಯದ ರಜೆಗಳಲ್ಲಿ ನಡೆಯಲು ಶುರು ಮಾಡಿದೆವು. ೩ ಘಂಟೆಗಳ ನಡಿಗೆಯಿಂದ ಪ್ರಾರಂಭಿಸಿ ೯  – ೧೦  ಘಂಟೆಗಳ ಕಾಲ ನಡೆಯುವಷ್ಟು ನಮ್ಮ ಕಾಲುಗಳಿಗೆ ಶಕ್ತಿ ಬಂತು. ಆತ್ಮಬಲ ಹೆಚ್ಚಿತು. Altitude  sickness ನಮ್ಮ ಕೈಲಿಲ್ಲ, ಅದು ದೇಹಪ್ರಕೃತಿಗೆ ಬಿಟ್ಟದ್ದು. ಆದರೆ ೪ ದಿನದ ನಡಿಗೆಯನ್ನು ಸಂಭಾಳಿಸಬಹುದೆಂಬ ಧೈರ್ಯ ಬಂತು.

ಆಗಸ್ಟ್ ೨೫ ನಾವು ಕುಸ್ಕೋ ನಗರವನ್ನು ತಲುಪಿದೆವು. ೩೩೯೯ ಮೀಟರ್ ಎತ್ತರದಲ್ಲಿರುವ ಈ ನಗರಕ್ಕೆ ಬಂದಿಳಿದ ಸ್ವಲ್ಪ ಹೊತ್ತಿನ್ಲಲಿ altitude ಅನುಭವವಾಗತೊಡಗಿತು – ತಲೆನೋವು, ಓಕರಿಕೆ, ಹಸಿವಾಗದಿರುವುದು, ಇತ್ಯಾದಿ. Diamox ಎಂಬ ಮಾತ್ರೆ ಈ ಅನುಭವಗಳನ್ನು ಹತೋಟಿಯಲ್ಲಿಡಲು ಬಹಳ ಉಪಯುಕ್ತ. ನಾನು ಆನಂದ್ ಈ ಮಾತ್ರೆಯನ್ನು (ಅರ್ಧ ಮಾತ್ರೆ) ದಿನಾ ತೆಗೆದುಕೊಳ್ಳಲು ಪ್ರಾರಂಭಿಸಿದೆವು. ನನ್ನ ಮಕ್ಕಳು ವಯಸ್ಸಿನಲ್ಲಿ ಚಿಕ್ಕವರಾದ್ದರಿಂದ ಅವರಿಗೆ ಮಾತ್ರೆಯ ಆವಶ್ಯಕತೆ ಬರಲಿಲ್ಲ. ಬರೀ ವಯಸ್ಸಲ್ಲ, ದೇಹಪ್ರಕೃತಿಯೂ ಇದಕ್ಕೆ ಕಾರಣ. ಕೆಲವರಿಗೆ ಈ ಅನುಭವವಾಗುವುದೇ ಇಲ್ಲ, ಕೆಲವರಿಗೆ ಸ್ವಲ್ಪ ಗೊತ್ತಾಗತ್ತೆ, ಮತ್ತೆ ಕೆಲವರಿಗೆ ಬಹಳಷ್ಟು ಕಷ್ಟವಾಗುತ್ತದೆ.

೨೫ರ ಸಾಯಂಕಾಲ ನಮ್ಮ ಗೈಡ್ ಎದ್ವಿನ್ಡ್ ನಮ್ಮನ್ನು ೫ ಘಂಟೆಗೆ ನಾವಿಳಿದುಕೊಂಡಿದ್ದ ಹೋಟೆಲಿನ ಲಾಬಿಯಲ್ಲಿ ಸಿಗಲು ತಿಳಿಸಿದ್ದರು. ಅಲ್ಲಿಗೆ ಹೋದಾಗ ನಮ್ಮ ಜೊತೆ ಈ ಪ್ರಯಾಣವನ್ನು ಮಾಡುವ ಮಿಕ್ಕ ೧೨ ಜನರನ್ನು ಸಂಧಿಸಿದೆವು. ಇಂಗ್ಲೆಂಡಿನ ಹಲವಾರು ಭಾಗಗಳಿಂದ ಬಂದ ಎಲ್ಲರ ಪರಿಚಯವಾದ ಮೇಲೆ, ಎದ್ವಿನ್ಡ್ ನಮ್ಮ ಪ್ರವಾಸದ ವಿವರಗಳನ್ನು ಸವಿಸ್ತಾರವಾಗಿ ತಿಳಿಸಿದರು

ಮುಂಬರುವ ೪ ದಿನಗಳ ದಿನಚರಿ – ಪ್ರತಿ ದಿನ ೬ ಘಂಟೆಗೆ ಏಳುವುದು. ಒಂದು ಬೋಗಣಿ ನೀರಲ್ಲಿ ಹಲ್ಲು ಉಜ್ಜಿ ಮುಖ ತೊಳೆಯುವುದು, ನಂತರ ಬಿಸಿ ಬಿಸಿ ಕಾಫೀ ಅಥವಾ ಟೀ. ೭ ಘಂಟೆಗೆ ತಿಂಡಿ ತಿಂದು, ಪ್ರಯಾಣಕ್ಕೆ ಬೇಕಾಗುವ ನೀರು ಮತ್ತು ಕೆಲವು ಉಪಾಹಾರಗಳನ್ನು (ಸೀರಿಯಲ್ ಬಾರ್ಸ್, ಹಣ್ಣು, ಚಾಕಲೇಟ್ ಇತ್ಯಾದಿ) ತೆಗೆದುಕೊಂಡು ನಡಿಗೆ ಶುರು. ಮಧ್ಯಾಹ್ನ ೧ ರಿಂದ ೨ ರ ನಡುವೆ ಊಟ, ಮತ್ತೆ ನಡಿಗೆ, ಸಾಯಂಕಾಲ ೪ ರಿಂದ ೫ ರೊಳಗೆ ಮುಂದಿನ campsite ತಲುಪುವುದು. ಅಲ್ಲಿ ರಾತ್ರಿ ಊಟ ಮತ್ತು ನಿದ್ದೆ. 

ಎದ್ವಿನ್ಡ್ ನಮ್ಮ ಹಾದಿಯ ನಕ್ಷೆಯನ್ನು ತೋರಿಸಿ, ಪ್ರತಿದಿನ ಎಷ್ಟು ನಡೆಯಬೇಕು, ಎಲ್ಲಿ ಇಳಿದುಕೊಳ್ಳುವುದು, ಹೇಗೆ ಈ ಕಷ್ಟಕರವಾದ ಪ್ರಯಾಣವನ್ನು ಸವೆಸಬಹುದು ಎಂದು ಬಹಳಷ್ಟು ಮಾಹಿತಿಯನ್ನು ಕೊಟ್ಟು, ೨೭ರ ಬೆಳಿಗ್ಗೆ  ೭ ಘಂಟೆಗೆ ನಾವೆಲ್ಲಾ ತಯಾರಾಗಿರಬೇಕೆಂದು ತಿಳಿಸಿ ಹೊರಟರು.

೨೬ ಆಗಸ್ಟ್ ನಾವು ಕುಸ್ಕೋ ನಗರದ ಇಂಕಾ ಸ್ಥಳಗಳಿಗೆ ಮತ್ತು ಸಂಗ್ರಹಾಲಯಕ್ಕೆ ಭೆಟ್ಟಿ ಕೊಟ್ಟೆವು. ಹಾಗೇ ಕುಸ್ಕೋ ನಗರದ ಮಾರುಕಟ್ಟೆ ಮತ್ತು ಇತರ ಪ್ರಮುಖ ಬೀದಿಗಳಲ್ಲಿ ಸುತ್ತಾಡಿ, ಮುಂದಿನ ದಿನದ ತಯಾರಿ ನಡೆಸಿ, ಊಟ ಮುಗಿಸಿ ಮಲಗಿದೆವು.

ಇಂಕಾ ಟ್ರೈಲ್ – ಡೇ ೧ (೩೩೯೯ – ೩೦೦೦ ಮೀಟರ್ ಎತ್ತರ, ೧೫ ಕಿಮಿ):

ಬೆಳಿಗ್ಗೆ ೬ ಘಂಟೆಗೆ ತಿಂಡಿ ಮುಗಿಸಿ, ೭ ಘಂಟೆಗೆ ನಾವು ೧೬ ಜನ, ನಮ್ಮ ಗೈಡ್ ಎದ್ವಿನ್ಡ್ ಜೊತೆಗೆ ಒಂದು ಬಸ್ ಹತ್ತಿದೆವು. ಸುಮಾರು ಒಂದು ಘಂಟೆಯ ಪ್ರಯಾಣವಾದಮೇಲೆ ಬಸ್ ನಿಲ್ಲಿಸಿ ನಮ್ಮೊಂದಿಗೆ ಬರುವ ಇನ್ನೊಬ್ಬ ಗೈಡ್ ಮತ್ತು ಸುಮಾರು ೨೦ ಜನ ಸಹಾಯಕರನ್ನು ಹತ್ತಿಸಿಕೊಂಡು, ಮತ್ತೆರಡು ಘಂಟೆ ಪ್ರಯಾಣದ ನಂತರ KM82 ತಲುಪಿದೆವು.

ಇಲ್ಲಿ ನಮ್ಮ ಸಹಾಯಕರ ಬಗ್ಗೆ ಕೆಲವು ಮಾಹಿತಿ ಕೊಡುವುದು ಅತ್ಯಗತ್ಯ.

ನಡೆಯುವ ೧೬ ಮಂದಿಗೆ, ೨ ಗೈಡ್ಸ್ ಮತ್ತೆ ಸುಮಾರು ೨೦ ಜನ ಸಹಾಯಕರು. ಇವರು ನಮ್ಮ ದಿನ ನಿತ್ಯದ ಆವಶ್ಯಕತೆಗಳನ್ನೆಲ್ಲಾ ಚಾಚೂ ತಪ್ಪದೆ ಪೂರೈಸಿದರು! ಅಡಿಗೆ ಮಾಡುವವರು, ಅವರಿಗೆ ಸಹಾಯ ಮಾಡುವವರು, ಟೆಂಟ್-ಗಳನ್ನು ಸಿದ್ಧಗೊಳಿಸುವವರು, ಪೋರ್ಟಬಲ್ ಟಾಯ್ಲೆಟ್ಟುಗಳನ್ನು ತೊಳೆದು ಶುಚಿಗೊಳಿಸುವುದು , ಊಟ ಬಡಿಸುವುದು,  ಹೀಗೆ ಹಲವು ಹತ್ತಾರು ಕೆಲಸಗಳನ್ನು ನಗುಮೊಗದಿಂದ ಮಾಡುವರು. ಇದಲ್ಲದೆ ಪ್ರತಿದಿನ ನಾವೆಲ್ಲಾ ಹೊರಟ ನಂತರ, ಟೆಂಟ್-ಗಳನ್ನೆಲ್ಲಾ ತೆಗೆದು, ಮಡಿಚಿ, ಅಡಿಗೆ ಸಾಮಗ್ರಿಗಳನ್ನೆಲ್ಲ ಒಟ್ಟುಗೂಡಿಸಿ, ನಮ್ಮ ೪ – ೫ ದಿನದ ಬಟ್ಟೆಗಳು ಮತ್ತು ಸ್ಲೀಪಿಂಗ್ ಬ್ಯಾಗ್-ಗಳಿದ್ದ (೭ ಕಿಲೋ) ಚೀಲಗಳನ್ನು ಹೊತ್ತು, ನಾವು ಹೋಗುವ ಹಾದಿಯೆಲ್ಲೇ, ನಮಗಿಂತ ಬೇಗ ಹೋಗಿ, ಮಧ್ಯಾಹ್ನದ ಕ್ಯಾಂಪ್ ಸೈಟ್-ನಲ್ಲಿ ಅಡಿಗೆಗೆ ಮತ್ತೆ ಎಲ್ಲ ಸಾಮಗ್ರಿಗಳನ್ನೂ ಅಣಿಮಾಡಿಕೊಂಡು, ನಮಗೆ ಅಡಿಗೆ ಮಾಡಿ, ಬಡಿಸಿ, ತಾವೂ ಊಟ ಮಾಡಿ, ಮತ್ತೆ ಎಲ್ಲವನ್ನೂ ಹೊತ್ತು ರಾತ್ರಿಯ campsite ತಲುಪಿ, ಎಲ್ಲರ ಟೆಂಟ್ ಹಾಕಿ, ನಮ್ಮ ಚೀಲಗಳನ್ನು ಇಟ್ಟು, ಮತ್ತೆ ರಾತ್ರಿಯ ಅಡಿಗೆ ಮಾಡುತ್ತಿದ್ದರು! ಅವರಿಲ್ಲದಿದ್ದರೆ ಈ ರೀತಿಯ ಪ್ರಯಾಣಮಾಡುವುದು ಅಸಾಧ್ಯವೆಂದೇ ಹೇಳಬಹುದು!

KM82 – ಇದು ನಮ್ಮ ಪ್ರಯಾಣದ ಮೊದಲ ಘಟ್ಟ. ೧೦.೩೦ ಹೊತ್ತಿಗೆ ನಾವೆಲ್ಲಾ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ಮುಂದೆ ಸಿಕ್ಕಿದ ಚೆಕ್-ಪೋಸ್ಟ್-ನಲ್ಲಿ ನಮ್ಮ ಪಾಸ್-ಪೋರ್ಟ್ ತಪಾಸಣೆಯಾಯಿತು. ಮೊದಲ ದಿನದ ಹಾದಿ ಸ್ವಲ್ಪ ಸುಲಭವಾಗಿತ್ತು. ಹಾಗೇ ನಮ್ಮಲ್ಲಿ ಬಹಳ ಹುರುಪೂ ಇತ್ತು. ೧೬ ಜನರೂ ಮಾತಾಡಿಕೊಂಡು, “ I Spy..”, “word building” ಆಟಗಳನ್ನು ಆಡಿಕೊಂಡು ಹೊರಟೆವು. ಪರಿಚಯ ಸ್ನೇಹವಾಗಲು ಈ ಹಾದಿ ಅನುವುಮಾಡಿಕೊಟ್ಟಿತು ಅಂತಲೂ ಹೇಳಬಹುದು. ತಗ್ಗು ದಿಣ್ಣೆಗಳಿದ್ದ ಈ ಹಾದಿಯನ್ನು ಎಲ್ಲರೂ ಕಷ್ಟಪಡದೆ ಮುಗಿಸಿದೆವು. ಸುಮಾರು ೬ ಘಂಟೆಯ ಹೊತ್ತಿಗೆ “ವೈಲಬಂಬ” ಕ್ಯಾಂಪ್-ಸೈಟ್ ತಲುಪಿದೆವು. ಬಿಸಿ ಕಾಫಿ ಟೀ ನಮ್ಮನ್ನು ಕಾದಿತ್ತು. ಮೊದಲೇ ಹೇಳಿದಂತೆ ನಮ್ಮ ಸಹಾಯಕರು ಆಗಲೇ ಕ್ಯಾಂಪ್-ಸೈಟ್ ತಲುಪಿ ಎಲ್ಲ ವ್ಯವಸ್ಥೆಮಾಡಿದ್ದರು.

ಕಾಫೀ ಟೀ ಮುಗಿಸಿ ನಮ್ಮ ಟೆಂಟು ಗಳಲ್ಲಿ ಸೇರಿಕೊಂಡೆವು. ಇಬ್ಬರು ಮಲಗಬಹುದಾದ ಈ ಟೆಂಟ್-ಗಳು ಅಷ್ಟೇನೂ ದೊಡ್ಡದಿರುವುದಿಲ್ಲ. ಸ್ಲೀಪಿಂಗ್ ಬ್ಯಾಗ್ ಹಾಕಿ, ನಮ್ಮ ಬ್ಯಾಗ್ ಗಳನ್ನೂ ಇಟ್ಟರೆ, ಮಗ್ಗುಲು ಬದಲಿಸಲು ಸ್ವಲ್ಪ ಜಾಗವಿರುತ್ತದೆ ಅಷ್ಟೇ! ಅಂತಹ ಒಂದು ಟೆಂಟ್-ನಲ್ಲಿ ನಮ್ಮ ಸಾಮಗ್ರಿಗಳನ್ನು ಅಣಿಮಾಡಿಕೊಂಡೆವು. ಇಂತಹ ಚಾರಣಗಳಲ್ಲಿ ಸ್ನಾನದ ವ್ಯವಸ್ಥೆ ಇರುವುದಿಲ್ಲ. ವೆಟ್ ವೈಪ್ಸ್ ಉಪಯೋಗಿಸಿ ಮೈ ಒರೆಸಿಕೊಳ್ಳಬೇಕು ಅಷ್ಟೇ. ಅಂತೂ ಸ್ನಾನ ಮಾಡಿ ಬಟ್ಟೆ ಬದಲಾಯಿಸುವ ಹೊತ್ತಿಗೆ ಊಟಕ್ಕೆ ಕರೆ ಬಂತು. ಬಿಸಿ ಬಿಸಿ ಸೂಪ್, ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟ ಮತ್ತು ಕಾಫಿ ಟೀ. ರುಚಿಕರವಾದ ಮತ್ತು ಪೌಷ್ಟಿಕವಾದ ಆಹಾರ. ವೀಗನ್ ಊಟ ಕೂಡ ಇತ್ತು (ಮೊದಲೇ ಹೇಳಿದ್ದರಿಂದ). ಊಟದ ನಂತರ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿ ನಿದ್ದೆ!

ಇಂಕಾ ಟ್ರೈಲ್ – ಡೇ ೨ (೩೦೦೦ – ೪೨೧೩ – ೪೫೦೮ ಮೀಟರ್ ಎತ್ತರ, ೧೨ ಕಿಮಿ):

ಇಂಕಾ ಟ್ರೈಲ್ – ಡೇ ೨ – (೩೦೦೦ – ೪೨೧೩ – ೪೫೦೮ ಮೀಟರ್ಸ್) – ೧೨ ಕಿಲೋಮೀಟರ್ಸ್ – ಮತ್ತೆ ೬ಕ್ಕೆ ಎದ್ದು, ೭ಕ್ಕೆ ತಯಾರಾಗಿ ನಡೆಯಲು ಶುರು ಮಾಡಿದೆವು. ಇಂದು ಅತಿ ಕಷ್ಟದ ದಿನ ಎಂಬುದರ ಅರಿವು ಎಲ್ಲರಿಗೂ ಇತ್ತು. ಈ ದಿನ, ನಮ್ಮ ಚಾರಣದ ಉತ್ತುಂಗಕ್ಕೇರಿ (highest point – “ಡೆಡ್ ವಿಮೆನ್ ಪಾಸ್”), ಇಳಿಯುವ ದಿನ! ಸುಮಾರು ೬೦೦೦ ಮೆಟ್ಟಿಲುಗಳನ್ನು ಅಷ್ಟು ಎತ್ತರದಲ್ಲಿ (altitude) ಹತ್ತುವುದು ಸುಲಭವಾಗಿರಲಿಲ್ಲ! ಆಮ್ಲಜನಕದ ವಿರಳತೆಯಿಂದ ಉಸಿರಾಡಲೇ ಕಷ್ಟವಾಗುವ ವಾತಾವರಣದಲ್ಲಿ ಈ ಹಾದಿ ಸವೆಸಲು ಕಷ್ಟವಿತ್ತು. ಗುಂಪಿನಲ್ಲಿದ್ದ ಕೆಲವು ಸದೃಢರು ಸರಾಗವಾಗಿ ನಡೆದರೂ. ಮಿಕ್ಕವರೆಲ್ಲ ನಿಧಾನವಾಗಿ, ನಮಗೆ ಸರಿಹೋಗುವ ವೇಗದಲ್ಲಿ, ಅಲ್ಲಲ್ಲಿ ವಿರಮಿಸುತ್ತಾ ಉತ್ತುಂಗವನ್ನು ತಲುಪಿದೆವು. ವಿರಮಿಸಿದಾಗ ಸುತ್ತಲೂ ಕಣ್ಣಾಡಿಸಿದರೆ, ದೂರ ದೂರಕ್ಕೆ ಕಾಣುವ ಆಂಡಿಸ್ ಪರ್ವತ ಶ್ರೇಣಿ, ರುದ್ರ ರಮಣೀಯ! ಪ್ರತಿ ತಿರುವೂ ಹೊಸ ನೋಟ ಹೊಸ ವಿಸ್ಮಯ! ನಮ್ಮ ಗುರಿ ತಲುಪಿದಾಗ ಆದ ಆ ಅನುಭವ, ಅನಿಸಿಕೆ, ಭಾವೋದ್ವೇಗ ವರ್ಣಿಸಲಸಾಧ್ಯ! ಒಂದು ರೀತಿಯ ಸಾರ್ಥಕತೆ, ವಿನಮ್ರತೆ ಮನಸ್ಸನ್ನು ಮತ್ತು ಕಣ್ಣನ್ನು ತುಂಬಿಸಿತ್ತು. ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿ, ಪರ್ವತವನ್ನಿಳಿಯಲು ಪ್ರಾರಂಭಿಸಿದೆವು. “ಪಕಾಯ್ಮಯೋ” ಕ್ಯಾಂಪ್-ಸೈಟ್ ತಲಪುವ ಹೊತ್ತಿಗೆ ಎಲ್ಲರೂ ಸುಸ್ತಾಗಿದ್ದೆವು. ಆದರೆ ಬಹಳ ಕಠಿಣವಾದ ದಿನವನ್ನು ಮುಗಿಸಿದ ನಿರಾಳವಿತ್ತು ಎಲ್ಲರ ಮನದಲ್ಲಿ.

ಇಂಕಾ ಟ್ರೈಲ್ – ಡೇ ೩ – (೪೫೦೮ – ೩೫೮೦ ಮೀಟರ್ ಎತ್ತರ, ೧೨ ಕಿಮಿ):

ಈ ದಿನ ಹಾದಿ ಬಹಳ ಆಸಕ್ತಿದಾಯಕವಾಗಿತ್ತು. ಬಹಳಷ್ಟು ಇಂಕಾ ವಸಾಹತುಗಳನ್ನು ನೋಡಿದೆವು. ನಮ್ಮ ಗೈಡ್ ಎದ್ವಿನ್ಡ್, ಇಂಕಾ ಜನಾಂಗದ ರಾಜಕೀಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳನ್ನು ಬಹಳ ವಿವರವಾಗಿ, ಮನಮುಟ್ಟುವಂತೆ ವಿವರಿಸಿದರು. ಆಗಿನ ಕಾಲದಲ್ಲಿ ಕಲ್ಲಿನಿಂದ ಕಟ್ಟಿದ ಗೋಡೆಗಳು, ಮನೆಗಳು, ಬಹಳಷ್ಟು ಭೂಕಂಪಗಳನ್ನು ಎದುರಿಸಿಯೂ, ಇನ್ನೂ ಸ್ಥಿರವಾಗಿ ನಿಂತಿರುವುದು ಮಹದಾಶ್ಚರ್ಯ ಮತ್ತು ಇಂಕಾ ಜನಾಂಗದ ಕೌಶಲತೆಯನ್ನು ಎತ್ತಿ ತೋರಿಸುತ್ತದೆ. ಹಣದ ವಿನಿಮಯಕ್ಕಿಂತಾ ವಸ್ತುಗಳ ವಿನಿಮಯವೇ ಜಾಸ್ತಿ ಪ್ರಚಲಿತವಿತ್ತು. ಲಿಖಿತ ಭಾಷೆ ಇಲ್ಲದ್ದರಿಂದ, ದಾರದ ಗಂಟುಗಳಿಂದ ಲೆಖ್ಖವಿಡುತ್ತಿದ್ದರು ಮತ್ತು ಸಂದೇಶವನ್ನೂ ವಿನಿಮಯಿಸುತ್ತಿದ್ದರು ಎಂಬುದು ಕುತೂಹಲಹರ. ಈ ಐತಿಹಾಸಿಕ ಸ್ಥಳಗಳ ಮೂಲಕ ಹಾದು, ಸಂಜೆಯ ಹೊತ್ತಿಗೆ ಆ ದಿನದ ಕ್ಯಾಂಪ್-ಸೈಟ್ “ಪುಯುಪುಕಮಾರ್ಕ” ತಲುಪಿದೆವು.  

ಇಂಕಾ ಟ್ರೈಲ್ – ಡೇ ೪ (೩೫೮೦ – ೨೪೩೦ ಮೀಟರ್ ಎತ್ತರ, ೧೦ ಕಿಮಿ):

ಕಡೆಯ ದಿನ! ಸುಮಾರು ೫೦೦೦ ಮೆಟ್ಟಿಲುಗಳನ್ನು ಹತ್ತಿಳಿದೆವು. ಇಳಿಯುತ್ತಿದ್ದರಿಂದ ಉಸಿರಾಟ ಸ್ವಲ್ಪ ಸರಾಗವಾಗಿತ್ತು. ಆದರೆ ೩ ದಿನದ ಸತತ ನಡಿಗೆಯಿಂದ ಕಾಲುಗಳು ಸೋಲುತ್ತಿದ್ದವು! ಆದರೆ ಪ್ರಸಿದ್ಧ ಮಾಚು-ಪೀಕ್ಚುವನ್ನು ಕಣ್ಣಾರೆ ನೋಡುವ ಸಮಯ ಹತ್ತಿರವಾಗುತ್ತಿದೆಯೆಂಬ ಉತ್ಸಾಹ, ಸಂತೋಷ ಎಲ್ಲರಲ್ಲೂ. ಕೆಲವು ಘಂಟೆಗಳ ಕಾಲ ಕ್ಲೌಡ್ ಫಾರೆಸ್ಟ್ ಮೂಲಕ ನಡೆದಾಗ ಅಲ್ಲಿನ ವೈವಿಧ್ಯತೆಯನ್ನು ನೋಡುವ ಭಾಗ್ಯ ನಮ್ಮದಾಯಿತು. ಪಾಚಿ (moss) ಎಲ್ಲೆಲ್ಲೂ! ಅದೂ ಹಿಂದೆಂದೂ ನೋಡದ ಬಣ್ಣಗಳಲ್ಲಿ! ತಿಳಿ ಹಳದಿ ಇಂದ ಕಂದು ಬಣ್ಣದವರೆಗಿನ ಎಲ್ಲ ಬಣ್ಣಗಳೂ ಕಂಡವು! ಬಣ್ಣ ಬಣ್ಣದ ಆರ್ಕಿಡ್ ಗಳು ಕಣ್ಣು ಸೆಳೆದವು! ಹಾಗೆ ಥರಾವರೀ ಪಕ್ಷಿಗಳ ಚಿಲಿಪಿಲಿ ಮನಸ್ಸಿಗೆ ಆಹ್ಲಾದತಂದಿತು.  ಈ ದಿನಕ್ಕಾಗಿ ಕಾಯುತ್ತಿದ್ದ ನಾವೆಲ್ಲರೂ ಆನಂದದಿಂದ ಹೆಜ್ಜೆ ಹಾಕುತ್ತಾ “ಇಂಟಿ ಪುಂಕು” (sun gate ) ತಲುಪಿದೆವು. ಎದುರಿನ ಬೆಟ್ಟದಲ್ಲಿದ್ದ ಮಾಚು-ಪೀಕ್ಚು ರಮಣೀಯವಾಗಿ ಕಾಣಿಸುತ್ತಿತ್ತು. ಇಂಟರ್ನೆಟ್ ನಲ್ಲಿ ಸಿಗುವ ಮಾಚು-ಪೀಕ್ಚು ವಿನ ಬಹಳಷ್ಟು ಚಿತ್ರಗಳು ಈ ಜಾಗದಿಂದ ತೆಗೆದವೇ! ಮತ್ತೆ ಇಲ್ಲಿ ಬಹಳಷ್ಟು ಫೋಟೋಗಳನ್ನು ಕ್ಲಿಕ್ಕ್ಸಿದೆವು. ಈ ಅಸದಳ ದೃಶ್ಯವನ್ನು ಕಣ್ಣುತುಂಬಿಸಿಕೊಂಡು, ಮನಸ್ಸಿಲ್ಲದ ಮನಸ್ಸಿನಲ್ಲಿ ಆ ಜಾಗದಿಂದ ಹೊರಟೆವು, ಯಾಕಂದ್ರೆ, ಕೆಳಗೆ ೩ ಘಂಟೆಯ ಬಸ್ ಹತ್ತಬೇಕಿತ್ತು ಮತ್ತು ನಾವು ಇನ್ನೂ ಸುಮಾರು ೬ ಕಿಲೋಮೀಟರು ನಡೆಯಬೇಕಿತ್ತು! ಮತ್ತೆ ಸಾವಿರಾರು ಮೆಟ್ಟಿಲುಗಳನ್ನು ಇಳಿದು, ಅಂತೂ ಸರಿಯಾದ ಸಮಯಕ್ಕೆ ಬಸ್ ಹತ್ತಿ ಹೋಟೆಲ್ ತಲುಪಿದೆವು. ನಾಲ್ಕು ದಿನದ ನಂತರ  ಸ್ನಾನ  ಮಾಡಲು ಶವರ್, ಮಲಗಲು ಸರಿಯಾದ ಹಾಸಿಗೆ ಸಿಕ್ಕಿತು. ವಾಟ್ ಅ ಪ್ರಿವಿಲೇಜ್!

ಇಂಕಾ ಟ್ರೈಲ್ – ಡೇ ೫:

ಈ ದಿನ ಹೋಟೆಲಿನಿಂದ ಬಸ್ಸಿನಲ್ಲಿ ಮ್ಯಾಚು-ಪೀಕ್ಚು ತಲುಪಿದೆವು. ನಮ್ಮ ಗೈಡ್ ನಮಗಾಗಲೇ ನಮ್ಮ ಪ್ರವೇಶದ ಸಮಯವನ್ನು ಕಾದಿರಿಸಿದ್ದರು. ಒಳಗೆ ಹೋದರೆ ಇಂಕಾ ಜನಾಂಗದ ಅತಿ ದೊಡ್ಡ ವಸಾಹತು ನಮ್ಮ ಮುಂದೆ ವಿಜೃಂಭಿಸುತ್ತಿತ್ತು. ಗೈಡ್ ಎದ್ವಿನ್ಡ್ ಈ ಸ್ಥಳದ ವಿಷಯಗಳನ್ನು ಸವಿಸ್ತಾರವಾಗಿ ವಿವರಿಸಿ, ಆಗಿನ ರಾಜರ ಅರಮನೆ, ದೇವಸ್ಥಾನಗಳು, ಮನೆಗಳು, ಅವರಿದ್ದ ರೀತಿ, ನೀತಿಗಳನ್ನು ತಿಳಿಸಿದರು. ನಮ್ಮ ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸಿದರು. ಮಾಚು – ಪೀಕ್ಚೂವನ್ನು ಕಣ್ತುಂಬಿಸಿಕೊಂಡು ಅಲ್ಲಿಂದ ಹೊರಟೆವು. ಮಧ್ಯಾಹ್ನದ ಊಟವನ್ನು ಮಾಚು – ಪೀಕ್ಚೂ ಊರಿನಲ್ಲಿ ಮುಗಿಸಿ, ೩ ಘಂಟೆಗೆ ಟ್ರೈನ್ ಹತ್ತಿ “ಒಲಂಟಾಯ್ತೊಂಬಾ” ತಲುಪಿದೆವು. ಗಾಜಿನ ಛಾವಣಿ ಮತ್ತು ದೊಡ್ಡ ದೊಡ್ಡ ಗಾಜಿನ ಕಿಟಕಿಯ ಟ್ರೈನ್ ನಲ್ಲಿ ಹಿಂದಿರುಗುವಾಗ ಪ್ರಕೃತಿ ಸೌಂದರ್ಯ ಅತಿ ರಮಣೀಯ! ಟ್ರೈನ್ ಇಳಿದು ಬಸ್ ಹತ್ತಿ ೩ ಘಂಟೆ ಪ್ರಯಾಣ ಮಾಡಿ ಕುಸ್ಕೋ ನಗರವನ್ನು ತಲುಪಿದೆವು. ಚಾರಣ ಮುಗಿಸಿದ ಸಂತಸದೊಂದಿಗೆ, ಈ ೫ ದಿನ ಜೊತೆಯಾದ ಸ್ನೇಹಿತರನ್ನು ಬೀಳ್ಕೊಡುವ ಬೇಸರವೂ ಇತ್ತು! ಎಲ್ಲರಿಗೂ ವಿದಾಯ ಹೇಳಿ ಮನೆಗೆ ಮರಳಿದೆವು.

ಮಂಗಳ:

ಒಟ್ಟಿನಲ್ಲಿ ಒಂದು ಅವಿಸ್ಮರಣೀಯ ಅನುಭವ! ಸಮಯ ಮಾಡಿಕೊಂಡು ಖಂಡಿತ ಮಾಚು – ಪೀಕ್ಚೂವಿಗೆ ಭೆಟ್ಟಿಕೊಡಿ. ನಡೆಯುವ ಇಚ್ಛೆಯಿಲ್ಲದಿದ್ದರೆ ಟ್ರೈನ್ ನಲ್ಲಿ ಅನಾಯಾಸವಾಗಿ ಹೋಗಿ ಬರಬಹುದು. ಹಾಗೇ ಪೆರುವಿನಲ್ಲಿ ನೋಡಿವಂತಹ ಇನ್ನೂ ಬೇಕಾದಷ್ಟು ಜಾಗಗಳಿವೆ – ಲಿಮಾ (ರಾಜಧಾನಿ), ಅರಿಕ್ವಿಪ, ಕೊಲ್ಕಾ ಕಣಿವೆ, ಲೇಕ್ ಟಿಟಿಕಾಕಾ, ಎಲ್ಲಾ ನೋಡುವಂತಹ ಸ್ಥಳಗಳು. ೩ ಅಥವಾ ೪ ವಾರ ಆರಾಮಾಗಿ ಕಳಿಯಬಹುದು.  ಒಮ್ಮೆ ಹೋಗಿ ಬನ್ನಿ.   

ದೀಪಾವಳಿ ಕವಿತೆ ಮತ್ತು ಅನಬೆಲ್ಲ ಹೇಳಿದ ಅಮರಾಂತೆ ಕಥೆ.

ಎಳ್ಳೆಣ್ಣೆಯ ಎರಡು ದೀಪ. 
            _ ಡಾ. ದಾಕ್ಷಾಯಿಣಿ ಗೌಡ 


ಈ ಬಾರಿ,ಹೊಸ ಪರಿಯ ಕಳಕಳಿ
ನಮ್ಮ ನಿಮ್ಮೆಲ್ಲರ ಈ ದೀಪಾವಳಿ

ನಮ್ಮೂರಲ್ಲಿ, ಗೃಹಜ್ಯೋತಿಯ ಆಗಮನ,
ಆದರೇನು, ಯೂನಿಟ್ನ ಮಿತಿಮೀರದೆಡೆ ಗಮನ
ಸಾಮಾನ್ಯರಿಗೆ ಎಣ್ಣೆ ಬಲು ದುಬಾರಿ,
ಸರ್ಕಾರದ ಖರ್ಚಿನಲ್ಲಿ ಕೋಟಿ ದೀಪಗಳ ಅದ್ದೂರಿ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.

ಈ ಊರಲ್ಲೂ ಬಗ್ಗುತ್ತಿಲ್ಲ ಹಣದುಬ್ಬರ
ಕೈಗೆಟುಕದು ಬಡತನಕೆ ವಿದ್ಯುತ್ ದರ.
ಬಿಸಿ ಊಟ, ಬಿಸಿಗಾಳಿ ಆಶಿಸುವ ಎದೆ, ಉದರ,
ಎಚ್ಚರಿಕೆ, ಕೂಗುತಿದೆ, ಹಿಮಗಾಳಿಯ ಅಬ್ಬರ.
ಮನೆಮುಂದೆ ಮಿನುಗುತ್ತಿದೆ ಎಳ್ಳೆಣ್ಣೆಯ ಎರಡು ದೀಪ.

ಕಾಂಚಾಣ ಕುಣಿಸಿದಂತೆ ಆಡುವ, ತೂಗುವ ಬೆಳಕು,
ಗಗನ ಕುಸುಮ, ಬಡತನಕೆ, ಬಹುದೀಪಗಳ ಥಳುಕು.
ಲಕ್ಷದೀಪವಿರಲಿ, ಕಗ್ಗತ್ತಿನ ಕತ್ತಲಿರಲಿ ಹೊರಗೆ,
ಮಿನುಗಲಿ ನಿಮ್ಮ ನಮ್ಮೊಳಗೆ ಆನಂದದ ದೀಪ,
ಹೊಸಬಗೆಯ ಬೆಳಕಲಿ, ಬೆಳಗಲಿ ನಮ್ಮ ಸೃಷ್ಟಿಯ ದ್ವೀಪ.

ಅನಬೆಲ್ಲ ಹೇಳಿದ ಅಮರಾಂತೆ ಕಥೆ - ಡಾ.ಮುರಳಿ ಹತ್ವಾರ್ 
                     

ಅಮರಾಂತೆ ಪೋರ್ಚುಗಲ್ಲಿನ ಒಂದು ಸಣ್ಣ ಊರು. ಅದರ ಮಧ್ಯದಲ್ಲೊಂದು ನದಿ, ಅದರ ಹೆಸರು ತಮೆಗಾ. ಡ್ಯುರೋ ನದಿಯ ಉಪನದಿಯಾದ ಇದರ ಒಂದು ಕಡೆ ಈಗ ಹೊಟೇಲಾಗಿರುವ ಹಳೇ  ಕಾಲದ ಶ್ರೀಮಂತನ ಬಂಗಲೆ ಮತ್ತದರ ಸುತ್ತ ಬೆಳೆದ ಮನೆಗಳು, ಅಂಗಡಿಗಳು ಇತ್ಯಾದಿ. ಇನ್ನೊಂದು ಕಡೆ, ಸಂತ ಗೋನ್ಸಾಲನ ಇಗರ್ಜಿ ಮತ್ತದರ ಹಿಂದೆ ಯಾವತ್ತೋ ಇದ್ದ ಕಾಡನ್ನು ಮರೆಸಿ ಬೆಳೆದ ಊರು. ಮಧ್ಯದಲ್ಲೊಂದು ಅವೆರಡನ್ನೂ ಸೇರಿಸುವ ಹಳೆಯ ಬ್ರಿಡ್ಜ್ . ಸುಮಾರು  ೭೦೦ ವರ್ಷದ ಹಿಂದೆ ಇದ್ದ, ಮೊದಲು ಪಾದ್ರಿಯಾಗಿ, ಆಗಾಗ ಪವಾಡ ಮಾಡಿ, ದೊಡ್ಡ ಮೊನಾಸ್ಟರಿಯೊಂದನ್ನು ಕಟ್ಟಿ, ಕಡೆಗೆ ಸಂತರಾದ ಗೋನ್ಸಾಲರ ಇಗರ್ಜಿಯ ಅಮರಾಂತೆ ಈಗ ಪೊರ್ಟೊ ನಗರದಿಂದ ಡ್ಯುರೋ ಕಣಿವೆಗೆ ಮುಂಜಾನೆ ಹೊರಟು ಸಂಜೆಗೆ ಮರಳುವ ಪ್ಯಾಕೇಜ್ ಟೂರಿಗರಿಗೆ ಮೊದಲು ಸಿಗುವ ಸ್ಟಾಪ್. 

ಪೊರ್ಟೊ ದಲ್ಲಿ ಮುಂಜಾನೆ ಎಂಟಕ್ಕೆ ಟೂರಿನ ಮಿನಿ ಬಸ್ ಆಫೀಸಿಗೆ ವಿಧೇಯ ವಿದ್ಯಾರ್ಥಿಗಳಂತೆ ಅರ್ಧ ಗಂಟೆ ಮುಂಚೆಯೇ ತಲುಪಿದ್ದ ನಮಗೆ, ಅಲ್ಲಿನ ಏಜೇಂಟ್ ಒಬ್ಬ ನಮ್ಮ ಬಸ್ ನಂಬ್ರ ೧೯ ಮತ್ತು ಗೈಡ್ ಅನಬೆಲ್ಲ ಎಂದು ಪ್ರಿಂಟಾದ ಚೀಟಿ ಕೊಟ್ಟ. ಅದಾಗಿ ಸ್ವಲ್ಪ ಹೊತ್ತಿಗೆ ಆ ಬಸ್ಸು ಮತ್ತದರೊಟ್ಟಿಗೆ ಬಂದಿಳಿದ ಮಧ್ಯ ವಯಸ್ಸಿನ ಸ್ಥೂಲ ಕಾಯದ ಅನಬೆಲ್ಲ, ಗಟ್ಟಿ ದನಿಯಲ್ಲಿ ಬಸ್ಸಿನ ನಂಬ್ರ ಮತ್ತೆ ಹೊರಡುವ ಟೈಮನ್ನು ಮೊದಲು ಇಂಗ್ಲಿಷಿನಲ್ಲೂ ನಂತರ ಫ್ರೆಂಚಿನಲ್ಲೂ ಕೂಗಿ, ಆ ಕರೆಗೆ ಕಾದವರಂತೆ ಗಡಿಬಿಡಿಯಲ್ಲಿ ಅನಬೆಲ್ಲ ಸುತ್ತ ಸೇರಿದ ಜನರನ್ನ ಬಸ್ಸೇರಿಸಿ, ಕಡೆಗೆ ತಾನೂ ಹತ್ತಿ ಮುಂದಿನ ಸೀಟಿನಲ್ಲಿ ಕುಳಿತು,  ಕೈಗೊಂದು ವಯರಿನ ಮೈಕೆಳೆದುಕೊಂಡು ಮಾತು ಶುರುಮಾಡಿದಳು. 

ಅವಳ ಮಾತುಗಳು ರೆಕಾರ್ಡೆಡ್ ಟೇಪಿನಂತೆ ಇಂಗ್ಲಿಷ್-ಫ್ರೆಂಚ್ ತಾಳದಲ್ಲಿ ಬಸ್ಸಿನ ಕಿಟಕಿಯಾಚೆ ಕಾಣುವ ಐತಿಹಾಸಿಕ ಕಟ್ಟಡಗಳು, ಬ್ರಿಡ್ಜುಗಳು, ಸುರಂಗಳು ಅವನ್ನೆಲ್ಲ ಆದಷ್ಟು ಕಡಿಮೆ ಶಬ್ದಗಳಲ್ಲಿ ಹೇಳುತ್ತಾ, ಮಧ್ಯೆ ಮಧ್ಯೆ ನಗೆ ತಾರದ  ಜೋಕುಗಳನ್ನು ಉರುಳಿಸುತ್ತಾ, ಆದಷ್ಟು ಮೊಬೈಲ್ ಫೋನಿನಲ್ಲಿ ಅದ್ದಿದ ಮುಖಗಳನ್ನು ಹೊರ ತೆರೆಯಲು ಪ್ರಯತ್ನಿಸುತ್ತಿದ್ದಳು. ಕಡೆಗೊಮ್ಮೆ ಬಸ್ಸು ನಿಧಾನಿಸಿ ನಿಂತಾಗ, ಎಲ್ಲರನ್ನು ಕೆಳಗಿಳಿಸಿ, ಪಕ್ಕದ ಕಟ್ಟೆಯ ಮೇಲೆ ನಿಂತು, ಕೆಳಗೆ ಹರಿಯುತ್ತಿದ್ದ ತಮೆಗಾ ನದಿಯ ಪರಿಚಯವನ್ನೂ, ಗೋನ್ಸಾಲರ ಇಗರ್ಜಿಯನ್ನೂ ತೋರಿಸಿ, ಮುಕ್ಕಾಲು ಘಂಟೆಯೊಳಗೆ ಎಲ್ಲ ಸುತ್ತಿ, ಫೋಟೋದಲ್ಲಿ ಕಟ್ಟುವಷ್ಟು ಕಟ್ಟಿ, ಮತ್ತೆ ಬಸ್ಸಿನಲ್ಲಿರಬೇಕೆಂದು ಅಪ್ಪಣಿಸಿದಳು. ಅಷ್ಟಕ್ಕೇ ನಿಲ್ಲಿಸದೆ, ತನ್ನ ಮೊಬೈಲಿನಲ್ಲಿದ್ದ ಫೋಟೋವೊಂದನ್ನು ಗುಂಪಿನ ಎಲ್ಲ ಅಡಲ್ಟಿಗರಿಗೆ ತೋರಿಸುತ್ತ, ಅವರ ನಾಚಿಕೆಯ, ಆಶರ್ಯದ ನಗುವಿಗೆ ತಾನು ನಗುತ್ತ, ಅದೊಂದು ಜೋಕು ಎಂದಳು. ಅವಳು ತೋರಿಸಿದ ಆ ಫೋಟೋದ ಮರ್ಮ ಮತ್ತು ಅದರ ಹಿಂದಿನ ಜೋಕು ಆಗ ಅರ್ಥವಾಗಿರಲಿಲ್ಲ. ಸುಮ್ಮನೆ ನಕ್ಕೆವು. 

ಅನಬೆಲ್ಲ ಹೇಳಿದಂತೆ, ಆ ಹಳೆಯ ಬ್ರಿಡ್ಜಿನತ್ತ ನಡೆದು, ಅದರ ಮೇಲೆ ನಿಂತು ಆಚೆ ಈಚೆಯ ಕಟ್ಟಡಗಳನ್ನು, ಕೆಳಗೆ ಹರಿಯುತ್ತಿರುವ ನದಿಯ ಹರಿವನ್ನೂ ನೋಡುತ್ತಾ, ಗೊನ್ಸಾಲರು ತಮ್ಮ ಪವಾಡದಲ್ಲಿ ಮೊದಲು ಕಟ್ಟಿದ, ಆನಂತರ  ೧೭-೧೮ ಶತಮಾನದಲ್ಲಿ ಮತ್ತೆ ಹೊಸದಾಗಿ ಕಟ್ಟಿದ, ನೆಪೋಲಿಯನ್ನಿನ ಕಾಲದಲ್ಲಿ ನಡೆದ ಹೋರಾಟದಲ್ಲಿ ಸಿಡಿದ ಗುಂಡುಗಳ ಕಲೆಯನ್ನ ಇನ್ನೂ ಸಾಕಿರುವ ಆ ಬ್ರಿಡ್ಜನ್ನು ದಾಟಿ, ಅಮರಾಂತೆಯ ಸಂತರ ಇಗರ್ಜಿಯತ್ತ ನಡೆದ ನಮಗೆ, ಮೊದಲು ಕರೆದದ್ದು ಅಲ್ಲಿನ ಕಾರ್ ಪಾರ್ಕಿನ ಪಕ್ಕದ ಸಣ್ಣ ತೋಟದಲ್ಲಿ ದೊಡ್ಡದಾಗಿ ಇಂಗ್ಲಿಷ್ ಅಕ್ಷರಗಳಲ್ಲಿ ನಿಲ್ಲಿಸಿಟ್ಟ AMARANTE. ಬಣ್ಣ ಬಣ್ಣದ ಆ ದೊಡ್ಡ ಅಕ್ಷರಗಳ ಮುಂದೆ ನಿಂತು ಫೋಟೋದಲ್ಲಿ ನಮ್ಮ ಜೊತೆ ಅದನ್ನು ಸೇರಿಸಿ ಹೊರನಡೆಯುವಾಗ, ಪಕ್ಕದಲ್ಲೇ ಚಪ್ಪರವೊಂದರ ಕೆಳಗೆ ಒಂದಿಷ್ಟು ಸಾಮಾನುಗಳನ್ನು ಮಾರುತ್ತಿದ್ದ, ಆ ಕಾರ್ ಪಾರ್ಕಿನ ಒಂದೇ ಅಂಗಡಿಯತ್ತ, ಅಲ್ಲಿನ 'ವಿಶಿಷ್ಣ' ಆಕಾರದ, ಪ್ಲಾಸ್ಟಿಕಿನಲ್ಲಿ ಸುತ್ತಿಟ್ಟ ವಸ್ತುಗಳನ್ನ ಏನೆಂಬ ಕುತೂಹಲದಲ್ಲಿ ನೋಡಲು ಹತ್ತಿರ ಹೋದೆವು. ಅಲ್ಲಿದ್ದದ್ದು, ಅನಬೆಲ್ಲ ಫೋನಿನಲ್ಲಿ ಜೋಕೆಂದು ತೋರಿಸಿದ ಆಕಾರದ ಸಣ್ಣ, ದೊಡ್ಡ, ಗಟ್ಟಿ, ಮತ್ತು ಮೆತ್ತನೆಯ ವೆರೈಟಿಯ ಕೇಕುಗಳು. 

ಆ ಕೇಕುಗಳ ದರ್ಶನದಿಂದ ಮನಸ್ಸಿನಲ್ಲಿ ಕುಣಿಯುತ್ತ ಮುಖದಲ್ಲಿ ಹೊರಬರಲು ಯತ್ನಿಸುತ್ತಿದ್ದ ಚೇಷ್ಟೆಯ ಹುಡುಗುತನವನ್ನ ಸ್ವಲ್ಪ ಬದಿಗಿಟ್ಟು, ಆ ಅಂಗಡಿಯ ಒಡತಿಗೆ, ಆ ಕೇಕುಗಳ ಆಕಾರದ ಹಿಂದಿನ ಕಥೆ ಏನೆಂದು ಕೇಳಿದೆವು. ನಮ್ಮ ಇಂಗ್ಲೀಷು ಆಕೆಯ ಪೋರ್ಚುಗೀಸು ನಡುವೆ ಯಾವುದೇ ಸೇತುವೆ ಇಲ್ಲದ ಕಾರಣ, ಕೈ ಸನ್ನೆಯಲ್ಲಿ ಒಂದು ಕೇಕಿನ ದುಡ್ಡು ಕೇಳಿ, ಕೊಂಡು, ಸಕ್ಕರೆಯ ಐಸಿಂಗಿನ ಆ ಕೇಕಿನ ಪ್ಲಾಸ್ಟಿಕಿನ ಬಂಧನದಿಂದ ಹೊರ ತಂದು, ತರತರದಲ್ಲಿ ಕೈಯಲ್ಲಿ ಹಿಡಿದು, ಫೋಟೋ ಮತ್ತು ವಿಡಿಯೋಗಳಲ್ಲಿ ಅದನ್ನು ವರ್ಣಿಸಿ, ಆಪ್ತ ಗೆಳೆಯರ ವಾಟ್ಸಪ್ಪ್ ಗುಂಪಿಗೆ ಆ  ಕೇಕನ್ನು ವಿಡಿಯೋದ ಮೂಲಕ ಅರ್ಪಿಸಿ, ಮುನ್ನಡೆದೆವು. ಆಗ ಮಾತೆಲ್ಲ ಆ ಕೇಕು ಹುಟ್ಟಿದ, ಮತ್ತೆ ಹೀಗೆ ದಿನ ದಿನ ಅಮರಾಂತೆಯ ಹಲವು ಓವನ್ನು ಗಳಲ್ಲಿ ಬೇಯುತ್ತಿರುವ ಅದರ ಅವತಾರಗಳ ಹಿಂದಿನ ಕಾರಣಕ್ಕೆ ನಮ್ಮ ಊಹೆಯ ಪಟ್ಟಿ. 

ಹಾಗೆ ಪಕ್ಕದ ಇಗರ್ಜಿಯ ಮುಂದಿಷ್ಟು ಭಂಗಿಗಳಲ್ಲಿ ನಮ್ಮನ್ನು ಫ್ರೇಮಿಸಿಕೊಂಡು, ಬ್ರಿಡ್ಜಿನ ಮೊದಲ ಬದಿಗೆ ಮರಳಿ, ಪಕ್ಕದ ಬೀದಿಯಲ್ಲಿ ಕಾಪಿಯ ಬಾಯಾರಿಕೆಗೆ ಹೊರಟ ನಮಗೆ ಮತ್ತೆ ಅಲ್ಲಿನ ಟೂರಿಸ್ಟ್ ಅಂಗಡಿಗಳ ಮ್ಯಾಗ್ನೆಟ್ಟುಗಳಲ್ಲಿ, ಹಾಗೆಯೇ ಆ ಬೀದಿಯ ಕೆಲವು ಬೇಕರಿಗಳಲ್ಲಿ ಮತ್ತದೇ ಕೇಕಿನ ದರ್ಶನ. ಬೇಕರಿಯ ಕೇಕುಗಳಿಗೆ ಸಕ್ಕರೆಯ ಕವಚವಿದ್ದರೆ, ಮ್ಯಾಗ್ನೆಟಿನ ಚಿತ್ರಗಳ ಕೇಕಿನ ಮೇಲೆ ಒಂದು ಹಲ್ಲಿ. ಆ ಮ್ಯಾಗ್ನೆಟ್ಟನ್ನು ಕೊಂಡುಕೊಳ್ಳುವಷ್ಟು ಧೈರ್ಯ ಬರಲಿಲ್ಲ. ಯಾವತ್ತಿನಂತೆ ಮೊಬೈಲಿನ ಕ್ಯಾಮರಾಕ್ಕೆ ಸೇರಿಸಿಕೊಂಡೆವಷ್ಟೇ. ಅಷ್ಟರಲ್ಲಿ ಸಮಯದ ಮುಳ್ಳು ಅನಬೆಲ್ಲ ಹಾಕಿದ ಗೆರೆ ಮುಟ್ತುತ್ತಿದ್ದರಿಂದ, ಅವಸರದಲ್ಲಿ ಕಾಪಿ ಕಪ್ಪು ಹಿಡಿದು ಬಸ್ಸಿನತ್ತ ಓಡಿದಂತೆ ನಡೆದೆವು. 

ಬಸ್ಸಿನ ಬಾಗಿಲಿನ ಪಕ್ಕ ನಿಂತಿದ್ದ ಅನಬೆಲ್ಲಳ ಹತ್ತಿರ ಅಮರಾಂತೆಯ ಕೇಕಿನ ಕಥೆ ಮತ್ತೆ ಕೇಳಲು, ಅವಳು ಅದರ ಹೆಸರು ಸಂತ ಗೊನ್ಸಾಲಿನ್ಹೋ ಎಂದೂ, ಹಾಗೆಂದರೆ 'ದಿ ಲಿಟಲ್ ಗೋನ್ಸಾಲ್' ಎಂದರ್ಥವೆಂದೂ, ಮತ್ತೆ ಒಂದು ಕಾಲದಲ್ಲಿ ಅತಿ ಪ್ರಬಲವಾಗಿದ್ದ ಚರ್ಚಿನ ಹಿಡಿತದ ವಿರುದ್ಧ ಯಾವಾಗಲೋ ಸಿಡಿದೆದ್ದ ರೆಬೆಲಿಗರು, ಅವರ ಕೋಪ ಮತ್ತೆ ವ್ಯಂಗ್ಯವನ್ನು ವ್ಯಕ್ತಪಡಿಸಲು ಮೊದಮೊದಲು ಈ ಕೇಕನ್ನು ಬೇಯಿಸಿದರೆಂದೂ, ಹಾಗೆ ಬರುಬರುತ್ತ ಅದು ಅಮರಾಂತೆಯ ಜೋಕಿನ  ಕೇಕಾಗಿ ಬಿಟ್ಟಿದೆ ಎಂದೆಲ್ಲ ವಿವರಿಸಿದಳು. ಅಷ್ಟಕ್ಕೇ ನಿಲ್ಲದೆ, ಆ ಕೇಕನ್ನು ತಿಂದವರಿಗೆ ಅವರಿಷ್ಟದ 'ಲವ್' ಸಿಗುತ್ತದೆ ಎಂದು ಜೋರಾದ ನಗುವಿನಲ್ಲಿ ಹೇಳುತ್ತಾ ಬಸ್ಸು ಹೊರಡಿಸಿದಳು. 

ಅವಳ ವಿವರಣೆ, ಸಮಾಜದ ಪ್ರಬುದ್ಧತೆಗೆ ಅನುಗುಣವಾಗಿ ಹೋರಾಟದ ಮಜಲುಗಳು ವ್ಯಕ್ತವಾಗುವ ರೀತಿ, ಅವುಗಳ ಹಿಂದಿನ ಪ್ರೇರಣೆ ಮತ್ತು ಧೈರ್ಯವನ್ನು ಮೆಚ್ಚುತ್ತ, ವಿಮರ್ಶಿಸುತ್ತಾ, ನೆನಪಿನ ಕೊಟ್ಟೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಮರಾಂತೆಯನ್ನ ಮಡಿಚಿಡುತ್ತಿದ್ದವು. ಅಮರಾಂತೆಯನ್ನು ದಾಟಿದ ಮೇಲೂ ತಣಿಯದ ಕುತೂಹಲದಲ್ಲಿ ಹುಡುಕಿದ ವಿಕಿಪಿಡಿಯಾದಲ್ಲೂ ಅನಬೆಲ್ಲ ಕಥೆಯಷ್ಟು ವಿವರಗಳಿರಲಿಲ್ಲ. ಆದರೆ, 'ಸಂತ ಗೊನ್ಸಾಲಿನ್ಹೋ'  ಚಿತ್ರವಿದೆ ಅಲ್ಲಿ, ಬೇಕಾದರೆ, ಸಣ್ಣ ಮಕ್ಕಳು ಪಕ್ಕ ಇಲ್ಲದಿದ್ದಾಗ ಸೈಲೆಂಟಾಗಿ ನೋಡಿ ನಮಸ್ಕರಿಸಿಬಿಡಿ.  

ಮೂರು ಕವನಗಳು

ವೃತ್ತಿಯಲ್ಲಿ ಹೃದಯ ತಜ್ಞರಾಗಿರುವ ಡಾ. ಸುರೇಶ ಸಗರದ ಅವರಿಗೆ ಸಾಹಿತ್ಯದಲ್ಲೂ ಅಷ್ಟೇ ಅಭಿರುಚಿ. ಅವರ ಕವನಗಳು
ಹಲವಾರು ಕವನ ಸಂಕಲನಗಳಾಗಿ ಪ್ರಕಟವಾಗಿವೆ. ಬಸವಣ್ಣನವರನ್ನು ಕುರಿತು ಬರೆದ ಅವರ ಕವನಗಳು ಉತ್ತಮ
ರಾಗಸಂಯೋಜನೆಯ ಜೊತೆಗೆ, ‘ಧ್ವನಿ ಸುರಳಿ’ ಗಳಾಗಿ ಕೇಳುವವರಿಗೆ ಲಭ್ಯವಾಗಿವೆ. ಹೃದಯ ಆರೋಗ್ಯ ಕುರಿತು ಸಾಮಾನ್ಯ
ಜನತೆಗೆ ಅರ್ಥವಾಗುವ ರೀತಿಯಲ್ಲಿ ಹಲವಾರು ಪುಸ್ತಕಗಳನ್ನೂ ಮತ್ತು ಲೇಖನಗಳನ್ನೂ ಪ್ರಕಟಿಸಿದ್ದಾರೆ. ಪ್ರಸ್ತುತ ‘ವೈದ್ಯ
ಸಂಪದ’ ದ ಪ್ರಧಾನ ಸಂಪಾದಕರಾಗಿದ್ದಾರೆ. ಅವರ ಕವನ ಸಂಕಲನದಿಂದ ಆಯ್ದ ಈ ಮೂರು ಕವನಗಳನ್ನು ನಿಮ್ಮ ಮುಂದೆ
ಇಟ್ಟಿರುವೆ. ಓದಿ ಪ್ರತಿಕ್ರಿಯಿಸುತ್ತೀರಿ ಎಂದು ನಂಬಿರುವೆ.
– —– ಇಂತಿ ಸಂಪಾದಕ

ಡಾ. ಸುರೇಶ ಸಗರದ


2) “ಖಾಲಿ ಖಯಾಲಿ
ಖಾಲಿ ಮಾಡುತ ನಡೆದಿರುವೆ
ಕಾಲ ತುಂಬಿದ ಚೀಲವ
ಖಾಲಿತನದ ಖಯಾಲಿಯಲ್ಲ
ಸಾಲ ತೀರಿಸಲು ಇದೆಲ್ಲಾ!
ತಳಕೆ ಕಲ್ಲು ಬಿಟ್ಟು
ಕಾಗೆ ನೀರ ಕುಡಿಯತಂತೆ
ಎಲ್ಲಿಂದ ಹೆಕ್ಕಿ ತರಲಿ ಕತೆಯ ಕಲ್ಲುಗಳ
ತುಂಬಿದ ಕೊಡ ಹುಟ್ಟಿ
ತುಳುಕುವುದು ನೋಡಿದಿರಾ?
ಇದು ಬದುಕು
ತುಂಬಾ ಥಳಕು ಬೆಳಕು
ಯಾವಾಗ ಕೊಡ ಖಾಲಿ
ಯಾರಿಗೆ ಏನೆಂದು ಕೊಡಲಿ
ಕೊಟ್ಟವನು ಪುನಃ ಪುನಃ
ಕೊಡಲಿ ಕೊಡಲಿ
ಮತ್ತೆ ಕೊಡ ತುಂಬಲಿ!


3) “ನಾನೋ ನೀನೋ ?
ಬದುಕನ್ನೇ ಹುಡುಕುತ್ತಿದ್ದೆ
ತಡವರಿಸುತ್ತಾ ಬದುಕಿನಲ್ಲಿ
ಅವರಿಗಾಗಿ ಇವರಿಗಾಗಿ
ಎನ್ನುವ ನಾಟಕದಲ್ಲಿ
ನನ್ನೊಳಗೆ ಆವರಿಸಿಕೊಂಡ
ನಿನ್ನನ್ನೂ ಹುಡುಕುತ್ತಿದ್ದೆ
ಕೂಡಿ ಕಳೆದ ದಾರಿಯಲ್ಲಿ
ನಾನು ನಿನಗಾಗಿ
ನೀನು ನನಗಾಗಿ
ಎನ್ನುವ ಮರೀಚಿಕೆ
ತೀರದ ಅತಿ ದಾಹ
ಪಂಚ ಭೂತಗಳ
ಈ ಪಂಚಾಯಿತಿ
ಆ ನಿರ್ದೇಶಕನ
ದೂಷಿಸಿದೆ ಮತ್ತೆ ಮತ್ತೆ

ಇಂದಿನ ಶಿಕ್ಷಣಕ್ಷೇತ್ರ – ಶಿಕ್ಷಕಿಯ ದೃಷ್ಟಿಯಲ್ಲಿ.

ಕಳೆದ ವಾರಗಳ ಚಿಂತನ ಲೇಖನಗಳ ಹಾದಿಯಲ್ಲೇ ಈ ವಾರವೂ ಶಿಕ್ಷಣ ಕ್ಷೇತ್ರದ ಬಗ್ಗೆಯೇ ಮುಂದುವರೆದಿದೆ. ಬೆಂಗಳೂರಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ಶ್ರೀಮತಿ ಸೀತಾ ಗುಡೂರ ಅವರ ಸ್ವಂತ ಅನುಭವದ ಲೇಖನ. ಪದವಿಯವರೆಗೆ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಸೀತಾ ಗುಡೂರ್, ಮುಂದೆ ಕನ್ನಡದಲ್ಲಿ ಎಮ್ ಎ, ಎಂಫಿಲ್ ಮಾಡಿ ಕನ್ನಡದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಳೆಗನ್ನಡ, ದಾಸಸಾಹಿತ್ಯ, ವಚನಸಾಹಿತ್ಯ ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಸೀತಾ ಗುಡೂರ್ ಒಬ್ಬ ಉತ್ಸಾಹಿ ಶಿಕ್ಷಕಿ. ನಗರದ ಒಳ ಮತ್ತು ಹೊರವಲಯದ ಸಂಸ್ಥೆಗಳಲ್ಲಿ ಕೆಲಸಮಾಡಿರುವ ಅವರ ಅನುಭವ ಹೀಗಿದೆ. ಎಂದಿನಂತೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ. – ಸಂಪಾದಕ.

*****

ನಾವು ಕೆಲಸ ಮಾಡುತ್ತಿರುವ ಕ್ಷೇತ್ರ ಯಾವುದೇ ಆಗಿರಲಿ, ಮೊತ್ತಮೊದಲಿಗೆ ಅದು ನಮ್ಮ ಆಸಕ್ತಿಯ ಕ್ಷೇತ್ರವಾಗಿರಬೇಕು. ಏಕೆಂದರೆ, ಮೂಲಭೂತವಾಗಿ ಆಸಕ್ತಿಯೇ ಎಲ್ಲವನ್ನು ಕಲಿತುಕೊಳ್ಳಲು, ಕಲಿಸಲು ಪ್ರೇರೇಪಿಸುತ್ತದೆ. ರಾಷ್ಟ್ರಕವಿ ಶ್ರೀ ಜಿಎಸ್ ಶಿವರುದ್ರಪ್ಪ ಅವರು ಹೇಳುವಂತೆ "ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ….. ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?" ಈ ಕವನದ ಉದ್ದಕ್ಕೂ ಕಾಣುವ ’ಪ್ರೀತಿ’ ಆಸಕ್ತಿಯ ರೂಪವೇ ಆಗಿದೆ. ಕಲಿಯುವ, ಕೆಲಸ ಮಾಡುವ, ಕಲಿಸುವ ಬಗ್ಗೆ ಪ್ರೀತಿಯೇ ಇಲ್ಲದ ಮೇಲೆ ಶಿಕ್ಷಣದ ಉದ್ದೇಶವು ಸಾಧಿತವಾಗುವುದಿಲ್ಲ ಅಲ್ಲವೇ? 

ಶಿಕ್ಷಣ ರಂಗದ ಇಂದಿನ ಸಮಸ್ಯೆಗಳ ಕಡೆಗೆ ಗಮನಹರಿಸಿದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇಬ್ಬರಲ್ಲೂ ಸಮಸ್ಯೆ ಇರುವುದು ಎದ್ದು ಕಾಣುವಂಥದ್ದು. ಮೊದಲಿಗೆ ಶಿಕ್ಷಕರನ್ನೇ ನಾವು ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಅರಿಯದ ವಿದ್ಯಾರ್ಥಿಗಳಿಗೆ ಎಲ್ಲವನ್ನೂ ಹಂತ ಹಂತವಾಗಿ ಕಲಿಸುವ ದೊಡ್ಡ ಹೊಣೆಗಾರಿಕೆ ಶಿಕ್ಷಕರದೇ. ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಭದ್ರಬುನಾದಿ ಬೀಳಬೇಕಾದದ್ದು ಅತ್ಯಗತ್ಯ. ಇತ್ತೀಚಿನ ಕೆಲವು ವರ್ಷಗಳಲ್ಲಿ ಪ್ರಾಥಮಿಕ ಹಂತದಲ್ಲಿ ಭಾಷಾ ವಿಷಯಗಳನ್ನು ಕಲಿಸುವಲ್ಲಿ ದಿವ್ಯನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಎಳೆಯ ವಯೋಮಾನದ ಚಂಚಲ ಮನಸ್ಥಿತಿಯ ಮಕ್ಕಳಿಗೆ ಕನ್ನಡ (ಅಥವಾ ಯಾವುದೇ) ಭಾಷೆಯನ್ನು ಹೇಳಿಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ವತಃ ಶಿಕ್ಷಕರು ಪಾಠ ಮಾಡುವಾಗ ಶುದ್ಧ ಗ್ರಾಂಥಿಕ ಭಾಷೆಯ ಬಳಕೆ, ಸ್ಪಷ್ಟ ಉಚ್ಚಾರಣೆ, ಶುದ್ಧ ಹಾಗೂ ಸ್ಪಷ್ಟ ಬರವಣಿಗೆಗಳನ್ನು ಮೈಗೂಡಿಸಿಕೊಂಡಿರಬೇಕಾಗುತ್ತದೆ. ಆದರೆ ಜೀವನೋಪಾಯಕ್ಕಾಗಿ ಯಾವುದೋ ಒಂದು ನೌಕರಿಯನ್ನು ಮಾಡಬೇಕಾಗಿ ಬಂದ ಅನಿವಾರ್ಯತೆಯಲ್ಲಿ ಎಲ್ಲಿಯೂ ಸಲ್ಲದವರು ಶಿಕ್ಷಣ ಕ್ಷೇತ್ರಕ್ಕೆ ಸಂದಾಗ, ಅವರಲ್ಲಿ ಅಧ್ಯಯನ-ಅಧ್ಯಾಪನಗಳ ಕಡೆಗೆ ಬದ್ಧತೆ ಕಡಿಮೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಇದಕ್ಕೆ ಅಪವಾದ ಎನಿಸುವವರು ಸಾಕಷ್ಟು ಜನ ಅಧ್ಯಾಪಕರು ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ.

ಇನ್ನು ಉಪನ್ಯಾಸಕರು ಕನ್ನಡ ಭಾಷಾ ಐಚ್ಛಿಕ ವಿಷಯವನ್ನು ಪಾಠ ಮಾಡಬೇಕೆಂದರೆ ಅವರ ಸಾಹಿತ್ಯದ ಅಧ್ಯಯನದ ವ್ಯಾಪ್ತಿ ದೊಡ್ಡದಿರಬೇಕಾಗುತ್ತದೆ. ಬರಿಯ ಕನ್ನಡವೊಂದೇ ಅಲ್ಲದೇ, ಅದರಲ್ಲಿ ಹಾಸುಹೊಕ್ಕಾಗಿರುವ ಇತರ ಭಾಷೆಗಳ ಕೊಡುಗೆಗಳ ಬಗ್ಗೆ ಸ್ವಲ್ಪವಾದರೂ ಅರಿವಿರಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಕೃತ ಭಾಷೆಯ ಸ್ವಲ್ಪಮಟ್ಟಿಗಿನ ಅರಿವು ಮತ್ತು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕನ್ನಡ-ಸಂಸ್ಕೃತ ಭಾಷೆಗಳ ಅವಿನಾಭಾವ ಸಂಬಂಧದ ತಿಳಿವು ಇವು ಉಪನ್ಯಾಸಕರಲ್ಲಿ ಕಡಿಮೆಯಾಗುತ್ತಿರುವುದು ಖೇದಕರ. ಸಂಸ್ಕೃತವನ್ನು ದೂಷಿಸುವವರು ಕನ್ನಡದ ಆದಿಕವಿ ಪಂಪನಿಂದ ಹಿಡಿದು ಕುವೆಂಪು ಅವರ ತನಕ ಕಾವ್ಯವನ್ನು ಹೇಗೆ ತಾನೇ ಪಾಠ ಮಾಡಬಲ್ಲರು? ಕನ್ನಡ-ಸಂಸ್ಕೃತ ಭಾಷಾಸಮನ್ವಯದ ಕಾರಣದಿಂದ ಹುಟ್ಟಿ ಬಂದ ಈ ಅಮೂಲ್ಯ ಕೃತಿರತ್ನಗಳನ್ನು ನಿರಾಕರಿಸಲು ಸಾಧ್ಯವೇ? ಪಾಠ ಮಾಡುವ ನಾವು ಮೊದಲು ಸರಿಯಾಗಿ ಅಧ್ಯಯನ ಮಾಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗದಂತೆ ಹೇಳಬಹುದು ಅನ್ನುವುದರಲ್ಲಿ ಎರಡು ಮಾತಿಲ್ಲ.

ಭಾಷೆಯನ್ನು ಕಲಿಯುವಾಗ ಮಕ್ಕಳು ಮಾಡುವ ತಪ್ಪುಗಳನ್ನು ಆರಂಭದಲ್ಲೇ ತಿದ್ದದೇ ಹೋದಾಗ ಅವರು ಪ್ರೌಢ ಶಿಕ್ಷಣ ಮುಗಿಯುವವರೆಗೂ ಹಾಗೆ ಉಳಿದುಬಿಡುತ್ತಾರೆ. ಪ್ರಥಮ ಪಿಯುಸಿಗೆ ಸೇರುವಾಗ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ಹೆಸರನ್ನು ಬರೆಯಲೂ ಬರುವುದಿಲ್ಲ ಎಂದು ನಾನು ಹೇಳಿದರೆ ನೀವು ನಂಬಲಿಕ್ಕಿಲ್ಲ. ಹೆಚ್ಚುಪಾಲು ಮಕ್ಕಳು ಹ್ರಸ್ವ-ದೀರ್ಘ, ಸ್ವರ-ವ್ಯಂಜನ, ಅಲ್ಪಪ್ರಾಣ-ಮಹಾಪ್ರಾಣ, ಅ – ಹಕಾರಗಳ ಬಳಕೆ ಇತ್ಯಾದಿಗಳ ವ್ಯತ್ಯಾಸವೇ ತಿಳಿಯದೇ, ಉಚ್ಚಾರಣೆ ಮತ್ತು ಬರವಣಿಗೆ ಎರಡರಲ್ಲೂ ಬಹಳ ಹಿಂದುಳಿದವರು ಆಗಿರುತ್ತಾರೆ. ಈ ಹಂತದಲ್ಲಿ ನಾವು ಏನನ್ನು ಮಾಡಲು ಸಾಧ್ಯ? ಕಾಲೇಜು ತರಗತಿಗಳು ಆರಂಭವಾದ ಮೊದಲ ಎರಡು ವಾರಗಳಲ್ಲಿ ವರ್ಣಮಾಲೆಯನ್ನು ಬರೆಸುವ, ಧ್ವನ್ಯಂಗಗಳ ಬಗ್ಗೆ ವಿವರಿಸಿ, ಉಚ್ಚಾರಣೆಯ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸವೇ ಆಗುತ್ತದೆ. ಆದಾಗಿಯೂ ಈ ಮಕ್ಕಳಿಗೆ ಆಸಕ್ತಿಯಿಂದ ಕೇಳುವಷ್ಟು ತಾಳ್ಮೆ ಇರುವುದೇ ಇಲ್ಲ. ಕಾಲೇಜು ಜೀವನದಲ್ಲಿ ಕಲಿಯುವುದಕ್ಕಿಂತ ಹೆಚ್ಚು ಎಂಜಾಯ್ ಮಾಡಬೇಕು ಎಂಬ ಮನಸ್ಥಿತಿಯವರೇ ಈನಡುವೆ ಬಹಳ. ತರಗತಿಯ 90 ವಿದ್ಯಾರ್ಥಿಗಳಲ್ಲಿ 15-20 ವಿದ್ಯಾರ್ಥಿಗಳು ಉತ್ತಮ ಗ್ರಹಿಕೆಯ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಉಳಿದವರಲ್ಲಿ ಸುಮಾರು 40 ವಿದ್ಯಾರ್ಥಿಗಳಿಗೆ ಪದೇಪದೇ ಹೇಳಿ ಬರೆಸಿದಾಗ ಸ್ವಲ್ಪ ಸುಧಾರಿಸುತ್ತಾರೆ. ಮಿಕ್ಕವರು ನಾವೆಷ್ಟೇ ಪ್ರಯತ್ನಪಟ್ಟರೂ ಯಾವುದೇ ಪ್ರತಿಕ್ರಿಯೆ ತೋರದೆಯೇ ಇರುತ್ತಾರೆ.

ವಿದ್ಯಾರ್ಥಿಗಳ ಈ ವರ್ತನೆಗೆ ಕೇವಲ ಅವರ ಉಡಾಫೆಯ ಮನೋಭಾವವನ್ನಷ್ಟೇ ದೂಷಿಸಲಾಗದು, ಅವರವರ ಮನೆಯ ಹಾಗೂ ಬೆಳೆದು ಬಂದ ಪರಿಸರವೂ ಮುಖ್ಯ ಕಾರಣವೆಂಬುದು ವೇದ್ಯ. ನಗರಗಳಲ್ಲಿ ತಾಯಿ-ತಂದೆಯರು ವಿದ್ಯಾವಂತರಾದರೂ, ಇಬ್ಬರೂ ಕೆಲಸ ಮಾಡುತ್ತಿರುವ ಕಾರಣಕ್ಕಾಗಿ ಸಮಯದ ಅಭಾವದಿಂದ ಅವರಿಗೆ ಮಕ್ಕಳ ಕಡೆಗೆ ಗಮನ ಹರಿಸಲಾಗಿರುವುದಿಲ್ಲ. ಇನ್ನು ಗ್ರಾಮಾಂತರ ಮಕ್ಕಳ ತಂದೆತಾಯಿಯರೋ ಅನಕ್ಷರಸ್ಥರು, ಕೂಲಿ-ನಾಲಿಗಳಿಗೆ ಹೋಗುವವರು ಇರುತ್ತಾರೆ; ಎಷ್ಟೋ ಕುಟುಂಬಗಳಲ್ಲಿ ಕುಡಿತದ ವ್ಯಸನ, ಕೌಟುಂಬಿಕ ಕಲಹ, ಅನಾಥ ಮಕ್ಕಳು ಯಾರದೋ ಆಶ್ರಯದಲ್ಲಿದ್ದು ಓದುತ್ತಿರುವವರು, ಕೆಲಸದ ಮಧ್ಯೆ ಓದಲು ಸಮಯವೇ ಸಿಗದಿರುವುದು ಮುಂತಾದ ಕಾರಣಗಳೆಲ್ಲ ಗಮನಕ್ಕೆ ಬರುತ್ತಿರುತ್ತವೆ. ಈ ಎಲ್ಲಾ ಗಂಭೀರ ಸಮಸ್ಯೆಗಳ ಮಧ್ಯೆಯೂ ಜೀವನದಲ್ಲಿ ಸಾಧಿಸುವ ಗುರಿಯಿಟ್ಟುಕೊಂಡು ಓದುವ ಮಕ್ಕಳೇ ನಮಗೆ ನಿರಂತರ ಸ್ಫೂರ್ತಿ. ನಿಜ ಹೇಳಬೇಕೆಂದರೆ, ಒಂದು ತರಗತಿಯಲ್ಲಿ ಇಂಥವರು ಒಂದಿಬ್ಬರು ಇದ್ದರೂ ಪಾಠ ಮಾಡಲು ಉತ್ಸಾಹವಿರುತ್ತದೆ.

ಪಠ್ಯಕ್ಕೆ ಸಂಬಂಧಿಸಿದಂತೆ ಕಲಿಯುವ ಕುತೂಹಲ ಆಸಕ್ತಿ ಪ್ರಯತ್ನದಲ್ಲಿ ಇದ್ದಾಗ ನಮಗೂ ಸ್ವತಹ ಕಲಿಯುವ, ಆ ಮೂಲಕ ಕಲಿಸುವ ಲವಲವಿಕೆ ಇರುತ್ತದೆ ಇತ್ತೀಚಿನ ಕೆಲವು ವರ್ಷಗಳಲ್ಲಿ ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಕನ್ನಡದ ಪ್ರಾಚೀನ ಕವಿಗಳು, ಅವರ ಕಾವ್ಯಗಳು ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ಉಪನ್ಯಾಸಕರಿಗೂ ಆಸಕ್ತಿ ತಿಳುವಳಿಕೆ ಇಲ್ಲದಿರುವುದು ನಿಜಕ್ಕೂ ಖೇದದ ಸಂಗತಿ. ಬಹುತೇಕ ವಿದ್ಯಾರ್ಥಿಗಳು ಮನೆಯಲ್ಲಿ ರಾಮಾಯಣ ಮಹಾಭಾರತ ಕಥೆಗಳನ್ನು ಕೇಳಿರುವುದಿಲ್ಲ; ಶಾಲೆಗೆ ಸೇರಿದಾಗ ಕಲಿತದ್ದಷ್ಟೋ ಅಷ್ಟೇ. ವಿಭಿನ್ನ ಯುಗದ ಪಾತ್ರಗಳನ್ನು ಘಟನೆಗಳನ್ನು ಸೇರಿಸಿ ಉತ್ತರ ಬರೆಯುವುದನ್ನು ನೋಡಿದಾಗ, ಆ ಕ್ಷಣಕ್ಕೆ ಅದು ನಗುತರಿಸಿದರೂ ಮನಸ್ಸಿಗೆ ದುಃಖವಾಗುತ್ತದೆ. ಪಾಠ ಮಾಡುವಾಗ ಕೇಳಿಸಿಕೊಳ್ಳದ, ಸ್ವಂತ ಅಧ್ಯಯನ ಮಾಡದ, ಉಚ್ಚಾರ-ಬರವಣಿಗೆಯ ತಪ್ಪನ್ನು ತಿದ್ದಿಕೊಳ್ಳದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವೇ?

ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದ ಅನುಭವದ ಪ್ರಕಾರ ಪ್ರಾಥಮಿಕ ಶಿಕ್ಷಣವು ಬಹಳ ಮುಖ್ಯ. ಅಲ್ಲಿ ಹಾಕಿದ ಬುನಾದಿ ಸರಿಯಾದರೆ, ಮುಂದೆ ಪ್ರೌಢಶಾಲೆಯ ಹಾಗೂ ಪದವೀಪೂರ್ವ ಹಂತದಲ್ಲಿ ಅವರನ್ನು ಸಾಧನೆ ಹಾದಿಯಲ್ಲಿ ಕರೆದೊಯ್ಯುವುದು ಸುಲಭ. ಇಲ್ಲವಾದರೆ ಎರಡು ವರ್ಷಗಳ ಪದವಿಪೂರ್ವ ಹಂತದ ಕಲಿಕೆ ಅವರ ಕಾಗುಣಿತವನ್ನು ತಿದ್ದಿ, ಉಚ್ಚಾರಣೆಯನ್ನು ಸ್ಪಷ್ಟಗೊಳಿಸಿ, ಸರಿಯಾದ ವಾಕ್ಯರಚನೆ ಮಾಡುವ ಸಾಮರ್ಥ್ಯವನ್ನು ಬೆಳೆಸುವ ಕೆಲಸಕ್ಕೆ ಮಾತ್ರ ಸೀಮಿತವಾದರೆ, ನಾವು ನಮ್ಮ ಪಠ್ಯದೊಳಗಿನ ಕಾವ್ಯದ ಸೌಂದರ್ಯವನ್ನು, ಗದ್ಯಪಾಠಗಳ ಮಹತ್ವವನ್ನು ಮನಸ್ಸಿಗೆ ತೃಪ್ತಿಯಾಗುವಂತೆ ಬೋಧಿಸುವುದು ಹೇಗೆ?

ನಾವು ಉಪನ್ಯಾಸಕರಾಗಿ ಎಷ್ಟೇ ಪ್ರಯತ್ನಪಟ್ಟರೂ, ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಉತ್ಸಾಹ ಆಸಕ್ತಿ ಬೆಳೆಸುವಲ್ಲಿ ಶ್ರಮವಹಿಸಿದರೂ, ಕೊನೆಗೆ ಸರಿಯಾಗಿ ಓದಬೇಕಾದ ಕರ್ತವ್ಯ ವಿದ್ಯಾರ್ಥಿಯದೇ ಆಗುತ್ತದೆ. ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು, ನೀರಿನ ಹತ್ತಿರ ಬಗ್ಗಿಸಬಹುದು, ಆದರೆ ನೀರು ಕುಡಿಯಬೇಕಾದದ್ದು ಕುದುರೆಯೇ ಅಲ್ಲವೇ?

ಒಟ್ಟಾರೆ ಹೇಳಬೇಕೆಂದರೆ, ಶಿಕ್ಷಣಕ್ಷೇತ್ರದ ಯಶಸ್ಸು ವಿದ್ಯಾರ್ಥಿ-ಶಿಕ್ಷಕ-ಪೋಷಕ ಈ ಮೂರು ಕಾಲುಗಳ ಮೇಲೆ ನಿಂತಿದೆ, ಮೂವರೂ ಮುಖ್ಯ. ಇವರೆಲ್ಲರ ಪ್ರಯತ್ನವು ಸೇರಿದಾಗಲೇ ಸಫಲತೆ ದಕ್ಕುವುದು.

- ಸೀತಾ ಗುಡೂರ್, ಬೆಂಗಳೂರು.

*********************************************

ಬದಲಾಗುತ್ತಿರುವ ಸಮಾಜ ಮತ್ತು ಶಿಕ್ಷಣ

ಡಾ ಜಿ ಎಸ್ ಶಿವಪ್ರಸಾದ್

ಯುಕೆ ಕನ್ನಡ ಬಳಗದ ೪೦ನೇ ವಾರ್ಷಿಕೋತ್ಸವ ಸಮಾರಂಭದ ಅನಿವಾಸಿ ಆಶ್ರಯದಲ್ಲಿ ಶಿಕ್ಷಣ ವಿಷಯದ ಬಗ್ಗೆ  ನಡೆದ ಚರ್ಚಾಗೋಷ್ಠಿಯಲ್ಲಿ ಮಂಡಿಸಿದ  ನನ್ನ ಕೆಲವು ಅನಿಸಿಕೆಗಳನ್ನು ಆಧರಿಸಿ ಮುಂದಕ್ಕೆ ವಿಸ್ತರಿಸಿ ಬರೆದಿರುವ ಲೇಖನ. 'ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣ' ಕುರಿತಾದ ವಿಷಯಗಳು ಸಾಕಷ್ಟಿವೆ. ಅದರ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದೇನೋ. ಹೀಗಾಗಿ ನನ್ನ ಅನಿಸಿಕೆಗಳನ್ನು  ತುಸು ದೀರ್ಘವಾಗಿಯೇ ದಾಖಲಿಸಿದ್ದೇನೆ. ಪುರುಸೊತ್ತಿನಲ್ಲಿ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ನನಗೆ ಈ ಚರ್ಚಾಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಅನಿವಾಸಿ ವೇದಿಕೆಗೆ, ಕಾರ್ಯಕ್ರಮವನ್ನು ನಿರ್ವಹಿಸಿದ ಡಾ. ಪ್ರೇಮಲತಾ ಅವರಿಗೆ  ಕೃತಜ್ಞತೆಗಳು

     -ಸಂಪಾದಕ

'ಪರಿವರ್ತನೆ ಜಗದ ನಿಯಮ'. ನಮ್ಮ ಬದುಕು, ನಮ್ಮ ಸಮಾಜ, ನಮ್ಮ ಪರಿಸರ ಬದಲಾಗುತ್ತಿದೆ. ಜಾಗತೀಕರಣದಿಂದಾಗಿ ತೀವ್ರ ಬದಲಾವಣೆಗಳಾಗಿವೆ. ಕೈಗಾರಿಕಾ ಮತ್ತು ವೈಜ್ಞಾನಿಕ ಕ್ರಾಂತಿಯ ಮಧ್ಯದಲ್ಲಿ ನಾವು ಬದುಕುತ್ತಿದ್ದೇವೆ. ಕಳೆದ ಕೆಲವು ವರ್ಷಗಳ ಹಿಂದೆ ಆವರಿಸಿದ್ದ ಕರೋನ ಪಿಡುಗು ನಮ್ಮ ಬದುಕಿನ ರೀತಿ ನೀತಿಗಳನ್ನು ಬದಲಾಯಿಸಿದೆ. ಈ ಹಲವಾರು ಬದಲಾವಣೆಯಿಂದಾಗಿ ನಾವು ಸಾಕಷ್ಟು ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡು ಹೊಸ ಕಲಿಕೆಗಳನ್ನು ಪಡೆದಿದ್ದೇವೆ. ಈ ಹೊಸ ಅನುಭವಗಳನ್ನು ನಾವು  ಇಲ್ಲಿಯವರೆಗೆ ಗಳಿಸಿಕೊಂಡ ಹಳೆ ಅನುಭಗಳ ಜೊತೆ ತಳುಕು ಹಾಕಿಕೊಂಡು ಬದುಕಲು ಕಲಿಯಬೇಕಾಗಿದೆ. ಈ ಕಲಿಕೆಯೇ ಶಿಕ್ಷಣದ ಮೂಲ ಉದ್ದೇಶ. ಇಂದು ಕಲಿತ ಅನುಭವಗಳು, ಸಂಪಾದಿಸಿದ  ಜ್ಞಾನ ಕಾಲ ತರುವ ತೀವ್ರ ಬದಲಾವಣೆಗಳ ಹಿನ್ನೆಲೆಯಲ್ಲಿ ಕೆಲವೊಮ್ಮೆ ಅಪ್ರಸ್ತುತವಾಗಬಹುದು. ಕಾಲೇಜು ಶಿಕ್ಷಣದ ಕೊನೆಯಲ್ಲಿ ಪಡೆದ ಪದವಿ ಪತ್ರ ಕಲಿಕೆಯ ಮುಕ್ತಾಯವಲ್ಲ! ಬಹುಶಃ ಅದು ಬದುಕಿನುದ್ದಕ್ಕೂ ಕಲಿಯುವ ಅವಕಾಶಗಳಿಗೆ ಒಂದು ಬುನಾದಿ. ಶಿಕ್ಷಣದ ಗುರಿ ಎಂದರೆ ಒಂದು ಡಿಗ್ರಿ ಎಂಬ ದಾಖಲೆಯನ್ನು ವಿಶ್ವವಿದ್ಯಾಲಯದಲ್ಲಿ ಗಳಿಸಿ ಒಬ್ಬ ಉದ್ಯೋಗಿಯಾಗಿ ಹಣಗಳಿಸಿ ಜೀವನ ಮಾರ್ಗವನ್ನು ಕಂಡುಕೊಳ್ಳುವುದು ಎಂಬುದು ಸಾರ್ವತ್ರಿಕವಾದ  ಅಭಿಪ್ರಾಯ. ಇದು ಒಂದು ವೈಯುಕ್ತಿಕ ನೆಲೆಯಲ್ಲಿ ಅಗತ್ಯ. ಆದರೆ ಶಿಕ್ಷಣದ ಗುರಿ ಒಬ್ಬ ಉದ್ಯೋಗಿಯನ್ನಷ್ಟೇ ತಯಾರು ಮಾಡುವುದಲ್ಲ. ಆ ಉದ್ಯೋಗಿ ಸಮಜದಲ್ಲಿನ ಒಂದು ಘಟಕ. ಅವನು ಅಥವಾ ಅವಳು ಸಮಾಜಕ್ಕೆ ಸಲ್ಲುವಂಥವರಾಗಬೇಕು. ಹೀಗೆ ಸಾಮೂಹಿಕ ನೆಲೆಯಲ್ಲೂ ಒಂದು ಆರೋಗ್ಯಕರ ಸಮಾಜವನ್ನು ಕಟ್ಟಲು ಶಿಕ್ಷಣ ಅಗತ್ಯ. ಈ ಕಾರಣಗಳಿಂದ ನಮ್ಮ ಶಿಕ್ಷಣ, ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕು.


ಸಮಾಜ ಕ್ಷಿಪ್ರವಾದ ಬದಲಾವಣೆಗಳನ್ನು ಕಾಣುತ್ತಿದ್ದರೂ ಮನುಷ್ಯನ ಮೂಲಭೂತವಾದ ಕೆಲವು ಮಾನವೀಯ ಮೌಲ್ಯಗಳು ನಮಗೆ ಅಗತ್ಯ. ಅವು ನಮ್ಮ ಅಸ್ತಿತ್ವದೊಂದಿಗೆ ಬೆರೆತುಕೊಂಡಿದೆ. ಸಮಾಜ ಬದಲಾಗುತ್ತಿದ್ದರೂ ಈ ಮೌಲ್ಯಗಳನ್ನು ಉಳಿಸಿಕೊಳ್ಳುವ ಶಿಕ್ಷಣ ಬೇಕಾಗಿದೆ. ಅದು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬೇಕು. ಶಿಕ್ಷಣ, ವ್ಯಕ್ತಿತ್ವ ವಿಕಾಸನಕ್ಕೆ ಕಾರಣವಾಗಬೇಕು. ವ್ಯಕ್ತಿ ವಿಕಾಸನವಾದಲ್ಲಿ ಸಮಾಜವು ವಿಕಾಸಗೊಳ್ಳುತ್ತದೆ. ಇದನ್ನೇ ಮೌಲ್ಯಾಧಾರಿತ ಶಿಕ್ಷಣ (Value based education) ಎಂದು ಕರೆಯ ಬಹುದು.  ಇದನ್ನು ಒಂದು ಸಣ್ಣ ಉದಾಹರಣೆಯೊಂದಿಗೆ ವಿವರಿಸುವುದು ಸೂಕ್ತ. ನಾನೊಬ್ಬ ವೈದ್ಯ. ನಮ್ಮ ವೈದ್ಯಕೀಯ ಕಾಲೇಜುಗಳು ಒಬ್ಬ ನುರಿತ, ನಿಪುಣ ವೈದ್ಯನನ್ನು ತಯಾರು ಮಾಡ ಬಹುದು. ಆದರೆ ಆ ವೈದ್ಯನಿಗೆ ಸೇವಾ ಮನೋಭಾವವಿಲ್ಲದೆ, ಅನುಕಂಪೆಯಿಲ್ಲದೆ, ಹಣಗಳಿಸುವ ನೆಪದಲ್ಲಿ ರೋಗಿಗಳನ್ನು ಶೋಷಿಸಲು ಮೊದಲಾದರೆ ಆ ಶಿಕ್ಷಣದಿಂದ ಸಮಾಜಕ್ಕೆ ಏನು ಪ್ರಯೋಜನ? ಆ ಶಿಕ್ಷಣ ಒಬ್ಬ ವ್ಯಕ್ತಿಗೆ ಲಾಭವನ್ನು ನೀಡುವುದೇ ಹೊರತು ಸಮಾಜಕ್ಕಲ್ಲ! ಒಬ್ಬ ನುರಿತ ಇಂಜಿನೀಯರ್ ಲಂಚಕೋರನಾಗಿ ಅವನು ಕಟ್ಟಿದ ಸೇತುವೆಗಳು, ಮನೆಗಳು ಕುಸಿದು ಬಿದ್ದಾಗ ಅವನು ಪಡೆದ ವೃತ್ತಿ ಶಿಕ್ಷಣ ಎಷ್ಟರ ಮಟ್ಟಿಗೆ ಮೌಲ್ಯಾಧಾರಿತವಾಗಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ.

ಈ ಮೌಲ್ಯಾಧಾರಿತ ಶಿಕ್ಷಣ ವ್ಯಕ್ತಿಗಳ ನಡುವೆ ಸ್ನೇಹ, ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಗೌರವ ಇವುಗಳನ್ನು ಉಂಟುಮಾಡುತ್ತದೆ. ನಾಗರೀಕ ಸಮಾಜ ಮತ್ತು ಸಂಸ್ಕೃತಿಯನ್ನು ಕಟ್ಟಲು ನೆರವಾಗುತ್ತದೆ. ಕೆಲವು ಉದ್ಯೋಗಗಳಲ್ಲಿ ಒಬ್ಬ ವ್ಯಕ್ತಿ ಒಂದು ತಂಡದ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲಿ ಸಹೋದ್ಯೋಗಿಗಳ ಜೊತೆ ಕೆಲವು ನಿಯಮಗಳಿಗೆ ಬದ್ಧವಾಗಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಹಕಾರ, ವಿನಯ, ಇತರರೊಡನೆ ಹೊಂದಾಣಿಕೆ ಇವುಗಳು ಮುಖ್ಯವಾಗುತ್ತವೆ.  ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ವೈದ್ಯಕೀಯ ಶಿಕ್ಷಣದಲ್ಲಿ ಒಬ್ಬ ವೈದ್ಯಕೀಯ ವಿದ್ಯಾರ್ಥಿಯ ಜ್ಞಾನದ ಅರಿವನ್ನು ಪರೀಕ್ಷಿಸುವುದರ ಜೊತೆ ಜೊತೆಗೆ ಅವನ ಸಮಯ ಪ್ರಜ್ಞೆ, ಸ್ನೇಹ, ವಿನಯಶೀಲತೆ, ಶ್ರದ್ಧೆ, ತಂಡದಲ್ಲಿ ಅವನ ಸಹಕಾರ ಇವುಗಳ ಬಗ್ಗೆ ಸಹಪಾಠಿಗಳು, ನರ್ಸ್ಗಳು, ಹಿರಿಯ ವೈದ್ಯರು ತಮ್ಮ ಅನಿಸಿಕೆಗಳನ್ನು ನೀಡಬೇಕು. ಈ ವರದಿ ಸಮಾಧಾನಕಾರವಾಗಿದ್ದಲ್ಲಿ ಮಾತ್ರ ಆ ವಿದ್ಯಾರ್ಥಿ ಮುಂದಿನ ಹಂತವನ್ನು ತಲುಪಲು ಸಾಧ್ಯ. ಈ ಮಾದರಿಯನ್ನು ಭಾರತೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಳ್ಳ ಬೇಕಾಗಿದೆ. ಈ ಮೌಲ್ಯಾಧಾರಿತ ಶಿಕ್ಷಣ ಪ್ರಾಥಮಿಕ ಶಿಕ್ಷಣದಿಂದಲೇ ಶುರುವಾಗಿ ಎಲ್ಲಾ ಹಂತದಲ್ಲೂ ದೊರೆಯುವಂತಾಗಬೇಕು.  

ಶಿಕ್ಷಣದ ಗುರಿ ಎಂದರೆ ಅದು ಒಬ್ಬ ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ಮಾಡಬೇಕು, ಒಬ್ಬ ಅನಾಗರಿಕನನ್ನು ನಾಗರೀಕನನ್ನಾಗಿಸಬೇಕು. ಸಮಾಜದಲ್ಲಿ ನಾವು ಧರ್ಮ, ಜಾತಿ, ಆರ್ಥಿಕ ವರ್ಗ, ಎಡಪಂಥ, ಬಲಪಂಥ, ವರ್ಣ ಬೇಧ (ರೇಸಿಸಂ) ಎಂಬ ಗೋಡೆಗಳನ್ನು ಕಟ್ಟಿಕೊಂಡು ಅಲ್ಪಮಾನವರಾಗಿ ಬಿಡುತ್ತೇವೆ.  ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ನಮ್ಮ ಆಲೋಚನಾ ಕ್ರಮದಿಂದಾಗಿ ದೇಶ ವಿಭಜನೆಯಾಗಿದೆ. ರಾಜಕೀಯ, ಧಾರ್ಮಿಕ ಪೂರ್ವೋದ್ದೇಶಗಳಿಂದ ನಮ್ಮ ಪಠ್ಯ ಪುಸ್ತಕದಲ್ಲಿನ ಮಾಹಿತಿಗಳನ್ನು ತಿದ್ದುವ ಪ್ರಯತ್ನ ನಡೆದಿದೆ. ಇತಿಹಾಸವನ್ನು ಮರುವ್ಯಾಖ್ಯಾನ ಮಾಡಿ ಮಕ್ಕಳ ಅರಿವನ್ನು ನಿಯಂತ್ರಿಸಲಾಗುತ್ತಿದೆ. ದ್ವೇಷವೆಂಬ ವಿಷದ ಬೀಜವನ್ನು ಬಿತ್ತುವ ಪ್ರಯತ್ನ ನಡೆಯುತ್ತಿದೆ. ಬದುಕಿನ ಪ್ರತಿಯೊಂದು ಮಜಲಿನಲ್ಲೂ ಶ್ರೇಷ್ಠ ನಿಕೃಷ್ಟ, 'ನಾವು ಮತ್ತು ಅವರು' ಎಂಬ ಭಾವನೆಗಳನ್ನು ಉಂಟುಮಾಡುವ ಶಿಕ್ಷಣದ ಕಡೆಗೆ ವಾಲುತ್ತಿದ್ದೇವೆ. ಬದುಕಿನಲ್ಲಿ ಸಹಭಾಗಿತ್ವ ಎಂಬ ಪರಿಕಲ್ಪನೆ ಸರಿದು ಎಲ್ಲ ಮಜಲುಗಳಲ್ಲಿ ಸ್ಪರ್ಧೆಯೇ ಮುಖ್ಯವಾಗಿದೆ. ಭಾರತದ ಹಲವಾರು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಪರಿಷತ್ತುಗಳು ಹುಟ್ಟಿಕೊಂಡು ಅವುಗಳನ್ನು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಪ್ರಭಾವಕ್ಕೆ ಒಳಗಾಗುವ ಯುವಕ ಯುವತಿಯರು ಒಂದು ರಾಜಕೀಯ ಪಕ್ಷದ ಕಾಲಾಳುಗಳಾಗಿ ನಿಲ್ಲಲು ತಯಾರಾಗಿದ್ದಾರೆ. ಬರಿ ಬಲಪಂಥ ಎಡಪಂಥ ಸಮಸ್ಯೆಗಳಲ್ಲದೆ ಇಲ್ಲಿ ಧರ್ಮವನ್ನು ಬೆಸೆಯಲಾಗಿದೆ. ಇಲ್ಲಿ ಸಾಕಷ್ಟು ಹಿಂಸೆ ಮತ್ತು ಸಂಘರ್ಷಣೆಗಳು ಸಂಭವಿಸುತ್ತವೆ. ಇದು ಅಪಾಯಕಾರಿ ಬೆಳವಣಿಗೆ ಎನ್ನ ಬಹುದು. ಈ ಕಾರಣಗಳಿಂದಾಗಿ ನಮ್ಮ ಶಿಕ್ಷಣ, ಧರ್ಮ ಮತ್ತು ರಾಜಕೀಯ ಇವುಗಳ ಪ್ರಭಾವದಿಂದ ದೂರವಾಗಬೇಕು. ಒಬ್ಬ ವಿಶ್ವಮಾನವನನ್ನು ತಯಾರು ಮಾಡುವ ಶಿಕ್ಷಣದಿಂದಾಗಿ ಆ ವ್ಯಕ್ತಿ ಪ್ರಪಂಚದ ಎಲ್ಲ ಕಡೆ ಸಲ್ಲುವವನಾಗುತ್ತಾನೆ. ಜಾತಿ ಧರ್ಮವೆಂಬ ಸಂಕುಚಿತ ಕಟ್ಟಳೆಗಳನ್ನು ಮೀರಿ ನಿಲ್ಲಲ್ಲು ಸಮರ್ಥನಾಗುತ್ತಾನೆ.  

ನಾವು ನಮ್ಮ ಧರ್ಮ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವುದು ತಪ್ಪಲ್ಲ, 
ಅದು ಅತ್ಯಗತ್ಯ. ನಮ್ಮ ಭಾರತೀಯ ಸಾಹಿತ್ಯ, ಕಲೆ, ಸಂಸ್ಕೃತಿ ಸಮೃದ್ಧವಾಗಿದ್ದು ಅದನ್ನು ಉಳಿಸಿಕೊಳ್ಳಬೇಕು. ಒಂದು ಶಿಕ್ಷಣ ಸಮಾಜಕ್ಕೆ ಹೊಂದುವಂತಾಗ ಬೇಕಿದ್ದಲ್ಲಿ ಅದು ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಗಟ್ಟಿಗೊಳಿಸಬೇಕು. ಅದು ಒಬ್ಬ ವ್ಯಕ್ತಿಯ ಪರಿಪೂರ್ಣತೆಗೆ ಬಹಳ ಮುಖ್ಯ. "ತನ್ನ ಬೇರುಗಳ ಶಾಶ್ವತ ನೆಲೆದ ನಂಟು ಒಂದು ಗಿಡಕ್ಕೆ ಅಥವಾ ಮರಕ್ಕೆ ಅತ್ಯಗತ್ಯ. ತಮ್ಮ ಸಾಂಸ್ಕೃತಿಕ ಅರಿವಿಲ್ಲದವರು, ತಮ್ಮ ಮೂಲ ಭಾಷೆ ನೆಲೆಗಳನ್ನು, ಅಸ್ಮಿತೆಗಳನ್ನು ಮರೆತವರು ನಿರ್ದಿಷ್ಟ ನೆಲೆಯಿಲ್ಲದೆ, ಸ್ಥಳಾಂತರಗೊಳ್ಳುವ ಕುಂಡಗಳಲ್ಲಿನ ಗಿಡ ಮರಗಳಂತೆ" ಎಂದು ಜಿ.ಎಸ್.ಎಸ್ ಒಮ್ಮೆ ಪ್ರಸ್ತಾಪಮಾಡಿದ್ದನು ಇಲ್ಲಿ ನೆನೆಯುವುದು ಸೂಕ್ತ. ಅವೈಚಾರಿಕತೆ ಮತ್ತು ಮೂಢನಂಬಿಕೆಗಳನ್ನು ಮೂಡಿಸುವ ಪಠ್ಯ ಕ್ರಮವನ್ನು ಕೈಬಿಡಬೇಕು. 

ಶಿಕ್ಷಣವನ್ನು ಸ್ಥಳೀಯ ಸಮುದಾಯಕ್ಕೆ ಹೊಂದುವ ಪರಿಸರ ಭಾಷೆಯಲ್ಲೇ ನೀಡಬೇಕು. ಕರ್ನಾಟಕದಲ್ಲಿ ಅದರಲ್ಲೂ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡವನ್ನು ಕಡ್ಡಾಯ ಮಾಡಬೇಕು. ಕಿರಿಯ ಮಕ್ಕಳು ತಮ್ಮ ಪರಿಸರವನ್ನು ಅರಿತುಕೊಳ್ಳುವುದು ಪರಿಸರ ಭಾಷೆಯಲ್ಲೇ. ಅವರ ಮಿದುಳಿನ ನರಮಂಡದಲ್ಲಿ ಉಂಟಾಗುವ ಕೆಲವು ಕಲ್ಪನೆಗಳು, ಮನಸ್ಸಿನಲ್ಲಿ ಅಚ್ಚಾಗುವ ಚಿತ್ತಾರಗಳು ಮನೆಯ ಮತ್ತು ಸುತ್ತಣ ಸಮಾಜ ತೊಡಗುವ ಭಾಷೆಯಲ್ಲೇ. ಹೀಗಿರುವಾಗ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಇಂಗ್ಲಿಷ್ ಮೀಡಿಯಂ ಸೇರಿಕೊಂಡು ಕಲಿಕೆಯನ್ನು ಪರಿಸರ ಭಾಷೆಯಲ್ಲದ ಇಂಗ್ಲೀಷಿನಲ್ಲಿ ಕಲಿಯುವ ಮಕ್ಕಳಿಗೆ ಸಾಕಷ್ಟು ಗೊಂದಲ ಉಂಟಾಗುವ ಬಗ್ಗೆ ಶಿಕ್ಷಣ ಮತ್ತು ಮಾನಸಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದು ಮಗುವಿನ ಆತ್ಮವಿಶ್ವಾಸಕ್ಕೆ ಧಕ್ಕೆ ಬರುವುದಾಗಿ ಅಭಿಪ್ರಾಯ ನೀಡಿದ್ದಾರೆ. ಚಿಕ್ಕ ಮಕ್ಕಳಿಗೆ ಬೇರೆ ಬೇರೆ ಭಾಷೆ ಕಲಿಯುವುದು ಸರಾಗವಿರಬಹುದಾದರೂ ಅದು ಗೊಂದಲವನ್ನು ಉಂಟುಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಮಹಾತ್ಮ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ; “ತಮ್ಮ ಮಕ್ಕಳಿಗೆ ಆಲೋಚಿಸಲು ಮತ್ತು ವ್ಯವಹರಿಸಲು ಇಂಗ್ಲೀಷನ್ನೇ ಬಳಸಬೇಕೆನ್ನುವ ಭಾರತೀಯ ತಂದೆ ತಾಯಿಯರು ತಮ್ಮ ತಾಯ್ನಾಡಿಗೆ ದ್ರೋಹವನ್ನು ಬಗೆಯುತ್ತಿದ್ದಾರೆ. ಅವರು ತಮ್ಮ ಮಕ್ಕಳನ್ನು ಭಾರತೀಯ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಂಪರೆಯಿಂದ ವಂಚಿತರಾಗುವಂತೆ ಮಾಡುತ್ತಿದ್ದಾರೆ" ಬ್ರಿಟಿಷರು ನಮ್ಮನ್ನು ನೂರಾರು ವರ್ಷಗಳು ಆಳಿ ಅವರ ಭಾಷೆ ಮತ್ತು ಸಂಸ್ಕೃತಿಯನ್ನು ನಮ್ಮ ಮೇಲೆ ಹೇರಿರುವ ಪರಿಣಾಮವಿದು. ನಮ್ಮ ಶಿಕ್ಷಣ ನೀತಿಗಳು    ವಸಾಹತು ಬ್ರಿಟಿಷ್ ಮನಸ್ಥಿತಿಯಿಂದ ಮುಕ್ತವಾಗಬೇಕಾಗಿದೆ. ಇಲ್ಲಿ ಒಂದು ಸಣ್ಣ ಉದಾಹರಣೆ ನೀಡುವುದು ಸೂಕ್ತ. ಕರ್ನಾಟಕದ ಒಳನಾಡಿನ ಯಾವೊದೋ ಒಂದು ಸಣ್ಣ ಹಳ್ಳಿಯಲ್ಲಿ “London Bridge is falling down, falling down” ಎಂಬ ಶಿಶು ಗೀತೆಯನ್ನು ಹೇಳಿಕೊಟ್ಟಲ್ಲಿ, ಆ ಮಕ್ಕಳಿಗೆ ಲಂಡನ್ ಬ್ರಿಡ್ಜ್ ನಿಂತಿದರೆಷ್ಟು? ಬಿದ್ದರೆಷ್ಟು? ಅದರ ಬದಲಿಗೆ ‘ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ’ ಎಂಬ ಗೀತೆಯನ್ನು ಹೇಳಿ ಕೊಡ ಬಹುದಲ್ಲವೇ?  ಉನ್ನತ ಶಿಕ್ಷಣದಲ್ಲಿ ವಿಜ್ಞಾನ ವಿಷಯಗಳನ್ನು ಕಲಿಯಲು ಇಂಗ್ಲಿಷ್ ಬೇಕೇ ಬೇಕು ಎಂದು ವಾದಿಸುವವರು ಒಮ್ಮೆ ಇಂಗ್ಲೆಂಡಿನ ಪಕ್ಕದ ದೇಶಗಳಾದ ಫ್ರಾನ್ಸ್ ಜರ್ಮನಿ, ಪೂರ್ವ ಯೂರೋಪ್ ದೇಶಗಳ ಶಿಕ್ಷಣ ಕ್ರಮಗಳನ್ನು ಗಮಸಿಸಬೇಕಾಗಿದೆ. 

ಶಿಕ್ಷಣ ಎಲ್ಲರನ್ನು ಒಳಗೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಒಂದು ವಾಣಿಜ್ಯ ವಹಿವಾಟಾಗಿದೆ. ಖಾಸಗಿ ಶಾಲಾ ಕಾಲೇಜುಗಳು ಹೆಚ್ಚಾಗಿ ಶಿಕ್ಷಣ ಎಂಬುದು ಉಳ್ಳವರ ಸೊತ್ತಾಗಿದೆ.  ಗುಣಮಟ್ಟದಲ್ಲಿ ಸರ್ಕಾರೀ ಮತ್ತು ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಅಂತರವಿರಬಾದು. ಸಮಾಜದಲ್ಲಿ ಕೆಳಗಿನ ಸ್ಥರಗಳಲ್ಲಿರುವವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಉಳಿದು ಅವರಿಗೂ ಅವಕಾಶವಿರಬೇಕು. ಎಲ್ಲಿಯವರೆಗೆ ಎನ್ನುವುದು ಇನ್ನೊಂದು ಪ್ರಶ್ನೆ. ಸಮಾಜದ ಹಿತದೃಷ್ಟಿಯಿಂದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಆದ್ಯತೆಯಾಗಬೇಕು. ಅಭಿವೃದ್ಧಿ ಗೊಳ್ಳುತ್ತಿರುವ ದೇಶಗಳಲ್ಲಿ ಅದರ ಪರಿಣಾಮಗಳು ಹಲವಾರು. ನಮ್ಮ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಪ್ಪಿಕೊಳ್ಳಲು ಹವಣಿಸುತ್ತಿದ್ದಾರೆ.  ವಿದೇಶಗಳಲ್ಲಿರುವ  ಲೈಂಗಿಕ ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಾಗಿ ನಮ್ಮ ಯುವಕ ಯುವತಿಯರು ಹಾತೊರೆಯುತ್ತಿದ್ದಾರೆ. ತಮ್ಮ ಲೈಂಗಿಕ ಪ್ರವೃತ್ತಿಯನ್ನು, ತಾವು ಸಲಿಂಗ ಕಾಮಿಗಳು ಎಂಬ ವಿಚಾರವನ್ನು ಯುವಕರು ಮುಕ್ತವಾದ ಮನಸ್ಸಿನಿಂದ ಬಹಿರಂಗ ಪಡಿಸುತ್ತಿದ್ದಾರೆ. ಓಟಿಟಿ ಮತ್ತು ಇತರ ದೃಶ್ಯ ಮಾಧ್ಯಮಗಳಲ್ಲಿ ಲೈಂಗಿಕತೆ ಮತ್ತು ಲೈಂಗಿಕ ಉಲ್ಲೇಖವಿರುವ ಸಿನಿಮಾಗಳು ಧಾರಾವಾಹಿಗಳು ಈಗ ಯಥೇಚ್ಛವಾಗಿವೆ. ಲೈಂಗಿಕ ಗುಹ್ಯ ರೋಗಗಳು ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ ಇವುಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಬೇಕಾಗಿದೆ. ಈ ಒಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಶಿಕ್ಷಣದ ಯಾವ ಹಂತದಲ್ಲಿ? ಮತ್ತು ಹೇಗೆ ನೀಡಬೇಕು? ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ.

ಕರೋನ ಪಿಡುಗು ಬಂದು ನಮ್ಮ ಬದುಕಿನಲ್ಲಿ ಸಾಮಾಜಿಕ ಮತ್ತು ತಾಂತ್ರಿಕ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದೇವೆ. ತಂತ್ರಜ್ಞವನ್ನು ಬಳಸಿ ಮನೆಯಿಂದಲೇ ದುಡಿಯುವ ಮತ್ತು ಕಲಿಯುವ ಅವಕಾಶಗಳನ್ನು ಕಲ್ಪಿಸಿಕೊಂಡಿದ್ದೇವೆ. ಜೋಮ (Zoom) ವೇದಿಕೆ ಅನೇಕ ಶಿಕ್ಷಣ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಹಿಂದೆ ನಮ್ಮ ಅನಿವಾಸಿ ಕನ್ನಡಿಗರು ಮಕ್ಕಳನ್ನು ಒಂದೆಡೆ ಕಲೆಹಾಕಿ 'ಕನ್ನಡ ಕಲಿ' ತರಗತಿಗಳನ್ನು ನಡೆಸಲು ಹೆಣಗುತ್ತಿದ್ದೆವು. ಈಗ ಜೋಮ ವೇದಿಕೆಯಿಂದಾಗಿ ಮಕ್ಕಳು ಮನೆಯಲ್ಲೇ ಕುಳಿತು ಕನ್ನಡವನ್ನು ಕಲಿಯುವ ಅವಕಾಶ ಒದಗಿ ಬಂದಿದೆ. ಅಂದ ಹಾಗೆ ಅದು ಸಫಲತೆಯನ್ನೂ ಕಂಡುಕೊಂಡಿದೆ. ಉನ್ನತ ಶಿಕ್ಷಣದಲ್ಲಿ ಹಲವಾರು ಕಲಿಕೆಗಳು ಆನ್ ಲೈನ್ ವೇದಿಕೆಗಳಲ್ಲಿ ಲಭ್ಯವಾಗಿವೆ, ಇವೆಲ್ಲಾ ತಂತ್ರಜ್ಞಾನದ ಸದುಪಯೋಗ ಎನ್ನಬಹುದು.

ಪರಿಸರ ವಿನಾಶದ ಮತ್ತು ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಬಗ್ಗೆ ಎಲ್ಲ ದೇಶಗಳಲ್ಲಿ ಎಚ್ಚರಿಕೆಯ ಕರೆಗಂಟೆ ಕೇಳಿ ಬರುತ್ತಿದೆ. ಪರಿಸರದ ಅಳಿವು ಉಳಿವಿನ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆ, ನಿಸರ್ಗ ಸಂಪನ್ಮೂಲಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಸುವುದರ ಪರಿಣಾಮ ಈ ವಿಚಾರಗಳ ಬಗ್ಗೆ ತ್ವರಿತವಾಗಿ ನಮ್ಮ ಮಕ್ಕಳಿಗೆ ಕಲಿಸಬೇಕಾಗಿದೆ. ಈ ವಿಷಯಗಳನ್ನು ಮಕ್ಕಳ ಗ್ರಹಿಕೆಗೆ ನಿಲುಕುವಂತೆ ಶಿಕ್ಷಣದ ಪ್ರತಿಯೊಂದು ಹಂತದಲ್ಲೂ ಕಡ್ಡಾಯವಾಗಿ ಕಲಿಸಬೇಕು. ಇವುಗಳನ್ನು ತರಗತಿಯಲ್ಲಿ ಬೋಧಿಸಿದರಷ್ಟೇ ಸಾಲದು. ಮಕ್ಕಳನ್ನು ಅರಣ್ಯ ಪ್ರದೇಶಗಳಿಗೆ, ಹಾನಿಗೊಳಗಾದ ನಿಸರ್ಗ ತಾಣಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿ ಮಕ್ಕಳಿಗೆ ಪ್ರತ್ಯಕ್ಷ ಅನುಭವವನ್ನು ಒದಗಿಸಿದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲುದು. ಮಕ್ಕಳು ವಾಸಮಾಡುವ ಪರಿಸರದಲ್ಲಿ ಮರಗಳನ್ನು ನೆಡುವ, ಪೋಷಿಸುವ ಶೈಕ್ಷಣಿಕೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಶಾಲಾ ಕಾಲೇಜುಗಳ ಮಕ್ಕಳಿಂದ ಪರಿಸರ ವಿನಾಶದ ಕುರಿತಾಗಿ ಬೀದಿ ನಾಟಕಗಳನ್ನು ಆಡಿಸಿದರೆ ಅದು ಶೈಕ್ಷಣಿಕ ಕಾರ್ಯಕ್ರಮವಲ್ಲದೆ ಮನೋರಂಜನೆಯಾಗಿಯೂ ಕಿರಿಯರ-ಹಿರಿಯರ ಗಮನವನ್ನು ಸೆಳೆಯುತ್ತದೆ.  

ಶಿಕ್ಷಣ ಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಾಗಿದೆ. ಶಾಲೆಯ ನಾಲ್ಕು ಗೋಡೆಗಳ ಒಳಗೆ ಮಾತ್ರ ಕಲಿಕೆ ಸಾಧ್ಯ ಎಂಬ ಈ ಮನಸ್ಥಿತಿಯಿಂದ ಹೊರಬರಬೇಕಾಗಿದೆ. ಇದು ಮಕ್ಕಳಲ್ಲಿ ಒಂದು ಸಂಕುಚಿತ ಮನೋಭಾವವನ್ನು ಉಂಟುಮಾಡಬಹುದು. ಅನುಕೂಲಕರ ಉತ್ತಮ ಹವಾಮಾನವಿರುವ ದೇಶಗಳಲ್ಲಿ ಮುಕ್ತವಾದ ನಿಸರ್ಗದ ಮಧ್ಯೆ ಕಲಿಕೆಯ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು. ಮಕ್ಕಳ ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನಡೆಯಬೇಕಾಗಿದೆ. ಎಲ್ಲರಿಗೂ ಒಂದೇ ಅಳತೆಗೋಲು ಹಿಡಿದು ಕಲಿಸುವ ಕ್ರಮವನ್ನು ಪರಿಶೀಲಿಸಿಬೇಕಾಗಿದೆ. ಕೆಲವೊಮ್ಮೆ ಪುಸ್ತಕಗಳನ್ನು ಪಕಕ್ಕೆ ಇಟ್ಟು ವಿಜ್ಞಾನದ ಪ್ರಯೋಗಗಳನ್ನು ಕೈಯಾರೆ ಮಾಡಿ ನಿತ್ಯ ಸತ್ಯಗಳನ್ನು ಮಕ್ಕಳೇ ಅನ್ವೇಷಣೆ ಮಾಡಿ ತಿಳಿದುಕೊಳ್ಳಬೇಕು. ಈ ರೀತಿಯ ಕಲಿಕೆ ಮಾನವ ಸಹಜ ಕುತೂಹಲವನ್ನು ಕೆರಳಿಸುವುದರ ಜೊತೆಗೆ ಅದು ಒಂದು ಉಲ್ಲಾಸಕರ ಚಟುವಟಿಕೆಯಾಗಬೇಕು. ಮಕ್ಕಳ ಮನಸ್ಸಿನಲ್ಲಿ ಏಕೆ? ಹೇಗೆ? ಎಂಬ ಪ್ರಶ್ನೆಗಳನ್ನು ಮತ್ತು ವೈಜ್ಞಾನಿಕ ಮನೋಭಾವವನ್ನು ಪ್ರಚೋದಿಸುವ ಶಿಕ್ಷಣ ಕ್ರಮವನ್ನು ಅಳವಡಿಸಬೇಕಾಗಿದೆ. ಭಾರತ ಭೌಗೋಳಿಕ ಸಾಂಸ್ಕೃತಿಕ ನೈಸರ್ಗಿಕ ದೃಷ್ಠಿಯಿಂದ ವೈವಿಧ್ಯತೆಯುಳ್ಳ ದೊಡ್ಡ ದೇಶ. ಹೀಗಾಗಿ ಈ ವೈವಿಧ್ಯತೆಯನ್ನು ವಿಜೃಂಭಿಸುವ ಸಲುವಾಗಿ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಸಿಬಿಎಸ್ ಕೇಂದ್ರ ಪಠ್ಯಕ್ರಮವನ್ನು ಬೋಧಿಸುವ ರಾಷ್ಟೀಯ ಅಂತಾರಾಷ್ಟ್ರೀಯ ಶಾಲೆಗಳು ಈ ಪ್ರಾದೇಶಿಕತೆಯನ್ನು ಒದಗಿಸುವುದರ ಬಗ್ಗೆ ಸಂದೇಹವಿದೆ. ಹೆಚ್ಚಿನ ಅಂಕಗಳನ್ನು ನೀಡುವ ಹಿಂದಿ, ಸಂಸ್ಕೃತ ಭಾಷೆಗಳನ್ನು ಮಕ್ಕಳು ಆಯ್ಕೆಮಾಡುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಪೂರಕವಾಗುವ ಇಂಗ್ಲಿಷ್ ಪ್ರಧಾನವಾದ ಈ ಶಾಲೆಗಳಲ್ಲಿ ಅವರಿಗೆ ಸ್ಥಳೀಯ ಸಂಸ್ಕೃತಿಯ ಪರಿಚಯವಾಗುವುದಾದರೂ ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಬಿಳಿಗಿರಿ ರಂಗನ ಬೆಟ್ಟದ ಆದಿವಾಸಿ ಮಕ್ಕಳಿಗೆ ಅವರಿಗೆ ಪ್ರಸ್ತುತವಾಗದ ನಗರದ ವಿಷಯದ ಬದಲು ಅವರ ಪರಿಸರವಾಗಿರುವ ಅರಣ್ಯದ ಬಗ್ಗೆ ಪಠ್ಯಕ್ರಮ ಒತ್ತುನೀಡಬೇಕು. ಕಲಿಕೆ ಎಂಬುದು ಬದುಕಿಗೆ ಬೇಕಾದ ಸಾರ್ವತ್ರಿಕ ಅರಿವಿನ ಜೊತೆಗೆ ಹೆಚ್ಚು ವ್ಯಾಪಕವಾಗದೆ ಒಂದು ವಿಶೇಷ ಜ್ಞಾನವನ್ನು ಆಳವಾಗಿ ದೀರ್ಘವಾಗಿ ಅರಿಯಲು ಸಹಾಯಕವಾಗಬೇಕು. ವಿದ್ಯಾಥಿಗಳ ಕಲಿಕೆ ಅವರ ಬದುಕಿಗೆ ಎಷ್ಟು ಪ್ರಸ್ತುತವಾಗಿರಬೇಕು ಎಂಬುದು ಬಹಳ ಸಂಕೀರ್ಣವಾದದ್ದು. ಆರ್ಥಿಕ ಕಾರಣಗಳಿಂದ ವಲಸೆ ಹೋಗುತ್ತಿರುವಾಗ ಮತ್ತು ಜಾಗತೀಕರಣದ ಹಿನ್ನೆಲೆಯಲ್ಲಿ ಎಲ್ಲವೂ ಪ್ರಸ್ತುತವೆಂಬಂತೆ ತೋರುತ್ತದೆ. ಈ ಪ್ರಶ್ನೆಗೆ ಉತ್ತರ ದೊರಕುವುದು ಸುಲಭವಲ್ಲ. 

ಅಭಿವೃದ್ದಿಗೊಂಡಿರುವ ಇಂಗ್ಲೆಂಡಿನಂತಹ ದೇಶದಲ್ಲಿ ಕೆಲವು ಬಡ ಮಕ್ಕಳು ಮುಂಜಾನೆ ಶಾಲೆಗೆ ಹಸಿದ ಹೊಟ್ಟೆಯಲ್ಲಿ ಬರುತ್ತಿದ್ದಾರೆ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ಬೆಳಗಿನ ಉಪಹಾರವನ್ನು ಶಾಲೆಯಲ್ಲಿ ಒದಗಿಸುತ್ತಿದೆ. ಹೀಗಿರುವಾಗ ಬಡತನ ಹಸಿವು ವ್ಯಾಪಕವಾಗಿರುವ ಭಾರತದಲ್ಲಿ ಅದೆಷ್ಟೋ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳಿಗೆ ಶಾಲೆಯಲ್ಲಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾನ್ಹ ಭೋಜನ ಒದಗಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಬೇಕು. ಹಸಿದ ಹೊಟ್ಟೆಯಲ್ಲಿ ಮಕ್ಕಳ ಏಕಾಗ್ರತೆ ಕುಗ್ಗಿ ಹೋಗುವುದನ್ನು ನಾನು ಒಬ್ಬ ವೈದ್ಯನಾಗಿ ಗಮನಿಸಿದ್ದೇನೆ. ಶಾಲೆಯಲ್ಲಿ ಸಿಗುವ ಆಹಾರದಲ್ಲಿ ಪೌಷ್ಠಿಕ ಅಂಶಗಳೂ ಇರಬೇಕು. ಈ ವ್ಯವಸ್ಥೆ ಹಸಿದ ಹೊಟ್ಟೆಗೆ ಅನ್ನವನ್ನು ನೀಡುವುದರ ಜೊತೆಗೆ ಮಕ್ಕಳ ತಂದೆ ತಾಯಿಗಳ ಮೇಲೆ ಇರುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಶಾಲೆಯಲ್ಲಿ ಹಾಜರಾಗಲು ಕಾರಣವೂ ಆಗುತ್ತದೆ.

ವಿದ್ಯಾರ್ಜನೆಯಲ್ಲಿ ಶಿಕ್ಷಕರ ಪಾತ್ರವು ಮಹತ್ವವಾದದ್ದು. ಶಿಕ್ಷಕರಿಗೆ ಉನ್ನತ ಶಿಕ್ಷಣದ ಅವಶ್ಯಕತೆ ಇರುವುದನ್ನು ಮರೆಯುವುದು ಸುಲಭ. ಅವರಿಗೂ ಶಿಕ್ಷಣ ವ್ಯವಸ್ಥೆಯಿಂದ ಬೆಂಬಲ ಬೇಕಾಗಿದೆ. ಶಿಕ್ಷಣವನ್ನು ಯಾವ ರೀತಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು, ಯಾವ ರೀತಿ ಒದಗಿಸಿದರೆ ಅದು ಪರಿಣಾಮಕಾರಿ ಎಂಬುದನ್ನು ಶಿಕ್ಷಣ ತಜ್ಞರು ಶಿಕ್ಷಕರಿಗೆ ತಿಳಿಸಬೇಕು. ನನಗೆ ತಿಳಿದಂತೆ ಕರ್ನಾಟಕದಲ್ಲಿ ಸರ್ಕಾರದ ಉನ್ನತ ಶಿಕ್ಷಣ ಅಕಾಡೆಮಿ ಈ ಕೆಲಸವನ್ನು ಮಾಡಿಕೊಂಡು ಬಂದಿದೆ. ಶಿಕ್ಷಕರಲ್ಲಿ ಒಂದು ಸೃಜನ ಶೀಲತೆ (creativity) ಇರಬೇಕು, ಸಂಬಳಕ್ಕಷ್ಟೇ ಕೆಲಸಮಾಡುತ್ತಾ ಹೇಳಿದ್ದನ್ನೇ ಹೇಳೊ ಕಿಸ ಬೈ ದಾಸ ಮೇಸ್ಟ್ರು ಗಳು ನಮ್ಮಲ್ಲಿ ಯಥೇಚ್ಛವಾಗಿದ್ದಾರೆ. ಅವರಲ್ಲಿ ಕ್ರಿಯಾಶೀಲತೆಯನ್ನು (Dynamisim) ಮತ್ತು  ಸೃಜನಶೀಲತೆ (creativity) ಉಂಟುಮಾಡಬೇಕಾಗಿದೆ.  ಹಿಂದೆ ನಮ್ಮ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಒಂದು ರೀತಿ ಭಯವಿತ್ತು. ಶಿಕ್ಷಣ ಕ್ರಮ ಕಠೋರವಾಗಿ ಮತ್ತು ಹಿಂಸಾತ್ಮಕವಾಗಿತ್ತು. (Learning by humiliation) ದಂಡನೆಯಿಲ್ಲದ ಶಿಕ್ಷಣವಿರಲಿಲ್ಲ. ಈಗ ಸಾಕಷ್ಟು ಸುಧಾರಣೆಗಳಾಗಿವೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಬೇಕು. ವಿದ್ಯಾರ್ಥಿಗಳು ಅವರಿಂದ ಸ್ಫೂರ್ತಿಯನ್ನು ಪಡೆಯಬೇಕು. ಅವರಿಬ್ಬರ ನಡುವೆ ಪರಸ್ಪರ ಪ್ರೀತಿ ವಿಶ್ವಾಸ ಗೌರವಗಳು ಮೂಡಿ ಬರಬೇಕು.

ಇತ್ತೀಚಿಗೆ ಪಾಶ್ಚಿಮಾತ್ಯ ದೇಶಗಳಲ್ಲಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಲ್ಲಿ ನ್ಯೂರೋ ಡೈವರ್ಸಿಟಿ ಇರುವುದನ್ನು ಗುರುತಿಸಲಾಗುತ್ತಿದೆ. ಅದು ಮಕ್ಕಳ ಮಾನಸಿಕ ಬೆಳವಣಿಗೆಯ ನ್ಯೂನತೆ ಎಂದು ಹೇಳಬಹುದು. ಎಲ್ಲರ ಗ್ರಹಿಕೆ ಒಂದೇ ರೀತಿ ಇರುವುದಿಲ್ಲ. ಈ ನ್ಯೂನತೆ ಇರುವ ಮಕ್ಕಳ ಗ್ರಹಿಕೆಯಲ್ಲಿ ಕೆಲವು ಕುಂದು ಕೊರತೆಗಳಿರುತ್ತವೆ. ಕೆಲವು ವಿಷಯಗಳನ್ನು ಸಫಲವಾಗಿ ಗ್ರಹಿಸಿದರೂ ಇನ್ನು ಕೆಲವು ಗ್ರಹಿಕೆಯಲ್ಲಿ ತೊಂದರೆ ಇರುತ್ತದೆ. ಹೆತ್ತವರಿಗೆ ಮನೆಯಲ್ಲಿ ಕಾಣದ ಕೆಲವು ಮಾನಸಿಕ ತೊಂದರೆಗಳು ಶಾಲೆಯ ಒತ್ತಡ ವಾತಾವರಣದಲ್ಲಿ ಅಭಿವ್ಯಕ್ತಗೊಳ್ಳುತ್ತವೆ.  ಈ ಒಂದು ಸನ್ನಿವೇಶದಲ್ಲಿ ಒಬ್ಬ ವಿದ್ಯಾರ್ಥಿ ಧಡ್ಡನೆಂದು ಅದು ಅವನ ಹಣೆಬರಹವೆಂದು ಕೈಬಿಡುವುದು ಸರಿಯಲ್ಲ. ಈ ರೀತಿ ತೊಂದರೆ ಇರುವ ಮಕ್ಕಳಿಗೆ ಮನಶಾಸ್ತ್ರ ತಜ್ಞರ ಸಹಾಯ ಸಲಹೆ ಬೇಕಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಶಿಕ್ಷಕರ ಮತ್ತು ಸಹಪಾಠಿಗಳ ಅನುಕಂಪೆ, ಸಹಕಾರ ಬಹಳ ಮುಖ್ಯ. ಈ ರೀತಿಯ ಮಕ್ಕಳಿಗೆ ವಿಶೇಷ ಪಠ್ಯ ಕ್ರಮ ಮತ್ತು ಪರೀಕ್ಷಾಕ್ರಮ ಬೇಕಾಗುತ್ತದೆ. ಇವರಿಗೆ ಕಲಿಸಲು ಹೆಚ್ಚಿನ ಸೌಲಭ್ಯ ಮತ್ತು ಸಂಪನ್ಮೂಲಗಳು ಬೇಕಾಗುತ್ತದೆ. 

ನಮ್ಮ ಪರೀಕ್ಷಾಕ್ರಮದಲ್ಲಿ ಬಹಳ ವರ್ಷಗಳಿಂದ ವರ್ಷಕ್ಕೆ ಒಂದೇ ಪರೀಕ್ಷೆ ನಡೆಸಿ ಆ ಪರೀಕ್ಷೆಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣನಾಗಲು ಅರ್ಹನೇ ಎಂಬುದನ್ನು ನಿರ್ಧರಿಸಲಾಗುತ್ತಿದೆ. ವರ್ಷವಿಡೀ ಕಲಿತ ಒಂದೊಂದು ವಿಷಯವನ್ನು  ಕೇವಲ ಮೂರು ಗಂಟೆಗಳ ಪರೀಕ್ಷೆಯಲ್ಲಿ ನಿರ್ಧರಿಸುವುದು ಒಂದು ವಿಕೃತ ಪದ್ಧತಿ. ಈ ಒಂದು ವ್ಯವಸ್ಥೆಯಲ್ಲಿ ಪರೀಕ್ಷೆ ಎಂಬುದು ವಿದ್ಯಾರ್ಥಿಯ ಅರಿವಿಗಿಂತ ಅವನ
 /ಅವಳ ಜ್ಞಾಪಕ ಶಕ್ತಿಯನ್ನು ಅಳೆಯುವ ಸಾಧನವಾಗುತ್ತದೆ. ಒಂದು ಅಂತಿಮ ಪರೀಕ್ಷೆಯ ಬದಲು ವರ್ಷದುದ್ದಕ್ಕೂ ಹಲವಾರು ಘಟ್ಟಗಳಲ್ಲಿ  ಮಾಡುವುದು ಲೇಸು. ಪರೀಕ್ಷೆ ಎನ್ನುವುದು ಒಂದು ರಣರಂಗವಾಗಿ ಇಲ್ಲಿ ಸ್ಪರ್ಧೆಗೆ ಹೆಚ್ಚು ಪ್ರಾಮುಖ್ಯತೆ. ಸ್ಪರ್ಧೆ ಕೆಲವು ಮಕ್ಕಳ ಆತ್ಮ ವಿಶ್ವಾಸಕ್ಕೆ ಅಗತ್ಯ ಇರಬಹುದು, ಇರಲಿ ಆದರೆ ಅದನ್ನು ವಿಪರೀತವಾಗಿ ವಿಜೃಂಭಿಸುವುದನ್ನು ಕೈಬಿಡಬೇಕು. ಸಾಧಾರಣ ಮತ್ತು ಅಸಾಧಾರಣ ಪ್ರತಿಭೆ ಎಂದು ಶ್ರೇಣೀಕರಿಸಿದರೆ ಸಾಲದೇ? ಹೆತ್ತವರು ತಮ್ಮ ಮಕ್ಕಳನ್ನು ಇತರ ಮಕ್ಕಳಿಗೆ ಹೋಲಿಸಿ ಹಲುಬುವುದುನ್ನು ಖಂಡಿಸಬೇಕು. ಹೆತ್ತವರ, ಪೋಷಕರ ಹೆಚ್ಚಿನ ನಿರೀಕ್ಷೆ ಹಲವಾರು ವಿದ್ಯಾರ್ಥಿಗಳಿಗೆ ಮಾನಸಿಕ ತೊಂದರೆ ನೀಡಿ ಅವರು ಕಿರುಕುಳ ಮತ್ತು ಆತ್ಮಹತ್ಯಗೆ ಗುರಿಯಾಗುತ್ತಿದ್ದಾರೆ. ಈ ಒಂದು ವ್ಯವಸ್ಥೆ ಬದಲಾಗಬೇಕು.

ಒಟ್ಟಾರೆ ಶಿಕ್ಷಣ ನೀತಿ ಸಮಾಜಕ್ಕೆ ಹೊಂದುವಂತಿರಬೇಕಾದರೆ ನಮ್ಮ ಪಠ್ಯ ಕ್ರಮದಲ್ಲಿ, ಶಿಕ್ಷಣ ನೀಡುವ ಕ್ರಮದಲ್ಲಿ, ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ, ಅವರ ತಂದೆ ತಾಯಿಯರ ನಿರೀಕ್ಷೆಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು. ಇಪ್ಪತ್ತೊಂದನೇ ಶತಮಾನದಲ್ಲಿ ಹಲವಾರು ವೈಜ್ಞಾನಿಕ ಸಾಧನೆಗಳಾಗಿ ಬಾಹ್ಯಾಕಾಶ ಮತ್ತು ಗ್ರಹಗಳಲ್ಲಿ ವಸಾಹತು ಮಾಡುವ ಆಲೋಚನೆ ಮನುಜಕುಲಕ್ಕೆ ಮೂಡುತ್ತಿದೆ. ಕರೋನ ರೀತಿಯ ಭಯಂಕರ ಪಿಡುಗನ್ನು ಹತೋಟಿಯಲ್ಲಿಡಲು ಲಸಿಕೆಗಳನ್ನು ಕಂಡುಹಿಡಿದ್ದೇವೆ. ಸೋಶಿಯಲ್ ಮೀಡಿಯಾ ಎಂಬ ತಾಂತ್ರಿಕ ಅದ್ಭುತವನ್ನು ಕಂಡುಕೊಂಡಿದ್ದೇವೆ. ಹಿರಿದಾದ ಆಲೋಚನೆಗಳು ನಮ್ಮ ಕಲ್ಪನೆಗೆ ದೊರೆಯುತ್ತಿವೆ. ಆದರೆ ವಾಸ್ತವವಾಗಿ ನಮ್ಮ-ನಿಮ್ಮ ನಡುವೆ ಹಸಿವು, ಬಡತನ, ಪ್ರಕೃತಿ ವಿಕೋಪ, ಧರ್ಮಯುದ್ಧ, ವಲಸೆ, ಮೂಲಭೂತವಾದ, ಭಯೋತ್ಪಾದನೆ, ಸರ್ವಾಧಿಕಾರ, ಕ್ಷೀಣವಾಗುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳು, ಮತಬೇಧ, ವರ್ಣಬೇಧ ಎಂಬ ಆತಂಕಕಾರಿ ಸನ್ನಿವೇಶಗಳ ಮಧ್ಯೆ ಬದುಕ ಬೇಕಾಗಿದೆ. ಹಸಿವನ್ನು ನೀಗಿಸುವ, ಮಾನವೀಯ ಮೌಲ್ಯಗಳನ್ನು, ಸಹಿಷ್ಣುತೆಯನ್ನು ಎತ್ತಿಹಿಡಿಯಬೇಕಾದ ಶಿಕ್ಷಣವನ್ನು ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ತುರ್ತಾಗಿ ನೀಡಬೇಕಾಗಿದೆ. ಉತ್ತಮ ಶಿಕ್ಷಣ ನೀತಿ ಒಂದು ಸಮಾಜದ ನೈತಿಕ ಕನ್ನಡಿಯಾಗಿರಬೇಕು. ಗಾಂಧೀಜಿ ಹೇಳಿದಂತೆ ಅದು ದೇಹ, ಮನಸ್ಸು, ಹೃದಯ ಮತ್ತು ಆತ್ಮದ ವಿಕಾಸಕ್ಕೆ ಕಾರಣವಾಗಬೇಕು. ಸ್ವನಿಯಂತ್ರಣ ಮತ್ತು ಆತ್ಮಶೋಧನೆಗಳನ್ನು ಕಲಿಸಬೇಕು. ಸತ್ಯ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಹಾದಿಯಲ್ಲಿ ವಿಶ್ವಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ಹರಡಲು ಕಾರಣವಾಗಬೇಕು.


 ***




ಲಂಡನ್ನಿನಲ್ಲಿ ಕನ್ನಡ ಡಿಂಡಿಮ – ಕನ್ನಡ ಬಳಗ ಯು ಕೆ-40 ರ ಸಂಭ್ರಮದ ಝಲಕ್ ಗಳು!

ಮಹಾರಾಜರು ತಮ್ಮ ಸಂದೇಶದಲ್ಲಿ ೧೯೩೯ರಲ್ಲಿ ಅಂದಿನ ಯುವರಾಜರು ಲಂಡನ್ನಿನಲ್ಲಿ ದಸರಾ ಹಬ್ಬವನ್ನು ಆಚರಿಸಿ ಕನ್ನಡದಲ್ಲಿ ಮಾಡಿದ ಭಾಷಣವನ್ನು ನೆನೆದರು. ಕರ್ನಾಟಕದ ವೈಭವ, ಶ್ರೀಮಂತ ಸಂಸ್ಕೃತಿ, ಲೋಕಕ್ಕೆ ಎಂದೆಂದಿಗೂ ಮಾದರಿಯಾದ ಬಸವ ತತ್ವ, ಸೈದ್ಧಾಂತಿಕ, ವೇದಾಂತಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕ ಕೊಡುಗೆಗಳನ್ನು ಸ್ಮರಿಸಿದರು. ಕನ್ನಡಿಗರು ಈ ಕೊಡುಗೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು, ಇವುಗಳಿಂದ ಪ್ರೇರೇಪಿತರಾಗಿ ಬಾಳಿನ ಎಲ್ಲ ದಿಶೆಗಳಲ್ಲಿ ಹೆಚ್ಚಿನ ಯಶಸ್ವಿಯನ್ನು ಪಡೆದು ಪ್ರಭಾವಶಾಲಿಗಳಾಗಬೇಕೆಂದು ಕರೆ ಕೊಟ್ಟರು. ತದನಂತರ ನಾಡಿನ ಪ್ರಮುಖ ಸಾಹಿತಿಗಳು, ಯು.ಕೆ. ಕನ್ನಡಿಗರು ಬರೆದ ಲೇಖನ, ಕವನಗಳ ಸ್ಮರಣ ಸಂಚಿಕೆ “ಸಂಭ್ರಮ”ವನ್ನು ಬಿಡುಗಡೆ ಮಾಡಿದರು.

ಸಂಭ್ರಮ: ಕನ್ನಡ ಬಳಗ (ಯು.ಕೆ) ಗೆ  ಮಾಣಿಕ್ಯ ಹುಟ್ಟಿದ ಹಬ್ಬ  
ಲೇಖಕರು: ರಾಮಶರಣ ಲಕ್ಷ್ಮೀನಾರಾಯಣ 

ಯುನೈಟೆಡ್ ಕಿಂಗ್ಡಮ್ ನ ಮೊದಲ ಕನ್ನಡ ಸಂಘ ಕನ್ನಡ ಬಳಗ (ಯು.ಕೆ). ೪೦ ವರ್ಷಗಳ ಹಿಂದೆ ಐವರು ದಂಪತಿಗಳು ದೀಪಾವಳಿಯ ಶುಭದಿನದಂದು ಕನ್ನಡ ಸಂಘವೊಂದರ ದೀಪ ಬೆಳೆಗಿದರು. ಅದು ಇಂದಿಗೂ ಯು.ಕೆಯಲ್ಲಿ ನೆಲೆಸಿರುವ ಕನ್ನಡಿಗರ ಮನೆ-ಮನಗಳಲ್ಲಿ ಬೆಳಗುತ್ತಿದೆ. ಈ ವಾರಾಂತ್ಯ (ಸಪ್ಟೆಂಬರ್ ೩೦, ಅಕ್ಟೋಬರ್ ೧) ಕನ್ನಡ ಬಳಗ ತನ್ನ ಹುಟ್ಟುಹಬ್ಬ “ಸಂಭ್ರಮ”ವನ್ನು ವಿಜೃಂಭಣೆಯಿಂದ ಲಂಡನ್ ನಗರದಲ್ಲಿ ಸಂಸ್ಥಾಪಕ ಹಿರಿ ಜೀವಿಗಳೊಂದಿಗೆ, ನಾಡಿನ ಹಲವು ಮೂಲೆಗಳಿಂದ ಬಂದ ಎಲ್ಲ ವಯಸ್ಸಿನ ಕನ್ನಡಿಗರೊಂದಿಗೆ ಆಚರಿಸಿದ್ದು  ತನ್ನ ‘ಹಳೆ ಬೇರು, ಹೊಸ ಚಿಗುರು’ ಧ್ಯೇಯ ವಾಕ್ಯಕ್ಕೆ ತಕ್ಕುದಾಗಿತ್ತು. ಈ ಕಾರ್ಯಕ್ರಮವನ್ನು ಯಶಸ್ಸಿಗೆ ಕಾರಣೀಕರ್ತರು, ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್, ಖಜಾಂಚಿ ರಶ್ಮಿ ಮಂಜುನಾಥ್, ಸಾಂಸ್ಕೃತಿಕ ಕಾರ್ಯದರ್ಶಿ ವ್ರತ ಚಿಗಟೇರಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾದ ಚಂದ್ರಪ್ಪ, ಆಶೀರ್ವಾದ ಮರ್ವೇ, ರಾಜೀವ ಮೇತ್ರಿ ಹಾಗೂ ಪ್ರವೀಣ್ ತ್ಯಾರಪ್ಪ. ಅಧ್ಯಕ್ಷೆ ಸುಮನಾ ಗಿರೀಶ್, ಗಣ್ಯ ಅತಿಥಿಗಳಾದ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರೊಫೆಸರ್ ಗುರುರಾಜ ಕರ್ಜಗಿ, ಪತ್ರಕರ್ತರಾದ ಶ್ರೀಯುತ ವಿಶ್ವೇಶ್ವರ ಭಟ್, ರವಿ ಹೆಗಡೆ ಹಾಗೂ ಸ್ವಾಮಿ ಜಪಾನಂದಜಿ ಹಾಗೂ ನೆರೆದ 1500 (ಎರಡು ದಿನಗಳಲ್ಲಿ ಸೇರಿ) ಕನ್ನಡಿಗರನ್ನು ಹಾರ್ದಿಕವಾಗಿ ಸ್ವಾಗತಿಸಿದರು.  ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಅಮೃತ ಹಸ್ತದಿಂದ “ಸಂಭ್ರಮ” ಕಾರ್ಯಕ್ರಮವನ್ನು ಬೈರನ್ ಸಭಾಂಗಣದಲ್ಲಿ ಪ್ರಾರಂಭ ಮಾಡಿದರು. 

ಸಾಂಪ್ರದಾಯಿಕ ಭರತನಾಟ್ಯ, ಕೂಚಿಪುಡಿ ನೃತ್ಯಗಳಿಂದ ಯು.ಕೆ ಕನ್ನಡಿಗರ ಕಲಾಪ್ರದರ್ಶನ ಪ್ರಾರಂಭವಾಯಿತು. ‘ಬಾರಿಸು ಕನ್ನಡ ಡಿಂಡಿಮವ’ ಎಂಬ ವಿಶಿಷ್ಟ ನೃತ್ಯ ರೂಪಕ, ದರ್ಶಕರಿಗೆ ಶತಮಾನಗಳ ಕರ್ನಾಟಕದ ಇತಿಹಾಸ, ಕಲೆ, ಸಂಸ್ಕೃತಿಗಳನ್ನು ಮನಮೋಹಕವಾಗಿ ಬಣ್ಣಿಸಿತು. ಕನ್ನಡ ಬಳಗ ಚಿಣ್ಣರಲ್ಲಿ ಕನ್ನಡವನ್ನು ಕಲಿಸಿ, ಬೆಳೆಸುವ ಶ್ಲಾಘನೀಯ ಕೆಲಸವನ್ನು ‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಮಾಡುತ್ತಲೇ ಬಂದಿದೆ. ಈ ಮಕ್ಕಳು ಕಿರು ನಾಟಕ, ಹಾಡುಗಳ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನ ಮಾಡಿದರು. ಪ್ರೊಫೆಸರ್ ಗುರುರಾಜ ಕರ್ಜಗಿಯವರು ಮಾನವನಿಗೆ ನಂಬಿಕೆ ಎಷ್ಟು ಮುಖ್ಯ, ಏಕೆ ಬೇಕು ಎಂಬ ಮನಮುಟ್ಟುವ ವಿವರಣೆಯಿಂದ , ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಈ ವಿದ್ವತ್ಪೂರ್ಣ ಭಾಷಣದ ನಂತರ ಖ್ಯಾತ ಗಾಯಕ ಶ್ರೀ ರಾಜೇಶ್ ಕೃಷ್ಣನ್ ತಮ್ಮ ಸುಮಧುರ ಗಾಯನದಿಂದ ನೆರೆದವರ ಮನತಣಿಸಿ, ಸಭಿಕರೊಡನೆ ಹೆಜ್ಜೆ ಹಾಕಿ ಕುಣಿಸಿದರು.(ಇದರ ಬಗ್ಗೆ ರಮ್ಯ ಭಾದ್ರಿ ಬರೆದ ವಿಸ್ತೃತ ಲೇಖನ ಕೆಳಗೆ ಕೊಟ್ಟಿದೆ.)

ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್ ಶೈರ್ ಕನ್ನಡ ಬಳಗದ ಗಾಯಕ ವೃಂದ ಪ್ರಸ್ತುತ ಪಡಿಸಿದ ಚಿರನೂತನ ‘ನಿತ್ಯೋತ್ಸವ’, ನಾಡ ಭಕ್ತಿ ಉಕ್ಕಿಸುವ ‘ಅಪಾರ ಕೀರ್ತಿ’ ಚಿತ್ರಗೀತೆಗಳು ಸಭಿಕರನ್ನು ಕನ್ನಡತೆಯ ಭಾವನೆಯಲ್ಲಿ ತೇಲಿಸಿದವು. ಗುರುಪ್ರಸಾದ್ ಪಟ್ವಾಲ್ ಇಲ್ಲಿಯೇ ತರಬೇತಿ ಕೊಟ್ಟು ಬೆಳೆಸಿದ ತಂಡ ಪ್ರದರ್ಶಿಸಿದ ‘ಪಂಚವಟಿ’ ಯಕ್ಷಗಾನ ಕಿರು ಪ್ರಸಂಗ ಕನ್ನಡದ ಜಾನಪದ ಕಲೆಯ ವೈವಿಧ್ಯತೆಯ ಪ್ರದರ್ಶನದೊಂದಿಗೆ, ಯು.ಕೆ ಯಲ್ಲಿ ಈ ಪ್ರಕಾರವನ್ನು ಬೆಳೆಸಿ, ಪ್ರಚಲಿತಗೊಳಿಸುವ ಸಾಹಸದ ದ್ಯೋತಕವಾಗಿತ್ತು. ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು, ಕನ್ನಡ ಬಳಗದ ಕಾರ್ಯವನ್ನು ಶ್ಲಾಘಿಸುತ್ತ, ಬಳಗ ನೂರ್ಕಾಲ ಬಾಳಲಿ, ಕನ್ನಡದ ಬಾವುಟವನ್ನು ವಿದೇಶಿ ನೆಲದಲ್ಲಿ ಹಾರಿಸಲಿ, ಸಾಂಕೇತಿಕವಾಗಿ ಕನ್ನಡದ ಸೀಮೆಯನ್ನು ಕರ್ನಾಟಕದಿಂದಾಚೆ ವಿಸ್ತರಿಸುತ್ತಿರಲಿ ಎಂದು ಆಶಿಸಿದರು. ವಿಶ್ವವಾಣಿಯ ಪ್ರವರ್ತಕರೂ, ಪ್ರಧಾನ ಸಂಪಾದಕರೂ ಆದ ಶ್ರೀ ವಿಶೇಶ್ವರ ಭಟ್ಟರು, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಅನಿವಾಸಿ ಕನ್ನಡಿಗ ಸಂಘಗಳ ಮಹತ್ವ, ಇತರ ಭಾಷಿಕರಿಂದ ನಾವು ಮಾತೃ ಭಾಷೆಯ ಉಳಿವಿಗೆ, ಪ್ರಸಾರಕ್ಕೆ ಕಲಿಯಬೇಕಾದ ವಿಷಯಗಳನ್ನು ಸುಂದರವಾಗಿ ವಿವರಿಸಿದರು. ಅನ್ಯ ದೇಶಗಳಲ್ಲಿರುವ ಕನ್ನಡ ಸಂಘಗಳ ಅನುಭವಗಳನ್ನು ಹೀರಿ ಕನ್ನಡ ಬಳಗ ಹೇಗೆ ಅಭಿವೃದ್ಧಿಯಾಗಬಹುದು ಎಂದು ವಿಸ್ತರಿಸಿದರು. ಸ್ವಾಮಿ ಜಪಾನಂದಜಿಯವರು ಕನ್ನಡ ಭಾಷೆ ನಶಿಸಬಾರದು, ಬಳಗ ಮಾಡುತ್ತಿರುವ ಕಾರ್ಯ ಈ ದಿಶೆಯಲ್ಲಿ ಮಹತ್ತರವಾಗಿದೆ; ಈ ಕಾರ್ಯಕ್ಕೆ ಕನ್ನಡಿಗರೆಲ್ಲರೂ ನೂರಾನೆಯ ಬಲ ಸೇರಿಸಿ ಎಂದು ನೆರೆದವರಲ್ಲಿ ಉತ್ಸಾಹ ತುಂಬಿದರು.(ಕೆಳಗೆ ಕೊಟ್ಟ ಶ್ರೀಮತಿ ಶ್ರೀರಂಜಿನಿ ಸಿಂಹ ಅವರ ಲೇಖನದಲ್ಲಿ ಇನ್ನಷ್ಟು ವಿವರಗಳಿವೆ.)  

ಕನ್ನಡ ಬಳಗ ವಿಶೇಷವಾಗಿ ಕನ್ನಡ ಸಾಹಿತ್ಯವನ್ನು ಬೆಂಬಲಿಸುತ್ತ ಬಂದಿದೆ. ಕನ್ನಡ ಬಳಗದ ಸಾಹಿತ್ಯಾಸಕ್ತ ಸದಸ್ಯರು ಹುಟ್ಟುಹಾಕಿದ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಚಾರ ವೇದಿಕೆ ತನ್ನ ಅನಿವಾಸಿ (anivaasi.com) ಜಾಲತಾಣದಲ್ಲಿ ವಾರಕ್ಕೊಮ್ಮೆ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಹಾಗೆಯೇ, ಕನ್ನಡ ಬಳಗದ ಕಾರ್ಯಕ್ರಮಗಳಿಗೆ ಬರುವ ಸಾಹಿತ್ಯಾಸಕ್ತರನ್ನು ಒತ್ತಟ್ಟಿಗೆ ತಂದು ಸಮಾನಾಂತರ ಸಭೆಗಳನ್ನು ಕಳೆದ ಒಂದು ದಶಕದಿಂದ ನಡೆಸುತ್ತಿದೆ. ಈ ಬಾರಿ ಕನ್ನಡದ ಮೂರು ಪ್ರಮುಖ ಆಹ್ವಾನಿತರು ಅನಿವಾಸಿ ಸಭೆಯಲ್ಲಿ ಸಕ್ರಿಯವಾಗಿ ಪಾಲುಗೊಂಡರು. ಶಿಕ್ಷಣ ನೀತಿ, ಮಾಧ್ಯಮಗಳ ಪ್ರಬಲತೆ-ಪ್ರಭಾವ ಎಂಬ ಎರಡು ವಿಷಯಗಳು ಅತಿಥಿಗಳಾದ ಪ್ರೊಫೆಸರ್ ಕರ್ಜಗಿ, ಶ್ರೀಯುತ ರವಿ ಹೆಗಡೆ ಹಾಗೂ ವಿಶ್ವೇಶ್ವರ ಭಟ್ಟರ ಸಮ್ಮುಖದಲ್ಲಿ ಚರ್ಚಿಸಲ್ಪಟ್ಟವು. ಸದಸ್ಯರ ಚರ್ಚೆಯ ನಂತರ ಅತಿಥಿಗಳು ತಮ್ಮ ಅಭಿಪ್ರಾಯಗಳನ್ನು ಸಭಿಕರಿಗೆ ಸುದೀರ್ಘವಾಗಿ ತಿಳಿಸಿದ್ದಲ್ಲದೆ, ಆಧುನಿಕ ತಂತ್ರಜ್ಞಾನ ಕಲಿಕೆ, ಮಾಧ್ಯಮ ಹಾಗು ಭಾಷೆಯ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಿಸಿದರು. ಸಭಿಕರೊಡನೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಮೇಲಿನ ಪ್ರಶ್ಳಿಗಳಿಗೆ ಪಾಂಡಿತ್ಯಪೂರ್ಣ ಉತ್ತರಗಳನ್ನು ನೀಡಿ, ಸಭಿಕರೊಡನೆ ಬೆರೆತು ಸಂಭಾಷಿಸಿದರು. (ಇದರ ಪ್ರತ್ಯೇಕ ವರದಿಯನ್ನು ಕಳೆದ ವಾರದ ’ಅನಿವಾಸಿ’ ಸಂಚಿಕೆಯಲ್ಲಿ ನೋಡಿರಿ)  https://anivaasi.com/2023/10/06/%e0%b2%85%e0%b2%a8%e0%b2%bf%e0%b2%b5%e0%b2%be%e0%b2%b8%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b9%e0%b2%b3/

ಕನ್ನಡ ಬಳಗ ದತ್ತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಯು.ಕೆ ಹಾಗೂ ಕರ್ನಾಟಕದಲ್ಲಿ ಹಲವಾರು ಸಂಘ-ಸಂಸ್ಥೆಗಳೊಡನೆ ಜೊತೆಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಈ ಉದಾತ್ತ ಕಾರ್ಯ,  ಕಾರ್ಯಕ್ರಮದುದ್ದಕ್ಕೂ ಹಲವು ಮಾಧ್ಯಮಗಳಲ್ಲಿ ಬಿತ್ತರವಾಯಿತು. ಎರಡು ದಿನಗಳ ರಂಜಿತ ಕಾರ್ಯಕ್ರಮ ಎಲ್ಲ ವಯೋಧರ್ಮಗಳಿಗೆ ಪೂರಕವಾಗಿದ್ದಲ್ಲದೆ, ಕಲೆತ ಕನ್ನಡಿಗರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದ್ದಲ್ಲಿ ಸಂದೇಹವಿಲ್ಲ.  
ಮಹಾರಾಜರಿಗೆ ಸನ್ಮಾನ
ಬಾರಿಸು ಕನ್ನಡ ದಿಂಡಿಮವ’ ನೃತ್ಯ ನಾಟಕದ ಒಂದು ದೃಶ್ಯ

1. 2.ಸುಮಧುರ ಸಂಜೆ ರಾಜೇಶ್ ಕೃಷ್ಣನ್ ನೊಂದಿಗೆ …

ಮಾಣಿಕ್ಯ ಸಂಭ್ರಮ ಗೀತೆ (RTP) 
– ಯೂ ಟ್ಯೂಬ್ ರೆಕಾರ್ಡಿಂಗ್ ಕೃಪೆ: ಆಂಚಲ್ ಅರುಣ್
Photoes: Kannada Balaga UK (except where credited)

ಅನಿವಾಸಿಯಲ್ಲಿ  ಕನ್ನಡ ಕಹಳೆ

ನಮಸ್ಕಾರ. ಕನ್ನಡ ಬಳಗದ ನಲ್ವತ್ತರ ‘ಸಂಭ್ರಮ’ ನಮ್ಮ ಮಹಾರಾಜರ ಹಾಗೂ ಅನೇಕ ಹೆಸರಾಂತ  ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಹಾಗೂ ಅದ್ಧೂರಿಯಾಗಿ ಜರುಗಿತು.  ಜೊತೆಗೇ KSSVV, ಅನಿವಾಸಿ ಸಮಾನಾಂತರ ಸಭೆಗಳೂ ಕೂಡ ಅಷ್ಟೇ ಯಶಸ್ವಿಯಾಗಿ ಜರುಗಿದ್ದು, ಅತಿಥಿಗಳೆಲ್ಲರ ಪ್ರಶಂಸೆಗೆ ಪಾತ್ರವಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಎರಡೂ ದಿನದ ಸಭೆಯ ವಿವರವಾದ ‘ವೀಕ್ಷಕ ವಿವರಣೆ’ಯನ್ನು ತಮ್ಮೆದಿರು ಪ್ರಸ್ತುತಪಡಿಸಲಿದ್ದಾರೆ  ಶ್ರೀ ರಾಮಶರಣ ಹಾಗೂ ಶ್ರೀ ಕೇಶವ್ ಅವರು. ಅನಿವಾಸಿಯ ಸಾಧನೆಗಳು ಮುಂಬರುವ ದಿನಗಳಲ್ಲಿ ಇನ್ನೂ ಕಳೆಗಟ್ಟಲಿ ಎಂಬ ಸದಾಶಯಗಳೊಂದಿಗೆ 

–  ಸಂಪಾದಕಿ.
ಕನ್ನಡ ಬಳಗದ ಮಾಣಿಕ್ಯೋತ್ಸವಕ್ಕೆ ಕರ್ನಾಟಕದ ಮೂವರು ಅತಿಥಿಗಳು ಅನಿವಾಸಿ ಸಭೆಗೆ ಬರುವರೆಂದು ನಿಗದಿಯಾಗಿತ್ತು. ಪ್ರೊ. ಗುರುರಾಜ ಕರ್ಜಗಿಯವರು ಹೆಸರಾಂತ ಶಿಕ್ಷಣ ತಜ್ಞರು, ಉತ್ತಮ ವಾಗ್ಮಿ. ಅಧ್ಯಯನ ಮಾಡಿ, ಜಗತ್ತಿನ ಹಲವಾರು ದೇಶಗಳನ್ನು ತಜ್ಞನಾಗಿ ಸಂದರ್ಶಿಸಿದ ಅನುಭವಿ. ಶ್ರೀ. ವಿಶ್ವೇಶ್ವರ ಭಟ್ಟರು ಪ್ರಸಿದ್ಧ ಪತ್ರಕರ್ತ (ವಿಶ್ವ ವಾಣಿ ಪತ್ರಿಕೆಯ ಮಾಲಕ ಹಾಗೂ  ಪ್ರಧಾನ ಸಂಪಾದಕ) ಹಾಗೂ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದ ಬರಹಗಾರ. ಶ್ರೀ. ರವಿ ಹೆಗಡೆ ಕನ್ನಡ ಪ್ರಭಾ ದಿನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಹಾಗೂ ಸುವರ್ಣ ಸುದ್ದಿವಾಹಿನಿಯ ಮುಖ್ಯ ಸಂಪಾದಕ. ಅತಿಥಿಗಳ ವಿಶೇಷತೆಗನುಗುಣವಾಗಿ ಅನಿವಾಸಿ ಸಭೆಗೆ ಸ್ವರೂಪ ಕೊಡುವುದೊಂದು ವಾಡಿಕೆ. ಈ ಬಾರಿ ಎರಡು ಬಗೆಯ ವಿಶೇಷತೆಗಳನ್ನು ಹೊಂದಿಸಿ ನಡೆಸುವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ, ಎರಡು ವಿಷಯಗಳ ಮೇಲೆ ಅನಿವಾಸಿ ಸದಸ್ಯರು ವೇದಿಕೆಯ ಮೇಲೆ ಚರ್ಚಿಸುವುದೆಂದು ನಿರ್ಧರಿಸಲಾಯಿತು. ಅತಿಥಿಗಳ ವಿಶೇಷತೆಗನುಗುಣವಾಗಿ ಸದಸ್ಯರು ಎರಡು ವಿಷಯಗಳನ್ನು ಆರಿಸಿದರು: ಶಿಕ್ಷಣ ನೀತಿ ಸಮಾಜಕ್ಕೆ ಅನುಗುಣವಿರಬೇಕು; ಮಾಧ್ಯಮಗಳು ಪ್ರಬಲವಾಗುತ್ತಿವೆ. ಮೊದಲನೆಯ ವಿಷಯಕ್ಕೆ ಪರವಾಗಿ ಲೇಖಕ, ಡಾ.ಶಿವಪ್ರಸಾದ್, ಡಾ.ವತ್ಸಲಾ ರಾಮಮೂರ್ತಿ, ವಿರೋಧವಾಗಿ ಡಾ. ಕೇಶವ ಕುಲಕರ್ಣಿಯವರು; ಎರಡನೇ ವಿಷಯದ ಪರವಾಗಿ ಡಾ.ಶಿವಪ್ರಸಾದ್,  ಡಾ. ಕೇಶವ ಕುಲಕರ್ಣಿ ಹಾಗೂ  ವಿರೋಧವಾಗಿ ಲೇಖಕ ವಾದಿಸುವ ಆಯ್ಕೆ ಮಾಡಿಕೊಂಡರು.  

ಮೊದಲ ದಿನದ ಸಭೆಯ ಅಧ್ಯಕ್ಷತೆ ಹಾಗೂ ನಿರ್ವಹಣೆಯನ್ನು ಡಾ. ಪ್ರೇಮಲತಾ ವಹಿಸಿದರು. ಕಾರ್ಯಕ್ರಮ ಕು. ಅನನ್ಯ ಕದಡಿಯ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಅಧ್ಯಕ್ಷರು ಎಲ್ಲರನ್ನು ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿಕೊಟ್ಟಿದ್ದಲ್ಲದೆ, ಕಾರ್ಯಕ್ರಮದ ಸ್ವರೂಪವನ್ನು ನಿವೇದಿಸಿದರು. ಮೊದಲ ವಿಷಯದ ಪರವಾಗಿ ಮಂಡಿಸಿದ ಸದಸ್ಯರು ಸಮಾಜ ಹಾಗು ಶಿಕ್ಷಣದ ಬೆಳವಣಿಗೆಯನ್ನು ಅವಲೋಕಿಸಿದರು. ಶಿಕ್ಕ್ಷಣ ಸಮಾಜ ಮುಖಿಯಾಗಿರಬೇಕು, ಮೌಲಿಕವೂ ನೈತಿಕವಾಗಿಯೂ ಇರಬೇಕು. ಸಮಾಜದಲ್ಲಿರುವ ಸಂಬಂಧಗಳನ್ನು ಗೌರವಿಸುವಂತಿರಬೇಕು. ಶಿಕ್ಷಣ ಸಮಾಜಕ್ಕೆ ವಿಮುಖವಾಗಿದ್ದರೆ ಉತ್ತಮ ನಾಗರೀಕರನ್ನು ಬೆಳೆಸಲಾರದೆಂದು ಅಭಿಪ್ರಾಯಪಟ್ಟರು. ಶಿಕ್ಷಣದಲ್ಲಿ ರಾಜಕೀಯ ಹಾಗೂ ಧಾರ್ಮಿಕ ಹಸ್ತಕ್ಷೇಪಗಳಿಲ್ಲದೆ ಸ್ವತಂತ್ರವಾಗಿ ಬೆಳೆಯಬೇಕು ಎಂದು ಪ್ರತಿಪಾಸಿದರು. ವಿರುದ್ಧವಾಗಿ ವಾದಿಸಿದ ಕೇಶವ್ ಶಿಕ್ಷಣ ಎಂದಿಗೂ ಸಮಾಜದ ವಿರುದ್ಧವಾಗಿಯೇ ಕಾರ್ಯವಹಿಸಿದೆ ಎಂದರು. ಈ ವಿರೋಧಿ ನಿಲುವಿನಿಂದ ಶಿಕ್ಷಣ ಸಮಾಜದ ಹಲವು ಡೊಂಕುಗಳನ್ನು ತಿದ್ದುವಲ್ಲಿ ಸಫಲವಾಗಿದೆ. ಎಂದು ಶಿಕ್ಷಣ ನೀತಿ ಹಾಗೂ ಸಮಾಜದ ರೀತಿ ಅನುಸರಿಸಲು ತೊಡಗುವವೋ, ಅಂದಿನಿಂದ ಸಮಾಜ ನಿಂತ ನೀರಾಗಿ ಕೊಳೆಯುವುದೆಂದು ಅಭಿಪ್ರಾಯ ಪಟ್ಟರು. ಪ್ರೊ. ಕರ್ಜಗಿ ಎಲ್ಲರ ವಾದಸರಣಿಗಳನ್ನು ವಿಶ್ಲೇಷಿಸುತ್ತ, ತಮ್ಮ ನಿಲುವು ವಿಷಯದ ಪರ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಪರ ವಾದಿಗಳನ್ನ ಅಂಗೀಕರಿಸಿ, ಸಮಾಜ ಸದಾ ಬದಲಾಗುವ ವ್ಯವಸ್ಥೆ, ಅದಕ್ಕನುಗುಣವಾಗಿ ಶಿಕ್ಷಣ ವ್ಯವಸ್ಥೆ ಬದಲಾಗುವುದು ಅವಶ್ಯ, ಈ ವ್ಯವಸ್ಥೆ ರಾಜಕೀಯ ಯಾ ಧಾರ್ಮಿಕ ಹಸ್ತಕ್ಷೇಪದಿಂದ ಸ್ವತಂತ್ರವಾಗಿರಬೇಕೆಂಬುದನ್ನು ಅನುಮೋದಿಸಿದರು. ಶಿಕ್ಷಣ ನೀತಿ ಸಮಾಜದ ರೀತಿಗೆ ವಿರೋಧವಾಗಿದ್ದರೆ ಸಮಾಜದ ಮೂಲಭೂತ ತತ್ವಕ್ಕೆ ಧಕ್ಕೆ ತರುವ ಸಾಧ್ಯತೆಗಳಿವೆ, ಶಿಕ್ಷಣ ಸಮಾಜ ಡೊಂಕನ್ನು ತಿದ್ದುತ್ತಿರುವುದು ಅದರೊಡನೆ ಸಹಭಾಗಿಯಾಗಿರುವುದರಿಂದಲೇ ಹೊರತು ವಿರೋಧವಾಗಿರುವುದರಿಂದಲ್ಲವೆಂದು ಅಭಿಪ್ರಾಯಪಟ್ಟರು. ಶಿಕ್ಷಣ ಮಕ್ಕಳನ್ನು ಬದುಕನ್ನೆದುರಿಸಲು ತಯಾರು ಮಾಡಬೇಕು, ಸ್ವತಂತ್ರ ಮನೋಭಾವವನ್ನು ಬೆಳೆಸಬೇಕು, ಅಸಮಾನತೆಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನೀಡಬೇಕೆಂದರು. ಶಿಕ್ಷಣ ಮಕ್ಕಳನ್ನು ಸುಸಂಸ್ಕೃತರನ್ನಾಗಿಸಬೇಕು, ಇಲ್ಲದಿದ್ದರೆ ಅದು ಸಮಾಜದ ಅವನತಿಗೆ ಹಾದಿಯಾದೀತೆಂದು ಎಚ್ಚರಿಸಿದರು. ಉತ್ತಮ ಶಿಕ್ಷಣದ ಬೆಳವಣಿಗೆಗೆ ಸೂಕ್ತ ಶಿಕ್ಷರನ್ನು ಬೆಳೆಸಬೇಕು; ಶಿಕ್ಷಣ ಕೇವಲ ಪರೀಕ್ಷೆಯವರೆಗೆ ಮಿತಿಯಾಗದೇ ಬಾಳಿನುದ್ದಕ್ಕೂ ಅನುಭವಗಳನ್ನು ಹೀರಿ ವ್ಯಕ್ತಿತ್ವ ಬೆಳೆಸುವ ಸಲಕರಣೆಯಾಗಿರಲಿ ಎಂದು ಆಶಿಸಿದರು.   

ಎರಡನೇ ವಿಷಯದ ಪರವಾಗಿ ವಾದ ಮಂಡಿಸಿದ ಸದಸ್ಯರು ಪ್ರಮುಖವಾಗಿ ಸಾಮಾಜಿಕ ಹಾಗೂ ದೃಶ್ಯ ಮಾಧ್ಯಮಗಳ ಹಾವಳಿ ಹಾಗೂ ಪ್ರಭಾವಗಳ ಮೇಲೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದು ಕಂಡುಬಂದಿತು. ಸಾಮಾಜಿಕ ಮಾಧ್ಯಮಗಳ ಪ್ರಭಾವ ಹೇಗೆ ಮಾನವ ಸಂಬಂಧಗಳನ್ನು ಕಲುಷಿತಗೊಳಿಸುತ್ತಿದೆ ಎಂದು ವಿವರಿಸಿದರು. ವೈಯಕ್ತಿಕ ಭಾವನೆಗಳನ್ನು ಇತರರನ್ನು ಕೆರಳಿಸುವ ಶಕ್ತಿ ಹೊಂದಿದ್ದು, ಇತ್ತೀಚಿಗೆ ಈ ಮಾಧ್ಯಮಗಳು ಮನುಕುಲಕ್ಕೆ ಹೆಚ್ಚಿನ ಹಾನಿ ಮಾಡುತ್ತಿವೆ. ಆಧುನಿಕ ಯುಗದಲ್ಲಿ ಮಾಧ್ಯಮಗಳ ಸಂಖ್ಯೆ ಅತಿಯಾಗಿದ್ದು; ದಿನವಿಡೀ ತೋರಿಸಲ್ಪಡುವ ಸುದ್ದಿವಾಹಿನಿಗಳ ಹಾವಳಿ, ಸುದ್ದಿ ಸ್ಫೋಟದ ಮೇಲಿನ ಅತೀವ ಅವಲಂಬನೆ ಹಾಗೂ ಇದರಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ, ಇಂದಿನ ಶತಮಾನದಲ್ಲಿ ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚು ಪ್ರಬಲವಾಗಿವೆ ಎಂದು ಪ್ರತಿಪಾದಿಸಿದರು. ಪಕ್ಷಪಾತಿಯಾದ ಮಾಧ್ಯಮಗಳು ಪ್ರಬಲವಾಗಿರುವುದರಿಂದಲೇ ವಿರೂಪಗೊಂಡ ಅಭಿಪ್ರಾಯಗಳು ಜನರ ಮೇಲೆ ತಪ್ಪಾದ ಪ್ರಭಾವ ಬೀರುತ್ತಿವೆ ಎಂಬುದು ಅವರ ಅಭಿಪ್ರಾಯವಾಗಿತ್ತು. ವಿರುದ್ಧವಾಗಿ ಲೇಖಕ, ಮಾಧ್ಯಮ ಇಂದಿನ ದಿನಗಳಲ್ಲಿ ದುರ್ಬಲವಾಗುತ್ತಿದೆ ಎಂದು ವಾದಿಸಿದರು. ಮಾಧ್ಯಮಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ, ಗಟ್ಟಿ ಸುದ್ದಿಗಿಂತ ಜೊಳ್ಳು ಜಾಸ್ತಿ; ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಪಟ್ಟಭದ್ರ ಹಿತಾಸಕ್ತಿಗಳು ಮಾಧ್ಯಮದ ಮೇಲೆ ಹೆಚ್ಚಿನ ಹಿಡಿತ ಸಾಧಿಸುತ್ತಿದ್ದಾರೆ. ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರುವ ಮಾಧ್ಯಮ ಸೊರಗುತ್ತಿದೆ ಎಂದು ವಾದಿಸಿದರು. ಶ್ರೀ ರವಿ ಹೆಗಡೆ ಮಾಧ್ಯಮ ಹಿಂದೆಯೂ ಪ್ರಬಲವಾಗಿತ್ತು, ಇಂದೂ ಅಷ್ಟೇ ಶಕ್ತಿಯುತವಾಗಿದೆ ಎಂದು ಉದಾಹರಣೆಗಳನ್ನು ಕೊಟ್ಟು ವಿವರಿಸಿದರು. ಸಾಮಾಜಿಕ ಮಾಧ್ಯಮಗಳು ಅಂಕೆಯಿಲ್ಲದಂತೆ ವರ್ತಿಸುತ್ತಿದ್ದರೂ ಜನ ಸಾಮಾನ್ಯರು ಆ ಮಾಹಿತಿಗಳನ್ನು ಒಪ್ಪುವ/ಬಿಡುವ, ಉಪಯೋಗಿಸುವ/ತಿರಸ್ಕರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ದಿನವಿಡೀ ಬಿತ್ತರಗೊಳ್ಳುವ ಸುದ್ದಿ ನಮಗೆ ಮಾಧ್ಯಮದ ಪ್ರಬಲತೆ ಅತಿಯಾಗಿದೆ ಎಂದು ಅನಿಸುವುದು ಸಹಜ. ಸಿಗುವ ಮಾಹಿತಿಯನ್ನೋ, ಮನರಂಜನೆಯನ್ನೋ ಪಡೆಯುವ ಆಯ್ಕೆಮಾಡುವ ಅವಕಾಶ ಗ್ರಾಹಕರಲ್ಲಿದೆ. ಕೈಯಲ್ಲಿರುವ ಆಯುಧವನ್ನು ಒಳಿತಿಗೆ ಉಪಯೋಗಿಸಬೇಕೋ ಅಥವಾ ಧ್ವಂಸತ್ವಕ್ಕೆ ಬಳಸಬೇಕೋ ಎನ್ನುವುದು ನಮ್ಮ ಕೈಯಲ್ಲಿದೆ. ತಂತ್ರಜ್ನಾದ ಬಳಕೆಯನ್ನು ಉತ್ತಮವಾಗಿ ಉಪಪಯೋಗಿಸುವ ಬುದ್ಧಿವಂತಿಕೆ ನಮ್ಮಲ್ಲಿರಬೇಕೇ ಹೊರತು ಮಾಧ್ಯಮಗಳ ಪ್ರಬಲತೆ/ದುರ್ಬಲತೆಯನ್ನು ಚರ್ಚಿಸುವುದರಲ್ಲಿ ಹೆಚ್ಚಿನ ಅರ್ಥವಿಲ್ಲವೆಂದರು. ಉತ್ತಮ ಗುಣಮಟ್ಟದ ಮಾಹಿತಿಗೆ ಮುದ್ರಿತ ಮಾಧ್ಯಮಗಳು ಇಂದಿಗೂ ಶ್ರೇಷ್ಠ ಎಂದು ಅಭಿಪ್ರಾಯ ಪಟ್ಟರು.  ಶ್ರೀ. ವಿಶ್ವೇಶ್ವರ ಭಟ್ಟರು ತಮ್ಮ ದೀರ್ಘ ವೃತ್ತಿಪರ ಅನುಭವವನ್ನು ವಿಸ್ತರಿಸುತ್ತ ಮಾಧ್ಯಮ ಪ್ರಬಲವಾಗಿಯೂ ಪರಿಣಾಮಕಾರಿಯೂ ಆಗಿರಬೇಕು; ಇದ್ದರೆ ಮಾತ್ರ ದೇಶ ಸಧೃಡವಾಗಿರಲು ಸಾಧ್ಯವೆಂದರು. ಮಾಧ್ಯಮ ಸಮಾಜವನ್ನು ಪ್ರತಿಫಲಿಸುತ್ತದೆ, ಯಾವುದನ್ನೇ ಕೃತಕವಾಗಿ ಸೃಷ್ಟಿ ಮಾಡದು. ದೃಶ್ಯ ಮಾಧ್ಯಮ ವೈಚಾರಿಕತೆಯನ್ನು ಹತ್ತಿಕ್ಕುತ್ತದೆ. ಮುದ್ರಿತ ಮಾಧ್ಯಮ ಎಂದೆಂದಿಗೂ ಪ್ರಸ್ತುತ; ದೂರದರ್ಶನ ಹಾಗೂ ಸಾಮಾಜಿಕ ಮಾಧ್ಯಮಗಳು ಭಾವನೆಗಳನ್ನು ಕೆರಳಿಸುವ, ಮನೋಲ್ಲಾಸಕಾರಿ ಮನರಂಜನೆಗಷ್ಟೇ ಸೀಮಿತ ಎಂದು ಅಭಿಪ್ರಾಯಪಟ್ಟರು. ಜನರ ಅಭಿರುಚಿಗನುಗುಣವಾಗಿ ಈ ಮಾಧ್ಯಮಗಳು ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆಯೇ ಹೊರತು ವೈಚಾರಿಕತೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವಲ್ಲಿ ಸೋತಿವೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಮುದ್ರಿತ ಮಾಧ್ಯಮಗಳ ಪ್ರಾಬಲ್ಯ ಅತಿ ಆಗುತ್ತಿಲ್ಲ, ಕಡಿಮೆಯೂ ಆಗುತ್ತಿಲ್ಲ ಆದರೆ ಪ್ರಬಲ ಮಾಧ್ಯಮ ಸಮಾಜಕ್ಕೆ ಅತ್ಯವಶ್ಯಕ ಎಂದರು. 

ಈ ಬಾರಿಯ ಸಭೆ ಹಿರಿದಾದ ಕೊನೆಯಲ್ಲಿದ್ದುದ್ದಲ್ಲದೆ, ಉತ್ತಮ ಧ್ವನಿ ವ್ಯವಸ್ಥೆಯನ್ನೂ ಪಡೆದಿದ್ದು ವಿಶೇಷ. ಶ್ರೀ. ಆನಂದ ಕೇಶವಮೂರ್ತಿಯವರು ನೀಡಿದ ಉತ್ತಮ ತಂತ್ರಜ್ಞಾನ ಬೆಂಬಲ ಕೇಳುಗರಿಗೆ ಯಾವುದೇ ವ್ಯತ್ಯಯವಾಗದಂತೆ ಸಹಕರಿಸಿತು. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಸಭಿಕರು ಸಕ್ರಿಯವಾಗಿ ಅತಿಥಿಗಳಿಗೆ ಪ್ರಶ್ನೆಗಳನ್ನು ಕೇಳಿ ಭಾಗವಹಿಸಿದರು. ಅವರಲ್ಲನೇಕರು ವೈಯಕ್ತಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅನಿವಾಸಿ ಸದಸ್ಯರಿಗೆ ಮಾರನೆಯ ದಿನದ ಕಾರ್ಯಕ್ರಮಕ್ಕೆ ಹೆಚ್ಚಿನ ಹುರುಪು ನೀಡಿತು. ಶ್ರೀಮತಿ ಅನ್ನಪೂರ್ಣ ಆನಂದ್ ಚೊಕ್ಕದಾಗಿ ವಂದನಾರ್ಪಣೆ ಕಾರ್ಯ ನಿರ್ವಹಿಸಿದರು. 

- ರಾಮಶರಣ
ಎರಡನೇ ದಿನ ಅಂದುಕೊಂಡಿದ್ದಕ್ಕಿಂತ ತುಂಬ ತಡವಾಗಿ ಕಾರ್ಯಕ್ರಮ ಆರಂಭವಾದರೂ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನರು ಸೇರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಶ್ರೀಮತಿ ಗೌರಿ ಪ್ರಸನ್ನ ಅವರು ವಹಿಸಿಕೊಂಡಿದ್ದರು. `ದೇಶ ಸುತ್ತು ಕೋಶ ಓದು,` ಎನ್ನುವ ಗಾದೆಮಾತನ್ನು ಹೇಳಿ, ಬಹಳಷ್ಟು ದೇಶಗಳನ್ನು ಸುತ್ತಿದ, ಸಹಸ್ರಾರು ಕೋಶಗಳನ್ನು ಓದಿರುವುದಲ್ಲದೇ  ಹಲವಾರು ಕೃತಿಗಳನ್ನು ರಚಿಸಿರುವ, ವಾಗ್ಮಿಗಳಾದ ಶ್ರೀ ಗುರುರಾಜ ಕರ್ಜಗಿಯವರು ಮತ್ತು  ಶ್ರೀ ವಿಶ್ವೇಶ್ವರ ಭಟ್ಟರು, `ಕನ್ನಡ ಬಳಗ`ದ `ಕೆ ಎಸ್ ಎಸ್ ವಿ ವಿ` ಯ ಪರ್ಯಾಯ ಕಾರ್ಯಕ್ರಮಕ್ಕೆ ಬಂದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು. ಸುವರ್ಣ ವಾಹಿನಿ ಮತ್ತು ಕನ್ನಡ ಪ್ರಭದ ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ರವಿ ಹೆಗಡೆಯವರೂ ವೇದಿಕೆಯ ಮೇಲೆ ಮತ್ತೋರ್ವ ಅತಿಥಿಯಾಗಿ ಉಪಸ್ಥಿತರಿದ್ದರು. 

ಮೊದಲ ದಿನದ ಗಂಭೀರ ಚರ್ಚೆಗಳನ್ನು ಬದಿಗಿಟ್ಟು, ಎರಡನೇ ದಿನ, `ವಿದೇಶದಲ್ಲಿ ಎದುರಿಸಿದ ಪೇಚಿನ ಮತ್ತು ಮೋಜಿನ ಪ್ರಸಂಗಗಳು.` ಎನ್ನುವ ವಿಷಯದ ಬಗ್ಗೆ ಮಾತನಾಡಲು ಅತಿಥಿಗಳನ್ನು ಕೇಳಿಕೊಳ್ಳಲಾಯಿತು. 

ಮೊದಲು ಮಾತನಾಡಿದ ರವಿ ಹೆಗಡೆಯವರು, ಶ್ರೀಲಂಕಾದಲ್ಲಿ ನಡೆದ ಪೇಚಿನ ಪ್ರಸಂಗವನ್ನು ಹೇಳಿ ನಮಗೆ ಮೋಜು ನೀಡಿದರು. ಶ್ರೀಲಂಕಾದಲ್ಲಿ `ಮರಿಯಾನೆಯ ಕುಣಿತ`ವನ್ನು ತೋರಿಸುತ್ತೇನೆಂದು ಮೋಸಮಾಡಿದ ಪ್ರಸಂಗವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ನಮ್ಮನ್ನು ನಗಿಸಿದರು. 

ನಂತರ ಮಾತನಾಡಿದ ಶ್ರೀ ಗುರುರಾಜ ಕರ್ಜಗಿಯವರು, ಅಮೇರಿಕದಲ್ಲಿ ತಾವು ಕಣ್ಣಾರೆ ಕಂಡ `ಟು ಫಾರ್ ಅಸ್, ಒನ್ ಫಾರ್ ದ ವಾಲ್`ಪ್ರಸಂಗವನ್ನು ಹೇಳಿದರು. ಆ ಪ್ರಸಂಗದ ಬಗ್ಗೆ ಲೇಖನ ಬರೆದಾಗ, ಅದನ್ನು ಓದಿದ, `ವಿದ್ಯಾರ್ಥಿ ಭವನ`ದ ಶ್ರೀ ಅರುಣ ಅಡಿಗರು, ಕೊರೋನಾ ಸಮಯದಲ್ಲಿ ಅದರಿಂದ ಸ್ಪೂರ್ತಿಯನ್ನು ಪಡೆದು ಸಹಸ್ರಾರು ಜನರಿಗೆ ಆಹಾರ ಸರಬುರಾಜು ಮಾಡಿದ್ದನ್ನು ನೆನಪಿಸಿಕೊಂಡರು. 

ಗಂಟಲು ಕೈಕೊಟ್ಟ ಕಾರಣಕ್ಕೆ ಮಾತನಾಡಲಾರೆ ಎಂದಿದ್ದ ಶ್ರೀ ವಿಶ್ವೇಶ್ವರ ಭಟ್ಟರು ಇಬ್ಬರ ಭಾಷಣದಿಂದ ಉತ್ಸಾಹಗೊಂಡು, `ಒನ್ ಫಾರ್ ದ ಬುಕ್,` ಎನ್ನುವ ವೇಲ್ಸ್-ನಲ್ಲಿರುವ ಹೇ-ಆನ್-ವೈ ಎನ್ನುವ ಪುಸ್ತಕ ಗ್ರಾಮದ ಬಗ್ಗೆ ಮಾತನಾಡಿದರು. ಆ ಪುಸ್ತಕಗ್ರಾಮ ಪುಸ್ತಕಗಳ್ಳನ ಮೇಲೆ ಮಾಡಿದ ಅದಮ್ಯ ಪರಿಣಾಮದ ಬಗ್ಗೆ ಹೇಳಿದರು. 

ಇದಾದ ಮೇಲೆ ಸಭಿಕರ ಜೊತೆ ಪ್ರಶ್ನೋತ್ತರದ ಕಾರ್ಯಕ್ರಮ ನಡೆಯಿತು. 

ಶ್ರೀ  ರವಿ ಹೆಗಡೆಯವರು `ಅನಿವಾಸಿ ಕನ್ನಡಿಗರು ಇಲ್ಲಿಯೂ ಅಲ್ಲಿಯೂ ಸಲ್ಲದವರೋ ಅಥವಾ ಎರಡೂ ಕಡೆ ಸಲ್ಲುವವರೋ?` ಎನ್ನುವ ಪ್ರಶ್ನೆಯನ್ನು ಎತ್ತಿಕೊಂಡು, `ಜಾಗತೀಕರಣದ ಕಾಲದಲ್ಲಿ ಅನಿವಾಸಿ ಕನ್ನಡಿಗರು ಕರ್ನಾಟಕದ ರಾಯಭಾರಿಗಳು, ಎಲ್ಲೆಲ್ಲಿಯೂ ಸಲ್ಲುವವರು,` ಎಂದು ಮನಮುಟ್ಟುವಂತೆ ಹೇಳಿದರು. 

ಶ್ರೀ ವಿಶ್ವೇಶ್ವರ ಭಟ್ಟರು ಪತ್ರಕರ್ತರಿಗೆ ಭಾಷೆಯ ಸ್ವಚ್ಛತೆಯ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತ, ತಾವು ಇಂಗ್ಲೆಂಡಿನಲ್ಲಿ ಜರ್ನಲಿಸಂ ಓದುವಾಗ ಸನ್ ಪತ್ರಿಕೆಯು ಹೇಗೆ ಕೆಲವೇ ಪದಗಳಲ್ಲಿ ಸ್ಪಷ್ಟವಾಗಿ ಬರೆಯುವ ತರಬೇತಿಯನ್ನು ಪತ್ರಕರ್ತರಿಗೆ ಕೊಡುತ್ತದೆ ಎನ್ನುವುದರಿಂದ ಹಿಡಿದು, ತಾವು ಹೇಗೆ ಹೊಸ ಪತ್ರಕರ್ತರನ್ನು ಆಯ್ಕೆ ಮಾಡುತ್ತೇವೆ ಎನ್ನುವವರೆಗೆ ಹೇಳಿದರು. 

ಶ್ರೀ ಗುರುರಾಜ ಕರ್ಜಗಿಯವರು ಪ್ರಶೆಗಳನ್ನು ಎತ್ತಿಕೊಂಡು, ವಸುಧೈವ ಕುಟುಂಬಕಮ್, ಜಾತಿ ತಾರತಮ್ಯ, ಲಿಂಗ ಬೇಧ, ಮೀಸಲಾತಿ, ಶಿಕ್ಷಕರು ಇತ್ಯಾದಿಗಳ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. `ಟೀನೇಜ್ ಮಗಳಿಗೆ ಏನುಪದೇಶ ಕೊಡುವುದು?` ಎನ್ನುವ ಪ್ರಶ್ನೆಗೆ, `ಅವಳು ಸರಿಯಾಗಿದ್ದಾಳೆ, ಸುಮ್ಮನೇ ತಡುವಬೇಡಿ, ನಿಯಮಗಳು ಎಲ್ಲರಿಗೂ ಒಂದೇ ಟೀನೇಜ್ ಮಗಳಿರಲಿ ಅಥವಾ ಮಗನಿರಲಿ, ಲಿಂಗಬೇಧವಿರಬಾರದು,` ಎಂದು ಹೇಳಿದರು. 

ಆಭಾರ ಮನ್ನಣೆಯನ್ನು ಶ್ರೀಮತಿ ವತ್ಸಲಾ ರಾಮಮೂರ್ತಿ ನಡೆಸಿಕೊಟ್ಟರು. 

- ಕೇಶವ್ ಕುಲಕರ್ಣಿ

ಐದು ಕವನಗಳು – ಕೇಶವ ಕುಲಕರ್ಣಿ

ಅಜ್ಜಿ

ಅಜ್ಜಿಯ ಬೆನ್ನು ಬಾಗಿಬಿಟ್ಟಿದೆ
ಅನುಕ್ಷಣವೂ ಬಾಗಿ ಬಾಗಿ
ನಿಲ್ಲುವ ಭಂಗಿಯೇ ಮರೆತುಹೋಗಿದೆ

ಅಜ್ಜಿಯ ಕಣ್ಣು ಪೊರೆಗಟ್ಟಿದೆ
ಗಂಡ ಮಕ್ಕಳ ಮೊಮ್ಮಕ್ಕಳ ಆಡಿಸಿ
ನೋವನ್ನೆಲ್ಲ ನುಂಗಿ ಕುರುಡಾಗಿದೆ

ಧಗಧಗಿಸುವ ಒಲೆ ಹೊಗೆಯಾಡಿದೆ
ಉರಿಯ ಆರಿಸಲು ಹೋದ ಕಣ್ಣೀರು
ಕಣ್ಣನ್ನೇ ನುಂಗಿದೆ

ಅಜ್ಜಿಯ ಕೈ ಒರಟು ದೊಣ್ಣೆಯಾಗಿದೆ.
ತವಡು ಕುಟ್ಟಿ ಕುಟ್ಟಿ, ಕಳೆಯ ಕೆತ್ತಿ ಕೆತ್ತಿ
ಭಾಗ್ಯದ ಗೆರೆಗಳನ್ನು ಕೆತ್ತಿ ಕೆತ್ತಿ ಕೆರೆದಂತಿದೆ

ಅಜ್ಜಿಯ ಕಿವಿ ಕಿವುಡಾಗಿದೆ
ಸಂಚಿನ ಮಿಂಚಿನ ಹೊಡೆತಕೆ
ಹುರುಳಿಲ್ಲದ ಗುಡುಗಿನಬ್ಬರಕೆ ನಿಶ್ಚಿಂತವಾಗಿದೆ

ಮಾತು ಮೌನದಲಿ ಗೋರಿಯಾಗಿ
ಎದೆ ಗಟ್ಟಿಯಾಗಿ ದಣಿವರಿಯದೇ
ಬಡಿದುಕೊಳ್ಳುತಿದೆ

ಮಾತು ಮೌನದಲಿ ಗೋರಿಯಾಗಿ
ಎದೆ ಗಟ್ಟಿಯಾಗಿ ಬಡಿದುಕೊಳ್ಳುತಿದೆ
ದಣಿವರಿಯದೇ

ನಾನ್ಯಾವ ಸೀಮೆಯ ಕವಿ?

ಪಂಪನನ್ನು ಓದಲಿಲ್ಲ
ರನ್ನನನ್ನು ಕಲಿಯಲಿಲ್ಲ
ಕೇಳಲಿಲ್ಲ ನಾ ಕುಮಾರವ್ಯಾಸನನ್ನು
ಬಸವನನ್ನು ವಾಚಿಸಲಿಲ್ಲ
ಪುರಂದರನನು ಕೀರ್ತಿಸಲಿಲ್ಲ
ಹಾಡಲಿಲ್ಲ ನಾ ಜನಪದವನ್ನು

ಕುವೆಂಪುವಿನ ಕಂಪು ತಾಕಲೇ ಇಲ್ಲ
ಅಂಬಿಕಾತನದತ್ತ ಇತ್ತ ಹಾಯಲೇ ಇಲ್ಲ
ಅಡಿಗ ಮುಡಿಯಿಂದೊಳಗೆ ಇಳಿಯಲೇ ಇಲ್ಲ

ಕೆ ಎಸ್ ಎನ್ ಮಲ್ಲಿಗೆ ಮಿಡಿದರೂ
ಜಿ ಎಸ್ ಎಸ್ ಕಡಲನೇ ಕಡಿದರೂ
ಪುತಿನ ಗೋಕುಲವನೇ ಕಟ್ಟಿದರೂ
ಹೃದಯಕ್ಕಿಳಿದು ರಕ್ತವಾಗಲಿಲ್ಲ

ಮುಂದೆ ಬಂದವರ ಹೆಸರು ಲೆಕ್ಕ ಎರಡೂ ಸಿಗಲಿಲ್ಲ

ಯಾಕೆ ಯಾರಾದರೂ
ನನ್ನ ಕವನಗಳನ್ನು ಓದಿ
ಸಮಯವನ್ನು ಹಾಳು ಮಾಡಿಕೊಳ್ಳಬೇಕು?

ಹಲವು ಪದಗಳ ಬೆಸೆದು
ಕೆಲವು ಸಾಲುಗಳಲ್ಲಿ
ಕ್ಲೀಷೆಯಾದ ಪ್ರತಿಮೆಗಳನ್ನು ಹೊಸೆಯುವ
ನನ್ನನ್ನು ಕವಿ ಎಂದಾದರೂ ಏಕೆ ಕರೆಯಬೇಕು?

ಕವಿತೆ

ಗರ್ಭ ಧರಿಸುವ ಮೊದಲೇ
ಸುರಿದು ಹೋದ ಕವನಗಳ
ಲೆಕ್ಕ ಇಟ್ಟವರಾರು?

ಗರ್ಭ ಕಟ್ಟಿದ್ದರೂ ಅರಿವಾಗುವ
ಮುನ್ನ ಬಿರಿದ ಭ್ರೂಣಗಳ
ನೆನಪಿಟ್ಟುಕೊಳ್ಳುವುದಾದರೂ ಹೇಗೆ?

ಮೊದಲಾದರೆ ಹತ್ತಾರು ಮಕ್ಕಳು
ಒಂದಿಬ್ಬರಾದರೂ ನಾಕಾರು ಜನರ
ಮನದಲ್ಲಿ ಹೆಸರು ಮಾಡುತ್ತಿದ್ದರು

ಈಗ ಹಡೆಯುವುದೇ ಒಂದೋ
ಎರಡೋ, ಗೂಡು ಬಿಡುವವರೆಗೆ
ತಿದ್ದಿ ತೀಡುತ್ತಲೇ ಇರಬೇಕು

ಹೊಟ್ಟೆಯಲ್ಲಿರುವ ಮಗು

ಭ್ರೂಣವಿದೆ
ಭ್ರೂಣದ ಎದೆಯೂ ಮಿಡಿಯುತ್ತಿದೆ’
ಎಂದು ಕಪ್ಪು ಬಿಳುಪಿನ ಚಿಕ್ಕ ಆಕೃತಿಯನ್ನು
ಸ್ಕ್ಯಾನಿನ ಸ್ಕ್ರೀನಿನ ಮೇಲೆ ತೋರಿಸುತ್ತಿದ್ದೆ.
‘ಕರೆಯಿರಿ ಅವರನ್ನು,’ ಎಂದು ಕಿರುಚಿದಳಾಕೆ.
ಸ್ಖ್ಯಾನ್ ಮಾಡುತ್ತಿದ್ದ ನನಗೆ ಗಾಬರಿಯಾಗಿ,
‘ಯಾರನ್ನು? ಗಂಡನನ್ನಾ?’
‘ಇಲ್ಲ, ನನ್ನ ಅತ್ತೆಯನ್ನು,
ಹತ್ತು ವರ್ಷದಿಂದ ಬಂಜೆ ಬಂಜೆ ಎಂದು ಹಂಗಿಸುತ್ತಿದ್ದಾಳೆ,’
ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು

‘ಇದು ಕಣ್ಣು
ಇದು ಮೂಗು
ಇದು ಬಾಯಿ
ಇದು ಕೈ
ಇದು ಕಾಲು,’
ಎಂದು ಸ್ಕ್ಯಾನ್ ಮಾಡುತ್ತ ತೋರಿಸುತ್ತಿದ್ದೆ

‘ಮೂಗು ನನ್ನಂತೆ
ಕಣ್ಣು ನನ್ನ ಅಪ್ಪನಂತೆ
ಬಾಯಿ ನನ್ನ ಅಜ್ಜಿಯಂತೆ,’ ಎಂದಳು

‘ಇಲ್ಲವೇ,
ಕಣ್ಣು ನನ್ನಂತೆ
ಮೂಗು ನನ್ನ ಅಮ್ಮನಂತೆ
ಬಾಯಿ ಮಾತ್ರ ನಿನ್ನಂತೆ,’ ಎಂದ

ಇಬ್ಬರೂ ಅಲ್ಲೇ ಸರಸದ ಜಗಳ ಶುರು ಮಾಡಿದರು
ಸ್ಕ್ಯಾನಿನಲ್ಲಿ ಕೈಕಾಲಾಡಿಸುತ್ತಿರುವ ಮಗು ನಕ್ಕಂತಾಯಿತು

ಹೀಗೊಬ್ಬ ಮುದುಕ

ಹೀಗೊಂದು ಸಾಂಸೃತಿಕ ಸಮಾರಂಭವೊಂದರಲ್ಲಿ
ಡ್ರಿಂಕ್ಸ್ ಕೊಳ್ಳುತ್ತಿದ್ದೆ; ಅಪರಿಚಿತ ಮುದುಕನೊಬ್ಬ
ನನಗೊಂದು ಡ್ರಿಂಕ್ಸ್ ಕೊಡಿಸಬಹುದೇ ಎಂದು ಕೇಳಿದ.
ಅದಕ್ಕೇನಂತೆ, ಎಂದು ಒಂದು ಡ್ರಿಂಕ್ಸ್ ತಂದುಕೊಟ್ಟು
ಚಿಯರ್ಸ್ ಹೇಳಿ ಪರಸ್ಪರ ಪರಿಚಯ ಮಾಡಿಕೊಂಡೆವು

`ಬಹಳಷ್ಟು ಸಲ
ನಾನಿನ್ನು ಬದುಕಿರುವುದು ವೇಸ್ಟು
ಸತ್ತಿರಬೇಕಿತ್ತು ಎನಿಸುತ್ತೆ, ಏಕೆಂದರೆ
ಈ ಒಂಟಿತನ, ಈ ಸುಸ್ತು, ಈ ಕಾಯಿಲೆಗಳು, ಈ ಔಷಧಿಗಳು,
ಆಸ್ಪತ್ರೆಗಳ ಎಡತಾಕುಗಳು
ಬದುಕಿದ್ದೂ ಸತ್ತ ಹೆಣಗಳ ತರಹ,

ಆದರೆ ಇಂಥ ಪಾರ್ಟಿಗಳಲ್ಲಿ
ನಿಮ್ಮಂಥ ಯಂಗ್ ಪೀಪಲ್ ಸಿಕ್ಕಿದಾಗ
ನನ್ನಂತೆ ವಯಸ್ಸಾಗಿರುವ ಸಿಂಗಲ್ ಮಾಲ್ಟ್ ಕುಡಿದಾಗ
ಮೈಯೆಲ್ಲ ಘಮ್ಮೆನಿಸುವ ಬಿಸಿಬಿಸಿ ಬಿರಿಯಾನಿಯ ತಿಂದಾಗ
ಚಿಕ್ಕ ಮಕ್ಕಳು ಇತ್ತಿಂದತ್ತ ಅತ್ತಿಂದಿತ್ತ ಓಡಾಡುತ್ತಿರುವಾಗ
ಶೃಂಗಾರಭೂಷಿತೆಯರಾದ ಆ ಮಕ್ಕಳ ತಾಯಂದಿರು ಕಿಲಕಿಲ ನಗುತ್ತಿರುವಾಗ
ಸಾಯದಿರುವುದಕ್ಕಿಂತ ಬದುಕುವುದೇ ವಾಸಿ ಎನಿಸುತ್ತದೆ,`

ಎಂದು, ತನ್ನ ಗ್ಲಾಸನ್ನೂ ನನ್ನ ಕೈಗೆ ಕೊಟ್ಟು
ನನ್ನ `ಅಪ್ಪಣೆ` ಪಡೆದಂತೆ ಮಾಡಿ
ನನ್ನ ಹೆಂಡತಿಯ ಜೊತೆ
ಡಾನ್ಸ್-ಫ್ಲೋರಿಗಿಳಿದ

ಉಫಿಜಿ ಎಂಬ ಕಲೆಯ ಉಗ್ರಾಣ – ಲಕ್ಷ್ಮೀನಾರಾಯಣ ಗುಡೂರ

ನನಗೆ ಇಟಲಿ ಹಲವಾರು ಕಾರಣಗಳಿಗೆ ಇಷ್ಟ. ಆ ದೇಶಕ್ಕೂ, ಭಾರತಕ್ಕೂ ಇರುವ ಸಾಮ್ಯತೆಗಳು ಒಂದು ಮುಖ್ಯ ಕಾರಣ. ಉಳಿದೆಲ್ಲ ಅಲ್ಲಿಂದ ಮುಂದೆ – ಉಪಕಾರಣಗಳು ಅನ್ನಬಹುದು. ಅಲ್ಲಿನ ಪುರಾಣಕಥೆಗಳು, ಕಲೆ, ಕಟ್ಟಡಗಳು, ಇತಿಹಾಸ, ದೇವರ ಜಾಗಗಳು, ಜನರ ಸಾಮಾಜಿಕ ಜೀವನ, ಊಟ-ತಿಂಡಿಗಳ ಬಗೆಗಿನ ಉತ್ಸಾಹ … ಹೀಗೆ ಪಟ್ಟಿ ಮುಂದುವರಿಯುತ್ತದೆ.   

ಹೀಗೆಯೇ ಪ್ರಯಾಣದಲ್ಲಿ ಒಮ್ಮೆ ಸಿಕ್ಕ ಕರ್ನಾಟಕ ಮೂಲದ ಇಟಲಿಯ ನಿವಾಸಿಯೊಬ್ಬರು ನನಗೆ ಹೇಳಿದಂತೆ, ಅಲ್ಲೂ ಭಾರತೀಯರಂತೆಯೇ 6ಕ್ಕೆ ಬರುವೆನೆಂದು ಹೇಳಿ 8ಕ್ಕೆ ಹೋಗಬಹುದು, ಹೇಳದೆಯೆ ನಿಮ್ಮ ಮಿತ್ರನನ್ನು ಅವರ ಮನೆಗೆ ಔತಣಕ್ಕೆ ಕರೆದೊಯ್ಯಬಹುದು! ಬ್ರಿಟಿಶರ ಜೀವನಕ್ರಮಕ್ಕೆ ಹೊಂದಿಕೊಂಡಿರುವ ನಾನು ಹಾಗೇನೂ ಮಾಡಿಲ್ಲವೆನ್ನಿ.  

ಚಿತ್ರಕಲೆ ಹಾಗೂ ಛಾಯಾಗ್ರಹಣದಲ್ಲಿ ಆಸಕ್ತಿಯಿರುವ ನನಗೆ ಎಷ್ಟು ಬಾರಿ ಬೇಕಾದರೂ ಹೋಗಿ ಅಲ್ಲಿನ ಸ್ಥಳಗಳನ್ನು, ಅದರಲ್ಲೂ ಗ್ಯಾಲರಿಯಾಗಳನ್ನು (museum) ನೋಡಲು ಬೇಜಾರಾಗದು.

ಅಲ್ಲಿ ಯಾವ ಊರಿಗೆ ಹೋದರೂ, ಮೇಲೆ ಹೇಳಿದ ಪಟ್ಟಿಯ ಹೆಚ್ಚು ಕಡಿಮೆ ಎಲ್ಲಾ ಅಂಶಗಳೂ ನೋಡಲು ಸಿಗುತ್ತವೆ.  ಈ ಬಾರಿ (ಎರಡನೇ ಬಾರಿ, ಮೊದಲೊಮ್ಮೆ ಯಾವುದೋ ಕೋರ್ಸಿಗೆ ಹೋಗಿದ್ದೆ – ಲೇ.) ಕುಟುಂಬಸಹಿತನಾಗಿ ಫ್ಲಾರೆನ್ಸ್ ನೋಡಲು ಹೋಗಿದ್ದೆ. ಮೊದಲ ಸಲ ಹೋದಾಗ ಮೈಕೆಲೇಂಜಲೋ ಕೆತ್ತಿರುವ ವಿಶ್ವವಿಖ್ಯಾತ ಡೇವಿಡ್ ಮೂರ್ತಿಯಿರುವ ಅಕಾದೆಮಿಯಾ ಗ್ಯಾಲರಿಗೆ ಹೋಗಿ ಆಗಿತ್ತು. ಹೀಗಾಗಿ, ಈ ಬಾರಿ ಹೋದಾಗ ಮನೆಯವರನ್ನೆಲ್ಲ ಅಲ್ಲಿಗೆ ಕಳಿಸಿ, ಇನ್ನೊಂದು ದೊಡ್ಡ ಗ್ಯಾಲರಿಯಾ ಆದ ಉಫಿಜಿ (Uffizi Galleria) ವಸ್ತುಸಂಗ್ರಹಾಲಯಕ್ಕೆ ನಾನೊಬ್ಬನೇ – ನನ್ನ ಕ್ಯಾಮರಾದೊಂದಿಗೆ – ಹೋದೆ. ಈ ಲೇಖನ ಅದರ ಬಗ್ಗೆ ಮಾತ್ರ.

ಆರ್ನೊ ನದಿಯ ದಂಡೆಯ ಮೇಲಿರುವ ಮಹಾನ್ ಕಟ್ಟಡಗಳ ಸಂಕುಲವೇ ಈಗಿನ ಉಫಿಜಿ ಸಂಗ್ರಹಾಲಯ.  ಇದು 16ನೆಯ ಶತಮಾನದ ಇಟಲಿಯ ವಾಸ್ತುಶಿಲ್ಪ ನೈಪುಣ್ಯದ ಉತ್ತಮ ಉದಾಹರಣೆ ಅನ್ನಬಹುದು.  
ಉಫಿಜಿಯ ಇತಿಹಾಸ:  
1550ರ ಇಸವಿಯಲ್ಲಿ ಫ್ಲಾರೆನ್ಸ್ ನಗರದ ಡ್ಯೂಕ್ ಆಗಿದ್ದ ಕಾಸಿಮೊ I ಡಿ’ಮೆಡಿಚಿ, ಹಂಚಿ ಹೋಗಿದ್ದ ನಗರದ ನ್ಯಾಯಾಲಯಗಳನ್ನೆಲ್ಲ ಒಂದೇ ಕಚೇರಿಯ ಆವರಣಕ್ಕೆ ತರಲೆಂದು, ಆಗಿನ ವಾಸ್ತುಶಿಲ್ಪಿ ಜಿಯಾರ್ಜಿಯೋ ವಸಾರಿಯ ಉಸ್ತುವಾರಿಯಲ್ಲಿ ಕಟ್ಟಿಸಿದ Office ಅಥವಾ Uffici / Uffizi ಕಟ್ಟಡಗಳೇ ಇವು. ದೊಡ್ಡ ದೊಡ್ಡ ಕಿಟಕಿಗಳ ನೈಸರ್ಗಿಕ ಗಾಳಿ-ಬೆಳಕಿನ ಅಗಲವಾದ ಆವಾರಗಳು ಇಲ್ಲಿಯ ವೈಶಿಷ್ಟ್ಯ. ಇದರ ನಿರ್ಮಾಣ modular ಆಗಿದ್ದು, ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಕೊಠಡಿಗಳನ್ನು ನಿರ್ಮಿಸಬಹುದಾದ future-proofing ಇಲ್ಲಿದೆ.  ಈ ಕಟ್ಟಡ ಇಂಗ್ಲಿಷಿನ U ಆಕಾರದಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ಭಾಗಗಳು ಮಾತ್ರ ನೆಲದ ಮೇಲಿವೆ. ನದಿಯಂಚಿನಲ್ಲಿ ಇರುವ ಇವೆರಡನ್ನೂ ಜೋಡಿಸುವ, U ಅಕ್ಷರದ ಬುಡದ ಭಾಗ ಮೇಲಿನ ಅಂತಸ್ತುಗಳಿಗೆ ಮಾತ್ರವೇ ಸೀಮಿತವಾಗಿದೆ, ಅಲ್ಲದೇ ಎತ್ತರದ ಭಾರೀ ಕಂಬಗಳ ಮೇಲೆ ಕಟ್ಟಲಾಗಿದೆ. ಮಧ್ಯದ ತೆರೆದ ಅಂಕಣವು ಒಂದೆಡೆ ನದಿಯ ಮೇಲಿರುವ ಪುರಾತನ ಕಲ್ಲಿನ ಸೇತುವೆಯ (ಪಾಂಟೆ ವೆಕ್ಕಿಯೋ) ಮೂಲಕ ಹಸಿರು ಹೊದಿಸಿರುವ ಬೆಟ್ಟಗಳ, ತೋಟಗಳ ಕಡೆಗೆ ಹೋದರೆ, ಇನ್ನೊಂದು ತುದಿ ಫ್ಲಾರೆನ್ಸಿನ ಮುಖ್ಯ ಮಂದಿರ ಸಾಂತಾ ಮರಿಯಾ ದೆಲ್ ಫಿಯೊರೆಯ ಕಡೆಗೆ ಕರೆದೊಯ್ಯುತ್ತದೆ. ಕಟ್ಟಡದೊಳಗಿನ ಒಳಛಾವಣಿಯನ್ನು ಅಸಂಖ್ಯಾತ ಚಿತ್ರಗಳಿಂದ ಅಲಂಕರಿಸುವ ಕಾರ್ಯ 1581ರಲ್ಲಿ ಶುರುವಾಯಿತು. ಕಾಸಿಮೊ I ಡಿ’ಮೆಡಿಚಿಯ ಮರಣಾನಂತರ ಅವನ ಮಗ ಡ್ಯೂಕ್ ಫ್ರಾನ್ಸೆಸ್ಕೋ I ಮತ್ತವನ ತಮ್ಮಂದಿರು ಈ ಕಟ್ಟಡದ ಕಾರ್ಯವನ್ನು ಇನ್ನೊಬ್ಬ ವಾಸ್ತುಶಿಲ್ಪಿ ಬರ್ನಾರ್ಡೋ ಬುಆಂಟಾಲೆಂಟಿಯ ನೇತೃತ್ವದಲ್ಲಿ ಮುಗಿಸಿ, ಅದನ್ನು ಗ್ಯಾಲರಿಯಾ ಆಗಿ ಬದಲಾಯಿಸುತ್ತಾರೆ.
ತಿರುಗಿ ವರ್ತಮಾನಕ್ಕೆ:
ನಾನೊಬ್ಬನೇ ಹೋಗುವ ವಿಚಾರವಿದ್ದುದರಿಂದ, ಮುಂಚೆಯೇ ಟಿಕೆಟ್ ತೆಗೆಸಿಕೊಂಡಿದ್ದೆ, ಅಷ್ಟೇ ಅಲ್ಲ ಬೆಳಗ್ಗೆ ಬಾಗಿಲು ತೆರೆಯುತ್ತಲೆ ಒಳಕಾಲಿಡುವ ಪ್ರಯತ್ನವನ್ನೂ ಮಾಡುವವನಿದ್ದೆ.  ಅಲ್ಲಿಗೆ ಹೋದಾಗ, ಆ ರೀತಿ ವಿಚಾರ ಮಾಡಿದವ ನಾನೊಬ್ಬನೇ ಇರಲಿಕ್ಕಿಲ್ಲ ಅನ್ನುವ ಅನುಮಾನ ಗಟ್ಟಿಯಾಗಿ ಸಾಬೀತಾಯಿತು. ಆದರೂ, ಅಲ್ಲಿನ ಕಾರ್ಯಕರ್ತರ ಚಾಕಚಕ್ಯತೆಯಿಂದಾಗಿ ಐದಾರು ನಿಮಿಷದಲ್ಲಿಯೇ ಒಳಗಿದ್ದೆ. ಬೆಳಗ್ಗೆ ಬೇಗ ಎದ್ದು ಓಡಿದ್ದು ನಿಜಕ್ಕೂ ಒಳ್ಳೆಯದೇ ಆಯಿತೆನ್ನಿ, ಪ್ರಾಕಾರಗಳೆಲ್ಲ ಜನರಿಲ್ಲದೆ, ಪ್ರತಿಯೊಂದು ಮೂರ್ತಿ, ಚಿತ್ರವನ್ನು ಮನಸೋಇಚ್ಛೆ ನೋಡುವುದು ಸಾಧ್ಯವಾಯಿತು.  

ಮೂರು ಮಹಡಿಗಳ ಆರು ಪ್ರಾಕಾರಗಳು ಮತ್ತು ಅವಕ್ಕಂಟಿದ ಕೊಠಡಿಗಳಲ್ಲಿ ಸುಮಾರು 2300 ವರ್ಷಗಳ ಇತಿಹಾಸ ತುಂಬಿದೆ.  ಗ್ರೀಕರ ಮತ್ತು ರೋಮನ್ನರ ಸಂಗಮವರಿ ಕಲ್ಲಿನ ಮೂರ್ತಿಗಳು ಅಂದಿನ ಶಿಲ್ಪಿಗಳ ಕೌಶಲ್ಯವನ್ನು ಹಾಡಿಹೊಗಳುತ್ತವೆ.  ಹಾಲುಗಲ್ಲು ಮತ್ತು ಕಡುಗಪ್ಪು ಸಂಗಮವರಿ ಕಲ್ಲಿನ ಮೂರ್ತಿಗಳನ್ನು ನೋಡುತ್ತ ಗಂಟಗಟ್ಟಲೆ ಕೂಡುವವರಿದ್ದಾರೆ.  ಇವುಗಳ ಜೊತೆಯಲ್ಲೆ ಸುಮಾರು ಸಾವಿರ ವರ್ಷಗಳಿಂದ ಇತ್ತೀಚಿನ (!) ರೆನೈಸ್ಸಾನ್ಸ್ ಪ್ರಕಾರದವರೆಗಿನ ಕಲಾವಿದರ ತೈಲಚಿತ್ರಗಳಿವೆ. ಇವುಗಳಲ್ಲಿ ಬಹುಪಾಲು ಗ್ರೀಕರ, ರೋಮನ್ನರ ಪೌರಾಣಿಕ, ಐತಿಹಾಸಿಕ ಪಾತ್ರಗಳ / ವ್ಯಕ್ತಿಗಳ ಮೂರ್ತಿಗಳೇ ಹೆಚ್ಚು. ನಂತರದ ಚಿತ್ರಕಲೆಗಳಲ್ಲಿ ಬೈಬಲ್ಲಿನ ಕಥೆಗಳು ಕಂಡುಬರುತ್ತವೆ.  

ಪ್ರಾಕಾರಗಳ ಒಳತಾರಸಿಯನ್ನೆಲ್ಲ ಒಂದಿಂಚೂ ಬಿಡದಂತೆ ಪೌರಾಣಿಕ ಪಾತ್ರಗಳ ಪೇಂಟಿಂಗುಗಳ ಜೊತೆಗೆ, ಇದನ್ನು ಕಟ್ಟುವಾಗಿನ ಸಮಯದ ಮೆಡಿಚಿ ಕುಟುಂಬದ ಪ್ರಮುಖರ ಚಿತ್ರಗಳಿಂದ ತುಂಬಲಾಗಿದೆ. 

ಮೂರು ಅಂತಸ್ತುಗಳನ್ನು ಎರಡು ಬಾರಿ ಮೇಲಿಂದ ಕೆಳಗೆ, ಈ ತುದಿಯಿಂದ ಆ ತುದಿಯವರೆಗೆ ಮನಃಪೂರ್ವಕವಾಗಿ ನೋಡಿ, ಬೇಕಾದ್ದನ್ನು ಕ್ಯಾಮರಾದಲ್ಲಿ, ಫೊನಿನಲ್ಲಿ ಸೆರೆಹಿಡಿಯುತ್ತ ಓಡಾಡಿ ಮುಗಿಸಿದೆ. ಮೂರನೆಯ ಬಾರಿಯ ಸುತ್ತುವಿಕೆಯ ಸಮಯಕ್ಕೆ ಆಗಲೇ ಸಾವಿರಾರು ಜನ-ಜಾತ್ರೆ ಸೇರಿಯಾಗಿತ್ತು. ಈ ಬಾರಿ ನನಗೆ ಫೋಟೊ ತೆಗೆದುಕೊಳ್ಳುವ ಅವಸರವಿರಲಿಲ್ಲವಾಗಿ, ಸುಮ್ಮನೆ ಜನರ ಮಧ್ಯ ಓಡಾಡಿ, ಅಲ್ಲಲ್ಲಿ ಬೆಂಚಿನಮೇಲೆ ಕೂತು ನೋಡಿ ಕೆಳಗೆ ಬಂದೆ.
ಎಲ್ಲಾ ಮ್ಯೂಸಿಯಮ್ಮುಗಳಲ್ಲಿ ಇರುವಂತೆ ಅಲ್ಲಿಯೂ ಒಂದು ನೆನಪುಕಾಣಿಕೆ ಅಂಗಡಿ ಇತ್ತಲ್ಲ, ಅಲ್ಲಿಗೆ ಹೋದೆ. ಎದುರಿಗೆ ಕಲಾವಿದ ಸಾಂಡ್ರೋ ಬಾಟಿಚೆಲ್ಲಿಯ ವಿಶ್ವಪ್ರಸಿದ್ದ ವೀನಸ್ಸಳ ಹುಟ್ಟು (The Birth of Venus by Botticelli, circa 1480s) ಪೇಂಟಿಂಗಿನ ದೊಡ್ಡ ಚಿತ್ರ ಕಾಣಿಸಬೇಕೇ? ಅದನ್ನು ಹೇಗೆ ಬಿಟ್ಟೆ ಅಂದುಕೊಳ್ಳುತ್ತಾ, ಮತ್ತೆ ತಿರುಗಿ ಎರಡನೆಯ ಮಹಡಿಗೆ ಓಡಿದೆ (ಸುಳ್ಳು – ಲಿಫ್ಟಿನಲ್ಲಿ ಹೋದೆ – ಲೇ.). ಅದುವರೆಗೂ ಮುಚ್ಚಿದ್ದ ಕೊಠಡಿಯೊಂದು ಈಗ ತೆರೆದಿದ್ದು ಅದರ ಮುಂದೆ ಒಂದರವತ್ತು ಜನರ ಸಾಲಿತ್ತು. ಸರಿ, ಮತ್ತೇನು, ನೋಡದೆಯಂತೂ ಹೋಗುವಂತಿಲ್ಲವಲ್ಲ, ನಿಂತೆ. ಒಳಗೆ ಒಂದು ನೂರರಷ್ಟು ಇದ್ದ ಗುಂಪಿನ ಮಧ್ಯ ನುಗ್ಗಿಕೊಂಡು ಹೋಗಿ ಆ ಸುಮಾರು ಮೂರು ಮೀಟರ್ ಅಗಲ, ಎರಡು ಮೀಟರ್ ಎತ್ತರದ ಚಿತ್ರದ ಮುಂದೆ ನಿಂತಾಗ ಆದ ಅನುಭವ ವರ್ಣಿಸಲಾಗದು.
ಅರ್ಧ ದಿನದ, ಮೂರು-ಮತ್ತೊಂದು ಸಲದ ಓಡಾಟ ಮುಗಿಸಿ ಹೊರಬಂದು, ಅಲ್ಲಿಯೇ ಕಟ್ಟೆಯ ಮೇಲೆ ಕುಳಿತೆ – ನನ್ನ ಆ ಬೆಳಗ್ಗಿನ overwhelming ಅನುಭವದ ಮೆಲುಕು ಹಾಕುತ್ತ.

ಮಧ್ಯದ ತೆರೆದ ಅಂಕಣದಲ್ಲಿ ದಿನವೂ ಸಂಗೀತಗಾರರು ಅಮೋಘವಾಗಿ ಹಾಡುತ್ತಲೋ, ವಾದ್ಯಗಳನ್ನು ನುಡಿಸುತ್ತಲೋ ಕೇಳುಗರ ಮನತಣಿಸುತ್ತಿರುತ್ತಾರೆ. ಒಂದರ್ಧ ಗಂಟೆ ಕೂತು ಕೇಳಿ, ಅವರ ಮುಂದಿನ ವಯೋಲಿನ್ ಡಬ್ಬಿಗೊಂದಿಷ್ಟು ಕಾಣಿಕೆ (definitely worth, by any means – ಲೇ.) ಹಾಕಿ, ಮನೆಯ ಉಳಿದ ಸದಸ್ಯರನ್ನು ಹುಡುಕುತ್ತಾ ಹೊರಟೆ. ಅವರೆಲ್ಲ ಅಕಾದೆಮಿಯಾ ಗ್ಯಾಲರಿ ಮುಗಿಸಿ ಬಂದು, ಒಂದು ಪುಟ್ಟ ಜೆಲಾಟೇರಿಯಾದಲ್ಲಿ ಝಂಡಾ ಊರಿದ್ದರು. ನಾನೂ ಒಂದು ಬಟ್ಟಲು ತೊಗೊಂಡು, ಅವರೊಡನೆ ಕೂತು, ಇಟಾಲಿಯನ್ನರಂತೆ (ಅಥವಾ ಭಾರತೀಯರಂತೆ) ಕೈಗಳನ್ನು ಬೀಸಿ, ಜೋರಾಗಿ ಆಡುತ್ತಿದ್ದ ಮಾತಿನಲ್ಲಿ ಸೇರಿಕೊಂಡೆ.
ಮತ್ತೇನಾದರೂ ಫ್ಲಾರೆನ್ಸಿಗೆ ಹೋದರೆ (ಇನ್ನೂ ಸಾಕಷ್ಟು ಊರುಗಳಿವೆ ನಿಜ – ಲೇ.), ಇನ್ನೂ ಎರಡಿವೆ ಗ್ಯಾಲರಿಯಾಗಳು ನೋಡಲು!

- ಲಕ್ಷ್ಮೀನಾರಾಯಣ ಗುಡೂರ

(ವಿಸೂ: ಮೇಲೆ ಹಾಕಿರುವ ಎಲ್ಲಾ ಚಿತ್ರಗಳೂ ನಾನೇ ಸೆರೆಹಿಡಿದವು. ಜಾಗ ಹಿಡಿಯುತ್ತದೆಂದು ಕೆಲವೇ ಚಿತ್ರಗಳನ್ನು ಹಾಕಿದ್ದು, ಪ್ರತಿಯೊಂದರ ಹೆಸರು ಹಾಕುವುದನ್ನು ಕೈಬಿಟ್ಟಿದ್ದೇನೆ. ಕ್ಷಮೆಯಿರಲಿ. ಅಲ್ಲದೇ, ನನ್ನ ಚಿತ್ರಗಳು ಎದುರಿಗೆ ನೋಡಿದಾಗ ಆಗುವ ಆನಂದದ ಅನುಭವದ ಕಾಲುಭಾಗಕ್ಕೂ ನ್ಯಾಯ ಒದಗಿಸವು. – ಲೇ.)
***************************************************

ಸಾಕ್ಷಾತ್ಕಾರ

ಬದುಕು ತಾವೆಂದುಕೊಂಡಂತೆ ನಡೆಯಲಾರದೆ , ಅಸಹಾಯಕರಾಗಿದ್ದ ತಂದೆ ಮತ್ತು ಮಗನ ನಡುವೆ ಕೊಂಡೆಯಾಗಿದ್ದನು ಸೋಮಣ್ಣ. ರಾಯರ ಬದುಕಿನ ಹೆಜ್ಜೆಯನ್ನು ಹಿಂಬಾಲಿಸಿದ ಅವನಿಗೆ ಕೊನೆಗೂ ಜೀವನದ ಸಾಕ್ಷಾತ್ಕಾರವಾಯಿತು. ವಿಷಯ ಹಳೆಯದು ಆದರೆ ಕಥೆ ಹೊಸದು . ಸಾಧ್ಯವಾದರೆ ಓದಿ ತಮ್ಮ ಅಭಿಪ್ರಾಯವನ್ನು ತಿಳಿಸಿ.

– ಇಂತಿ ಸಂಪಾದಕ

ವಿಶಾಲವಾದ ಹೊರದೋಟದ ಮೂಲೆಯೊಂದರಲ್ಲಿ ಕುಳಿತಿದ್ದ ‘ರಾಯರು’ ತದೇಕದಿಂದ ಗಿಡದ ಮೇಲಿದ್ದ ಗುಬ್ಬಿಯ ಗೂಡನ್ನೇ ವೀಕ್ಷಿಸುತ್ತಿದ್ದರು. ತೋಟದ ಕೆಲಸದಲ್ಲಿ ಮಗ್ನನಾಗಿದ್ದ ಸೋಮಣ್ಣನನ್ನು ಕರೆದು ” ಸೋಮಣ್ಣ ಅದನ್ನು ನೋಡಿದೀಯಾ?” ಎಂದರು.
ಅವರೇನು ಕೇಳುತಿದ್ದಾರೆ ಎಂದರಿಯದೆ ಕಕ್ಕಾಬಿಕ್ಕಿಯಾದ ಸೋಮಣ್ಣನು ” ರಾಯರೆ ನೋಡಿದೆ, ಆ ಗುಲಾಬಿ ಕಂಟಿಯನ್ನು ಚನ್ನಾಗಿ ಕಟ್ಟು ಮಾಡಬೇಕು , ನಾಳೆ ಮಾಡುತ್ತೀನಿ ” ಎಂದನು.
” ನಿನಗೆ ಗುಲಾಬಿ ಕಂಟಿಯ ಮೇಲೆ ಧ್ನ್ಯಾನ , ನನಗೆ ಆ ಗುಬ್ಬಿಯ ಗೂಡಿನ ಮೇಲೆ. ಇರಲಿ ಬಿಡು, ಅವರವರ ಲಕ್ಷ ಅವರವರ ಅಭಿರುಚಿಯಂತೆ. ಭಾಳ ದಿನದಿಂದ ಆ ಗೂಡನ್ನ ನೋಡತಾ ಇದ್ದೆ. ಮರಿ ಗುಬ್ಬಿ, ತಂದೆ ಮತ್ತು ತಾಯಿ ಗುಬ್ಬಿ ಎಲ್ಲ ಸೇರಿ ಚಿವಗುಡುತಿದ್ದವು. ಈಗ ನೋಡು ಧ್ವನಿ ಇಲ್ಲದ ಆ ಮುದಿ ಗುಬ್ಬಿ ಮಾತ್ರ ಉಳಿದುಕೊಂಡಿದೆ, ಇಷ್ಟರಲ್ಲಿಯೇ ಅದೂ ಕೂಡ ಹಾರಿಹೋಗಬಹುದು”
ಅವರೇಕೆ ಈ ಮಾತನ್ನು ಆಡುತ್ತಿದ್ದಾರೆ ಎಂಬ ಅರಿವಿನೊಂದಿಗೆ ಸೋಮಣ್ಣ ಅಂದ “ಇರಲಿ ಬಿಡಿ ರಾಯರೆ, ಪ್ರಾಣಿ
ಪಕ್ಷಿಗಳಾದರೇನು ಮನುಷ್ಯರಾದರೇನು ಎಲ್ಲರಿಗೂ ಒಂದೇ ಪ್ರಕೃತಿಯ ನಿಯಮ. ಕೂಡಿದವರು ಒಂದು ದಿನ ಅಗಲುವದು ಸಹಜ ತಾನೇ ?“
” ಅರೆ ಹೌದಲ್ಲ , ನಾನು ದಡ್ಡ ನೀನು ಎಷ್ಟೊಂದು ಚನ್ನಾಗಿ ಅರ್ಥ ಮಾಡಿಕೊಂಡಿದಿ, ಇರಲಿ ಬಿಡು ಸಕ್ಕರೆ ಇಲ್ಲದ ಲೋಟಾ ಕಾಫಿ ತಗೊಂಡು ಬಾ ” ಅಂತೆಂದರು.
ಸೋಮಣ್ಣ ರಾಯರ ಮನೆಯಲ್ಲಿ ಕೆಲಸಕ್ಕೆಂದು ಸೇರಿ ಸುಮಾರು ಇಪ್ಪತ್ತೈದು ವರುಷಗಳಾಗಿದ್ದವು. ಕಾಲ ಬದಲಾಗಿದ್ದರೂ ಅವರ ಮನೆಯಲ್ಲಿಯೇ ತನ್ನ ಬದುಕನ್ನು ಕಟ್ಟಿಕೊಂಡ ಅವನಿಗೆ, ಆ ಮನೆಯನ್ನು ಬಿಟ್ಟು ಬೇರೆ ಕಡೆಗೆ ಹೋಗಬೇಕೆಂದು ಎಂದೂ ಅನಿಸಿರಲಿಲ್ಲ. ಆ ಮನೆಯಲ್ಲಿ ನಡೆದು ಹೋದ ಎಲ್ಲ ಆಗು ಹೋಗುಗಳಿಗೆ ಅವನೊಬ್ವ ಜೇವಂತ ಸಾಕ್ಷಿ. ಇತ್ತೀಚಿನ ದಿನಗಲ್ಲಿ ರಾಯರ ನಡುವಳಿಕೆಯಲ್ಲಿ ಬಹಳೇ ಬದಲಾವಣೆ ಆಗಿದ್ದನ್ನು ಸೂಕ್ಷ್ಮವಾಗಿ ಗಮಿನಿಸಿದ್ದ. ಒಮ್ಮೊಮ್ಮೆ ಹಳೆಯ ನೆನಪಿನ ಕಂತೆಯನ್ನು ಬಿಚ್ಚಿ ತಾಸುಗಟ್ಟಲೆ ಮಾತನಾಡುತ್ತ ಕೂಡ್ರುತ್ತಾರೆ, ಹೇಳಬೇಕಿದ್ದಿದ್ದನ್ನು ಮರೆತು ಇನ್ನೇನೋ ಹೇಳಿಬಿಡುತ್ತಾರೆ, ಸರಿಪಡಿಸಿದಾಗ ‘ಹೌದಲ್ಲ! ನೀನೇ ಖರೆ ಬಿಡು’ ಎಂದು ಮಾತು ಮುಗಿಸುತ್ತಾರೆ . ನಡೆದು ಹೋದ ಘಟನೆಗಳು ತಮಗೆ ಗೊತ್ತೇ ಇಲ್ಲ ಎಂಬುವಂತೆ
ವರ್ತಿಸುತ್ತಾರೆ. ರಾಯರಿಗೇನಾದರೂ ‘ ಅರಳು ಮರಳು ‘ ಆರಂಭ ಆಗಿದೆಯೇನೋ ಎಂದು ಅನಿಸಿದರೂ, ಛೆ! ಅವರಿಗೆ ಇನ್ನೂ ಅಷ್ಟೊಂದು ವಯಸಾಗಿಲ್ಲ ಬಿಡು, ಎಂದು ತನ್ನಷ್ಟಕ್ಕೆ ತಾನೇ ಸಮಾಧಾನ ಮಾಡಿಕೊಂಡಿದ್ದನು.
ಸೋಮಣ್ಣ ಅವರ ಮೆಚ್ಚಿನ ಕಾಫಿಯೊಂದಿಗೆ ಮರಳಿ ಬಂದಾಗ ರಾಯರು ಇನ್ನೂ ಗುಬ್ಬಿಯ ಗೂಡಿನಲ್ಲಿಯೇ ಮಗ್ನರಾಗಿದ್ದರು.
” ಬಿಸಿ ಕಾಫಿ ರಾಯರೆ ” ಎಂದಾಗ
” ಎಷ್ಟ ಜಲ್ದಿ ಬಂದು ಬಿಟ್ಟೆ, ನಿನಗೂ ಒಂದು ಲೋಟ ತಂದಿಯಲ್ಲ? ಕೂತಕೊ ನಿನಗ ಒಂದು ಮಾತು ಹೇಳಬೇಕೆಂದಿದ್ದೆ —“
ಎಂದು ಪೀಠಿಕೆ ಹಾಕಿದಾಗ ಸೋಮಣ್ಣನಿಗೆ ಅನಿಸಿತು, ಕನಿಷ್ಠ ಇನ್ನೊಂದು ಗಂಟೆಯವರೆಗೂ ಇಲ್ಲಿಂದ ಮುಕ್ತಿಯಿಲ್ಲವೆಂದು. ಮನಸು ಗಟ್ಟಿಮಾಡಿಕೊಂಡು ಕೇಳಿದ “ಅದೇನು ರಾಯರೆ ಹೊಸ ಮಾತು?” ಎಂದು.

” ರಾಘು ದೊಡ್ಡವನಾಗಿ ಬಿಟ್ಟಾನಲ್ಲ ಅವನಿಗೆ ಸಾವಿತ್ರಿ ಮಗಳ ಕೂಡ ಮದುವಿ ಮಾಡಿಬಿಡಬೇಕಲ್ಲ”
ಸೋಮಣ್ಣನಿಗೆ ಸ್ವಲ್ಪ ಆಘಾತವಾದರೂ ತೋರಿಸಿಕೊಳ್ಳದೆ ಅಂದ
“ರಾಯರೇ ರಾಘುನ ಮದುವೆ ಆಗಿ ಹತ್ತು ವರ್ಷವಾಯಿತಲ್ಲ”
ಸ್ವಲ್ಪ ಏನೋ ವಿಚಾರಿಸಿ ತಲೆಕೆರೆದುಕೊಂಡು ರಾಯರೆಂದರು.
” ಅರೆ , ಹೌದಲ್ಲ ಮರತೇ ಹೋಗಿತ್ತು. ನೀನೆ ಖರೆ ನೋಡು . ಹೋದ ವರ್ಷನ ಬಂದಿದ್ದನಲ್ಲ ತನ್ನ ಬಿಳಿ ಹೆಂಡತಿ ಮತ್ತ ಮಗನನ್ನ ಕರಕೊಂಡು. ಅವನಿಗೆ ನಾನೇ ಮದುವೆ ಮಾಡಬೇಕೆಂದು ಅಂದುಕೊಂಡಿದ್ನಲ್ಲ ಅದಕ್ಕ ಇನ್ನೂ ಅದರ ನೆನಪು ಉಳದೈತಿ ನೋಡು” ಎಂದು ಹೇಳಿ ಕಾಫಿಯ ಗುಟುಕನ್ನು ಹೀರಿದರು.
ರಾಘು ರಾಯರ ಒಬ್ಬನೇ ಮಗ. ರಾಯರ ಇಚ್ಛೆಯಂತೆ ಓದಿ ಡಾಕ್ಟರನಾಗಿದ್ದ. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಹೋದವನು ಅಲ್ಲಿಯೇ ಬಿಳಿಯ ಹೆಂಡತಿಯನ್ನು ಕಟ್ಟಿಕೊಂಡು ನೆಲೆ ಊರಿದ್ದ. ರಾಯರಿಗೆ ಮೊದಲಿನಿಂದಲೂ ತಮ್ಮ ತಂಗಿ ಸಾವಿತ್ರಿಯ ಮಗಳನ್ನು ಸೊಸೆಯನ್ನಾಗಿ ಸ್ವೀಕರಿಸುವ ಇಚ್ಛೆಯಿದ್ದರೂ ಸಾಧ್ಯವಾಗದ ಕಾರಣ ತುಂಬಾ ಬೇಜಾರು ಆಗಿತ್ತು. ಆದರೆ ಮಗನ ಮನಸಿಗೆ ನೋವಾಗಬಾರದೆಂದು ಸುಮ್ಮನೆ ಇದ್ದರು.
“ಹೋಗಲಿ ಬಿಡಿ ರಾಯರೆ ಎಲ್ಲಾ ದೈವ ಇಚ್ಛೆಯಂತೆ ನಡೆಯುವದು ತಾನೇ?” ಎಂದು ಹೇಳಿ ಸೋಮಣ್ಣ ಮಾತು ಮುಗಿಸಲು ಯತ್ನಿಸಿದ.
” ಇರಲಿ ಬಿಡು, ಕಸ್ತೂರಿಯ ಹುಟ್ಟು ಹಬ್ಬಕ್ಕೆ ಹೊಸ ಸೀರೆ ತರಬೇಕಲ್ಲ, ನೀನೂ ತಯ್ಯಾರ್ ಆಗು ಇಬ್ಬರೂ ಪೇಟೆಗೆ ಹೋಗಿ ಬಂದು ಬಿಡೋಣ” ಎಂದಾಗ ಸೋಮಣ್ಣನ ಕಣ್ಣಿನಲ್ಲಿ ಒಂದೆರಡು ಹನಿಗಳು ಗೊತ್ತಿಲ್ಲದ ಹಾಗೆ ಮೂಡಿದ್ದವು.
“ರಾಯರೆ ಕಸ್ತೂರಮ್ಮ ಮೇಲೆ ಹೋಗಿ ಎರಡು ವರ್ಷಗಳಾದುವಲ್ಲ” ಎಂದು ಹೇಳಿ ಕಣ್ಣೀರು ವರಸಿಕೊಂಡ.
“ಹೌದಲ್ಲ ಸೋಮಣ್ಣ , ನಾನು ಮರತೇ ಹೋಗಿನ್ನಿ ನೋಡು, ಮನೆಯೊಳಗೆ ರೊಟ್ಟಿ ಸುಡಾಕತ್ತಾಳ ಅಂತ ಅಂದುಕೊಂಡಿದ್ದೆ” ಅಂತ ಹೇಳಿ ರಾಯರು ಗುಬ್ಬಿಯ ಗೂಡಿನತ್ತ ಮತ್ತೊಮ್ಮೆ ನೋಡತೊಡಗಿದರು. ರಾಯರ ಈ ಮರುವಿಕೆಗೆ ಯಾಕೋ ಸೋಮಣ್ಣನಿಗೆ ಭಯವಾಗತೊಡಗಿತು. ಅವರ ಮಗನಿಗೆ ಹೇಳುವುದೇ ಒಳ್ಳೆಯದೆಂದು ಅಂದುಕೊಂಡ.
ಕಸ್ತೂರಮ್ಮ ರಾಯರ ಹೆಂಡತಿ. ಎರಡು ವರ್ಷಗಳ ಹಿಂದೆ ಅದಾವುದೊ ಕ್ಯಾನ್ಸರ್ ರೋಗಿಗೆ ಬಲಿಯಾಗಿ ಇಹಲೋಕ
ತೊರೆದಿದ್ದಳು. ಸೋಮಣ್ಣ ಅವಳನ್ನು ಯಾವಾಗಲೂ ತಾಯಿಯ ಸ್ಥಾನದಲ್ಲಿ ನೋಡಿದವನು, ಅವಳ ಹೆಸರು ಬಂದಾಗ ಅವನಿಗೆ ಗೊತ್ತಿಲ್ಲದೇ ಅವನ ಕಣ್ಣುಗಳು ಒದ್ದೆಯಾಗಿಬಿಡುತ್ತಿದ್ದವು. ಸೋಮಣ್ಣನೂ ಒಂದು ಸಲ ಗೂಡಿನತ್ತ ಕಣ್ಣಾಡಿಸಿದ, ಮುದಿ ಗುಬ್ಬಿಯೊಂದು ಯಾರದೋ ಬರುವಿಕೆಗಾಗಿ ಕಾಯುವಂತಿತ್ತು. ರಾಯರು ಸಣ್ಣಗೆ ಏನನ್ನೋ ವಟಗುಟ್ಟಿದರು ಆದರೆ ಸೋಮಣ್ಣನಿಗೆ ಅರ್ಥವಾಗಲಿಲ್ಲ.
“ಸೋಮಣ್ಣ ಆದರೂ ರಾಘು ಹಿಂಗ ಮಾಡಬಾರದಾಗಿತ್ತು. ತಾಯಿಯ ಚಿತೆಗೆ ಬೆಂಕಿ ಹಚ್ಚದವನು ಅದೆಂತ ಮಗಾ?”
“ಇರಲಿ ಬಿಡಿ ರಾಯರೆ , ಅವನೇನು ಮುದ್ದಾಮಾಗಿ ಮಾಡಲಿಲ್ಲ, ಅವನದೇನು ತಪ್ಪು? ದೂರದ ದೇಶ, ಸಮಯಕ್ಕೆ ಸರಿಯಾಗಿ ಬರಲಿಕ್ಕೆ ಆಗಲಿಲ್ಲ” ಎಂದು ಹೇಳಿ ರಾಯರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ.

‘ದೂರದ ದೇಶದಲ್ಲಿದ್ದರೆ ಎಲ್ಲರಿಗೂ ಇದೆ ಗತಿ ತಾನೇ ‘ ಎಂದು ತನ್ನ ಮನಸಿನಲ್ಲೊಮ್ಮೆ ವಟಗುಟ್ಟಿಕೊಂಡ. ಕಸ್ತೂರಮ್ಮ ಆಕಷ್ಮಿಕವಾಗಿ ತೀರಿಕೊಂಡಾಗ ರಾಘುನಿಗೆ ಅಂತಿಮ ಸಂಸ್ಕಾರಕ್ಕೆ ಬರಲಾಗಲಿಲ್ಲ. ಕಟ್ಟಾ ಸಂಪ್ರದಾಯಸ್ಥರಾದ ರಾಯರಿಗೆ ಕಸ್ತೂರಿಯ ಕಳೇಬರವನ್ನು ಭಾಳೋತ್ತು ಇಡಲು ಮನಸಿರಲಿಲ್ಲ, ಮನಸ್ಸಿಲ್ಲದಿದ್ದರೂ ಅಣ್ಣನ ಮಗನ ಕಡೆಯಿಂದ ಚಿತಾಧಾರಣೆ ಮಾಡಿಸಿದ್ದರು. ಆ ನೋವನ್ನು ಮಗನ ಜೊತೆಗೆ ಎಷ್ಟೋ ಸಲ ತೋರಿಕೊಂಡಿದ್ದರು. ರಾಘುನಿಗೂ ಅದರ ಬಗ್ಗೆ ಬಹಳೇ ನೋವಿತ್ತು, ಕಾಲದ ಗೊಂಬೆಯಾಗಿ ಸುಮ್ಮನಾಗಿದ್ದ.
” ಸೋಮಣ್ಣ, ನೀನೂ ಅವನಂಗ ಬಾಲಾ ಬಡಿಯಾಕತ್ತಿ ನೋಡು. ಇಲ್ಲಿ ಇಷ್ಟೊಂದು ಆಸ್ತಿ ಐತಿ, ವಯಸಾದ ಅಪ್ಪ ಆದಾನು ಅನ್ನು ಖಬರ ಬ್ಯಾಡ ಅವನಿಗೆ? ಇಲ್ಲೇನು ಕಡಿಮಿ ಐತಿ? ಅವನಿಗೆ ಆಸ್ಪತ್ರೆಯನ್ನು ಕಟ್ಟಿಸಲು ಜಾಗಾ ಕೂಡಾ ನೋಡಿದ್ದೆ, ಇನ್ನೂ ಅಲ್ಲಿ ಕುಳಿತು ಏನು ತೆರಿತಾನ?”
ರಾಯರಿಗೆ ಸಿಟ್ಟು ಬಂದಿರುವುದು ಸೋಮಣ್ಣನಿಗೆ ತಿಳಿಯಿತು.
“ರಾಯರೇ ಗುಬ್ಬಿ ಗೂಡನ್ನ ನೋಡಿದಿರೆಲ್ಲ. ಸ್ವಚ್ಛಂದವಾಗಿ ಮರಿ ಗುಬ್ಬಿ ಹಾರಿ ಹೋಯಿತು, ತನಗೆ ಬೇಕಾದ ಹಾಂಗ ಜೀವನ ಮಾಡಾಕ. ರಾಘುನು ಸ್ವಚ್ಛಂದವಾಗಿ ತನ್ನ ಜೀವನಾ ಮಾಡಾಕತ್ತಾನ. ಅವನಿಗೆ ಅದೇ ದೇಶ ಇಷ್ಟವಾದಾಗ ಅಲ್ಲಿಯೇ ಇರಲಿ ಬಿಡಿ. ನೀವು ಒತ್ತಾಯ ಮಾಡಿದರ ಅವನು ಬರತಾನಂತ ತಿಳಕೊಳ್ಳ ಬ್ಯಾಡ್ರಿ. ಹೋದ ಸಲ ಬಂದಾಗ ನಿಮ್ಮನ್ನ ಕರಕೊಂಡು ಹೋಗಲು ಪ್ರಯತ್ನಿಸಿದ, ನೀವ ಹೋಗಲಿಲ್ಲ. ಅವನದೇನು ತಪ್ಪು?” ಅಂತ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ ಸೋಮಣ್ಣ.
“ಹುಟ್ಟಿ ಬೆಳೆದ ದೇಶಾ ಬಿಟ್ಟು ನಾನು ಅಲ್ಲೇನು ಮಾಡಲಿ ಮಾರಾಯ. ಏನಾದರು ಹಾಳಾಗಿ ಹೋಗ್ಲಿ ಬಿಡು. ಮಗಾ ಅಂತ ಮಮತೆಯಿಂದ ಅವನ ಆಸೆಗೆ ವಿರುದ್ಧ ಹೋಗದೆ ಬೆಳೆಸಿದಿನಲ್ಲ ಅದು ನನ್ನ ತಪ್ಪು, ಈಗ ಪ್ರಾಯಶ್ಚಿತ ಪಡಾಕತ್ತೀನಿ. ನೀನು ಇರುತನಕ ನನಗೇನು ತೊಂದರೆ ಇಲ್ಲ ಬಿಡು” ಅಂತ ಮಾತು ಮುಗಿಸಿ ನಿಟ್ಟುಸಿರೊಂದನ್ನು ಎಳೆದರು.
” ರಾಯರೆ ಅವನಾಸೆಯಂತೆ ಅವನು ಇರಲಿ, ನಿಮ್ಮಾಸೆಯಂತೆ ನೀವು ಇದ್ದು ಬಿಡಿ. ನಾನಂತು ಇದ್ದೀನಲ್ಲ ನಿಮ್ಮ ಮಾತು ಕೇಳಾಕ” ಎಂದು ಮಾತು ಮುಗಿಸಿದ ಸೋಮಣ್ಣ.
ರಾಯರು ಕಾಫಿ ಮುಗಿಸಿ ಹಾಗೆಯೇ ಎಂದಿನಂತೆ ಅದೇ ಹಳೆ ಛತ್ರಿ ಮತ್ತು ಚಪ್ಪಲಗಳೊಂದಿಗೆ ತಮ್ಮ ದಿನ ನಿತ್ಯದ ವಾಕಿಂಗಗೆ ಎದ್ದು ಹೋದರು. ಚಪ್ಪಲಿಗಳನ್ನು ಎಷ್ಟೋ ಸಲ ಮರೆತು ಬಂದಿದ್ದರೂ ಸದಾ ಸಂಗಾತಿಯಾದ ಛತ್ರಿಯನ್ನು ಮಾತ್ರ ಎಂದೂ ಮರೆತವರಲ್ಲ. ಸೋಮಣ್ಣನಿಗೆ ಚನ್ನಾಗಿ ನೆನಪಿತ್ತು, ಕಳೆದ ಸಲ ರಾಘು ಊರಿಗೆ ಬಂದಾಗ ರಾಯರ ಜೊತೆಗೆ ಬಹಳೇ ಮಾತಾಡಿದ್ದ. ತನ್ನಲ್ಲಿಗೆ ಅವರನ್ನು ಕರೆದುಕೊಂಡು ಹೋಗಲು ಪಟ್ಟ ಸಾಹಸ ವ್ಯರ್ಥವಾಗಿತ್ತು. ರಾಘು ಬೇಜಾರು ಮಾಡಿಕೊಂಡು ತನ್ನ ಅಳಿಲನ್ನು ತೋಡಿಕೊಂಡಿದ್ದ.
“ಸೋಮಣ್ಣ, ನನ್ನ ಪರಿಸ್ಥಿತಿಯನ್ನು ಅಪ್ಪಾ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ನಾನೇನು ಮಾಡಲಿ ಎಂದು ನನಗೂ ಗೊತ್ತಾಗ್ತಾ ಇಲ್ಲ. ಅಲ್ಲಿಯೇ ಹುಟ್ಟಿ ಬೆಳೆದ ಹೆಂಡತಿ, ಅದೇ ಸಂಸ್ಕೃತಿಯಲ್ಲಿ ಬೆಳೆದ ಮಗ ಇಲ್ಲಿ ಹೇಗೆ ಬಾಳಿಯಾರು? ನೀನು ಅವರ ಜೊತೆಗೆ ಇರುವವರೆಗೂ ನನಗೇನು ಚಿಂತೆಯಿಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ವೃದ್ಧಾಶ್ರಮಗಳು ಆಗಿವೆ, ಒಂದಿಬ್ಬರ ಜೊತೆಗೆ ಮಾತಾಡಿದ್ದೀನಿ ಹಾಗೇನಾದರು ಅವಶ್ಯಕತೆ ಬಿದ್ದರೆ ಅವರನ್ನು ಅಲ್ಲಿಗೆ ಕಳಿಸಿದರಾಯಿತು” ಎಂದು.

“ರಾಘಪ್ಪ ಕಾಲ ಬದಲಾಗಿದೆ ಎಂದು ನನಗೂ ಗೊತ್ತು. ಮಕ್ಕಳ ಮೇಲೆ ಅವಲಂಬಿತ ಆಗ ಬಾರದೆಂದು ನಾನೂ ಬಯಸ್ತೀನಿ ಆದರೆ ರಾಯರು ಇನ್ನು ಹಳೆಯ ಸಂಸ್ಕೃತಿಯಲ್ಲಿ ಇದ್ದಾರೆ, ಅವರ ಮನ ಒಪ್ಪಿಸುವದು ಕಷ್ಟ. ಇರಲಿ ಬಿಡು ನಾನಿದ್ದೀನಲ್ಲ” ಎಂದು ಅವನಿಗೆ ಧೈರ್ಯ ಹೇಳಿ ಕಳುಸಿದ್ದ.
ರಾಯರ ವರ್ತನೆ ದಿನೇ ದಿನೇ ಬದಲಿಯಾಗುತ್ತಲಿತ್ತು. ಜಿಲ್ಲಾ ನ್ಯಾಯಾಧೀಶರಾಗಿ ನಿರ್ವುತ್ತಿಯಾಗಿದ್ದ ರಾಯರು ಸುಮಾರು ಸಲ ಟಿ ವಿ ಯಲ್ಲಿ ಬರುತ್ತಿದ್ದ ಪತ್ತೆಧಾರಿ ಸೀರಿಯಲ್ ಗಳನ್ನು ನೋಡುತ್ತಾ ಸಮಯ ಕಳೆಯುತ್ತಿದ್ದರು. ಈಗ ಅದನ್ನೂ ನಿಲ್ಲಿಸಿಬಿಟ್ಟಿದ್ದರು. ಯಾವುದೇ ಪುಸ್ತಕಗಳಲ್ಲಿ ಆಸಕ್ತಿ ಇಲ್ಲದವರು ಇತ್ತೀಚಿನ ದಿನಗಳಲ್ಲಿ ತಾಸುಗಂಟೆಲೆ ಧಾರ್ಮಿಕ ಗ್ರಂಥಗಳನ್ನು ಓದಲು ತೊಡಗಿದ್ದರು. ಸಾಯಂಕಾಲದ ಸ್ನೇಹಿತರ ಜೊತೆಗಿನ ಅಲೆದಾಟ ಕೂಡಾ ಕಮ್ಮಿಯಾಗಿತ್ತ . ಸೋಮಣ್ಣನಿಗೆ ಅವರು ಮನೆಯಲ್ಲಿ ಇರುವದು ಇಷ್ಟವಿದ್ದರೂ ಹಠಾತ್ತನೆ ಅವರಲ್ಲಿ ಆದ ಬದಲಾವಣೆಗಳು ಇಷ್ಟವಿರಲಿಲ್ಲ, ಅದರಲ್ಲೂ ಕೂಡ ಅವರ ಮರುವಿಕೆಯು ಕುರಿತು ಬಹಳೇ ಬೇಜಾರಾಗಿತ್ತು.
ಫೋನಿನಲ್ಲಿ ರಾಘುನ ಜೊತೆಗೆ ಮಾತೂ ಆಡಿದ್ದ. ರಾಘು ಏನೋ ಧೈರ್ಯ ಕೊಟ್ಟಿದ್ದ,
” ಸೋಮಣ್ಣ ಹುಬ್ಬಳ್ಳಿಯಲ್ಲಿ ನನ್ನ ಗೆಳೆಯನೊಬ್ಬ ಮಾನಸಿಕ ತಜ್ಞ ಇದ್ದಾನೆ ಅವನಿಗೆ ನೋಡಲು ಹೇಳುತ್ತೇನೆ. ಅವರನ್ನೊಮ್ಮೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಾ” ಎಂದು ಅಂದಿದ್ದ. ” ರಾಯರೆ , ರಾಘು ಫೋನು ಮಾಡಿದ್ದ ನಿಮ್ಮನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗು ಅಂತ ಹೇಳಿದ “
“ಹುಬ್ಬಳ್ಳಿಗೆ ಯಾಕೆ ? ಸಿನೆಮಾ ನೋಡಕೊಂಡ ಬರಾಕೇನು? ಈಗ ಯಾರ ಟಾಕೀಜಿಗೆ ಹೋಕ್ತಾರ ಮಾರಾಯಾ, ಟಿವಿಯಲ್ಲೇ ಎಲ್ಲಾ ಸಿಗತೈತಿ ಅಲ್ಲ” ಎಂದು ಮಾತು ಮುಗಿಸಿದರು ರಾಯರು.
“ಇಲ್ಲ , ಅವನ ಡಾಕ್ಟರ ದೋಸ್ತನ ಭೇಟಿಯಾಗಿ ನಿಮ್ಮ ಆರೋಗ್ಯ ತಪಾಸ ಮಾಡಿಕೊಂಡು ಬಾ ಅಂತ ಹೇಳ್ಯಾನು” ಎಂತೆಂದನು ಸೋಮಣ್ಣ.
” ನಿಮ್ಮಿಬ್ಬರಿಗೂ ಹುಚ್ಚ ಹಿಡದೈತಿ ಏನು ? ನನಗೇನಾಗಿದೆ ? ನಾನು ಇನ್ನೂ ಗಟ್ಟಿ ಮುಟ್ಟಿಯಾಗೆ ಇದ್ದೀನಿ” ಅಂತ ಅವನ ಮಾತನ್ನು ತಿರಸ್ಕರಿಸಿದ್ದರು ರಾಯರು.
ಅದೊಂದು ದಿನ ಮಧ್ಯಾಹ್ನ ಮನೆ ಬಿಟ್ಟ ರಾಯರು ಸಾಯಂಕಾಲವಾದರೂ ಮರಳಿ ಬರಲೇ ಇಲ್ಲ. ಸೋಮಣ್ಣನಿಗೆ
ಭಯವಾಗತೊಡಗಿತು ‘ಎಲ್ಲಿ ಹೋಗಿರಬಹುದೆಂದು?’.

— ಡಾ. ಶಿವಶಂಕರ ಮೇಟಿ

( ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವದು

ನನ್ನೂರ ಹಾದಿ, ನನ್ನೂರ ಭೇಟಿ -ಡಾ. ರಾಜಶ್ರೀ ವೀ ಪಾಟೀಲ್

ಡಾ. ರಾಜಶ್ರೀ ವೀ ಪಾಟೀಲ್, ಸದ್ಯ ಲೆಸ್ಟರ್ ಗ್ಲೆನ್ ಫೀಲ್ಡ್ ಹಾಸ್ಪಿಟಲ್ ನಲ್ಲಿ ಕಾರ್ಡಿಯೋ ಥೋರಾಸಿಕ್ ರೇಡಿಯೊಲೊಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ . ‘ಅನಿವಾಸಿ’ಯಸಿಯಲ್ಲಿ ಒಂದಿಷ್ಟು ಜನಕ್ಕೆ ಪರಿಚಯವಿರುವ ಡಾ. ವೀರೇಶ್ ಪಾಟೀಲ ಅವರ ಪತ್ನಿ.  “ನಮಗಿಬ್ಬರು ಮುದ್ದಾದ ರಾಜಕುಮಾರಿಯರು ಖುಷಿ ಮತ್ತು ಇಂಚರ“ ಅನ್ನುತಾರೆ ಹೆಮ್ಮೆಯಿಂದ. ಅವರು ಸಹ ಅನಿವಾಸಿಗೆ ಹೊಸಬರಲ್ಲ. ಈ ಮೊದಲು ಸರಿಯಾಗಿ ಮೂರು ವರ್ಷಗಳ ಹಿಂದೆ ಅನಿವಾಸಿಯಲ್ಲಿ ಒಂದು ಲೇಖನವನ್ನು ಸಹ ಬರೆದಿದ್ದರು.(https://wp.me/p4jn5J-2OE) ಇತ್ತೀಚೆಗಷ್ಟೇ ಭಾರತಕ್ಕೆ ರಜೆಗೆಂದು ಮಕ್ಕಳೊಂದಿಗೆ ತಮ್ಮ ಊರಿಗೆ ಹೋಗಿ ಬಂದಿದ್ದಾರೆ. ಆ ಅನುಭವವನ್ನೇ ಇಲ್ಲಿ ಹಂಚಿ ಕೊಂಡಿದ್ದಾರೆ. ತಂದೆ -ತಾಯಿ, ಅತ್ತೆ-ಮಾವ ಅವರೊಡನೆ ಸಮಯ ಕಳೆದು ಹಬ್ಬ ಮಾಡಿ ಸವಿ ನೆನಪುಗಳನ್ನು ತರುವದನ್ನು ನಾವು ಸಹ ಮಾಡಿಲ್ಲವೆ?(ಮಕ್ಕಳು, ಮೊಮ್ಮಕ್ಕಳು ಬಂದದ್ದೇ ಹೆತ್ತವರಿಗೆ ಹಬ್ಬವಲ್ಲವೇ? ಆದರೂ …) ನಾವು ಶಾಲೆಯಲ್ಲಿ ಇಂಗ್ಲಿಷ್ ಟೆಕ್ಸ್ಟ್  ಪುಸ್ತಕದಲ್ಲಿ, ಕವಿತೆಗಳಲ್ಲಿ ಓದುತ್ತಿದ್ದ ವಿಕ್ಟೋರಿಯನ್ ‘Rural idyll’ ಇಂದಿನ ಇಂಗ್ಲೆಂಡಿನಲ್ಲಿ ಉಳಿದಿಲ್ಲ ಅಂತ ಬರೆದಿತ್ತು ಇತ್ತೀಚಿನ ಒಂದು ಗಾರ್ಡಿಯನ್ ಲೇಖನದಲ್ಲಿ. ಜಿ ವಿ ಅವರ ನಿಘಂಟು ಆ ಪದಕ್ಕೆ ಕೊಟ್ಟ ಅರ್ಥವಾದ ’ಹಳ್ಳಿ ಜೀವನದ ಮನೋಹರ ಜೀವನದ ವರ್ಣನೆ’ ಭಾರತದ ಹಳ್ಳಿಗಳಲ್ಲಿ ಇಂದಿಗೂ ನೋಡ ಬಹುದು. ರಾಜಶ್ರೀ ಅವರ ಶಿಗ್ಲಿಯ ಮನೆಯ ಮುಂದೆ ಕಾರಿರಬಹುದು. ಹೊಲದಲ್ಲಿ ಟ್ರಾಕ್ಟರ್ ಇರಬಹುದು. ಮನೆಯ ಹಿಂದಿನ ರೊಪ್ಪೆಯಲ್ಲಿ ಆಡುಗಳು ಮತ್ತು ’ನಮ್ಮೂರ ಹಾದಿ’ಯಲ್ಲಿ ಎಮ್ಮೆಗಳ ಹಿಂಡು, ಎತ್ತುಗಳು ಇನ್ನೂ ಇವೆ. ’ಮನೆಯ ಸುತ್ತ ಮಾನವೀಯತೆಯ ಸೆಲೆ’ಗೆ ಸಾಕ್ಷಿಯಾಗಿ ಶಾಲೆಯ ಗೆಳೆಯ ಕುಡಿಸಿದ ಜೀರಾ ಸೋಡಾ ಇದೆ ಪ್ರೀತಿ ಸವಿದು ನೀರಡಿಕೆ ತಣಿಸಲು! ಎಲ್ಲಿದೆ idyll? ನಂದನ ಇಲ್ಲಿದೆ! ಆದರೆ ಪ್ರತಿಯೊಬ್ಬರ ವಿಶಿಷ್ಟ ಅನುಭವವೂ ಭಿನ್ನ. ರಾಜಶ್ರೀ ಅವರ ಅನುಭವವನ್ನು ಅವರ ಬಾಯಲ್ಲೇ ಕೇಳುವಾ, ಓದುವಾ, ನೋಡುವಾ. ಲೇಖನ, ಕವನ ಮತ್ತು ಚಿತ್ರಗಳು ಸಹ ರಾಜಶ್ರೀ ಅವರ ಕೊಡುಗೆಯೇ! (ಸಂ)

ರಾಜಶ್ರೀ ಬರೆಯುತ್ತಾರೆ ...
ಎರಡು ವಾರದ ಹಿಂದೆ ಭಾರತಕ್ಕೆ, ಅಂದರೆ ನನ್ನೂರು ಗದಗ ಜಿಲ್ಲೆಯ, ಶಿರಹಟ್ಟಿ ತಾಲ್ಲೂಕಿನ, ಬಯಲುಸೀಮೆಯ ಸಣ್ಣ ಹಳ್ಳಿ ಶಿಗ್ಲಿಗೆ, ತಮ್ಮನ ಹೆಂಡತಿಯ ಶ್ರೀಮಂತಕೋಸ್ಕರ ಭೇಟಿ ನೀಡಿದ್ದೆವು. ಭಾರತದ ಪ್ರವಾಸದ ಬಗ್ಗೆ ಬರೆಯಲು ಹೊರಟರೆ ಪದಗಳು ಮತ್ತು ವೇಳೆ ಯಾವಾಗಲು ಅಭಾವವೇ. ನನ್ನ ಇತ್ತೀಚಿನ ಭೇಟಿಯ ಬಗ್ಗೆ ತಿಳಿದ ದೇಸಾಯಿಯವರ ಪ್ರೋತ್ಸಾಹ ದೊರಕಿದ್ದೇ ತಡ, ತಲೆಯಲ್ಲಿ ನೂರೆಂಟು ಯೋಚನೆಗಳು. ದಾವಣಗೇರೆ ಬೆಣ್ಣೆ ದೋಸೆ ಬಗ್ಗೆ ಬರೀಲಾ, ಅತ್ತೆ ಮಾವನವರ ಜೊತೆ ಭೇಟಿನೀಡಿದ ಮಲೇಬೆನ್ನೂರು ವೀರಭದ್ರೇಶ್ವರ ದೇವರ ಆಧುನಿಕ ಕಲ್ಲಿನ ಗುಡಿಯ ಬಗ್ಗೆ ಬರೀಲಾ, ಎಲ್ಲರು ಸೇರಿ ಹೋದ ನಾಕು ದಿನದ, ಸಂತಸದ ಬುಗ್ಗೆ ಹರಿಸಿದ ದಾಂಡೇಲಿಯ ಪ್ರವಾಸದ ಬಗ್ಗೆ ಬರೀಲಾ ಅಂತ ಯೋಚಿಸಿದಾಗ, ನನ್ನೂರಿಗೆ ಸರಿಸಾಟಿ ಇಲ್ಲವೆಂದೆನಿಸಿ ಬರೆದ ಈ ಚಿಕ್ಕ ಪ್ರಯತ್ನ.
ನನ್ನೂರ ಹಾದಿ , ನನ್ನೂರ ಭೇಟಿ 
ನನ್ನೂರ ಹಾದಿ , ನನ್ನೂರ ಭೇಟಿ 
ಹಸಿದವಳಿಗೆ ಹರಿವಾಣದಲ್ಲಿ ನೀಡಿದ ರೊಟ್ಟಿ ಬುತ್ತಿ 
ನನ್ನೂರ ಹಾದಿ,  ಈತ್ತೀಚಿನ ನನ್ನೂರ ಭೇಟಿ, 
ಬಾರಿ ಬಾರಿ ನಡೆದರೂ, ಬಾರಿ ಬಾರಿ ಮಾಡಿದರೂ ಇದಕಿಲ್ಲ ಸರಿಸಾಟಿ 

ಬಾಲ್ಯಕಳೆದ ಮನೆ, ಕನ್ನಡದೊಟ್ಟಿಗೆ ಬದುಕು ಕಲಿಸಿದ ಶಾಲೆ 
ಊರ ತುಂಬೆಲ್ಲ ಕಾಕಾ, ಚಿಗವ್ವಗಳು, 
ಅವರು ಕಲಿಸಿದ ಸಂಬಂಧಗಳ ಬೆಲೆ
ಮನೆಯ ಸುತ್ತ ಮಾನವೀಯತೆಯ ಸೆಲೆ,
ಶೇಂಗಾ, ಹತ್ತಿ ಹೊಲ, ಅದರಲ್ಲಿರೋ ದನಕರು, ಕುರಿಕೋಳಿಗಳು. 
ಮನತೃಪ್ತಿ ಯಾಗಲು ಇದಕ್ಕಿಂತ ಬೇಕೇ ಬೇರೆ ಚಂದದ ನೆಲೆ?

ಅಪ್ಪನೊಂದಿಗೆ ಊರ ತುಂಬೆಲ್ಲ ಟ್ರಾಕ್ಟರ್ ಸವಾರಿ,
ನನಗನ್ನಿಸಿತು ಬಾರಿ, ಬಾರಿ ನಾನೊಬ್ಬ ರಾಜಕುಮಾರಿ,
ಆದರೆ ಅವರಿಗೋ ಅನ್ನಿಸಿದ್ದು ತನ್ನದೊಂದು ಅಂಬಾರಿ,  
ಅದರಲ್ಲಿ ನನ್ನೊಂದಿಗೆ ಕುಳಿತ ಅವರ ಮೊಮ್ಮಗಳೊಬ್ಬ ವಿಶ್ವಸುಂದರಿ. 
ಸಿಕ್ಕವರಿಗೆಲ್ಲ ಪರಿಚಯಿಸಿ ಬಣ್ಣಿಸಿದ ವೈಖರಿ ಭಾರೀ. 

ಪಂಚಮಿ ಮುಂಚೆಯೆ ಮೊಮ್ಮಕ್ಕಳಿಗಾಗಿ ಬಂದಿತ್ತು ಗಂಡಮ್ಮನ ಪಂಚಮಿ ಉಂಡಿ, 
ಗೌರವ್ವ ಕೆರೆ ಸೇರಿ ಮಾಸಗಳೇ ಕಳೆದರೂ ಹೆಣ್ಣಮ್ಮನಿಂದ ಬಂದಿತ್ತು ಸಕ್ಕರೆ ಗೊಂಬೆ, 
ಇದೆಲ್ಲ ನೋಡಿ ನೆನಪಾಗಿತ್ತು ನನ್ನ ಬಾಲ್ಯದ ಪಂಚಮಿ, ಗೌರಿ ಹುಣ್ಣಿವೆ . 
ಅದಕಾಗಿ ಆಡಿಯೂ ಆಯಿತು ಜೋಕಾಲಿ, ಹಾಡಿ ಕರೆದೂ ಆಯಿತು ಗೌರವ್ವನ. 

ತಮ್ಮನೊಂದಿಗೆ ಊರ ಸಂತೆಯಲಿ ಮಾಡಿದ ಚೌಕಾಸಿ 
ನೆನಪು ಮಾಡಿತ್ತು ಬಾಲ್ಯದ ನಾಕಾಣಿ, ಎಂಟಾಣಿಯಲಿ ಬಂದ ಖುಸಿ 
ಅದನ ನೆನೆಸಿಕೊಂಡು ಮುಂದೆ ನಡೆವಾಗ ಶಾಲೆಯ ಗೆಳೆಯ 
ಅಕ್ಕರೆಯಿಂದ ಕರೆದು ಕುಡಿಸಿದ ತನ್ನಂಗಡಿಯ ಜೀರಾ ಸೋಡಾ, 
ಅನ್ನಿಸುವಂತೆ ಮಾಡಿತ್ತು ಈ ಖುಷಿಗೆ ಸರಿಸಾಟಿ ಇಲ್ಲ ನೋಡಾ!

       ಡಾ. ರಾಜಶ್ರೀ ವೀ ಪಾಟೀಲ್

ಪಶ್ಚಿಮಕ್ಕೊಂದು ಇಣುಕು : ಜಿ. ಎಸ್. ಜಯದೇವ್

ಅನಿವಾಸಿ ಕನ್ನಡಿಗರಿಗೆ ಜಯದೇವ್ ಅವರು ಈಗಾಗಲೇ ಚಿರಪರಿಚಿತರು. ಒಬ್ಬ ಸಮಾಜ ಸೇವಕನಾಗಿ, ದೀನಬಂಧುವಾಗಿ, ಪರಿಸರ ಪ್ರೇಮಿಯಾಯಾಗಿ, ಶಿಕ್ಷಣ ತಜ್ಞನಾಗಿ, ಲೇಖಕನಾಗಿ, ಅಂಕಣಕಾರನಾಗಿ ಅವರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ನಡೆಸಿದ್ದಾರೆ. ವೈಜ್ಞಾನಿಕ ಸತ್ಯ ಮತ್ತು ಅಧ್ಯಾತ್ಮ ಇವೆರಡನ್ನೂ ಒಂದೇ ದೃಷ್ಟಿಕೋನದಲ್ಲಿಟ್ಟುಕೊಂಡು ಇವೆರಡರ ನಡುವೆ ಇರುವ ಸಮಾನಾಂಶಗಳ ಬಗ್ಗೆ ಚಿಂತಿಸಿದ್ದಾರೆ. ಮೂಲದಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ, ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡ ಜಯದೇವ್ ಅವರು ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸಮಾಡಿ, ಮುಂಚಿತವಾಗಿಯೇ ನಿವೃತ್ತಿ ಪಡೆದು ಬಿಳಿಗಿರಿ ರಂಗನ ಬೆಟ್ಟದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣಕೇಂದ್ರದಲ್ಲಿ ಕಾರ್ಯಕರ್ತರಾಗಿ ದುಡಿದಿದ್ದಾರೆ. ಗಿರಿಜನರ ಸಂಪರ್ಕದಿಂದ ಒದಗಿದ ಅಮೂಲ್ಯವಾದ ಅನುಭವ ಅವರಿಗೆ ಪರಿಸರದ ಅಳಿವು ಉಳಿವಿನ ಬಗ್ಗೆ ಚಿಂತಿಸಲು ಅನುವುಮಾಡಿಕೊಟ್ಟಿತು. ಇಲ್ಲಿಂದ ಮುಂದೆ ಹಲವಾರು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಅವರು ತೊಡಗಿಕೊಂಡರು. ಗಿರಿಜನರ ಸಂಪರ್ಕದಿಂದ ಒದಗಿದ ಹಲವಾರು ಅಮೂಲ್ಯ ಅನುಭವಗಳನ್ನು, ಪರಿಸರದ ಬಗ್ಗೆ ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿ "ಸೋಲಿಗ ಚಿತ್ರಗಳು" ಎಂಬ ಕೃತಿಯನ್ನು ರಚಿಸಿದ್ದು ಅದು ಸಾಹಿತ್ಯ ಕ್ಷೇತ್ರದಲ್ಲಿ ಎಲ್ಲರ ಪ್ರಶಂಸೆಯನ್ನು ಪಡೆಯಿತು. 

ಮಕ್ಕಳ ಬಗ್ಗೆ ವಿಶೇಷ ಪ್ರೀತಿ ಇರುವ ಜಯದೇವ್ ಅವರು ಅನಾಥ ಮಕ್ಕಳ ಬಗ್ಗೆ ತೀವ್ರವಾದ ಕಾಳಜಿಯಿಂದ ಮತ್ತು ಅನುಕಂಪೆಯಿಂದ ದೀನಬಂಧು ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಅಲ್ಲಿ ನೂರಾರು ಗಂಡು ಮತ್ತು ಹೆಣ್ಣು ಮಕ್ಕಳ ಆಶ್ರಯ, ವಿದ್ಯಾಭ್ಯಾಸ, ವ್ಯಕ್ತಿವಿಕಾಸ ಇವುಗಳಿಗೆ ಅನುವುಮಾಡಿಕೊಟ್ಟು ಈ ಮಕ್ಕಳ ಪೋಷಣೆ ನಿರಂತರವಾಗಿ ನಡೆದಿದೆ.  ನೊಂದ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಮನಶಾಸ್ತ್ರ ತಜ್ಞರ ಜೊತೆ ಸಮಾಲೋಚನೆ ನಡೆಸಿ ಮಾನಸಿಕವಾಗಿ ಘಾಸಿಗೊಂಡ ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಅವರಿಗೆ ಈ ದಿಕ್ಕಿನಲ್ಲಿ ದೊರೆತ ಅನುಭವವನ್ನು "ನಾವೇಕೆ ಹೀಗೆ?" ಎಂಬ  ಕೃತಿಯಲ್ಲಿ ದಾಖಲಿಸಿದ್ದಾರೆ. ಗಾಂಧಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಬುದ್ಧ, ಜೀಸಸ್ ಮುಂತಾದ  ಮಹಾತ್ಮರ ಬದುಕು ಬರಹವನ್ನು ದೀರ್ಘವಾಗಿ  ಅವಲೋಕಿಸಿ ತಮ್ಮ ಬದುಕಿನಲ್ಲಿ ಮತ್ತು ತಮ್ಮ ಆಶ್ರಮದಲ್ಲಿ ಈ ಮೌಲ್ಯಗಳನ್ನು ಅನುಷ್ಠಾತಾನಕ್ಕೆ ತಂದಿದ್ದಾರೆ. ಮೈಸೂರಿನ ಶಕ್ತಿ ಧಾಮ ಎಂಬ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅಸಹಾಯಕ ಶೋಷಿತ ಮಹಿಳೆಯರಿಗೆ ಪುನರ್ವಸತಿಯನ್ನು ನೀಡಿ ಅವರಿಗೆ ಆಶ್ರಯನೀಡಿದ್ದಾರೆ.  ಹೀಗೆ ಮಹಿಳೆಯರ ಅಭಿವೃದ್ಧಿ ಕಾರ್ಯದಲ್ಲೂ ತಮನ್ನು ತೊಡಗಿಕೊಂಡಿದ್ದಾರೆ.

ಅವರು ಮೈಸೂರಿನ ವಿಶ್ವ ವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಜಯದೇವ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಯನ್ನು ನೀಡಿದೆ. ಹಲವಾರು ಸಂಘ ಸಂಸ್ಥೆಗಳು ಅವರಿಗೆ ಪ್ರತಿಷ್ಠಿತ ಪುರಸ್ಕಾರಗಳನ್ನು ನೀಡಿವೆ. ಅಮೇರಿಕ, ಯುರೋಪ್ ಮತ್ತು ಯುಕೆ ದೇಶಗಳಿಂದ ಅವರಿಗೆ ಆರ್ಥಿಕ ನೆರವು ಬಂದಿರುವುದಲ್ಲದೆ ಹಲವಾರು ವಿದೇಶಿಯರು ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಕೆಲಕಾಲ ಕೆಲಸ ಮಾಡಿದ್ದಾರೆ. ಜರ್ಮನಿಯ ಹಲವಾರು ವಿದ್ಯಾರ್ಥಿನಿಯರು ಕಳೆದ ಹಲವಾರು ವರ್ಷಗಳಿಂದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಲ್ಲಿ ದೀನಬಂಧುವಿನಲ್ಲಿ ಸೇವೆ ಸಲ್ಲಿಸಿದ್ದಾರೆ.  

ಜಯದೇವ್ ಅವರಿಗೆ ನಿವೃತ್ತಿ ಎನ್ನುವುದಿಲ್ಲ, ಅವರ ತಮ್ಮನಾಗಿ ನಾನು ಅವರನ್ನು ಇಂಗ್ಲೆಂಡಿಗೆ ಹಲವಾರು ಬಾರಿ ಆಹ್ವಾನಿಸಿದ್ದು,  ಕೊನೆಗೂ ಈ ಬೇಸಿಗೆಯಲ್ಲಿ ದೀನಬಂಧು ಸಂಸ್ಥೆ ಯಿಂದ  ತಾತ್ಕಾಲಿಕವಾಗಿ ಬಿಡುಗಡೆ ಪಡೆದು    ತಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿ ಯುಕೆ ಮತ್ತು ಯುರೋಪ್ ಪ್ರವಾಸ ಕೈಗೊಂಡಿದ್ದಾರೆ. ಬದುಕಿನಲ್ಲಿ ದಟ್ಟವಾದ ಅನುಭವವನ್ನು ಪಡೆದ ಜಯದೇವ್ ಅವರು ಯುಕೆ ಮತ್ತು ಯೂರೋಪಿನ ಬಗ್ಗೆ ಅವರ  ಮೊಟ್ಟ  ಮೊದಲ ಭೇಟಿಯ ಅನಿಸಿಕೆಗಳೇನು ಎಂದು ಹಲವಾರು ಅನಿವಾಸಿ ಮತ್ತು ವಿದೇಶಿ ಮಿತ್ರರು ಕೇಳಿದ್ದು ಜಯದೇವ್ ಅವರು ತಮ್ಮ ವಿಶೇಷ ಒಳನೋಟಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದನ್ನು ಒಂದು ಲೇಖನವಾಗಿ ಬರೆಯಬೇಕೆಂದು ನಾನು ಒತ್ತಾಯಿಸಿದರೆ ಫಲವಾಗಿ, ಈ ಹಿನ್ನೆಲೆಯಲ್ಲಿ ಅವರ ಕೆಳಗಿನ ಲೇಖನವನ್ನು ಪ್ರಕಟಿಸಿಲಾಗಿದೆ, ದಯವಿಟ್ಟು ಓದಿ ಮತ್ತು ಪ್ರತಿಕ್ರಿಯಿಸಿ.

 -ಸಂಪಾದಕ
      * * *
ಅಮೇರಿಕಾ ದೇಶಕ್ಕಿಂತಲೂ ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಯೂರೋಪ್ ದೇಶಗಳನ್ನು ನೋಡಬೇಕೆಂಬ ಬಯಕೆ ನನಗೆ ಆಗಾಗ ಮೂಡುತ್ತಿತ್ತು. ಆದರೆ ಸಾಧ್ಯವಾಗಿದ್ದು ಈಗ. ಕಳೆದ ಇಪ್ಪತೈದು ವರ್ಷಗಳಿಂದಲೂ ನನ್ನ ತಮ್ಮ, ಅವನ ಕುಟುಂಬದ ಎಲ್ಲರೂ ನನ್ನನ್ನು ಕರೆಯುತ್ತಲೇ ಇದ್ದಾರೆ. ದೀನಬಂಧು ಸಂಸ್ಥೆಯ ಜವಬ್ದಾರಿಯಿಂದ ಬಿಡಿಸಿಕೊಂಡು ನನ್ನ ತಂಗಿಯ ನೆರವಿನಿಂದ ಈಗ ಪ್ರಯಾಣ ಸಾಧ್ಯವಾಗಿದೆ. ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಪ್ರಯಾಣ ಬಹಳ ಸುಲಭ. ಮೊಬೈಲ್-ಇಂಟರ್ ನೆಟ್ ಗಳಿಂದಾಗಿ ಪ್ರತಿ ಹೆಜ್ಜೆಯನ್ನು ಪ್ಲಾನ್ ಮಾಡಿ ಪ್ರಯಾಣ ಮಾಡಬಹುದು. 
ಹೊಸ ಸ್ಥಳಗಳನ್ನು ಅಲ್ಲಿಯ ಜನರನ್ನು ಅವರ ರೀತಿ ನೀತಿಗಳನ್ನು ನೋಡಿ ವಸ್ತು ನಿಷ್ಠವಾಗಿ ಗ್ರಹಿಸಬೇಕೆಂದರೆ ಅದಕ್ಕೆ ಹೊಸ ಕಣ್ಣುಗಳೇ ಬೇಕು. ಭಾರತೀಯ ಸಂಸ್ಕೃತಿ ಮತ್ತು ಅದರ ನೀತಿ ರೀತಿಗಳನ್ನೇ ಕಣ್ಣಿನ ತುಂಬಾ ತುಂಬಿಕೊಂಡಿದ್ದರೆ ನಾವು ಈ ಆಗಂತುಕ ಸಂಸ್ಕೃತಿಯ ಬಗ್ಗೆ ತೀರ್ಪು ನೀಡಲು ಪ್ರಾರಂಭಿಸುತ್ತೇವೆ. ಮೊದಲನೆಯದಾಗಿ ಯಾರೂ ನಮ್ಮನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಿಲ್ಲ; ಎರಡನೆಯದಾಗಿ ಇಂತಹ ಪೂರ್ವಾಗ್ರಹಗಳಿಂದಾಗಿ ನಾವು ಹೊಸದನ್ನು ನೋಡುವ ಸುಂದರ ಅವಕಾಶವನ್ನೇ ಕಳೆದುಕೊಂಡುಬಿಡುತ್ತೇವೆ. ಇಂತಹ ಒಂದು ಮುಕ್ತಮನಸ್ಸು ನನಗಿದ್ದರೂ ಮೊದಲು ಕೆಲವು ದಿನ ನನಗೆ ಕಷ್ಟವಾಯಿತು. ಭಾರತೀಯ ದೃಶ್ಯಾವಳಿಗಳಿಗೆ ಬಂಧಿಯಾಗಿದ್ದ ನನ್ನ ನೋಟವನ್ನು ನನ್ನ ಗ್ರಹಿಕೆಯ ಕ್ರಮವನ್ನು, ಸರಿ-ತಪ್ಪುಗಳ ನಿಷ್ಕರ್ಷೆಯನ್ನು ಬಹಿಷ್ಕರಿಸಿ ಮುಕ್ತ ಮನಸ್ಸಿನಿಂದ ನೋಡಲು ಪ್ರಾರಂಭಿಸಿದೆ. ಆಗ ಆತಂಕಕ್ಕೆ ಕಾರಣವಿಲ್ಲದ, ಸುಂದರವಾದ ಇಂಗ್ಲೆಂಡ್-ಯೂರೋಪ್ ಗಳು ಗೋಚರಿಸಲು ಪ್ರಾರಂಭವಾಯಿತು. ಹಿಂದೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಇತ್ಯಾದಿ ಇತ್ಯಾದಿ ವಿಚಾರಗಳು ಚರಿತ್ರೆಗೆ ಸಂಬಂಧಪಟ್ಟ ವಿಷಯಗಳು; ಚರಿತ್ರೆಯ ಪಾಠಗಳಾಗಿ ಇವನ್ನು ಬ್ರಿಟಿಷರು-ಭಾರತೀಯರು ಇಬ್ಬರೂ ತಿಳಿಯಬೇಕು. ಆದರೆ ವರ್ತಮಾನದ ಮನುಷ್ಯ ಸಂಬಂಧಗಳಲ್ಲಿ ಈ ವಿವರಗಳಿಗೆ ಯಾವ ಸ್ಥಾನವೂ ಇರಬೇಕಾಗಿಲ್ಲ  ಎಂಬ ವಿವೇಕ ನಮಗೆ ಹುಟ್ಟಬೇಕು. ಈ ನನ್ನ ಗಾಢವಾದ ನಂಬಿಕೆ ನನಗೆ ಮತ್ತಷ್ಟು ತೆರೆದ ಮನಸ್ಸನ್ನು ದಯಪಾಲಿಸಿದೆ. ಹಾಗಾಗಿ ಪ್ರವಾಸದ ತುಂಬ ಸುಂದರ ಚಿತ್ರಗಳೇ ಪ್ರಧಾನವಾಗಿವೆ. ಯಾವುದೇ ಸಮಾಜದ ಒಟ್ಟಾರೆ ಮಾನಸಿಕ  ಸ್ವಾಸ್ಥ್ಯವನ್ನು ಕಲುಕುವ ಆಚಾರ ವಿಚಾರಗಳ ಬಗ್ಗೆ ನನಗೆ ಕಳಕಳಿ ಇದೆ, ಮುಚ್ಚುಮರೆ ಇಲ್ಲದೆ ಇವುಗಳನ್ನು ವಿರೋಧಿಸುತ್ತೇನೆ. ಭಾರತದಲ್ಲಂತೂ ಇಂತವುಗಳನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಪಾಶ್ಚತ್ಯ ದೇಶಗಳಲ್ಲಿ ಕಂಡುಬಂದರೆ ಅವುಗಳನ್ನೂ ಸಹ ಪ್ರಶ್ನಿಸುತ್ತೇನೆ 

ಪಶ್ಚಿಮಕ್ಕೆ ಬಂದನಂತರ ಯೂರೋಪಿನ ಕಿರು ಪ್ರವಾಸ ಹೊರತುಪಡಿಸಿದರೆ ನಾನು ಹೆಚ್ಚಾಗಿ ಓಡಾಡಿದ್ದು ನನ್ನ ತಮ್ಮನ ಮನೆ ಇರುವ ಶಫೀಲ್ಡ್ ನಲ್ಲಿ. ಇದೊಂದು ಸುಂದರವಾದ ಹಸಿರಿನಿಂದ ಕಂಗೊಳಿಸುವ ಊರು. ಮತ್ತೊಂದು ವಿಶೇಷ ಎಂದರೆ ನಿಶ್ಶಬ್ದತೆ.. ಮನೆಯೊಳಗಿದ್ದಾಗಲಂತೂ ನಿರಂತರವಾದ ನಿಶ್ಶಬ್ದತೆಯನ್ನು ಅನುಭವಿಸಿ ಆನಂದಪಟ್ಟಿದ್ದೇನೆ. ಭಾರತದ ಉದ್ದಗಲಕ್ಕೂ ಅಸಹನೀಯವಾದ ಗದ್ದಲವನ್ನು ಅನುಭವಿಸಿದ ನನಗೆ ಇದೊಂದು ಆಪ್ಯಾಯ ಮಾನವಾದ ಅನುಭವ. ಬ್ರಿಟಿಷರು ಸ್ನೇಹಜೀವಿಗಳು ಎದುರಿಗೆ ಎಲ್ಲರಿಗೂ ನಗುಮುಖದಿಂದ ಹಲೋ ಹೇಳುತ್ತಾರೆ, ಸರಿದು ದಾರಿಬಿಡುತ್ತಾರೆ. ಪ್ರತಿಯೊಬ್ಬ ವಾಹನ ಚಾಲಕನೂ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಇಕ್ಕಾಟ್ಟಾದ ರಸ್ತೆಗಳಲ್ಲಿ ಇದುರಿನಿಂದ ವಾಹನ ಬಂದಾಗ ನಿಲ್ಲಿಸಿ ಇತರರಿಗೆ ಅನುವು ಮಾಡಿ ಕೊಡುವ ಸಭ್ಯತೆಯ ಸಂಪ್ರದಾಯವಂತೂ ಅನುಕರಣಯೋಗ್ಯವಾದುದು. ಬ್ರಿಟಿಷರ ಈ ಶಿಸ್ತಿನ ಒಂದನೇ ಹತ್ತುಭಾಗವಾದರೂ ನಮ್ಮ ದೇಶದಲ್ಲಿ ಆಚರಣೆಗೆ ಬರುವುದಾದರೆ ನಮ್ಮ ದೇಶದ ಹಾರನ್ ಹೊಂಕಾರಗಳು ಸ್ವಲ್ಪವಾದರೂ ಕಡಿಮೆಯಾಗಬಹುದು. ನನ್ನ ಅನಿಸಿಕೆ ಏನೆಂದರೆ ನಿಶ್ಯಬ್ದತೆಯಿಂದ ಮನಃಶಾಂತಿ ಉಂಟಾಗುತ್ತದೆ. ಕರ್ಕಶವಾದ ಶಬ್ದಗಳ ನಡುವೆ ಬಹಳಕಾಲ ಸಂಚಾರ ಮಾಡಿದರೆ ಮನಶ್ಯಾಂತಿ ಹಾರಿಹೋಗುತ್ತದೆ, ಮತ್ತು ಮಾನಸಿಕ ಅನಾರೋಗ್ಯಕ್ಕೂ ಕಾರಣವಾಗಬಹುದು. 
ಇರಲಿ ಬ್ರಿಟಿಷರು ಸ್ನೇಹಜೀವಿಗಳು ಎಂದೆ. ನೆನ್ನೆಯ ದಿನ ಲಿನ್ ಮತ್ತು ಜೇನ್ ಇಬ್ಬರು ಧೀಮಂತ ಮಹಿಳೆಯರು ಸ್ಕಾಟ್ ಲ್ಯಾಂಡ್ ನಿಂದ ನೂರಾರು ಮೈಲು ಡ್ರೈವ್ ಮಾಡಿಕೊಂಡು ನನ್ನನ್ನು ನೋಡಲು ನನ್ನ ತಮ್ಮನ ಮನೆಗೆ ಬಂದಿದ್ದರು. ದೀನಬಂಧುವಿನಲ್ಲಿ ಕೆಲವು ತಿಂಗಳುಗಳ ಕಾಲ ವಾಲಂಟರಿ ಸರ್ವಿಸ್ ಮಾಡಿದ್ದ ಇವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತ ಗಂಟೆಗಳನ್ನೇ ಕಳೆದರು. ಒಂದೂವರೆ ದಶಕದ ನಂತರವೂ ತಾವು ಒಡನಾಡಿದ  ಎಷ್ಟೊಂದು ಮಕ್ಕಳ, ಸಿಬ್ಬಂದಿಗಳ ಹೆಸರುಗಳನ್ನು ನೆನಪಿಟ್ಟುಕೊಂಡು ಅತ್ಯಂತ ಪ್ರೀತಿಯಿಂದ ನೆನೆದರು. ಇಲ್ಲಿಯ ಸರಾಸರಿ ಜೀವನವನ್ನು ನೋಡಿದಾಗ ಈ ಜನ ನೆರೆಹೊರೆಯವರನ್ನು ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ ಎಂದು ಅನ್ನಿಸುವುದುಂಟು. ಆದರೆ ಮತ್ತೊಬ್ಬರಿಗೆ ನೆರವಾಗುವ ಸಂದರ್ಭ ಒದಗಿಬಂದಾಗ ತಮ್ಮ ಶಿಷ್ಟಾಚಾರವನ್ನು ಬದಿಗೊತ್ತಿ ಮನುಷ್ಯ ಸಂಬಂಧಗಳಿಗೆ ಮಿಡಿಯುತ್ತಾರೆ. ಬೂಟಾಟಿಕೆ ಎಂಬುದು ಎಳ್ಳಷ್ಟು ಇರುವುದಿಲ್ಲ. ಕೆಲವೊಮ್ಮೆ ವ್ಯತಿರಿಕ್ತ ಪ್ರಕರಣಗಳೂ ಕಂಡುಬರಬಹುದು, ಆದರೆ ಅಪರೂಪ. 

ಬ್ರಿಟಿಷ್ ಜನ ಮಕ್ಕಳ ರಕ್ಷಣೆಗಾಗಿ ಅತಿಯಾದ ಕಾನೂನು, ಕಟ್ಟಳೆಗಳನ್ನು ಮಾಡಿಕೊಂಡಿದ್ದಾರೆ ಎಂದೆನಿಸುತ್ತದೆ. ಇದಕ್ಕೆ ಕಾರಣಗಳೂ ಇವೆ ಎಂಬುದು ಒಂದು ಸಮಜಾಯಿಷಿ. ಎಲ್ಲೆಲ್ಲೂ ಅಪಾಯಗಳನ್ನೇ ನೋಡುತ್ತ, ಸದಾಕಾಲವೂ ಗುರಾಣಿಯನ್ನು ಅಡ್ಡಹಿಡಿದೇ  ಬದುಕುವ  ಜೀವನ ವಿಧಾನ ಬದುಕಿನ ಪ್ರೀತಿಯನ್ನು ನಂಬಿಕೆಯನ್ನು ಗಟ್ಟಿಗೊಳಿಸುವ ಬದಲು ಸ್ವರಕ್ಷಣೆಯ ಗೀಳನ್ನು ಹೆಚ್ಚಿಸಬಹುದಲ್ಲವೆ? ನಂಬಿಕೆ ಮತ್ತು ಪರಸ್ಪರತೆಗಳಿಗೆ ಸ್ಥಳವಿಲ್ಲದೆ ಜೀವನ ಶುಷ್ಕವಾಗಿ ಬಿಡಬಹುದಲ್ಲವೆ? ನಂಬಿಕೆ ಭರವಸೆಗಳಿಲ್ಲದ ಜೀವನದಲ್ಲಿ ಪರಕೀಯತೆ (Alienation) ಹತಾಶೆಗಳು ಸುಪ್ತವಾಗಿ ಮನೆಮಾಡಿ ಆತ್ಮವನ್ನೇ ಕೊರೆಯಬಹುದೋ ಏನೋ? ಈ ಪ್ರಶ್ನೆಗೆ ನನಗೆ ಉತ್ತರ ದೊರೆತಿಲ್ಲ. 

ಪಾಶ್ಚಿತ್ಯ ಜಗತ್ತಿನ ಇಂದಿನ ವ್ಯವಸ್ಥೆ ಮತ್ತು ಸಂಸ್ಕೃತಿ ‘ಅನುಭಾವ’ ಎಂದು ನಾವು ಯಾವುದನ್ನು ಕರೆಯುತ್ತೇವೆಯೊ ಆ ಮನಸ್ಥಿತಿಯನ್ನು ಕೆಲವರಾದರೂ ಪಡೆಯಬಹುದಾದ ಸಾಧ್ಯತೆಯನ್ನು ದೂರ ಸರಿಸುತ್ತದೆ. ಬ್ರದರ್ ಲಾರೆನ್ಸ್ ಅಥವಾ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸ್ಸಿ ಅವರಂತಹ ಅನುಭಾವಿಗಳು ಪಶ್ಚಿಮದಲ್ಲೂ ಇದ್ದುದು ಉಂಟು. ಆದರೆ ಇಂದಿನ ವಾತಾವರಣದಲ್ಲಿ ಭೌತಿಕತೆಯೇ ಪ್ರಧಾನವಾಗಿದ್ದು ಅಂತರ್ಮುಖತೆ ಗೌಣವಾಗಿದೆ.  ಹಾಗಾಗಿ ಒಂದು ಮಿತಿಯೊಳಗೆ ಇವರು ಅಧ್ಯಾತ್ಮವನ್ನು ಮೆಚ್ಚುತ್ತಾರಾದರೂ ತಮ್ಮ ನಡುವೆಯೇ ಇರಬಹುದಾದ ರಮಣಮಹರ್ಷಿಯವರಂತಹ ಅನುಭಾವಿಯನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಬಹದೋ ಏನೋ! ಭಾರತೀಯ ಸಂಸ್ಕೃತಿಯಲ್ಲಿ ನೆಲೆಯೂರಿದ ನನ್ನಂತಹವರಿಗೆ ಇದೊಂದು ದೊಡ್ಡ ಕೊರತೆಯಾಗಿ ಕಾಣುತ್ತದೆ. ಬದುಕಿನ ನಿರರ್ಥಕತೆಯ ಅರಿವು ನಮ್ಮನ್ನು ಆಧ್ಯಾತ್ಮಿಕತೆಗೆ ಕೊಂಡೊಯ್ದರೆ ಆಲ್ಬರ್ಟ ಕಾಮು  ಅವರಂತಹ ಪಾಶ್ಚಾತ್ಯ ಚಿಂತಕರನ್ನು ಅಸಂಗತ (Absurd) ತತ್ತ್ವಕ್ಕೆ ಕೊಂಡೊಯ್ದು ಆತ್ಮಹತ್ಯೆಯ ಪ್ರಶ್ನೆಯನ್ನು ಎದುರಿಸಬೇಕಾದ ಅನಿವಾರ್ಯತೆಯನ್ನುಂಟು ಮಾಡುತ್ತದೆ. ಕರ್ಮ ಮಾಡುತ್ತಲೇ ನೂರು ವರ್ಷಕಾಲ ಬಾಳಬೇಕು ಎಂದು ಹೇಳುವ ನಮ್ಮ ಈಶೋಪನಿಷತ್ತಿನ ಮಂತ್ರಕ್ಕೂ ಬದುಕಿನ ನಿರರ್ಥಕತೆಯನ್ನು ಆತ್ಮಹತ್ಯೆಯ ಪ್ರಶ್ನೆಯಾಗಿ ಎದುರಿಸುವುದಕ್ಕೂ ಎಷ್ಟು ವೆತ್ಯಾಸವಿದೆ!

ಸರಾಸರಿಯಾಗಿ ಬ್ರಿಟಿಷ್ ಜನ ತಮ್ಮ ಪರಂಪರೆಯ ಬಗ್ಗೆ, ಗತಕಾಲದ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾರೆ. ಯಾವಾಗಲೂ ಗೆಲ್ಲುಗರಾಗಿಯೇ ಬೆಳೆದು ಬಂದ ಈ ಜನಾಂಗ ಹೆಮ್ಮೆ ಪಡುವುದರಲ್ಲಿ ಆಶ್ಚರ್ಯವಿಲ್ಲ. ಇಂದಿನ ಅವರ ವ್ಯವಸ್ಥೆಯ ಆದ್ಯತೆಗಳನ್ನು ಗಮನಿಸಿದರೆ ಇದು ಅರಿವಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಲು ಸ್ವಯಂಪ್ರೇರಣೆಯಿಂದ ಸಂಘಟಿತ ಪ್ರಯತ್ನಗಳೂ ನಡೆಯುವುದುಂಟು. ನ್ಯಾಷನಲ್ ಟ್ರಸ್ಟ್ ಇಂತಹ ಒಂದು ಸಾರ್ವಜನಿಕ ಸಂಸ್ಥೆ. ಹಳೆಯ ಕಾಲದ ಮನೆಯನ್ನು ಹಣದ ಮುಗ್ಗಟ್ಟು ಅಥವಾ ಇತರ ಕಾರಣಗಳಿಗಾಗಿ ಯಾರಾದರೂ ಮಾರಿಬಿಟ್ಟಿದ್ದರೆ ಅದನ್ನು ಟ್ರಸ್ಟ್ ಹೆಚ್ಚು ಹಣ ಕೊಟ್ಟು ಕೊಂಡು ಕೊಂಡು ಹಾಗೇಯೇ ಉಳಿಸುತ್ತದೆ. ಹಳೆಯ ಕಾಲದ ಮನೆಗಳನ್ನು ಹಾಗೆಯೇ ಉಳಿಸಿಕೊಂಡು ಮುಂದಿನ ಪೀಳಿಗೆಯವರಿಗೆ ಗತ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದು ಈ ಟ್ರಸ್ಟ್ ನ ಉದ್ದೇಶ. ಈ ಮನೆಗಳ ಜೊತೆ ಹಿಂದೆ ಬಳಸುತ್ತಿದ್ದ “ಮಿಲ್ ಸ್ಟೋನ್” ಅಥವಾ ಹಿಟ್ಟು ಮಾಡುವ ಬೃಹತ್ ಬೀಸೆ ಕಲ್ಲುಗಳನ್ನು ಸಂರಕ್ಷಿಸಿದ್ದಾರೆ. ಇಷ್ಟೆ ಅಲ್ಲ ಹಿಂದೆ ಕುರಿಗಳನ್ನು ಕಟ್ಟುತ್ತಿದ್ದ ರೊಪ್ಪವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಜೊತೆಗೆ ಇವುಗಳ ಸಾಂಸ್ಕೃತಿಕ ಚರಿತ್ರೆಯನ್ನು ಹೇಳುವ ಚಿಕ್ಕ ಚಿಕ್ಕ ಫಲಕಗಳು, ಆಯಾ ಪ್ರದೇಶಗಳ ಚಿತ್ರ ಸಹಿತ ನಕ್ಷೆಗಳು ಎಲ್ಲೆಲ್ಲೂ ಕಾಣಸಿಗುತ್ತವೆ. ಜೊತೆಗೆ ಜೀವ ವೈವಿಧ್ಯದ ರಕ್ಷಣೆಗೂ ಬಹಳ ಮಹತ್ವ ನೀಡಿದ್ದಾರೆ. ನ್ಯಾಷನಲ್ ಟ್ರಸ್ಟ್ ವಿಶಾಲವಾದ ಭೂಮಿಯನ್ನು ಕೊಂಡುಕೊಂಡು ಇರುವ ನೈಸರ್ಗಿಕ ಸಂಪತ್ತನ್ನು ಕಾಪಾಡುತ್ತದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದನ್ನು ತಡೆದರೆ ಸಾಕು ಆ ಪ್ರದೇಶದ ಜೀವ ವೈವಿಧ್ಯ ಮತ್ತು ಪ್ರಕೃತಿ ಸಂಪತ್ತು ಉಳಿಯುತ್ತದೆ. ಭಾರತದಂತಹ ಅದ್ಭುತ ಜೀವವೈವಿಧ್ಯದ ತಾಣದಿಂದ ಬಂದ ನನ್ನಂತಹವರಿಗೆ ಇವರ ಜೀವ ವೈವಿಧ್ಯ ಸಂರಕ್ಷಣೆಯ ಕಾನೂನುಗಳು ಸ್ವಲ್ಪ ಅತಿ ಎನಿಸುವುದುಂಟು. ಆದರೆ ಪಶ್ಚಿಮ ಘಟ್ಟಗಳಂತಹ ಅಮೂಲ್ಯ ಜೀವ ವೈವಿಧ್ಯದ ಬಿಸಿ ತಾಣಗಳ (Hot spot) ಸಂರಕ್ಷಣೆಯ ಬಗ್ಗೆ ನಮ್ಮ ಸರ್ಕಾರಗಳೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದು, ಶ್ರೀ ಸಾಮಾನ್ಯರು ಸ್ವಲ್ಪವೂ ಸಹಕರಿಸದಿರುವುದು ಅತ್ಯಂತ ಆತಂಕದ ಸಂಗತಿ. ಅಲ್ಲದೆ ಅನೇಕ ಶತಮಾನಗಳ ಸಾಂಸ್ಕೃತಿಕ ಚರಿತ್ರೆಯಿರುವ ನಮ್ಮ ಸಾವಿರಾರು ದೇವಸ್ಥಾನಗಳು, ಸಾಂಸ್ಕೃತಿಕ ತಾಣಗಳ ರಕ್ಷಣೆಯ ಬಗ್ಗೆ ಕಾಳಜಿ ವಹಿಸದೇ ಇರುವುದು ವಿಷಾದನೀಯ. ಹೊರಗಿನಿಂದ ಬಂದ ದಾಳಿಕೋರರು ನಮ್ಮ ದೇಶದ ಸಾಂಸ್ಕೃತಿಕ ತಾಣಗಳನ್ನು ನಾಶಪಡಿಸಿದರೆಂದು ನಿರಂತರವಾಗಿ ದೂರುತ್ತಲೇ ಕುಳಿತುಕೊಳ್ಳುವುದಕ್ಕಿಂತ ಇರುವ ಸಾಂಸ್ಕೃತಿಕ ತಾಣಗಳ ರಕ್ಷಣಾ ಕಾರ್ಯವನ್ನು ಮುತುವರ್ಜಿಯಿಂದ ಮಾಡುವುದು ಹೆಚ್ಚು ಲಾಭದಾಯಕವಾದೀತು. 

ಬ್ರಿಟಿಷರಂತೆ ಯೂರೋಪಿನ ಇತರ ಕೆಲವು ದೇಶದ ಜನರು  ತಮ್ಮ ಪಾರಂಪರಿಕ ಕಟ್ಟಡಗಳನ್ನು ಬಹುವಾಗಿ ಪ್ರೀತಿಸುತ್ತಾರೆ. ನೆದರ್ಲ್ಯಾಂಡ್ ದೇಶದ ಆಮ್ ಸ್ಟರ್ ಡ್ಯಾಮ್ ನ ಕಟ್ಟಡಗಳಂತೂ ಇನ್ನೂರು-ಮುನ್ನೂರು ವರ್ಷ ಹಳೆಯವು. ಈ ಜನ ತಮ್ಮ ಹಳೆಯ ಮನೆಗಳನ್ನು ಅವು ಇದ್ದ ಹಾಗೆಯೇ ಕಾಪಾಡಿಕೊಂಡು ಬರಲು ಕಂಕಣ ಬದ್ಧರಾಗಿರುವಂತೆ ಕಂಡುಬರುತ್ತದೆ.  ಆಮ್ ಸ್ಟರ್ ಡ್ಯಾಮ್ ನ ಒಂದು ಕಡೆ ಒಂದರ ಪಕ್ಕ ಒಂದು ಇರುವ ಮೂರು ಮನೆಗಳು ವಾಲಿಕೊಂಡಿವೆ. ಇವುಗಳು ಬಹುಶಃ ಮುನ್ನೂರು ವರ್ಷ ಹಳೆಯ ಮನೆಗಳು. ಇವುಗಳನ್ನು “ಡ್ಯಾನ್ಸಿಂಗ್ ಹೌಸಸ್” ಎನ್ನುತ್ತಾರೆ. ಕೆಲವು ಕಡೆ ನಾಲ್ಕು ಮಹಡಿ ಏರಿ ಹೋಗಬೇಕು. ಆದರೆ ಅವರಿಗೆ ಲಿಫ್ಟ್ ಹಾಕಿಸಿಕೊಳ್ಳಲು ಸರ್ಕಾರ ಅನುಮತಿ ಕೊಡುವುದಿಲ್ಲ. ಏಕೆಂದರೆ ಇಂತಹ ಯಾವುದೇ ಪುನರ್ ನವೀಕರಣ ಕಾರ್ಯಕ್ಕೆ ಹಳೆಯ ರಚನೆಗಳನ್ನು ಒಡೆಯಬೇಕಲ್ಲ! ಹಾಗಾಗಿ ಈ ಇಕ್ಕಾಟ್ಟಾದ ಮೆಟ್ಟಿಲುಗಳನ್ನು ಹತ್ತಿಯೇ ಹೋಗಬೇಕು. ಫ್ರಾನ್ಸ್ ಆಧುನಿಕ ನಗರವಾದರೂ ಅಲ್ಲಿಯೂ ಸಹ ನೂರಾರು ಹಳೆಯ ಕಟ್ಟಡಗಳನ್ನು ಉಳಿಸಿಕೊಂಡಿದ್ದಾರೆ. ಯೂರೋಪಿನ ವಿಶೇಷವೆಂದರೆ ಆಧುನಿಕತೆ ಅವರ ಸಾಂಸ್ಕೃತಿಕ ಸ್ಮೃತಿಗಳಿಗೆ, ಸಾಂಸ್ಕೃತಿಕ ಅಸ್ಮಿತೆಗೆ ಮಾರಕವಾಗಿಲ್ಲ. ಆದರೆ ನಮ್ಮ ದೇಶದಲ್ಲ್ಲೋ ಆಧುನಿಕತೆ ಮತ್ತು ಸಾಂಸ್ಕೃತಿಕ ಅಸ್ಮಿತೆಗಳು ಒಂದಕ್ಕೊಂದು ವಿರುದ್ಧವೋ ಎಂಬಂತೆ ಭಾವಿಸುತ್ತೇವೆ. ಆಧುನಿಕತೆ ಎಂಬುದು ಹಳೆಯದೆಲ್ಲದರ ಮೇಲೆ ಕಟ್ಟಿದ ಗೋರಿಯೋ ಎಂಬಂತೆ ನಾವು ವರ್ತಿಸುತ್ತೇವೆ. 

ಭಾರತ ಬಹು ಸಂಸ್ಕೃತಿಗಳ ದೇಶ. ನಾಲ್ಕು ಪ್ರಮುಖ ಜಾಗತಿಕ ಧರ್ಮಗಳ ಉಗಮಸ್ಥಾನ. ವಿಭಿನ್ನ ಸಂಸ್ಕೃತಿಗಳು, ಉಪಸಂಸ್ಕೃತಿಗಳು, ನೂರಾರು ಆಚಾರ ವಿಚಾರಗಳು ಒಟ್ಟಿಗೆ ಸಾವಿರಾರು ವರ್ಷಗಳ ಪರ್ಯಂತ ಬೆಳೆದು ಬಂದ ದೇಶ. ಅನ್ಯ ವಿಚಾರಗಳು, ಅನ್ಯ ಸಂಸ್ಕೃತಿಯ ಪದ್ಧತಿ ಆಚರಣೆಗಳು ಈ ದೇಶದಲ್ಲಿ ಅಕ್ಕಪಕ್ಕದಲ್ಲೇ ಇರುವುದನ್ನು ನೋಡಬಹುದು. ಪ್ರತಿರೋಧಗಳು ಬಹಳ ಕಡಿಮೆ ಎಂದೇ ಹೇಳಬಹುದು. ಈ ಅನಿವಾರ್ಯವಾದ ಸಹ ಬಾಳ್ವೆ ಭಾರತೀಯರಿಗೆ ಅಪಾರವಾದ ತಾಳ್ಮೆ, ಸಹಿಷ್ಣುತೆಯ ಮನೋಧರ್ಮವನ್ನು ಕೊಟ್ಟಿದೆ. ಏಕರೂಪ ಸಂಸ್ಕೃತಿಯ ವಾತಾವರಣ ‘ಅನ್ಯ’ ರನ್ನು ಸಹಿಸುವ ಸಹಿಷ್ಣುತೆಯ ಮನೋಧರ್ಮವನ್ನು ನೀಡಲಾರದು. ಸಾವಿರಾರು ವರ್ಷಗಳ ಪರ್ಯಂತ ‘ಅನ್ಯ’ರಾರೂ ಇಲ್ಲದ, ನಮ್ಮವರಷ್ಟೇ ಇರುವ ವಾತಾವರಣದಲ್ಲಿ ಬೆಳೆದ ಮನೋಧರ್ಮ ‘ಅನ್ಯ’ ಎಂಬ ಎಲ್ಲವನ್ನೂ ಗುಮಾನಿಯಿಂದಲೇ ನೋಡುವುದನ್ನು ಅಭ್ಯಾಸಮಾಡಿಕೊಂಡಿರುತ್ತದೆ. ಭಾರತೀಯ ಪರಿಸರದ ಸಹಿಷ್ಣುತೆಯ ಮನೋಧರ್ಮವನ್ನು ಸ್ವಾಮಿ ವಿವೇಕಾನಂದರು ಸುಮಾರು ನೂರ ಮೂವತ್ತು ವರ್ಷದ ಹಿಂದೆಯೇ ತಮ್ಮ ಭಾಷಣದಲ್ಲಿ ಹೀಗೆ ಹೇಳಿದರು. “I am proud to belong to religion which has taught the world both tolerance and universal acceptance. We believe not only in universal toleration but we accept all religions as true. I am proud to belong to a nation which has sheltered the persecuted and the refugees of all religions and all nations of the earth.

ಇಂದಿನ ಭಾರತದ ರಾಜಕೀಯ ಸಾಮಾಜಿಕ ಪರಿಸರದಲ್ಲಿ “ಅನ್ಯರು –ನಮ್ಮವರು ಎಂಬ ಭಿನ್ನತೆಯ ಮನೋಧರ್ಮವನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ದೌರ್ಭಾಗ್ಯವೇ ಸರಿ. ಈ ಭಿನ್ನತೆಯ ಮನೋಧರ್ಮ ನಮ್ಮ ಸಹಜ ಧರ್ಮವಲ್ಲ ಎಂಬುದನ್ನು ಎಂಟನೆಯ ಶತಮಾನದ ಕವಿರಾಜ ಮಾರ್ಗದ ಈ ಸಾಲುಗಳನ್ನು ಗಮನಿಸಿದರೆ ತಿಳಿಯುತ್ತದೆ” “ಕಸವರಮೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಮಂ, ಧರ್ಮಮುಮಂ” ಕಸವರ ಎಂದರೆ ಚಿನ್ನ ಅಥವಾ ಸಂಪತ್ತು. ಇದು ಯಾವುದು ಎಂದರೆ ಪರವಿಚಾರವನ್ನು, ಪರಧರ್ಮದ ಸಾನಿಧ್ಯವನ್ನು ಸಹಿಸಿಕೊಳ್ಳುವುದು ಅಥವಾ ಸಹಿಷ್ಣುತೆಯೇ ಆಗಿದೆ ಎಂಬುದು ಈ ಸಾಲುಗಳತಾತ್ಪರ್ಯ. ಇಂದು ಬ್ರಿಟನ್ ಮತ್ತು ಯೂರೋಪಿನ ಅನೇಕ ದೇಶಗಳು ವಲಸಿಗರನ್ನು ಉದಾರವಾಗಿ ಸ್ವೀಕರಿಸುತ್ತಿರುವುದು ಆದರಣೀಯ. ಯಾವುದೇ ಜನಾಂಗವಾಗಲಿ, ದೇಶವಾಗಲಿ ತನ್ನ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ, ದ್ವೀಪ ದೋಪಾದಿಯಲ್ಲಿ ತಾನಷ್ಟೇ ಸುಖ ಸಮೃದ್ಧಿಯಲ್ಲಿ ಬದುಕಲು ಸಾಧ್ಯವಿಲ್ಲ. ಎಲ್ಲರನ್ನು, ಎಲ್ಲವನ್ನೂ ಒಳಗೊಳ್ಳುವುದೇ ಬದುಕು. ನಿಧಾನವಾಗಿಯಾದರೂ ಈ ಸತ್ಯಕ್ಕೆ ತೆರೆದುಕೊಳ್ಳುತ್ತಿರುವ ಪಾಶ್ಚಾತ್ಯ ಜಗತ್ತು ಸರಿಮಾರ್ಗದಲ್ಲೇ ಇದೆ ಎಂಬುದು ನನ್ನ ಅಭಿಪ್ರಾಯ. 

       -   ಜಿ. ಎಸ್. ಜಯದೇವ್ 

                     * * *


ಅದೆಷ್ಟು ಹೆಸರುಗಳು!

ವಿಜಯನರಸಿಂಹ ಅನಿವಾಸಿಗೆ ಹೊಸಬರಲ್ಲ. ವ್ಯಾಸಂಗದಲ್ಲಿ ವ್ಯಸ್ತರಾಗಿರುವುದರಿಂದ ಅಪರೂಪವಾಗಿದ್ದಾರೆ. ನಾನು ಹೆಚ್ಚಾಗಿ ಅವರ ಪ್ರೇಮ ಕವನಗಳನ್ನೇ ಓದಿದ್ದೇನೆ. ಅವರ ಕವನಗಳಲ್ಲಿ ಭಾವ ನವಿರಾಗಿ ಹರಿಯುತ್ತದೆ. ಅವರ ಭಾವುಕತೆಗೆ ಈ ಕವನಗಳು ಸಾಕ್ಷಿ. ಈ ವಾರದ ಕವನವೂ ಇದಕ್ಕೆ ಹೊರತಲ್ಲ. ಬೇಂದ್ರೆಯವರ ‘ನಾನು ಬಡವಿ ಆತ ಬಡವ’ ದ ಛಾಯೆ ಇಲ್ಲಿದೆ. ಈ ಸಾನೆಟ್ ನಲ್ಲಿ ವಿಜಯ್ ಅವರು ಗಂಡು ಹೆಣ್ಣಿನ ಸಂಬಂಧಕಿರುವ ನಾಮಧೇಯಗಳನ್ನು ಅನ್ವೇಷಿಸುತ್ತ, ಆ ಸಂಬಂಧದ ಸಾರವನ್ನು ಭಟ್ಟಿ ಇಳಿಸಿದ್ದಾರೆ.

–ಸಂ

ನನ್ನ ನಿನ್ನ ಸಂಬಂಧಕೆ ಅದೆಷ್ಟು ಹೆಸರುಗಳು!

ಮೊದಲ ಸಲ ನಿನ್ನ ನೋಡಲು ಬಂದಾಗ ನಾವು ‘ಅಪರಿಚಿತರು’

ಮೊದಲ ಸಲ ನಿನ್ನ ಮಾತನಾಡಿಸಿದಾಗ ‘ನವ ಪರಿಚಿತರು’

ಪದೇ ಪದೇ ನಿನ್ನ ಮಾತನಾಡಿಸಲು ಮನಸಾದಾಗ ‘ಚಿರಪರಿಚಿತರು’

ದಿನೇ ದಿನೇ ತಾಸುಗಟ್ಟಲೆ ಹರಟೆ ಹೊಡೆಯುವಾಗ ‘ಗೆಳೆಯ-ಗೆಳತಿ’

ಒಬ್ಬರನ್ನೊಬ್ಬರು ಒಪ್ಪಿಕೊಂಡಾಗ ‘ವಿವಾಹ ನಿಶ್ಚಿತರು’

ಮದುವೆಯ ಹಸೆಮಣೆಯಲ್ಲಿ ‘ನವ ಜೋಡಿಗಳು’

ಮೊದಲ ರಾತ್ರಿಯಲ್ಲಿ ‘ಪ್ರಣಯ ಪಕ್ಷಿಗಳು’

ಮದುವೆಯ ಮಧುರ ದಿನದ ನಂತರ ‘ನವ ವಿವಾಹಿತರು’

ಸಂಸಾರ ರಥವನ್ನು ಎಳೆಯಲು ಮುಂದಾದಾಗ ‘ಜೋಡೆತ್ತುಗಳು’

ಕಾಲದ ಗತಿಯಲ್ಲಿ, ಜೀವನ ಪ್ರಗತಿಯಲ್ಲಿ ‘ಜೀವನ ಸಂಗಾತಿಗಳು’

ಮಕ್ಕಳನ್ನು ಹಡೆದು ಶುಶ್ರೂಷೆಯಲ್ಲಿ ನೀನು ತಾಯಿ, ಪೋಷಣೆಯಲ್ಲಿ ನಾನು ತಂದೆ

ನನ್ನ ನಿನ್ನ ಸಂಬಂಧಕೆ ಇನ್ನೆಷ್ಟು ಹೆಸರುಗಳನ್ನು ಹುಡುಕಿದರೂ

‘ನಿನಗೆ ನಾನು, ನನಗೆ ನೀನು’ ಅನ್ನುವ ಸಂಬಂಧವೇ ಅಂತಿಮವಲ್ಲವೇ ಗೆಳತಿ?

  • ವಿಜಯನರಸಿಂಹ

ಸುಗಂಧಿ ಅರಳಿಸಿದ ನೆನಪು

-ಅಮಿತಾ ರವಿಕಿರಣ್ 

ಸುಗಂಧಿ ಅರಳಿಸಿದ ನೆನಪು
ನೆನಪುಗಳೆಂದರೇ ಹಾಗೆ, ಬಾಟಲಿಯ ತಳದಲ್ಲಿ ಉಳಿದು ಹೋದ ಅತ್ತರಿನ ಹಾಗೆ. ವಜ್ಜೆಯಾಗದ ಲಗ್ಗೇಜಿನ ಹಾಗೆ,
ಡಬ್ಬಿಯಿಲ್ಲದೆಯೂ ಒಯ್ಯುವ ಬುತ್ತಿ ಅನ್ನದ ಹಾಗೆ. ನೆನಪುಗಳು ಮಧುರ, ಜಟಿಲ. ಕೆಲವೊಮ್ಮೆ ಹಳೆಯ ನೆನಪುಗಳು
ವರ್ತಮಾನವನ್ನು ಸಿಂಗರಿಸಿದರೆ, ಕೆಲವು ಉತ್ಸಾಹವನ್ನ ಭಂಗಿಸುತ್ತವೆ.ಅವು ಬರೀ ನಿರ್ಲಿಪ್ತ ನೆನಪುಗಳು. ಅವಕ್ಕೆ ಯಾವ
ಹಂಗೂ ಇಲ್ಲ. ಕೆಲವಂತೂ ಸುಮ್ಮನೆ ನಿಲ್ಲುವ ಶಿಲಾ ಪ್ರತಿಮೆಗಳಂತೆ ತಟಸ್ಥ.
ಒಂದಷ್ಟು ಮಾತ್ರ ಕಾಡುವ ನೆನಪುಗಳು. ನೆನಾಪಾದಗಲೆಲ್ಲ ನಮ್ಮ ಇಹವನ್ನು ಮರೆಸಿ ನೆನಪಲ್ಲಿ ಉಳಿದು ಬಿಡು ಎಂದು
ಗೋಗರೆಯುವ ನೆನಪುಗಳವು. ಮತ್ತಷ್ಟು ತುಂಟ ನೆನಪುಗಳು ಸುಮ್ಮನೆ ಕುಳಿತಲ್ಲಿ ನಿಂತಲ್ಲಿ ಗಂಟುಮೋರೆಯಲೂ ಘಮ್ಮನೆ
ನಗು ಅರಳಿಸುವಂಥವುಗಳು.


ನೆನಪುಗಳು ಸಿಹಿ ಕಹಿ,ಒಗರು ಇಂತಹ ನವರಸದ ನೆನಪುಗಳ ಕಡತದಂತಿರುವ, ನವಿಲುಗರಿ ಅಂಟಿಸಿದ ನಾಸೀಪುಡಿ
ಬಣ್ಣದ ನನ್ನ ಹಳೆಯ ಡೈರಿಯ ಒಂದಷ್ಟು ಪುಟಗಳು. ಮತ್ತು ಪುಟಗಳ ನಡುವೆ ಒಣಗಿ ಗರಿ ಗರಿ ಹಪ್ಪಳದಂತೆ ಬಿದ್ದುಕೊಂಡ
ಹೂ ಪಕಳೆ, ಎಲೆ,ಗರಿಗಳು .
ನನಗೊಂದು ಅಭ್ಯಾಸ ನಾ ಎಲ್ಲೇ ಹೋಗಲಿ ಆ ಸ್ಥಳದಿಂದ ಒಂದು ಹೂವು ಎಲೆ ಹುಲ್ಲು ಕಡ್ಡಿ ಕಲ್ಲು ಅಂಥದ್ದೇನಾದ್ರೂ ತಂದು ಆ
ಡೈರಿ ಪುಟಗಳ ನಡುವೆ ಇಟ್ಟು ಬಿಡೋದು, ಅದನ್ನು ನೋಡಿದಾಗ, ಕಳೆದು ಹೋದ ಆ ದಿನ ಕಣ್ಣ ಮುಂದೆ ದಿಗ್ಗನೆ ಎದ್ದು
ನಿಲ್ಲುತ್ತದೆ ವರ್ತಮಾನದಲ್ಲಿ ಭೂತಕಾಲ ಜೀವಿಸುವ ಕೆಟ್ಟ ಉತ್ಸಾಹವಿದು.


೧೦ ನೇ ತರಗತಿ ಬಿಳ್ಕೊಡುಗೆ ಸಮಾರಂಭದಲ್ಲಿ ಕೊಟ್ಟ ಕೆಂಪು ಗುಲಾಬಿ, ಅರೆಂಗಡಿಯ ಅತ್ತೆ ಮನೆಯಲ್ಲಿ ಅರಳುವ ಆ
ಕೋಳಿಮೊಟ್ಟೆ ಹೂವಿನ ಪಕಳಿ, ನನ್ನ ಹಳೆಮನೆಯ ದಾರಿಯಲ್ಲಿ ಸಿಗುವ ಸಕ್ಕರಿ ನಾಗೇಶಪ್ಪನ ಮನೆಯ ಅಂಗಳದಲ್ಲಿ
ಅರಳುತಿದ್ದ ಗುಮ್ಮೋಹರ್, ಬೂರುಗ ಮರದ ಕೆಂಪು,ಗುಲಾಬಿ ಹೂ ಗಳು, ಮಲ್ಲಿಗೆಯನ್ನು ಹೋಲುವ ಕವಳಿ ಹೂಗಳು,
ಸಂಗೀತ ವಿದ್ಯಾಲಯದಲ್ಲಿ ನನ್ನ ಜನ್ಮದಿನದಂದು ಮೊತ್ತ ಮೊದಲ ಬಾರಿಗೆ ಆ ಮಿಂಚು ಕಂಗಳ ಹುಡುಗ ತಂದಿತ್ತ ಹಳದಿ
ಹೂಗಳ ಪುಷ್ಪ ಗುಚ್ಚ ಎಲ್ಲವು ನನ್ನ ಸಂಗ್ರಹದಲ್ಲಿ ಸೇಫ್ ಸೇಫ್. ಹನಿಮೂನಿಗೆ ಹೋದಾಗ ಮಡಿಕೇರಿಯ ರಾಜಸೀಟ್ ಪಕ್ಕದ
ಹೆಸರು ಗೊತ್ತಿರದ ದೊಡ್ಡದೊಂದು ವೃಕ್ಷದ ಮುಳ್ಳು ಮುಳ್ಳು ಎಲೆಯನ್ನು ಕೂಡ ಸೂಟಕೆಸಿನಲ್ಲಿ ಹಾಕಿಕೊಂಡು ಬಂದಿದ್ದೆ.
ಪತಿದೇವರು ಯುಕೆ ಗೆ ಹೊರಡುವಾಗ ಅದನ್ನು ಅದರಲ್ಲೇ ಇಟ್ಟು, ತೆಗೆಯಬೇಡಿ ಎಂದು ವಿನಂತಿಸಿದ್ದೆ ಇವರು
ಅದನ್ನು ಪಾಲಿಸಿದ್ದರೂ ಕೂಡ. ನಾ ಇಲ್ಲಿ ಬಂದಾಗ ಮತ್ತೆ ಅದನ್ನು ನೋಡಿದಾಗ ನನಗಾದ ಖುಷಿ
ಅಷ್ಟಿಷ್ಟಲ್ಲ.

ಇದೆಲ್ಲಕ್ಕಿಂತ ನನ್ನ ಮನಸ್ಸ ತುಂಬಾ ತುಂಬಿಕೊಂಡು ಅದೆಷ್ಟೋ ಮಧುರ ಸಂಗೀತಮಯ ಸಂಜೆಗಳಿಗೆ ನನ್ನ ಜೊತೆಯಾದ
ಹೂವೊಂದಿದೆ, ಮಳೆಗಾಲದಲ್ಲಿ ಅದೂ ಶ್ರಾವಣದಲ್ಲಿ ಅರಳುವ ಸುಗಂಧಿ ಹೂ.
ನನ್ನ ಅಮ್ಮ ಹೇಳುತ್ತಾರೆ ಶ್ರಾವಣದಲ್ಲಿ ಎಲ್ಲಾ ಹೂಗಳು ತವರುಮನೆಗೆ ಹೋಗುತ್ತವಂತೆ, ಅದಕ್ಕೆ ಪೂಜೆಗೆ ಹೂವಿರುವುದಿಲ್ಲ
ಅಂತ. ಆದರೆ ಸಂಜೆ ಹೊತ್ತಿಗೆ
 ಅದೊಂದು ಶ್ವೇತ ಸುಂದರಿ ಸುಗಂಧಿ ಅರಳಿದಳೆಂದರೆ ಸಾಕು, ಮನೆಯ ಸುತ್ತಮುತ್ತಲು ಕಂಪು ಬಿಮ್ಮನೆ ಆವರಿಸಿಕೊಳ್ಳುತ್ತದೆ.
 ಹೂವಿಲ್ಲ ಅನ್ನುವ ಖೇದ ಬೇಡ ಅನ್ನುವಂತೆ ಹಿತ್ತಲ ಮೂಲೆಯಲ್ಲಿ ಅರಳಿ ನಗುತ್ತದೆ.


ಹೂಗಳ ಕುರಿತು ಹುಚ್ಚು ಪ್ರೀತಿ ಇದ್ದ ನನಗೆ, ಸುಗಂಧಿ ಹೂವಿನ ಮೊದಲ ದರ್ಶನ ಆಗಿದ್ದು, ರಜೆಯಲ್ಲಿ ದೊಡ್ಡಮ್ಮನ ಮನೆಗೆ
ಹೋದಾಗ. ಹಿತ್ತಲಿಗೆ ಹೋಗಿ ಬಿಳಿ ಬಿಳಿ ಮೊಗ್ಗುಗಳನ್ನು ಕೊಯ್ದು ತಂದ ದೊಡ್ಡಮ್ಮ ಶನಿವಾರ ಸಂಜೆಯ ಭಜನೆಗೆ ಹೋಗುವ
ಮೊದಲು ನೀರಲ್ಲಿ ತೋಯಿಸಿಟ್ಟ ಬಾಳೆನಾರಿನಲ್ಲಿ ಮಲ್ಲಿಗೆ ಕಟ್ಟಿದಂತೆ ಆ ಹೂಗಳನ್ನೂ ದಂಡೆ ಕಟ್ಟಿ ವೆಂಕಟರಮಣನ ಗುಡಿಗೆ
ಕೊಡಲು ಪುಟ್ಟ ಬಾಳೆಲೆಯಲ್ಲಿ ಸುತ್ತಿ ಕೊಡುತ್ತಿದ್ದರು.
ಎಂಥಾ ನಾಜೂಕು, ಮುಟ್ಟಿದರೆ ಎಲ್ಲಿ ಮಾಸುತ್ತದೊ ಅನ್ನುವಂತಹ ಚೆಲುವು ಈ ಪುಷ್ಪಕ್ಕೆ.
ಆ ಗಿಡದ ಗೆಡ್ಡೆ ತಂದು ನಮ್ಮ ಹಿತ್ತಲಲ್ಲಿ ನೆಟ್ಟು, ಹೂವಿಗಾಗಿ ನಾನು ತಂಗಿ ಮತ್ತು ಅಮ್ಮ ಮೂರು ವರ್ಷ ಕಾದಿದ್ದೆವು.
ಆ ಹೂವು ನನ್ನ ಸಂಗೀತಕ್ಕೊರ (ಸಂಗೀತ ಗುರುಗಳು) ಮನೆಯಲ್ಲಿ ಇತ್ತು. ಮಳೆಗಾಲದಲ್ಲಿ ಗುರುವಾರ ಸಂಜೆಯ ಭಜನೆ,
ತಾಳದ ನಾದ ಮಳೆ ಸದ್ದಿನೊಂದಿಗೆ ಈ ಸುಗಂಧಿ ಘಮ. ನಾನು ಅನುಭವಿಸಿದ ಆ ಧನ್ಯತೆಯ ವಿವರಿಸಲು ಪದಗಳು
ಸಿಗುತ್ತಿಲ್ಲ.

ಭಜನೆ ಮುಗಿದು ಪ್ರಸಾದ ಕೊಡುತಿದ್ದ ಸಮಯದಲ್ಲಿ ಅಕ್ಕೋರು ಒಂದು ಹೂ ಕೊಟ್ಟರೂ ಕೊಡಬಹುದು ಅಂತ ಆಸೆ ಕಣ್ಣಿನಿಂದ
ನೋಡುತ್ತಿದ್ದೆ ಆ ಶುಭ್ರ ಸುಂದರಿ ಸುಗಂಧಿಯತ್ತ. ಆ ಹೂವು ಪ್ರಸಾದದೊಂದಿಗೆ ನಮ್ಮ ಕೈಗೆ ಸಿಕ್ಕಿತೋ. ಅದು ನಮ್ಮ lucky day ಆಗಿರುತ್ತಿತ್ತು. ಮೊದಲೆರಡು ಬಾರಿ
ಆಘ್ರಾಣಿಸಿ,ನಂತರ ನನ್ನಷ್ಟೇ ಇದ್ದ ನನ್ನ ಜಡೆಯ ಒಂದು ಎಳೆ ಯ ಹಿಡಿದು ಮೆತ್ತಗೆ ಸಿಲುಕಿಸಿ ಮನೇ ಮುಟ್ಟುವ ತನಕ ನೂರು
ಬಾರಿ ಮುಟ್ಟಿ ನೋಡಿ ಆ ರಾತ್ರಿ ಮಲಗುವ ಮುನ್ನ ಡೈರಿ ಪುಟದಲ್ಲಿ ಹಾಕಿ ಮುಚ್ಚಿಟ್ಟರೆ ನನ್ನ ಆ ದಿನ ಸಾರ್ಥಕ. ಗುರುವಾರ
ಮುಡಿದ ಹೂ ಘಮ ಶನಿವಾರದ ತನಕ ಮಂದ ಮಂದ.
ಈಗ ಮಳೆಗಾಲ, ಪ್ರತಿ ಮಳೆಗಾಲದಲ್ಲೂ ಅಮ್ಮ ಅಥವಾ ತಂಗಿ ಈ ಹೂವಿನ ಒಂದಷ್ಟು ಫೋಟೋ ಕಳಿಸಿದಾಗೆಲ್ಲ
ಈ ಸುಗಂಧಿ ಹೂವಿನ ಸುತ್ತಲಿನ ಎಲ್ಲಾ ನೆನಪಿನ ಪಕಳೆಗಳು ಅರಳುತ್ತವೆ. ಜೊತೆಗೆ ನನ್ನ ತವರುಮನೆಯ ಸುಖ
ಸಮಾಧಾನಗಳೂ.
ಮತ್ತೆ ಈ ಸುಗಂಧಿ ಹೀಗೆ ಪ್ರತಿ ಬಾರಿ ನೆನೆಸಿದಾಗಲೆಲ್ಲ ಕಾಡುತ್ತಾಳೆ.

ಸ್ಕಾಟ್ ಲ್ಯಾನ್ಡ್ ಗೆ ಒಂದು ಸುತ್ತು – ಡಾ. ರಾಮಶರಣ

ಗ್ರೇಟ್ ಬ್ರಿಟನ್ನಿಗೆ ತುರಾಯಿಯಂತಿರುವ ಸ್ಕಾಟ್ ಲ್ಯಾನ್ಡ್, ಪ್ರಕೃತಿ ಸೌಂದರ್ಯಕ್ಕೂ ಶಿಖರಪ್ರಾಯವಾಗಿದೆ ಈ ದೇಶಕ್ಕೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿನ ಉತ್ತರದ ನಗರವಾದ ಇನ್ವರ್ನೆಸ್ ನ ಉತ್ತರಕ್ಕೆ ಗುಡ್ಡ ಹಾಗು ಸರೋವರಗಳೇ (ಇಲ್ಲಿ ಇದಕ್ಕೆ ಲಾಕ್ ಎಂದು ಕರೆಯುತ್ತಾರೆ) ತುಂಬಿರುವ ಹರವಾದ ಭೂ ಪ್ರದೇಶ ಪ್ರಕೃತಿ ಆರಾಧಕರಿಗೆ, ಚಾರಣಿಗರಿಗೆ ಆತ್ಮೀಯವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಈ ಭೂ ಪ್ರದೇಶವನ್ನು ಸುತ್ತಿರುಗಲು ಸ್ಕಾಟ್ ಲ್ಯಾನ್ಡ್ ರೂಟ್ ೫೦೦ ಎಂಬ ರಸ್ತೆಯನ್ನು ನಿರ್ಮಿಸಿ, ಇಲ್ಲಿನ ಪ್ರವಾಸಿ ಇಲಾಖೆಯ ಮುಖಾಂತರ ಪ್ರಚಲಿತಗೊಳಿಸಲಾಗಿದೆ. ಈ ರಸ್ತೆಗೆ ಹಲವು ಟಿಸಿಲುಗಲ್ಲಿದ್ದು, ಕೆಲವೇ ದಿನಗಳಿಂದ, ತಿಂಗಳುಗಳ ಕಾಲ ಈ ಭಾಗದ ವಿಹಂಗಮ ನೋಟವನ್ನೋ, ವಿವರವಾದ ಪರಿಚಯವನ್ನೋ ನಮಗಾದಷ್ಟು ಮಾಡಿಕೊಳ್ಳ ಬಹುದು. ಪತ್ರಿಕೆಯೊಂದರ ಪ್ರವಾಸೀ ವಿಭಾಗದಲ್ಲಿ ಈ ಪಯಣ ಜಗತ್ತಿನ ಅತಿ ಸುಂದರ ಹತ್ತು ರಸ್ತೆ ಪಯಣಗಲ್ಲಿ ಒಂದು ಎಂದು ಓದಿದ್ದೆ. ಹಿತ್ತಲಲ್ಲೇ ರಸ್ತೆ ಪಯಣಕ್ಕೆ ಇಂತಹ ಅವಕಾಶವಿರುವಾಗ ಹೋಗಿಯೇ ಬಿಡೋಣ ಎಂದು ನನ್ನ ಗೆಳೆಯರ ಮುಂದೆ ಪ್ರಸ್ತಾವಿಸಿದೆ. ಗೆಳೆಯರಾದ ಕೇಶವ ಕುಲಕರ್ಣಿ ಹಾಗು ದೇವ್ ಪೈ ಪರಿವಾರದೊಂದಿಗೆ ಹಿಂದೆ ಕೆಲವು ಪ್ರವಾಸಗಳನ್ನು ಜೊತೆಯಲ್ಲಿ ಮಾಡಿದ್ದೆವು. ನಮ್ಮ ಅಭಿರುಚಿಗಳು, ಮಕ್ಕಳ ನಡುವಿನ ಗೆಳೆತನಗಳೂ ಈ ಪ್ರವಾಸಗಳಿಗೆ ಪೂರಕವಾಗಿದ್ದು ಅನುಕೂಲವೇ ಆಗಿತ್ತು. ಇನ್ನೊಬ್ಬ ಗೆಳೆಯ ದಿನೇಶ್ ಯಾವುದೋ ಕಾರಣಕ್ಕಾಗಿ ನಮಗೆ ಸಾಥ್ ನೀಡಲಾಗದು ಎಂದು ಕೈಕೊಟ್ಟ. 

ಇಂತಹ ಪ್ರಯಾಣ ಮಾಡಲು ಕೆಲವು ಮುಹೂರ್ತಗಳನ್ನು ಹಾಕಿಕೊಳ್ಳುವುದು ಅವಶ್ಯ ಎಂಬುದು ನಮ್ಮ ಅನುಭವ. ಪ್ರಯಾಣದ ರಸ್ತೆಯ ಸಮೀಕ್ಷೆಯಾಗಬೇಕು. ಈಗ ಅಂತರ್ಜಾಲದಲ್ಲೇ ಈ ಸಮೀಕ್ಷೆ ಸುಲಭ ಸಾಧ್ಯ. ದಾರಿ ಗುರುತು ಹಾಕಿಕೊಂಡರೆ ಸಾಕೇ? ಆ ರಸ್ತೆಯಗುಂಟ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಬೇಕು; ಇಳಿದುಕೊಳ್ಳಲು ವಸತಿ ಗೃಹಗಳ ವ್ಯವಸ್ಥೆಯಾಗಬೇಕು. ಎಲ್ಲಕ್ಕಿಂತಲೂ ಹೆಚ್ಚು ಪ್ರವಾಸದಗುಂಟ ಮೆಲ್ಲಲು, ಮೆಲಕು ಹಾಕಲು ಪ್ರಶಸ್ತವಾದ ಜಾಗಗಳ ಆಯ್ಕೆಯೂ ಆಗಬೇಕು. ಇದ್ಕಕೆಂದೇ ಒಂದು ದಿವಸವನ್ನು ಮೀಸಲಾಗಿಡುತ್ತೇವೆ. ಮೂರು ಲ್ಯಾಪ್ ಟಾಪ್ ಗಳನ್ನು ಇಟ್ಟುಕೊಂಡು, ಚಹಾ ಕುಡಿಯುತ್ತ, ವಿವರವಾದ ಯೋಜನೆ ಸುಮಾರು ಮೂರು ನಾಲ್ಕು ತಿಂಗಳುಗಳ ಮೊದಲು ತಯಾರಾಗುತ್ತದೆ. ವಸತಿ ಗೃಹಗಳ ಆರಕ್ಷಣೆ ಈ ಹಂತದಲ್ಲೇ ಮುಗಿದುಹೋಗುತ್ತದೆ. ಪ್ರೇಕ್ಷಣೀಯ ಸ್ಥಳಗಳ ಆಯ್ಕೆ ರಮಣೀಯರು ಉತ್ಸಾಹದಿಂದ ಮಾಡುವುದರಿಂದ, ಅವರಿಗೆ ಅದರ ಜವಾಬ್ದಾರಿ ಕೊಡುವುದರಿಂದ ಪ್ರವಾಸ ಸುರಳೀತವಾಗುತ್ತದೆ ಎಂಬುದು ನಮ್ಮ ಅನುಭವ. 

ಮೇ ತಿಂಗಳ ಕೊನೆಯ ಬ್ಯಾಂಕ್ ಹಾಲಿಡೇ ವಾರಾಂತ್ಯದಲ್ಲಿ ಈ ಪ್ರವಾಸ ಕೈಕೊಳ್ಳುವುದು ಎಂಬ ನಿರ್ಧಾರ ಮಾಡಿದೆವು. ಮಕ್ಕಳ ವಾರ್ಷಿಕ ಪರೀಕ್ಷೆ ಮುಗಿದಿರುವುದರಿಂದ ಅವರಿಗೂ ಶಾಲಾ ಕೆಲಸದಿಂದ ಮನಸ್ಸು ನಿರಾಳವಾಗಿರುವುದು ಇದಕ್ಕೆ ಇನ್ನೊಂದು ಕಾರಣವಾಗಿತ್ತು. ಹೊರಡುವ ಹಿಂದಿನ ದಿನ ರಾತ್ರಿ ಎಲ್ಲರು ಡಾರ್ಬಿಯಲ್ಲಿರುವ ನಮ್ಮ ಮನೆಯಲ್ಲಿ ಒಟ್ಟಾಗುವುದು ಎಂದು ನಿಶ್ಚಯಿಸಿದೆವು. ಪ್ರವಾಸದ ದಿನ ಎರಡು ಕಾರುಗಳಲ್ಲಿ ಹತ್ತು ಜನ ಡಾರ್ಬಿಯಿಂದ ಇನ್ವರ್ನೆಸ್ಸಿಗೆ ಪ್ರಯಾಣ ಮಾಡಿ ತಂಗುವುದು ನಮ್ಮ ಯೋಜನೆ. ಎರಡನೇ ದಿನ ಬೆಳಿಗ್ಗೆ ನಗರಕ್ಕೊಂದು ಸುತ್ತು ಹಾಕಿ, ಗ್ಲೆನ್ ಮೊರಂಜಿ ವ್ಹಿಸ್ಕಿ ಭಟ್ಟಿ ಕೇಂದ್ರಕ್ಕೆ ಭೇಟಿ. ಅದಾದಮೇಲೆ ಡನ್ರೋಬಿನ್ ಕಾಸಲ್ ನೋಡಿ, ತುತ್ತ ತುದಿಯಲ್ಲಿರುವ ಹಳ್ಳಿ ಜಾನ್ ಓ ಗ್ರೋಟ್ಸ್ ನ್ನು ಕಂಡು ಪಕ್ಕದ ಹಳ್ಳಿಯಲ್ಲಿ ತಂಗುವುದೆಂದು ನಿಶ್ಚಯಿಸಿದೆವು. ಮೂರನೇ ದಿನ  ಸ್ಕಾಟ್ ಲ್ಯಾನ್ಡ್ ನ ಉತ್ತರ ತೀರದಗುಂಟ ಚಲಿಸಿ, ಪಶ್ಚಿಮ ಭಾಗದಲ್ಲಿ ಕೆಳಗಿಳಿದು ಉಲ್ಲಾಪೂಲ್ ಎಂಬ ಊರಿನಲ್ಲಿ ಮುಕ್ಕಾಂ ಹಾಕಲು ವಸತಿ ಗೃಹದ ಬುಕ್ಕಿಂಗ್ ಮಾಡಿದೆವು. ನಾಲ್ಕನೇ ದಿನ ಉಲ್ಲಾಪೂಲ್ ಹತ್ತಿರದ ನದಿಯ ಕಣಿವೆಯಲ್ಲಿ ನಿರ್ಮಿಸಿರುವ ಪ್ರಕೃತಿಧಾಮವನ್ನು ವೀಕ್ಷಿಸಿ ಮನೆಗೆ ಮರಳುವುದೆಂದು ನಿರ್ಧರಿಸಿದೆವು. 
ಪ್ರವಾಸದ ಹಿಂದಿನ ದಿನ ನಮ್ಮನೆಯಲ್ಲಿ ಹಬ್ಬದ ವಾತಾವರಣ. ಬೆಳಗ್ಗೆ ಬೇಗ ಎದ್ದು ಹೊರಟಾಗ, ಮಕ್ಕಳ ಕಣ್ಣಲ್ಲಿನ್ನೂ  ಜೋಂಪು. ನಮ್ಮಲ್ಲಿಂದ ಸ್ಕಾಟ್ ಲ್ಯಾನ್ಡ್ ಗೆ M6 ಮುಖ್ಯ ಹೆದ್ದಾರಿ. ಮುಕ್ಕಾಲು ಗಂಟೆಯಲ್ಲಿ ಗೆಳೆಯ ದಿನೇಶನ ಮನೆ. ಅಲ್ಲಿಗೇ ನಮ್ಮ ಬೆಳಗಿನ ತಿಂಡಿಗಾಗಿ ದಾಳಿ ಮಾಡುವುದಾಗಿ ಮುನ್ಸೂಚನೆ ಕೊಟ್ಟಿದ್ದೆವು. ತಲುಪಿದಾಗ ಎಲ್ಲರ ಮೆಚ್ಚಿನ ಶಲನ್ ಮಾಡಿದ ಬಿಸಿ ಬಿಸಿ ಮಂಗಳೂರು ಬನ್ಸ್, ಖಡಕ್ ಚಹಾ ನಮ್ಮನ್ನು ಕಾಯುತ್ತಿತ್ತು.  M6 ಲ್ಯಾನ್ಕಾಸ್ಟರ್ ದಾಟಿದ ಮೇಲೆ, ಗುಡ್ಡಗಳ ನಡುವೆ ಬಳಕುತ್ತ, ತಬ್ಬಿಕೊಂಡು ಸಾಗುವಾಗ ಬೇಂದ್ರೆ ಅಜ್ಜನ “ಹರನ ತೊಡೆಯಿಂದ ನುಸುಳಿ ಬಾ” ಎಂಬ ಸಾಲು ನೆನಪಾಗುತ್ತದೆ. ಹೆದರ್ ಪೊದೆಗಳ ಹೊದಿಕೆಯಲ್ಲಿ ಮಲಗಿರುವ ನುಣುಪಾದ ಬೆಟ್ಟಗಳ ಸೌಂದರ್ಯ ಹೆದರ್ ಹೂ ಬಿಟ್ಟಾಗ ನೂರ್ಪಾಲು ಹೆಚ್ಚಾಗುತ್ತದೆ. ಹೆದ್ದಾರಿಯಲ್ಲಿ ಸಿಗುವ ಆನಂಡೇಲ್ ಸರ್ವೀಸ್ ಸ್ಥಾನ ಪ್ರಯಾಣಿಗರ ಪಾಲಿಗೆ ಓಯಸಿಸ್. ಇಲ್ಲಿರುವ ಕೆರೆಯನ್ನು ನೋಡುತ್ತಾ, ಹಬ್ಬಿದ ಹಸಿರನ್ನು ಆಸ್ವಾದಿಸುತ್ತ, ಕಾಫಿ ಹೀರುತ್ತ, ರಸ್ತೆಯ ಏಕತಾನತೆಯನ್ನು ಮರೆಯಬಹುದು. 

ಮಧ್ಯಾಹ್ನದ ಊಟದ ಸಮಯಕ್ಕೆ ಗ್ಲ್ಯಾಸ್ಗೋ ನಗರದ ಬುಡ ತಲುಪಿದ್ದೆವು. ಊಟದ ನಂತರ ಒಂದು ಚಿಕ್ಕ ನಿದ್ದೆ ಬೇಕೆಂದು ದೇವ್ ನ ಮನಸ್ಸು ಬಯಸುತ್ತದೆ, ಡ್ರೈವ್ ಮಾಡುವಾಗ ಜೋಂಪು ಹತ್ತದಿರಲೆಂದು. ಆತ ಕಾರಿನಲ್ಲಿ ಪವಡಿಸಿದರೆ, ನಮ್ಮ ಕ್ರಿಕೆಟ್ ಹುಚ್ಚಿನ ಚಿಣ್ಣರು (ಕೇಶವ್ ಈ ವಿಷಯದಲ್ಲಿ ಚಿಣ್ಣನೇ) ಸರ್ವಿಸ್ ಸ್ಟೇಷನ್ ಪಕ್ಕದ ಹುಲ್ಲು ಹಾಸಿನಲ್ಲಿ ಆಡಿ ಮೈ ಕೈ ಚುರುಕಾಗಿಸಿಕೊಂಡರು. ಗ್ಲಾಸ್ಗೋ ಸಮೀಪಿಸುತ್ತಿದ್ದಂತೆ ಕಾಣುವ ಗಾಳಿ ಗಿರಣಿಗಳ ಮಂದೆ ಪರ್ಯಾಯ ವಿದ್ಯುಚ್ಛಕ್ತಿ ಕೊಯ್ಲಿನ ಅನುಭವ, ನಮ್ಮ ಕಾರಿನ ಪ್ರದೂಷಣೆ ಇವನ್ನೆಲ್ಲ ತೂಗಿಸಿ ನೋಡುವ ಅವಕಾಶ ಮಾಡಿಕೊಡುತ್ತದೆ. ಹಾಡುಗಳನ್ನು ಕೇಳುತ್ತ, ಸ್ಕಾಟ್ ಲ್ಯಾನ್ಡ್ ನ ಹಸಿರಿನ ಹಾವೇ ಕುಡಿಯುತ್ತ ಸ್ಟರ್ಲಿಂಗ್ ನಗರವನ್ನು ದಾಟುತ್ತಿದ್ದಂತೆ ಹೈಲ್ಯಾನ್ಡ್ ಘಟ್ಟ ಶುರುವಾಗುತ್ತದೆ. ಕಣಿವೆಯ ಬುಡದಲ್ಲಿ ತೆವಳುವ ನದಿಗಳು, ಪಕ್ಕದಲ್ಲಿ ಮಲಗಿರುವ ರೈಲಿನ ಹಳಿಗಳು, ಥಟ್ಟನೆ ಎದುರಾಗುವ ಮೋಡದ ತುಣುಕುಗಳು, ಆಗಾಗ ಮುಖಕ್ಕೆ ಬಡಿಯುವ ತುಂತುರು ಹನಿಗಳು ಯಾವುದೇ ಅರಸಿಕನನ್ನೂ ಭಾವುಕನಾಗಿಸುವ ದೃಶ್ಯಗಳು. 

(ನಕ್ಷೆ ಕೃಪೆ : ವಿಕಿಪೀಡಿಯಾ)

ನಮ್ಮ ಮೂಲ ಧ್ಯೇಯ ರೂಟ್ ೫೦೦ನ ಅನ್ವೇಷಣೆ ಯಾಗಿದ್ದರಿಂದ, ಇನ್ವರ್ನೆಸ್ ನಗರದ ಕಾಸಲ್ ದರ್ಶನ  ಮುಗಿಸಿ ಟೈನ್ ಎಂಬಲ್ಲಿರುವ ಗ್ಲೆನ್ ಮೊರಂಜಿ ವ್ಹಿಸ್ಕಿ ಭಟ್ಟಿಗೆ ಹೊರಟೆವು. ಗ್ಲೆನ್ ಮೊರಂಜಿ ವ್ಹಿಸ್ಕಿಯ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ವಿಶಿಷ್ಟ ಹಳದಿ ಬಣ್ಣದ ಲೇಬಲ್ ಇದರ ಗುರುತಿನ ಚೀಟಿ, ವ್ಹಿಸ್ಕಿ ಅಭಿಮಾನಿಗಳಿಗೆ ಚಿರಪರಿಚಿತ. ಇದರ ಸುತ್ತಲೂ ಸುಂದರ ಉದ್ಯಾನವನವಿದೆ. ನಾವು ಹೋದ ದಿನ ಇದು ಮುಚ್ಚಿದ್ದರಿಂದ ಭಟ್ಟಿಯ ಒಳಗಡೆ ಹೋಗುವ, ವ್ಹಿಸ್ಕಿಯ ರುಚಿ ಅನುಭವಿಸುವ ಅವಕಾಶದಿಂದ ವಂಚಿತರಾದೆವು. ಮಕ್ಕಳು ಭಟ್ಟಿಯ ಹೊರಗಿನ ಹುಲ್ಲಿನ ದಿಬ್ಬದಿಂದ ಉರುಳಿ ಮಜಾ ತೆಗೆದುಕೊಂಡರು. ಇಲ್ಲಿಗೆ ಬರುವ ಹಾದಿಯಲ್ಲಿ ವಿಶೇಷವಾದದ್ದೇನೂ  ಕಾಣಲಿಲ್ಲ. ಗ್ಲೆನ್ ಮೊರಂಜಿಯಿಂದ ಮುಂದಿನ ಹಾದಿ ಮನಮೋಹಕವಾಗಿತ್ತು. ಬಲ ಭಾಗದಲ್ಲಿ ಸಮುದ್ರ ಮರಗಳ ನಡುವೆ ಕಣ್ಣಾಮುಚ್ಚಾಲೆ ಆಡುತ್ತ ತುಂಟ ನಗೆ ಬೀರುತ್ತಿತ್ತು. ಮತ್ತೆ, ಥಟ್ಟನೆ ಖಾರಿಯಾಗಿ ರಸ್ತೆಗೆ ಅಡ್ಡಾಗಿ ಮಲಗುತ್ತಿತ್ತು. ಇದೇನು ಅಲೆಗಳ ಅಬ್ಬರದ ಸಮುದ್ರವಲ್ಲ, ನಮ್ಮಲ್ಲಿ ನದಿಯೊಂದು ಅಡ್ಡ ಬಂದಂತನಿಸುತ್ತದೆ. 

(ಖಾರಿಯ ನೋಟ)

         

(ಗ್ಲೇನ್ ಮೊರಂಜಿ ಭಟ್ಟಿಯ ಪ್ರವೇಶದ್ವಾರ)

ಡನ್ರೋಬಿನ್ ಕಾಸಲ್ : ಸದರ್ಲೆಂಡ್ ಎಂಬ ವಂಶಕ್ಕೆ ಸೇರಿದ ಈ ಅರಮನೆ ರೂಟ್ ೫೦೦ ರಲ್ಲಿರುವ ಎರಡು ಪ್ರಮುಖ ಮಾನವ ನಿರ್ಮಿತ ರಚನೆಗಳಲ್ಲಿ ಒಂದೆಂಬುದು ನನ್ನ ಅಭಿಪ್ರಾಯ. ಡಿಸ್ನಿ ಅರಮನೆಯನ್ನು ಹೋಲುವ ರಚನೆ ಇದಾಗಿದ್ದು, ಯಾವುದೇ ಪಾಶ್ಚಾತ್ಯ ಪಾಳೇಗಾರರ ನಿವಾಸದಂತೇ ಇದೆ. ೧೫ನೇ ಶತಮಾನದಲ್ಲಿ ನಿರ್ಮಿತ ಅರಮನೆಯ ಒಳ ಹೊರಗನ್ನು ನೋಡುವ ಅವಕಾಶವಿದೆ. ದಿಬ್ಬದ ಮೇಲಿರುವ ಅರಮನೆ, ಸಮುದ್ರ ವೀಕ್ಷಣೆಗೆ ಆಯಕಟ್ಟಿನ ಜಾಗದಲ್ಲಿದೆ. ಬುಡದಲ್ಲಿರುವ ಫ್ರೆಂಚ್ ಪ್ರಭಾವಿತ ತೋಟ ಹಸಿರಾಗಿ ನಳನಳಿಸುತ್ತಿತ್ತು. ಇಲ್ಲಿ ನಡೆಯುವ ಹದ್ದು-ಗಿಡುಗಗಳ ಪ್ರದರ್ಶನ ನಮಗೆ ಈ ಭವ್ಯ ಪಕ್ಷಿಗಳನ್ನು ಮುಟ್ಟಿ ಮಾತಾಡಿಸುವ ಅವಕಾಶ ಮಾಡಿಕೊಟ್ಟಿತು, ಮಕ್ಕಳಿಗೆ ಇದು ಉತ್ತಮ ಅನುಭವ. 

ಡನ್ರೋಬಿನ್ ಕಾಸಲ್ ನಿಂದ ಜಾನ್ ಓ ಗ್ರೋಟ್ಸ್ ಗೆ ಹೋಗುವ ಹಾದಿ  ರುದ್ರರಮಣೀಯವಾದದ್ದು. ರಸ್ತೆಯ ಬಲಬದಿಗೆ ಆಳವಾದ ಪ್ರಪಾತದ ಬುಡದಲ್ಲಿ ಸಮುದ್ರ ಬಾಯ್ತೆರೆದು ಕಾಯುತ್ತಿರುತ್ತದೆ. ಈ ರಸ್ತೆಗಳ ತಿರುವುಗಳು ನನಗೆ ಖಂಡಾಲಾ ಘಾಟಿಯನ್ನು ನೆನಪಿಸಿದವು. ಮಧ್ಯದಲ್ಲಿ ವಿಕ್ ಎಂಬ ಪುಟ್ಟ ಊರೊಂದು ಸಿಗುತ್ತದೆ. ಇಲ್ಲಿ ಬ್ರಿಟನ್ನಿನ ಉತ್ತರ ತುದಿಯ ಆಸ್ಪತ್ರೆ ಇದೆ (ಶೆಟ್ ಲ್ಯಾನ್ಡ್ ಆಸ್ಪತ್ರೆ ದ್ವೀಪ ಸಮೂಹಗಳಲ್ಲಿದ್ದು, ವಿಕ್ ನ ಆಸ್ಪತ್ರೆ ಬ್ರಿಟನ್ನಿನ ಮುಖ್ಯ ಭಾಗದ ಉತ್ತರ ತುದಿಯಲ್ಲಿದೆ). ೧೯೯೯ ರಲ್ಲಿ ಉದ್ಯೋಗಾರ್ಥಿಯಾಗಿ ಗುಜರಾಯಿಸಿದ ನೂರಾರು ಆಸ್ಪತ್ರೆಗಳ ಲಿಸ್ಟಿನಲ್ಲಿ ವಿಕ್ ಆಸ್ಪತ್ರೆಯೂ  ಇದ್ದದ್ದು ನೆನಪಾಯಿತು. ಆಗ, ನಾನೊಮ್ಮೆ ಈ ಊರನ್ನು ಹಾದು ಹೋಗುತ್ತೇನೆಂದೂ ಊಹಿಸಿರಲಿಲ್ಲ. 

ಜಾನ್ ಓ ಗ್ರೋಟ್ಸ್ : ಸಾಹಸ ಪ್ರಿಯರಿಗೆ, ಆಂಗ್ಲರಿಗೆ, ಇಲ್ಲಿ ನೆಲೆಸಿರುವ ಪರಕೀಯರಿಗೆ ಈ ಊರು ಪರಿಚಿತ. ಇದು ಬ್ರಿಟನ್ನಿನ ತುತ್ತ ತುದಿಯ ಊರು. ನೈಋತ್ಯ ಮೂಲೆಯಲ್ಲಿರುವ ಲ್ಯಾನ್ಡ್ಸ್ ಎಂಡ್ ನಿಂದ ಇಲ್ಲಿಗೆ ಸಾಹಸದ ತೆವಲಿನವರು, ಉತ್ತಮ ಕೆಲಸಕ್ಕೆ ಚಂದಾ ಎತ್ತುವವರು ನಡೆದೋ, ಸೈಕಲ್ ಸವಾರರಾಗಿ ಬರುವುದು ವಾಡಿಕೆ. ಇದು ಚಿಕ್ಕ ಮೀನುಗಾರಿಕಾ ಬಂದರು. ಇಲ್ಲಿಂದ ಒರ್ಕ್ನಿ ದ್ವೀಪಗಳಿಗೆ ಹೋಗಲು ಅನುಕೂಲತೆ ಇದೆ. ಇಲ್ಲಿ ನಿಲ್ಲಿಸಿರುವ ಕೈಕಂಬ ಜಗತ್ತಿನ ಇತರ ಪ್ರಮುಖ ನಗರಗಳಿಗಿರುವ ದೂರವನ್ನು, ದಿಕ್ಸೂಚಿಯಾಗಿ  ಇಲ್ಲಿನ ನೀರವತೆಯಲ್ಲೂ ನಗರಗಳ ಗಿಜಿಗಿಜಿಯನ್ನು ಮಾರ್ದನಿಸುವ ಪ್ರಯತ್ನ ಮಾಡುತ್ತದೆ. ನನಗೆ ಪಕ್ಕದ ದಿಬ್ಬದಾಚೆ ಸಮುದ್ರದಲ್ಲಿ ಶತಮಾನಗಳ ಕೊರೆತದ ಪರಿಣಾಮವಾಗಿ ಉದ್ಭವಿಸಿದ ಮೂರು ಸಹೋದರಿ ಶಿಖರಗಳು ಮುಖ್ಯ ಆಕರ್ಷಣೆ ಎನಿಸಿತು. ಸೂರ್ಯೋದಯದ ಕಾಲದಲ್ಲಿ ಇಲ್ಲಿನ ನೋಟ ಅದ್ಭುತವಾಗಿದ್ದೀತು. ನಾವು ತಲುಪಿದಾಗ ಸೂರ್ಯನ ಕಿರಣಗಳು ಸಹೋದರಿಯರ ಬೆನ್ನನ್ನು ಮುತ್ತಿಕ್ಕುತ್ತಿದ್ದವು. ಇಲ್ಲೇ ಹತ್ತಿರದ ಊರೊಂದರಲ್ಲಿ ಹೋಟೆಲ್ ಕಾದಿರಿಸಿಟ್ಟಿದ್ದೆವು ರಾತ್ರಿ ತಂಗಲು. ಪಕ್ಕದಲ್ಲೊಂದು ಬಾಂಗ್ಲಾ ದೇಶದವರ ಊಟದ ಹೋಟೆಲ್ ಇತ್ತು. ಅದು ರಂಜಾನ್ ತಿಂಗಳು. ಅಲ್ಲಿನ ಕೆಲಸದವರು ತಮ್ಮ ಸಂಜೆಯ ಪ್ರಾರ್ಥನೆ ಮುಗಿಸಿ ಸ್ವಾದಿಷ್ಟ ಭೋಜನ ಆದರದಿಂದ ಬಡಿಸಿದ್ದು ನನಗಿನ್ನೂ ಕಣ್ಮುಂದೆ ನಿಂತಿದೆ. 

ಇಲ್ಲಿಂದ ಉಲ್ಲಾಪೂಲ್ ನ ಯಾನವನ್ನು ಶಬ್ದಗಳಿಂದ ಬಣ್ಣಿಸಲಸದಳ. ಮುಗಿಲ ಮುತ್ತುವ ಬೋಳು ಗುಡ್ಡಗಳು, ಅವುಗಳ ಪಾದ ತೊಳೆಯುವ ನಿರ್ಮಲ ನೀರಿನ ತೊರೆಗಳು, ದಾರಿಯುದ್ದಕ್ಕೂ ಕಾಣುವ ಪಚ್ಚೆ ಬಣ್ಣದ ಸಮುದ್ರ, ನಿಷ್ಕಲ್ಮಶ ಶುಭ್ರ ನಿರ್ಜನ ತೀರ ಯಾವುದನ್ನ ವರ್ಣಿಸುವುದು, ಯಾವುದನ್ನ ಬಿಡುವುದು? ಎಲ್ಲವೂ ಎಸ್. ದಿವಾಕರರು ಹೇಳುವಂತೆ ಕ್ಲೀಷೆಗಳಲ್ಲೇ ಕೊನೆ ಗಂಡೀತು. ಶಬ್ದಗಳ ಬದಲು ಚಿತ್ರಗಳನ್ನೇ ನಿಮ್ಮೆದುರಿಡುವೆ. ನಿಮಗನಿಸಿದಂತೆ ವರ್ಣಿಸಿಕೊಳ್ಳಬಹುದು. ದಾರಿಯಲ್ಲಿ ಸಿಕ್ಕಿದ ತೀರದಲ್ಲಿಳಿದಾಗ ತೀರದ ಮೇಲೆ ಝಿಪ್ ವಯರ್ ಮೇಲೆ ಜಾರುವ ಸಿಕ್ಕಿದ್ದು ಅವಕಾಶ ಅಪುರ್ವವಾಗಿತ್ತು. ಇಲ್ಲಿ ತೀರದ ಮೇಲೆ ಆಡಿದ ಕ್ರಿಕೆಟ್ ಆಟ ನಮ್ಮ ಜೀವನದಲ್ಲಿ ಜಗತ್ತಿನ ಉತ್ತರ ತುದಿಯಲ್ಲಿ ಆಡಿದ ದಾಖಲೆಯಾಗಿದೆ. 

ಹಾದಿಯಲ್ಲಿ ಸಿಗುವ ಕೇಯರ್ನ್ ಭಾಯನ್ ಲಾಕ್ ಮೇಲೆ ಕಟ್ಟಿರುವ ಕೈಲೆಸ್ಕು ಸೇತುವೆ ಇನ್ನೊಂದು ಮಾನವ ನಿರ್ಮಿತ ರಚನೆಗಳಲ್ಲಿ ನೋಡುವಂಥದ್ದು ಈ ಭೂಭಾಗದಲ್ಲಿ. ಇದರ ಚಿತ್ರ ಮೇಲಿದೆ. 

ಉಲ್ಲಾಪೂಲ್ ತಲುಪಿದಾಗ ಸರಿಸುಮಾರು ಮಧ್ಯರಾತ್ರಿ. ಅಲ್ಲಿನ ಹೊಟೆಲ್ ಲಾಕ್ ಒಂದರ ತೀರದಲ್ಲಿತ್ತು. ಆ ಹೊತ್ತಿನಲ್ಲಿ ಕಂಡ ಚಿತ್ತಾರದ ಆಗಸದ ಚಿತ್ರ ನಾನೆಂದೂ ಮರೆಯಲಾರೆ. ಆ ಚಿತ್ರವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುವಾಗ ಸ್ಕಾಟ್ ಲ್ಯಾಂಡಿನ ವಿಶೇಷ ನುಸಿ (ಮಿಡ್ಜಸ್) ಗಳ ದಾಳಿಯನ್ನೂ ಮರೆಯಲಾರೆ.

ರೂಟ್ ೫೦೦ ರ ಕೊನೆಯ ಭಾಗವನ್ನು ಸಮಯಾಭಾವದಿಂದ ಮೊಟಕುಗೊಳಿಸಿದರೂ ಸುಮಾರು ೯೦% ಭಾಗವನ್ನು ಕ್ರಮಿಸಿ, ಮನಸೋ ಇಚ್ಛೆ ಆನಂದಿಸಿದ್ದಕ್ಕೆ ಮಕುಟವಿಟ್ಟಿದ್ದು ಗೆಳೆಯರ ಗುಂಪಿನ ಒಡನಾಟ.

ನಾನೂ ಕಿಲಿಮಾಂಜಾರೋ ಹತ್ತಿದೆ  – ಕೇಶವ ಕುಲಕರ್ಣಿ

ನಾನು `ಕಿಲಿಮಾಂಜಾರೋ` ಎನ್ನುವ ಹೆಸರನ್ನು ಮೊಟ್ಟಮೊದಲು ಕೇಳಿದ್ದು, ಆರನೇ ಇಯತ್ತೆಯಲ್ಲಿ ನಾನು ಭಾಗವಹಿಸಿದ ಅಂತರಶಾಲಾ ರಸಪ್ರಶ್ನೆಯ ಸ್ಪರ್ಧೆಯಲ್ಲಿ: `ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಯಾವುದು?` ಎನ್ನುವುದು ಪ್ರಶ್ನೆ. ಮೌಂಟ್ ಎವರೆಸ್ಟ್ ಎನ್ನುವುದು ಪ್ರಪಂಚದ ಅತ್ಯಂತ ಎತ್ತರದ ಪರ್ವತ ಅನ್ನುವುದನ್ನು ಬಿಟ್ಟರೆ ಬೇರೆ ಪರ್ವತಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ಕಿಲಿಮಾಂಜಾರೋ ಎನ್ನುವುದು ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತ ಎನ್ನುವುದು ಗೊತ್ತಾದದ್ದೇ ಅವತ್ತು. ಸದ್ಯ, ಆ ಪ್ರಶ್ನೆ ಬೇರೆ ತಂಡಕ್ಕೆ ಬಂದಿತ್ತು ಮತ್ತು ಆ ತಂಡಕ್ಕೂ ಸರಿಯಾದ ಉತ್ತರ ಗೊತ್ತಿರಲಿಲ್ಲ ಎನ್ನುವುದು ಬಹಳ ಖುಷಿಕೊಟ್ಟಿತ್ತು, ಆದರೆ ನನಗೆ ಉತ್ತರ ಗೊತ್ತಿರಲಿಲ್ಲ ಎನ್ನುವ ಬಗ್ಗೆ ಖೇದವೂ ಆಗಿತ್ತು. ಅವತ್ತು ಸಂಜೆ ಮನೋರಮಾ ಇಯರ್ ಪುಸ್ತಕದಲ್ಲಿ ಕಿಲಿಮಾಂಜಾರೋ ಬಗ್ಗೆ ಓದಿದ್ದು.  

ನಾನಾಗ ಪಿಯುಸಿಯಲ್ಲಿದ್ದೆ. ಹೆಮಿಂಗ್ವೆಯ `ಓಲ್ಡ್ ಮ್ಯಾನ್ ಆಂಡ್ ಸೀ` ಎನ್ನುವ ನೀಳ್ಗತೆಯ ಬಗ್ಗೆ ಲಂಕೇಶ್ ತಮ್ಮ `ಮರೆಯುವ ಮುನ್ನ`ದಲ್ಲಿ ಬರೆದಿದ್ದರು. ಗ್ರಂಥಾಲಯದಲ್ಲಿ ಹುಡುಕಿದಾಗ ಹೆಮಿಂಗ್ವೇಯ ಆ ಪುಸ್ತಕದ ಜೊತೆ ಅವನ ಇನ್ನೊಂದು ಕಥಾಸಂಕಲನವೂ ಸಿಕ್ಕಿ, ಅದರಲ್ಲಿ `ದ ಸ್ನೋಸ್ ಆಫ್ ಕಿಲಿಮಾಂಜಾರೋ` ಎನ್ನುವ ಕತೆಯ ತಲೆಬರಹವನ್ನು ನೋಡಿವವರೆಗೂ ಮತ್ತೆ ಕಿಲಿಮಾಂಜಾರೋದ ನೆನಪೇ ಇರಲಿಲ್ಲ.  

ಇಂಗ್ಲೆಂಡಿಗೆ ಬಂದ ಮೇಲೆ ಕಿಲಿಮಾಂಜಾರೋ ಎನ್ನುವ ಹೆಸರು ಮತೆ ಮತ್ತೆ ಕೇಳಲಾರಂಭಿಸಿತು. ಎ ಶ್ರೇಣಿಯಲ್ಲಿ ಓದುವ ಮಕ್ಕಳನ್ನು ಕರೆದುಕೊಂಡು ಕೆಲವು ಖಾಸಗಿ ಶಾಲೆಯವರು ಕಿಲಿಮಾಂಜಾರೋಗೆ ಹೋಗುವಾಗ, ಹೋಗಿ ಬಂದ ಮೇಲೆ ಆ ಫೋಟೋಗಳನ್ನು ನೋಡಿದಾಗ, ಕಿಲಿಮಾಂಜಾರೋ ಎನ್ನುವುದು ಹದಿಹರೆಯದವರು ಮಾತ್ರ ಹತ್ತಬಲ್ಲ ಪರ್ವತ ಎಂದುಕೊಂಡಿದ್ದೆ.  

`ಕಿಲಿಮಾಂಜಾರೋ`ವನ್ನು ಕೆಲವು ವರ್ಷಗಳ ಹಿಂದೆ ವಸುಧೇಂದ್ರ ಬರೆದ `ಮೋಹನಸ್ವಾಮಿ` ಕಥಾಸಂಕಲನದಲ್ಲಿ ಓದಿದೆ. ಆ ಕಥೆ ನನ್ನನ್ನು ತುಂಬ ಕಾಡಿತ್ತು. ಪರ್ವತದ ಚಾರಣ ಮನುಷ್ಯನಿಗೆ ತನ್ನನ್ನು ತಾನು ಕಂಡುಕೊಳ್ಳಲು ಅಥವಾ ತೆರೆದುಕೊಳ್ಳಲು ಸಾಧ್ಯವಾಗುವ ಸಾಧ್ಯತೆಯ ಬಗ್ಗೆ ಪ್ರಶ್ನೆ ಎತ್ತುವ ಕಥೆ. ಆ ಕಥೆಯಲ್ಲಿ ಕಿಲಿಮಾಂಜಾರೋ ಪರ್ವತದ ಬಗ್ಗೆ ಮತ್ತು ಚಾರಣದ ಬಗ್ಗೆ ಕೆಲವು ವಿವರಗಳು ಬರುತ್ತವೆ. ಓಹೋ, ಇದು ಬರೀ ಚಿಕ್ಕ ವಯಸ್ಸಿನವರಿಗೆ ಮಾತ್ರವಲ್ಲ, ನಾನೂ ಮಾಡಬಹುದು ಎನಿಸಿದ್ದು ಆಗಲೇ! 

ನನ್ನ ಮಿತ್ರರೊಬ್ಬರಲ್ಲಿ ಮಾತನಾಡುವಾಗ ಆಗಾಗ ನಾವೆಲ್ಲ ಸೇರಿ ಕಿಲಿಮಾಂಜಾರೋಗೆ ಹೋಗಬೇಕು, ಎವರೆಸ್ಟ್ ಅಡಿಗೆ ಹೋಗಬೇಕು ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಇಂಗ್ಲೆಂಡಿನ ಪೀಕ್ ಡಿಸ್ಟ್ರಿಕ್ಟ್ ಮತ್ತು ವೇಲ್ಸಿನ ಸ್ನೋಡೋನ್ ಹತ್ತಿ ಇಳಿದಿದ್ದನ್ನು ಬಿಟ್ಟರೆ ಯಾವ ಚಾರಣವನ್ನೂ ಮಾಡಿದವನಲ್ಲ. ನಾನು ಉತ್ತರ ಕರ್ನಾಟಕದ ಬಯಲುಸೀಮೆಯ ಬರಭೂಮಿಯವನು; ಗುಡ್ಡಗಾಡುಗಳಲ್ಲಿ ಹುಟ್ಟಿದವನೂ ಅಲ್ಲ, ಬೆಳೆದವನೂ ಅಲ್ಲ; ಪರ್ವತಗಳು, ಕಾಡುಗಳು ನನ್ನನ್ನು ಕಾಡುವುದೂ ಇಲ್ಲ. ಆದರೂ ನನ್ನ `ಬಕೆಟ್ ಲಿಸ್ಟ್`ನಲ್ಲಿ, ಕಿಲಿಮಾಂಜಾರೋವನ್ನು ಬರೆದುಕೊಂಡಿದ್ದೆ. ಆದರೆ ನಾನೂ ಕಿಲಿಮಾಂಜಾರೋ ಪರ್ವತವನ್ನು ಹತ್ತಿ ಸುರಕ್ಷಿತವಾಗಿ ಇಳಿದು ಬರುವೆನೆಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ.  

ಆದರೆ ಈಗ ಆರೆಂಟು ತಿಂಗಳ ಹಿಂದೆ, ನನ್ನ ಮಿತ್ರನೊಬ್ಬ  ‘(No) Country for Old Men’ ಎನ್ನುವ ವಾಟ್ಸ್ಯಾಪ್ ಗ್ರುಪ್-ಅನ್ನು  ನಲವತ್ತು ದಾಟಿದ ತನ್ನಂಥ ಮಧ್ಯವಯಸ್ಕರಿಗಾಗಿ ಶುರುಮಾಡಿ, ಅದರಲ್ಲಿ ನನ್ನನ್ನೂ ಸೇರಿಸಿದ. ಎರಡು ತಿಂಗಳಿಗೊಮ್ಮೆ ಬರೀ ಗಂಡಸರೇ ಸೇರಿ ಎಲ್ಲಾದರೂ ಯುನೈಟೆಡ್ ಕಿಂಗ್ಡಮ್ಮಿನಲ್ಲಿ ಟ್ರೆಕಿಂಗ್ ಹೋಗುವುದು, ಆ ನೆಪದಲ್ಲಿ ಪಬ್ಬಿಗೆ ಹೋಗಿ ಕುಡಿದು ತಿಂದು ಬರುವುದು, ಇದರ ಮುಖ್ಯ ಉದ್ದೇಶ. ಈ ಗುಂಪಿನಲ್ಲಿ ಕಿಲಿಮಾಂಜಾರೋದ ಕನಸುಗಳೆದ್ದು ನನ್ನನ್ನೂ ತಟ್ಟಿದವು. ಅಷ್ಟು ಜನರ ಗುಂಪಿನಲ್ಲಿ ಗೋವಿಂದನಾದೆ. 

ಕಿಲಿಮಾಂಜಾರೋದ ಕಿರುಪರಿಚಯ: 

ಕಿಲಿಮಾಂಜಾರೋ ಆಫ್ರಿಕಾ ಖಂಡದ ತಾಂಜಾನಿಯಾ ದೇಶದಲ್ಲಿರುವ ಪರ್ವತ. ಇದೊಂದು ಜ್ವಾಲಾಮುಖಿ ಪರ್ವತ. ಆಫ್ರಿಕಾ ಖಂಡದ ಅತ್ಯಂತ ಎತ್ತರ ಪರ್ವತ, ಜಗತ್ತಿನ ಅತ್ಯಂತ ಎತ್ತರದ ಒಂಟಿ ಪರ್ವತ. ಜಗತ್ತಿನ ನಾಲ್ಕನೇ ಎತ್ತರದ ಪರ್ವತ.  

ಈ ಪರ್ವತಕ್ಕೆ ಮೂರು ಶಿಖರಗಳಿವೆ: ಕಿಬೋ, ಮಾವೆಂಝಿ ಮತ್ತು ಶಿರಾ. ಇದರಲ್ಲಿ ಕಿಬೋ ಎಲ್ಲಕ್ಕಿಂತ ಎತ್ತರದಲ್ಲಿರುವ ಶಿಖರ ಮತ್ತು ಎಲ್ಲರೂ ಹತ್ತುವುದೂ ಇದನ್ನೇ. ಜಗತ್ತಿನ ಅತ್ಯಂತ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟಿಗೆ ಹೋಲಿಸಿದರೆ ಕಿಲಿಮಾಂಜಾರೋ ಅದಕ್ಕಿಂತ ೨೯೫೫ ಮೀಟರ್ ಚಿಕ್ಕದು. ಕಿಲಿಮಾಂಜಾರೋ ಸಮುದ್ರದ ಮಟ್ಟದಿಂದ ೫೮೯೫ ಮೀಟರ್ (ಹತ್ತಿರ ಆರು ಕಿಲೋಮೀಟರ್) ಎತ್ತರದಲ್ಲಿದೆ, ಅಡಿಗಳಲ್ಲಿ ಲೆಕ್ಕ ಹಾಕಿದರೆ ಸುಮಾರು ೨೦ ಸಾವಿರ ಅಡಿಗಳು.  ಮೆಟ್ಟಿಲುಗಳ ಲೆಕ್ಕದಲ್ಲಿ ಹೇಳಿದರೆ ಸುಮಾರು ೨೫ ರಿಂದ ೨೮ ಸಾವಿರ ಮೆಟ್ಟಿಲುಗಳು. ಇಂಗ್ಲೆಂಡಿನ ದೊಡ್ಡ ಕಟ್ಟಡಗಳನ್ನು ತೆಗೆದುಕೊಂಡರೆ, ಒಂದು ಅಂತಸ್ತಿನಿಂದ ಇನ್ನೊಂದು ಅಂತಸ್ತಿಗೆ ಹೋಗಲು ಸುಮಾರು ೨೫ ಮೆಟ್ಟಿಲುಗಳಿರುತ್ತವೆ. ಅಂದರೆ ಈ ಪರ್ವತವನ್ನು ಹತ್ತುವುದು ಎಂದರೆ ಒಂದು ಸಾವಿರ ಮಹಡಿಯ ಕಟ್ಟಡವನ್ನು ಹತ್ತಿದಂತೆ! ಬರೀ ಮೇಲೆ ಹತ್ತುವುದಲ್ಲ, ಮುಂದೆ ಕೂಡ ನಡೆಯಬೇಕಲ್ಲ! ಬೆಟ್ಟದ  ತಪ್ಪಲಿನಿಂದ ತುದಿಯನ್ನು ಮುಟ್ಟಲು ಒಟ್ಟು 40 ಕಿಲೋಮೀಟರ್  (೨೫ ಮೈಲುಗಳು, ಹತ್ತಿರ ಫುಲ್ ಮ್ಯಾರಥಾನ್), ಮತ್ತು ಅಷ್ತೇ ಇಳಿಯಬೇಕು, ಒಟ್ಟು ೮೦ ಕಿಲೋಮೀಟರಿನ ದಾರಿ. ಇದನ್ನು ನಾಲ್ಕರಿಂದ ಏಳುದಿನದವರೆಗೆ ಕ್ರಮಿಸಲಾಗುತ್ತದೆ.   

ಕಿಲಿಮಾಂಜಾರೋ ಪರ್ವತವನ್ನು ಮೊಟ್ಟಮೊದಲು ಹತ್ತಿದ ಲಿಖಿತ ದಾಖಲೆ ಮಾಡಿರುವುದು ೧೮೮೯ರಲ್ಲಿ ಜರ್ಮನಿಯ ಜೊಹಾನ್ನೆಸ್ ರೆಬ್ಮನ್. ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಜನರು ಈ ಪರ್ವತದ ಶೃಂಗವನ್ನು ಮುಟ್ಟಿ ಬಂದಿದ್ದಾರೆ. ಭೂಮಧ್ಯರೇಖೆಯ ಹತ್ತಿರದಲ್ಲಿದ್ದರೂ  ಪರ್ವತದ ತುದಿಯಲ್ಲಿ ಹಿಮಗಡ್ಡೆಗಳಿವೆ. ಮೊದಲಿನ ಐತಿಹಾಸಿಕ ದಾಖಲೆಯಿಂದ ಇಂದಿನವರೆಗೆ ಹಿಮದ ಗುಡ್ಡೆಗಳು ಕಡಿಮೆಯಾಗುತ್ತ ಬಂದಿವೆ ಮತ್ತು ೨೦೩೫ರ ಹೊತ್ತಿಗೆ ಸಂಪೂರ್ಣವಾಗಿ ಮಾಯವಾಗಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ.    

ಮೋಶಿ ಎನ್ನುವ ಊರು ಕಿಲಿಮಾಂಜಾರೋ ಪರ್ವತದ ತಪ್ಪಲಿನಲ್ಲಿದೆ. ಕೇವಲ ೪೦ ಕಿಲೋಮೇಟರ್ ದೂರದಲ್ಲಿ `ಕಿಲಿಮಾಂಜಾರೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ`ವಿದೆ.   

ದಾರಿ ಯಾವುದಯ್ಯ, ಕಿಲಿಮಾಂಜಾರೋವಿಗೆ?

ಈ ಮಹಾನ್ ಪರ್ವತದ ತುದಿಯನ್ನು ಮುಟ್ಟಲು ಬಹಳಷ್ಟು ದಾರಿಗಳಿವೆ.  ನಾಲ್ಕರಿಂದ ಏಳು ದಿನಗಳವರೆಗೆ ಈ ದಾರಿಗಳು ಶಿಖರದ ತುದಿಗೆ ಕರೆದುಕೊಂಡು ಹೋಗಿ ಇಳಿಸಿಕೊಂಡು ಬರುತ್ತವೆ. ಕೊಕೋಕೋಲಾ ಮಾರ್ಗ, ಮರಂಗು ಮಾರ್ಗ, ಲೆಮೊಶೋ ಮಾರ್ಗ ಇತ್ಯಾದಿ ಮಾರ್ಗಗಳಿವೆ.  ನಮ್ಮ ಪ್ರವಾಸದ ಉಸ್ತುವಾರಿ ಹೊತ್ತ ಸಂಸ್ಠೆಯು ಏಳು ದಿನಗಳ ಚಾರಣವನ್ನು ನಿಗದಿಪಡಿಸಿತು. ಹೆಚ್ಚು ದಿನ ತೆಗೆದುಕೊಂಡಷ್ಟೂ ಕಡಿಮಯಾಗುವ ಆಮ್ಲಜನಕಕ್ಕೆ ಹೊಂದಿಕೊಳ್ಳಲು ಅನುಕೂಲವಾಗುತ್ತದೆ ಮತ್ತು ಪರ್ವತದ ತುದಿಯನ್ನು ತಲುಪುವ ಸಾಧ್ಯತೆಗಳು ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ನಮಗೆ ಏಳು ದಿನಗಳ ಚಾರಣವನ್ನು ಸೂಚಿಸಿದರು. ಈ ದಾರಿಗೆ `ಮಚಾಮೆ ಮಾರ್ಗ` ಎಂದು ಕರೆಯುತ್ತಾರೆ.   

ಮೊದಲ ದಿನ: 

ಮಚಾಮೆ ದ್ವಾರದಿಂದ ನಮ್ಮ ಪ್ರಯಾಣ ಆರಂಭ. ಮಚಾಮೆ ದ್ವಾರವು ಸಮುದ್ರದ ಮಟ್ಟದಿಂದ ೧೮೦೦ ಮೀಟರ್ ಎತ್ತರದಲ್ಲಿದೆ. ಅಲ್ಲಿಂದ ಸುಮಾರು ೧೮ ಕಿಲೋಮೀಟರ್ ನಡೆದು ೧೨೦೦ ಮೀಟರ್ ಮೇಲೆ ಹತ್ತಿ ೩೦೦೦ ಮೀಟರ್ ಎತ್ತರವನ್ನು ತಲುಪುವುದು ಮೊದಲ ದಿನದ ಚಾರಣ. ಮೊದಲ ದಿನದ ಚಾರಣವು ದಟ್ಟವಾದ ರೇನ್-ಫಾರೆಸ್ಟ್ ನಡುವೆ. ಸೂರ್ಯನ ಕಿರಣಗಳು ಒಳಗೆ ಬರದಷ್ಟು ದಟ್ಟ ಕಾಡು. ೨೬ ಡಿಗ್ರಿ ಸೆಲ್ಸಿಯಸ್ ಉಷ್ಣಾಂಷದಲ್ಲಿ ಒಂದು ತೆಳು ಟಿ-ಶರ್ಟ್ ಹಾಕಿಕೊಂಡು, ಬೆನ್ನ ಹಿಂದೆ ರಕ್-ಸ್ಯಾಕ್ ತಗುಲಿಸಿಕೊಂಡು ಹೊರಟೆವು.  

ಗೈಡ್ ನಮ್ಮನ್ನು ನಿಧಾನವಾಗಿ ನಡೆಯಲು ಹೇಳುತ್ತಾನೆ. ತಾಂಜಾನಿಯಾದ ಮುಖ್ಯ ಭಾಷೆ, ಸ್ವಾಹಿಲಿ. ಸ್ವಾಹಿಲಿಯಲ್ಲಿ, `ಪೋಲೆ ಪೋಲೆ` ಎಂದರೆ `ನಿಧನಿಧಾನವಾಗಿ`. ಇದು ಕಿಲಿಮಾಂಜಾರೋ ಹತ್ತುವ ಮಂತ್ರ. ಇಲ್ಲಿ ನಿಧಾನವೇ ಪ್ರಧಾನ. ಗೈಡ್ ನಮ್ಮ ನಡೆಯುವ ವೇಗವನ್ನು ನಿರ್ಧರಿಸುತ್ತಾನೆ. `ಪೋಲೆ ಪೋಲೆ,` ಎಂದು ಆಗಾಗ ಹೇಳುತ್ತ ನಿಧಾನವಾಗಿ ದಟ್ಟ ಕಾಡಿನ ಮಧ್ಯ ಹತ್ತಿಸಿಕೊಂಡು ಹೋಗುತ್ತಾನೆ.   

ಹಾದಿಯಲ್ಲಿ ಮಧ್ಯ ಮಧ್ಯ ನಿಂತು ಹಾಡು ಹೇಳಿ ಕುಣಿದು ನಲಿಸುತ್ತಾರೆ. ಕಿಲಿಮಾಂಜಾರೋ ಹತ್ತುವಷ್ಟರಲ್ಲಿ ಅವರು ಹಾಡುವ `ಹಕೂನ ಮಟಾಟ` ಹಾಡು ಬಾಯಿಪಾಠವಾಗಿ ಬಿಡುತ್ತದೆ. `ಹಕೂನ ಮಾಟಾಟ,` ಎನ್ನುವ ಫ್ರೇಸ್ `ಲಯನ್ ಕಿಂಗ್` ಸಿನೆಮಾದಿಂದಾಗಿ ಬಹಳ ಪ್ರಖ್ಯಾತವಾದ ಸಾಲು ಮತ್ತು ಹಾಡು ಕೂಡ: `ಹಕೂನ ಮಟಾಟ, ಮೀನ್ಸ್ ನೋ ವರೀಸ್` 

ನಮ್ಮದು ೨೧ ಜನ ಮಧ್ಯವಯಸ್ಕ ಗಂಡಸರ ಗುಂಪು. ನಮ್ಮನ್ನು ನೋಡಿಕೊಳ್ಳುವ ಮುಖ್ಯ ಗೈಡ್, ಬ್ರೂಸ್, ನಲವತ್ತರ ಆಸುಪಾಸಿನಲ್ಲಿರುವ ಎತ್ತರದ ಆಳು. ಜೊತೆಗೆ ನಾಕಾರು ಜನ ಜ್ಯೂನಿಯರ್ ಗೈಡುಗಳು. ಅಷ್ಟೇ ಅಲ್ಲದೇ, ಅಡುಗೆಯವನು, ಅಡುಗೆಯ ಸಹಾಯಕರು, ನಮ್ಮ ಡಫೆಲ್ ಬ್ಯಾಗ್ (ಒಬ್ಬೊಬ್ಬರ ಡಫಲ್ ಬ್ಯಾಗ್ ೧೫ ಕಿಲೋ!) ಹೊರುವವರು, ನಮ್ಮ ಟೆಂಟ್ ಹೊರುವವರು, ಊಟಕ್ಕೆ ಬೇಕಾಗುವ ತಟ್ಟೆ, ಅಡುಗೆ ಸಾಮಗ್ರಿ, ಟೇಬಲ್, ಚೇರ್ ಹೊರುವವರು, ಟೆಂಟ್ ಟಾಯ್ಲೆಟ್ ಹೊರುವವರು, ಟಾಯ್ಲೆಟ್ಟನ್ನು ಶುಚಿಯಾಗಿ ಇಡುವವರು, ಎಲ್ಲ ಸೇರಿ ಸುಮಾರು ೬೦  ಜನ ಸಹಾಯಕರು ಇರಬಹುಸು! ಗೈಡುಗಳನ್ನು ಬಿಟ್ಟರೆ ಉಳಿದವರೆಲ್ಲರೂ ತಮ್ಮ ಹೆಗಲು ಮತ್ತು ತಲೆಯ ಮೇಲೆ ೨೦ ರಿಂದ ೩೦ ಕಿಲೋ ಭಾರದ ಸಾಮಗ್ರಿಗಳನ್ನು ಇಟ್ಟುಕೊಂಡು ಭರಭರನೇ ಮುಂದೆ ಸಾಗಿ, ನಮ್ಮ ಟೆಂಟು, ಟಾಯ್ಲೆಟ್ಟು ಮತ್ತು ಅಡಿಗೆಗಳನ್ನು ತಯಾರು ಮಾಡುತ್ತಾರೆ.  

ನಾವು ಸಂಜೆಯ ಹೊತ್ತಿಗೆ ನಮ್ಮ ಮೊದಲ ದಿನದ ಟೆಂಟನ್ನು ತಲುಪಿದಾಗ, ನಮ್ಮ ಟೆಂಟುಗಳು ನಮಗಾಗಿ ಕಾಯುತ್ತಿದ್ದವು. ಬಿಸಿ ಬಿಸಿ ಊಟ ಕೂಡ ತಯಾರಾಗಿತ್ತು. ನಾವು ತಲುಪಬೇಕಾದ `ಕಿಬೋ` ಶೃಂಗ ಕಾಣುತ್ತಿತ್ತು.  ಒಂದು ಟೆಂಟಿನಲ್ಲಿ ಇಬ್ಬರು. ಇಬ್ಬರು ಕೂತುಕೊಳ್ಳಬಹುದು, ಇಬ್ಬರು ಮಲಗಿಕೊಂಡರೆ ಟೆಂಟು ತುಂಬಿಹೋಗುವಂಥ ಚಿಕ್ಕ ಟೆಂಟು.  ಊಟ ಮಾಡಿ ಮಲಗಿದೆವು. ಮೊದಲ ದಿನದ ಚಾರಣ ಆರಾಮವಾಗಿತ್ತು.  

ಎರಡನೇ ದಿನ: 

ಎರಡನೇ ದಿನ ಮಚಾಮೆ ಕ್ಯಾಂಪಿನಿಂದ ಶಿರಾ ಕ್ಯಾಂಪಿಗೆ ೧೦ ಕಿಲೋಮೀಟರ್, ೮೪೦ ಮೀಟರ್ ಮೇಲಕ್ಕೆ ಹತ್ತಿ, ೩೮೪೦ ಮೀಟರ್ ತಲುಪಿದೆವು. ಮೊದಲ ದಿನದ ದಟ್ಟಕಾಡು ಮಾಯವಾಗಿ ಎರಡನೇ ದಿನ ನಮಗೆ ಸಿಕ್ಕಿದ್ದು ಚಿಕ್ಕ ಚಿಕ್ಕ ಗಿಡಗಳು, ಕಳ್ಳೆ ಕಂಟೆಗಳು. ಶಿರಾ ಕ್ಯಾಂಪಿನಲ್ಲಿ ನಮ್ಮ ರಕ್-ಸ್ಯಾಕ್ ಇಟ್ಟು, ಕ್ಯಾಂಪಿನಿಂದ ಹತ್ತಿರದಲ್ಲಿರುವ ನೈಸರ್ಗಿಕವಾದ ಶಿರಾ ಗುಹೆಗೆ ಹೋದೆವು. ಅದರೊಳಗೆ ಹೋಗಿ, ಗುಹೆಯ ಗುಡ್ಡದ ಮೇಲೆ ಹತ್ತಿ ಫೋಟೊ ತೆಗೆದುಕೊಂಡು ಬಂದೆವು. ಸಂಜೆಯಾಗಿತ್ತು, ಮೊದಲಬಾರಿಗೆ ಸಣ್ಣಗೆ ಚಳಿಯ ಅನುಭವ  ಶುರುವಾಯಿತು. ನಡೆದದ್ದು ಕೇವಲ ೧೦ ಕಿಲೋಮೀಟರ್ ಆಗಿದ್ದರೂ ಎರಡನೇ ದಿನದ ಚಾರಣ ಮೊದಲನೇ ದಿನಕ್ಕೆ ಹೋಲಿಸಿದರೆ ಸ್ವಲ್ಪ ಕಷ್ಟಕರವಾಗಿತ್ತು.  

ಮೂರನೇ ದಿನ: 

ಮೂರನೇ ದಿನ ೭೬೦ ಮೀಟರ್ ಹತ್ತಿ, ೪೬೦೦ ಮೀಟರ್ ಎತ್ತರದಲ್ಲಿರುವ ಲಾವಾ ಟಾವರ್ ತಲುಪಿದೆವು! ಆಮ್ಲಜನಕ ಕಡಿಮಾಯಾಗುವುದು ಯಾರೂ ಹೇಳದಿದ್ದರೂ ಮೊದಲ ಸಲ ಅನುಭವಕ್ಕೆ ಬರುತ್ತದೆ. ಅಷ್ಟು ಮೇಲೆ ಹತ್ತಿದ ಮೇಲೆ ಮತ್ತೆ ೬೫೦ ಮೀಟರ್ ಕೆಳಗೆ ಇಳಿಯಬೇಕು! ಒಟ್ಟು ೧೫ ಕಿಲೋಮೀಟರ್ ನಡೆದು ಬರಾಂಕೋ ಕ್ಯಾಂಪ್ ತಲುಪಿದೆವು. ದಾರಿಯುದ್ದಕ್ಕೂ ಆಗಾಗ ನೀರು ಕುಡಿಯಲು ಗೈಡ್ ಎಲ್ಲರಿಗೂ ಜ್ಞಾಪಿಸುತ್ತಿದ್ದ. ಸ್ವಾಹಿಲಿಯಲ್ಲಿ ನೀರಿಗೆ `ಮಾಜಿ` ಎನ್ನುತ್ತಾರೆ.  ನಾವೆಲ್ಲ ಆಗ, `ಮಾಜಿ ಮಾಜಿ,` ಎಂದು ಕೂಗಿ ನೀರು ಕುಡಿಯುತ್ತಿದೆವು.  ಲಾವಾ ಟಾವರಿನಿಂದ ಕಿಲಿಮಾಂಜಾರೋದ ಶೃಂಗ ನಯನ ಮನೋಹರವಾಗಿ ಕಾಣುತ್ತಿತ್ತು, ಆದರೆ ಊಹೆಗೂ ಮೀರಿದ ಎತ್ತರದಲ್ಲಿತ್ತು. ನಿಜವಾಗಿಯೂ ನಾನು ಇದರ  ಶೃಂಗ ಮುಟ್ಟಲು ಸಾಧ್ಯವೇ ಎಂದು ಸಣ್ಣ ಅಳುಕು ಕೂಡ ಮೂಡಿತು. ದಾರಿಯುದ್ದಕ್ಕೂ ಚಿಕ್ಕ ಚಿಕ್ಕ ಪೊದೆಗಳು ಮತ್ತು ಕುರುಚಲು ಗಿಡಗಳು. ತೆಂಗಿನಗಿಡವನ್ನು ಮೇಲಿನಿಂದ ಜೋರಾಗಿ ಒತ್ತಿದಂತೆ ಕಾಣುವ ಚಿಕ್ಕ ಚಿಕ್ಕ ಸೆನಿಸಿಯೋ ಗಿಡಗಳು. ಮೂರನೇ ದಿನ ನಾವು ಒಟ್ಟು ಬರೀ ೧೧೦ ಮೀಟರ್ ಮೇಲೆ ಬಂದಿದ್ದೆವು. ಎಂಥಹ ನಷ್ಟ! 

ಆಗ ನಮ್ಮ ಚೀಫ್ ಗೈಡ್ ಹೇಳಿದ, `ಮೂರನೇ ದಿನ ಅಷ್ಟು ಮೇಲೆ ಹತ್ತಿ ಮತ್ತೆ ಇಳಿಯುವುದಿದೆಯಲ್ಲ, ಇದು ಕಡಿಮೆಯಾಗುತ್ತಿರುವ ಆಮ್ಲಜನಕ್ಕೆ ಹೊಂದಿಕೊಳ್ಳಲು ಬಹಳ ಉಪಯುಕ್ತವಾದ ಚಾರಣದ ದಿನ. ನೀವು ಅಷ್ಟು ಮೇಲೆ ಹತ್ತಿ ಅಲ್ಲಿ ಊಟ ಮಾಡಿದ್ದೀರಿ, ಆಗ ನಿಮ್ಮಲ್ಲಿ ಆಗಲೇ ಕೆಲವರಿಗೆ ತಲೆನೋವು ಕಾಣಿಸಿಕೊಂಡಿದೆ, ನಂತರ ಕೆಳಗೆ ಇಳಿದಿದ್ದೀರಿ, ಇಲ್ಲಿ ಮಲಗುತ್ತೀರಿ, ಇದು ಮುಂದಿನ ಎರಡು ದಿನಗಳಿಗೆ ಮುಖ್ಯವಾದ ಪೂರ್ವ ತಯಾರಿ,` ಎಂದ. ಇದ್ದರೂ ಇರಬಹುದು ಎಂದುಕೊಂಡೆ. ಒಟ್ಟು ಹದಿನೈದು ಕಿಲೋಮೀಟರ್ ಹತ್ತಿ ಇಳಿಯುವಷ್ಟರಲ್ಲಿ ಎಲ್ಲರೂ ಸುಸ್ತು ಹೊಡೆದು ಹೋಗಿದ್ದೆವು. ಕೆಲವರಿಗೆ ತಲೆ ನೋವು ಕಾಣಿಸಿಕೊಂಡಿತ್ತು. ಚಳಿ ಕೂಡ ಜಾಸ್ತಿಯಾಗಿತ್ತು. 

ನಾಲ್ಕನೇ ದಿನ: 

ನಾಲ್ಕನೇ ದಿನ ಬರಾಂಕೋ ಕ್ಯಾಂಪಿನಿಂದ ಕರಂಗಾ ಕ್ಯಾಂಪಿಗೆ ಹತ್ತು ಕಿಲೋಮೀಟರ್, ೩೯೫೦ ಮೀಟರಿನಿಂದ ೪೨೦೦ ಮೀಟರಿನವರೆಗೆ (೨೫೦ ಮೀಟರ್ ಎತ್ತರ) ಚಾರಣ! ಪ್ರತಿದಿನದಂತೆ ಪ್ರಾಥರ್ವಿಧಿಗಳನ್ನು ಪೂರೈಸಿಕೊಂಡು (ಸ್ನಾನದ ಹೊರತು), ಬೆಳಗಿನ ಉಪಾಹಾರ ಮಾಡಿ, ಚಳಿಗೆ ಬೇಕಾದ ಬಟ್ಟೆಗಳನ್ನು ಹಾಕಿಕೊಂಡು, ರಕ್-ಸ್ಯಾಕಿನಲ್ಲಿ ಕೆಲವು ಬಟ್ಟೆ ಸ್ನ್ಯಾಕ್-ಗಳನ್ನು ಇಟ್ಟುಕೊಂಡು, ಕ್ಯಾಮಲ್ ಬ್ಯಾಗಿನಲ್ಲಿ ನೀರು ತುಂಬಿಕೊಂಡು, ಸನ್-ಸ್ಕ್ರೀನ್ ಹಾಕಿಕೊಂಡು ಹೊರಟೆವು. ಕರಂಗಾ ಕ್ಯಾಂಪ್ ತಲುಪಿದಾಗ ಲೇಟ್- ಮಧ್ಯಾಹ್ನ. ಈಗ ನಾವು ಎಲ್ಲ ಮೋಡಗಳಿಗಿಂತ ಮೇಲೆ ಇದ್ದೆವು. ಮೋಡಗಳು ನಮ್ಮ ಕೆಳಗೆ ಸುಮುದ್ರದಂತೆ ಕಾಣುತ್ತಿದ್ದವು!  ಅವತ್ತು ನಾವು ಸ್ವಾಹಿಲಿಯ `ಕಿಲಿಮಾಂಜಾರೋ`  ಹಾಡನ್ನು ಕನ್ನಡ ಮತ್ತು ಹಿಂದಿಗೆ ಭಾಷಾಂತರ ಮಾಡಿ ಅದೇ ಧಾಟಿಯಲ್ಲಿ ಹೇಳಿ ಕುಣಿದು, ಸಾಕಷ್ಟು ಫೋಟೋ ತೆಗೆದುಕೊಂಡೆವು. ಹಿಂದಿನ ದಿನಕ್ಕೆ ಹೋಲಿಸಿದರೆ ಚಳಿ ಹೆಚ್ಚಾಗಿತ್ತು.  

ಐದನೇ ದಿನ: 

ಐದನೇ ದಿನ ಕರಂಗಾ ಕ್ಯಾಂಪಿನಿಂದ ಬರಾಫು (ಬರಾಫು ಎಂದರೆ ಹಿಮ, ಹಿಂದಿಯಲ್ಲಿ `ಬರ್ಫ್` ಶಬ್ದಕ್ಕೆ ಎಷ್ಟು ಹತ್ತಿರವಿಲ್ಲವೇ?) ಕ್ಯಾಂಪಿಗೆ ಚಾರಣ, ೪೨೦೦ರಿಂದ ೪೬೬೦ ಮೀಟರಿನವರೆಗೆ, ಹತ್ತಿರ ಅರ್ಧ ಕಿಲೋಮೀಟರ್ ಮೇಲಕ್ಕೆ. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಮೀಟರ್ ಮೇಲೆ ಹೋದ ಮೇಲೆ ವಾತಾವರಣದಲ್ಲಿ ಆಮ್ಲಜನಕ ಸಾಕಷ್ಟು ಕಡಿಮೆಯಾಗಲು ಶುರುವಾಗುತ್ತದೆ. ಐದನೇ ದಿನ ನಾವು ನಡೆದದ್ದು ೮ ಕಿಲೋಮೀಟರ್, ನಡೆಯಲು ತೆಗೆದುಕೊಂಡ ಅವಧಿ ೫ ಗಂಟೆ! ಆಗಲೇ ಸ್ವಲ್ಪ ಏದುಸಿರು ಶುರುವಾಗಿತ್ತು, ಚಳಿಕೂಡ ತನ್ನ ಕೈಚಳಕವನ್ನು ತೋರಿಸುತ್ತಿತ್ತು. ಮೋಡಗಳಿಲ್ಲದ ನಗ್ನ ಕಿಬೋ ಶೃಂಗ ಕಣ್ಣಳತೆಯಲ್ಲಿ ಕರೆಯುತ್ತಿತ್ತು. ಬರಾಫು ಕ್ಯಾಂಪಿನಲ್ಲಿ ವಾತಾವರಣದ ಆಮ್ಲಜನಕ ೨೧%ನಿಂದ ೧೦%ಗೆ ಇಳಿದಿತ್ತು! 

ಮಧ್ಯಾಹ್ನವಾಗುವಷ್ಟರಲ್ಲಿ ಬರಾಫು ಕ್ಯಾಂಪ್ ತಲುಪಿದೆವು. ಯಥಾಪ್ರಕಾರ ಬಿಸಿಬಿಸಿ ಊಟ ಮಾಡಿದೆವು. ನಂತರ ನಮಗೆಲ್ಲ ಮಲಗಲು ಹೇಳಿದರು! ಆ ಚಳಿಯಲ್ಲಿ, ಅಷ್ಟು ಕಡಿಮೆ ಆಮ್ಲಜನಕದಲ್ಲಿ ಅದೂ ಮಧ್ಯಾಹ್ನ ಎಲ್ಲಿಂದ ತಾನೆ ನಿದ್ದೆ ಬಂದೀತು? ಆದರೆ ಹೊರಗೆ ಅಸಾಧ್ಯ ಚಳಿ, ಜೊತೆಗೆ ನಾಲ್ಕು ಹೆಜ್ಜೆ ಜೋರಾಗಿ ನಡೆದರೆ ಏದುಸಿರು ಬೇರೆ, ಟೆಂಟಿಗೆ ಬಂದು ಮಾಡಿದ್ದು ಮಲಗುವ ನಾಟಕವಷ್ಟೇ!  

ಸಂಜೆ ಏಳು ಗಂಟೆಗೆ ರಾತ್ರಿಯ ಭೋಜನ. ಇದು ಕೊನೆಯ ಆರೋಹಣದ ಕೊನೆಯ ಭೋಜನ. ಊಟ ಮಾಡಿದ ಮೇಲೆ ಮತ್ತೆ ಮಲಗಲು ಹೇಳಿದರು, ಏಕೆಂದರೆ ಕೊನೆಯ ಆರೋಹಣ ಶುರುವಾಗುವುದು ಮಧ್ಯರಾತ್ರಿ ೧೨ ಗಂಟೆಗೆ! ಇಲ್ಲಿಯವರೆಗೂ ನಮ್ಮ ಚಾರಣವೆಲ್ಲ ಹಾಡುಹಗಲಿನಲ್ಲೇ ಆಗಿತ್ತು. ನಾವಿನ್ನೂ ಹತ್ತಬೇಕಾಗಿರುವುದು ೧೨೩೫ ಮೀಟರ್!  ಆಗಲೇ ಗಾಳಿಯ ಆಮ್ಲಜನಕಕ್ಕೆ ಒದ್ದಾಡುತ್ತಿದ್ದೇವೆ. ರಾತ್ರಿಯ ಹೊತ್ತು ಚಳಿ ಕೂಡ ಜಾಸ್ತಿ. ಬರಾಫು ಕ್ಯಾಂಪಿನಲ್ಲಿ ಉಷ್ಣಾಂಶ ಆಗಲೆ ೮ ಡಿಗ್ರಿ ಸೆಲ್ಸಿಯಸ್ ತೋರಿಸುತ್ತಿತ್ತು. ಇದನ್ನೆಲ್ಲ ನೆನೆಸಿಕೊಂಡು ವೇಳೆ ಕಳೆದದ್ದು, ನಿದ್ದೆ ಮಾತ್ರ ಬಾರದು! ಎದ್ದಿದ್ದು ಬೆಳಿಗ್ಗೆ ೭ ಗಂಟೆಗೆ, ಇನ್ನು ರಾತ್ರಿ ಪೂರ್ತಿ ಏರಬೇಕು. ಇದೆಲ್ಲ ನನ್ನಿಂದ ಸಾಧ್ಯವೇ, ಅಥವಾ ಇದೆಲ್ಲ ಕನಸೇ? 

ಐದನೇ ರಾತ್ರಿ ಮತ್ತು ಆರನೇ ದಿನ: 

ಐದನೇ ರಾತ್ರಿ ಹನ್ನೊಂದು ಗಂಟೆಯಿಂದ ಕೊನೆಯ ಆರೋಹಣಕ್ಕೆ ತಯಾರಾಗಲು ಶುರುವಾದೆವು. ಅಂತಿಮಾರೋಹಣಕ್ಕೆ ಎರಡರಿಂದ ಮೂರು ಲೇಯರ್ ಕಾಲುಚೀಲಗಳು, ಮೂರರಿಂದ ನಾಲ್ಕು ಲೇಯರ್ ಉಡುಗೆಗಳು ಕಾಲು, ಕೈ ಮತ್ತು ದೇಹಕ್ಕೆ, ಕತ್ತಿಗೆ ಬಲಕ್ಲಾವಾ, ತಲೆ ಮತ್ತು ಕಿವಿ ಮುಚ್ಚಿಕೊಳ್ಳಲು ಟೋಪಿ, ಬೆರಳುಗಳನ್ನು ಮುಚ್ಚಿಕೊಳ್ಳಲು ಕೈಗವಸು, ನಡೆಯಲು ಸಹಾಯಕ್ಕಾಗಿ ಊರುಗೋಲುಗಳು, ತಲೆಗೆ ಹೆಡ್-ಲೈಟು, ರಕ್-ಸ್ಯಾಕಿನಲ್ಲಿ ಕ್ಯಾಮೆಲ್ ಬ್ಯಾಗಿನಲ್ಲಿ ನೀರು, ಸ್ನ್ಯಾಕ್, ಇನ್ನೆರೆಡು ಇರಲಿ ಎಂದು ಹೆಚ್ಚುವರಿ ದಿರಿಸುಗಳು! ಮಧ್ಯರಾತ್ರಿ ಹನ್ನೆರಡಕ್ಕೆ ನಮ್ಮ ಕೊನೆಯ ಆರೋಹಣಕ್ಕೆ ನಮ್ಮ ಗೈಡ್ ನಾಂದಿ ಹಾಡಿದ, `ಹಕೂನ ಮಟಾಟ`. 

ನಾವು ಹೊರಟ ರಾತ್ರಿ ಅಮಾವಾಸ್ಯೆ! `ಅಮಾಸಿಯ ನಡುರಾತ್ರಿ  ಎಲ್ಲೂ ಹೋಗಬ್ಯಾಡ,` ಎಂದು ಚಿಕ್ಕವನಿದ್ದಾಗ ಹಿರಿಯರಿಂದ   ಕೇಳಿಸಿಕೊಳ್ಳುವ ಮಾತು ನೆನಪಾಯಿತು. ಅವತ್ತು ಅಮಾವಾಸ್ಯೆಯ ಮಧ್ಯರಾತ್ರಿ ನಾನೆಂದೂ ಮಾಡಿರದ ಆರೋಹಣಕ್ಕೆ ಅಣಿಯಾಗಿದ್ದೆ! ನಮ್ಮಂತೆಯೇ ಹತ್ತಾರು ಗುಂಪುಗಳು ನಮಗಿಂತೆ ಮೊದಲೇ ಮುಂದೆ ಸಾಗುತ್ತಿದ್ದರು. ಗೈಡ್ ದಾರಿ ತೋರಿಸುತ್ತಿದ್ದ. ನಾವು ಒಬ್ಬರ ಹಿಂದೆ ಒಬ್ಬರು ಹೆಡ್-ಲೈಟಿನಲ್ಲಿ ಮುಂದಿನವರ ಕಾಲನ್ನು ಅನುಸರಿಸಿ ಮೇಲೆ ಹತ್ತಲು ತೊಡಗಿದೆವು. `ಪೋಲೆ ಪೋಲೆ` ಹೆಜ್ಜೆ ಹಾಕುವ ಬರೀ ಕಲ್ಲು ಮಣ್ಣುಗಳಿಂದ ತುಂಬಿದ ಕಡಿದಾದ ಆರೋಹಣ. ನಮ್ಮ ಗೈಡ್ ತುಂಬ ನಿಧಾನವಾಗಿ ಹೆಜ್ಜೆ ಹಾಕುತ್ತ ನಮ್ಮ ಹತ್ತುವ ಗತಿಯನ್ನು ನಿರ್ಧರಿಸಿದ್ದ.  

ಅವನು ಅಷ್ಟು ಮೆಲ್ಲ ಹತ್ತುತ್ತಿದ್ದರೂ, ನಮಗೆ ಅದೂ ಕಷ್ಟವೆನಿಸಲು ಶುರು ಹತ್ತಿತು. ಕೈಗವಸು ಹಾಕಿಕೊಂಡಿದ್ದರೂ ಹತ್ತು ನಿಮಿಷದಲ್ಲಿ ಕೈ ಮರಗಟ್ಟಲು ಶುರುವಾಯಿತು. ಇನ್ನೊಂದು ಕೈಗವಸನ್ನು ಅದರ ಮೇಲೆ ಹಾಕಿಕೊಂಡೆ. ಕೈಯ ಚಳಿ ಸ್ವಲ್ಪ ಕಡಿಮೆಯಾಯಿತು, ಆದರೆ ಊರುಗೋಲು ಹಿಡಿಯುವುದು ಕಷ್ಟವೆನಿಸಲು ಶುರುವಾಯಿತು. ಇನ್ನೂ ಹತ್ತು ನಿಮಿಷವಾಗುವಷ್ಟರಲ್ಲಿ ಎದೆ ಮತ್ತು ಬೆನ್ನನ್ನು ಯಾರೋ ಕಟ್ಟಿ ಅಮುಕುತ್ತಿರುವ ಭಾವನೆ. ಸದ್ಯ ಮೂರು ಕಾಲುಚೀಲ ಹಾಕಿಕೊಂಡಿದ್ದು ಒಳ್ಳೆಯದಾಯಿತು, ಕಾಲ್ಬೆರಳುಗಳು ಸುರಕ್ಷಿತವಾಗಿದ್ದವು. 

ಸುಮಾರು ಒಂದು ಗಂಟೆ ಹತ್ತಿದ ಮೇಲೆ ಒಂದು ಸಣ್ಣ ಬ್ರೇಕ್! ಆಗ ಒಬ್ಬ ಗೈಡ್ ನನ್ನ ಕಷ್ಟವನ್ನು ನೋಡಿ, ನನ್ನ ಬಳಿ ಬಂದು, ಕೈಗವಸನ್ನು ಸರಿಯಾಗಿ ಹಾಕಿದ. ನಾನು ಹಾಕಿಕೊಂಡ ಲೇಯರ್-ಗಳಲ್ಲಿ ಒಂದು ಲೇಯರ್ ಅನ್ನು ಕಡಿಮೆ ಮಾಡಲು ಹೇಳಿದ. ನಾನು ಇಲ್ಲಿಯವರೆಗೂ ಊರುಗೋಲನ್ನು ಉಪಯೋಗಿಸಿಯೇ ಇರಲಿಲ್ಲ, ಆದರೆ ಊರುಗೋಲಿಲ್ಲದೇ ಅಂತಿಮ ಆರೋಹಣ ಮಾಡಬೇಡಿ ಎಂದು ನಮ್ಮ ಚೀಫ್ ಗೈಡ್ ಹೇಳಿದ್ದ. ನನ್ನ ಜೊತೆಗಾರರೆಲ್ಲ್ರೂ ಊರುಗೋಲನ್ನು ಹಿಡಿದು ನಡೆಯುತ್ತಿದ್ದರು. ನನಗೆ ಮಾತ್ರ ಇಂಥ ರಾತ್ರಿಯಲ್ಲಿ ಕೈಗವಸಿನಲ್ಲಿ ಊರುಗೋಲನ್ನು  ಊರಿ ನಡೆಯುವುದು ತುಂಬ ಕಷ್ಟವಾಗುತ್ತಿತ್ತು. ಗೈಡ್ ನನ್ನ ಊರುಗೋಲುಗಳನ್ನು ಮಡಚಿ ನನ್ನ ರಕ್-ಸ್ಯಾಕಿಗೆ ಹಾಕಿದ. ತನ್ನಂತೆ ಊರುಗೋಲಿಲ್ಲದೇ ಹತ್ತಬಹುದು ಎಂದು ಭರವಸೆ ಕೊಟ್ಟ.  ಕುಡಿಯಲು ನೀರುಕೊಟ್ಟ, ತಿನ್ನಲು ನನ್ನ ಬ್ಯಾಗಿನಿಂದ ಬಿಸ್ಕೀಟು ಕೊಟ್ಟ. ಹೋದ ಜೀವ ಬಂದಂತಾಯಿತು.  

ಮತ್ತೆ ಚಾರಣ ಮುಂದುವರೆಯಿತು. ನಾವೀಗ ಎಲ್ಲ ಮೋಡಗಳಿಗಿಂತ ಆಗಲೇ ಮೇಲಕ್ಕೆ ಬಂದ್ದಿದ್ದೆವಲ್ಲ, ಅಮವಾಸ್ಯೆಯ ರಾತ್ರಿ ಬೇರೆ, ಆಕಾಶದಲ್ಲಿ ಪ್ರತಿ ನಕ್ಷತ್ರಗಳೂ ಕಾಣಿಸುತ್ತಿದ್ದವು. ಅಷ್ಟು ಶುಭ್ರವಾದ ಅಷ್ಟೊಂದು ಚುಕ್ಕೆಗಳಿರುವ ಆಕಾಶವನ್ನು ನಾನು ಅವತ್ತೇ ನೋಡಿದ್ದು. ಆದರೆ ತಲೆ ಮೇಲೆತ್ತಿ ನಡೆಯುವಂತಿಲ್ಲ, ಮುಂದಿನವರ ಕಾಲನ್ನು ನೋಡಿ ಹತ್ತಬೇಕು. ನಾವು ಹೀಗೆ ಹತ್ತಬೇಕಾದರೆ ಬೇರೆ ಗುಂಪಿನಿಂದ ಕೆಲವರನ್ನು ಇಳಿಸಿಕೊಂಡು ಹೋಗುತ್ತಿದ್ದರು, ಅವರಿಗೆಲ್ಲ `ತೀವ್ರ ಪರ್ವತ ಕಾಯಿಲೆ` (acute mountain syndrome) ಆಗಿತ್ತು. ಬಾಯಿಯವರೆಗೂ ಬಂದು ಗಂಟಲಿಗೆ ಇಳಿಯಲಿಲ್ಲ ಎನ್ನುವಂತೆ, ಇಷ್ಟು ಎತ್ತರ ಬಂದು ಪರ್ವತದ ಶೃಂಗ ತಲುಪದವರನ್ನು ನೋಡುತ್ತ ನಿಧನಿಧಾನವಾಗಿ ಮೇಲೆ ಹತ್ತುತ್ತಿದ್ದೆವು. ನಮಗೂ ಅದೇ ಪಾಡು ಬರದಿರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತ. ಚಳಿಯ ಹೊಡೆತಕ್ಕೆ ಕ್ಯಾಮೆಲ್ ಬ್ಯಾಗಿನಲ್ಲಿ ನೀರು ಪೂರ್ತಿ ಮಂಜುಗಡ್ಡೆಯಾಗಿಬಿಟ್ಟಿದೆ.  ಉಷ್ಣಾಂಶ -೧೦, ಅನುಭವಿಸುವ ಉಷ್ಣಾಂಶ -೧೫ ಡಿಗ್ರೈ ಸೆಂಟಿಗ್ರೇಡ್!

ಕಿಬೋ ಶಿಖರದ ಮೊದಲ ಶೃಂಗದ ಹೆಸರು, ಸ್ಟೆಲ್ಲಾ ಪಾಯಿಂಟ್. ನಾವು ಅದನ್ನು ತಲುಪಲು ಸುಮಾರು ೭೫% ಹತ್ತಿರಬಹುದು, ಸೂರ್ಯೋದಯದ ಮೊದಲ ಕುರುಹುಗಳು ಶುರುವಾದವು. ನಾವು ಹತ್ತುವ ಪರ್ವತವನ್ನು ಬಿಟ್ಟರೆ, ಸುತ್ತಲಿನ ೨೭೦ ಡಿಗ್ರ ಒಂದು ಸರಳರೇಖೆಯನ್ನು ಎಳೆದಂತೆ, ನಸುಗೆಂಪು ಬಣ್ಣದ ಬೆಳಕು! ಅಲ್ಲಿ ಕಾಣುವ ದೃಶ್ಯವನ್ನು ಮತ್ತು ಅನುಭವವನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ, ಫೋಟೋಗಳಲ್ಲಿ ವಿಡಿಯೋಗಳಲ್ಲಿ ಹಿಡಿದಿಡುವುದು ಸಾಧ್ಯವೇ ಇಲ್ಲ. ಮುಂದಿನ ಹದಿನೈದು ನಿಮಿಷ ಸೂರ್ಯ ಹುಟ್ಟುವ ಅದ್ಭುತ ಕ್ರಿಯೆ ನಾವು ಮೇಲೆ ಹತ್ತುವ ಕಾರ್ಯಕ್ಕೆ ಹುಮ್ಮಸ್ಸು ಕೊಡುತ್ತಿತ್ತು.  ಎರಡೂ ಬದಿಯಲ್ಲಿ ಹಿಮಾಚ್ಛಾಧಿತ ಕಲ್ಲುಗಳು ಕಣ್ಣಿಗೆ ತಂಪನ್ನುಣಿಸುತ್ತಿದ್ದವು.  

ಸ್ಟೆಲ್ಲಾ ಪಾಯಿಂಟ್ ೫೭೫೬ ಮೀಟರ್ ಎತ್ತರದಲ್ಲಿದೆ. ನಾವು ಅಲ್ಲಿ ತಲುಪುವಷ್ಟರಲ್ಲಿ ಆಗಲೇ ಕೆಲವರು ಕೆಳಗೆ ಇಳಿಯುತ್ತಿದ್ದರು! ಅಲ್ಲಿ ಫೋಟೋ ತೆಗೆದುಕೊಂಡು ಸ್ವಲ್ಪ ಹೊತ್ತು ವಿರಮಿಸಿ, ನಮ್ಮ ಕೊನೆಯ ಆರೋಹಣವನ್ನು ಆರಂಭಿಸಿದೆವು, `ಉಹುರು` ಎನ್ನುವ ತುದಿಯನ್ನು ಮುಟ್ಟಲು. ಅಸಾಧ್ಯ ಚಳಿ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ಏದುಸಿರು.  ಆದರೆ `ಊರಿಗೆ ಬಂದವಳು ನೀರಿಗೆ ಬಾರದಿರುವಳೇ?` ಎನ್ನುವ ಗಾದೆಯಂತೆ, `ಸ್ಟೆಲ್ಲಾ ಪಾಯಿಂಟ್ ತಲುಪಿದ ಮೇಲೆ ಉಹುರು ತಲುಪದಿರಲು ಸಾಧ್ಯವೇ?`  

ಸ್ಟೆಲ್ಲಾ ಪಾಯಿಂಟ್-ನಿಂದ `ಉಹುರು` ಸುಮಾರು ಒಂದು ಕಿಲೋಮೀಟರ್, ಸ್ಟೆಲ್ಲಾ ಪಾಯಿಂಟಿಗಿಂತ ಕೇವಲ ೧೪೦ ಮೀಟರ್ ಎತ್ತರ. ನಡೆಯುವ ಎರಡೂ ಬದಿ ದೂರದಲ್ಲಿ ಹಿಮದ ಬಂಡೆಗಳು, ದೂರದಲ್ಲಿ ಕೆಳಗೆ ಮೋಡಗಳು. ನನಗೆ `ನಾರದ ವಿಜಯ್` ಸಿನೆಮಾದಲ್ಲಿ  ಆಕಾದಲ್ಲಿ ನಡೆಯುವ ನಾರದನ ನೆನಪಾಯಿತು. ಹೆಜ್ಜೆಯ ಮೇಲೊಂದು ಹೆಜ್ಜೆಯ ನಿಕ್ಕುತ  ಒಂದೂವರೆ ಗಂಟೆಯಲ್ಲಿ ಉಹುರು ತಲುಪಿದೆವು.  ಅಸಾಧ್ಯ ಎಂದುಕೊಂಡ ಕಿಲಿಮಾಂಜಾರೋ ಪರ್ವತದ ತುಟ್ಟತುದಿ `ಉಹುರು`ದ ಮೇಲೆ ನಾನು ನಿಂತಿದ್ದೆ.  

ಉಹುರು ಎಂದು ಬರೆದಿರುವ ಫಲಕದ ಮುಂದೆ ನಿಂತಾಗ, ನನಗೆ ಕಿಲಿಮಾಂಜಾರೋ ಗೆದ್ದ ಭಾವನೆ ಬರಲಿಲ್ಲ. ನನ್ನನ್ನು ಗೆದ್ದ ಭಾವನೆಯೂ ಬರಲಿಲ್ಲ. ನನಗಿಂತ ಮೊದಲು ಲಕ್ಷಾಂತರ ಜನ ಕಿಲಿಮಾಂಜಾರೋ ಹತ್ತಿದ್ದಾರೆ, ನಾನಾದ ಮೇಲೆ ಕೂಡ ಮಿಲಿಯನ್-ಗಟ್ಟಲೇ ಜನರು ಹತ್ತುತ್ತಾರೆ.  ಗೈಡುಗಳು ಪೋರ್ಟರುಗಳಿಲ್ಲದೇ ಇದ್ದಿದ್ದರೆ ಇದೆಲ್ಲ ಸಾಧ್ಯವಾಗುವ ಮಾತೇ? `ಉಹುರು` ಎಂದರೆ `ಬಿಡುಗಡೆ` ಎಂದು ಅರ್ಥ; ಎಂಥಹ ಅನ್ವರ್ಥನಾಮ! `ಉಹುರು` ಆ ಕ್ಷ ನನ್ನನ್ನು ಎಲ್ಲದರಿಂದ ಬಿಡುಗಡೆ ಮಾಡಿ ವಿನೀತನನ್ನಾಗಿಸಿತು. ಪ್ರಕೃತಿಯ ಅಗಾಧತೆಯ ಮುಂದೆ ನಾನು ಅಕ್ಷರಷಃ ಇರುವಯಾಗಿಬಿಟ್ಟೆ. ನಮ್ಮನ್ನು ಇಲ್ಲಿಯವರೆಗೆ ಹರೆತಂದ ಗೈಡುಗಳು, ಪೋರ್ಟರುಗಳು, ಅಡುಗೆಯವರು ಮಾಡುವ ಕೆಲಸವನ್ನು ಹಣದಲ್ಲಿ ಅಳೆಯಲು ಸಾಧ್ಯವೇ ಇಲ್ಲ ಎಂದು `ಉಹುರು` ಹೇಳಿದಂತಾಗುತ್ತದೆ, ನಾನು ವಿನಮ್ರನಾಗಿ `ಉಹುರು` ಎಂದು ಬರೆದ ಫಲಕದ ಬಳಿ ಕೂತುಕೊಂಡೆ. .  

ಮಿತ್ರರೆಲ್ಲ ಸೇರಿದೆವು. ಎಲ್ಲ ೨೧ ಜನರೂ ಉಹುರು ಮುಟ್ಟಿದೆವು ಎನ್ನುವುದು ದೊಡ್ಡ ಸಮಾಧಾನ. ನೂರಾರು ಫೋಟೋಗಳನ್ನು ತೆಗೆದುಕೊಂಡು, ಉಹುರುದವರೆಗೂ ತಂದ ಥೇಪ್ಲಾ ತಿಂದು, ಹಾಡಿ, ಕುಣಿದೆವು. ನಂತರ ನಾನೊಬ್ಬನೇ ಇನ್ನೂ ಸ್ವಲ್ಪ ಮುಂದೆ ನಡೆದು ಹೋದೆ. ಚಳಿ ಸ್ವಲ್ಪ ಕಡಿಮೆಯಾಗಿತ್ತು ಅಥವಾ ಕಡಿಮೆ ಅನಿಸುತ್ತಿತ್ತು. ಹತ್ತು ನಿಮಿಷ ಏಕಾಂತದಲ್ಲಿ ಕುಳಿತುಕೊಂಡು ಸುತ್ತಲಿನ ದೃಶ್ಯ ವೈಭವನ್ನು ನೋಡುತ್ತ ಕುಳಿತುಕೊಂಡು ಬಿಟ್ಟೆ. ಇದು ನಿಜವಾ, ಕನಸಾ, ಭ್ರಮೆಯಾ, ವಾಸ್ತವವಾ, ಕತೆಯಾ ಎನಿಸುತ್ತಿತ್ತು. ಆಗುತ್ತಿರುವುದು ಸಂತೋಷವಾ, ಆನಂದವಾ, ಶಾಂತಿಯಾ, ಶೂನ್ಯವಾ, ಖಾಲಿತನವಾ, ರಾಹಿತ್ಯವಾ? ಏನೆಂದು ಕರೆಯಲಿ  ಆ ಭಾವಕ್ಕೆ? ಕಿಲಿಮಾಂಜಾರೋದ ತುಟ್ಟತುದಿಯಲ್ಲಿ `ಉಹುರು`ವಿನ ಅನುಭವವಾಯಿತು ಎನ್ನುವುದೇ ಸರಿಯೇನೋ! 

ಎಷ್ಟು ಹೊತ್ತು ಅಂತ ಅಲ್ಲೇ ಇರಲು ಸಾಧ್ಯ? ಒಲ್ಲದ ಮನಸ್ಸಿನಿಂದ ಒಬ್ಬೊಬ್ಬರಾಗಿ ಹೊರಟೆವು. ಕೆಳಗಿಳಿಯಲು ಮಾತ್ರ ಊರುಗೋಲು ಬೇಕೇ ಬೇಕು. ಹೊಸ ಹುಮ್ಮಸ್ಸಿನಲ್ಲಿ ಊರುಗೋಲುಗಳನ್ನು ಊರುತ್ತ ಕೆಳಗೆ ಇಳಿಯಲು ಶುರುಮಾಡಿದೆವು. ಹಿಂದಿನ ದಿನ ಬೆಳಗಿನ ಆರುವರೆಯಿಂದ ನಿದ್ದೆ ಮಾಡಿಲ್ಲದಿದ್ದರೂ ಒಂಚೂರೂ ನಿದ್ದೆ ಬರುತ್ತಿಲ್ಲ, ಆಗಿರುವ ಸುಸ್ತು ಕೂಡ ಮರೆತು ಹೋಗಿತ್ತು. ಮತ್ತೆ ಬರಾಫು ಕ್ಯಾಂಪು ಸೇರಿದಾಗ ಮಧ್ಯಾಹ್ನವಾಗಿತ್ತು. ಅಲ್ಲಿ ಊಟಮಾಡಿ ಸ್ವಲ್ಪ ಹೊತ್ತು ವಿರಾಮ. ದೇಹಕ್ಕೆ ಹೊಸ ಉತ್ಸಾಹ ಬಂದಿತ್ತು. ಅಲ್ಲಿಂದ ನಾವು ಮಲಗುವ `ಹೈ ಕ್ಯಾಂಪಿ`ಗೆ ಮತ್ತೆ ಎರಡೂವರೆ ಗಂಟೆ ಇಳಿತ. ಹೈ ಕ್ಯಾಂಪ್ ಸೇರಿದಾಗ ಸೂರ್ಯ ಮುಳುಗಲು ಕಾಯುತ್ತಿದ್ದ. ಹೈ ಕ್ಯಾಂಪ್ ೩೯೫೦ ಮೀಟರ್ ಎತ್ತರದಲ್ಲಿದೆ. 

ಒಟ್ಟಿನಲ್ಲಿ ಮಧ್ಯರಾತ್ರಿಯಿಂದ ೧೨೪೦ ಮೀಟರ್ ಹತ್ತಿ ಉಹುರು ಮುಟ್ಟಿ, ಮತ್ತೆ ೧೯೪೫ ಮೀಟರ್ ಕೆಳಗೆ ಇಳಿದು ಬಂದಿದ್ದೆವು! ಅಲ್ಲಿ ಊಟಮಾಡಿ ಟೆಂಟ್ ಒಳಗೆ ಸೇರಿದೆವು. ಕಳೆದ ೩೮ ಗಂಟೆಯಿಂದ ನಿದ್ದೆ ಮಾಡಿರಲಿಲ್ಲ. ತಲೆ ಇಟ್ಟ ತಕ್ಷಣ ನಿದ್ದೆ ಬಾರದಿರುತ್ತದೆಯೇ?  

ಏಳನೇ ದಿನ:  

ಮಾರನೇಯ ದಿನ ಎದ್ದು, ತಿಂಡಿ ತಿಂದು, ಮತ್ತೆ ರೇನ್-ಫಾರೆಸ್ಟ್-ನಲ್ಲಿ ೧೪ ಕಿಲೋಮೀಟರ್ ಇಳಿಯುತ್ತ ಮ್ವೇಕಾ ಬಾಗಿಲನ್ನು ತಲುಪಿ, ಕಿಲಿಮಾಂಜಾರೋಗೆ ವಿದಾಯ ಹೇಳಿದೆವು.  ಮ್ವೇಕಾ ದ್ವಾರದಿಂದ ಹೊರಬಂದು, ನಮಗಾಗಿ ಕಾಯುತ್ತಿದ್ದ ಬಸ್ಸಿನಲ್ಲಿ ಕೂತು ಮತ್ತೆ ನಮ್ಮ ಹೊಟೇಲು ಸೇರಿದೆವು. 

ಎರಡು ದಡ

ಎಲ್ಲರಿಗೂ ನಮಸ್ಕಾರ
ಈ ವಾರದ ಸಂಚಿಕೆಯಲ್ಲಿ ಚೇತನ್ ಅವರ ಸ್ವಂತ ಲೇಖನ ಇದೆ
ದಯವಿಟ್ಟು ಓದಿ ಪ್ರತಿಕ್ರಿಯಿಸಿರಿ

———————————————————————————————————-

ಅಕ್ಕ

ನಾನು ಮತ್ತು ನನ್ನ ತಂಗಿ ಎಂದೂ ಊರು ಬಿಟ್ಟು ಆಚೆ ಹೋದವರೇ ಅಲ್ಲ , ಮಳೆಗಾಲದಲ್ಲಿ ನನ್ನಮ್ಮನ ಆರ್ಭಟಕ್ಕೋ ಬೇಸಿಗೆಯಲ್ಲಿ ಊರವರ ಆಗ್ರಹಕ್ಕೋ ನಮ್ಮ ಸಂಬಂಧಿಕರು ಒಂದೆರಡು ದಿನ ಬಂದು ಹೋಗುವುದು ಬಿಟ್ಟರೆ ಯಾರು ನಮ್ಮೊಂದಿಗಿದ್ದದ್ದು ಕಡಿಮೆಯೇ  ಅದರಲ್ಲೂ ನಮ್ಮಮನನ್ನು ನೋಡಿದ ನೆನಪು ಇಬ್ಬರಿಗೂ ಇಲ್ಲ ಆದರೂ ಅತಿ ಹೆಚ್ಚು ಮಳೆಯಾದ ಕಾಲದಲ್ಲಿ ನಮ್ಮ ಮನೆಯಿಂದ ಒಂದರ್ಧ ಮೈಲು ದೂರದಲ್ಲಿಯೇ ಹೋದಳೆಂದು ಊರ ಜನ ಮಾತನಾಡುವಾಗ ಕೇಳಿದ್ದು ನಮ್ಮ ಭಾಗ್ಯ, ಅವಳು ಹೀಗೆಲ್ಲ ಹೋದಾಗ ನಮ್ಮೂರಿನಿಂದ ಒಂದೆರಡು ಮೈಲು ದೂರದ ಗೊರೂರಿನ ರಾಮಸ್ವಾಮಪ್ಪ ಹೇಳಿದ ಮಾತನ್ನು ಮರೆಯದೆ ನೆನೆಸಿಕೊಳ್ಳುತ್ತಾರೆ ಹೇಮೆ ಹೋದರೆ ಸೀರೆಯ ಸೆರಿಗಿನಂತೆ ನಲಿಯುತ್ತಲೇ ಎಂದು ಹೌದು ಅವಳ ಹೆಸರು ಹೇಮೆ ಹೇಮಾವತಿ ನಾನೆಂದು ಅವಳನ್ನು ನೋಡದಿದ್ದರು ಅವಳ ಚೆಲುವಿನ ಬಗ್ಗೆ ನನ್ನ ಕಲ್ಪನೆಗೂ ರಾಮಸ್ವಾಮಪ್ಪನ ವರ್ಣನೆಗೂ ಹೇಚ್ಛೆನು ವ್ಯತ್ಯಾಸವಿಲ್ಲವೇನೋ.
ನನ್ನದೋ ಬರಿ ಕಲ್ಪನೆಗಳಲ್ಲೇ ತುಂಬಿದ ಬದುಕು ಮನೆಯ ಹಿಂಬಾಗಿಲಾಯಿತು ನಾನಾಯಿತು ಎಂದೇ ಬದುಕಿದವಳು ಕುರಿ ಕಾಯುವವರು , ದನಗಾಯಿಗಳು , ಊರಾಚೆ ತೋಟ ಮಾಡಿ ಅಡಿಕೆ ಅಯಲು ಬರುವವರೊಂದಿಗಷ್ಟೇ ನನ್ನ ಮಾತು ಒಡನಾಟ ಆದರೆ ನನ್ನ ತಂಗಿ ಹಾಗಲ್ಲ ಮನೆಯ ಮುಂಬಾಗಿಲಿನ ವ್ಯವಹಾರವೆಲ್ಲ ಅವಳದ್ದೇ ತುಂಬಾ ಬುದ್ದಿವಂತೆ ನನ್ನ ತಂಗಿ , ಊರ ಎಲ್ಲ ವ್ಯವಹಾರಗಳಲ್ಲೂ ಅವಳು ತೊಡಗಿ ಕೊಂಡೆ ಇರುತ್ತಾಳೆ ಊರಿಗೆ ಬರುವ ರಾಜಕಾರಣಿಗಳು , ಊರಿನ ಎಲ್ಲ ಜಗಳ ಸಂತೋಷ ಕೊಡುವ ಹಬ್ಬಗಳು ಎಲ್ಲದಕ್ಕೂ ಅವಳ ಸಾಕ್ಷಿಯೇ ಮುಖ್ಯ ಮತ್ತು ಅವಳಿಗೆ ಊರ ಜನ ಅಷ್ಟೇ ಗೌರವ ಕೊಡುತ್ತಾರೆ ಕೂಡ. ಅವಳ ತ್ಯಾಗಗಳೇ ಅವಳಿಗಿರುವ ಅಷ್ಟು ಗೌರವಕ್ಕೆ ಕಾರಣವೇನೋ ಊರಜನರ ಉಪಯೋಗಕ್ಕೆ ಮೀನು ಸಾಕಾಣಿಕೆಗೆ ಬೇಕೆಂದಾಗೆಲ್ಲ ತನ್ನ ಜಾಗವನ್ನು ಬಿಟ್ಟುಕೊಡುತ್ತಾಳೆ, ಯಾವುದೇ ಪ್ರತಿಮೆಯು ಅವಳ ಭೂಮಿಯಲ್ಲೇ ನಿಲ್ಲಬೇಕು, ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಇವಳ ಮೆಟ್ಟಿಲೇ ಮುನ್ನುಡಿ ಹೀಗೆ ಹತ್ತು ಹಲವು ತ್ಯಾಗಗಳಿಲ್ಲದೆ ಜನ ಅವಳನ್ನು ಅಷ್ಟು ಗೌರವಿಸುವರೇ. ಎಷ್ಟಾದರೂ ನನ್ನ ತಂಗಿ ಅಲ್ಲವೇ , ಆದರೂ ಅವಳು ನಾನು ಮಾತನಾಡಿದ್ದು ಕಡಿಮೆಯೇ ಮಾತೆ ಆಡದೆ ದೂರದಲ್ಲಿ ನೋಡಿ ಸಂತೋಷ ಪಟ್ಟದ್ದೇ ಹೆಚ್ಚು , ಅವಳನ್ನು ನಮ್ಮೂರಿನ ಪಟೇಲರು ನೀನು ಬೆಳೆಯುವ ಚೇಣಿಯಿಂದ ಇನ್ನು ಚಾಪೆಯನ್ನು ಹೆಣೆಯುತ್ತಾರೆಯೇ , ದೊಡ್ಡ ಅರಳಿಮರದ ಕೆಳಗೆ ಕುಳಿತು ಜನ ಇನ್ನು ಹರಟೆ ಹೊಡೆಯುತ್ತಾರೆಯೇ , ಊರ ಮುಂದಿನ ಹನುಮಂತರಾಯನ ಗುಡಿಯಲ್ಲಿ ಮಕ್ಕಳು ಇನ್ನು ಕಣ್ಣ ಮುಚ್ಚಾಲೆ ಆಡುತ್ತಾರೆಯೇ ಎಂದೆಲ್ಲ ಕೇಳುವ ಆಶೆ. ನಾನಂತೊ ಮೂಗಿಗಿಂತ ಹೆಚ್ಚು ನಾನಾಯಿತು ನನ್ನ ಕೆಲಸವಾಯಿತು ಎಂದು ಇದ್ದುಬಿಟ್ಟವಳು , ನಮ್ಮ ಮನೆಯ ಹಿಂಬಾಗಿಲಿನಲ್ಲಿ
ಸಣ್ಣ ಮಕ್ಕಳು ಪಾಠ ಓದಿಕೊಂಡು ಓಡುವಾಗಲೋ , ಸಣ್ಣ ಪುಟ್ಟ ಮೋಟಾರು ಗಾಡಿಗಳು ಹೋದಾಗಲೂ ನೋಡಿ ಸಂತೋಷಪಟ್ಟವಳು ನನ್ನ ತಂಗಿಯಷ್ಟು ನಾನು ಬುದ್ದಿವಂತೆ ಅಲ್ಲದಿದ್ದರೂ ಅವಳು ನನ್ನ ತಂಗಿ ಅಲ್ಲವೇ …!!!
ತಂಗಿ
ನನ್ನ ಅಕ್ಕನಿಗೆ ಅಷ್ಟೇನೂ ಗೊತ್ತಾಗುವುದಿಲ್ಲ, ಬರಿ ಮುಂದಿನ ಬಾಗಿಲಲ್ಲಿದಕ್ಕೆ ನಂಗೆಲ್ಲವೂ ತಿಳಿದಿದೆ , ನಾನು ತುಂಬಾ ಬುದ್ದಿವಂತಳು ಯಾವಾಗ ಬೇಕಾದರೂ ನನ್ನಮ್ಮ ಹೇಮೆಯನ್ನು ಹತ್ತಿರದಿಂದ ನೋಡಬಹುದು ಎಂದುಕೊಂಡುಬಿಟ್ಟಿದಾಳೆ ನನ್ನ ಬೇಜಾರುಗಳನ್ನು ಯಾರಬಳಿ ಹೇಳಿಕೊಳ್ಳಲಿ ನನಗು ಅವಳಂತೆ ಹಿಂದಿನ ಬಾಗಿಲಲ್ಲೇ ಇರಬೇಕಾಗಿತ್ತು ಅನಿಸುತ್ತಲೇ ಇರುತ್ತದೆ , ಏನುಮಾಡುವುದು ನಮಗೆ ದೊರಕಿದ್ದು ನಮಗಲ್ಲವೇ..!!
ನನ್ನ ಜೀವನವೆಲ್ಲವನ್ನು ನಮ್ಮೂರಿನ ಬದುಕಿನ ಬೇರೆ ಬೇರೆ ಕಾಲಘಟ್ಟದಲ್ಲಿ ಆದ ಬದಲಾವಣೆಗಳನ್ನು ನೋಡಿಕೊಂಡೆ ಕಳೆದಿದ್ದೇನೆ, ಎತ್ತಿನಗಾಡಿಯಿಂದ ಶುರುವಾಗಿ ಟೆಂಪೋಗಳು, ಬಸ್ಸುಗಳು ಇತ್ತೀಚೆಗೆ ನಮ್ಮೂರಿನ ಜನರ ಬಳಿ ಅವರದೇ ವಾಹನಗಳನ್ನು ನೋಡಿದ್ದೇನೆ, ಜನರು ಜಾತ್ರೆ , ದೇವಾಸ್ಥಾನಗಳಿಗೆ ಹೋಗುತ್ತಿದ್ದವರು ಪಟ್ಟಣಗಳಿಗೆ ಮಾಲ್ಗಳಿಗೆ ಹೋಗುತ್ತಿದ್ದಾರೆ, ಹಿಂದೆ ನಮ್ಮೂರಿನ ಮದುವೆಗಳ ಮೆರವಣಿಗೆ ಹನುಮಂತರಾಯನ ಗುಡಿಯಿಂದ ಕೇಶವದೇವರ ದರ್ಶನಕ್ಕೆ ಹೋಗಿಬರುತಿದ್ದನ್ನು ನೋಡಿದವಳಿಗೆ ಇಂದು ರಾಜಕೀಯ ಭಾಷಣ ಮತ್ತು ಕಾರ್ಯಕ್ರಮಗಳನ್ನು ನೋಡುವ ಕೇಳುವಂತಾಗಿದೆ ಇದು ಬದುಕಿನ ಬೇಕಿರುವ ಬದಲಾವಣೆಗಳು ಎನ್ನುವ ತಿಳುವಳಿಕೆಯೂಬಂದಿದೆ. ಹಿಂದೆ ನಮ್ಮೂರಿನ ಪಟೇಲರು ನನ್ನ ಅಂಗಳದಲ್ಲಿ ಬೆಳೆದ ಚೇಣಿಯನ್ನು ಕುಯ್ದು ಮಲಗುವ ಚಾಪೆ, ಊಟದ ಚಾಪೆ ಮಾಡಲು ಚೇಣಿಯನ್ನು ಬಡಿಯುತಿದ್ದ ಒಂದೇ ಸಪ್ಪಳವನ್ನು ಕೇಳುತಿದ್ದವಳು ಇಂದು ಅಂಗಡಿ , ಬಸ್ ನಿಲ್ದಾಣಗಳಲ್ಲಿ ನಮ್ಮೂರಿನ ಜನರ ರಾಜಕೀಯ ಹರಟೆಗಳನ್ನು ಕೇಳುತಿದ್ದೇನೆ , ನಮ್ಮೂರಿನ ಜನ ಬುದ್ಧಿವಂತರಿದ್ದಾರೆ ಕಾಡು ಹರಟೆಯ ಜೊತೆಗೆ ಸಾಕಷ್ಟು ಪ್ರಗತಿಶೀಲ ಮಾತುಗಳನ್ನು ಆಡುತ್ತಾರೆ ಅದಕ್ಕಾಗಿಯೇ ದೇವಸ್ಥಾನಗಳ ಜೊತೆಗೆ ನಮ್ಮೂರಿನಲ್ಲಿ ಪ್ರತಿಮೆಗಳು ಬಂದಿರುವುದು. ಘಟ್ಟದ ಕೆಳಗೆ ಕಾರಂತಜ್ಜ ಎಂಬುವರು ಒಂದು ಮನೆಯ ಬಗ್ಗೆ ತಿಳಿಯಬೇಕಾದರೆ ಮನೆಯ ಹಿಂದಿನ ಬಾಗಿಲಿನಿಂದ ಹೋದರೆ ಹೆಚ್ಚು
ಹತ್ತಿರವಾಗಿ ತಿಳಿಯಲು ಸಾಧ್ಯ ಎನ್ನುತ್ತಿರುತ್ತಾರೆ ಎಂದು ನಮ್ಮೂರ ಶಾಲೆಯ ಮಕ್ಕಳು ಹೇಳುತ್ತಿರುತ್ತಾರೆ, ಆ ಮಟ್ಟಿಗೆ ನನ್ನ ಅಕ್ಕನೇ ಭಾಗ್ಯಶಾಲಿ.

ಹೊರನಾಡಿನ ಕನ್ನಡಿಗರು:  ಅಜ್ಜಿ – ಮೊಮ್ಮಗಳ ಸಂವಾದ; ವತ್ಸಲಾ ರಾಮಮೂರ್ತಿ ಬರೆದ ಲೇಖನ

ಸಮಸುಖಿ (ಸಮದುಃಖಿ) ಕನ್ನಡಿಗರಿಗೆ ಸಬ್ಸ್ಟಿಟ್ಯೂಟ್ ಸಂಪಾದಕನ ನಮಸ್ಕಾರಗಳು.  ಕೆಳಗೆ ಬರೆದಿರುವ ಸಂವಾದ ಬರಿಯ ಲೇಖಕಿಯದಲ್ಲ, ಅದು ನಮ್ಮಲ್ಲಿ ಅನೇಕರ ಜೀವನದಲ್ಲಿ ಒಮ್ಮೆ ಬರಬಹುದಾದ ಘಳಿಗೆ.  ಇದು ಬರಿಯ ಕನ್ನಡಿಗರಿಗೆ ಮಾತ್ರವಲ್ಲ, ಯಾವ ವಲಸಿಗರಿಗೂ ಬರಬಹುದಾದ ಪ್ರಶ್ನೆ. ಓದಿ, ನಿಮ್ಮ ಸ್ವಂತದ ಅಥವಾ ಕೇಳಿದ / ನೋಡಿದ ಅನುಭವವೇನಾದರೂ ಇದ್ದರೆ, ಹಂಚಿಕೊಳ್ಳಿ - ಸಂ. 
*****************************************
ನನ್ನ  ಮೊಮ್ಮಗಳು ನನ್ನನ್ನು ಒಂದು question ಕೇಳಿದಳು “ಅಜ್ಜಿ ನಾನು ಯಾರು? ನೀನು ಎಲ್ಲಿಂದ ಬಂದೆ?  ಯಾಕೆ ಬಂದಿ?”
ಅವಳಿಗೆ ಕೂಡಲೆ ಉತ್ತರ ಕೊಡಲು ಹೊಳೆಯಲ್ಲಿಲ್ಲ.  ತುಸು ತಡೆದು “ಮೊಮ್ಮಗಳೇ, ನಮ್ಮ ಚರಿತ್ರೆಯನ್ನು ಕೇಳುವಂತವಳಾಗು.”
“ಹಾಗಾದರೆ ಅಜ್ಜಮ್ಮ, ನಿಮ್ಮ ಊರು, ಸಂಸ್ಕೃತಿಯನ್ನು ವಿವರವಾಗಿ ತಿಳಿಸು” ಎಂಬುದಾಗಿ ಕೇಳಲು, ಕೆಳ ಕಂಡ ಕತೆ ಹೇಳಿದೆ.
“ನಾವು ಹೊರನಾಡಿನ ಕನ್ನಡಿಗರು.  ನಾವು ವಲಸೆ ಬಂದವರು.”

“ಹಾಗಾದರೆ ಬೆಂಗಳೂರಿನಿಂದ ಮುಂಬಯಿ, ಚೆನ್ನೈ ಮುಂತಾದ ಪ್ರದೇಶಕ್ಕೆ ಹೋಗುತ್ತಾರಲ್ಲ? ಅವರೆಲ್ಲಾ ವಲಸೆ ಹೋದವರೇ?”
“ಹೌದು ಬಂಗಾರಿ, ಅವರೊಬ್ಬರೇ ಅಲ್ಲ.  ಅಮೆರಿಕ, ಇಂಗ್ಲಂಡ್‌, ಇನ್ನೂ ಬೇರೆ  ಬೇರೆ ದೇಶಕ್ಕೆ ನಮ್ಮ ಕನ್ನಡನಾಡಿನಿಂದ ಹೋದವರೆಲ್ಲಾ ವಲಸೆ ಹೋದವರೇ.” 
“ಪರದೇಶಕ್ಕೆ ಕೆಲಸ ಹುಡಿಕಿಕೊಂಡು ಬಂದವರೇ ಹೆಚ್ಚು. ಕೆಲಸ ಸಿಕ್ಕಿದ ಮೇಲೆ ಮನೆ, ಸಂಸಾರ ಎಲ್ಲಾ ಮಾಡಿಯಾಯಿತು.”

“ಹಾಗಾದರೆ ನೀವೆಲ್ಲಾ ಸಂತೋಷವಾಗಿ ಇದ್ದೀರಾ?  ನಿಮಗೆ ನಿಮ್ಮ ಭಾಷೆ, ಪರಂಪರೆ, ಚರಿತ್ರೆ, ಹಬ್ಬ-ಹುಣ್ಣಿಮೆಗಳು ಮಿಸ್ಸಾಗುತ್ತಾ?” ಎಂದು ಕೇಳಿದಳು.
“ಹೌದು ಕಣೆ ಖಂಡಿತವಾಗಲೂ ಮಿಸ್ಸಾಗುತ್ತದೆ.  ವಲಸೆ ಬಂದವರು ತುಂಬಾ ಜನ ಒಳ್ಳೆಯ ಕೆಲಸ, ಹಣ ಸಂಪಾದನೆ ಮಾಡಿ ಗೌರವಾಗಿ ಬಾಳುತ್ತಿದ್ದಾರೆ.  ಆದರೆ ನಮಗೆ ನಮ್ಮದು, ನಮ್ಮ ಬಾಲ್ಯದ ಅನುಭವಗಳನ್ನು ಮರೆಯಲು ಸಾಧ್ಯವೇ?  ನಮ್ಮ ಪರಂಪರೆ, ನಮ್ಮ ಭಾವನೆಗಳನ್ನು ಅಳಿಸಲು ಸಾಧ್ಯವೇ?  ಅದೇ ಅಲ್ಲವೇ ನಮ್ಮ ವ್ಯಕ್ತಿತ್ವಕ್ಕೆ ಅಡಿಪಾಯ.  ಅಡಿಪಾಯವನ್ನು ಮುರಿಯಲು ಸಾಧ್ಯವೇ?  ಮುರಿದರೆ ನಮ್ಮ ಬದುಕು ಬರಡಲ್ಲವೇ, ನಮ್ಮ ವ್ಯಕ್ತಿತ್ವ ಒಂದು ದೊಡ್ಡ ಅಂಶವನ್ನ ಕಳೆದ ಹಾಗಲ್ಲವೇ?”

ಮತ್ತೊಂದು ಸವಾಲು – “ನಿಮಗೆ ಕನ್ನಡ ಬಳಗ ಯಾಕೆ ಬೇಕು?”
“ನಮ್ಮ ವ್ಯಕ್ತಿತ್ವದ ಅಡಿಪಾಯಕ್ಕೆ ಆಸರೆ ಬೇಡವೇ?  ನಾವು ಒಂದು ಸಂಘದಲ್ಲಿಯಿದ್ದೇವೆ.  ನಾವು ಭಾಷೆ, ಚರಿತ್ರೆ, ವಾತ್ಯಲ್ಯ ಮುಂತಾದ ಮಾನವೀಯ ಗುಣಗಳನ್ನು ಹಂಚಿಕೊಳ್ಳುತ್ತೇವೆ.  ಈ ಹೊರನಾಡಿನ ಸಂಘಗಳು ನಮ್ಮ ವ್ಯಕ್ತಿತ್ವಕ್ಕೆ ಒಂದು meaning ಕೊಡುತ್ತದೆ.  ನಾವು ವಲಸೆ ಬಂದ ದೇಶಕ್ಕೆ ಹೊಂದಿಕೊಂಡರೂ, ಈ ಹೊರನಾಡು ನಮ್ಮದು ಎನಿಸಲು ಕಷ್ಷ ಅನಿಸುತ್ತದೆ.  ನಮಗೆ chipsಗಿಂತ ಕೋಡುಬಳೆ ರುಚಿಯಲ್ಲವೇ?”

ಮತ್ತೊಂದು ಕ್ವೆಶ್ಚನ್ನು – “ಸರಿ ಇಲ್ಲಿಗೆ ಬಂದಿರಿ. ನಿಮ್ಮ ಜೀವನ ಕಟ್ಟಿದಿರಿ. ಮಕ್ಕಳು, ಮರಿಗಳಾದವು.  ನಮ್ಮ ವಂಶ ಬೆಳೆಯುತ್ತಿದೆ.
ಈಗ ನಾವು ೩ನೆ ಜನರೇಶನ್ನು.  ಮೊದಲನೆಯದು ನೀವು; ಹೊರನಾಡಿಗೆ ಬಂದು ನಿಮ್ಮ ಭಾಷೆ, ಸಂಸ್ಕೃತಿ ಬೆಳಿಸಿ, ಉಳಿಸಿಕೊಂಡಿರಿ.

“ಎರಡನೆ ಜನಾಂಗ ನಿಮ್ಮ ಮಕ್ಕಳು. ನನ್ನ ತಂದೆ-ತಾಯಿಯರು. ಇಲ್ಲೇ ಹುಟ್ಟಿ ಬೆಳದವರು.  ಅವರು ನಿಮ್ಮ ಅಡುಗೆ ತಿಂಡಿ ಎಲ್ಲ ಮಜವಾಗಿ ತಿನ್ನುತ್ತಾರೆ. ಮನೆಯಲ್ಲಿ ನಿಮ್ಮ ಮಾತು ಕೇಳಬಹುದು. ಮನೆಯ ಹೊರಗೆ ಅವರು ಈ ದೇಶದ ಜನರನ್ನೇ ಅನುಸರಿಸುತ್ತಾರೆ.  ಕನ್ನಡ ಮಾತನಾಡಲು ಬರುವುದಿಲ್ಲ.  ಚಿಕ್ಕವರಾಗಿದ್ದಾಗ ಕನ್ನಡ ಕಲಿಯಲು ನೀವು ಸಹಾಯಮಾಡಲಿಲ್ಲ. ಅವರು ಕುವೆಂಪು, ದ ರಾ ಬೇಂದ್ರೆಯಂಥವರ ಹೆಸರು ಕೇಳಿಲ್ಲ.  ಅವರಿಗೆ ನಿಮಗೆ ಇರುವಷ್ಟು ಮಮತೆ ನಿಮ್ಮ ಪರಂಪರೆ ಮೇಲೆ ಖಂಡಿತಯಿಲ್ಲ.  ಅವರು ಕನ್ನಡ ಬಳಗಕ್ಕೆ ಬರುವುದಿಲ್ಲ.  ಬಂದರೂ, ‘we don’t understand anything’ ಅಂತಾರೆ.

ಮೂರನೆಯ ಜನಾಂಗ ನಿಮ್ಮ ಮೊಮ್ಮಕ್ಕಳು. ಅವರ ಬಗ್ಗೆ ಮತ್ತೊಂದು ಸವಾಲು.
“ಅಜ್ಜಿ ನಮಗೆ ನಿಮ್ಮ ಭಾಷೆ ಗೊತ್ತಾಗುವುದಿಲ್ಲ.  ಬೆಂಗಳೂರಿಗೆ ಒಂದೇ ಸಲ ಮಮ್ಮಿ ಡ್ಯಾಡಿ ಜತೆ ಹೋಗಿದ್ದೆ.  ಎಲ್ಲರೂ Englishನಲ್ಲೇ ಮಾತಾಡಿದರು.  ಮಮ್ಮಿ ಡ್ಯಾಡಿ ಕನ್ನಡ ಮಾತನಾಡುವುದಿಲ್ಲ.  ಅವರಿಗೆ ಬರಲ್ಲ ಅಂತಾರೆ.  ಹಬ್ಬ, ಹರಿದಿನ ಮಾಡುವುದಿಲ್ಲ.  ನಾವು ಏನು ಮಾಡಬೇಕು?  ಬ್ರಿಟಿಶ್ ಜನರಂತೆ ಇರಬೇಕೆ?”

“ಇದಲ್ಲದೆ ಮತ್ತೊಂದು ಗುಂಪಿದೆ ಈಗ. ಇವರು ಇತ್ತೀಚಿಗೆ ಹೊರನಾಡಿಗೆ ವಲಸೆ ಬಂದವರು.  ಹೊಸ ಟೆಕ್ನಾಲಜಿ ತಿಳಿದವರು. ಅವರೊಡನೆ ನಮ್ಮ ಮೊದಲನೆ ಜನಾಂಗ (ಹಿರಿಯರು, ೩೦-೪೦ವರುಷಗಳಿಂದ ಹೊರನಾಡಿನಲ್ಲಿ ಇರುವವರು) ಬಾಂಧವ್ಯ ಬೆಳಸಲು ಸಾದ್ಯವೇ?”

“ನನ್ನ ಕತೆ ಮುಗಿಯಿತು. ನಿನ್ನ ಸವಾಲಿಗೆ ನನ್ನ ಹತ್ತಿರ ಉತ್ತರವಿಲ್ಲ!”

- ವತ್ಸಲಾ ರಾಮಮೂರ್ತಿ

*****************************************************

ಯು ಕೆ ರಸಿಕರಿಗೆ ಯಕ್ಷಗಾನದ ರಸದೌತಣ ಉಣಿಸಿದ ಯಕ್ಷಧ್ರುವ ಕಲಾವಿದರು

ಕರ್ನಾಟಕದ ಕರಾವಳಿ ಪ್ರದೇಶದ ವಿಶೇಷ ಕಲೆಯಾದ ಯಕ್ಷಗಾನಕ್ಕೆ ಆರು ಶತಮಾನಗಳ ಇತಿಹಾಸ ಇದೆ.  ಹಳ್ಳಿಯಲ್ಲಿದ್ದಾಗ ಬಡಿದೆಬ್ಬಿಸುವ ಚಂಡೆ ಮದ್ದಳೆಗಳ ಶಬ್ದ ಕೇಳಿ ಬರುತ್ತಲೇ ಚೌಕಿಮನೆಯತ್ತ ಧಾವಿಸಿದ ಬಾಲ್ಯದ ನೆನಪುಗಳನ್ನು ಅಲ್ಲಿ ಬೆಳೆದ ಮಿತ್ರರು ಮೆಲಕು ಹಾಕುತ್ತಿರುತ್ತಾರೆ. ಅದಕ್ಕೆ ಅಂಥ ಮೋಡಿ. ಇದೇ ಜೂನ್ ತಿಂಗಳಲ್ಲಿ ಯು ಕೆ ಪ್ರವಾಸ ಕೈಕೊಂಡ ಯಕ್ಷಧ್ರುವ ಪಟ್ಲ ಫ಼ೌಂಡೇಷನ್ ಟ್ರಸ್ಟ್ ಅವರ ಪ್ರದರ್ಶನಗಳಲ್ಲಿ ಶ್ರೇಷ್ಠ ಗಾಯನ, ಕುಣಿತ ಮತ್ತು ಭಾಗವತಿಕೆ ಇವೆಲ್ಲ ಮೇಳೈಸಿವೆ. ಅದನ್ನು ವೀಕ್ಷಿಸಿದ ಹಲವಾರು ”ಅನಿವಾಸಿ”ಯ ಸದಸ್ಯರು ತಮ್ಮ ಅನುಭವಗಳನ್ನು ಈ ವಾರದ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ.  ಚಿಕ್ಕಂದಿನಲ್ಲೇ ಯಕ್ಷಗಾನದ ಜೊತೆಯಲ್ಲೇ ಬೆಳೆದ ರಾಂಶರಣ್ ಅವರು ಯಕ್ಷಗಾನದ ಪರಿಚಯ ಮಾಡಿಕೊಟ್ಟಿದ್ದಾರೆ. ಟಿಪ್ಟನ್ನಿನಲ್ಲಾದ ’ನರಕಾಸುರ ಮೋಕ್ಷ’ ಯಕ್ಷಗಾನವನ್ನು  ಪ್ರಥಮ ಸಲ ನೋಡಿದ ಕುಚಿಪುಡಿ ಮತ್ತು ಭರತನಾಟ್ಯ ಕಲಿತ  ಅದಿತಿ ಗುಡೂರ್ ತನ್ನ ಅನುಭವವನ್ನು ಇಂಗ್ಲಿಷ್ ಲೇಖನದಲ್ಲಿ ಸುಂದರವಾಗಿ ಬರೆದಿದ್ದಾಳೆ.  ಶ್ರೀವತ್ಸ ದೇಸಾಯಿ ಟಿಪ್ಟನ್ ಮತ್ತು ಲೀಡ್ಸ್ ನಗರಗಳಲ್ಲಾದ ಎರಡು ಮೂರು ಪ್ರದರ್ಶನಗಳನ್ನು ನೋಡಿ ಪ್ರೊ ಎಂ ಎಲ್ ಸಾಮಗ ಅವರೊಡನೆ ನಡೆದ ಕಿರು ಸಂದರ್ಶನದ ವರದಿಯನ್ನೂ ಹಂಚಿಕೊಂಡಿದ್ದಾರೆ. ಲಕ್ಷ್ಮೀನಾರಾಯಣ ಗುಡೂರ್ ಮತ್ತು ಅವರ ಮಗಳು ಯಾಮಿನಿ ಗುಡೂರ್ ವರ್ಣಚಿತ್ರ ಮತ್ತು ರೇಖಾಚಿತ್ರಗಳನ್ನು ಕಳಿಸಿ ಈ ಲೇಖನಗಳಿಗೆ ಹೆಚ್ಚಿನ ಶೋಭೆ ಕೊಟ್ಟಿದ್ದಾರೆ. ಅನೇಕರು ತಮ್ಮ ಲೇಖನ ಮತ್ತು ಫೋಟೋಗಳನ್ನು ಕೊಟ್ಟಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆಗಳು. (ಸಂ - ಶ್ರೀವತ್ಸ ದೇಸಾಯಿ)
*************************
ಕಲೆ: ಡಾ ಲಕ್ಷ್ಮೀನಾರಾಯಣ ಗುಡೂರ್
                            ಇಂಗ್ಲೆಂಡಿನಲ್ಲಿಳಿದ ಮೇಳದ ಯಕ್ಷಲೋಕ!  - ರಾಂಶರಣ್

ದಕ್ಷಿಣೋತ್ತರ ಕನ್ನಡ ಜಿಲ್ಲೆಯವರಿಗೆ ಯಕ್ಷಗಾನ ಧಮನಿಗಳಲ್ಲಿ ಹರಿಯುವ ಕಲೆ. ಜನಸಾಮಾನ್ಯರಲ್ಲಿ “ಆಟ” ಎಂದೇ ಪ್ರಚಲಿತ. ರಾತ್ರಿಯಿಡೀ ಯಕ್ಷಲೋಕವನ್ನೇ ಧರೆಗಿಳಿಸುವ ನೃತ್ಯ - ನಾಟಕವೆಂದರೆ ಆಬಾಲ ವೃದ್ಧರೆಲ್ಲ ಕಿತ್ತೆದ್ದು ಹೋಗುವುದು ಸರ್ವೇಸಾಮಾನ್ಯ. ಯಕ್ಷಗಾನದ ಕಥಾನಕಗಳನ್ನು “ಪ್ರಸಂಗ” ಎಂದು ಕರೆಯುತ್ತಾರೆ. ಈ ಪ್ರಸಂಗಗಳು ರಾಮಾಯಣ, ಮಹಾಭಾರತ, ಭಾಗವತದಂತಹ ಪುರಾಣಗಳಲ್ಲಿ ಬರುವ ಉಪಕಥೆಗಳನ್ನು ಆಧರಿಸಿರುತ್ತವೆ. ಇವೆಲ್ಲವೂ ನಡುಗನ್ನಡದಲ್ಲಿ ಬರೆದ ಹಾಡುಗಳ ರೂಪದಲ್ಲಿರುತ್ತವೆ. ಈ ಹಾಡುಗಳನ್ನು ಕರ್ನಾಟಕ ಸಂಗೀತದ ರಾಗಗಳಿಗೆ ಸಂಯೋಜಿಸಿರುತ್ತಾರೆ. ಇವನ್ನು ಕಂಚಿನ ಕಂಠದಲ್ಲಿ ಹಾಡುವ ಭಾಗವತ, ವೇದಿಕೆಯ ಮೇಲೆ ನಿರ್ಮಿಸಿದ ಇನ್ನೊಂದು ಚಿಕ್ಕ ಕಟ್ಟೆಯ ಮೇಲೆ ಕುಳಿತು ಸೂತ್ರಧಾರನಾಗಿ ಪ್ರಸಂಗವನ್ನುನಿರ್ವಹಿಸುತ್ತಾನೆ. ಆತನ ಪಕ್ಕದಲ್ಲಿ ಮೃದಂಗ ವಾದಕ ಕುಳಿತು ಸಾಥ್ ಕೊಡುತ್ತಾನೆ. ನರ್ತಿಸುತ್ತ, ಮಾತಿನ ಮಾಧ್ಯಮದಲ್ಲಿ ಈ ಹಾಡುಗಳಿಗೆ ಅರ್ಥೈಸುವ ನಟ ಯಕ್ಷಗಾನದ ಕೇಂದ್ರ ಬಿಂದು. ಚಂಡೆ ಯಕ್ಷಗಾನಕ್ಕೆ ವಿಶಿಷ್ಟವಾದ  ತಾಳ ವಾದ್ಯ. ಈ ವಾದ್ಯಕ್ಕೆ ಕೇಳುಗರನ್ನು ಕುಳಿತಲ್ಲೇ ಕುಣಿಸುವ ಸಮ್ಮೋಹಕ ಶಕ್ತಿಯಿದೆ. ಆಟ ಶುರುವಾಗುವ ಮೊದಲು ಬಾರಿಸುವ ಚಂಡೆಯ ಸದ್ದು ಊರ ಜನರನ್ನೆಲ್ಲ ಚುಂಬಕದಂತೆ ಆಟದ ಆವಾರಕ್ಕೆ ಆಕರ್ಷಿಸುತ್ತಿತ್ತು. ಯಕ್ಷಗಾನದ ತಂಡಗಳಿಗೆ “ಮೇಳ” ಎಂದು ಕರೆಯುತ್ತಾರೆ. ಹಿಂದೆಲ್ಲ ನೂರಾರು ಮೇಳಗಳು ದೀಪಾವಳಿಯ ನಂತರ ಮಳೆ ಹಿಡಿಯುವವರೆಗೂ ಹಳ್ಳಿ-ಹಳ್ಳಿಗಳನ್ನು ತಿರುಗಿ ನಮ್ಮನ್ನೆಲ್ಲ ಮನರಂಜಿಸುತ್ತಿದ್ದವು. ಆಟ ನೋಡಿ ಬಂದ ಚಿಣ್ಣರೆಲ್ಲರೂ ತೆಂಗಿನ ಗರಿಗಳಿಂದ ಸಿಂಗರಿಸಿಕೊಂಡು “ಭೂಪ ಕೇಳೆಂದ” ಎಂದು ರಾಗವೆಳೆಯುತ್ತ ಮನೆ ಜನರೆದುರು ಕುಣಿದು ಕುಪ್ಪಳಿಸಿ “ಎಷ್ಟು ಚೊಲೋ ಆಟ ಕುಣಿತಾ” ಎಂದು ಶಭಾಷ್ ಗಿಟ್ಟಿಸಿ ಪೊಗರು ಹಾರಿಸುವುದು ಬಾಲ್ಯದ ಅವಿಭಾಜ್ಯ ಅಂಗವಾಗಿತ್ತು. 

ಯಕ್ಷಗಾನಕ್ಕೆ ಸುಮಾರು ಐದಾರು ಶತಮಾನಗಳ ಇತಿಹಾಸವಿದೆ. ವರ್ಣರಂಜಿತ ಪೋಷಾಕುಗಳನ್ನು ಧರಿಸಿ ಗಂಡಸರು ಪುರುಷ ಹಾಗೂ ಸ್ತ್ರೀ ಪಾತ್ರಗಳನ್ನು ನಿರ್ವಹಿಸುವುದು ಇಂದಿಗೂ ನಡೆದು ಬಂದಿರುವ ಸಂಪ್ರದಾಯ. ರಾತ್ರೆಯಿಡೀ ಕುಣಿದು ಪ್ರತಿ ದಿನ ಊರಿಂದೂರಿಗೆ ತಿರುಗುವ ಜೀವನ ಶೈಲಿ ಸ್ತ್ರೀಯರಿಗೆ ಹೊಂದಿಕೆಯಾಗದಿರುವುದೇ ಈ ಪದ್ಧತಿಗೆ ಕಾರಣ. ಈಗ ಮಹಿಳೆಯರೇ ತಂಡಗಳನ್ನು ಕಟ್ಟಿ ಪ್ರಸಂಗವಾಡಿದರೂ ಗಂಡಸರು - ಹೆಂಗಸರು ಒಟ್ಟಿಗೆ ನಟಿಸುವುದು ಅತಿ ವಿರಳ. ಯಕ್ಷಗಾನ ಪದ್ಧತಿಯಲ್ಲಿ ಎರಡು ಮುಖ್ಯ ಪ್ರಕಾರಗಳಿವೆ. ಬ್ರಹ್ಮಾವರ ನದಿಯ ಉತ್ತರಕ್ಕೆ ಬಡಗು ತಿಟ್ಟು, ದಕ್ಷಿಣಕ್ಕೆ ತೆಂಕು ತಿಟ್ಟು ಶೈಲಿ. ಭಾಗವತಿಕೆಯಲ್ಲಿ ಹೆಚ್ಚಿನ ಭಿನ್ನತೆಯಿಲ್ಲದಿದ್ದರೂ ನರ್ತನ ಶೈಲಿಯಲ್ಲಿ, ಪೋಷಾಕು ಹಾಗು ಪ್ರಸಾಧನದಲ್ಲಿ ವಿಭಿನ್ನತೆಯನ್ನು ಗಮನಿಸಬಹುದು. ತೆಂಕು ತಿಟ್ಟಿನ ನರ್ತನ ಶೈಲಿ ನವಿರಾಗಿದ್ದು, ಹೆಚ್ಚು ಭಾವಪೂರ್ಣವಾಗಿರುವುದನ್ನು ಕಾಣಬಹುದು. ಚಂಡೆಗಳ ಆಯಾಮದಲ್ಲಿ ವ್ಯತ್ಯಾಸವಿದ್ದು, ಬಡಗು ತಿಟ್ಟಿನಲ್ಲಿ ವಾದಕ ರಂಗದ ಬಲ ಭಾಗದಲ್ಲಿ ಕುಳಿತಿದ್ದರೆ, ತೆಂಕು ತಿಟ್ಟಿನಲ್ಲಿ, ಚಂಡೆಯನ್ನು ಕೊರಳಿಗೆ ನೇತು ಹಾಕಿಕೊಂಡು ರಂಗದ ಎಡ ಭಾಗದಲ್ಲಿ ನಿಂತು ಬಾರಿಸುವುದು ಸಾಮಾನ್ಯ. 

ನಮಗೆ ನಟರೆಲ್ಲ ಸೂಪರ್ ಸ್ಟಾರ್ ಗಳಾಗಿದ್ದರು. ಮಕ್ಕಳಿಗೆ ವಿದೂಷಕ ವಿಶೇಷ ಆಕರ್ಷಣೆಯಾಗಿರುತ್ತಿದ್ದ. ಹಿರಿಯರಿಗೆ ಭಾಗವತರೂ ವಿಶೇಷ ಆಕರ್ಷಣೆಯಾಗಿರುತ್ತಿದ್ದರು.  ನಾನು ಉತ್ತರ ಕನ್ನಡದಲ್ಲಿ ಹುಟ್ಟಿ ಬೆಳೆದವನು, ಹಾಗಾಗೇ ನನಗೆ ಬಡಗು ತಿಟ್ಟಿನ ಪ್ರಕಾರ, ಅಲ್ಲಿನ ನಟರ, ಭಾಗವತರ ಪರಿಚಯ ಜಾಸ್ತಿ. ಎಷ್ಟೋ ಸಲ ಒಂದೇ ಕುಟುಂಬದ ಹಲವು ತಲೆಮಾರಿನವರು ಮನೆ ಮಾತಾಗಿರುವುದನ್ನೂ ಕಾಣಬಹುದು. ಬಡಗು ತಿಟ್ಟಿನ ಕೆರೆಮನೆಯ ಕುಟುಂಬದ ದಿವಂಗತ ಶಿವರಾಮ, ಶಂಭು, ಗಜಾನನ, ಮಹಾಬಲ ಹೆಗಡೆಯವರು ಅನೇಕ ಪ್ರಶಸ್ತಿಗಳನ್ನು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪಡೆದಿದ್ದರು. ತೆಂಕು ತಿಟ್ಟಿನ ಸಾಮಗ ಮನೆತನದ ರಾಮದಾಸ ಹಾಗು ಶಂಕರನಾರಾಯಣ ಸಾಮಗರು, ಅವರ ಮಕ್ಕಳು ಹೆಸರುವಾಸಿಯಾದ ಕಲಾವಿದರು. 

ಯಕ್ಷಗಾನ ಕಲಾವಿದರೆಲ್ಲ ವೃತ್ತಿಪರರಾದರೂ ಒಂದರ್ಥದಲ್ಲಿ ಹವ್ಯಾಸಕ್ಕಾಗಿ ಆಟ ಕುಣಿಯುವವರು, ಹಾಡುವವರು, ವಾದಕರು. ಸರಸ್ವತಿಯ ಆರಾಧಕರೇ ಹೊರತು ಲಕ್ಷ್ಮೀ ಪುತ್ರರಲ್ಲ. ಕೋವಿಡ್ ಕಾಲದಲ್ಲಿ ಆರ್ಥಿಕವಾಗಿ ಬಳಲುತ್ತಿದ್ದ ಯಕ್ಷಗಾನ ಕಲಾವಿದರಿಗೆ ಸಹಾಯ ಮಾಡಲೆಂದು ಇಂಗ್ಲೆಂಡಿನಲ್ಲಿ ಹುಟ್ಟಿದ “ಆಯಾಮ” ಸಂಘಟನೆ ಅಂತರ್ಜಾಲದಲ್ಲಿ ಭಾರತದಿಂದ ನೇರವಾಗಿ ಕೆಲವು ಪ್ರಸಂಗಗಳನ್ನು ಪ್ರಸಾರ ಮಾಡಿದ್ದು, ಇಲ್ಲಿನ ಕಲಾರಸಿಕರ ಮನದಲ್ಲಿ ಹೊಸ ಹುಮ್ಮಸ್ಸನ್ನು ಕೆರಳಿಸಿತ್ತು. ಎರಡು ವಾರಗಳ ಹಿಂದೆ ಈ ಸಂಘಟನೆ ಕರ್ನಾಟಕದಿಂದ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದ ಯಕ್ಷಧ್ರುವ ತಂಡವನ್ನು ಆಹ್ವಾನಿಸಿ ನಮ್ಮೆದರು ಯಕ್ಷಲೋಕವನ್ನು ಅನಾವರಣಗೊಳಿಸಿ ಇಂಗ್ಲೆಂಡಿಗೆ ಬಂದು ಸುಮಾರು ಕಾಲು ಶತಮಾನವೇ ಕಳೆದರೂ ಮೇಳದ ಆಟವನ್ನು ಕಣ್ಣೆದುರೇ ನೋಡಿರದ ನನ್ನಂಥವರ ಕನಸನ್ನು ನನಸಾಗಿಸಿದರು. ಈ ಪ್ರದರ್ಶನಗಳ ವಿವರಣೆ ಈ ಸಂಚಿಕೆಯಲ್ಲಿ ನೀವು ಶ್ರೀವತ್ಸ ದೇಸಾಯಿ ಹಾಗೂ  ಇಲ್ಲಿಯೇ ಹುಟ್ಟಿ ಬೆಳೆದ ನೃತ್ಯ ಪಟು ಕುಮಾರಿ ಅದಿತಿ ಗುಡೂರ್ ಅವರ ಬರಹಗಳಲ್ಲಿ ಓದಬಹುದು. 

ಸತೀಶ್ ಶೆಟ್ಟಿಯವರ ಅದ್ಭುತ ಕಂಚಿನ ಕಂಠ, ಇಳಿ ವಯಸ್ಸಿನಲ್ಲೂ ನವ ಯುವಕನಂತೆ ನರ್ತಿಸಿದ ಪ್ರೊ. ಎಂ. ಎಲ್. ಸಾಮಗರು, ಕೃಷ್ಣ -ಸತ್ಯಭಾಮೆಯರ ಸರಸ ಸಲ್ಲಾಪವನ್ನು ಚಿತ್ರಿಸಿದ ಚಂದ್ರಶೇಖರ ಧರ್ಮಸ್ಥಳ- ಪ್ರಶಂತ ನೆಲ್ಯಾಡಿ, ನರಕಾಸುರನ ಬಣ್ಣದ ವೇಷದಲ್ಲಿ ಕೃಷ್ಣನನ್ನು ಬದಿಗಿಕ್ಕಿದ ಮೋಹನ ಬೆಳ್ಳಿಪಾಡಿ, ವಿದೂಷಕನಾಗಿ ಮನಸೆಳೆದ ಮಹೇಶ ಮಣಿಯಾಣಿಯವರು ದಶಕಗಳಿಂದ ಹಾತೊರೆದ ಅಭಿಮಾನಿಗಳ ಮನಸೂರೆಗೊಂಡಿದ್ದರಲ್ಲಿ ಸಂದೇಹವೇ ಇಲ್ಲ. 

--ರಾಮಶರಣ ಲಕ್ಷ್ಮೀನಾರಾಯಣ

**************************
ಕಲೆ: ಯಾಮಿನಿ ಗುಡೂರ್
‘Narakasura Moksha’ The Yakshagaana, my experience - Aditi Gudur. 
  
Expectation versus reality. Everyone has preconceptions before they experience art in whatever form it may be. For me, I knew Yakshagaana was a beautiful artform from the land I call mine, Karnataka, with focus on storytelling from Hindu mythology and with incredibly vibrant and expressive costumes and facial expressions. These all proved to be true, in only a fraction of the brilliance displayed by the artists on the performance day. What I had not realised was that despite not fully understanding the poetic-sounding Kannada dialect used in the performance, I would still be able to fully immerse myself in the story that was being portrayed. I felt the emotions of each character, laughed with them, got angry with them. This is truly the power of art, when you can convey the story and emotions to someone who does not fully understand the literature. 

The artists were so talented, in fact this is an understatement. Each movement was so striking and they all displayed such athleticism, as a dancer myself, I could appreciate this even more. The live music accompaniment only added to the atmosphere, making everything brighter, richer, more enhanced. The singer's tone was especially beautiful, and he showed his mastery of his art - skilfully commanding the attention of the audience, like the ringmaster of the circus whilst surfing through the octaves of notes with immense ease. The dancers and musicians complemented each other so well, the harmony and trust they had in each other was clear as day. The footwork captured my attention for its precision and intricacy. Overall, it was a wonderful and enriching experience, one that made me proud of my heritage and left me with a thirst to see more and learn more about it.

   -- Aditi Gudur
*************************
'ಯಕ್ಷಧ್ರುವ'ದ ಯು ಕೆ ಟೂರ್ -ಶ್ರೀವತ್ಸ ದೇಸಾಯಿ
ಇದೇ ವರ್ಷದ (2023) ಜೂನ್ ತಿಂಗಳಿನ ಎರಡು ವಾರ ವಿವಿಧ ಮೇಳಗಳಿಂದ ಆಯ್ದ ಒಂಭತ್ತು ಕಲಾವಿದರ ತಂಡ ಮಂಗಳೂರಿನ ಯಕ್ಷಧ್ರುವ ಪಟ್ಲ ಫ಼ೌಂಡೇಷನ್ ಟ್ರಸ್ಟ್ ನ ನಾಮಾಂಕಿತದಲ್ಲಿ, ಈ ನಾಡಿನಲ್ಲಿ ಬೇರೆ ಬೇರೆ ಪ್ರದರ್ಶನಗಳಲ್ಲಿ ಭಾಗವಹಿಸಿ ಹೊಸ ದಾಖಲೆಯನ್ನೇ ಸ್ಥಾಪಿಸಿದೆ. ಹಿಂದಿನ ನಾಲ್ಕು ದಶಕಗಳಲ್ಲಿ ಎರಡು ಯಕ್ಷಗಾನ ತಂಡಗಳು ಬಂದಿದ್ದವು. ಈ ನಾಡಿನ ಅತ್ಯಂತ ಹಳೆಯ ದತ್ತಿ ಕನ್ನಡ ಸಂಸ್ಥೆಯಾದ ಕನ್ನಡ ಬಳಗ ಯು ಕೆ 1983 ರಲ್ಲಿ ಹುಟ್ಟಿ 1988ರಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸಿದಾಗ ಅತಿಥಿಗಳಾಗಿ ಬಂದಿದ್ದ ಕಡಲತೀರದ ಭಾರ್ಗವ ಶಿವರಾಮ ಕಾರಂತರು ಮರು ವರ್ಷ ತಂದ ”ಪ್ರಾಯೋಗಿಕ’’ ತಂಡವೇ ನನಗೆ ತಿಳಿದಂತೆ ಈ ಮಣ್ಣಿನ ಮೇಲೆ ಕಾಲಿಟ್ಟ ಪ್ರಪ್ರಥಮ ಯಕ್ಷಗಾನ ತಂಡವಾಗಿತ್ತು. ಆಗ ಮೂರು ಪಟ್ಟಣಗಳಲ್ಲಿ ಪ್ರದರ್ಶನ ಕೊಟ್ಟಿದ್ದರು. ”ಪಂಚವಟಿ” ಆಟವನ್ನು ನನ್ನನ್ನೂ ಸೇರಿ ಅನೇಕಾನೇಕ ಕನ್ನಡಿಗರು ನೋಡಿ ಮೆಚ್ಚಿದ್ದರು. ಅದು ಸಾಂಪ್ರದಾಯಿಕ ಯಕ್ಷಗಾನಕ್ಕಿಂತ ಕೊಂಚ ಭಿನ್ನವಾಗಿತ್ತು ಎಂದು ಹೇಳಲಾಗುತ್ತಿದೆ. ಆನಂತರ 2015 ರಲ್ಲಿ ವಿದ್ಯಾ ಕೊಲ್ಯೂರ್ ಅವರ ಯಕ್ಷ ಮಂಜೂಷ ತಂಡ ಭೇಟಿ ಕೊಟ್ಟು ತೆಂಕು ತಿಟ್ಟು ಶೈಲಿಯ ಎರಡು ಪ್ರದರ್ಶನಗಳನ್ನು ಕೊಟ್ಟಿದ್ದಾಗಿ ತಿಳಿದು ಬರುತ್ತದೆ. ಈ ವರ್ಷ ಬಂದಿರುವ ’ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮೂರನೆಯ ತಂಡವಷ್ಟೇ. ಅವರು ಲಂಡನ್ (ಫೆಲ್ಟಂ), ಬರ್ಮಿಂಗಮ್ (ಟಿಪ್ಟನ್), ಯಾರ್ಕ್ ಶೈರಿನ ಲೀಡ್ಸ್, ಅದಕ್ಕೂ ಉತ್ತರದಲ್ಲಿಯ ಡರ್ರಂ ನಗರ ಅಷ್ಟೇ ಅಲ್ಲದೇ ಮೊದಲ ಬಾರಿಗೆ ಸ್ಕಾಟ್ಲಂಡಿನಲ್ಲಿ ಎಡಿನ್ಬರಾದಲ್ಲಿ 200 ಜನರ ಮುಂದೆ ಒಂದು ಪ್ರದರ್ಶನ ಕೊಟ್ಟಿದ್ದು ಸಹ ಐತಿಹಾಸಿಕ ದಾಖಲೆಯೇ!
”ನರಕಾಸುರ ಮೋಕ್ಷ” ಆಟದ (ಟಿಪ್ಟನ್ನಲ್ಲಿ) ಕೆಲ ದೃಶ್ಯಗಳು (ಕೃಪೆ: ಡಾ ಗುಡೂರ್)
ಮುಂದಿನ ಕ್ಯಾಂಪ್, ಇಂಗ್ಲೆಂಡಿನ ಉತ್ತರ ಭಾಗದಲ್ಲಿಯ ಯಾರ್ಕ್ ಶೈರಿನ  ಲೀಡ್ಸ್ ನಗರದಲ್ಲಿ. ದೇವಿಕಾ ಡಾನ್ಸ್ ಥಿಯೇಟರ್  ಸಂಸ್ಥೆಯ ವತಿಯಿಂದ ಯಕ್ಷಗಾನದಲ್ಲಿ ಅತೀವ ಆಸ್ಥೆಯುಳ್ಳ ಮತ್ತು ಅದರ ಸ್ಥಾಪಕರಾದ ದೇವಿಕಾ ಅವರು ’ಸ್ಟೇಜ್’ದ ನಿರ್ದೇಶಕ ಸ್ಟೀವ್ ಆನ್ಸೆಲ್ ಮತ್ತು ಬಲಬೀರ್ ಸಿಂಗ್ ಡಾನ್ಸ್ ಕಂಪನಿಯ ನಿರ್ದೇಶಕರ ಸಹಕಾರದಿಂದ ನಾಲ್ಕೈದು ಕಾರ್ಯಕ್ರಮಗಳನ್ನು ಯೋಜಿಸಿದ್ದರು. ರೋದರಮ್ಮಿನ (Rotherham) ಒಂದು ಶಾಲೆಯಲ್ಲಿ ಯಕ್ಷಗಾನದ ಬಗ್ಗೆ ಮಕ್ಕಳಿಗೆ ಪರಿಚಯಿಸಿದರು. ಲೀಡ್ಸ್ ಹತ್ತಿರದ ಗ್ಲೆಡೊ ಪಾರ್ಕ್ನಲ್ಲಿ 'A dance in the woods' ಎನ್ನುವ ಬಲಬೀರ್ ಸಿಂಗ್ ಡಾನ್ಸ್ ಕಂಪನಿಯ ಕಾರ್ಯಕ್ರಮ ಇತ್ತು.
 ಡರ್ರಂ ವಿಶ್ವವಿದ್ಯಾಲಯದ ಆಶ್ರಯದಲ್ಲಿ ’ಅನ್ಮಾಸ್ಕಿಂಗ್ ಪೇಯ್ನ್ ” (Unmasking Pain -directed by Balbir Singh) ಎನ್ನುವ ಯೋಜನೆಯಲ್ಲಿ ಪಾರ್ಕಿನ್ಸನ್ ಖಾಯಿಲೆ, ಮುಪ್ಪಿನಲ್ಲಿ ದೀರ್ಘಕಾಲಿಕ ವೇದನೆ,  ಮತ್ತಿತರ ಅಂಗಚಲನೆಯ ಅಸ್ವಾಸ್ಥ್ಯತೆಯಿಂದ ಬಳಲುವವರು ನೆರೆದಿದ್ದರು. ಮುಖವಾಡಗಳಿಗೆ ಮುಖವರ್ಣ ತಯಾರಿಕೆ, ಬಣ್ಣ ಕೊಡುವುದು ಇಂಥ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಅವರೆದುರು ಕಲಾವಿದರು ವೇಷ ಧರಿಸಿ, ಆಡಿ, ನೃತ್ಯ ಪ್ರದರ್ಶಿಸಿ ಸ್ಥಳೀಯ ಸಮುದಾಯದೊಂದಿಗೆ ಬೆರೆತು ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡ ಅನುಭವ ತಮಗೆ ಮತ್ತು ತಂಡದವರಿಗೆ ಅದ್ವಿತೀಯವಾಗಿತ್ತೆನ್ನುವುದನ್ನು ಪ್ರೊ ಸಾಮಗ ಅವರು ಇಲ್ಲಿಯವರೆಗಿನ ಯುಕೆ ಪ್ರವಾಸದ ಬಗ್ಗೆ ಮಾತಾಡುತ್ತ ನನ್ನೊಡನೆ ಹಂಚಿಕೊಂಡರು. ಶಾಲೆಯೊಂದರಲ್ಲಿ ಯಕ್ಷಗಾನದ ವೇಷ ಭೂಷಣದ ಪ್ರಸ್ತುತಿಯಲ್ಲಿ ಉಪಸ್ಥಿತರಿದ್ದ ಮಕ್ಕಳು ಅದಕ್ಕೆ ಸಂಬಂಧಿಸಿದ ತರತರದ ಪ್ರಶ್ನೆಗಳನ್ನು ಕೇಳಿದ ಕೌತುಕವನ್ನು ನೆನೆದರು. 
ಯಕ್ಷಧ್ರುವ ತಂಡದವರೆಲ್ಲ ಜೂ 24ರಂದು ಲೀಡ್ಸ್ ನಗರದಲ್ಲಿ ಸೇರಿದರು. ದೇವಿಕಾ ರಾವ್ ಅವರು ಕುಚಿಪುಡಿ, ಯಕ್ಷಗಾನ ಮತ್ತು ಭರತನಾಟ್ಯದಲ್ಲಿ ಪಳಗಿದವರು; ಸುರತ್ಕಲ್ ಹತ್ತಿರದ ಕೃಷ್ಣಾಪುರದವರು. ಅವರ ನೇತೃತ್ವದಲ್ಲಿ ಒಂದು ಪೂರ್ವರಂಗದ ನೃತ್ಯ ಕಮ್ಮಟ ನೆರೆವೇರಿತು. ಅದರಲ್ಲಿ ಭಾಗವಹಿಸಿದ ಸ್ಥಳೀಯ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕಲಾಕಾರರು ಅದರ ಬಗ್ಗೆ ಮಾಹಿತಿ ಕೊಟ್ಟು ಪ್ರಥಮ ಹೆಜ್ಜೆಗಳನ್ನು ಹೇಳಿಕೊಟ್ಟರು. ಪ್ರೊ ಸಾಮಗ ಅವರು ಯಕ್ಷಗಾನದ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳಿ ಅದರ ಕಥಾವಸ್ತುವನ್ನು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ತಮ್ಮ ಅನುಭವದಿಂದಾಗಿ ಶೇಕ್ಸ್ಪಿಯರ್ ನಾಟಕಗಳಿಗೆ ತಳುಕು ಹಾಕಿದ್ದು ವಿಶೇಷವಾಗಿತ್ತು. ನಾಲ್ಕು ದಿನಗಳ ನಂತರ ದೇವಿಕಾ ಅವರ ವಿದ್ಯಾರ್ಥಿಗಳು ತಾವು ಕಲಿತ ಚಿಕ್ಕ ನೃತ್ಯ ಪ್ರದರ್ಶನ ಮಾಡಿದರು. ಮಧ್ಯದಲ್ಲಿ ಸಿಕ್ಕ ವಿರಾಮ ಸಮಯದಲ್ಲಿ ಮಾತಿಗಿಳಿದಾಗ ಸಾಮಗರು ಅನೇಕ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡರು. ಇತ್ತೀಚೆಗೆ ಯಕ್ಷಧ್ರುವ ಪಟ್ಲ ತಂಡದ ಭಾಗವತರಾದ ಸತೀಶ್ ಪಟ್ಲ ಅವರು ಇಂದಿನ ಯಕ್ಷಗಾನ ರಂಗದಲ್ಲಿ ಗತಕಾಲದ ಚಿತ್ರರಂಗದ ’ಅಣ್ಣಾವ್ರು’ ರಾಜಕುಮಾರರನ್ನು ಹೋಲಿಸುವಂಥ ಖ್ಯಾತಿಶಿಖರಕ್ಕೇರಿದ್ದಾರೆ. ತೆಂಕು - ಬಡಗು ತಿಟ್ಟುಗಳೆಂದು ಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಪೋಷಿಸುತ್ತಿದ್ದಾರೆ. ಈಗ ಇಲ್ಲಿ ಕರೆತಂದ ತಂಡದಲ್ಲಿ ಧರ್ಮಸ್ಥಳ, ಕಟೀಲು, ಪಾವಂಜೆ, ಹನುಮಗಿರಿ ಮೇಳದ ಕಲಾವಿದರನ್ನು ಸೇರಿಸಿಕೊಂಡಿರುವದೇ ಅದಕ್ಕೆ ಸಾಕ್ಷಿ ಎನ್ನುತ್ತಾರೆ. ”ಅನುಕೂಲವಿಲ್ಲದ ಯಕ್ಷಗಾನ ಕಲಾವಿದರಿಗೆ ಪಟ್ಲ ಅವರು ಮಾಡುತ್ತಿರುವ ಸಹಾಯ ಶ್ಲಾಘನೀಯ ಮತ್ತು ಅವರ ಮೇಲೆ ಅಪಾರ ಗೌರವ ಭಾವ ಹುಟ್ಟಿಸುವಂಥದು,’’ ಎಂದು ಹೇಳಿ ಮುಂದುವರೆದು ”He has a vision’’ ಅಂದರು.

ಪ್ರಸಂಗಕ್ಕೊಬ್ಬ ಸೂತ್ರಧಾರನಿರುವಂತೆ ಈ ತಂಡಕ್ಕೆ ‘ಸೂತ್ರಧಾರ‘ನಂತೆ, ಸಂಯೋಜಕ/ನಿರ್ವಾಹಕರಾಗಿ ಬಂದವರು ವಾಸು ಐತಾಳ. ಮೂರು ದಶಕಗಳ ಅಮೇರಿಕ ವಾಸದ ನಂತರ ’ಊರಿಗೆ’ ಮರಳಿದ ಅವರಿಗೆ ಪೂರ್ವ - ಪಶ್ಚಿಮದ ಅನುಭವವಲ್ಲದೆ ಯಕ್ಷಗಾನದ ಬಗ್ಗೆ ಅಪಾರ ಪ್ರೀತಿಯಿರುವದರಿಂದಲೇ ಕಾರಣಾಂತರಗಳಿಂದಾಗಿ ಒಬ್ಬ ಚಂಡೆ ವಾದಕರು ಪ್ರವಾಸದ ಮಧ್ಯದಲ್ಲಿ ಭಾರತಕ್ಕೆ ಮರಳಬೇಕಾದಾಗ ಮದ್ದಳೆ ಬಾರಿಸಲು ಸಹ ತಯಾರಾದರು! ಅವರನ್ನು ಮತ್ತು ನನ್ನೊಡನೆ ಸಹಕರಿಸಿದ ಉಳಿದ ಕಲಾಕಾರರನ್ನು ಸಹ ಇಲ್ಲಿ ನೆನೆಯುತ್ತೇನೆ. ಅದೇ ರೀತಿಯಲ್ಲಿ ಈ ತಂಡದವರ ಆಗಮನಕ್ಕೆ ಮತ್ತು ಇಲ್ಲಿ ಉಳಿದುಕೊಳ್ಳಲು ಅನವರತ ಶ್ರಮ ಪಟ್ಟ”ಆಯಾಮ’’ ಮತ್ತು”ದೇವಿಕಾ ಡಾನ್ಸ್ ಥಿಯೇಟರ್’’ದ ಸಂಘಟಕರರನ್ನೂ ಅಭಿನಂದಿಸಲೇ ಬೇಕು. 

 ಜೂನ್ 27ನೆಯ ತಾರೀಕು ಯಕ್ಷಗಾನದ ಬಗ್ಗೆ ಲೆಕ್ಚರ್ ಮತ್ತು ಸಭಿಕರ ತಿಳುವಳಿಕೆಗಾಗಿ ಚಿಕ್ಕ ಪ್ರದರ್ಶನ ಸಹ ಕೆಲವೇ ಕಲಾವಿದರು ಮಾಡಿ ತೋರಿಸಿದರು. ಮಧ್ಯಾಹ್ನ ಮತ್ತು ಸಂಜೆ ಮತ್ತೆ ನರಕಾಸುರ ಮೋಕ್ಷ ಮತ್ತು ಸುದರ್ಶನ ವಿಜಯ ಎನ್ನುವ ಎರಡು ಪ್ರಸಂಗಗಳನ್ನಾಡಿ ಮನರಂಜಿಸಿ, ನೂರಾರು ಜನರ ಮೆಚ್ಚುಗೆಗೆ ಪಾತ್ರರಾದರು. ಅದರಲ್ಲಿ ಮುಕ್ಕಾಲು ಪಾಲು ಜನರು ಇದೇ ಮೊದಲ ಸಲ ಯಕ್ಷಗಾನವನ್ನು ನೋಡುತ್ತಿದ್ದವರಾಗಿದ್ದರು. ಸತೀಶ್ ಶೆಟ್ಟಿಯವರ ಕಂಠಶ್ರೀಯಲ್ಲಿ ಭಾಗವತಿಕೆ, ನಟರ ಅರ್ಥಗಾರಿಕೆ, ಹೆಣ್ಣಿನ ಪಾತ್ರದಲ್ಲಿ ಪ್ರಶಾಂತ ನೆಲ್ಯಾಡಿಯವರ ಕುಣಿತ ಮತ್ತು ಚಂದ್ರಶೇಖರ ಪೂಜಾರಿಯವರ ’ಧಿಗಿಣ’ (ಗಿರಕಿ) ಕೆಲವರಿಗೆ ಬಹು ವಿಶೇಷವೆನಿಸಿತು. (ಕೆಳಗಿನ ಲಿಂಕ್ ನಿಂದ ವಿಡಿಯೋ ನೋಡಿರಿ).

--ಶ್ರೀವತ್ಸ ದೇಸಾಯಿ
ಚಿತ್ರ ಕೃಪೆ: ರಾಂ
’ಸುದರ್ಶನ ವಿಜಯ’ ಪ್ರಸಂಗದ ಒಂದು ತುಣುಕು
**************************************************

ಪುಸ್ತಕ ವಿಮರ್ಶೆ ಎಂಬ ತಕ್ಕಡಿ: ಡಾ ಜಿ.ಎಸ್. ಶಿವಪ್ರಸಾದ್

ಮತ್ತು ಒಂದು ಪುಸ್ತಕ ವಿಮರ್ಶೆ – ಟಿ. ಆರ್. ನಾರಾಯಣ್

ಈ ವಾರದ ಸಂಚಿಕೆಯಲ್ಲಿ ಒಂದಕ್ಕೊಂದು ಪೂರಕವಾಗುವ ಎರಡು ಬರಹಗಳಿವೆ. ನಾನು ‘ಪುಸ್ತಕ ವಿಮರ್ಶೆ ಎಂಬ ತಕ್ಕಡಿ’ ಎನ್ನುವ ಶೀರ್ಷಿಕೆಯಲ್ಲಿ ವಿಮರ್ಶೆಯ ಕುರಿತಾದ ನನ್ನ ಕೆಲವು ಅನಿಸಿಕೆಗಳನ್ನು ದಾಖಲಿಸಿದ್ದೇನೆ. ಪುಸ್ತಕ ವಿಮರ್ಶೆಯ ಕೆಲವು ಆಯಾಮಗಳನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ನನ್ನದಾಗಿದೆ. ನನ್ನ “ಅಪ್ಪ ನೆಟ್ಟ ಆಲದ ಮರ” ಬಿಡಿ ಬರಹಗಳ ಕೃತಿಯನ್ನು ಶ್ರೀಯುತ ನಾರಾಯಣ್ ಅವರು ವಿಶ್ಲೇಷಿಸಿ ಒಂದು ವಿಮರ್ಶೆಯನ್ನು ಒದಗಿಸಿದ್ದಾರೆ. ನಾರಾಯಣ್ ಅವರು ನಮ್ಮ ಕನ್ನಡ ಬಳಗದ ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿ ಮತ್ತು ಹೆಸರಾಂತ ನಾಟ್ಯ ಕಲಾವಿದೆ ಸುಮನಾ ನಾರಾಯಣ್ ಅವರ ತಂದೆ. ಅವರ ಈ ಒಂದು ಬರಹಕ್ಕೆ ನಾನು ಆಭಾರಿಯಾಗಿದ್ದೇನೆ. ಆ ವಿಮರ್ಶೆಯನ್ನು ಕೆಳಗೆ ಹಂಚಿಕೊಳ್ಳಲಾಗಿದೆ.
ದಯವಿಟ್ಟು ಓದಿ, ನಿಮ್ಮ ಅನಿಸಿಕೆಗಳನ್ನು (ಕಿರು ವಿಮರ್ಶೆಯನ್ನು !) ಒದಗಿಸಿ

  • ಸಂಪಾದಕ

ಫೋಟೋ ಗೂಗಲ್ ಕೃಪೆ

 ಪುಸ್ತಕ ವಿಮರ್ಶೆ ಎಂಬ ತಕ್ಕಡಿ: ಡಾ ಜಿ.ಎಸ್. ಶಿವಪ್ರಸಾದ್

ಒಂದು ಪುಸ್ತಕವನ್ನು ಓದಿದಾಗ ನಮ್ಮ ಗ್ರಹಿಕೆಗೆ ನಿಲುಕುವ ವಸ್ತು ವಿಷಯಗಳನ್ನು, ವಿಚಾರಗಳನ್ನು ಮೆಲುಕು ಹಾಕಿ ಅದನ್ನು ನಮ್ಮ ಬದುಕಿನ ಅನುಭವಗಳ ಜೊತೆ ನಿಲ್ಲಿಸಿ ಒಂದು ತುಲನಾತ್ಮಕ ಮತ್ತು ವಿಮರ್ಶಾತ್ಮಕ ಒಳನೋಟವನ್ನು ಕಂಡುಕೊಂಡು ಅದನ್ನು ಕ್ರಮಬದ್ಧವಾಗಿ ದಾಖಾಲಾಯಿಸುವುದೇ ವಿಮರ್ಶೆ ಎನ್ನ ಬಹುದು. ಒಂದು ಪುಸ್ತಕದ ಸಾರಾಂಶವನ್ನು ಗ್ರಹಿಸಿ ಆಳಕ್ಕೆ ಇಳಿಯದೆ, ವೈಯುಕ್ತಿಕ ದೃಷ್ಟಿಕೋನವನ್ನು ಹೊರಗಿಟ್ಟು, ಲೇಖಕರ ಆಶಯಗಳ್ನು ಯಥಾವತ್ತಾಗಿ ಬಿತ್ತರಿಸಿದರೆ ಅದು ಪುಸ್ತಕ ಪರಿಚಯವಾಗುತ್ತದೆ, ಒಂದು ವರದಿಯಾಗುತ್ತದೆ. ಒಬ್ಬ ಉತ್ತಮ ವಿಮರ್ಶಕನಿಗೆ ಸಾಹಿತ್ಯದ ಪರಿಚಯವಿರಬೇಕು, ಸಾಹಿತ್ಯ ಸಂವೇದನೆ ಇರಬೇಕು, ಪುಸ್ತಕದಲ್ಲಿನ ಸತ್ವ, ನಿಸ್ಸತ್ತ್ವಗಳನ್ನು ಗುರುತಿಸುವ ಸಾಮರ್ಥ್ಯವಿರಬೇಕು, ಅಲ್ಲೊಂದು ನಿಷ್ಪಕ್ಷಪಾತ ನಿಲುವಿರಬೇಕು ಮತ್ತು ಮುಖ್ಯವಾಗಿ ಪ್ರಾಮಾಣಿಕತೆ ಇರಬೇಕು. 

ಒಂದು ಪುಸ್ತಕವನ್ನು ವಿಮರ್ಶಿಸಲು ಹೊರಟ ವಿಮರ್ಶಕನ (ಓದುಗನ) ಸಾಮಾಜಿಕ -ರಾಜಕೀಯ ನಿಲುವುಗಳು, ಬದುಕಿನ ಅನುಭವ, ತಾನು ಕಂಡುಕೊಂಡ ಬದುಕಿನ ಮೌಲ್ಯಗಳು ಅವನು ಪುಸ್ತಕಕ್ಕೆ ಹೇಗೆ ಸ್ಪಂದಿಸುತ್ತಾನೆ ಎನ್ನುವುದನ್ನು ನಿರ್ಧರಿಸುತ್ತವೆ. ಒಬ್ಬ ಸಾಹಿತ್ಯ ವಿಮರ್ಶಕನಾಗಲು ವಿಶೇಷ ಸಾಹಿತ್ಯ ತರಬೇತು ಬೇಕಾಗಿಲ್ಲ ಮತ್ತು ಸಾಹಿತ್ಯ ವಿದ್ಯಾರ್ಥಿಯಾಗಿ ಅಕ್ಯಾಡೆಮಿಕ್ ಆಗಿರಲೇಬೇಕಿಲ್ಲ, ಒಂದು ವೇಳೆ ಆಗಿದ್ದರೆ ಅದು ಸಹಾಯಕವಾಗಬಹುದು.

ಒಂದು ಕೃತಿ ವಿಮರ್ಶೆಯ ಅಂತಿಮ ಗುರಿ ಎಂದರೆ ಒಂದು ಪುಸ್ತಕದ ಪರಿಚಯದ ಜೊತೆ ಉತ್ತಮ ಸಾಹಿತ್ಯವನ್ನು, ಲೇಖಕರ ವಿಚಾರ ಧಾರೆಯನ್ನು ಸಾಮೂಹಿಕ ಚರ್ಚೆಗೆ ಒಳಪಡಿಸುವುದು. ಕೆಲವು ಕೃತಿಗಳಲ್ಲಿ ಪ್ರಖರವಾದ ವಿಚಾರ ಚಿಂತನೆಗಳು ಇಲ್ಲದಿದ್ದರೂ ಆ ಬರಹಗಳಲ್ಲಿನ ಕಲಾತ್ಮಕತೆ, ಸೃಜನ ಶೀಲತೆ, ಕಥನ ಶೈಲಿ ಮತ್ತು ತಾಂತ್ರಿಕ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡಬಹುದು. ಸಾಮಾಜಿಕ ವಿಚಾರಗಳನ್ನು ಒಳಗೊಂಡ ಕಥೆ, ಕಾದಂಬರಿ ಕವಿತೆ, ಪ್ರಬಂಧಗಳು ಕೆಲವೊಮ್ಮೆ ಉಗ್ರ ಟೀಕೆಗಳಿಗೆ ಒಳಗಾಗಬಹುದು. ಒಬ್ಬ ಲೇಖಕ ತನ್ನ ಒಂದು ಸಾರ್ವತ್ರಿಕವಲ್ಲದ, ಸಂಕುಚಿತವಾದ, ಆಲೋಚನೆಗಳನ್ನು ಕೃತಿಯಲ್ಲಿ ತರಲು ಪ್ರಯತ್ನಿಸಿದಾಗ ನಮ್ಮ ಐಡಿಯಾಲಜಿಗಳ ಸಂಘರ್ಷಣೆ ಸಾಮಾನ್ಯ. ಚರಿತ್ರೆಯನ್ನು ಆಧರಿಸಿ ಬರೆದಂತಹ ಕೃತಿಗಳು ತೀಕ್ಷ್ಣ ವಿವಾದಕ್ಕೆ ಒಳಪಟ್ಟಿರುವುದನ್ನು ಕಂಡಿದ್ದೇವೆ.  ಚರಿತ್ರೆಯಲ್ಲಿ ದಾಖಲಿಸಿರುವ ವಿಚಾರಗಳು ಎಷ್ಟರ ಮಟ್ಟಿಗೆ ಸತ್ಯ ಎನ್ನುವ ಸಂದೇಹ ಮೂಡಿಬರುವುದು ಸಹಜ. ಹಳೆಯ ಅಪ್ರತಸ್ತುತ ವಿಚಾರಗಳನ್ನು ಆಧರಿಸಿ ಲೇಖಕ ತನ್ನ ಒಂದು ಉದ್ದೇಶಿತ ಆಲೋಚನೆಗಳನ್ನು ಹೇರಲು ಹೊರಟಾಗ ಅದನ್ನು ಓದುಗರು ಮತ್ತು ವಿಮರ್ಶಕರು ಪ್ರಶ್ನಿಸುವುದೂ ಸಹಜವೇ. ವೈಚಾರಿಕ ನಿಲುವಿರುವ, ನಮಗೆ ಪ್ರಸ್ತುತವಾಗುವ, ಸಮಾಜದ ವರ್ತಮಾನ ಸಮಸ್ಯೆಗಳ ಬಗ್ಗೆ ಉಲ್ಲೇಖವಿರುವ,  ಜನರ ನೋವು, ದುಃಖಗಳನ್ನು ಅನುಕಂಪೆಯಿಂದ ಕಾಣುವ, ಸಮಾನತೆ ಮತ್ತು ಇತರ ಮಾನವೀಯ ಮೌಲ್ಯಗಳನ್ನು ಒಳಗೊಳ್ಳುವ ಕೃತಿಗಳು ಸಾಮಾನ್ಯವಾಗಿ ವಿವಾದದಿಂದ ದೂರ ಉಳಿಯುತ್ತವೆ ಮತ್ತು ಹೆಚ್ಚು ಹೆಚ್ಚು ಓದುಗರಿಂದ ಸ್ವೀಕೃತವಾಗುತ್ತವೆ ಎನ್ನಬಹುದು. ವಿಮರ್ಶಕರು ಅದೆಷ್ಟೋ ಕೃತಿಗಳನ್ನು ನೈತ್ಯಾತ್ಮಕವಾಗಿ ವಿಮರ್ಶಿಸಿದ್ದರೂ ಒಂದು ಕೃತಿಗೆ ಪರ -ವಿರೋಧ ಅಭಿಪ್ರಾಯಗಳು ಉಂಟಾಗುವುದು ಸಹಜ. ಲೇಖಕನ ಮತ್ತು ಓದುಗರ ಸಾಮಾಜಿಕ-ರಾಜಕೀಯ, ಎಡಪಂಥ, ಬಲಪಂಥ ನಿಲುವುಗಳೇ ಇದಕ್ಕೆ ಕಾರಣವಾಗಿರುತ್ತದೆ. 

ಓದುಗರು ಕೃತಿಯನ್ನು ಓದಿದ ಮೇಲೆ ವಿಮರ್ಶೆಯನ್ನು ಗಮನಿಸುವುದು ಒಳಿತು. ಇಲ್ಲದಿದ್ದಲ್ಲಿ ನಮ್ಮ ಸ್ವಂತ ಚಿಂತನೆಗಳು ಮೊಳಕೆಯೊಡೆಯುವ ಮೊದಲೇ ವಿಮರ್ಶಕನ ಚಿಂತನೆಗಳು ನಮ್ಮ ಮೇಲೆ ಪರಿಣಾಮಗಳನ್ನು ಬೀರಿ ನಾವು ನಮ್ಮ ಸ್ವತಂತ್ರ ಆಲೋಚನೆಗಳನ್ನು ಕಳೆದುಕೊಳ್ಳಬಹುದು. ವಿಮರ್ಶಕ ಒಂದು ಕೃತಿಯನ್ನು ತನ್ನ ಅಳತೆ ಮಾಪನದಲ್ಲಿ ತೂಗಿ ಇದು ಸರಿ ಇದು ತಪ್ಪು ಎಂದು ಹೇಳಬಹುದು ಆದರೆ ಅದನ್ನು ಒಪ್ಪಿಕೊಳ್ಳಲೇ ಬೇಕಿಲ್ಲ. ಏಕೆಂದರೆ ಅದು ಅವನ ದೃಷ್ಟಿಕೋನ, ಅವನ ಗ್ರಹಿಕೆ.  ಆದರೂ ಒಬ್ಬ ಸೃಜನ ಶೀಲ ಲೇಖಕನಿಗೆ ಒಬ್ಬ ಉತ್ತಮ ವಿಮರ್ಶಕನ ಅಭಿಪ್ರಾಯವನ್ನು ಸ್ವೀಕರಿಸುವ  ಔದಾರ್ಯ ಮತ್ತು ಹೃದಯ ವೈಶಾಲ್ಯವಿರಬೇಕು. ವಿಮರ್ಶಕರು ಗುರುತಿಸಿದ ದೋಷಗಳನ್ನು ತನ್ನ ಮುಂದಿನ ಕೃತಿಯಲ್ಲಿ ಸರಿಪಡಿಸುವ ಮುಕ್ತ ಮನಸ್ಸಿರಬೇಕು. ಒಂದು ಕೃತಿ ಬರೆದ ಕೂಡಲೇ ಅದರ ವಿಮರ್ಶೆ ಕೆಲವೇ ದಿನಗಳಲ್ಲಿ ನಡೆಯಬೇಕು ಎಂಬ ನಿರೀಕ್ಷೆ ಇದ್ದರೂ ಅದಕ್ಕೆ ಕಾಲದ ಮಿತಿಯಿಲ್ಲ. ಶೇಕ್ಸ್ಪಿಯರ್, ಕುವೆಂಪು ಬರೆದ ಕಾವ್ಯ ನಾಟಕಗಳನ್ನು ಇಂದು ವಿಮರ್ಶಿಸಿ ಹೊಸ ಹೊಳಹುಗಳನ್ನು ಕಂಡುಕೊಳ್ಳ ಬಹುದು. ಉದಾಹರಣೆಗೆ ‘ತಬ್ಬಲಿಯು ನೀನಾದೆ ಮಗನೆ’ ಎಂಬ ಭೈರಪ್ಪನವರ ೫೦ ವರ್ಷಗಳ ಹಿಂದಿನ ಕೃತಿಯನ್ನು ನಾನು ಕಳೆದ ಕೆಲವು ವರ್ಷಗಳಲ್ಲಿ ಪುನರವಲೋಕಿಸುವ ಪ್ರಯತ್ನ ಮಾಡಿದೆ. (ಇದು ಅನಿವಾಸಿ ಜಾಲತಾಣದಲ್ಲಿ ಹಿಂದೆ ಪ್ರಕಟಗೊಂಡಿತ್ತು) ಕೆಲವು ಕಾಲಾತೀತವಾದ ಬರಹಗಳು ಬದಲಾಗುತ್ತಿರುವ ಸಮಾಜದ ಹಿನ್ನೆಲೆಯಲ್ಲಿ ಮತ್ತೆ ಪುನರ್ವಿಮರ್ಶೆಗೆ ದಕ್ಕುತ್ತವೆ. ಒಂದು ಕಾಲ ಘಟ್ಟದ ಕೃತಿ ಇನ್ನೊಂದು ಕಾಲಘಟ್ಟದಲ್ಲಿ, ಬೇರೆ ಹಿನ್ನೆಲೆಯಲ್ಲಿ ವಿಮರ್ಶೆಗೆ ಗುರಿಯಾಗಬಹುದು.

ಒಬ್ಬ ವಿಮರ್ಶಕ ಬರೆದ ವಿಮರ್ಶೆಯನ್ನು ಬಹಿರಂಗವಾಗಿ ಹಂಚಿಕೊಳ್ಳಬೇಕು. ಕೆಲವು ಗಮನಾರ್ಹ ಕೃತಿಗಳ ವಿಮರ್ಶೆಗಳು ದಿನ ಪತ್ರಿಕೆಗಳಲ್ಲಿ, ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗುತ್ತವೆ.  ಕೆಲವು ಪ್ರಬುದ್ಧ ಪಾಂಡಿತ್ಯಪೂರ್ಣ ವಿಮರ್ಶೆ/ ಚರ್ಚೆಗಳು ಸಾಹಿತ್ಯಕ್ಕೆ ಮೀಸಲಾದ ಸಾಹಿತ್ಯ ಪತ್ರಿಕೆಗಳಲ್ಲಿ ಸಂಭವಿಸುತ್ತವೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದ ವಾಟ್ಸ್ ಆಪ್ ಮತ್ತು ಫೇಸ್ಬುಕ್ ತಾಣಗಳಲ್ಲಿ ಕಿರು ವಿಮರ್ಶೆಗಳನ್ನು ಯಥೇಚ್ಛವಾಗಿ ಕಾಣಬಹುದು. ಒಂದು ಕೃತಿ ವಿಮರ್ಶೆಗೆ ಒಳಗಾದರೆ ಅದು ಒಂದು ಪ್ರಚಾರವಾಗಿ ಪರಿಣಮಿಸಿ ಲೇಖಕ ನಿರೀಕ್ಷಿಸದಿದ್ದರೂ ತನಗೆ ತಾನೇ ಸಲ್ಲುವ ಒಂದು ಲಾಭ ಎನ್ನಬಹುದು.

ಒಂದು ರೀತಿ ನಾವೆಲ್ಲರೂ ವಿಮರ್ಶಕರೆಂದು ಭಾವಿಸಬಹುದು. ನಮ್ಮ ದಿನ ನಿತ್ಯ ಬದುಕಿನ ಆಗುಹೋಗುಗಳಲ್ಲಿ ಸಂಭವಿಸುವ ಸಂಗತಿಗಳನ್ನು ನಮ್ಮ ಮನಸ್ಸು ವಿಮರ್ಶಿಸುತ್ತಿರುತ್ತದೆ. ಒಂದು ಒಳ್ಳೆಯ ಟಿವಿ ಸೀರಿಯಲ್ ನೋಡಿದಾಗ, ಒಂದು ಸಿನಮಾಗೆ ಹೋಗಿ ಬಂದಾಗ ನಾವು ಅದರ ವಿಮರ್ಶೆಗೆ ತೊಡಗುವುದು ಸಾಮಾನ್ಯ. 
ನನಗೆ ತಿಳಿದಂತೆ ನನ್ನ ಪತ್ನಿ ಮತ್ತು ಅವಳ ಕೆಲವು ಗೆಳತಿಯರು ಒಂದು ಲೇಡಿಸ್ ಬುಕ್ ಕ್ಲಬ್ ಮಾಡಿಕೊಂಡು ಬುಕರ್ ಪ್ರೈಜ್ ಪಡೆದ ಮತ್ತು ಇತರ ಜನಪ್ರಿಯ ಇಂಗ್ಲಿಷ್ ಕೃತಿಗಳನ್ನು ತಿಂಗಳಿಗೊಮ್ಮೆ ಚರ್ಚಿಸುತ್ತಾರೆ. ಅದೂ ಕೂಡ ಒಂದು ವಿಮರ್ಶೆಯ ಅಂಗವೇ ಎನ್ನ ಬಹುದು. ನಮ್ಮ ಅನಿವಾಸಿ ಬ್ಲಾಗಿನಲ್ಲಿ ಪ್ರಕಟಗೊಳ್ಳುವ ಬರಹಕ್ಕೆ ಬರುವ ಕಾಮೆಂಟುಗಳು ಒಂದು ರೀತಿ ವಿಮರ್ಶೆ ಎನ್ನಬಹುದು. ಒಂದು ಪುಸ್ತಕಕ್ಕೆ ಬರೆದು ಕೊಟ್ಟ ಮುನ್ನುಡಿ ಪ್ರವೇಶ ಪರಿಚಯದ ಜೊತೆಗೆ ಒಂದು ವಿಮರ್ಶೆಕೂಡ ಎನ್ನಬಹುದು. 


ವಿಮರ್ಶೆಯು ಒಂದು ಕಲೆ ಮತ್ತು ಅದು ಪ್ರತಿಭೆಯನ್ನು ಬೇಡುತ್ತದೆ. ವಿಮರ್ಶಕರು ಸಾಹಿತ್ಯವನ್ನು ಸೃಷ್ಠಿಸುವ ಲೇಖಕರಷ್ಟೇ ಮುಖ್ಯ. ಅವರಿಗೂ ಮಾನ್ಯತೆ ಮತ್ತು ಪುರಸ್ಕಾರಗಳ ಅವಶ್ಯಕತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಡಾ.ಜಿ.ಎಸ್.ಎಸ್ ಅವರು ವಿಶ್ವಸ್ಥಮಂಡಳಿ ಎಂಬ ಒಂದು ದತ್ತಿ ಸಂಸ್ಥೆಯನ್ನು ಹುಟ್ಟುಹಾಕಿ ಕಳೆದ ಹತ್ತಾರು ವರ್ಷಗಳಲ್ಲಿ ಪ್ರತಿ ವರ್ಷ ಉತ್ತಮ ವಿಮರ್ಶಕರಿಗೆ ಜಿ. ಎಸ್. ಎಸ್ ಪುರಸ್ಕಾರ ನೀಡಲಾಗುತ್ತಿದೆ. ಈ ಪುರಸ್ಕಾರ ಉತ್ತಮ ಕವಿತೆ ಅಥವಾ ಕಾದಂಬರಿಗಲ್ಲ! ಬದಲಾಗಿ ವಿಮರ್ಶಕರಿಗೆ ಮಾತ್ರ ಮೀಸಲಾಗಿದೆ ಎಂಬ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತ.

ಒಂದು ಭಾಷೆಯ, ಸಂಸ್ಕೃತಿಯ ಮತ್ತು ಸಾಹಿತ್ಯದ ಆರೋಗ್ಯಕರ ಬೆಳವಣಿಗೆಗೆ ವಿಮರ್ಶೆ ಅತ್ಯಗತ್ಯ. ಓದುಗರ ಮೆಚ್ಚುಗೆ ಮತ್ತು ಉಪಯುಕ್ತ ಸಲಹೆಗಳು ಸಾಹಿತ್ಯದ ಬೆಳವಣಿಗೆಯನ್ನು ರೂಪಿಸುತ್ತವೆ.  ಯಾರೇ ಒಬ್ಬ ಲೇಖಕನಿಗೆ ಓದುಗರ ಅನಿಸಿಕಗಳು ಮೌಲಿಕವಾಗುತ್ತವೆ ಮತ್ತು ಮಾರ್ಗದರ್ಶನ ನೀಡುತ್ತವೆ.  ಒಂದು ಸಮುದಾಯದಲ್ಲಿ ಉತ್ತಮ ಸಾಹಿತ್ಯ ಅಭಿರುಚಿಯನ್ನು ಬೆಳೆಸುವುದರಲ್ಲಿ ವಿಮರ್ಶೆ ಮಹತ್ವವಾದ ಜವಾಬ್ದಾರಿಯನ್ನು ವಹಿಸಿರುತ್ತದೆ.

ಡಾ ಜಿ ಎಸ್ ಶಿವಪ್ರಸಾದ್


* * *   

ಒಂದು ಪುಸ್ತಕ ವಿಮರ್ಶೆ – ಟಿ.ಆರ್. ನಾರಾಯಣ್

(ಅಪ್ಪ ನೆಟ್ಟ ಆಲದ ಮರ ಕೃತಿಯ ವಿಮರ್ಶೆ)  

ಶ್ರೀ  ಟಿ. ಆರ್. ನಾರಾಯಣ್ ರವರ ಕಿರು ಪರಿಚಯ:

ಶ್ರೀ ಟಿ. ಆರ್. ನಾರಾಯಣ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ( ಈಗ ರಾಮನಗರ ಜಿಲ್ಲೆ)ಯ ಮಾಗಡಿ ತಾಲ್ಲೋಕಿನ ತಿಪ್ಪಸಂದ್ರ ಎಂಬ ಗ್ರಾಮದವರು. ಇವರ ಬಾಲ್ಯ ಮತ್ತು ವಿದ್ಯಾಭ್ಯಾಸಗಳನ್ನು ಹೆಚ್ಚಿನಂಶ ಬೆಂಗಳೂರಿನ ಬಸವನಗುಡಿಯ (ಬುಲ್ ಟೆಂಪಲ್ ರಸ್ತೆ) ಪರಿಸರದಲ್ಲಿ ಕಳೆದು ಬಿ. ಎಂ. ಎಸ್. ಇಂಜನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಇಂಜನಿಯರಿಂಗ್ ಪದವಿಯನ್ನು ಗಳಿಸಿದರು. ನಂತರ ಕರ್ನಾಟಕ ವಿದ್ಯುತ್ಛಕ್ತಿ ಮಂಡಲಿಯಲ್ಲಿ (K E B) ಇಂಜನಿಯರ್ ಆಗಿ ಸುಮರು 26 ವರ್ಷಗಳ ಕಾಲ ಅನುಭವಗಳಿಸಿ (Electrical Systems Planning, Maintenance and Development of Application Software), ಸ್ವಯಂ ನಿವೃತ್ತಿ ಪಡೆದು, ನಂತರ ಟಾಟ ಎನರ್ಜಿ ರಿಸರ್ಚ ಇನ್ಸ್ಟಿಟ್ಯೂಟ್ (Tata Enegy Research Institute) ನಲ್ಲಿ ಸಿನಿಯರ್ ಕನ್ಸಲಟಿಂಗ್ ಇಂಜನಿಯರ್/ಫೆಲೊ ಅಗಿ ಅನುಭವ ಗಳಿಸಿದರು (Energy Systems, Design, Planning and Conservation).

ಹೈಸ್ಕೂಲಿನ ವಿಧ್ಯಾರ್ಥಿ ಜೀವನದಿಂದ ಪ್ರಾರಂಭಿಸಿದ ಸಾಹಿತ್ಯ ಕೃತಿಗಳನ್ನು ಓದುವ ಅಭ್ಯಾಸವನ್ನು   ಸಮಾಯಾವಕಾಶವಾದಾಗ ಮುಂದುವರೆಸಿ ಹೊಸ ಪುಸ್ತಕಗಳನ್ನು ಓದಿ ಸಾಹಿತ್ಯ ಲೋಕಕ್ಕೆ ಪ್ರವೇಶಾನುಭವ ಗಳಿಸಿದರು. ಪ್ರಸಕ್ತ ಬೆಂಗಳೂರು ಹನುಮಂತನಗರದ ನಿವಾಸಿಯಾಗಿ ವಿಶ್ರಾಂತ ಜೀವನದಲ್ಲಿ ಸಾಹಿತ್ಯಾಸಕ್ತರಾಗಿ ಗ್ರಂಥಗಳ ಅಧ್ಯಯನ, ಸಾಹಿತ್ಯ ಚಿಂತನ ಮತ್ತು ಕನ್ನಡದಲ್ಲಿ ಕವನ/ಚುಟುಕ ಗಳ ರಚನೆ ಇತ್ಯಾದಿ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಇಂಗ್ಲೆಂಡಿನ ನಾಟಿಂಗ್ ಹ್ಯಾಮ್ ನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಕೆಲವು ಕಾಲ ವಾಸಿಸುತ್ತಾರೆ.

* * *

ಡಾ. ಶಿವ ಪ್ರಸಾದ್ ರವರ ಪ್ರಬಂಧ ಸಂಕಲನ, 'ಅಪ್ಪ ನೆಟ್ಟ ಆಲದ ಮರ' ವೈವಿಧ್ಯಮಯ ವಸ್ತುನಿಷ್ಠ ಬರಹಗಳೊಂದಿಗೆ ಮನೋಜ್ಞವಾಗಿ ಮೂಡಿಬಂದಿದೆ, ಜೊತೆಗೆ ಭಾವನಾತ್ಮಕ ಹಾಗೂ ತುಲನಾತ್ಮಕ ವಿಶ್ಲೇಷಣೆಗಳು ಸಹೃದಯ ಓದುಗರನ್ನು ಸಕಾರಾತ್ಮಕ ಚಿಂತನೆಗಳಿಗೀಡು ಮಾಡುವುದರಲ್ಲಿ ಸಫಲವಾಗಿವೆ.

ಈ ಸಂಕಲನದಲ್ಲಿ ಒಟ್ಟು 31 ಪ್ರಬಂಧಗಳಿದ್ದು, ಪ್ರತಿಯೊಂದೂ ತನ್ನ ವಿಶಿಷ್ಟ ಛಾಪಿನಿಂದ ಮುಖ್ಯವೆನಿಸಿ ಮನಸೆಳೆಯುತ್ತದೆ. ಕೆಲವು ಪ್ರಬಂಧಗಳಂತೂ ಓದುಗರ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿ ವಿಚಾರಾತ್ಮಕ ಪ್ರಜ್ಞೆಯನ್ನು ಪ್ರಚೋದಿಸುವಲ್ಲಿ ಸಫಲವಾಗಿವೆ. ಇಲ್ಲಿನ ಕೆಲವು ಪ್ರಬಂಧಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. 

ಹಿರಿಯರೂ, ಪೂಜ್ಯರೂ ಆದ ಕವಿ ನಾಡೋಜ ಶ್ರೀ ಜಿ. ಎಸ್. ಶಿವರುದ್ರಪ್ಪನವರ ನೆನಪಿನ ಕೆಲವು ಪ್ರಬಂಧಗಳು ಅವರ ವಿಶಾಲ ದೃಷ್ಟಿ, ಸಮನ್ವಯ ಭಾವ, ಮತ್ತು ಅವರ ಕವನ/ಕಾವ್ಯಗಳಲ್ಲಿನ ಪ್ರಬುದ್ಧ ಪರಿಪಕ್ವತೆ ಎಲ್ಲವೂ ಮನೋಜ್ಞವಾಗಿ, ಹಾಸುಹೊಕ್ಕಾಗಿ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತವೆ. ಈ ವಿಚಾರಗಳನ್ನು ಲೇಖಕರು ಪೂರ್ವಾಗ್ರಹರಹಿತ ಪ್ರಬುದ್ಧತೆಯಿಂದ ಮಂಡಿಸಿದ್ದಾರೆ. 

ಕವಿ ಕವಿತೆ ಮತ್ತು ಭಾವಗೀತೆ ಎನ್ನುವ ಪ್ರಬಂಧದಲ್ಲಿ, ಕವಿತೆ ಎಂದರೇನು? ಎಂಬ ಪ್ರಶ್ನೆಗೆ ಉತ್ತರವನ್ನು ಸ್ಪಷ್ಟ ವಾಗಿಯೂ, ನಿರ್ದಿಷ್ಟವಾಗಿಯೂ, ಮನದಟ್ಟಾಗುವಂತೆ, ಅಕರ ಗ್ರಂಥ, ಕವನ/ಕಾವ್ಯಗಳಿಂದ ಪ್ರಬುದ್ಧ ಸಾಲುಗಳನ್ನುದ್ಧರಿಸಿ ವಿಶ್ಲೇಷಿಸಲಾಗಿದೆ. ಡಾ. ಜಿ. ಎಸ್. ಶಿವರುದ್ರಪ್ಪನವರ ಪ್ರೌಢ  ಗ್ರಂಥ ' ಕಾವ್ಯರ್ಥ ಚಿಂತನ' ದಿಂದ ಪ್ರಾರಂಭಿಸಿ ಇಂಗ್ಲೀಷ್ ಕವಿ ಕೋಲ್ರಿಡ್ಜ್, ಶೇಕ್ಸಪಿಯರ್, ಕನ್ನಡದ ರಸಕವಿ ಕುವೆಂಪು, ಮುಂತಾದವರ ಅನುಭವದ ಮೂಸೆಯಲ್ಲಿ ಪಕ್ವಗೊಂಡ ಭಾವ ಸಮ್ಮಿಳನ, ಕವಿ ಮನಸ್ಸಿನ ಒಳತೋಟಿ, ಕಾವ್ಯರಚನೆಗೊದಗುವ ಪ್ರಕೃತಿ ಸೌಂದರ್ಯೋಪಾಸನೆ, ವಸ್ತು ವಿಶೇಷ, ಕಾವ್ಯದಲ್ಲಿ ಅಲಂಕಾರ, ರೂಪಕಗಳ/ಪ್ರತಿಮೆಗಳ ಉಪಯೋಗ ಮುಂತಾದವುಗಳನ್ನು ವಿಸ್ತಾರವಾಗಿ ಚರ್ಚಿಸಲಾಗಿದೆ. ಇವೆಲ್ಲವುಗಳ ಜೊತೆಗೆ ಅಧುನಿಕ ಭಾವಗೀತೆಗಳುದಯ, ಅವುಗಳು ಹಂತ ಹಂತವಾಗಿ ಮಹಾಕಾವ್ಯವಾದ ವಿಸ್ತಾರವನ್ನು ಪಡೆಯಬಹುದಾದ ಸಾಧ್ಯತೆ ಇತ್ಯಾದಿ ವಿವರಗಳನ್ನು ಡಾ. ಪ್ರಭುಶಂಕರ ರವರ ಉದ್ಗ್ರಂಥ 'ಕನ್ನಡದಲ್ಲಿ ಭಾವಗೀತೆ' ಯಿಂದ ಆಯ್ದ ಸಾಲುಗಳ ಸಹಾಯದಿಂದ ವಿಶದೀಕರಿಸಲಾಗಿದೆ.

ವೃತ್ತಿಯಲ್ಲಿ ವೈದ್ಯರಾದ (ಮಕ್ಕಳ ತಜ್ಞರು) ಲೇಖಕರು, ತಮ್ಮ ವಿಶೇಷ ಪರಿಣಿತಿ ಮತ್ತು ಅನುಭವದಿಂದ ಮಕ್ಕಳ ನಟ್ಸ್ ಅಲರ್ಜಿ ಬಗ್ಗೆ ಬರೆದ ಪ್ರಬಂಧ ('ಹಲ್ಲಿದ್ದವರಿಗೆ ಕಡಲೆ ಇಲ್ಲ...') ವೈದ್ಯಕೀಯ ವಿಷಯಗಳನ್ನು ಸರಳವಾಗಿ ಜನ ಸಾಮಾನ್ಯರಿಗೆ ಅರ್ಥವಾಗುವರೀತಿ ವಿವರಿಸಿದ್ದಾರೆ. 

'ನಾಗರಿಕ ಸಮಾಜದ ಕರಾಳ ಚಹರೆ' ಎಂಬ ಪ್ರಬಂಧದಲ್ಲಿ ಮಕ್ಕಳ ಶೋಷಣೆ (ಚೈಲ್ಡ್ ಅಬ್ಯುಸ್) ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ವಿಷಯ ಪರಿಣಿತರಿಗೆ ಮಾಹಿತಿ ಮತ್ತು ನಿರೂಪಣೆ ಸುಲಭ. ಪರಿಣತರಲ್ಲದವರಿಗೆ ವಿಷಯ ಸಂಗ್ರಹಣೆ ಮತ್ತು ನಿರೂಪಣೆ ಕಷ್ಟ ಸಾಧ್ಯವೆನಿಸಬಹುದು. ಈ ರೀತಿಯ ವಿಷಯ ಪರಿಣಿತ ಲೇಖಕರು ನಮ್ಮಲ್ಲಿ ವಿರಳ. ಇಂಥಹ ಲೇಖಕರ ಸಂಖ್ಯೆ ಬೆಳೆಯಬೇಕು.

ಧರ್ಮ ನಿರಪೇಕ್ಷತೆಯ (Secularism) ಬಗೆಗಿನ ಪ್ರಬಂಧಗಳಾದ 'ರಾಷ್ಟ್ರಪ್ರಜ್ಞೆ ಮತ್ತು ಧರ್ಮಪ್ರಜ್ಞೆ', 'ಇಂಗ್ಲೆಂಡ್ ಜನತೆಯ ಧರ್ಮ ನಿರಾಸಕ್ತಿ...' ಮುಂತಾದವುಗಳಲ್ಲಿ ಮತ/ಧರ್ಮಗಳಾಚರಣೆ ನಂಬಿಕೆಗಳು ವೈಯುಕ್ತಿಕ ವಾಗಿರಬೇಕೆಂದೂ,  ನಿತ್ಯದ ವ್ಯವಹಾರಗಳಲ್ಲಿ ಬೆರಸಿ ಪಕ್ಷಪಾತ ಭಾವನೆ ಸಲ್ಲದೆಂಬ ವಾದವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಲಾಗಿದೆ.  'ನಮ್ಮ ನಿಮ್ಮ ಪ್ರೊಫೆಸರ್ ನಿಸಾರ್ ಅಹಮದ್' ಎಂಬ ಲೇಖನದಲ್ಲಿ ಪ್ರತಿಭಾವಂತ ಕವಿಯೊಬ್ಬರ ಪರಕೀಯ ಭಾವ ಹಾಗೂ ಅನಾಥ ಪ್ರಜ್ಞೆಯ ಲಕ್ಷಣಗಳನ್ನು ಗುರುತಿಸಿ, ವಲಸಿಗರೂ ಕೂಡ ಇಂತಹಾ ಮನಸ್ಥಿತಿ/ಭಾವನೆಗಳಿಂದ ತೊಳಲಾಡುವ ಪರಿಸ್ಥಿತಿಯನ್ನು ಮನೋಜ್ಞವಾಗಿ ವರ್ಣಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಹಾರೋಪಾಯವಾಗಿ ಬಸವತತ್ವಗಳನುಷ್ಠಾನ ಸಮಯೋಚಿತವಾಗಿರುವುದನ್ನು ಅವರ ಕೆಲವು ವಚನಗಳ ಆಧಾರದಿಂದ ಸ್ಪಷ್ಟವಾಗಿ ಮೂಡಿಸಲಾಗಿದೆ ('ಅನಿವಾಸಿ ಭಾರತೀಯರಿಗೆ ಬಸವ ತತ್ವದ ಪ್ರಸ್ತುತತೆ' ಎಂಬ ಪ್ರಬಂಧ).

'ವಲಸೆ ಎಂಬ ಕನಸಿನಲ್ಲಿನ ನೋವು ನಲಿವುಗಳು' - ಈ ಪ್ರಬಂಧದಲ್ಲಿ ವಲಸೆಗಾರರ ಒಳತೋಟಿ, ಆಳವಾಗಿ ಬೇರೂರಿದ ಸ್ವದೇಶಪ್ರೇಮ, ಹೊಸ ಪರಿಸರದಲ್ಲಿ ಹೊಂದಾಣಿಕೆಯ ಕಷ್ಟ, ಅನಿವಾಸಿಗಳ ದ್ವಂದ್ವ ಮನೋವಿನ್ಯಾಸದ ಹೊಳಹು ಇತ್ಯಾದಿ ವಿಷಯಗಳನ್ನು ಕೂಲಂಕುಶವಾಗಿ ಚರ್ಚಿಸಿ, ದೇಶ ವಿದೇಶಗಳ ಗಡಿತೊಡೆದು 'ವಿಶ್ವಮಾನವ ಸಂಸ್ಕೃತಿ' ಮತ್ತು ಭಾವನೆಗಳನ್ನು ಬೆಳಸಿಕೊಳ್ಳಬೇಕಾಗಿರುವುದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.

ಪ್ರವಾಸ ಕಥನ ಮತ್ತದರ ಮೇಲಿನ ಸೃಜನಾತ್ಮಕ ವಿಮರ್ಶೆಗಳ ಬಗ್ಗೆ ಬರೆದಿರುವ ಲೇಖನಗಳು, ' ಲೇಕ್ ಡಿಸ್ಟ್ರಿಕ್ಟಿನ ಶಿಖರಗಳಲ್ಲಿ ' ಮತ್ತು ' ನೋಟಗಳ ನಡುವಿನ ನಿರ್ದಿಷ್ಟ ನಿಲುವುಗಳು '. ಮೊದಲ ಪ್ರಬಂಧದಲ್ಲಿ ಲೇಖಕ ದಂಪತಿಗಳ ಪ್ರಕೃತಿ ಸೌಂದರ್ಯೋಪಸನಾ ಪ್ರಜ್ಞೆ  ಮತ್ತು  ಪ್ರವಾಸಪ್ರಿಯತೆಗಳಿಗೆ ಕೈಗನ್ನಡಿಯಂತಿದೆ. ಇಂಗ್ಲೆಂಡ್ ನಲ್ಲಿಯ ಲೇಕ್ ಡಿಸ್ಟ್ರಿಕ್ಟ್ ನ ಸುಂದರ ಪರಿಸರ, ಮೇರು ಪರ್ವತ ಶ್ರೇಣಿ ಲ್ಯಾಂಗ್ ಡೇಲ್ ಪೈಕ್, ಸ್ಕೆಲ್ವಿಥ್ ಫೋರ್ಸ್ (ಜಲಪಾತ), ಚೇತೋಹಾರಿ ವಿಂಡರ್ ಮಿಯರ್  ಬಟರ್ ಮಿಯರ್ ಮತ್ತು ಮನೋಹರ ತಾಣ ಎಲ್ಟರ್ ವಾಟರ್ ಸರೋವರಗಳು, ಮತ್ತಿತರ ಸ್ಥಳಗಳ ವರ್ಣನೆ ಕಣ್ಣಿಗೆ ಕಟ್ಟಿದಂತಿದೆ. ಎರಡನೆಯ ಪ್ರಬಂಧದಲ್ಲಿ ಡಾ॥ ಕೆ. ಮರುಳ ಸಿದ್ದಪ್ಪ (ಕೆ. ಎಂ. ಎಸ್.) ಅವರ ಪ್ರವಾಸ ಕಥನದ ಪುಸ್ತಕದ ಬಗೆಗಿನ ಲೇಖರ ಅನಿಸಿಕೆಗಳನ್ನು ದಾಖಲಿಸುತ್ತಾ, ಶ್ರೀ ಜಿ. ಎಸ್. ಎಸ್. ಅವರ 'ಇಂಗ್ಲೆಂಡಿನಲ್ಲಿ ಚತುರ್ಮಾಸ' ಎಂಬ ಪ್ರವಾಸ ಕಥನದ ಪುಸ್ತಕದ ಬಗ್ಗೆ ಹೇಳುತ್ತಾ, ಇಳಿ ವಯಸ್ಸಿನಲ್ಲೂ ಪ್ರವಾಸ ಪ್ರಿಯರಾಗಿದ್ದುದು ಮತ್ತವರ ಪ್ರವಾಸ ಪ್ರಿಯರಲ್ಲದವರ ನಿರುತ್ಸಾಹ ' ವಿನಾಯಕ ಪ್ರಜ್ಞೆ ' ಎಂಬ ಉಲ್ಲೇಖ  ನೆನಪಿಸಿಕೊಂಡು ಹೊಸ ಭಾಷಾವೈಶಿಷ್ಟ ವೊಂದನ್ನು ಛಾಪಿಸಿದ್ದಾರೆ.

ವ್ಯಕ್ತಿ ಚಿತ್ರ (ಪರಿಚಯಾತ್ಮಕ) ಲೇಖನಗಳಾದ  'ನನ್ನ ನೆನಪಿನಲ್ಲಿ ಮಾಸ್ಟರ್ ಹಿರಣ್ಣಯ್ಯ' ಮತ್ತು ' ಪ್ರಧಾನಿ ರಿಷಿ ಸುನಾಕ್ - ಬ್ರಿಟನ್ ಕಂಡ ಅಪೂರ್ವ ಪ್ರತಿಭೆ', ಸುಂದರವಾಗಿ ಮೂಡಿ ಬಂದಿವೆ. ಮೊದಲ ಪ್ರಬಂಧದಲ್ಲಿ ಕೊನೆಯಲ್ಲಿ ಉದ್ಧರಿತ ಮಾಸ್ಟರ್ ಹಿರಣ್ಣಯ್ಯನವರ ಉಲ್ಲೇಖ ಅವರ ಸರಳ ವ್ಯಕ್ತಿತ್ವಕ್ಕೆ ಸಂದರ್ಭೋಚಿತವಾಗಿ ಹೊಂದಿಕೊಂಡಿದೆ. ಎರಡನೆಯ ಪ್ರಬಂಧದಲ್ಲಿ ಆಂಗ್ಲ ಜನಾಂಗದ ಹೊರಗಿನ ಭಾರತೀಯ ಮೂಲದ ಒಬ್ಬ ವ್ಯಕ್ತಿ ಬ್ರಿಟನ್ನಿನ ಪ್ರಧಾನಿ ಪಟ್ಟಕ್ಕೇರಿರುವುದು, ಆ ದೇಶದಲ್ಲಿನ ಜನರ ವಿಶಾಲ ಮನೋಭಾವ, ಅಲ್ಲಿ ವ್ಯಕ್ತಿಗತ  ಪ್ರತಿಭೆ ಮತ್ತು ಸಾಮರ್ಥ್ಯಕ್ಕೆ ಸಿಗುವ ಮಹತ್ವಗಳನ್ನು ಬಿಂಬಿಸುತ್ತವೆ. ಲೇಖಕರು ಜಗತ್ತಿನ ಇಂತಹ ಇನ್ನಿತರ ರಾಜಕೀಯ ನಾಯಕರ ಉದಾಹರಣೆ ನೀಡುತ್ತಾ ಮತ್ತೊಮ್ಮೆ  'ವಿಶ್ವ ಮಾನವ ಸಂಸ್ಕೃತಿ'ಯನ್ನು ವಿಶ್ಲೇಷಿಸುತ್ತಾರೆ.

 ವಿಮರ್ಶಾತ್ಮಕ ಲೇಖನಗಳಾದ 'ಬಳ್ಳಿಗೆ ಕಾಯಿ ಭಾರವೆ' ಮತ್ತು 'ಬಾಂಬೆ ಬೇಗಂ' ಕ್ರಮವಾಗಿ ಚಲನಚಿತ್ರ ಹಾಗೂ ದೂರದರ್ಶನದ ಧಾರಾವಾಹಿಗಳ ಸೃಜನಶೀಲವಾದ ಬರಹಗಳಾಗಿವೆ. ಲೇಖಕರ ಮಾನವೀಯ ಕಾಳಜಿಗಳ ಅನಾವರಣವಾಗಿವೆ.

ಇನ್ನಳಿದ ಪ್ರಬಂಧಗಳೆಲ್ಲವೂ ಆಸಕ್ತಿದಾಯಕವಾಗಿದ್ದು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಈ ಪ್ರಬಂಧಗಳಲ್ಲಿ ಎಲ್ಲೆಲ್ಲೂ ಲೇಖಕರ ಕನ್ನಡ ಪ್ರೇಮ ಹಾಸುಹೊಕ್ಕಾಗಿ ಸೇರಿದೆ.

ವಿವಿಧ ವಸ್ತು ವಿಷಯಗಳನ್ನೊಳಗೊಂಡಿರುವ ಈ ಪ್ರಬಂಧಗಳು ಲೇಖಕರ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಫಲವಾಗಿವೆ.

***  




ಇಕ್ಕಿಗಾಯ್, ಒಂದು ಪರಿಚಯ – ಶ್ವೇತ ಕಿರಣ್

ಪ್ರಿಯರೇ, ಪ್ರತಿಯೊಂದು ಪ್ರಾಚೀನ ಇತಿಹಾಸವುಳ್ಳ ಸಮಾಜದ ಬಗ್ಗೆ, ಅಲ್ಲಿನ ಜನರ ನಡೆ-ನುಡಿಗಳ, ಜೀವನಶೈಲಿಯ ಬಗ್ಗೆ ಜಗತ್ತಿನ ಉಳಿದ ಭಾಗಗಳ ಜನರ ಕುತೂಹಲ ಸಹಜವಾದದ್ದೇ. ಅದರಲ್ಲೂ, ಅಲ್ಲಿನ ಜನರ ಬದುಕಿನ ಮೇಲೆ ಅ ಶೈಲಿಯ ಪರಿಣಾಮ ಒಳ್ಳೆಯದಾಗಿದ್ದು, ಶತಾಯುಷಿಗಳಾಗಿ ಉತ್ತಮ ಅರೊಗ್ಯದಿಂದ ಬದುಕುತ್ತಿದ್ದರಂತೂ, ಸರಿಯೇ ಸರಿ. ಈ ಬಗ್ಗೆ ಅಭ್ಯಸಿಸುವ, ಬರೆಯುವ ಆಸಕ್ತರ ತಂಡವೇ ಹುಟ್ಟಿಬಿಡುತ್ತದೆ. ಮೆಡಿಟರೇನಿಯನ್ ದೇಶಗಳಾಗಲಿ, ಪೂರ್ವ ಏಶಿಯಾದ ದೇಶಗಳಾಗಲಿ ಅಲ್ಲಿಗೆ ಹೋಗಿ, ನೆಲೆಸಿ, ಜೀವನಕ್ರಮವನ್ನು ಅಭ್ಯಾಸ ಮಾಡಿ, ಅದನ್ನು ಉಳಿದ ಜಗತ್ತಿನೊಂದಿಗೆ ಹಂಚುವ ಪ್ರಯತ್ನದ ಬಗೆಗಿನ ಒಂದು ಇಂತಹುದೇ ಪುಸ್ತಕದ ಪರಿಚಯ ಕೊಡಲಿದ್ದಾರೆ, ಶ್ವೇತ ಕಿರಣ್. ಓದಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ - ಸಂಪಾದಕ.

ಕಿರುಪರಿಚಯ: ಶ್ವೇತ ಕಿರಣ್: ನಾನು ಮೂಲತಃ ಬೆಂಗಳೂರಿನ ಹುಡುಗಿ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಾನು ಎಂ ಎಸ್ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದೆ. ೨೦೧೦ ನೇ ಇಸವಿಯಿಂದ ನಾನು ಇಂಗ್ಲೆಂಡ್‌ನಲ್ಲಿ ನೆಲಸಿದ್ದೇನೆ. ಕಳೆದ ಕೆಲವು ವರ್ಷಗಳಿಂದ, ನಾನು ಸಾಮಾನ್ಯ ವೈದ್ಯೆಯಾಗಿ (GP) ಆಗಿ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ಪತಿ ಹಾಗು ಮಗಳೊಂದಿಗೆ ಲಂಕಾಷೈರಿನ ಒಂದು ಸುಂದರವಾದ ಪುಟ್ಟ ಹಳ್ಳಿಯಲ್ಲಿ ವಾಸಿಸುತ್ತಿದ್ದೇನೆ. ನಾನು ಕೆಲಸದಲ್ಲಿ ಇಲ್ಲದಿರುವಾಗ ಪ್ರಕೃತಿಯ ಮಡಿಲಲ್ಲಿ ಅಥವಾ ಒಳ್ಳೆಯ ಪುಸ್ತಕದಲ್ಲಿ ಮುಳುಗಿರುವುದನ್ನು ನೋಡಬಹುದು. ಇದಲ್ಲದೆ ನೃತ್ಯ, ತೋಟಗಾರಿಕೆ, ವಿವಿಧ ರೀತಿಯ ವ್ಯಾಯಾಮ, ಜೀವನಶೈಲಿ ವಿಧಾನಗಳು- ಇವುಗಳ ಬಗ್ಗೆ ಕೂಡ ಬಹಳ ಆಸಕ್ತಿ ಹೊಂದಿದ್ದೇನೆ.

********************************************************************

೨೦೨೨ ನೇ ವರ್ಷ ಮುಗಿದು ಹೊಸ ವರ್ಷ ಆರಂಭವಾಗಿದೆ. ತಿಳಿದು ತಿಳಿಯದಂತೆ ಕಾಲ ಎಷ್ಟು ವೇಗವಾಗಿ ಸರಿಯುತ್ತಿದೆ ಅಲ್ಲವೇ? ಈಗ ತಾನೆ ೨೦೨೨ ನೇ ವರ್ಷದ ಸಂಕಲ್ಪಗಳನ್ನು ಶುರು ಮಾಡಿದ ಹಾಗಿದೆ. ಆದರೆ ೨೦೨೩ ನೇ ವರ್ಷ ಶುರುವಾಗಿ ಆಗಲೆ ಆರು ತಿಂಗಳು ಕಳೆದಿವೆ. ವರ್ಷಾಂತ್ಯದಲ್ಲಿ ನಾವು ಕಳೆದ ೧೨ ತಿಂಗಳುಗಳ ಬಗ್ಗೆ ಪ್ರತಿಫಲಿಸುತ್ತೇವೆ. ನಾವು ಯಾರು, ಇಲ್ಲಿಗೆ ಬಂದಿರುವ ಉದ್ದೇಶವೇನು? ನಾವು ಏನು ಮಾಡಬೇಕು, ಹೇಗೆ ಬದುಕಬೇಕು, ಜೀವನದ ಅರ್ಥ ಏನು? ಈ ತರಹದ ಪ್ರಶ್ನೆಗಳು ಇಂತಹ ಸಂದರ್ಭದಲ್ಲಿ ನಮ್ಮನ್ನು ಕಾಡುವುದು  ಸಹಜ. ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಈ ವಿಷಯಗಳ ಬಗ್ಗೆ ಬಹಳಷ್ಟು ಪುಸ್ತಕಗಳು ಕೂಡ ಪ್ರಕಟವಾಗಿವೆ. ಸ್ವಸಹಾಯ ಹಾಗೂ ಸ್ವಾವಲಂಬನೆಯನ್ನು ಪ್ರೇರೇಪಿಸುವ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಗೊಳಿಸಿಕೊಳ್ಳುವುದು ಸಮಂಜಸವೆ. ಇತ್ತೀಚೆಗೆ ನಾನು ಓದಿದ ಪುಸ್ತಕ ಇಕಿಗಾಯ್ ಈ ಗುಂಪಿಗೆ ಸೇರಿದೆ.

ಇಕಿಗಾಯ್‌ ಪುಸ್ತಕವನ್ನು ಬರೆದವರು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾಂಚೆಸ್ಕ್ ಮಿರಾಯೆ. ಇವರು ಜಪಾನ್ ದೇಶದ “ಒಕಿನಾವ” ಎನ್ನುವ ಪ್ರದೇಶಕ್ಕೆ ಭೇಟಿಕೊಟ್ಟು ಅಲ್ಲಿನ ಜನರ ನಡೆ-ನುಡಿ ದಿನನಿತ್ಯದ ಅಭ್ಯಾಸಗಳನ್ನು ಪರಿಶೀಲಿಸಿ ಇವುಗಳ ಬಗ್ಗೆ ಈ ಕೃತಿಯಲ್ಲಿ ಮಾತನಾಡುತ್ತಾರೆ. ಒಕಿನಾವ ಪ್ರದೇಶದ ವಿಶಿಷ್ಟತೆ ಏನೆಂದರೆ, ಅದು ಜಗತ್ತಿನಲ್ಲಿ ಅತಿ ಹೆಚ್ಚು ದೀರ್ಘಾಯುಷಿಗಳಿರುವಂತಹ ಜಾಗ. ಬಹಳ ಜನ ಅಲ್ಲಿ ಶತಾಯುಷಿಗಳಾಗಿದ್ದಾರೆ. ಇವರುಗಳ ದೀರ್ಘಾಯುಷ್ಯದ ಗುಟ್ಟೇನು ಎನ್ನುವುದೇ ಈ ಪುಸ್ತಕದ ಸಾರಾಂಶ.

ಜನರು ಆರೋಗ್ಯವಂತರಾಗಿ, ಸಂತಸದಿಂದ ದೀರ್ಘಕಾಲ ಬದುಕಿರಬೇಕಾದರೆ ಏನು ಮಾಡಬೇಕು ಎಂಬುದನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತಾರವಾಗಿ ಪ್ರಸ್ತುತಪಡಿಸಿದ್ದಾರೆ. ನಮಗೆಲ್ಲ ಇದರ ಬಗ್ಗೆ ಆಗಲೇ ಅಲ್ಪ ಸ್ವಲ್ಪ ಗೊತ್ತಿರಬಹುದು. ಆದರೆ, ಇವುಗಳ ಬಗ್ಗೆ, ಉದಾಹರಣೆಗಳ ಮೂಲಕ ಅರ್ಥಗರ್ಭಿತವಾಗಿ ಹೇಳುವುದು ಒಂದು ರೀತಿಯ ಕಲೆ ಅಂತಾನೆ ಹೇಳಬಹುದು. ಲೇಖಕರು ಆಹಾರ ಪದ್ಧತಿ, ವ್ಯಾಯಾಮ, ಪ್ರಕೃತಿ, ಸಾಮಾಜಿಕ ಬೆಂಬಲ, ಶಾಂತಿಯುತ ಜೀವನದ ಮೌಲ್ಯಗಳು - ಹೀಗೆ ಹಲವಾರು ವಿಷಯಗಳ ಬಗ್ಗೆ ಬಹಳ ಚೆನ್ನಾಗಿ ವಾದಿಸಿದ್ದಾರೆ. ಉದಾಹರಣೆಗೆ, ನಾವು ವ್ಯಾಯಾಮ ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವೇನು ಮ್ಯಾರಥಾನ್ ಓಡಬೇಕಿಲ್ಲ ಅಥವಾ ಪ್ರತಿದಿನ ಜಿಮ್ ಗೆ ಹೋಗಿ ಬೆವರು ಸುರಿಸಬೇಕಾಗಿಲ್ಲ. ನಾವು ಆದಷ್ಟು ಸಕ್ರಿಯರಾಗಿರಬೇಕು. ಕಾಲ್ನಡಿಗೆ, ತೋಟಗಾರಿಕೆ, ನೃತ್ಯ, ಯೋಗ ಹಾಗೂ ತಾಯ್‌ಚಿ, ತರಹದ ಸರಳ ಅಭ್ಯಾಸಗಳನ್ನು ಮಾಡಿದರೆ ಸಾಕು, ಎಷ್ಟೊ ಅನುಕೂಲವಾಗುತ್ತದೆ. ಊಟದಲ್ಲಿ ಕೂಡ ವಿಧವಿಧವಾದ ಆಹಾರಗಳನ್ನು ಸೇವಿಸಬೇಕು. ಹೊಟ್ಟೆ ೮೦ ಪ್ರತಿಶತ ತುಂಬಿದಾಗಲೇ ಊಟ ಮಾಡುವುದನ್ನು ನಿಲ್ಲಿಸಬೇಕು. ಈ ರೀತಿ ಹಲವಾರು ಉತ್ತಮ ಅಭ್ಯಾಸಗಳ ಬಗ್ಗೆ ಮಾತನಾಡುತ್ತಾ, ಲೇಖಕರು, ಜಪಾನ್ ದೇಶದ ಜನರ ಅಭಿಪ್ರಾಯಗಳನ್ನು ತಿಳಿಸುತ್ತಾರೆ.

ಇಕಿಗಾಯ್ ಅಂದರೇನು? “ಬದುಕು” ಹಾಗೂ “ಸಾರ್ಥಕ ಪಡಿಸುವುದು” ಎನ್ನುವ ಎರಡು ಪದಗಳ ಜೋಡಣೆಯಿಂದ ಮೂಡಿರುವ ಪದವೇ ಇಕಿಗಾಯ್‌. ಜೀವನದಲ್ಲಿ ನಾವು ಆರೋಗ್ಯವಾಗಿ, ಸಂತೋಷದಿಂದ, ಶಾಂತಿಯುತ ಬಾಳ್ವೆ ನಡೆಸಬೇಕಾದರೆ ನಾವು ನಮ್ಮ ಜೀವನದ ಉದ್ದೇಶವನ್ನು ಹಾಗು ಧ್ಯೇಯವನ್ನು ಕಂಡುಕೊಳ್ಳಬೇಕು. ಇದೇ ನಮ್ಮ ಇಕಿಗಾಯ್‌. ಹಾಗಾದರೆ ನಾವು ಇಕಿಗಾಯನ್ನು ಹೇಗೆ ಹುಡುಕುವುದು? ಇದನ್ನು ಲೇಖಕರು ಪುಸ್ತಕದಲ್ಲಿ ಒಂದು ಚಿತ್ರದ ಮೂಲಕ ವ್ಯಕ್ತಪಡಿಸುತ್ತಾರೆ. ಈ ಕೆಳಕಂಡ ೪ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಹಿಡಿಯಬೇಕಾಗಿದೆ:
೧) ನೀವು ಏನನ್ನು ಪ್ರೀತಿಸುತ್ತೀರಿ? (ಧ್ಯೇಯ)
೨) ನೀವು ಯಾವುದರಲ್ಲಿ ಪರಿಣಿತರಿದ್ದೀರಿ? (ಗೀಳು)
೩) ನಿಮಗೆ ಏತಕ್ಕಾಗಿ ಸಂಭಾವನೆ ನೀಡಬಲ್ಲರು? (ಉದ್ಯೋಗ)
೪) ಲೋಕದ ಅಗತ್ಯವೇನು? (ವೃತ್ತಿ)

ಧ್ಯೇಯ, ಗೀಳು, ಉದ್ಯೋಗ ಹಾಗೂ ವೃತ್ತಿ, ಇವುಗಳಿಗೆ ನಮ್ಮಲ್ಲಿ ಒಂದೇ ಉತ್ತರವಿದ್ದರೆ, ಅದು ನಮ್ಮ ಇಕಿಗಾಯ್ ಆಗುತ್ತದೆ. ಪ್ರತಿಯೊಬ್ಬರ ಇಕಿಗಾಯ್‌ ಬೇರೆಯಾದರೂ ಜೀವನದ ಅರ್ಥದ ಹುಡುಕಾಟದಲ್ಲಿ ನಾವೆಲ್ಲರೂ ಒಂದೇ. ನಿಮ್ಮಲ್ಲಿ ಕೆಲವರಿಗೆ ಆಗಲೇ ಇಕಿಗಾಯ್‌ ದೊರಕಿರಬಹುದು, ಇನ್ನು ಕೆಲವರು ಹುಡುಕಾಡುತ್ತಿರಬಹುದು, ಕೆಲವರಿಗೆ ಇದರ ಬಗ್ಗೆ ಅರಿವಿರದಿರಬಹುದು. ಈ ಪಯಣದಲ್ಲಿ ನಾವು ಎಲ್ಲೇ ಇದ್ದರೂ ಈ ಪುಸ್ತಕ ನಿಮಗೆ ಸ್ಪೂರ್ತಿಯಾಗುವುದರಲ್ಲಿ ಸಂದೇಹವೇ ಇಲ್ಲ. ನಿಮಗೆ ಸಾಧ್ಯವಾದಲ್ಲಿ ಈ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ.

ಇಂತಿ ನಿಮ್ಮ, 
ಶ್ವೇತ

**************************************************************************

ಕುದುರೆಯ ತಂದಿವ್ನಿ ಜೀನಾವ ಬಿಗಿದಿವ್ನಿ

ನಮಸ್ಕಾರ ಅನಿವಾಸಿ ಬಂಧುಗಳೇ.
 ಋತುಚಕ್ರ ತಿರುಗಿ ಚೈತ್ರ-ವೈಶಾಖಗಳು ಕಳೆದು,ಇನ್ನೇನು ಆಷಾಢ ಕಾಲಿಡುತ್ತಿದೆ. ಈ ಆಷಾಢದ ಗಾಳಿ-ಗಂಧಗಳಿಗೂ, ಆಗೀಗ ತಟಪಟ ಸುರಿವ ಮಳೆಹನಿಗಳಿಗೂ ಮಾನವ ಭಾವಕೋಶಕ್ಕೂ ಅದೆಂಥದೋ ನಿಕಟ ಸಂಬಂಧವಿದೆಯೆಂದು ನನಗನ್ನಿಸುತ್ತದೆ.  ನಮ್ಮ ಮೇಘದೂತದ ಯಕ್ಷನಿಗೂ ‘ಆಷಾಢಸ್ಯ ಪ್ರಥಮ ದಿವಸೇ’ ತನ್ನ ಯಕ್ಷಿಣಿಯ ನೆನಪು ಇನ್ನಿಲ್ಲದಂತೆ ಕಾಡಿ ಮೇಘಸಂದೇಶ ಕಳಿಸಿದ್ದು. ಇನ್ನು ಹೆಣ್ಣುಮಕ್ಕಳಿಗಂತೂ ಆಷಾಢ ಬಂದರೆ ತೌರ ನೆನಪು ಕಾಡದೇ ಇರದು. ‘ಆಷಾಢ ಮಾಸ ಬಂದೈತವ್ವ, ಅಣ್ಣ ಬರಲಿಲ್ಲ ಕರಿಯಾಕ’ ಅಂತ ಹಲುಬುತ್ತದೆ ಹೆಣ್ಮನ. ಜಾನಪದದಲ್ಲಿ ಅಣ್ಣ ತಂಗಿಯನ್ನು ಕರೆಯಲು ಬರುವ ಹಲವಾರು ಹಾಡುಗಳಿವೆ. ಪ್ರತಿಸಲ ಕೇಳಿದಾಗಲೂ ಅಂತ:ಕರಣವನ್ನು ಕಲಕಿ ಕಣ್ಣಂಚನ್ನು ಒದ್ದೆ ಮಾಡುವಂಥವು. ‘ಕುದುರೆಯ ತಂದಿವ್ನಿ, ಜೀನಾವ ಬಿಗಿದಿವ್ನಿ’ ಅಂಥದೇ ಸಾಲಿಗೆ ಸೇರುವ ನನ್ನಿಷ್ಟದ ಹಾಡು. ಇಲ್ಲಿ ಅಣ್ಣನೊಬ್ಬ ತಂಗಿಯನ್ನು ಮದುವೆಗೆ ಕರೆದೊಯ್ಯಬಂದಿದ್ದಾನೆ. ಯಾರ ಮದುವೆ ಎನ್ನುವ ಸ್ಪಷ್ಟತೆಯಿಲ್ಲವಾದರೂ ಮಗಳದೋ, ಮಗನದೋ ಇದ್ದೀತು ಅಥವಾ ಅವನದೇ ಇದ್ದರೂ ಇರಬಹುದು.( ತಂಗಿಯ ಮದುವೆಯಾದ ಮೇಲೆಯೇ ಅಣ್ಣಂದಿರ ಮದುವೆಯಾಗುವುದು ಸರ್ವೇಸಾಮಾನ್ಯ ಸಂಗತಿ) ಆದರೆ ಹೆತ್ತವರಿಲ್ಲದ ತೌರಿಗೆ ಹೊರಡಲು ಅವಳಿಗೇನೋ ಅಳುಕು. ಹೋಗದಿರುವುದಕ್ಕೆಕುಂಟುನೆಪ ಹೇಳುತ್ತಿದ್ದಾಳೆ. ಆದರೆ ಇದನ್ನು ಕೇಳಿದಾಗೊಮ್ಮೆ ನನಗೆ ಆ ಅಣ್ಣನ ಬಗ್ಗೆ ‘ಪಾಪ’ ಎನಿಸುತ್ತದೆ. ಹಾಗೆ ನೆಪ ಹೇಳಿ ನಿರಾಕರಿಸಿ ತನ್ನನ್ನು ತೀರ ಪರಕೀಯನನ್ನಾಗಿಸಿದ್ದು ಅವನ ನೋವಲ್ಲವೇ? ಅವಳಂತೆಯೇ ಅವನಿಗೂ ಭಾವತುಮುಲಗಳಿರಲಾರವೇ? ಅವಳದಕ್ಕೆ, ಅವಳ ಹಾಡಿಗೆ  ಪರ್ಯಾಯವಾಗಿ ಹೀಗೂ ಇದ್ದಿರಬಹುದು ಎಂದು ಬಲವಾಗಿ ಅನ್ನಿಸುತ್ತದೆ. ಹೆಣ್ಣಾದರೇನು-ಗಂಡಾದರೇನು ತಾಯಿ- ತೌರು ಎಲ್ಲರಿಗೂ ಬೇಕು. ಮಗಳಂತೆಯೇ ಮಗನೂ ಅಮ್ಮನಿಗೆ ಆತುಕೊಂಡು ಅಪ್ಪನಿಗೆ ಜೋತುಬಿದ್ದವನೇ ಅಲ್ಲವೇ? ಅವನೂ ತಂಗಿಗೆ ಹೀಗೆ ಹಾಡಬಹುದಲ್ಲವೇ? 
ಕುದುರೆಯ ತಂದಿವ್ನಿ ಜೀನಾವ ಬಿಗಿದಿವ್ನಿ ಬರಬೇಕು ತಂಗಿ ಮದುವಿಗೆ ||
ಕುಂಟು ನೆವನ ಬ್ಯಾಡ ಸುಳ್ಳು ನೆಪಗಳು ಬ್ಯಾಡ ಒಲ್ಲೆಂದು ಹಟಮಾಡಿ ಜೀವಂತ ಕೊಲಬ್ಯಾಡ
ಬರಬೇಕು ತಂಗಿ ಮದುವಿಗೆ||
ತಾಯಿಲ್ಲದ ತೌರೆಂದು ಕಳ್ಳಬಳ್ಳಿ ಹರಿಬ್ಯಾಡ ಬೆನ್ನಿಗೆ ಬಿದ್ದವಳೇ ನನ್ನ ಬೆನ್ನು ಬಿಡಬ್ಯಾಡ ನೀನೇನೇ ನನಗೂನೂ ತೌರೀಗ
ಬರಬೇಕು ತಂಗಿ ಮದುವಿಗೆ||
ಉಣ್ಣೆಂಬ ತಾಯಿಲ್ಲ ಏಳೆಂಬ ತಂದಿಲ್ಲ  ಕಲಕಲ ಮಾತಿಲ್ಲ ಗಲಗಲ ನಗುವಿಲ್ಲ ಮಸಣದ ಮನೆಯಂತೆ ಮನಸವ್ವ
ಬರಬೇಕು ತಂಗಿ ಮದುವಿಗೆ||
ಮಲ್ಲಿಗಿ ಅರಳ್ಯಾವು ಕೋಗಿಲೆ ಕೂಗ್ಯಾವು ಹಿತ್ತಲ ಜೋಕಾಲಿ ಜೀಕ್ಯಾವು ಹೊಚ್ಚಲಿನ ರಂಗೋಲಿ ನಕ್ಕಾವು
ಬರಬೇಕು ತಂಗಿ ಮದುವಿಗೆ||
ಅವ್ವನ ಕೈರುಚಿ ಬಾನಕ್ಕ ಬಂದಾವು ಕಂಬದ ಗೊಂಬಿಗೆ  ಹೊಸಜೀವ ಬಂದಾವು ಕಲ್ಲಾದ ದೇವರು ನಕ್ಕಾವು
ಬರಬೇಕು ತಂಗಿ ಮದುವಿಗೆ||
ಬಾರವ್ವ ತಂಗ್ಯೆವ್ವ, ಬಾರವ್ವ ತಾಯವ್ವ ಹಬ್ಬದ ಸಂಭ್ರಮ ತಾರವ್ವ ಮನಿಮಗಳು ನೀನೀಗ ಮನೆಕಾಯ್ವ ತಾಯಾಗಿ ಹರಸವ್ವ 
ಬರಬೇಕು ತಂಗಿ ಮದುವಿಗೆ||

~~ ಗೌರಿಪ್ರಸನ್ನ

ಡೂಮ್ಸಡೆ ಪುಸ್ತಕ (Domesday Book) -ರಾಮಮೂರ್ತಿಯವರ ಲೇಖನ

ಭಯಪಡುವ ಕಾರಣವಿಲ್ಲ. ಪ್ರಳಯಾಂತ ನಿಕಟವಾಗಿಲ್ಲ!  ಯಾವ ಪತ್ರಿಕೆಯ ಸಂಪಾದಕರಿಗೂ ಒಮ್ಮೆಯಾದರೂ ಇಂಥ doom and gloom ಆವರಿಸಿರಿವ ದಿನವಿರುತ್ತದೆಯಂತೆ! ಆದರೆ ಈ ವಾರದ ಲೇಖನದಲ್ಲಿ ಬರುವ ”ಡೂಮ್’ಗೂ ಬೈಬಲ್ ನಲ್ಲಿ ಬರುವ ದೂಮ್ಸ್ ಡೆ ಗಾಗಲಿ, ಕ್ರೈಸ್ತರು ನಂಬುವ ಅಂತಿಮ ಯುದ್ಧವಾದ ಆರ್ಮಗೆಡ್ಡಾನ್ (Armageddon) ಗಾಗಲಿ ಏನೂ ಸಂಬಂಧವಿಲ್ಲ. ಹನ್ನೆರಡನೆಯ ಶತಮಾನದಲ್ಲಿ ಬರೆದಿಟ್ಟ ಇಂಗ್ಲೆಂಡಿನ ಐತಿಹಾಸಿಕ ಪುಸ್ತಕದ್ವಯಗಳಿಗೇ ಈ ಹೆಸರು. ನಮ್ಮ ಇತಿಹಾಸ ಲೇಖಕರಾದ ಬೇಸಿಂಗ್ ಸ್ಟೋಕ್ ರಾಮಮೂರ್ತಿಯವರು ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ನಮಗೆ ಸವಿಸ್ತಾರವಾಗಿ ಅದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದಾರೆ. ಪ್ರತಿಯೊಬ್ಬ ಅನಿವಾಸಿಯೂ ಓದಿ ತಿಳಿದುಕೊಳ್ಳುವಂಥ ಮಹತ್ವಪೂರ್ಣ ಲೇಖನ ಇದು. (ತತ್ಕಾಲ್ ಸಂ)
ವಿಲಿಯಮ್ ಕಾಂಕರರ್ (William the Conquerer)
ವಿಲಿಯಂ (William  the conqueror), ಕ್ರಿ ಶ ೧೦೬೬ ನಲ್ಲಿ ಅಂದಿನ  ಇಂಗ್ಲೆಂಡಿನ ದೊರೆಯಾಗಿದ್ದ ಹೆರಾಲ್ಡ್ ನನ್ನು  ಸೋಲಿಸಿ  ಡಿಸೆಂಬರ್ ೨೫ ರಂದು ಪಟ್ಟಕ್ಕೆ ಬಂದ . 
 ೨೦ ವರ್ಷಗಳ ನಂತರ, ಹಣ ಕಾಸಿನ ಅಭಾವದಿಂದ ಹೊಸ ತೆರಿಗೆ ಹಾಕುವ ಅವಶ್ಯಕತೆ ಇತ್ತು.  ಆದರೆ ಇದರ ಮುನ್ನ, ತಾನು ಆಳುತ್ತಿರುವ ದೇಶದ ಸಂಪತ್ತು ಎಷ್ಟು ಹೆಚ್ಚಾಗಿದೆ ಎಂದು ತಿಳಿಯಲು ಇಂಗ್ಲೆಂಡ್ ದೇಶದ ನಾನಾ ಭಾಗದಲ್ಲಿರುವ ಹಳ್ಳಿಗಳ, ಜನರ, ಹೊಲ, ಗದ್ದೆ ಮತ್ತು ಸಾಕು ಪ್ರಾಣಿಗಳ  ಸಂಖ್ಯೆ ಮತ್ತು ಇದರಿಂದ ಬರುವ ಆದಾಯ, ಇತ್ಯಾದಿ  ವಿವರವನ್ನು ಸಂಗ್ರಹಿಸಿ ದಾಖಲೆ ಮಾಡುವ ಆಜ್ಞೆ ಯನ್ನು೧/೦೧/೧೦೮೬ ದಿನ ಹೊರಡಿಸಿದ. ದೇಶವನ್ನು ಏಳು ಭಾಗ ಮಾಡಿ, (Seven Circuits ) ತನ್ನ ಪ್ರತಿನಿಧಿನಿಗಳನ್ನು ಈ ಸಮೀಕ್ಷೆಯನ್ನು(Survey ) ಮಾಡಲು ನಿಯಮಿಸಿದ. ಲಾಟಿನ್  ಭಾಷೆಯಲ್ಲಿ ಬರೆದ ಎರಡು ಸಂಪುಟದಲ್ಲಿ ಈ ಸಮೀಕ್ಷೆ ಗಳ ಸಂಗ್ರಹವೇ ಡೂಮ್ಸ್ ಡೆ ಪುಸ್ತಕ. ಚಿಕ್ಕ ಮತ್ತು ದೊಡ್ಡ ಪುಸ್ತಕಗಳು  (Little and Great Domesday Books).  ಈ ಸಮೀಕ್ಷೆ ಪೂರ್ಣವಾದಾಗ, ಇದರ ಹೆಸರು ಡೋಮ್ಸ್ ಡೆ ಪುಸ್ತಕ ಅಂತಿರಿಲಿಲ್ಲ. ೧೧೭೬ ನಲ್ಲಿ ರಾಜ್ಯದ ಖಜಾನೆ (Royal Exchequer) ಬಗ್ಗೆ  ಬರೆದ ದಾಖಲೆಯಿಂದ  ಈ ಹೆಸರ ಬದಲಾವಣೆ ಆದ ಪ್ರಸ್ತಾಪ ಇದೆ. ಒಂದು ಕಾರಣ , ಬೈಬಲ್ ನಲ್ಲಿ ಇರುವ Last Judgement ವಿರುದ್ಧ ಏನೂ ಮನವಿ (ಅಪೀಲ್) ಮಾಡುವುದಕ್ಕೆ ಸಾಧ್ಯವಿಲ್ಲವೋ, ಹಾಗೇ ಈ ಸಮೀಕ್ಷೆ ಮೇಲೂ ಸಹ.   
ಒಟ್ಟು, ಈ ದೇಶದ ೧೩,೪೧೮ ಸ್ಥಳಗಳಲ್ಲಿ  ಈ ಸಮೀಕ್ಷೆ ನಡೆಯಿತು.  ಸುಮಾರು ೧೨ ತಿಂಗಳ ಶ್ರಮ, ಇಂದಿಗೂ ಇದರ ಮೂಲ ಪ್ರತಿಗಳನ್ನು National Archives ನಲ್ಲಿ ನೋಡಬಹುದು. ನಿಮ್ಮ ಊರಿನ ವಿವರ ತಿಳಿಯಲು ಕುತೂಹಲ ಇದ್ದರೆ, ಸ್ಥಳೀಯ ಗ್ರಂಥಾಲಯವನ್ನು (Local  Library ) ಸಂಪರ್ಕಸಿ.  
ಇದರ ಹಿನ್ನಲೆ 
ಕ್ರಿ ಶ ೧೦೬೬ ನಲ್ಲಿ ನಡೆದ ಘಟನೆಯಿಂದ ಈ ದೇಶದ ರಾಜಕೀಯ ಶಾಶ್ವತವಾಗಿ ಬದಲಾಯಿತು ಎಂದರೆ ತಪ್ಪಲಾಗಾರದು. ನಾರ್ಮಂಡಿಯ (ಈಗಿನ ಫ್ರಾನ್ಸ್ ದೇಶದ ಭಾಗ)  Duke of Normandy, ವಿಲಿಯಂ, ತನ್ನ ಸೈನ್ಯದೊಂದಿಗೆ ಸೆಪ್ಟೆಂಬರ್ ೨೮ರಂದು, ದಕ್ಷಿಣದ ಸಮುದ್ರ ತೀರದಲ್ಲಿರುವ, (English  Channel) ಈಗಿನ East Sussex ನ, ಪೆವೆನ್ಸಿ (Pevensey)  ಅನ್ನುವ ಸ್ಥಳದಲ್ಲಿ ಇಳಿದು  ಕೆಲವೇ  ದಿನಗಳಲ್ಲಿ ಈ ಊರನ್ನು ಆಕ್ರಮಿಸಿಕೊಂಡು ಹತ್ತಿರದ  ಹೇಸ್ಟಿಂಗ್ಸ್ ನಲ್ಲಿ ಬೀಡು ಹಾಕಿ ತನ್ನ ಸೈನ್ಯವನ್ನು ಸಿದ್ದ ಮಾಡಿ ಸಮಯಕ್ಕೆ ಕಾದಿದ್ದ .  
ಹೆರಾಲ್ಡ್, ಅದೇ ವರ್ಷ ಜನವರಿ ೬ ರಂದು ವೆಸ್ಟ್ ಮಿನಿಸ್ಟರ್ ನಲ್ಲಿ ಇಂಗ್ಲೆಂಡ್ ಕಿರೀಟವನ್ನು ಧರಿಸಿ ದೊರೆಯಾಗಿದ್ದನಷ್ಟೇ. ಆದರೆ ನಾರ್ಮಂಡಿಯ ವಿಲಿಯಂ ಇಂಗ್ಲೆಂಡ್ ದೊರೆತನ  ತನಗೆ ಬರಬೇಕು ಅನ್ನುವ ಅಸೆ ಇತ್ತು ಮತ್ತು ಕೆಲವರಿಂದ  ಈ ಭರವಸೆ  ಸಹ ದೊರಕಿತ್ತು  (ಇದರ ಹಿನ್ನಲೆ ಇಲ್ಲಿ ಬೇಡ ).  ಹೆರಾಲ್ಡ್ ದೊರೆ ಆದ ಅಂತ ಕೇಳಿ ವಿಲಿಯಂ ತನ್ನ  ಸೈನ್ಯದೊಂದಿಗೆ ಬಂದಿದ್ದು ಇದೇ  ಕಾರಣದಿಂದ.

ಹೆರಾಲ್ಡ್ ನ  ಸಹೋದರ,  ಟೋಸ್ಟಿಗ್,  ಇವನ ಜೊತೆ ಜಗಳ ಮಾಡಿ ನಾರ್ವೆ ದೇಶದ ದೊರೆಯ ಜೊತೆಯಲ್ಲಿ ಸೇರಿ ಅವರ ಸೈನ್ಯದೊಂದಿಗೆ ಇಂಗ್ಲೆಂಡ್ ಉತ್ತರ ಭಾಗವನ್ನು (ಈಗಿನ Northumberland ) ವಶ ಪಡಿಸುಕೊಳ್ಳುವುದಕ್ಕೆ ಪ್ರಯತ್ನ ಮಾಡಿದ. ಆದರೆ ಹೆರಾಲ್ಡ್ ಇವರನ್ನು ಸ್ಟ್ಯಾಮ್ ಫರ್ಡ್ ಬ್ರಿಡ್ಜ್ (Stamford Bridge ) ನಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿದ.( ಸೆಪ್ಟೆಂಬರ್ ೨೫ , ೧೦೬೬).  ಕೆಲವು ದಿನಗಳ ನಂತರ  ವಿಲಿಯಂ ಬಂದಿರುವ ವಿಚಾರ ತಿಳಿದು ತನ್ನ ಸೈನ್ಯ ದೊಂದಿಗೆ ದಕ್ಷಿಣಕ್ಕೆ ಧಾವಿಸಿದ. ಅಕ್ಟೋಬರ್ ೧೪ರಂದು, ಇವರಿಬ್ಬರ ಯುದ್ಧ ( Battle of Hastings ) ನಡೆದಿದ್ದು ಬ್ಯಾಟಲ್ ಅನ್ನುವ ಪ್ರದೇಶದಲ್ಲಿ. ಒಂದೇ ದಿನದಲ್ಲಿ ಈ ಯುದ್ಧ ಮುಗಿದು ಹೆರಾಲ್ಡ್ ಕಣ್ಣಿಗೆ ಬಾಣದ ಏಟಿನಿಂದ (ಇದಕ್ಕೆ ಪೂರ್ಣ ಮಾಹಿತಿ ಇಲ್ಲ) ಸಾವು ಉಂಟಾಯಿತು. ಆಗ ತಾನೇ ಯುದ್ಧ ಮುಗಿಸಿ  ಬಂದಿದ್ದ ಸೈನಿಕರಿಗೆ ಪುನಃ ಹೊರಾಡುವ ಶಕ್ತಿ ಇರಲಿಲ್ಲ ಮತ್ತು ದೊರೆಯ ಸಾವಿನಿಂದ ಇವರಿಗೆ ನಾಯಕತ್ವ ಸಹ ಇಲ್ಲವಾಯಿತು. ಈ ಕಾರಣದಿಂದ   ಇಂಗ್ಲೆಂಡ್  ಸೈನ್ಯ ಚಲ್ಲಾ ಪಿಲ್ಲಿಯಾಗಿ ಶರಣಾಗತರಾದರು.  ವಿಲಿಯಂ ನಂತರ  William the conqueror ಅನ್ನುವ ಬಿರುದು ಪಡೆದು ೨೫/೧೨/೧೦೬೬ ವೆಸ್ಟ್ ಮಿನಿಸ್ಟರ್ ಅಬ್ಬೆ ನಲ್ಲಿ ಇಂಗ್ಲೆಂಡ್ ದೊರೆಯಾದ. 

ಇನ್ನು ಮುಂದೆ ಓದಿ

ವಿಲಿಯಂ, ಮುಂದೆ ಎದಿರಿಸಿದ ಕಷ್ಟಗಳು ಅನೇಕವಾಗಿದ್ದವು. ಹೆರಾಲ್ಡ್ ನ ಹಿತೈಷಿಗಳು, ಅವನ ಕೆಲವು ಮಕ್ಕಳು ಮತ್ತು ಡೆನ್ಮಾರ್ಕ್ ನ ರಾಜರು ಇಂಗ್ಲೆಂಡಿನ ನಾನಾ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಯತ್ನಗಳೂ ನಡೆಯಿತು. ಹೀಗೆ ಈ ಸನ್ನಿವೇಶಗಳಿಂದ ತಾನು ಆಳುತ್ತಿದ್ದ ರಾಜ್ಯವನ್ನು ಕಳೆದುಕೊಳ್ಳುವ ಶಂಕೆಯೂ ಬಲವಾಗಿತ್ತು. ಈ ಯುದ್ಧಗಳಿಗೆ ಹಣ ಸಹಾಯ ಬೇಕಿತ್ತು. ಈ ಕಾರಣದಿಂದ ವಿಲಿಯಂ ತನ್ನ ರಾಜ್ಯದಲ್ಲಿರುವ ಸಂಪತ್ತಿನ ಬಗ್ಗೆ ತಿಳಿಯುವ ಮತ್ತು ಇದರಿಂದ ತೆರಿಗೆಯ ವರಮಾನ ಏನು ಬರಬಹುದು ಅನ್ನುವ ಉದ್ದೇಶದಿಂದ ಈ ಸಮೀಕ್ಷೆ (survey ) ಮಾಡಲು ಆಜ್ಞೆ ಮಾಡಿದ. ಆದರೆ ಲಂಡನ್, ವಿಂಚೆಸ್ಟರ್, ಡರಂ (Durham ), ಮುಂತಾದ ಊರುಗಳಲ್ಲಿ ಈ ಸಮೀಕ್ಷೆ ನಡೆಯಲಿಲ್ಲ, ಕಾರಣ ಇವು ದೊಡ್ಡ ಊರುಗಳು ಮತ್ತು ಅಲ್ಲಿನ ಜಮೀನುಗಳು ಸ್ವಂತ ರಾಜಮನೆತನಕ್ಕೆ ಸೇರಿದ್ದರಿಂದ ತೆರಿಗೆ ಹಾಕುವ ಪ್ರಶ್ನೆ ಬರುವುದಿಲ್ಲ ಅನ್ನುವುದು ಕೆಲವರ ಊಹೆ. ಈ ಕಳೆದ ಇಪ್ಪತ್ತು ವರ್ಷಗಳಲ್ಲಿ ಇಂಗ್ಲೆಂಡ್ ದೇಶದ ಸಂಪತ್ತಿನ ಒಡೆತನ ಸ್ಥಳೀಯ ಜನರಿಂದ ಅಂದರೆ Anglo Saxon, ವಿಲಿಯಂ ಜೊತೆಯಲ್ಲಿ ಬಂದಿದ್ದ Norman ಜನರಿಗೆ ಸೇರಿತ್ತು. ಈ ತನಿಖೆ ಜನರ ಜನಗಣತಿ (census) ಅಲ್ಲ, ಆದರೆ ಆ ಊರಿನ ಜಮೀನ್ದಾರರು ಯಾರು, ಇವರ ಬಳಿ ಇರುವ ಜಮೀನು ಎಷ್ಟು, ಊರಿನ ಪ್ರಾಣಿಗಳ ವಿವರ ಇತ್ಯಾದಿ, ಈ ಪ್ರಶ್ನೆಗಳನ್ನು ಕೇಳಿದರು. ಊರಿನ ಹೆಸರು, ( name of the Manor to be precise ) ಜಮೀನ್ದಾರರ ಹೆಸರು, ೧೦೬೬ ನಲ್ಲಿ ಮತ್ತು ಈಗ ಯಾರು ಜಮೀನಿನ ಅಳತೆ ಏನು ಎಷ್ಟು ನೇಗಿಲುಗಳು ಎಷ್ಟು ಮಂದಿ ಕೆಲಸಗಾರರು (Free and slaves ) ಅಂದಾಜು ಮೌಲ್ಯಮಾಪನ (valuation ) ಉದಾಹರಣೆಗೆ: ನಮ್ಮ ಊರು ಬೇಸಿಂಗ್ ಸ್ಟೋಕ್ ನ ವಿವರ ಹೀಗಿದೆ ಒಡೆಯರು, ೧೦೬೬ ದೊರೆ ಎಡ್ವರ್ಡ್, ೧೦೮೬ ದೊರೆ ವಿಲಿಯಂ ವಾಸವಾಗಿರುವ ಮನೆಗಳು ೫೭, ಸಣ್ಣ ಜಮೀನು ಹೊಂದಿರುವರು ೮, ಗುಲಾಮರು ೬, ಇತರೆ ಜನಗಳು ೧೬, ಒಟ್ಟು ೨೦೦ ಜನ ಸಂಖ್ಯೆ ದೊಡ್ಡ ಜಮೀನ್ದಾರ (Lord of the Manor ) ೨೦ ಉಳುವ ಹೊಲ /ಗದ್ದೆ , ೧೬ ಮಂದಿ ನೇಗಿಲ ಕೆಲಸದವರು ಸುತ್ತ ಮುತ್ತ ಕಾಡು ಪ್ರದೇಶ ೨೦ ಎಕರೆ, ಹುಲ್ಲು ಗಾವಲು ೨೦ ಮೌಲ್ಯಮಾಪನ £೧ ಮತ್ತು ೧೦ ಶಿಲ್ಲಿಂಗ್

Basingstoke in Domesday Book
ವಿಲಿಯಂ ಇಂಗ್ಲೆಂಡ್ ದೊರೆ ಆಗಿದ್ದರೂ ಬಹು ಕಾಲ ಅವನ ಊರಾದ ನಾರ್ಮಂಡಿ ಯಲ್ಲೇ ಕಳೆದ. ಅಲ್ಲಿಂದಲೇ ಅನೇಕ ಯುದ್ಧಗಳನ್ನೂ ನಡೆಸಿ, ಕೊನೆಗೆ ಕ್ರಿ ಶ ೧೦೮೭ ರಲ್ಲಿ ಈಗಿನ ಪ್ಯಾರಿಸ್ ಗೆ ೫೦ ಕಿಲೋ ಮೀಟರ್ ದೂರದಲ್ಲಿ ಹೋರಾಡುತ್ತಿರುವಾಗ  ಹುಷಾರು ತಪ್ಪಿ ೯/೦೯/೧೦೮೭ ದಿನ ಸಾವನ್ನು ಅಪ್ಪಿದ. ಅವನ ಆಜ್ಞೆಯ ಮೇರೆಗೆ ತಯಾರಿಸಿದ ಸಮೀಕ್ಷೆ ಯನ್ನು ಜಾರಿಗೆ ತರುವ ಸಮಯ ಅಥವಾ ಸಂಧರ್ಭ ಬರವಲಿಲ್ಲವೇನೋ. ಆದರೆ ಈ ದಾಖಲೆಗಳಿಂದ ಈ ದೇಶದ ಸಾವಿರ ವರ್ಷದ ಚರಿತ್ರೆಯನ್ನು ಅರಿಯಬಹುದು
Bayeux Tapestry
ಬೇಯೋ ಟಾಪೆಸ್ಟ್ರಿ (Bayeux Tapestry)
೧೦೬೬ ನಲ್ಲಿ  ನಡೆದ ನಾರ್ಮನ್ ವಿಜಯದ (Norman  Conquest) ಚರಿತ್ರೆಯನ್ನು ೭೦ ಮೀಟರ್ ಉದ್ದ ಮತ್ತು ೫೦ ಸೆಂಟಿಮೀಟರ್  ಅಗಲದ  ಕಸೂತಿ (Embroidery)ಯಲ್ಲಿ ವರ್ಣಿಸಿದೆ. ಈ ಕೆಲಸ  ಬಹುಶಃ ಇಂಗ್ಲೆಂಡಿನಲ್ಲಿ ೧೦೭೦ ರಲ್ಲಿ ಮಾಡಿದ್ದಿರಬಹುದು. ಈ ಅದ್ಭುತವಾದ ಕಲಾಕೃತಿಯನ್ನು ಈ ದೇಶ ಮತ್ತು  ಫ್ರಾನ್ಸ್ ದೇಶದಲ್ಲಿ ಪ್ರದರ್ಶನ ಮಾಡುವ ಬಗ್ಗೆ ಒಪ್ಪಂದ ಇದೆ. ಈಗ ಇದು  ಫ್ರಾನ್ಸ್ ನಲ್ಲಿ Bayeux Museum ಇದೆ. 

Little and Great Domesday Books
ಲೇಖನ: ರಾಮಮೂರ್ತಿ 
       ಬೇಸಿಂಗ್ ಸ್ಟೊಕ್ 

ಮಾರ್ಬಲ್ ಆರ್ಚ್ ಕೇವ್ಸ್

ಅಮಿತಾ ರವಿಕಿರಣ್ 

 ಮನುಷ್ಯನ ತಣಿಯದ ಕುತೂಹಲ ಅದೆಷ್ಟೋ ಆವಿಷ್ಕಾರಗಳಿಗೆ ಕಾರಣ ವಾಗಿದೆ, ಮಾನವನ ಪ್ರತಿ ಹೊಸ ಹುಡುಕಾಟದ ಅಂತ್ಯದಲ್ಲಿ ನಿಸರ್ಗ ಮತ್ತೊಂದು ಒಗಟನ್ನು ಬಿಸಾಕಿ ನಗುತ್ತ ನಿಲ್ಲುತ್ತದೆ. ಮಾನವ ಮತ್ತೆ ಹುಡುಕುತ್ತಾನೆ ಹುಡುಕುತ್ತಲೇ ಇರುತ್ತಾನೆ.  ನಿಸರ್ಗದ ಚಲುವು ಮತ್ತು ಮಾನವನ ಕೌಶಲ್ಯ ಎರಡೂ ಜೊತೆಗೆ ನಿಂತು ಮಾತನಾಡುವುದು ಅಪರೂಪಕ್ಕೆ ಕಾಣಸಿಗುವ ದೃಶ್ಯ. ಅಂಥದ್ದೊಂದ್ದು ನಿಸರ್ಗದ ವಿಸ್ಮಯ ಮತ್ತು ಮಾನವನು ಅತಿ ಜತನದಿಂದ ಅದರ ಮೂಲರೂಪಕ್ಕೆ ಧಕ್ಕೆ ಬಾರದಂತೆ ಕಾದುಕೊಂಡಿರುವ ಅಪರೂಪದ ಸ್ಥಳವೇ  ನಾರ್ದರ್ನ್ ಐರ್ಲ್ಯಾಂಡಿನಲ್ಲಿರುವ 'ಮಾರ್ಬಲ್ ಆರ್ಚ್ ಕೇವ್ಸ್'.  

 ಭೂಮಿಯ ಮೇಲ್ಪದರಿನಲ್ಲಿ ರೂಪುಕೊಳ್ಳುವ ಅನೇಕ ರೀತಿಯ ಗುಹೆಗಳನ್ನು ತಜ್ಞರು ಗುರುತಿಸುತ್ತಾರೆ ಮತ್ತು ಅವುಗಳು ರೂಪುಗೊಂಡಿರುವ ರೀತಿ, ವಿನ್ಯಾಸ, ಲಕ್ಷಣಗಳನ್ನ ಗಮನಿಸಿ ಈ ಗುಹೆಗಳನ್ನು ಈ ೫ ಪ್ರಕಾರವಾಗಿ  ವಿಂಗಡಿಸುತ್ತಾರೆ ಅವುಗಳಲ್ಲಿ ಕೆಲವು ಇಲ್ಲಿವೆ .
೧. ಸೊಲ್ಯುಶನ್ ಕೇವ್ಸ್(Solution caves)
ಸುಣ್ಣದ ಕಲ್ಲು ಮತ್ತು ನೀರಿನ ನಿರಂತರ ಸಹಚರ್ಯ ರೂಪಿಸುವ ಗುಹೆಗಳು. 

೨.ವೋಲ್ಕಾ ಕೇವ್ಸ್( volcanic caves) 
ಭೂಮಿಯೊಳಗಿಂದ ಉಕ್ಕುವ ಲಾವಾ , ಜ್ವಾಲಾಮುಖಿಗಳು ತಣಿದು ಹೋದಮೇಲೆ ಉಂಟಾದ ಗುಹೆಗಳು. ಹವಾಯಿಯನ್ ದ್ವೀಪದಲ್ಲಿ ಇರುವ Kazumara caves ಸುಮಾರು ೪೬ಮೈಲು ಗಳಷ್ಟು ಉದ್ದದ ಗುಹೆ ಆಗಿದ್ದು  ಜಗತ್ತಿನಲ್ಲಿ ಅತ್ಯಂತ ದೊಡ್ಡ ಜ್ವಾಲಾಮುಖಿ ಗುಹೆ ಎಂದು ಹೆಸರಾಗಿದೆ.   

೩.ತಲಸ್ ಕೇವ್ಸ್ (Talus caves)
ಎತ್ತರ ಪರ್ವತ ಪ್ರದೇಶದಿಂದ ನೈಸರ್ಗಿಕ ವೈಪರಿತ್ಯ ಗಳಿಂದ  ಕಲ್ಲುಗಳು ಉರುಳಿ ಪರ್ವತದ ಕೆಳಭಾಗದಲ್ಲಿ ಉಂಟುಮಾಡುವ ಗುಹೆಗಳು.

೪.ಸೀ ಕೇವ್ಸ್ (Sea caves) 
ಸಮುದ್ರದ ನೀರು ಮತ್ತು ದಡ ದಲ್ಲಿರುವ ಕಲ್ಲುಬಂಡೆಗಳ ಘರ್ಷಣೆ ಮತ್ತು ಮರಳು ತೆರೆಯೊಂದಿಗೆ ಸ್ಥಳಾಂತರ ಗೊಳ್ಳುವಾಗ ಉಂಟಾಗುವ ಗುಹೆಗಳು. ಇಂಥಹ ಹಲವು ಗುಹೆಗಳನ್ನು ನಾವು ಯುಕೆ, ಫ್ರಾನ್ಸ, ಅಮೇರಿಕ ಮತ್ತು  ಹವಾಯಿಯನ್ ದ್ವೀಪಗಳಲ್ಲಿ ನೋಡಬಹುದು. 

೫ ಗ್ಲೇಸಿಯರ್  ಕೇವ್ಸ್ (Glacier caves)
ಗ್ಲೇಸಿಯರ್ ಹಿಮಬಂಡೆ ಗಳಿಂದ ಉಂಟಾಗುವ ಗುಹೆ , ಕಾಣಲು ಮಂಜಿನ ಮಹಲಿನಂತೆ ಕಂಡರೂ ವಾಸ್ತವದಲ್ಲಿ ಇದು ಸಶಕ್ತ ಗುಹೆಯಾಗಿರುತ್ತದೆ . ಇಂಥ ಗ್ಲೇಸಿಯರ್ ಹಿಮದ ನಡುವೆಯೇ ೪೦೦ ವರ್ಷಗಳ ಕಾಲ ನಮ್ಮ ಕೇದಾರನಾಥ್ ದೇವಸ್ತಾನ ಧ್ಯಾನ ಮಾಡುತಿತ್ತು  ಎಂಬುದು ತಜ್ಞರ ಅಂಬೋಣ. ಗ್ಲೇಸಿಯರ್ ಗುಹೆಗಳಿಂದಾಗಿ  ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಇನ್ನೊಂದು ದೇಶ Iceland 

ಮಾರ್ಬಲ್ ಆರ್ಚ್ ಕೇವ್ಸ್
ಉತ್ತರ ಐರ್ಲೆಂಡಿನ ಫರ್ಮಾನಾ ಕೌಂಟಿ ವ್ಯಾಪ್ತಿಯಲ್ಲಿ ಬರುವ ಮಾರ್ಬಲ್ ಆರ್ಚ್ ಕೇವ ಸಂಶೋಧಿಸಿದ್ದು ಫ್ರಾನ್ಸ್ ನ ಸ್ಪೆಲಿಯೋಲೋಜಿಸ್ಟ್ (speleology-study of caves and other karts) ಎಡ್ವರ್ಡ್ ಅಲ್ಫ್ರೆಡ್ ಮಾರ್ಟೆಲ್, ೧೮೯೫ರಲ್ಲಿ ಈತ ಮತ್ತು ಡಬ್ಲಿನ್ ವಾಸಿ ನಿಸರ್ಗ ತಜ್ಞ ಜೆಮೀ ಒಂದು ಕ್ಯಾನ್ವಾಸ್ ಬೋಟಿನಲ್ಲಿ ಆರಂಭ ದ್ವಾರದಿಂದ ಸುಮಾರು ೩೦೦ ಮೀಟರ್ ದೂರದ ಗುಹೆಯ ಮಾರ್ಗ ಕ್ರಮಿಸಿ ನಕ್ಷೆ ಮಾಡಿ ಇಟ್ಟರು. ನಂತರ ಕ್ರಮವಾಗಿ ಹಲವು ಆಸಕ್ತರು ಸೇರಿ ಸುಮಾರು ೪. ೫ ಕಿಲೋಮೀಟರ್ ಗಳಷ್ಟು ಉದ್ದದ ಈ ಗುಹೆಯನ್ನು ಎಲ್ಲರ ಗಮನಕ್ಕೆ ತಂದರು.  

ಮಾರ್ಬಲ್ ಆರ್ಚ್ ಕೇವ ಸುಣ್ಣದ ಕಲ್ಲುಗಳಿಂದ ಉಂಟಾದ ಗುಹೆ . ಈ ಗುಹೆಯ ಒಳಗೆ ಕ್ಲಾಡಾ ಮತ್ತು  ಒವೆನಬ್ರೀನ್  ಹೆಸರಿನ ನದಿಗಳ ಸಂಗಮವಾಗುತ್ತದೆ, ಮತ್ತು ಇಲ್ಲಿ ಉಂಟಾಗಿರುವ ಭೌಗೊಲಿಕ  ಬದಲಾವಣೆಗಳು ,ಕಲ್ಲು ಗಳ ಮೇಲಿನ ವಿನ್ಯಾಸಗಳು ಮಿಲಿಯನ  ವರ್ಷಗಳ ಕಾಲ ನದಿಗಳ ಏರಿಳಿತ ಮತ್ತು ಹರಿಯುವಿಕೆಯ ಪರಿಣಾಮಗಳೇ ಆಗಿವೆ. 

೨೦೦೮ರಲ್ಲಿ ಯುನೆಸ್ಕೋ  ಈ ಪ್ರದೇಶವನ್ನು 'ಗ್ಲೋಬಲ್ ಜಿಯೋ ಪಾರ್ಕ್' ಎಂದು ಘೋಷಿಸಿತು. ೧೯ನೇ  ಶತಮಾನದಿಂದಲೇ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದು ಆಗಿದ್ದ ಈ ಸ್ಥಳ ೨೦೦೮ ರ ನಂತರ ಯೂರೋಪಿನ ಮುಖ್ಯ ಪ್ರವಾಸಿ ಸ್ಥಳಗಳ ಪಟ್ಟಿಯಲ್ಲಿ ಬಂದಿತು.
ಐರ್ಲ್ಯಾಂಡ್ ಗೆ ಭೇಟಿ ಕೊಟ್ಟವರು ಇದನ್ನು ನೋಡದೆ ಮರಳಿದರೆ ಅವರ ಪ್ರವಾಸ ಅಪೂರ್ಣ ಎಂದೇ ಅರ್ಥ. 

ಸಾಂಪ್ರದಾಯಿಕ  ದ್ವಾರ ಹೊಕ್ಕಿದ ನಂತರ ೧೫೦ ಮೆಟ್ಟಿಲು ಮತ್ತು ಒಂದೂವರೆ ತಾಸಿನ ನಿರಂತರ ನಡಿಗೆ ,  ಗುಹೆಯೊಳಗೆ ಹರಿಯುವ ನದಿಯಲ್ಲಿ ೫ ನಿಮಿಷದ ದೋಣಿಯಾನ, ದೋಣಿಯಲ್ಲಿ ಕುಳಿತಾಗ ಕಲ್ಲಿನ ಕಮಾನುಗಳಿಂದ ಒಸರುವ ನೀರ ಒರತೆ , ಕಡಿದಾದ ಭಾಗದಲ್ಲಿ ನಡೆಯುತ್ತಿರುವಾಗ ಪಟ್ಟನೆ ಎದುರಾಗುವ ಬಂಡೆಗಳು. ಅದೇನೇನೋ ವಿನ್ಯಾಸಗಳು ಅಲ್ಲೇಲ್ಲೊ ಹಿಮ ತುಂಬಿ ಕೊಂಡಂತೆ , ಮತ್ತೊಂದೆಡೆ ಹೂಕೋಸು ಅರಳಿದಂತೆ, ಒಮ್ಮೆ ಆಕಳ ಕೆಚ್ಚಲು, ಮತ್ತೊಮ್ಮೆ ಪುಟ್ಟ ಕುಟೀರ, ಅದೋ ಆ ಕಲ್ಲು ಆಕಳ ಕಿವಿಯಂತಿದೆ ಅಂದು ಕೊಂಡು ಈಚೆ ತಿರುಗಿದರೆ ಭಯಂಕರ ರಾಕ್ಷಸ ಬಾಯಿ ತೆರೆದು ನಿಂತಂತೆ!  ಅದು ಭೂಮಿಯ ಒಳ ಪದರ ಅಮ್ಮನ ಮಡಿಲಿನಂತೆ ತಂಪು ತಂಪು. ನೆಲ ಕಾಣುವ ನೀರು ಹಿತ ನೀಡಿದರೆ ಕೆಲವೊಂದೆಡೆ  ಕಪ್ಪಗಿನ ಕಂದಕ ಭಯ ಹುಟ್ಟಿಸುತ್ತವೆ ಸಧ್ಯಕ್ಕೆ ಈ ಗುಹೆಯ ೧ ಭಾಗ ಮಾತ್ರ ಪ್ರವಾಸಿಗರು ನೋಡಬಹುದು ಉಳಿದ ೩ ಭಾಗದಲ್ಲಿ ನೀರು ತುಂಬಿಕೊಂಡಿದೆ. ಚಳಿಗಾಲದಲ್ಲಿ ಈ ಸ್ಥಳ ಪೂರ್ತಿಯಾಗಿ ಮುಚ್ಚಿರುತ್ತದೆ, ಜೊತೆಗೆ ತಾಪಮಾನ ಮತ್ತು ಏರಿಳಿತದ ದಾರಿಯ ಕಾರಣದಿಂದ ಉಸಿರಾಟದ ತೊಂದರೆ ಇರುವವರಿಗೆ ಈ ಗುಹೆಯಾ ಓಡಾಟ ಅಷ್ಟು ಸೂಕ್ತವಲ್ಲ ಎನ್ನುವುದು ಟಿಕೆಟ್ ಕೌಂಟರಿನಲ್ಲಿ ಕೊಟ್ಟ ಸೂಚನೆಯಾಗಿತ್ತು. ಪುಟ್ಟ ಮಕ್ಕಳನ್ನು ಎತ್ತಿಕೊಂಡಾಗಲಿ, ಪ್ರಾಮ್ ಮೇಲೆ ಆಗಲಿ ಈ ಗುಹೆಯಲ್ಲಿ ಓಡಾಡುವುದು ಕಷ್ಟ. 

ಮೊದಲ ಸಲ ನಾವು ಸ್ನೇಹಿತರೊಂದಿಗೆ ಇಲ್ಲಿಗೆ ಹೋದಾಗ, ನಗುವೆಂದರೇನು ಎಂಬುದರ ಪರಿಚಯವೇ ಇಲ್ಲದ ನಮ್ಮ ಗೈಡ್ ನಮ್ಮ ಟ್ರಿಪ್ಪಿನ ಮತ್ತೊಂದು ಆಕರ್ಷಣೆ ಆಗಿದ್ದ. ಭತ್ತ ಹಾಕಿದರೆ ಅರಳಾಗಿ ಬರುವಷ್ಟು ಸಿಡುಕನಾಗಿದ್ದ.  ಪ್ರಯಾಣದಲ್ಲಿ ಮೆಟ್ಟಿಲುಗಳನ್ನು ಕಂಡ ಕೂಡಲೇ ನನಗೆ ಆಗುತ್ತಿದ್ದ ತಳಮಳ !! ಒಂದೂವರೆ ತಾಸಿನ ಈ ಪಯಣದ ನಂತರ ಹಸಿವಿನಿಂದ ಹೈರಾಣಾಗಿ ಬಂದಾಗ ಮನೆಯಿಂದಲೇ ಮಾಡಿ ತಂದ ಬಿಸಿಬೇಳೆ ಭಾತ್ ಮತ್ತು ಸ್ಯಾಂಡ್ವಿಚ್ ನಮ್ಮ ಪಾಲಿಗೆ ಎಂದಿಗಿಂತ ರುಚಿಯಾಗಿದ್ದವು. ಟಿಕೆಟ್ ಕೌಂಟರ್ ಮತ್ತು ಸ್ವಾಗತ ಕಚೇರಿಯ ಜೊತೆಗೆ ಇಲ್ಲೊಂದು ಕೆಫೆಯೂ ಇದೆ. ಅವರು ಮಾಡಿಕೊಡುವ   
ವೆನಿಲ್ಲಾ ಐಸ್ಕ್ರೀಂ ಮತ್ತು ಬಿಸಿ ಬಿಸಿ ಬ್ರೌನಿ ಸವಿಯದಿದ್ದರೆ  ನಮ್ಮ ಪ್ರವಾಸದಲ್ಲಿ ಏನೋ ತಪ್ಪಿ ಹೋದಂತೆ ಅನಿಸುತ್ತದೆ. ಇವನ್ನು ಹೇಳಲೇಬೇಕು ಎನಿಸಿತು ಏಕೆಂದರೆ ಇದೆಲ್ಲ ಆಗಿದ್ದು ನಮ್ಮ ಈ ಗುಹೆಗಳಿಗೆ ಮೊದಲಬಾರಿ ಭೇಟಿ ಕೊಟ್ಟಾಗ. ಆ ನಂತರ ಅದೆಷ್ಟು ಸಲ ಹೋಗಿ ಬಂದಿದ್ದರೂ ಮತ್ತೆ ಮತ್ತೆ ಹೋಗಿ ಬರಬೇಕು ಎನ್ನುವಂತಹ ಜಾಗ ಇದು. 

ಮಾರ್ಬಲ್ ಆರ್ಚ್ ಕೇವ್ಸ್ ಬೆಲ್ಫಾಸ್ಟ್ ನಗರದಿಂದ ೯೧ಮೈಲಿ ದೂರದಲ್ಲಿದೆ. ಹತ್ತಿರದ Enniskillen, Florence court, ಮತ್ತು ಹಲವು ದ್ವೀಪಗಳನ್ನೂ, ಫರ್ಮಾನಾ ಊರಿನ ಹತ್ತಿರ ಇರುವ ಚಂದದ ಜಲಪಾತಗಳನ್ನೂ ನೋಡಬಹುದು. ಇಲ್ಲಿ ಅಕ್ಕ ಪಕ್ಕದ ಹಳ್ಳಿಗಳಲ್ಲಿ  ಒಳ್ಳೆಯ cottage ವಸತಿ ಸೌಲಭ್ಯ ಲಭ್ಯವಿದೆ. ನೀವು ಮೊದಲೇ ಈ ಗುಹೆಯ ಸ್ವಾಗತ ಕಚೇರಿಗೆ ಕರೆ ಮಾಡಿ opening hours ಬಗ್ಗೆ ಪಕ್ಕ ಮಾಹಿತಿ ಪಡೆದು ಹೋಗುವುದು ಒಳ್ಳೆಯದು. ಜೋರಾಗಿ ಮಳೆ ಗಾಳಿ ಇದ್ದ ಹೊತ್ತಲ್ಲಿ ಇದನ್ನು ಯಾವುದೇ ಮೂನ್ಸೂಚನೆ ಇಲ್ಲದೆಯೂ ಮುಚ್ಚಲಾಗುತ್ತದೆ. ಈ ನಿರಾಸೆ ನಮಗೂ ಒಮ್ಮೆ ಆಗಿದ್ದಕ್ಕೆ ಮೊದಲೇ ಪೂರ್ಣ ಮಾಹಿತಿ ತೆಗೆದುಕೊಂಡು ಹೋಗುವುದು ಒಳಿತು.   

ಅಲ್ಲಿ ನಾನು ಫೋಟೋ ಕ್ಲಿಕ್ಕಿಸಲು ಪರದಾಡಿದ್ದು ಮತ್ತೊಂದು ಕತೆ , ನನ್ನ ಕಣ್ಣಿಗೆ ಕಂಡಷ್ಟು ನನ್ನ ಕ್ಯಾಮರಾ ಕಣ್ಣಿಗೆ ಕಾಣಲಿಲ್ಲ. ಅದಕ್ಕೆ ಅಂತರ್ಜಾಲದಲ್ಲಿ ಸಿಕ್ಕ ಚಿತ್ರಗಳನ್ನೇ ಇಲ್ಲಿ ಹಾಕುತ್ತಿದ್ದೇನೆ. 
ನೀವು ಬೆಲ್ಫಾಸ್ಟ್ ಅಥವಾ ಐರ್ಲೆಂಡ್ ಗೆ ಭೇಟಿ ಕೊಟ್ಟರೆ ಮಾರ್ಬಲ್ ಆರ್ಚ್ ಕೇವ್ಸ್ ಗೆ ಮರೆಯದೆ ಭೇಟಿ ಕೊಡಿ. 
Photo credits: The Fermanagh Herald and Wikipedia 

ದಂಪತಿಗಳ ಸರಸ ಸಲ್ಲಾಪ

ಅನಿವಾಸಿ ಗುಂಪಿನಲ್ಲಿ ಕಥೆಗಾರರು, ಕವಿಗಳು, ಹರಟೆಮಲ್ಲರು, ಇತಿಹಾಸ ಪ್ರಿಯರು ಪ್ರಬಂಧಕಾರರು ಹೀಗೆ ಹಲವು ಬಗೆಯ ವಿಶೇಷತೆಯ ಸದಸ್ಯರಿದ್ದಾರೆ. ಅವರೆಲ್ಲರ ನಡುವೆ, ಲಘು ಹಾಸ್ಯ ಭರಿತ ಲೇಖನ, ಕವನಗಳನ್ನು ಬರೆದು, ಎಲೆಯ ಮರೆಯ ಕಾಯಿಯಂತಿರುವವರು ವತ್ಸಲಾ. ಕಣ್ಣಲ್ಲೇ ನಸುನಗುವನ್ನು ಸೂಸುವ ಶೈಲಿ ಅವರದ್ದು. ಘನ ವಿಷಯವನ್ನು ಲಘುವಾಗಿ ಮನಮುಟ್ಟುವಂತೆ ಬರೆಯಬಲ್ಲರು ವತ್ಸಲಾ. ಈ ವಾರದ ಸಂಚಿಕೆಯಲ್ಲಿ ಅವರು ಬರಹವನ್ನು ನೀವು ಓದಿ, ಮುಗುಳ್ನಗುವಿರೆಂಬ ಭರವಸೆ ನನಗಿದೆ. ಇದು ಮುದ್ದಣ-ಮನೋರಮೆಯ ಸರಸ ಸಲ್ಲಾಪವೇ? ಅವರು ಕೇಳುವ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ?


ಏನುಂದ್ರೆ ನಾನು ಹೇಳಿದ್ದು ಕೇಳಿಸಿತೆ ?
ಹೂಂ ಕಣೆ ಕೇಳಿಸಿತು.
ನಾನು ಹೇಳಿದ್ದು ಏನುೊಂತ ಗೊತ್ತಾಯಿತೆ?
ನೀನು ಹೇಳಿದರೆ ತಾನೆ ಗೊತ್ತಾಗುವುದು.
ಏನುಂದ್ರೆ ನಾನು ಹೇಳೋದೇನಂದರೆ,
ಅಯ್ಯೋ! ರಾಮ! ಹೇಳೆ ಏನುಂತ ಮಹಾತಾಯಿ!
ಅದೇ ಕಣ್ರಿ ಗೊತ್ತಾಯಿತಾ?
ಗಂಡನಿಗೆ ತಲೆ ಬಿಸಿಯಾಗಿ ತಣ್ಣಗೆ ನೀರು ಕುಡಿದ.
ಅಲ್ಲಾಂದ್ರೆ ನಾನು ನೆನಪಿಸುತ್ತಿರುವುದು “ಏನೂಂದ್ರೆ ಹೇಳಿ ನೋಡೋಣ”
ಅಮ್ಮ ಮಹಾಕಾಳಿ, ನಿನ್ನ ಮನಸ್ಸಿನಲ್ಲಿ ಏನಿದೆಯೆಂದು ಒದರುವಂತವಳಾಗು!
ಅದೇರಿ ಅವತ್ತು ಸಾಯಂಕಾಲ ಬೆಂಗಳೂರಿನ ಕೆಟ್ಟಗಾಳಿ ಕುಡಿಯಲು ಹೋಗಿದ್ದೆವೆಲ್ಲಾ ನೆನೆಪಿದೆಯೇನ್ರಿ?
ಇಲ್ಲ ಕಣೆ, ಏನುಂತ ನೀನೇ ಹೇಳಬಾರದೆ
ಅದೇ ಕಣ್ರಿ ಅಲಸೂರು ಕೆರೆ ಹತ್ತಿರ ಹೇಳಿದೆನಲ್ಲಾ ನೆನಪು ಬಂತೇನ್ರಿ?
ಅದೇರಿ, ನಾವಿಬ್ಬರು ಬೆಂಚಿನ ಮೇಲೆ ಕುಳಿತು ಹುರಿದ ಕಡಲೆಬೀಜ ತಿಂತಾಯಿರಲ್ಲಿಲ್ಲವೇ?
ಏನುಂದ್ರೇ ತುಕಡ್ಸಿತ್ತಿದ್ದೀರಾ? ನಾನು ಹೇಳಿದ್ದು ಗೊತ್ತಾಯಿತಾ?
ಹೂಂ ಕಣೆ  ಸುತ್ತಿ ಬಳಸಿ ಮಾತನಾಡಬೇಡ , ಏನು ಹೇಳು: ಗಂಡ ಗದರಿದ.
ಏನುಂದ್ರೇ !
ಏನೂಯಿಲ್ಲ ಬೆಲ್ಲ ಇಲ್ಲ. ಅದೇನು ಹೇಳೇ ಬೇಗ: ಗಂಡ ಗುಡುಗಿದ.
ಅದೇರಿ ಕಳ್ಳೆಕಾಯಿ ತಿನ್ನುತ್ತಾ ಇರಬೇಕಾದರೆ ಒಂದು ಹೊಸ ದಂಪತಿಗಳು ಬಂದ್ರಲ್ಲಾ?
ಗಂಡ ಚುರುಕಾದ. ಹೌದು ಕಣೆ, ಆ ಹುಡುಗಿ ಎಷ್ಟು ಸುಂದರವಾಗಿದ್ದಳು ಅಲ್ಲವೇನೆ?
ಬೆಳ್ಳಗೆ, ತೆಳ್ಳಗೆ, ಹಸಿರು ಸೀರೆ ಉಟ್ಟು ಗಲಗಲಾಂತ ನಗುತ್ತಾ ಗಂಡನ ಕೈ ಹಿಡಿದುಕೋಂಡು ಹೋಗುತ್ತಿದ್ದಳು
ಅವಳ ಜಡೆ ನಾಗರ ಹಾವಿನಂತೆ ಉದ್ದಕ್ಕಿತ್ತು ಅಲ್ಲೇನೆ? ಅವಳು ಬಳಕುತ್ತಾ ನಡೀತಾ ಇದ್ರೆ!
ಹೆಂಡತಿ ಕೆಂಡಕಾರಲು ಸಿದ್ದವಾಗಿದ್ದಳು.
ಆದರೆ ಹಾಗೆ ಮಾಡಲಿಲ್ಲ, ಯಾಕೆ ಗೊತ್ತಾ?
ಮುಂದಿನ ಮಾತು ಕೇಳಿ.
ಅರೇ! ನಿಮಗೆ ಬೇಕು ಅಂದ್ರೆ ನೆನಪು ಎಷ್ಟು ಚೆನ್ನಾಗಿ  ಎಳೆ ಎಳೆಯಾಗಿ ಬರುತ್ತೆ ಅಲ್ಲೇನ್ರಿ?
ಹೂಂ ಕಣೆ ಹುಡುಗಿ ತುಂಬಾ ಚೆನ್ನಾಗಿ ಕಳಕಳಂತ ಇದ್ದಳು ಅಲ್ಲೇನೆ?
ಹೂಂರೀ ! ಅವಳ ಕತ್ತಿನಲ್ಲಿ ಯಾವ ನೆಕ್ಲೇಸ್‌ ಇತ್ತು ಗೊತ್ತಾ?
ಅದೇ ಕಣೆ! ಹಂಸದಂತ ಕತ್ತಿನಲ್ಲಿ ಕೆಂಪು ಮುತ್ತಿನ ನೆಕ್ಲೇಸ್, ವಜ್ರದ ಓಲೆ, ಬಳೆ ಏಲ್ಲಾ ಹಾಕಿಕೊಂಡು
ಮಂಗಳ ಗೌರಿಯಂತೆ ಇದ್ದಳು ಅಲ್ಲೇನೇ?
ಹೆಂಡತಿಗೆ ಕೋಪ ನೆತ್ತಿಗೇರಿತು. ಆದರೂ,
ಹೌದೂರೀ ಆವಾಗ ನಾನು ಏನು ಕೇಳಿದೆ ಹೇಳಿ?
ಅಯ್ಯೊ! ಬಿಡೆ ನೀನು ಏನೇನೋ ಕೇಳ್ತಾ ಇರುತ್ತಿ ನಂಗೆ ನೆನಪು ಇಲ್ಲ ಹೋಗೆ
ಸರಿ ಬಿಡಿ , ನಾನೇಕೆ ನೆನಪಿಸ ಬೇಕು?
ಇಲ್ಲ ಕಣೆ ಹೇಳೆ ರಾಣಿ!
ಹೆಂಡತಿ ವೈಯ್ಯಾರದಿಂದ “ಆ ಹುಡುಗಿ ಹಾಕಿಕೊಂಡಂತ ನೆಕ್ಲೇಸ್ ಇಲ್ಲೇ ಪಕ್ಕದ ಅಂಗಡಿಯಲ್ಲಿದೆಯಂತೆ,
ಆ ಹುಡುಗಿ ಹೇಳಿದಳು. ಸುಮ್ಮನೆ ನೋಡಿಕೊಂಡು ಬರೋಣ ಅಂತ ಹೋಗಿ ನೋಡಲ್ಲಿಲ್ಲವೇ?,
ಬೆಪ್ಪ ಗಂಡ, ಹೌದು ಹೋಗಿ ನೋಡಿದೆವು. ನಂತರ ಮನೆಗೆ ಬಂದು ಊಟಮಾಡಿ ಮಲಗಿಕೊಂಡೆವು ಅಷ್ಟೇ.
ಹೂಂ ಕಣ್ರಿ ! ನಾನು ನೆನ್ನೆ ಆ ಅಂಗಡಿಗೆ ಹೋಗಿ Necklace order ಮಾಡಿದೆ. ನಿಮಗೂ ತುಂಬಾ ಇಷ್ಟ ಆಯ್ತು ಅಲ್ಲವೇನ್ರಿ?
ಏನೊಂದ್ರೆ ನಾನು ಹೇಳಿದ್ದು ಕೇಳಿಸಿಕೊಂಡ್ರ?
ಆಫೀಸಿನಿಂದ ಬರಬೇಕಾದರೆ ದುಡ್ಡು ಮರೀಬೇಡಿ ಗೊತ್ತಾಯಿತಾ?
ಗಂಡ ಪಾಪ! ಬಡ ಕಾರಕೂನ. ಬೆಪ್ಪನಾದ!
ಹೆಂಡತಿ “ಏನುಂದ್ರೆ ಹೇಳಿದ್ದು ಕೇಳಿಸಿತಾ”
ಗಂಡ ಏನು ಹೇಳಿದ ನಂಗೆ ಗೊತ್ತಿಲ್ಲ.
ನಿಮಗೆ ಗೊತ್ತಿದ್ದರೆ ಹೇಳಿ.

ವತ್ಸಲಾ ರಾಮಮೂರ್ತಿ

ನನ್ನ ಕತೆ – ಕೇಶವ ಕುಲಕರ್ಣಿ

ಈ ವಾರದ ಪ್ರಕಟಣೆ ವಿಳಂಬವಾಗಿರುವುದಕ್ಕೆ ಕ್ಷಮೆ ಕೋರುತ್ತೇನೆ. ಈ ವಾರದ ಪ್ರಕಟನೆ ನಾನು ೨೦ ವರ್ಷಗಳ ಹಿಂದೆ ಬರೆದ ಕತೆ, `ತರಂಗ`ದಲ್ಲಿ `ತಿಂಗಳ ಬಹುಮಾನಿತ ಕಥೆ`ಯಾಗಿ ಪ್ರಕಟವಾಗಿತ್ತು. ಎರಡು ದಶಕಗಳ ನಂತರದ ಈ ಆಧುನಿಕ ಕಾಲದಲ್ಲಿ ಈ ಕಥೆ ಅಪ್ರಸ್ತುತ ಎನಿಸಬಹುದು. ಈ ಹಿಂದೆ ಪ್ರಕಟವಾದ ಕಥೆಯನ್ನೇ ಇಲ್ಲಿ ನಿಮ್ಮ ಮುಂದಿಡುತ್ತಿರುವುದಕ್ಕೂ ಕ್ಷಮೆ ಕೋರುತ್ತೇನೆ. – ಕೇಶವ

ಇದೆನ್ನೆಲ್ಲ ನಿಮ್ಮ ಮುಂದೆ ಕಕ್ಕಿಬಿಡಬೇಕು ಎಂದು ನಾನು ನಿಮ್ಮ ಎದುರಿಗೆ ಇದೀಗ ಕುಳಿತಿದ್ದೇನೆ. ಏಕೆಂದರೆ ಕಕ್ಕುವುದು ನನಗೀಗ ಅನಿವಾರ್ಯವಾಗಿದೆ. ಅದರ ಸಲುವಾಗಿಯೇ ಈಗ ಎಲ್ಲವನ್ನೂ ಒಂದೂ ಬಿಡದೇ ಸಾವಕಾಶವಾಗಿ ಹೇಳುತ್ತೇನೆ. ಇಷ್ಟಾದರೂ ಈಗ ಎಲ್ಲಿಂದ ಶುರು ಮಾಡಲಿ ಎಂದು ತಿಳಿಯಲಾರದೇ ಒದ್ದಾಡುತ್ತಿದ್ದೇನೆ. ಎಲ್ಲಿಂದ ಶುರುಮಾಡಿದರೆ ನಿಮ್ಮಗೆ ಪೂರ ಅರ್ಥವಾದೀತು ಎಂದು ನನಗೆ ಅರ್ಥವಾಗುತ್ತಿಲ್ಲ.

ಅವತ್ತೂ ಹೀಗೆಯೇ ಆಯಿತು. ರೂಪಾ ಕುಲಕರ್ಣಿಯ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ರಾತ್ರಿ ಹನ್ನೊಂದ್ದಕ್ಕೆ ಖೋಲಿಗೆ ಬಂದಾಗ ಹೀಗೆಯೇ, ಎಲ್ಲವನ್ನೂ ಕಕ್ಕಿ ಬಿಡಬೇಕು ಅನಿಸಿತು. ಖೋಲಿಯಲ್ಲಿ ಉಳಿದವರಿಬ್ಬರೂ ಸಿನಿಮಾಕ್ಕೆ ಹೋಗಿದ್ದರು. ಕೈಗೆ ಸಿಕ್ಕ ವಹಿ ತೆಗೆದುಕೊಂಡು ಹೀಗೆಯೇ ಶುರು ಮಾಡಿ, ಬರ್ತ್‌ಡೇ ಪಾರ್ಟಿಯಲ್ಲಿ ನಡೆದುದನ್ನು, ಅದು ನನ್ನ ಮೇಲೆ ಮಾಡಿದ ಪರಿಣಾಮವನ್ನು, ನಾನು ಬೆಳೆದ ವಾತಾವರಣವು ಅಲ್ಲಿ ತಂದ ಸಂದಿಗ್ಢತೆಯನ್ನು ಬರೆಯುತ್ತ ಹೋದೆ. ಬರ್ತ್‌ಡೇ ಪಾರ್ಟಿ ತೆಲೆಯನ್ನು ಪೂರ ಕೆಡೆಸಿತ್ತು. ಸುಮಾರು ಇಪ್ಪತ್ತು ಪಾನು ಗೀಚಿದೆ. ಏಕೆಂದರೆ ಆಗಲೂ ಹಾಗೆಯೇ, ಕಕ್ಕುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ನಾನು ನನ್ನ ಮನಸ್ಸಿನ ತಳಮಳದಿಂದ ಹೊರಬರಲು ಸಾಧ್ಯಗಲಾರದೇ ಒದ್ದಾಡುತ್ತಿದ್ದೆ. 

ಹೀಗೆಲ್ಲ ಹೇಳಿದರೆ ನಿಮ್ಮಗೆ ತಿಳಿಯುವದಿಲ್ಲವೆಂದು ಗೊತ್ತು. ಹಾಗೆಂದು ಆವತ್ತು ಬರೆದ ಇಪ್ಪತ್ತು ಪಾನುಗಳನ್ನು ಇಲ್ಲಿ ಹೇಳುವುದಿಲ್ಲ; ಅವುಗಳನ್ನು ಹೇಳುವ ಮನಸ್ಸೂ ಇಲ್ಲ. ನನಗೆ ಆದಕ್ಕಿಂತ ಮುಂದಿನದನ್ನು ಹೇಳಬೇಕಾಗಿದೆ. ಆದರೆ ಹಿಂದಿನದು ಗೊತ್ತಿರದೇ  ಮುಂದಿನದು ತಿಳಿಯಲಿಕ್ಕಿಲ್ಲವೆಂದು ಹಿಂದಿನದನ್ನು ಹೇಳಿ ಮುಂದೆ ಸಾಗುತ್ತೇನೆ.

ನಾನೊಬ್ಬ ವಿಚಿತ್ರ ವ್ಯಕ್ತಿತ್ವದ ಮನುಷ್ಯ. ನನ್ನ ಸ್ವಭಾವ ಪರಿಚಯ ಮಾಡಿ ಕೊಡಲು ಇದೆಲ್ಲ ಹೇಳಿದರೆ ಸಾಕು ಅನಿಸುತ್ತದೆ. ಈಗಿನ ಕಾಲ: ೧೯೯೨. ಹೆಸರು (ಏನಾದರೂ ನಡೆದೀತು), ವಯಸ್ಸು: ಇಪ್ಪತ್ತು, ಓದುತ್ತಿರುವುದು: ಬಿ. ಇ (ಮೆಕ್ಯಾನಿಕಲ್) ಜಾತಿ: ಬ್ರಾಹ್ಮಣ; ಹವ್ಯಾಸ: ಕಥೆ-ಕವನ ಓದುವುದು, ಬರೆಯುವುದು. ನಮ್ಮ ಮನೆಯಲ್ಲಿ ಒಟ್ಟೂ ನಾಕೇ ಮಂದಿ – ಸಣ್ಣ ಪಗಾರದ ಧಾರ್ಮಿಕ ನಡೆವಳಿಕೆಯ ಬಾಳುತ್ತಿರುವ ಅಪ್ಪ, ಅಪ್ಪನ ಮಾತು ಕೇಳಿಕೊಂಡು ಬದುಕುತ್ತಿರುವ ಕ್ಯಾನ್ಸರಿನಿಂದ ನವೆಯುತ್ತಿರುವ ಅಮ್ಮ, ಮೂರೂವರೆ ವರ್ಷದಿಂದ ಮೂಲೆಯಲ್ಲಿ ಪಾರ್ಸಿ ಹೊಡೆದು ಮಲಗಿದ ಅಜ್ಜಿ ಮತ್ತು ನಾನು. ಮನೆಯಲ್ಲಿ ಪೂರ ಧಾರ್ಮಿಕ ವಾತಾವರಣ. ನಮ್ಮಜ್ಜ ನಮ್ಮಪ್ಪ ಮಗುವಾಗಿರುವಾಗಲೇ ಸತ್ತನಂತೆ; ಅಂದಿನಿಂದ ನಮ್ಮಜ್ಜಿ ಮಾಡಿಯಾಗಿದ್ದಾಳೆ ( ಈ ಕಥೆ ಮುಗಿಯುವುದರೊಳಗಾಗಿ ಸಾಯುತ್ತಾಳೆ). ದಿನಾಲು ಮಡಿ ಊಟವೇ ಆಗಬೇಕು. ತನೆಗೇ ಏಡಿರೋಗ ಬಡಿದಿದ್ದರೂ ಅವ್ವ ದೇವರು-ದಿಂಡಿರೆಂದು ಕಷ್ಟಪಟ್ಟು ಮಡಿ ಅಡಿಗೆ ಮಾಡುತ್ತಾಳೆ. ದಿನಾಲೂ ದೇವರ ಪೂಜೆ, ವೈಶ್ವದೇವ, ರಾಯರ ಹಸ್ತೋದಕ ಆಗಲೇಬೇಕು. ಪ್ರತಿ ಗುರುವಾರ ತಾರತಮ್ಯ ಭಜನೆ, ಕಡ್ಡಾಯವಾಗಿ ಎರಡು ಹೊತ್ತು ಸಂಧ್ಯಾವಂದನೆ ಇವನ್ನೆಲ್ಲ ಅಪ್ಪ ಶ್ರದ್ದೆಯಿಂದ ಮಾಡುತ್ತಾನೆ. ಔಷಧಿಗಾಗಿ ಪೈಸೆ ಪೈಸೆ ಕೊಡಿಸಿ ಅಮ್ಮ, ಅಜ್ಜಿಯರನ್ನು ಡಾಕ್ಟರಿಗೆ ತೋರಿಸುತ್ತಾನೆ. ಅಂತಹುದರಲ್ಲಿ ಮುಂಚಿನಿಂದಲ್ಲು ಚಲೋ ಓದಿದ್ದರಿಂದಲೋ ಏನೋ, ಚಲೋ ಮಾರ್ಕ್ಸ್ ಬಂದು ನಾನು ಹದಿನೆಂಟನೆಯ ವಯಸ್ಸಿಗೆ ಬಾಗಲಕೋಟೆಯಿಂದ ಹುಬ್ಬಳ್ಳಿಗೆ (ಬಿವಿಬಿ ಕಾಲೇಜು) ಬರಬೇಕಾಗಿ ಬಂತು. ಅಪ್ಪ ಹಾಗೂ ಹೀಗೊ ತಿಂಗಳಿಗೆ ನಾನೂರೋ ಐನೂರೋ ಕಳಿಸುತ್ತಾನೆ.

ಇಲ್ಲಿ ಹುಬ್ಬಳ್ಳಿಗೆ ಬಂದ ಮೇಲೆ ನನ್ನಲ್ಲಿ ಒಂದೊಂದೇ ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾದವು. ನಾನು ಹೈಸ್ಕೂಲಿನಲ್ಲಿದ್ದಾಗ ಮಾಡುತ್ತಿದ್ದ ಗಾಂಧಿ-ಟಾಲ್ಸ್ಟಾಯ್ ಭಜನೆಗಳು ಸಾವಕಾಶವಾಗಿ ಕಡಿಮೆಯಾಗಲು ಹತ್ತಿದವು. ಹಾಸ್ಟೆಲಿನಲ್ಲಿ ಬೇರೆ ಬೇರೆ ತರಹದ ಗೆಳೆಯರು ಸುತ್ತುವರಿದಿದ್ದಾರೆ. ಹುಡುಗಿಯರ ಬಗೆಗೆ ಹೇಸಿಗೆಯಿಲ್ಲದೇ ಹೊಲಸು ಮಾತಾಡುತ್ತಾರೆ. ಮುಂಚಿ ಇಂತಹುದನ್ನೆಲ್ಲ ಎಂದೂ ಕೇಳಿದವನಲ್ಲ. ಮನಸ್ಸಿನಲ್ಲೇ ಖುಷಿಯಾದರೂ ಮಾತನಾಡಲು, ನಗಲು ನನ್ನ ಸಂಸ್ಕಾರದ ಅಡ್ಡಿ.

ದಾರಿಯಲ್ಲಿ ಹೊರಟ ಹುಡುಗಿಯರನ್ನು ನೋಡಲು ಕಡಿವಾಣ ಹಾಕಿಕೊಂಡಿದ್ದರೂ ಒಬ್ಬನೇ ಇದ್ದಾಗ ದಾರಿಯಲ್ಲಿನ ಹುಡುಗಿಯರನ್ನು ಕಣ್ತುಂಬ ತುಂಬಿಕೊಳ್ಳಲು ಶುರು ಮಾಡಿದೆ; ಮನಸ್ಸಿನಲ್ಲೇ ಮಂಡಿಗೆ ತಿನ್ನಹತ್ತಿದೆ. ಇಂಥ ಹೊತ್ತಿನಲ್ಲೇ ಹುಬ್ಬಳ್ಳಿಯ ಸಿನಿಮಾ ಚಾಳಿ ಬೇರೆ ಅಂಟಿಕೊಳ್ಳಹತ್ತಿತ್ತು. ಆಗಲೇ ಸಾಹಿತ್ಯದ ಕೆಲವು ಪ್ರಮುಖ ಕೃತಿಗಳನ್ನು ಓದುವ ಅವಕಾಶ ಪಡೆದುಕೊಂಡೆ. ಎಲ್ಲದಕ್ಕೂ ಭಗವಂತೆನೇ ಕಾರಣ, ಬದುಕಿನಲ್ಲಿ ಆದರ್ಶ- ಗುರಿಗಳೇ ಮುಖ್ಯ, ಅವುಗಳಿಗಾಗಿ ಮಾಡುವ ಸತತ ಪ್ರಯತ್ನ ಇವುಗಳನ್ನು ನಂಬಿದ್ದ ನಾನು ಇವುಗಳನ್ನೇ ಸಂಶೆಯದಿಂದ ನೋಡಲಿಕ್ಕೆ ಹತ್ತಿದೆ. ಆದರೆ ಹಿಂದಿನದನ್ನು ಬಿಡಲಾಗದೇ ಹೊಸಹಾದಿ ತಿಳಿಯದೇ ಒದ್ದಾಡಿ ಕಥೆ-ಕವನ ಗೀಚಲು ಶುರುಮಾಡಿದೆ. ಸಾಹಿತ್ಯಿಕ ಸ್ಪರ್ಧಗಳಲ್ಲಿ ಬಹುಮಾನ ಬಂದದ್ದರಿಂದ, ಹುಡುಗಿಯರ ಬಗೆಗೆ ಜೋಕು ಮಾಡದ್ದರಿಂದ, ಮೊದಲನೆಯ ವರ್ಷ ಚಲೋ ಮಾರ್ಕ್ಸ್ ಬಂದದ್ದಿರಿಂದ , `ಗಾಂಧಿ`;`ಕವಿ`, `ಪುಸ್ತಕದಾಗಿನ ಹುಳ` ಆದೆ. ಇಷ್ಟರೊಳಗಾಗಿ ಒಳಗಿನ ನಾನು, ಹೊರಗಿನ ನಾನು ಬೇರೆ ಬೇರೆಯಾಗಿದ್ದು ನನ್ನ ಗಮನಕ್ಕೆ ಬಂತು.

ಇಷ್ಟಲ್ಲದೇ ಅಪ್ಪ ಈಗೀಗ ರೊಕ್ಕ ವೇಳೆಗೆ ಸರಿಯಾಗಿ ಕಳಿಸುತ್ತಿಲ್ಲ (ಅಜ್ಜಿಯ ರೋಗ ಜಾಸ್ತಿಯಾಗಿದೆಯಂತೆ). ನನಗೆ ಇದಲ್ಲದರಿಂದ ಬೇಡುಗಡೆ ಬೇಕಾಗಿತ್ತು. ಆದರೆ ಆಧ್ಯಾತ್ಮದ ಜೀವಾತ್ಮ – ಪರಮಾತ್ಮ, ಸಾಹಿತ್ಯದ ಕಾಮ-ಸಾವು-ಅಹಂಗಳು ಒಂದಕ್ಕೊಂದು ಹೊಂದಲಾರದೇ ನಾನು ಅಂತರ್ಮುಖಿಯಾಗಹತ್ತಿದೆ. ಅಷ್ಟಲ್ಲದೇ ಅಮೆರಿಕದ ವಿದ್ಯಾರ್ಥಿಗಳಂತೆ ನಾನೇಕೆ ದುಡಿಯುತ್ತ ಕಲಿಯಬಾರದು? ಅಪ್ಪನಿಗೇಕೆ ಕಷ್ಟ ಕೊಡಬೇಕು ಎನಿಸಲು ಹತ್ತಿತು. ಹೀಗೆ ಇನ್ನೆಷ್ಟನ್ನೋ ತಲೆಯಲ್ಲಿ ತುಂಬಿಕೊಂಡು ನಾನು ನನ್ನನ್ನೇ ನೋಡಲು ಶುರುಮಾಡಿದಾಗ ರೂಪಾಕುಲಕರ್ಣಿ ಬರ್ತ್‌ಡೇ ಪಾರ್ಟಿಗೆ ಬಾ ಎಂದು ಆಹ್ಹಾನಿಸಿದ್ದಳು.

ಅದು ಆಗಸ್ಟ್ ತಿಂಗಳ ಕೊನೆ. ನನ್ನ ಕಿಸೆ ಪೂರ ಜಾಲಾಡಿಸಿದರೂ ಆರೇಳು ರೂಪಾಯಿ ಸಿಗಬಹುದಿತ್ತು. ರಾತ್ರಿ ಬಹಳ ಹೊತ್ತು ಓದುತ್ತ ಕುಳಿತಿದ್ದರಿಂದ ಮುಂಜಾನೆ ಎದ್ದಕೂಡಲೇ ತಲೆ ಚಿಟಿಚಿಟಿ ಎನಿಸಿ ಒಂದು ರೂಪಾಯಿ ಖರ್ಚು ಮಾಡಿ ಚಹಾ ಕುಡಿದೆ. ಕಾಲೇಜಿನಲ್ಲಿದ್ದಾಗ ರೂಪಕುಲಕರ್ಣಿ ಬರ್ತ್‌ಡೇ ಪಾರ್ಟಿಗೆ ಬರಲು ಆಹ್ವಾನವಿತ್ತಳು. ನಾನು ಸಬೂಬು ಹೇಳಿ ತಪ್ಪಿಸಿಕೊಳ್ಳಹೋದೆ. ಆದರೆ ಬಾಜು ನಿಂತ ಅರುಣ ನನ್ನ ಸತ್ತ್ವವನ್ನೇ ಕೆಣಕಿ ಜೋಕು ಹೊಡೆದು ಒಪ್ಪಿಸಿಬಿಟ್ಟ. ರೂಪಕುಲಕರ್ಣಿಗೆ ಪ್ರೆಸೆಂಟೇಶನ್ ತರಲು ಪ್ರತಿಯೊಬ್ಬ ಇಪ್ಪತ್ತು ರೂಪಾಯಿ ಹಾಕಬೇಕೆಂದು ಹೇಳಿದ. ನಾನು ಇಲ್ಲಿಯ ತನಕ ಯಾವುದೇ ಪಾರ್ಟಿಗೊ ಹೋದವನಲ್ಲ. ಅಲ್ಲದೆ ಇಪ್ಪತ್ತು ರೂಪಾಯಿ ಬೇರೆ ಕೊಡಬೇಕು. ತಲೆಕೆಟ್ಟು, ಖೋಲಿಗೆ ಬಂದೆ. ಮನಸ್ಸು ವಿಚಿತ್ರ ರೀತಿಯಲ್ಲಿ ತಳಮಳಿಸುತ್ತಿತ್ತು. ಆ ಭಾವಗಳನ್ನು ಶಬ್ದಮಾಡುವ ವ್ಯರ್ಥಪ್ರತಿಮೆಗಳನ್ನು ಹುಡುಕುತ್ತ ಕಾಗದದ ಮೇಲೆ ಗೀಚಿತ್ತ ಕೂತಿದ್ದೆ. ಆವಾಗಲೇ ಬಾಗಲಕೋಟೆಯಿಂದ ಮಗ್ಗಲ ಮನೆ ಬಿಂದಪ್ಪ ಬಂದ. ಅಪ್ಪ-ಅಮ್ಮ-ಅಜ್ಜಿ ಅರಾಮವೆಂದು ಕೇಳಿ ಅಪ್ಪನ ಚೀಟಿ ಕೊಟ್ಟಿದ್ದ. ಅಪ್ಪ ಆಶೀರ್ವಾದ ತಿಳಿಸಿ ಬರೆದಿದ್ದ, `ಮುಂದಿನ ತಿಂಗಳು ದುಡ್ಡು ಕಳಿಸಲು ಆಗುವುದಿಲ್ಲ. ಬಾಳು ಮಾಮಾಗೆ ಪತ್ರ ಹಾಕಿ ತರಿಸಿಕೊ,` ಅಂತ. ಬಿಂದಪ್ಪ ಉಂಡಿ-ಅವಲಕ್ಕಿ ಚೀಲ ಕೊಟ್ಟುಹೋದ. ನಾನು ಪೂರ ಕುಸಿದೆ. ನನಗೆ ಖೋಲಿಯಲ್ಲಿ ಕುಳಿತುಕೊಳ್ಳುವುದು ಸಾಧ್ಯವಾಗಲಿಲ್ಲ. ಅಂಗಿ-ಪ್ಯಾಂಟು ಹಾಕಿಕೊಂಡು ಬರ್ತ್‌ಡೇಗೆ ಹೋಗಲು ತಯಾರಿ ನಡೆಸಿದೆ.

ಪಾರ್ಟಿಯಲ್ಲಿ ಏನೇನು ನಡೆಯಿತು ಎಂದು ವಿವರವಾಗಿ ಹೇಳುವುದಿಲ್ಲ, ಏಕೆಂದರೆ ಅದನ್ನೆಲ್ಲ ಪಾರ್ಟಿಯಿಂದ ಬಂದಕೊಡಲೇ ಬರ್ತ್‌ಡೇ ಸಲುವಾಗಿ ಮನೆಯನ್ನು ಅಲಂಕರಿಸಿದ ರೀತಿ, ವಿದ್ಯುತ್ ಪ್ರಕಾಶ ಕುರಿತು ಬರೆದೆ. ಕೇಕೊಂದಕ್ಕೇ ಎರಡು ನೂರ ಐವತ್ತು ಎಂದು ರೂಪಾಕುಲಕರ್ಣಿ ಜಂಭ ಕೊಚ್ಚಿ ಕೊಂಡಿದ್ದನ್ನೊ ಬರೆದೆ. ಗೆಳೆಯರು ಗೆಳತಿಯರಿಗೆ ಇಂಪ್ರೆಶನ್ ಹೊಡೆಯಲು, ಗೆಳತಿಯರು ಗೆಳೆಯರು ಎದುರು ಡೌಲು ಬಡೆಯಲು ವ್ಯವಹರಿಸುತ್ತಿದ್ದ ಕ್ಷುದ್ರರೀತಿಯನ್ನು ಬರೆದೆ. ಪಾರ್ಟಿಗೆ 

ಬರದವರ ಬಗ್ಗೆ ಹೇಗೆ ಅಶ್ಲೀಲವಾಗಿ ಮಾತನಾಡಿ ಗೇಲಿ ಮಾಡುತ್ತಿದ್ದರು; ನಗು ಬರದಿದ್ದರೂ ಮನಃಪೂರ್ವಕವಾಗಿ ನಕ್ಕಂತೆ ಹೇಗೆ ಗೊಳ್ ಎಂದು ನಗುವಿನ ಸೋಗು ಹಾಕುತ್ತಿದ್ದರು; ಪೋಲಿ ಜೋಕುಗಳನ್ನು ಎಗ್ಗಿಲ್ಲದೇ ಹೇಳಿ ಹೇಗೆ ಸ್ಯಾಡಿಸ್ಟ್ ಖುಷಿ ತೆಗೆದುಕೊಂಡರು – ಎಂಬುದನ್ನೆಲ್ಲ ಗೀಚಿದೆ. ನಾನು ಬೆಳೆದ ರೀತಿ, ನನ್ನ ಮನೆಯ ಪರಿಸರ, ನನ್ನ ಮನಸ್ಸಿನ ರೀತಿ, ನನ್ನ ಹಣದ ಕೊರತೆ ಎಲ್ಲವನ್ನೂ ಬರೆದು, ಅಂಥ ಮನಃಸ್ಥಿತಿಯಲ್ಲಿದ್ದ ನನ್ನ ಮೇಲೆ ಪಾರ್ಟಿ ಮಾಡಿದ ಪರಿಣಾಮವನ್ನು ಬರೆದೆ. ಪಾರ್ಟಿ ಮಾಮೂಲಾಗೇ ಸಾಗಿದ್ದರೂ ಎಲ್ಲ ನನಗೆ ವಿಚಿತ್ರವಾಗಿ ಕಾಣಿಸುತ್ತಿರುವುದನ್ನು, ಹಾಗೆ ಕಾಣಿಸಲು ಕಾರಣವಾದ ನನ್ನ ಸಂಸ್ಕೃತಿಯನ್ನು, ಮನೆಯ ಧಾರ್ಮಿಕ ವಾಟವನದಲ್ಲಿ ಜಿಡ್ಡುಹಿಡಿದ ರೋಗದ ನಂಟನ್ನು, ಮಗನಿಗೆ ಕಳಿಸಲು ರೊಕ್ಕವಿರದಿದ್ದರೂ ಸಾಲ ಮಾಡಿಯಾದರೂ ಬ್ರಾಹ್ಮಣರನ್ನು ಕರೆದು ಊಟಹಾಕಿಸಿ ದಕ್ಷಿಣೆಕೊಡುವ ಅಪ್ಪನನ್ನು, ಕೈಯಿಂದ ಕುಂಡೆ ತೊಳೆದುಕೊಳ್ಳಲು ಬರದಿದ್ದರೂ, ಅಮ್ಮನ ಮೇಲೆ ದರ್ಪ ತೋರುವ ಅಜ್ಜಿಯನ್ನು, ಇದೆಲ್ಲವನ್ನು ಸಹಿಸಿಕೊಂಡು ತನ್ನ ರೋಗವನ್ನು ತುಟಿಕಚ್ಚಿ ಮುಚ್ಚಿಕೊಂಡು ಮಡಿಯೆಂದು ಬಡಿದುಕೊಳ್ಳುವ ಅವ್ವನನ್ನು ಕುರಿತು ಬರೆದೆ. ಹಾಗೆಯೇ ಪಾರ್ಟಿಯಲ್ಲಿ ರೂಪಾಳ ಅಪ್ಪ ದರ್ಪದಿಂದ ಹಲ್ಲು ಕಿರಿಯುತ್ತ ಓಡಾಡಿದ ರೀತಿಯನ್ನು ಬರೆದೆ. ಹಾಗೆಯೇ ನನ್ನನ್ನು ಪೂರ ಹುಚ್ಚ ನನ್ನಾಗಿಸುವ ಸನ್ನಾಹದಲ್ಲಿದ್ದ ‘ಪಿಕ್ ಆ್ಯಂಡ ಆ್ಯಕ್ಟಿ’ ನ ಎಲ್ಲ ಘಟನೆಗಳನ್ನು ಸವಿವರವಾಗಿ ಬರೆದೆ.

[ಒಂದೆರಡು ಸ್ಯಾಂಪಲ್ ಕೊಡುತ್ತೇನೆ;

೧. ಮಿಲಿಂದ ಚೀಟಿ ಎತ್ತುತ್ತಿದ್ದಾಗ ಒಂದರೆ ನಿಮಿಷದ ಮೌನ. ಚೀಟಿ ಒಡೆದವನೇ `ಹುರ್ರಾ,`; ಎಂದು ಕೆಟ್ಟದಾಗಿ ಅರಚಿ ಕುಣಿದಾಡಿದ. ಗಟ್ಟಿಯಾಗಿ ಓದಿದ: `Take Sulochana on double ride on your imaginary bicycle,.` ಎಂದು. ಸುಲೋಚನಾಳತ್ತ ತಿರುಗಿ ಇಂಗ್ಲಿಷಿನಲ್ಲೇ ಕೂಗಿಡಾ, `ಗಾಡ್ಸ್ ಮಸ್ಟ್ ಬಿ ಕ್ರೇಜಿ ಪಾರ್ಟ್ ಟು`ನಲ್ಲಿ ಇರುವಂತೆ ನಿನ್ನನ್ನು ಕೂಡಿಸಿ ಕೊಂಡು ರೈಡ್ ಮಾಡುತ್ತೇನೆ` ಎಂದು. ಸುಲೋಚನಾ ಸಿಟ್ಟಿನಿಂದ, ನಾಚಿಕೆಯಿಂದ ಕೆಂಪಾಗಿ, `ನೊ! ನೆವರ್!!`; ಎಂದು ಅರಚಿದಳು. ಎಲ್ಲರೂ ಆಕೆಯನ್ನು ಸುತ್ತುಗಟ್ಟಿ ಅರಚತೊಡಗಿದಾಗ ಆಕೆ ಮಣಿದು ಮಿಲಿಂದನ ಮುಂದೆ ಕುಳಿತಂತೆ ನಟನೆ ಮಾಡಿದಳು. ಆತ ಪೆಡಲ್ ತಿರಿಗಿಸುತ್ತಿರುವಂತೆ ಕಾಲು ತಿರುಗಿಸುತ್ತ ಆಕೆಯ ಹಿಂಭಾಗವನ್ನು ಕಾಲಿನಿಂದ ಒತ್ತುತ್ತಿದ್ದ, ಪ್ರತಿಸಾರಿ ಹಾಗೆ ಮಾಡಿದಾಗಲೂ ಎಲ್ಲರೂ ಹೋ ಎಂದು ಕೂಗಿ ಚಪ್ಪಾಳೆ ತಟ್ಟುತ್ತಿದ್ದರು. ಎಲ್ಲರನ್ನೂ ಝಾಡಿಸಿ ಒದೆಯಲೇ ಎನಿಸಿ ನಾನು ಥರಥರ ನಡುಗಿದೆ ಒಳಗೊಳಗೆ.

೨. “Select your partner and ask him/her for marriage”.ಗಂಡುಬೀರಿ ಮಾಲತಿ ಸರದಿಯದು ಟೀಶರ್ಟ್ ಮತ್ತು ಗಿಡ್ಡ ಸ್ಕರ್ಟ್ ಹಾಕಿಕೊಂಡಿದ್ದಳು. ಕೆದರಿದ ಕೂದಲನ್ನು ಆಲುಗಾಡಿಸುತ್ತ ನನ್ನ ಹೆಸರನ್ನೇ ಕೂಗಬೇಕೇ? ಸೋಫಾದಲ್ಲಿ ನೋಯುತ್ತಿದ್ದ ತಲೆ ಹಿಡಿದು ಕೊಂಡು ಕೂತ ನಾನು ತಣ್ಣಗಾದೆ ತುಟಿ ಮೇಲೆ ನಗೆ ಆಡಿಸಿಕೊಂಡು, `ಹೆ, ಹೆ! ಹೇ!!`, ಎಂದು ವಿಚಿತ್ರವಾಗಿ ಹಲ್ಲು ಬೀರಿದೆ. ಆಕೆ ಸ್ಟೈಲಾಗಿ ಬಳುಕುತ್ತ ಬಂದು ನಾಟಕೀಯವಾಗಿ, `ಪ್ರಿಯಾ, ನಾವಿಬ್ಬರೂ ಜನ್ಮ ಜನ್ಮಾಂತರದ ಪ್ರೇಮಿಗಳಲ್ಲವೆ?` ಎಂದು ವೈಯಾರ ಮಾಡಿ ನನ್ನ ಮುಂದೆ ಬಗ್ಗಿದಳು. ನಾನೊಮ್ಮೆ ಉಗುಳುನುಂಗಲು ಪ್ರಯತ್ನಿಸುತ್ತಿದ್ದಂತೆ ಆಕೆಯ ಮುಂದೆ ಜಾರಿದ ಟೀಶಾರ್ಟಿನೊಳಗಿಂದ ಎದೆಯ ಸೀಳು ಕಾಣಿಸಿ ಬೆವರಿಹೋದೆ. ಕಾಲು ನೆಲದಲ್ಲೇ ಸಿಕ್ಕಿಹೋದಂತೆ ಅನಿಸಿತು. ಆಕೆ, `ಪ್ರಾಣಕಾಂತಾ, ಈ ಜನ್ಮದಲ್ಲಿ ನಮ್ಮಮದುವೆ ಯಾವಾಗ?` ಎಂದು ಕಿಲಿಕಿಲಿ ನಕ್ಕಳು. ಎಲ್ಲರೂ ಚಪ್ಪಾಳೆ ತಟ್ಟಿ ಜೋರಾಗಿ ನಕ್ಕರು. ನಾನೂ ಹೇಗೊ ಸಾವರಿಸಿಕೊಂಡು ಜೋರಾಗಿ ಚಪ್ಪಾಳೆ ತಟ್ಟಿದೆ.]

ಹಾಗೆಯೇ ಪಾರ್ಟಿ ಮುಗಿಸಿಕೊಂಡು ಕೊಪ್ಪಿಕರ್ ರಸ್ತೆಯಲ್ಲಿ ರಾತ್ರಿ ಒಂಬತ್ತಕ್ಕೆ ಹೇಗೆ ಕಾಲಳೆಯುತ್ತ ದಿಕ್ಕು ತಪ್ಪಿದವನಂತೆ ಅಲೆದೆ ಎಂಬುದನ್ನು, ಅಂಗಡಿಯೊಂದನ್ನು ಹೊಕ್ಕು ಕೆಲಸ ಖಾಲಿ ಇದೆಯೇ ಎಂದು ಕೇಳಿ ಛೀಮಾರಿ ಹಾಕಿಸಿಕೊಂಡಿದ್ದನ್ನು ಬರೆದೆ. ಪಾರ್ಟಿಯ ವೈಭವ, ನನ್ನ ಖಾಲಿ ಕಿಸೆ (ಇನ್ನೂ ಆರು ರೂ. ಇತ್ತು) ಎಲ್ಲ ಒಟ್ಟಿಗೆ ಒಕ್ಕರಿಸಿ ಕೆಲಸ ಕೇಳುವಂತೆ ಮಾಡಿದ್ದವು. ಆಮೇಲೆ ಮುಂದೆ ಮೋಹನ ಟಾಕೀಜಿಗೆ ಬಂದಾಗ, ಕಿಸೆಯಲ್ಲಿ ಆರು ರೂಪಾಯಿ ನೆನಪಾಗಿ ಟಾಕೀಜಿನೊಳಗಡೆ ಹೋದುದನ್ನು ಯಾವುದೋ ಹೊಲಸು ಇಂಗ್ಲೀಶ್ ಚಿತ್ರ ಶುರುವಾಗಿ ಚುಂಬನಗಳು, ಅರೆಬೆತ್ತಲೆ, ಬೆತ್ತಲೆ ದೇಹಗಳು, ನರಳಾಟಗಳು ನನ್ನ ತಲೆ ಕೆಡಿಸಿದ್ದನ್ನು ಬರೆದೆ. ಅರ್ಧಸಿನಿಮಾಕ್ಕೇ ಎದ್ದು ತಲೆಕೆಟ್ಟಂತಾಗಿ ಹುಚ್ಚು ಹಿಡಿದವಂತೆ ಓದುತ್ತ ಹೋಸ್ಟೆಲಿಗೆ ಬಂದುದನ್ನು ಬರೆಯಲು ಕುಳಿತುದನ್ನು ಬರೆದು ಪೆನ್ನು ಮುಚ್ಚಿದೆ. 

ಬರೆದು ಮುಗಿಸಿದಾಗ ರಾತ್ರಿ ಹನ್ನೆರಡೂವರೆ, ಅಷ್ಟರಲ್ಲಿ ರೂಮ್ಮೇಟುಗಳಿಬ್ಬರೂ ಸಿನಿಮಾ ಮುಗಿಸಿಕೊಂಡು ಬಂದರು. ಸಟ್ಟನೆ ಬರೆದದ್ದನ್ನೆಲ್ಲ ಮುಚ್ಚಿಟ್ಟು ಮಲಗಿದಂತೆ ನಟನೆ ಮಾಡಿದೆ. ಮುಂಜಾನೆ ಎದ್ದ ಮೇಲೆ ಅವರಿಗೆ ಓದಲು ಕೊಡಬೇಕು ಎಂದುಕೊಂಡಿದ್ದವನಿಗೆ ಹಾಗೆ ಮಾಡಲು ಧ್ಯರ್ಯ ಸಾಲಲಿಲ್ಲ. ಸುಮಾರು ವಾರಗಳು ಕಳೆದರೂ ಅದನ್ನು ಯಾರಿಗೂ ತೋರಿಸಲಾಗದೇ ಒದ್ದಾಡುತ್ತಿದ್ದಾಗ ಪತ್ರಿಕೆಯೊಂದಕ್ಕೆ ಕಳಿಸಿದರೆ ಹೇಗೆ ಎನಿಸಿತು. ಹೆಸರುಗಳನ್ನು ಬದಲಾಯಿಸಿ ಬರೆದುದನ್ನೆಲ್ಲ ಕಾಪಿ ಮಾಡಿ ಕಳಿಸಿದೆ. ಡಿಸೆಂಬರಿನಲ್ಲಿ ಪ್ರಕಟವೂ ಆಯಿತು.

ಅಂದು ಸಂಜೆ ಪತ್ರಿಕೆಯನ್ನು ಹಿಡಿದಿಕೊಂಡು, ಖುಷಿಯಲ್ಲಿ ಓದುತ್ತಲೇ ಖೋಲಿಗೆ ಬಂದೆ. ನನಗೆ ವಿಪರೀತ ಸಂತೋಷವಾಗಿತ್ತು. ಮೊತ್ತ ಮೊದಲ ಕಥೆ ಮೊದಲ ಬಾರಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಖೋಲಿಗೆ ಬಂದೊಡನೇ `ಕೇಹುಹೊss,; ಎಂದು ಕೂಗಿ, ರೂಮ್ಮೇಟ್ ಮಾಧವ ಏನಾಯಿತೆಂದು ಆಶ್ಚರ್ಯದಿಂದ ನೋಡುತ್ತಿರುವಂತೆಯೇ, ನನ್ನ ಕಥೆ ಛಾಪಿಸಿದ ವಿಷಯ ತಿಳಿಸಿ, ಪತ್ರಿಕೆ ಅವನ ಕೈಗೆ ಕೊಟ್ಟೆ. ಆತ ಅಭಿನಂದನೆ ಸಲ್ಲಿಸಿ, `ಪಾರ್ಟಿ ಯಾವಾಗ?` ಎಂದ. `ಕೊಡೊನಲ್ಲ, ಅದಕ್ಕೇನು?`; ಎಂದೆ. ಅಷ್ಟರಲ್ಲಿ ನನ್ನ ಆವಾಜ ಕೇಳಿ ಬಾಜು ಖೋಲಿ ಶಿವರಾಮ (ಆತ ಸಾಹಿತ್ಯದ ಬಗ್ಗೆ ಮುರನಾಲ್ಕು ತಾಸು ಕೊರೆಯುತ್ತಾನೆ) ಬಂದು ನನ್ನನ್ನು ಬಿಗಿದಪ್ಪಿಕೊಂಡ. ಆತ ಖುಷಿಯಲ್ಲಿದ್ದುದನ್ನು ಆತನ ಕಣ್ಣುಗಳೇ ಹೇಳುತ್ತಿದ್ದವು. ಆತ ನನ್ನ ಕೈಹಿಡಿದು ಕುಳಿತುಕೊಂಡ. ಆತ ಆ ಕಥೆಯಿಂದ ನನಗೇ ಗೊತ್ತಿರದ ಎಷ್ಟೆಷ್ಟೋ ವಿಷಯಗಳನ್ನು ಹೆಕ್ಕಿ ವಿವರಿಸತೊಡಗಿದ. ಆಧುನಿಕತೆಯ ಅಟ್ಟಹಾಸದಲ್ಲಿ ಸಂಪ್ರದಾಯಸ್ಥ ಧಾಮಿ೯ಕ ನಂಬಿಕೆಗಳು ಅರ್ಥಕಳೆದುಕೊಳ್ಳುತ್ತಿರಿವುದನ್ನು. ವ್ಯಕ್ತಿ ಅಂಥ ತ್ರಿಶಂಕು ಸ್ಥಿತಿಯಲ್ಲಿದ್ದಾಗಿನ ಭಾವನೆಗಳನ್ನು ರಿಯಲಿಸ್ಟಿಕ್ ಅಗಿ ಬರೆದು ಕಥೆಗೆ ಧಾಮಿ೯ಕ ತಳಹದಿ ಬಂದಿದೆ ಎಂದ. ರೂಪಾ ಕುಲಕಣಿ೯ಯ ಅಪ್ಪ ರೋಟರಿಕ್ಲಬ್ಬಿನ ಮುಖ್ಯ ಸದಸ್ಯನಾಗಿರುವುದರಿಂದ ಮತ್ತು ಕಾಂಗ್ರೆಸ್ಸಿನಲ್ಲಿ ಬಹಳ ಓಡಾಡುವುದರಿಂದ ಅತ ಪಾರ್ಟಿಯಲ್ಲಿ ಆಡಿದ ಮಾತುಗಳು ಕಥೆಗೆ ರಾಜಕೀಯ ಬಣ್ಡ ತಂದಿದೆ ಎಂದ. ಆರ್ಥಿಕಸ್ಥಿತಿ ಮನುಷ್ಯನ ಭಾವನೆಗಳಲ್ಲಿ ಹೇಗೆ ಬದಲಾವಣೆ ತರುತ್ತದೆ; ಭಾರತ ಪಾಶ್ಚಾತ್ಯೀಕರಣದತ್ತ ವಾಲಿರುವಾಗ ಹೇಗೆ ತುಮುಲವೆಳುತ್ತದೆ; ಹದಿನೆಂಟು ವರ್ಷಗಳಿಂದ ಬ್ರಾಹ್ಮಣ್ಯದಲ್ಲಿ ಬಂಧಿತನಾದ ವ್ಯಕ್ತಿ ಬಿಡುಗಡೆ ಹೊಂದಿದಾಗ ಹೇಗೆ ಕಾಮಜಾಗೃತಿ ಉಂಟಾಗುತ್ತದೆ ಎಂಬುದು ಕಥೆಯಲ್ಲಿ ಬಂದಿರುವುದನ್ನು ವಿವರಿಸಿದ. ಮುಂದಿನ ಬರವಣಿಗೆಯನ್ನು ಹೇಗೆ ತಿದ್ದಿಕೊಳ್ಳಬೇಕು, ಪ್ರತಿಮೆಗಳನ್ನು 

ಸಹಜವೆನ್ನುವಂತೆ ಪ್ರಯತ್ನಪೂವ೯ಕವಾಗಿ ತುರುಕಿ ಕಥೆಯ ಹರಹನ್ನು ಹೇಗೆ ಹಿಗ್ಗಿಸಬೇಕು (ಉದಾ: ರೂಪಾ ಕುಲಕರ್ಣಿಯ ಬರ್ತ್‌ಡೇ ದಿನವೇ ಕಥಾನಾಯಕನ ಬತ್೯ಡೇ ಇರುವುದು) ಎಂಬುದನ್ನು ಹೇಳಿದ. ನನ್ನಲ್ಲಿ ನಾನು ಉಬ್ಬಿಹೋದೆ. ಕಂಡವರಿಗೆಲ್ಲ ಸುದ್ದಿಹೇಳುತ್ತ ಸಾಗಿದೆ. ರಾತ್ರಿ ಚಾದರ ಹೊದ್ದು ಮಲಗಿಕೊರಿಡೇ ಕಥೆ ಓದಿದೆ. ಅವೇ ಪಾತ್ರಗಳು. ಹೆಸರುಗಳು ಮಾತ್ರ ಬೇರೆ . ಅವೇ ಘಟನೆಗಳು. ಸಮಾಧಾನವೆನಿಸಿ ಚಾದರ ಎಳೆದು ಮುಸುಕು ಹಾಕಿಕೊಂಡು ಕನಸು ಕಾಣತೊಡಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಹೆಸರು. ಚಿತ್ತಾರದ ನಂತರ ಕನ್ನಡದಲ್ಲಿ ಕಾಣಿಸಿಕೊಂಡ ಹೊಸ ಪ್ರತಿಭೆ ಎಂದೆಲ್ಲ. 

ಕದ ತಟ್ಟಿದ ಆವಾಜಿನಿಂದ ಎಚ್ಚರವಾದಾಗ ಇನ್ನೂ ಮಧ್ಯರಾತ್ರಿ. ಕತ್ತಲಲ್ಲಿ ಬಾಗಿಲು ತೆರೆಯುತ್ತಲೇ ಓರ್ವ ವೈಕ್ತಿ. ನನ್ನನ್ನು ತಳ್ಳಿಕೊಂಡೇ ಒಳಗೆ ಬಂದು ಕದ ಹಾಕಿದ್ಧೇ ಫಟೀರ್ ಎ೦ದು ಕಪಾಳಕ್ಕೆ ಹೊಡೆಯಿತು. ನಾನು ಏನಾಗುತ್ತಿದೆ ಎಂದುಕೊಳ್ಳುವಷ್ಪರಲ್ಲಿ ಪಕಡಿಗೆ ಇನ್ನೊಂದು ಹೊಡೆತ ಬಿತ್ತು. ‘ಅವ್ವಾSS’ ಎ೦ದು ಚೀರಿ ಕೆಳಕ್ಕೆ ಬಿದ್ಧೆ. ರೂಮ್ ಮೇಟುಗಳಿಗೆ ಎಚ್ಚರವಾಗಿ ಲೈಟು ಹಚ್ಚಿದರು. ಎದುರಿಗೆ ಮಿಲಿಂದ ನಿಂತಿದ್ದ. ಕಾಲರ್ ಹಿಡಿದು ಎತ್ತಿದವನೇ, `ಬಡ್ದಿಮಗನೇ. ನನ್ನ ಬಗ್ಗೆ ಕಥೇನಲ್ಲಿ ಬರೀತೀಯಾ? ನಾನು ಬಾರ್‌ಗೆ ಹೋಗ್ತೇನೆ. ಸಿಗರೇಟು ಸೇದ್ತೇನೆ ಎಂದು ಬರೀತೀಯಾ? ಬಿಎಫ್ ನೋಡ್ತೇನೆ ಅಂತೀಯಾ?`. ಪ್ರತಿ ಪ್ರಶ್ನೆಗೂ ಒ೦ದೊ೦ದು ಹೊಡೆತ. ಒದೆತ ಕೊಡುತ್ತಿದ್ದ. ರೂಮ್ ಮೇಟುಗಳಿಬ್ಬರೂ ಕಷ್ಟದಿಂದ ಬಿಡಿಸಿ ನಡೆದದ್ಧಾದರೂ ಏನೆಂದು ಕೇಳಿದರು.& `ನನ್ನನ್ನೇನು ಕೇಳ್ತೀಯಾ ಗುರು? ಕೇಳು ಈ ಸೂಳೆಮಗನ್ನ,` ಎಂದ. ಮಿಲಿಂದ ಕಾವ್ಯಾಳನ್ನು ಲವ್ ಮಾಡುತ್ತಿರಿವುದನ್ನು ಬರೆದಿದ್ದೆ. ಅವಳನ್ನು ಮೆಚ್ಚಿಸಲು ಪಾರ್ಟಿಯಲ್ಲಿನ ಅವನ ಧರ್ತಿ ಬಗ್ಗೆ ಬರೆದಿದ್ದೆ. ಅವಳನ್ನು ಅತ ಸಂಜೆ ಮಾತನಾಡಿಸಲು ಹೋದಾಗ (ಇಬ್ಬರೂ ಒ೦ದೇ ಊರಿನವರು) ನಾನು ಬರೆದ ಕಥೆ ವಿಷಯ ಹೇಳಿ ಛೀಮಾರಿ ಹಾಕಿ ಕಳಿಸಿದಳೆಂದು ಮಿಲಿಂದ ಕಿರುಚಾಡಿದ. ನಾನು `ಸಾರಿ`, ಎಂದು ಹಲುಬಿ ಆತನನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಯಿತು.

ಮುಂಜಾನೆ ಎದ್ದಾಗ ಇನ್ನೂ ಹೊಟ್ಟೆ ನೋಯುತ್ತಿತ್ತು ತಲೆ ತುಂಬ ಕಥೆಯ ಪಾತ್ರಗಳು ಒದೆಯುತ್ತಿದ್ದವು. ಕಾಲೇಜಿನಲ್ಲಿ ಕೆಲವರು ಕಂಗ್ರಾಟ್ಸ್ ಹೇಳಿದರು. ಕೆಲವರು ನನ್ನನ್ನು ಹೊಸ ವಿಚಿತ್ರವಾಗಿ ದಿಟ್ಟಿಸಿದರು. ನನ್ನ ಕಥೆ ಛಾಪಿಸಲ್ಪಟ್ವ ಸುದ್ದಿ ಬಹಳ ವೇಗವಾಗಿ ಹಬ್ಬಿತ್ತು. ನನಗೆ ಪಿರಿಯಡ್ನಲ್ಲಿ ಕೂಡಲಾಗದೇ ಗಂಗಾಮಾ೦ಶಿ ಮನೆಗಾದರೂ ಹೋಗೋಣವೆಂದು ಬಸ್ ಸ್ಟಾಪಿಗೆ ಬಂದೆ. ಎದುರಿನಲ್ಲಿ ಮಾಲತಿ ನಾಕಾರು ಗೆಳತಿಯ ರೊ೦ದಿಗೆ ನನ್ನ ಕಡೆಗೇ

ಬಂದಳು. ನನ್ನ ಬನಿಯನ್ನೆಲ್ಲ ಹಸಿಯಾಯಿತು. ಬಂದವಳೇ ಇರಿಗ್ಲಿಷಿನಲ್ಲಿ ನನ್ನನ್ನು ತರಾಟೆಗೆ ತೆಗೆದುಕೊರಿಡಳು. ಅವಳ ಟೀಶಟ್೯ ಒಳಗೆ ಇಣುಕಿರುವುದನ್ನು ಬರೆದಿರುವುದನ್ನು ಹೀನಾಯವಾಗಿ ಬಯ್ದು (ಇಣುಕಿದರೆ ತಪ್ಪಿಲ್ಲವಂತೆ, ಬರೆಯಬಾರದಂತೆ), ನನ್ನನ್ನು ಕಾಗದದ ಕಾಮುಕ ಎಂದರಚಿ, ಸ್ಯಾಡಿಸ್; ಎಂದು ಬಿರುದು ಕೊಟ್ಟಳು. ನಾನು ಹತ್ತು ಸರ್ತಿಯಾದರೂ ಸಾರಿ ಎಂದಿರಬಹುದು. ಅಂತಹುದರಲ್ಲಿ ಅರುಣ, ವೆಂಕಟೇಶ ರಾಜು, ಧಾರವಾಡಕರ್. ಶೆಟ್ವ. ಪ್ರಕಾಶ್ ತ್ರಿವೇದಿ ಬಂದು ಸೇರಿಕೊಂಡರು. ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ ಬಯ್ಡರು,`ಕಾಮಣಿ ಅದವರಿಗೆ ಜಗತ್ತೆಲ್ಲಾ ಹಳದಿ`, `ಥತ್ ತೇರಿಕೇ, ನೀ ಯಾವ್ ಗಾ೦ಧಿ ಲೇ, ರಾತ್ರಿ ಚೂಡಿದ ಇಂಗ್ಲಿಷ್ ಸಿನಿಮಾ ಹೇಗಿತ್ತೋ”, “ಕಿಸೆನ್ಯಾಗ ನಾಕ ಪೈಸಾ ಇರಲಿಕ್ರೂ ಗೋಮಾಜಿಕಾಪ್ಸೆನ ಗತೆ ಹೆ೦ಗ ನಿಂತಾನ ನೋಡ್ರ್ಯೋs” ಎಲ್ಲ ಚುಚ್ಚುತ್ತಿದ್ಡವು. ನಾನು ಪೂರ ತತ್ತರಿಸಿ ಹೋದೆ. ಎಲ್ಲರೂ ತಾವು ಎಷ್ಟು ಒಳ್ಳೆಯವರು ಎಂದು ಉದಾಹರಣೆ ಸಮೇತ ಸಿದ್ಬಮಾಡಿದರು. ನಾನೊಬ್ಬನೇ ಈ ಸಮಾಜದಲ್ಲಿ ಕೊಳೆತು ನಾರುತ್ತಿರುವವ ಎಂದು ಹಂಗಿಸಿದರು. ರೂಪಾ ಕುಲಕರ್ಣಿ ಶ್ರೀಮಂತಳಾದರೂ ಆಕೆಗೆ ಸೊಕ್ಕಿಲ್ಲದಿದ್ದೂರಿಂದಲೇ 

ನನ್ನಂಥವನನ್ನೂ ಪಾರ್ಟಿಗೆ ಕರೆದಳು ಎಂದರು. ಆಕೆಗೆ ನನ್ನ ಕಥೆಯ ವಿಷಯ ತಿಳಿದು ಮನಸ್ಸಿಗೆ ಬೇಸರವಾಗಿಯೇ ಕಾಲೇಜಿಗೆ ಬಂದಿಲ್ಲವೆಂದು ಹೇಳಿ. ಪಾಪ. ಆಕೆ ಎಷ್ಟು ನೊಂದುಕೊಂಡಿರುವಳೋ ಎಂದು ಕನಿಕರ ವ್ಯಕ್ತಪಡಿಸಿದರು. ಅಷ್ಟರಲ್ಲಿ ರೂಮ್-ಮೇಟ್ ಮಾಧವ. ದೀಪಕ. ಬಾಜು ಖೋಲಿ ಶಿವರಾಮ ಬಂದಾಗಲೇ ನನಗೆ ಇವರಿಂದ ಬಿಡುಗಡೆ ಸಿಕ್ಕಿತು. ನನ್ನನ್ನು ಗಾಢ ಮೌನ ಆವರಿಸಿತ್ತು. ಮೂವರೂ ಖುಷಿಯಲ್ಲಿ ಜೋಕು ಹೂಡಯುತ್ತ ಪಾರ್ಟಿಗೆ ದು೦ಬಾಲು ಬಿದ್ದರು. ಬಸ್ಸು ಬಂದಾಗ ಹತ್ತಿ ‘ಐಸ್‍ಲ್ಯಾಂಡಿ’ಗೆ ಹೋಗಿ ಎರಡು ತಾಸು ಕೂತು ತಿಂದು. `ಹಿ೦ಗs ಮ್ಯಾಲಿಂದ ಮ್ಯಾಲೆ ಕತೀ ಬರಿ. ಪಾರ್ಟಿ ಮೇಲೆ ಪಾರ್ಟಿ’ ಎಂದು ಹೇಳಿ. ಕಂಗ್ರಾಟ್ಸ್; ಹೇಳಿದರು. ನೂರಾಹದಿನೈದು ರೂಪಾಯಿ ಬಿಲ್ಲು ತೆತ್ತು ಖಾಲಿ ಕಿಸೆ ಹೊತ್ತು ಖೋಲಿಗೆ ಬಂದಾಗ. ಜೀವನದಲ್ಲಿ ಎಲ್ಲ ಖಾಲಿ ಖಾಲಿ ಎನಿಸಿ ಹಾಸಿಗೆ ಮೇಲೆ ಬಿದ್ಧುಬಿಟ್ಟೆ. 

ಎದ್ದಾಗ ಚಲೋ ಬಿಸಿಲು ಏರಿ ಕಿಟಕಿಯಿಂದ ಸೀದಾ ನನ್ನ ಮಾರಿಗೇ ಬಡಿಯುತ್ತಿತ್ತು. ಸ೦ಡಾಸಕ್ಕೆ ಹೋಗಿ ಬರುವುದರೊಳಗಾಗಿ ಮತ್ತೊoದು ಆಕಸ್ಮಿಕ ನನ್ನನ್ನು ಕಾದಿತ್ತು. `Grandmother Serious; start immediately` ಟೆಲಿಗ್ರಾಂ. ನಾನಾಗಲೇ ಯೋಚನೆ ಮಾಡುವ ಸ್ಥಿತಿಯನ್ನು ಮೀರಿ ಬಿಟ್ಟಿದ್ದೆ, ಶೂನ್ಯ ಮನಸ್ಸಿನಿಂದ ಬಾಗಲಕೋಟೆ ಬಸ್ಸುಹಿಡಿದೆ.

ಮನೆಯೊಳಗೆ ಹೆಜ್ಜೆ ಇಡುತ್ತಿದ್ದಂತೆ ಕಿಟ್ಟಕ್ಕತ್ಯಾ ನನ್ನನ್ನು ನೋಡಿ ಅಳಲು ಆರಂಭಿಸಿದಳು. ಅಪ್ಪನ ಜೊತೆ ಹೊಲದ ವಿಷಯದಲ್ಲಿ. ಅಜ್ಜಿಯಿಂದ ಆಭರಣ ಕಿತ್ತುಕೊಂಡ ವಿಷಯದಲ್ಲಿ ಜಗಳಾಡಿದ ವೆಂಕುಕಾಕಾ ಎಂದೂ ಹಣಿಕಿ ಹಾಕದಿದ್ದವ ಮೂಲೆಹಿಡಿದು ಬಾಯಿಗೆ ಅಡ್ಡ ಪಂಜೆ ಹಿಡಿದುಕೊಂಡು. ಕಣ್ಣುತುಂಬಿಕೊಂಡು ಕೂತಿದ್ದ. ಅಪ್ಪ ಸ್ಥಿತಪ್ರಜ್ಞನಂತೆ ಮೌನದರಿಸಿದ್ದ. ಅವ್ವ ಗರಬಡಿದವಳಂತೆ ಅಧೀರಳಾಗಿ ನಿಂತಿದ್ದಳು. ಅಜ್ಜಿಗೆ ಬಿಪಿ ಸಿಕ್ಕಾಪಟ್ಟೆ ಜಾಸ್ತಿಯಾಗಿ ಮತ್ತೆ ಲಕ್ವಾ ಹೊಡೆಯಿತಂತೆ. ಅನಂತರ ಎರಡು ದಿನಗಳಲ್ಲಿ ಮಿದುಳಿನಲ್ಲಿ ರಕ್ತಸ್ರಾವವಾಯಿತಂತೆ. ಸಾಯುವುದಕ್ಕೆ ಮುಂಚೆ ಅಜ್ಜಿ ನನ್ನನ್ನು ಸನ್ನೆಮಾಡಿ ಕೇಳಿದಳಂತೆ. ಕಿಟ್ಟಕ್ಕತ್ಯಾ ಎಲ್ಲವನ್ನು ಅಳುತ್ತಲೇ ಹೇಳಿದಳು. ಅವ್ವನನ್ನು ಹಿಡಿದುಕೊಂಡಾಗ ಆಕೆ ನನ್ನ ತಲೆಬಳಸಿ ಆಳತೊಡಗಿದಳು. ಅಪ್ಪ ಒ೦ದು ಹನಿ ಕಣ್ಣೀರು ಹಾಕದೇ 

ಚಟ್ವದ ಸಿದ್ದತೆಯಲ್ಲಿ ತೊಡಗಿದ್ದ. ನಾನು ಕಥೆಯಲ್ಲಿ ನನ್ನ ಅಜ್ಜಿ ತೋರಿದ ದಪ೯ವಮ್ನ. ತನಗೆ ಲಕ್ವಾ ಹೊಡೆದಿದ್ದರೂ ಕ್ಯಾನ್ಸರಿನಿಂದ ಬಳಲುತ್ತಿರುವ ಅವ್ವನನ್ನು ಮಡಿಯ ಸಲುವಾಗಿ ದುಡಿಸಿಕೊಳ್ಳುತ್ತಿರುವ ಹೊಲಸು ಧಮಾ೯ಚರಣೆಯನ್ನು ಬರೆದದ್ದು ಈಗ ಅದು ಆಥ೯ ಕಳೆದುಕೊಂಡು ನನ್ನ ಮು೦ದೆ ನೇತಾಡತೊಡಗಿದಂತೆ ಈಗ ಅನ್ನಿಸುತ್ತಿದೆ. ಅಜ್ಜಿ ನಾನು ಬರೆದ ಕಥೆಯನ್ನು ಓದಿದ್ದರೆ ಸಾಯುವಾಗ ನನ್ನನ್ನು ನೋಡಲು ಹಾತೊರೆಯುತ್ತಿದ್ದಳೇ ಎಂಬ ಪ್ರಶ್ನೆ ಈಗ ನಿಲ್ಲುತ್ತಿದೆ. ಎದ್ದಾಗಿನಿಂದ ಹಾಸಿಗಗೆ, ಹೋಗುವವರೆಗೆ (ಒಮ್ಮೊಮ್ಮೆ ಮಲಗಿದ ಅನಂತರವೂ) ಕಾಟ ಕೊಟ್ಟ ಅತ್ತೆ ಸತ್ತಿದ್ದಕ್ಕಾಗಿ ಅಮ್ಮ ಬಿಕ್ಕಿ ಬಿಕ್ಮಿ ರೋದಿಸುತ್ತಿದ್ದಳು. ಅತ್ತೆ-ಸೊಸೆ ಸಂಬಂಧ ನಾನು ಊಹಿಸಿ ಬರೆದುದಕ್ಕಿಂತ ಭಿನ್ನವಾಗಿತ್ತೇ ಎಂದೀಗ ಭೀತನಾಗಿದ್ದೇನೆ.

ಎರಡು ದಿನ ಕಳೆಯುವಷ್ಟರಲ್ಲಿ ಎಲ್ಲರ ದುಃಖ ಎಷ್ಟೋ ಕಡಿಮೆಯಾಗಿತ್ತು. ವೆಂಕುಕಾಕಾ ಚುಟ್ಟಾ ಸೇದುತ್ತ ಪತ್ರಿಕೆ ಓದುತ್ತ ಕುಳಿತಿದ್ದ. ನನ್ನ ಕಥೆ ಅದರಲ್ಲೇ ಪ್ರಕಟವಾಗಿತ್ತು. ನನ್ನೆದೆ ಧಸಕ್ಕೆಂದಿತು. ಅದೇ ವೇಳೆಗೆ ವೆಂಕುಕಾಕಾ ಮಾರಿ ಇಷ್ಟಗಲ ಮಾಡಿ ನನ್ನನ್ನು ಕೂಗಿಯೇ ಬಿಟ್ಟ. “ಏನೋ ? ಈ ಕತೀ ನೀನ ಬರೆದದ್ದು ಹೌದಲ್ಲೋ ?”; ಎಂದು. ಹೌದೆಂದೆ. ಕಾಕು, ಕಿತ್ತಕ್ಕತ್ಯಾ, ಅಪ್ಪ, ಅವ್ವ, ಸುತ್ತಲಿದ್ದ ಎಲ್ಲರನ್ನೂ ವೆಂಕುಕಾಕಾ ಕೂಗಿ ಸುದ್ದಿ ಹೇಳಿದ. ದುಃಖದ ವಾತಾವರಣದಲ್ಲಿ ಸ್ವಲ್ಪ ಸಂತೋಷದ ಗಾಳಿ ಸೇರಿಕೊಂಡಂತೆ ಆಯಿತು. ಅವ್ವ, `ಏನೂಂತ ಬರೆದೀಯೋ?” ಎಂದಳು. `ನನ್ನೇನ ಕೇಳ್ತಿ? ಕತಿ ಓದಲಾ`, ಎಂದೆ. ನಾನು ಏನೆಂದು ಬರೆದಿದ್ದೇನೆ ಎನ್ನಬೇಕಿತ್ತು ಎಂದು ತೋಚದೇ ಹಾಗೆ ಹೇಳಿದೆ. ವೆಂಕುಕಾಕಾ ಜೋರಾಗಿಯೇ ಎಲ್ಲರೂ ಆತನನ್ನು ಸುತ್ತುವರಿದು ಕೂತಾಗ ಓದತೊಡಗಿದ, `ಕತಿ ಹೆಸರು: ರೂಪಾಕುಲಕರ್ಣಿ ಬರ್ತ್‌ಡೇ ಪಾರ್ಟಿ`. ಎಲ್ಲರೂ ಲಕ್ಷ್ಯಕೊಟ್ಟು ಕೇಳುತ್ತಿದ್ದರು. ನನಗೆ ಅಲ್ಲಿ ನಿಂತುಕೊಳ್ಳಲಾಗಲಿಲ್ಲ. ಎದ್ದು ಅಟ್ಟದ ಮೇಲೆ ಹೋದೆ. ನನ್ನೆದೆ ಡವಡವ ಹೊಡೆದುಕೊಳ್ಳುತ್ತಿತ್ತು. ದಿನಪೂರ್ತಿ ಮಡಿಯೆಂದು ಸಾಯುತ್ತ ಪಾರ್ಸಿ ಹೊಡೆದು ನಾರುತ್ತಿರುವ ಅಜ್ಜಿ, ಧರ್ಮವೆಂದು ಹಲುಬಿ ಕಣ್ಣೀರಿನಲ್ಲಿ ಅವ್ವನನ್ನು ನೆನೆಸುವ ಅಪ್ಪ, ತನೆಗೆ ಕ್ಯಾನಸರಾಗಿದ್ದರು ನಾಯಿಯಂತೆ ದುಡಿಯುವ ಅವ್ವ. ಮನೆಯ ಇಷ್ಟೆಲ್ಲ ತೊಂದರೆ ಗೊತ್ತಿದ್ದೂ ರೊಕ್ಕದ ಸಲುವಾಗಿ ಕೌರವರಂತೆ ಜಗಳಾಡಿ ದೂರವಾದ ಕಾಕಾ-ಎಲ್ಲವನ್ನೂ ಕಾಕಾ ಓದುತ್ತಿದ್ದ. ನಾನು ಮಾಲತಿಯ ಟೀಶರ್ಟ್ ಒಳಗೆ ಇಣುಕಿರುವುದನ್ನು ಎರಡೆರಡು ಸಲ ಓದಿದ. ಅವ್ವ ಅಳುತ್ತಿರುವುದು ಕೇಳಿಸಿತು. ಅಪ್ಪ ಅರಚತೊಡಗಿದ. `ಅಂವ ಬಂದರ ಬರ್ಲಿ. ಓದ್ಲಿಕ್ಕೆ ಅಂತ ಹುಬ್ಬಳ್ಳಿಗೆ ಕಳಿಸಿದ್ರ ನಮ್ಮ ಪಿಂಡಾ ಕಟ್ತಾನ ನಿನ್ನ ಮಗ`. ನಾನು ಅಟ್ಟದಲ್ಲಿ ಮಲಗಿಕೊಂಡಂತೆ ನಟಿಸುತ್ತಿದ್ದೆ. ಅಷ್ಟರಲ್ಲಿ ಪುಟ್ಟಿ (ವೆಂಕುಕಾಕಾನ ಆರು ವರ್ಷದ ಮಗಳು) ಅಟ್ಟದ ಮೇಲೆ ಬಂದು, ನನ್ನನ್ನು ನೋಡಿದವಳೇ, `ಇಂವ ಇಲ್ಲೇ ಮಲಗ್ಯಾನ, ನೋಡ ಬಾ`; ಎಂದಳು. ನನ್ನ ಸಿಟ್ಟು ನೆತ್ತಿಗೇರಿ ಎರಡು ಕೊಟ್ಟೆ, ಅವಳು ಜೋರು ದನಿ ತೆಗೆದು ಅಳತೊಡಗಿದಳು. ನಾನು ಅವಳನ್ನು ಎತ್ತಿಕೊಂಡವನೇ ಕೆಳಗಿಳಿದು ಬಂದುಬಿಟ್ಟೆ. 

ಅವ್ವ ಮೂಗಿಗೆ ಸೆರಗು ಮುಚ್ಚಿಕೊಂಡು ಅಳುತ್ತಿದ್ದಳು. ವೆಂಕುಕಾಕಾ ದುರುಗುಟ್ಟಿಕೊಂಡು ನನ್ನನ್ನೇ ನೋಡಿತ್ತಿದ್ದ. ಪುಟ್ಟಿ ಒಮ್ಮೆಲೇ ಅಳು ನಿಲ್ಲಿಸಿದಾಗ ಎಲ್ಲ ನಿಶಬ್ದವಾಯಿತು. ನಾನು ಗಪ್ಪು ನಿಂತಿದ್ದೆ. ಅಪ್ಪ ಪತ್ರಿಕೆಯನ್ನು ಮಾರಿಯ ಮೇಲೆ ಬೀಸಿ ಒಗೆದು, `ಬರೀಪಾ, ಇನ್ನೂ ಏನೇನ ಬರೆದು ಎಲ್ಲರ ಮಾನ ಹರಾಜು ಹಾಕಬೇಕಂತೀ ಹಾಕಿಬಿಡು,` ಎಂದ. ನಾನು ಬಗ್ಗಿ ಪತ್ರಿಕೆಯನ್ನೆತ್ತಿಕೊಂಡು ಗಟ್ಟಿಯಾಗಿ ಹಿಡಿದು ಕೊಂಡೆ. `ನಿಂಗ ರೊಕ್ಕ ಕಡಿಮೇಬಿದ್ರ ಕಾಗದ ಬರ್ದು ತಿಳ್ಸೊ. ಕತಿ ಒಳಗ ಬರ್ದು ಯಾಕ ನಮ್ಮನಿ ರಂದಿ ಎಲ್ಲಾ ಹೊರಗ ಚೆಲ್ತಿ?` ಎಂದು ಅವ್ವ ಗಳಗಳನೇ ಅಳಲು ಶುರು ಮಾಡಿದಳು. ಅಪ್ಪ ಅವ್ವನತ್ತ ಸಿಟ್ಟಿನಿಂದ ತಿರುಗಿ, `ಅಂವಗೆಲ್ಲಿ ರೊಕ್ಕ ಕಡಿಮಿ ಬೀಳ್ತಾವ? ತಿಂಗಳ ಕಡೀ ಆಖ್ಯರಿದ್ರೂ ಇಂಗ್ಲೀಷ್ ಸಿನಿಮಾ ನೋಡ್ತಾನ, ಅದೂ ಹೊಲಸ,` ಎಂದು ಬಯ್ದು, `ಎಂಥಾ ಮಗನ್ನ ಹಾಡದ್ಯ? ನಮ್ಮನಿ ಗೋಪುರಕ್ಕ ಕಳಸಾ ಇಡ್ತಾನ,` ಎಂದು, ನನ್ನತ್ತತಿರುಗಿ, `ಏ ರಂಡೆಗಂಡ, ಹೆತ್ತ ಹೊಟ್ಟಿಗಿ ಬೆಂಕಿ ಹಾಕ್ಲಿಕ್ಕ ಯಾಕ ಹುಟ್ಟಿದ್ಯೋ? ಹೋಗ, ಯಾವಕಿದರ ಅಂಗಿ ಒಳಗ ಹಣಿಕಿ ಹಾಕಹೋಗ, ಯಾವ್ದಾರ ಇಂಗ್ಲೀಷ್ ಸಿನಿಮಾ ನೋಡ ಹೋಗ,` ಎಂದು ರಭಸದಿಂದ ನನ್ನತ್ತ ಬಂದು, ಹಲ್ಲನ್ನು ಕಟಕಟನೇ ಕಡಿದು, `ಸಾಯ್, ಹಾಳಾಗು, ಎಲ್ಲೆರೆ ಸಾಯ್ ಹೋಗು,` ಎಂದು ನನ್ನನ್ನು ಕಂಡಕಂಡಲ್ಲಿ ಒದೆಯತೊಡಗಿದ. ಪುಟ್ಟಿ ದೊಡ್ಡ ದನಿ ತೆಗೆದು ಆಳಹತ್ತಿದಳು. ಅಪ್ಪನ ಆವೇಶವೆಲ್ಲ 

ಮುಗಿದ ಮೇಲೆ ನಿಂತಲ್ಲಿಯೇ ಕುಸಿದ, `ನಾ ಪಾಲಸೋ ಧರ್ಮಕ್ಕ ಅರ್ಥ ಇಲ್ಲಂತ, ನಾ ಗಂಟೇ ಬಾರ್ಸೊದು ಮಗ್ಗಲ ಮೇನಿಯವ್ರು ಕೇಳಲಿ ಅಂತ, ಏನ, ನೀ ಅತ್ತೀ ಸೇವಾ ಮಾಡಿದ್ದು ನನ್ನ ಹೆದರಿಕಿಗಂತ, ನಾ ನಿನ್ನ ಬೆಳೀಲಕ್ಕೆ ಬಿಡಲಿಲ್ಲಂತ,` ಅಪ್ಪ ಹಲುಬತೊಡಗಿದ.

ನಾನು `ಅಪ್ಪಾ` ಎನ್ನಲು ಬಾಯಿ ತೆಗೆದೆ. ಆದರೆ ಗಂಟಲಿನಿಂದ ಯಾವುದೇ ಶಬ್ದ ಹೊರಬರದೇ ಮತ್ತೆ ನಿಶ್ಚಲನಾದೆ. ಅವ್ವ ಅಳುತ್ತಲೇ, `ಛಲೋ ಬಿರುದು ಕೊಟ್ಯಲ್ಲೋ, ಪೈಸಾ ಪೈಸಾ ಗಳಿಸಲಿಕ್ಕ ಅವ್ರು ಎಷ್ಟು ಬೆವರ ಹರಸ್ತಾರಂತ ನಿಂಗೇನ ಗೊತ್ತೂ? ನಿನ್ನ ದೇವ್ರು ಎಂದೂ ಕ್ಷಮಿಸೂದಿಲ್ಲ,`ಎಂದಳು. `ಶ್ಯಾಣ್ಯಾ, ಶ್ಯಾಣ್ಯಾ ಅಂತ ಎಲ್ಲರೂ ಅಂತಿದ್ರು. ರಾಯರ ಕುದರಿ ಕತ್ತಿ ಆತು,` ಎಂದಳು ಕಾಕು. ನನಗೀಗ ಸುಮ್ಮನಿರಲಾಗಲಿಲ್ಲ. `ನೀವು ಸುಮ್ಮ ಕೂಡ್ರೀ, ಕಾಕು, ನಮ್ಮೆಪ್ಪ ಅವ್ವಾ ನಂಗ ಬೇಕಾದ್ದ ಬಯ್ತಾರ, ನೀವಡ್ಡ ಬಾಯಿ ಹಾಕಬ್ಯಾಡ್ರಿ,` ಎಂದರಚಿದೆ. ಅಪ್ಪ ಸಿಟ್ಟಿನಿಂದ,`ಯಾಕ, ದೊಡ್ಡವರಿಗೆ

ತಿರತಿರಗಿ ಮಾತಾಡ್ಲೀಕತ್ತಿ ? ಮರ್ತಬಿಟ್ಟೀನ ನಾ ಹೇಳಿದ್ದು?` ಎಂದು, ಒಂದರೆ ಕ್ಷಣ ಬಿಟ್ಟು, `ನೀ ಭಾಳ ಓದಿದವಲ್ಲಾ, ನಿನ್ನ ಮುಂದ ನಾ ಬುದ್ದಿ ಹೇಳ್ತೀನಲ್ಲಾ, ನಾ ಎಂಥಾ ಹುಚ್ಚ. ನೀ ಭಾಳ ದೊಡ್ಡವ ಆಗಿ ನೋಡು, ದೊಡ್ಡ ದೊಡ್ಡ ಪುಸ್ತಕ ಓದಿ , ಕತೀ ಬರೀತಿ. ನಿನ್ನ ಮುಂದೆ ನಾವೆಷ್ಟರವರಪ್ಪಾ, ದೊಡ್ಡಮನಷ್ಯಾ,` ಎಂದು ಹಂಗಿಸಿದ. ನನ್ನ ಕಟ್ಟಿದ ಗಂಟಲು ಕಣ್ಣೀರಾಗಿ ಹರಿಯಿತು. ನಾನು ಅಳಲಿಕ್ಕೆ ಶುರುಮಾಡಿದೆ. ಅಪ್ಪ, ಅವ್ವ, ಕಾಕಾ, ಕಾಕು ಎಲ್ಲ ಕೂಡಿ ಬಯ್ಯತೊಡಗಿದರು. ಅಜ್ಜಿ ಅವ್ವನನ್ನು ಮಗಳಂತೆ ನೋಡಿ ಕೊಳ್ಳುತ್ತಿದ್ದುದನ್ನು, ಅಪ್ಪನಿಗೆ ನನ್ನ ಮೇಲಿರುವ ಆಗಾಧ ಪ್ರೀತಿಯನ್ನು, ನನ್ನನ್ನು ಉಳಿದವರ ಮುಂದೆ ಹೊಗಳುವುದನ್ನು, ನನ್ನ ಪತ್ರ ಬಂದಾಗ ಓದೊಂದು ಅಕ್ಷರವನ್ನು ಓದಿ ಓದಿ ಆನಂದಿಸುವುದನ್ನು ಅವ್ವ ಬಿಕ್ಕಿ ಬಿಕ್ಕಿ ಆಳುತ್ತ ಹೇಳಹತ್ತಿದಳು. ಅಪ್ಪನಿಗೆ ಆವೇಶ ತಡೆಯಲಾಗಲಿಲ್ಲ. ನನ್ನನ್ನು ದರದರ ಎಳೆದವನೆ, `ಎಲ್ಲೆರೆ ಹಾಳಾಗಿ ಹೋಗು,` ಎಂದು 

ದಬ್ಬಿ, ಬಾಗಿಲನ್ನು ಹಾಕಿಕೊಂಡ, ಮನೆಯ ಅಜುಬಾಜು ಮಂದಿ ಸುತ್ತಲೂ ಮುಕುರಿದ್ದರು. ನಾನು ತೆಲೆತಗ್ಗಿಸಿ ಕೈಯಲ್ಲಿದ್ದ ಪತ್ರಿಕೆಯನ್ನು ನೋಡುತ್ತ ನಡೆಯಹತ್ತಿದೆ. ಕಿಲ್ಲಾದ ಸಂದಿಯನ್ನು ದಾಟಿ ಹೊರಟೆ. ದುಃಖಿಸಿ ಅಳುತ್ತ ಕತ್ತೆಹೊಳೆಗೆ (ಘಟಪ್ರಭಾ ನದಿ) ಬಂದು ಕೂತು ಎಲ್ಲ ದುಗುಡವನ್ನೂ ಹರಿಸಿಬಿಟ್ಟೆ. 

ಈಗಲೂ ಅಲ್ಲೇ ನದಿ ದಂಡೆ ಮೇಲೆ ಕೂತಿದ್ದೇನೆ. ಎಷ್ಟು ಅತ್ತರೂ ಸಮಾಧಾನವಾಗಲಿಲ್ಲ. ಎಲ್ಲವನ್ನೂ ಒಮ್ಮೆಲೆ ಕಕ್ಕಿಬಿಡಬೇಕು ಎನಿಸಿತು. ಅರ್ಧತಾಸು ಸುಮ್ಮನೆ ಕೂತು, ಮನಸ್ಸನ್ನು ತಹಬದಿಗೆ ತಂದುಕೊಂಡು, ಒಂದೊಂದೆ ಘಟನೆಗಳನ್ನು ಜೋಡಿಸಿಕೊಂಡು ಸಿದ್ದನಾದೆ. ನನ್ನ ಮುಂದೆ ನೀವು ಕೂತಿದ್ದೀರೆಂದು ಕಲ್ಪಿಸಿಕೊಂಡು ಎಲ್ಲವನ್ನೂ ಒಂದೂ ಬಿಡದೇ ಅದೇ ಪತ್ರಿಕೆಯ ಖಾಲಿ ಜಾಗದಲ್ಲೆಲ್ಲ ಬರೆದಿದ್ದೇನೆ. ಕಕ್ಕಬೇಕೆನಿಸಿದ್ದನ್ನೆಲ್ಲವನ್ನೂ ಕಕ್ಕಿದ್ದರೂ ಇನ್ನೂ ಸಮಾಧಾನವಾಗೆಲ್ಲ. ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಅನುಭವದ ಜಾಡು ಹಿಡಿದು ಪ್ರಾಮಾಣಿಕವಾಗಿ ಬರೆಯಬೇಕೆನ್ನುವ ಹಟ ತೊಟ್ಟು ಕಥೆ ಬರೆದು ನಾನು ಸಾಧಿಸಿದ್ದಾದರೂ ಏನು ಎಂದು ಅನಿಸುತ್ತಿದೆ. ನನ್ನ ಕಥೆ ಮೆಚ್ಚಿ ಒಂದೆರಡು ಕಾಗದಗಳು ಬರಬಹುದು. ಸತ್ತ ಅಜ್ಜಿಯ ನಂಬಿಕೆಗಳು ನನ್ನನ್ನು ದಿನವೂ ಪೀಡಿಸುತ್ತವೆ. ಅಪ್ಪ, ಅವ್ವನ ನಂಬಿಕೆಗಳು, ಪರಿಕಲ್ಪನೆಗಳು ನನ್ನನ್ನು ಭೂತದಂತೆ ಬೆನ್ನು ಹತ್ತುತ್ತವೆ. ಇನ್ನು ಮುಂದೆ ಅಪ್ಪ, ಅವ್ವ ನನ್ನನ್ನು ಮಗನ ಹಾಗೆ ಪ್ರೀತಿಸುವುದೇ ಇಲ್ಲ, ಅಪರಿಚಿತನಂತೆ ನಿರುಕಿಸುತ್ತಾರೆ. ಮತ್ತೆ ನಾನು ಕಾಲೇಜಿಗೆ ಹೋದ ಕೂಡಲೇ ರೂಪಾ ಕುಲಕರ್ಣಿ ತರಾಟೆಗೆ ತೆಗೆದುಕೊಳ್ಳುತ್ತಾಳೆ, ಎಲ್ಲ ಗೆಳೆಯರಿಗೂ ನಾನು ಅಪರಿಚಿತನಾಗುತ್ತೇನೆ. ನನಗೆ ಒಂದು ಥರ ಹುಚ್ಚು ಹಿಡಿದರೂ ಹಿಡಿಯಬಹುದು. ಏಕಾಂಗಿಯಾಗಿ ಖೋಲಿಯಲ್ಲಿ ಗೋಡೆಯನ್ನು ನೋಡುತ್ತಾ ಗಪ್ಪು ಕೂಡುವ ಕೆಲಸ ನನ್ನ ದಿನಚರಿಯಾಗಬಹುದು. ಇದನ್ನೆಲ್ಲ ನಾನು ಕಥೆ ಬರೆದು ಪ್ರಕಟಿಸುವುದಕ್ಕೆ ಮುಂಚೆ ಯೋಚಿಸಬೇಕಾಗಿತ್ತು, ಅಲ್ಲವೇ ?

ಅಯ್ಯೋ, ಆಗಲೇ ಸೂರ್ಯ ಮುಳುಗಿಯೇ ಹೋದ. ಮನೆಯಿಂದ ಬಿಟ್ಟಾಗ ಮಧ್ಯಾಹ್ನದ ಹೊತ್ತು. ಇನ್ನೂ ಯಾರ ಊಟವೂ ಆಗಿಲ್ಲ. ಅವ್ವ ಅಳುತ್ತ , ನನ್ನ ದಾರಿ ಕಾಯುತ್ತಾ ಏನೇನೋ ಕೆಟ್ಟ ಯೋಚನೆ ಮಾಡುತ್ತ ( ನಾನು ಜೀವಕ್ಕೇ ಅಪಾಯ ತಂದುಕೊಂದನೆಂದು ಅಥವಾ ಮನೆಬಿಟ್ಟು ಓಡಿ ಹೋದೆನೆಂದು) ಕೂತಿರಬಹುದು. ಅಪ್ಪ ಕಾಲು ಸುಟ್ಟ ಬೆಕ್ಕಿನಂತೆ ಪರದಾಡುತ್ತ, ತನ್ನನ್ನು ಶಪಿಸಿ ಕೊಳ್ಳುತ್ತ ಊಟ ಮಾಡದೇ ಪರಿತಪಿಸುತ್ತಿರಬಹುದು. ಎಲ್ಲರೂ ಹುಚ್ಚು ಹಿಡಿದವರ ಹಾಗೆ ನಾನು ಹೋದ ದಾರಿ ಕಾಯುತ್ತ ಕೂತಿರುತ್ತಾರೆ, ಇನ್ನು ತಡಮಾಡುವುದಿಲ್ಲ ಹೋಗಿಬರುತ್ತೇನೆ.

ಬೆಂಗಳೂರಿನಲ್ಲಿ ಆರು ವಾರ – ಬೇಸಿಂಗ್ ಸ್ಟೋಕ್ ರಾಮಮೂರ್ತಿ ಲೇಖನ

 ಕೋವಿಡ್ ಪಿಡುಗು ನಮ್ಮನ್ನೆಲ್ಲ ಬಾಧಿಸಿ ಹೋದ ನಂತರ ಹಳೆಯ ಅಡಕಪದಗಳಿಗೆ (Acronyms) ಹೊಸದೊಂದು ಅರ್ಥ ಬಂದಿದೆ. BC(Before Christ) ಈಗ Before Covid ಎಂತಲೂ,  AD (Anno Domini) ಈಗ After Disease,  ಅಥವಾ After Done (with Corona) ಎಂತಲೂ ಕೆಲವರು ಕರೆಯುತ್ತಾರೆ. ಇತ್ತೀಚೆಗೆ ಕೋರೋನಾ ನಂತ ಮೊದಲ ಬಾರಿ ಬೆಂಗಳೂರಿಗೆ ಹೋದ ಬೇಸಿಂಗ್ ಸ್ಟೋಕ್ ರಾಮಮೂರ್ತಿಯವರ ತಮ್ಮ ಆರು ವಾರಗಳ ಕಾಲದ ವಾಸ್ತವ್ಯದಲ್ಲಿ ಅನುಭವಿಸಿದ ಸಿಹಿ, ಆಶ್ಚರ್ಯಕರ ಮತ್ತು ಇತರೇ ಅನುಭವಗಳವನ್ನು ಈ ಸ್ವಾರಸ್ಯಕರವಾದ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅವರ ಟ್ರೇಡ್ ಮಾರ್ಕ್ ಆದ ಅಲ್ಲಿ ಸ್ವಲ್ಪ ಇತಿಹಾಸ, ಇಲ್ಲಿ ಸ್ವಲ್ಪ ಹಾರ್ಟಿಕಲ್ಚರ್, ಬಾಟನಿ ಹೀಗೆ ಸ್ವಲ್ಪ spice sprinkling ಸಹ ಉದುರಿಸಿ ಉಣಬಡಿಸಿದ್ದಾರೆ. Enjoy! (ತತ್ಕಾಲ್ ಸಂಪಾದಕ)
ಕೋವಿಡ್ ನಿಂದ ಕಳೆದ ಮೂರು ವರ್ಷ ಬೆಂಗಳೂರಿಗೆ ಹೋಗಿರಲಿಲ್ಲ. ಈ ವರ್ಷ ಜನವರಿ ತಿಂಗಳಲ್ಲಿ ಹೋಗಿ ಆರು ವಾರ ಇದ್ದು,  ಅಲ್ಲಿ ಈ ಮೂರು ವರ್ಷಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಈ ಲೇಖನ. ಬೆಂಗಳೂರು Airport  ಬಹಳ ಚೆನ್ನಾಗಿದೆ ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. Immigration ಸಹ ತುಂಬಾ ಸರಾಗ ಮತ್ತು ವಿನಯದಿಂದ ನಡೆಯಿತು. ಕೋವಿಡ್ ಔಪಚಾರಿಕತೆಗಳು ಏನೂ ಇರಲಿಲ್ಲ.  ಕೆಲವು ವರ್ಷದ ಹಿಂದೆ Auto ಅಥವಾ Taxi ಸಮಸ್ಯೆ ಇತ್ತು, ಆದರೆ ಈಗ Uber ಮತ್ತು Ola ಇರುವುದರಿಂದ ಯಾವ ತೊಂದರೆಯೂ ಇಲ್ಲ. ಸುಮಾರು ಐದು ನಿಮಿಷದ ಒಳಗೆ ನಿಮ್ಮ ವಾಹನ ಬರುವ ಸಾಧ್ಯತೆ ಇದೆ.  ದರದ ಚೌಕಾಸಿ ಅಥವಾ ಜಗಳ ಬರಿ ನೆನಪುಗಳು ಅಷ್ಟೇ !
ಇನ್ನೊಂದು ವಿಷಯ ಗಮನಕ್ಕೆ ಬರುವುದು  ದೇಶದಲ್ಲಿ ಆಗಿರುವ Digital Revolution. ರಸ್ತೆ ಯಲ್ಲಿ ತರಕಾರಿ ಮಾರುವರು , ಚಾಟ್ ಅಂಗಡಿಯವರು ಸಹ ಇದರಲ್ಲಿ ಭಾಗವಹಿಸಿದ್ದಾರೆ. ಫೋನಿನಿಂದ QR Code scan ಮಾಡಬಹುದು. ಅನೇಕ ಉಪಹಾರ ಮಂದಿರಗಳಲ್ಲಿ QR  code ನಿಂದ ಅವತ್ತಿನ ತಿಂಡಿಗಳ ವಿವರ ತಿಳಿಯಬಹುದು. ಅಂಗಡಿ ಸಾಮಾನುಗಳನ್ನು on line ನಲ್ಲಿ ತರಿಸಬಹುದು. ನೋಡಿದರೆ ಬೆಂಗಳೂರಿನಲ್ಲಿ ಎಲ್ಲರ ಮನೆಯಲ್ಲೂ  ಒಂದು ನಾಲಕ್ಕು ಚಕ್ರದ  ವಾಹನ  ಇರಬಹುದೇನೋ   ಅನ್ನಿಸುತ್ತೆದೆ, ರಸ್ತೆಯಲ್ಲಿ ಅಷ್ಟೊಂದು traffic! Highway ಗಳು ಈಗ ಚೆನ್ನಾಗಿವೆ, ಆದರೆ ಬಹು ಮಂದಿ ವಾಹನ ನಡೆಸುವ ನಿಯಮಗಳನ್ನು ಪಾಲಿಸಿವುದಿಲ್ಲ ಅನ್ನುವುದು ಬಹಳ ಶೋಚಿನಿಯವಾದ ವಿಷಯ. 
 ಇನ್ನು ಮೆಟ್ರೋ (ನಮ್ಮ ಮೆಟ್ರೋ ) ಬಹಳ ಅನುಕೂಲವಾಗಿದೆ. ನಾನು ಬಹಳ ಹಿಂದೆ ಒಂದು ಸಲಿ ಇಲ್ಲಿ ಪ್ರಯಾಣ ಮಾಡಿದ್ದೆ.
ಆದರೆ ಏನು ಬದಲಾವಣೆ ಆಗಿದೆ ಅನ್ನುವ ವಿಚಾರ ಗೊತ್ತಿರಲಿಲ್ಲ. ಸರಿ, ಇದರಲ್ಲಿ ಪ್ರಯಾಣ ಮಾಡಿ ನೋಡೋಣ ಅಂತ ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಬಂದೆ. ಟಿಕೆಟ್ counter ನಲ್ಲಿ ಮಂತ್ರಿ ಮಾಲ್ ಗೆ ಎಷ್ಟು ಅಂತ ಕೇಳಿದಾಗ ಆಕೆ ೧೮ ರೂಪಾಯಿ ಅಂದಳು, ನಾನು ಆಶ್ಚರ್ಯದಿಂದ ”೧೮ ಆ?” ಅಂದೆ. ಆಕೆ ಹೌದು ಸರ್, ಸೀನಿಯರ್ concession ಇಲ್ಲ ಅಂದಳು! ನನಗೆ ಆಶ್ಚರ್ಯ ಆಗಿದ್ದು ಕೇವಲ ೧೮ ರೂಪಾಯಿ ಮಾತ್ರ ಅಂತ , ಆದರೆ ಆಕೆ ನಾನು ಇದು ದುಬಾರಿ ಅಂತ ಹೇಳುತ್ತಿದ್ದೇನೆ ಅಂತ ತಿಳಿದಿರಬೇಕು!! (London Tube ನಲ್ಲಿ ಕನಿಷ್ಠ £೭!) ದುಡ್ಡು ಕೊಟ್ಟೆ,  ಚಿಲ್ಲರೆ ಬಂತು,  ಟಿಕೆಟ್ ಕೊಡಿ ಅಂದೆ. ಆಕೆ ಕೊಟ್ಟಿದ್ದೀನಿ ನೋಡಿ ಸರ್ ಅಂದಳು. (ಈ ಮನುಷ್ಯ ಎಲ್ಲಿಂದ ಬಂದಿದ್ದಾನೆ ಅಂತ ಯೋಚಿಸರಬಹುದು!!). ನೋಡಿದರೆ ಟಿಕೆಟ್ ಒಂದು ಬಿಲ್ಲೆ ಆದರೆ Digital ಬಿಲ್ಲೆ ! ಅಂತೂ ಪ್ರಯಾಣ ಕೇವಲ ೧೦ ನಿಮಿಷ ಮಾತ್ರ.  ಅದೇ Auto ನಲ್ಲಿ ಮಲ್ಲೇಶ್ವರಕ್ಕೆ ಹೋಗಿದ್ದರೆ ೧೦೦ ರೂಪಾಯಿ ಮತ್ತು ಅರ್ಧ ಅಥವಾ ಮುಕ್ಕಾಲು ಗಂಟೆ ಸಮಯ ಹಿಡಿಯುತ್ತಿತ್ತು. 
ಬೆಳಗ್ಗೆ ಅಥವಾ ಸಾಯಂಕಾಲ ತಿಂಡಿ/ಊಟಕ್ಕೆ ಜನಗಳು ಉಪಹಾರ ಮಂದಿರಗಳ ಮುಂದೆ ನಿಂತಿರುವುದನ್ನ ನೋಡಿದರೆ  ಮನೆಯಲ್ಲಿ ಅಡಿಗೆ ಮಾಡುವ ಅಭ್ಯಾಸ ಇಲ್ಲವೇನೋ ಅನ್ನುವ ಸಂಶಯ ಹುಟ್ಟುತ್ತದೆ. ಗಾಂಧಿ ಬಜಾರ್ನಲ್ಲಿರುವ ಹೆಸರಾದ  ವಿದ್ಯಾರ್ಥಿ ಭವನದ ಮುಂದೆ queue ನಿಂತಿರುತ್ತಾರೆ. ಎಲ್ಲಾ  ಉಪಹಾರ ಮಂದಿರಗಳಲ್ಲೂ ಇದೇ ಸಮಸ್ಯೆ.  
ಸಂಕ್ರಾಂತಿ ಸಮಯದಲ್ಲಿ, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು ಮುಂತಾದವು ಈಗ ಅನೇಕ ಅಂಗಡಿಗಳಲ್ಲಿ Prepack ಸಿಗುತ್ತೆ. ಮನೆಯಲ್ಲಿ ಕಷ್ಟ ಪಡಬೇಕಾದ ಅವಶ್ಯಕತೆ ಇಲ್ಲ. ಯುಗಾದಿ ಹಬ್ಬಕ್ಕೆ ಹೋಳಿಗೆ ಮಾಡುವ ಅಂಗಡಿಗಳು ಅನೇಕ.   
 ನಾವು ಇದ್ದ ಆರು ವಾರದಲ್ಲಿ, ಅಡಿಗೆ ಮಾಡಿಕೊಳ್ಳುವ ಸೌಲಭ್ಯ ಇದ್ದಿದ್ದರೂ ಮಾಡುವ ಅವಶ್ಯಕತೆ ಇರಲಿಲ್ಲ. ಹತ್ತಿರದಲ್ಲೇ  ಇದ್ದ ವಿದ್ಯಾರ್ಥಿ ಭವನ, ಭಟ್ಟರ ಹೋಟೆಲ್ ಅಥವಾ ಉಡುಪಿ ಕೃಷ್ಣ ಭವನದಲ್ಲಿ ಬೆಳಗ್ಗೆ ಬಿಸಿ ಬಿಸಿ ಇಡ್ಲಿ ದೋಸೆ (Take Away) ಸಿಗಬೇಕಾದರೆ ಮನೆಯಲ್ಲಿ ಕಷ್ಟ ಪಡಬೇಕಾಗಿಲ್ಲ ಅಲ್ಲವೇ?  ಊಟ ಸಹ On Line ನಲ್ಲಿ ತರಿಸಬಹುದು! When in Rome Do as Romans Do ಅಂದ ಹಾಗೆ. 
ನಮ್ಮ ಮನೆಯ ಕಿರಿಯ ಇಬ್ಬರು ಸಂಬಂಧಿಕರು ಬ್ರೂವರಿ (Brewery )ಗೆ ಹೋಗೋಣ ಅಂದರು. (ಬೆಂಗಳೂರಿನಲ್ಲಿ ಸುಮಾರು ೩೦-೪೦ ಇವೆಯಂತೆ). ಸಾಯಂಕಾಲ ೭ ೩೦ ಕ್ಕೆ booking ಇದ್ದಿದ್ದು, ಸುಮಾರು ೧೫೦೦ ಜನ ಇದ್ದಿರಬಹುದು ಆ ಸಮಯದಲ್ಲಿ! QR  code scan ಮಾಡಿದರೆ ಅನೇಕ ರೀತಿಯ beer ಮಾಹಿತಿ ಸಿಗುತ್ತೆ. (ಈ Beer ಇಲ್ಲಿ ಸಿಗುವ Lager)
 ಸುಮಾರು ೨೫-೩೦ ವರ್ಷದ ಹಿಂದೆ, ಬಸವನಗುಡಿ ಅಥವಾ ಮಲ್ಲೇಶ್ವರದ ರಸ್ತೆಗಳಲ್ಲಿ ಒಂಟಿ ಮನೆಗಳು ಇದ್ದವು, ಈಗ  ಎಲ್ಲೆಲ್ಲಿ ನೋಡಿದರೂ ಹಳೇ ಮನೆಗಳನ್ನು ಕೆಡವಿ ೩ ಅಥವಾ ೪ ಅಂತಸ್ತಿನ apartment ಗಳು ಬಂದಿವೆ. ರಸ್ತೆಗಳ ತುಂಬಾ ಮರಳು, ಸಿಮೆಂಟ್ ಇತ್ಯಾದಿ. ಇದು ಸಾಲದು ಅಂತ ಚರಂಡಿ ರಿಪೇರಿ, ಅದರ ಕಲ್ಲಿನ ಚಪ್ಪಡಿಗಳೂ ಸಹ ರಸ್ತೆ ಮಧ್ಯೆ. ಹೀಗಾಗಿ ರಸ್ತೆಯಲ್ಲಿ ನಡೆಯುವುದೇ ಒಂದು ಸಮಸ್ಯೆ, ಗಾಂಧಿ ಬಜಾರ್ ನಂತೂ ಪೂರ್ತಿ ಅಗದು ಬಿಟ್ಟಿದ್ದಾರೆ. ಇದು ಹೇಗೆ ಅನ್ನುವ ಪ್ರಶ್ನೆ ನೀವು ಕೇಳಬಹುದು. ಕಾರಣ, ಇಂಗ್ಲಿಷ್ನನಲ್ಲಿ ಹೇಳಬೇಕಾದರೆ, Lack of Accountability. ಸರಿಯಾದ ಉಸ್ತುವಾರಿ ಸಹ ಕಡಿಮೆ. ಆದರೆ ಸ್ಥಳೀಯ ಜನ ಇದನ್ನ ಸಹಿಸಿಕೊಂಡು ಇದು ತಮ್ಮ ಹಣೆ ಬರಹ ಎಂದು ಸುಮ್ಮನಿರುತ್ತಾರೆ. ನಿಮ್ಮ ಪ್ರತಿನಿಧಿ (ಕಾರ್ಪೊರೇಟರ್ )ಗೆ ದೂರು ಕೊಡಬಹುದಲ್ಲ ಎಂದು ಕೇಳಿದಾಗ ಬಂದ ಉತ್ತರ ಇದು " ಇವರು ಇರುವುದು ನಮಗೆ ಸಹಾಯ ಮಾಡುವುದಕ್ಕೆ ಅಲ್ಲ ತಮ್ಮ ಜೇಬು ತುಂಬಿಸಿಕೊಳ್ಳುವುದಕ್ಕೆ!"
 
ಆದರೆ ನೀವು ಮೈಸೂರಿಗೆ ಹೋಗಿ, ಅಲ್ಲಿನ ವಾತಾವರಣ, ಸೌಂದರ್ಯ ಕಂಡು ಹೆಮ್ಮೆ ಬರುತ್ತೆ. ಸಧ್ಯ ಇಲ್ಲಿ Apartment ಹುಚ್ಚುತನ ಇನ್ನೊ ಬಂದಿಲ್ಲ. ಹಳೆ ಕಟ್ಟಡಗಳನ್ನು ಒಡೆದಿಲ್ಲ, ರಸ್ತೆಯಲ್ಲಿ ಅಷ್ಟೇನೂ ಗಲಾಟೆ ಇಲ್ಲ. ಮುಂದೆ IT ಕಂಪನಿಗಳು ಇಲ್ಲಿ ಬಂದರೆ ಮೈಸೂರಿನ ಗತಿ ಬೆಂಗಳೂರಿನ ಹಾಗೆ ಅನ್ನುವ ನನ್ನ ಅಭಿಪ್ರಾಯ! (ದಯವಿಟ್ಟು Software ನವರು ನನ್ನ ಹತ್ತಿರ ಜಗಳ ಮಾಡಬೇಡಿ, ಇರೋ ವಿಚಾರ ಹೇಳುತ್ತಿದ್ದೇನೆ.)
 ಅಪ್ಪಿ ತಪ್ಪಿ ನೀವು ರಾಜಕೀಯದ ವಿಚಾರ ಎತ್ತಿ ಬೇಡಿ, ನಾನು ಒಮ್ಮೆ ದೇಶದಲ್ಲಿ ಅಸಹಿಸ್ಣುತೆ ( intolerance  ) ಹೆಚ್ಚಾಗಿದೆ ಅನ್ನುವ comment ಮಾಡಿದೆ. ನಮ್ಮ ಕೆಲವು ಸಂಬಂಧಿಕರು ನನ್ನ ಮೇಲೆ serious ಆಗಿ ಜಗಳಕ್ಕೆ ಬಂದರು, ಬಿಬಿಸಿನ ಬೈದರು, ನಿಮ್ಮ ಪತ್ರಿಕೆಗಳು "anti India" ಇನ್ನೂ colonial mind set ಹೋಗಿಲ್ಲ ಇತ್ಯಾದಿ, ಇತ್ಯಾದಿ. ಆದರೆ ಈಗ UK  ಇಂತಹ  ವಿಚಾರದಲ್ಲಿ ಎಷ್ಟು ಮುಂದುವರೆದಿದೆ ಅನ್ನುವ ಮಾಹಿತಿಯನ್ನು ಅವರಿಗೆ ಕೇಳುವ ಕುತೂಹಲ ಅಥವಾ ಉತ್ಸಾಹ ಇರಲಿಲ್ಲ.  
 ಇದ್ದ ಆರು ವಾರದಲ್ಲಿ, ಹೊರಗೆ , ಅಂದರೆ ಬೆಂಗಳೂರು ಬಿಟ್ಟು ಜಾಸ್ತಿ ಅನೇಕ ಕಾರಣಗಳಿಂದ  ಹೋಗಲಿಲ್ಲ. ಆದರೆ ಹೆಸರಘಟ್ಟ ದಲ್ಲಿರುವ Horticulture Research Institute ಗೆ ಭೇಟಿ ಕೊಟ್ಟಿದ್ದು ಅದ್ಭುತವಾಗಿತ್ತು. ನಮ್ಮ ಮನೆಯಲ್ಲಿ ನಮ್ಮಿಬ್ಬರಿಗೂ   ತೋಟಗಾರಿಕೆ ಮೇಲೆ ಆಸಕ್ತಿ ಇದೆ, ಇದರ ಬಗ್ಗೆ ಅನಿವಾಸಿಯಲ್ಲಿ ಹಿಂದೆ ಬರೆದಿದ್ದೇನೆ. ಈ ಸಂಸ್ಥೆ ೧೯೩೮ ರಲ್ಲಿ ಅಂದಿನ ಮೈಸೂರು ಸರ್ಕಾರ ಹಣ್ಣು ಮತ್ತು ತರಕಾರಿ ಸಂಶೋಧನೆಗೆ ಈ ಸಂಸ್ಥೆಯನ್ನು ಹೆಸರಘಟ್ಟದಲ್ಲಿ ಸ್ಥಾಪನೆ ಮಾಡಿದರು. ನಾಲ್ಮಡಿ ಕೃಷ್ಣರಾಜ ಓಡೆಯರ್ ಮಹಾರಾಜರು  ರಾಜ್ಯಕ್ಕೆ ಮಾಡಿದ ಅನೇಕ ಸೇವೆಗಳಲ್ಲಿ ಇದೊಂದು. ಸುಮಾರು ೫೦೦ ಎಕರೆ ವಿಸ್ತರಣೆಯಲ್ಲಿ ಇರುವ ಸಂಸ್ಥೆ ಈಗ ಕೇಂದ್ರ ಸರ್ಕಾರದ Institute of Agricultural  Research (IAR) ಗೆ ಸೇರಿದ್ದು. ಕೆಲವು ಹಣ್ಣುಗಳ ಮತ್ತು  ತರಕಾರಿಯ ಬಗ್ಗೆ ಇಲ್ಲಿನ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಗಿಡಗಳಿಗೆ ಬರುವ ರೋಗ ಮತ್ತು ಅದರ ನಿವಾರಣೆಯ ರೀತಿ ರೈತರಿಗೆ ಮಾಹಿತಿ ಕೊಡುವ ಕೆಲವನ್ನು ಇಲ್ಲಿ ನಡೆಯುತ್ತದೆ. ಇವರ ಸಂಶೋಧನೆ ಅಂತರ ರಾಷ್ಟ್ರೀಯ ಪ್ರಶಂಸೆ ಪಡದಿದೆ ಅನ್ನುವುದು ಹೆಮ್ಮೆಯ ವಿಚಾರ. ಇಲ್ಲೇ ಬೆಳದ ಗಿಡ ಮತ್ತು ಬೀಜಗಳನ್ನ ಖರೀದಿ ಮಾಡಬಹುದು. ಅರ್ಕ (Arka ) ಈ ಸಂಸ್ಥೆಯ ವ್ಯಾಪಾರ ಗುರುತು (Trade Mark ). ಈ ಹೆಸರಿನಲ್ಲಿ ಗಿಡಗಳನ್ನು ಮಾರುವುದರಿಂದ ಜನಗಳಿಗೆ (ರೈತರಿಗೆ) ಇದು ಈ ಸಂಸ್ಥೆಯಿಂದ ಬಂದಿದ್ದು ಅಂಬ ಭರವಸೆ ಬರುತ್ತೆ. ಗುಣಮಟ್ಟದ ಬಗ್ಗೆ( Quality ) ಗೊಂದಲ ಇರುವುದಿಲ್ಲ. IAR ಸೇರಿದ ಸಂಸ್ಥೆಗಳು ಸರ್ಕಾರಕ್ಕೆ ೧೩೦೦೦ ಕೋಟಿ ಆದಾಯ ತರುತ್ತದೆ ಎಂದು ಅಂದಾಜು ಮಾಡಲಾಗಿದೆ. ಇಲ್ಲೇ ಬೆಳೆದ ಗಿಡಗಳ ಬೀಜಗಳನ್ನುಖರೀದಿ ಮಾಡ ಬಹುದು. ೧೫ ರೀತಿಯ Bougainvillea ಮತ್ತು ಗುಲಾಬಿ ಹೂವುಗಳ ತೋಟ ನೋಡುವುದಕ್ಕೆ ಸುಂದರ ವಾಗಿತ್ತು. ಅಲ್ಲಿ ಕೆಲಸ ಮಾಡುವ ಸ್ಥಳೀಯ ಮಹಿಳೆಯಯರು ಹೈಬ್ರಿಡ್ ಮಾವಿನ ಸಸಿಗಳನ್ನು ಮಾಡುವ ಕೌಶಲ್ಯ (Skill ) ವನ್ನು ಮೆಚ್ಚಬೇಕು. IAR ಸೇರಿದ ಸಂಸ್ಥೆಗಳಿಂದ ಸರ್ಕಾರಕ್ಕೆ ೧೩೦೦೦ ಕೋಟಿ ರೂಪಾಯಿ ಆದಾಯ ಎಂದು ಅಂದಾಜು ಮಾಡಲಾಗಿದೆ.
 ಮಾರ್ಚ್ ತಿಂಗಳಲ್ಲಿ ಬಿಸಿಲು ಹೆಚ್ಚು,  ಹೊರಗೆ ಹೋಗುವುದು ಕಷ್ಟ , ಅಲ್ಲದೇ  ಇಲ್ಲಿ ನಮ್ಮ ಮನೆ ಯೋಚನೆ ಬರುವುದು ಸಹಜ, ಆದ್ದರಿಂದ ಆರು ವಾರಕ್ಕೆ ಮೀರಿ ಅಲ್ಲಿರುವುದು ನಮಗೆ ಕಷ್ಟವೇ . ಪುನಃ ಈ ವರ್ಷ ಬೆಂಗಳೂರಿಗೆ ಹೋಗುವ ನಿರೀಕ್ಷೆ ಇದೆ.  

 ರಾಮಮೂರ್ತಿ 
ಬೇಸಿಂಗ್ ಸ್ಟೋಕ್
Author, wife and friends In Bougainvillea Garden

ಮೂರನೆಯ ಚಾರ್ಲ್ಸ್ – King Charles III

ನನಗನ್ನಿಸುವಂತೆ ಅನಿವಾಸಿಯ ಬಳಗದ ಸದಸ್ಯರೆಲ್ಲರ (ಹೆಚ್ಚು-ಕಮ್ಮಿ ಎಲ್ಲರ ಅನ್ನೋಣವೇ?) ಜೀವನ ಕಾಲದಲ್ಲಿ ಇದು ಮೊದಲನೆಯ ಸಿಂಹಾಸನಾರೋಹಣ, ಈ ಶನಿವಾರ ಅಂದರೆ ನಾಳೆ 2023 ರ ಮೇ 6 ರಂದು ಜರುಗಲಿದೆ.  ಕಳೆದ 70 ವರ್ಷಗಳಿಂದ ರಾಜಕುಮಾರನಾಗಿಯೇ ಉಳಿದಿದ್ದ ಚಾರ್ಲ್ಸ್, 7 ತಿಂಗಳ ಹಿಂದೆ ರಾಣಿ ಎಲಿಜಬೆತ್ ರ ಮರಣಾನಂತರ ರಾಜನಾದರೂ, ಈ ವಾರದ ಕೊನೆಯಲ್ಲಿ ಅಧಿಕೃತ ಸಮಾರಂಭದಲ್ಲಿ ಪತ್ನಿ ಕಮಿಲಾರೊಂದಿಗೆ ಸಿಂಹಾಸನವನ್ನು ಏರಲಿದ್ದಾರೆ.  53 ಕ್ಕೂ ಹೆಚ್ಚು ಅವಧಿಯ ತಮ್ಮ ಅಪ್ರೆಂಟಿಸ್ ಅನುಭವವನ್ನು ವೃತ್ತಿಯಲ್ಲಿ ಯಶಸ್ವಿಯಾಗಿ ಬಳಸುವ ಅವಕಾಶ ಪಡೆಯಲಿದ್ದಾರೆ.  ಈ ಸಂದರ್ಭದಲ್ಲಿ ನಮ್ಮ ಅನಿವಾಸಿ ಬಳಗದ “ಡೇವಿಡ್ ಬೇಯ್ಲಿ” ಹವ್ಯಾಸಿ ಛಾಯಾಗ್ರಾಹಕರೊಬ್ಬರು, ಸುಮಾರು ಅರ್ಧ ಶತಮಾನದ ಹಿಂದೆ ತಾವು ಕಿಂಗ್ ಚಾರ್ಲ್ಸ್ ಅವರ ಜೀವನದ ಒಂದು ಭಾಗದಲ್ಲಿ ಹೇಗೆ ಹಾಯ್ದು ಬಂದರೆಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಓದುಗರಲ್ಲೂ ಹಲವರು ಈರೀತಿಯ ಅನುಭವಗಳ ಪಟ್ಟಿಮಾಡುವವರಿರಬಹುದು – ದಯವಿಟ್ಟು ಪ್ರತಿಕ್ರಿಯೆ ಬರೆದು ನಮ್ಮೊಂದಿಗೆ ಹಂಚಿಕೊಳ್ಳಿ.

ಮೊದಲಿಗೆ ರಾಜ ಚಾರ್ಲ್ಸ್ ರ ಜೀವನಕಾಲದ ಒಂದು ಝಲಕನ್ನು ನೋಡೋಣ.  ಹಲವಾರು ಅಂತರ್ಜಾಲ ತಾಣಗಳು ಈ ಚಿಕ್ಕ ಬರಹದ ಸಾಮಗ್ರಿ ಒದಗಿಸಿದ ಮೂಲಗಳು – royal.uk, britroyals.com, theguardian.com, smithsonianassociates.org ಇತ್ಯಾದಿ. – ಲಕ್ಷ್ಮೀನಾರಾಯಣ ಗುಡೂರ (ವಾರದ ಸಂಪಾದಕ)

ಮೂರನೆಯ ಚಾರ್ಲ್ಸ್ - ಕಿಂಗ್ ಚಾರ್ಲ್ಸ್ ದ ಥರ್ಡ್

ಜನಪ್ರಿಯ ರಾಣಿ ಎರಡನೆಯ ಎಲಿಜಬೆತ್ ಹಾಗೂ ರಾಜಕುಮಾರ ಫಿಲಿಪ್ (ಡ್ಯೂಕ್ ಆಫ಼ ಎಡಿನ್ಬರಾ) ಇವರ ಮೊದಲ ಮಗ.
ಸ್ಕಾಟ್ಲಂಡಿನಲ್ಲಿ ಮತ್ತು ಕೇಂಬ್ರಿಜ್ ನ ಟ್ರಿನಿಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸ. 
ಜುಲೈ 1, 1969 ರಂದು ಪ್ರಿನ್ಸ್ ಆಫ್ ವೇಲ್ಸ್ ಪದವಿ.  ಅಲ್ಲಿಂದ ಕೇಂಬ್ರಿಜ್ ಹಾಗೂ ರಾಯಲ್ ವಿಮಾನ ದಳದಲ್ಲಿ ಕಲಿಕೆ. 1971 ರಲ್ಲಿ ಅವರ ತಂದೆ ಹಾಗೂ ತಾತನ ಹೆಜ್ಜೆಗಳನ್ನನುಸರಿಸಿ, ನೌಕಾದಳಕ್ಕೆ ಸೇರಿಕೆ.

1981 ರ ಜುಲೈ 29ರಂದು ಡಯಾನಾ ಅವರೊಂದಿಗೆ ಮದುವೆ.  ಅವರ ವೈವಾಹಿಕ ಜೀವನ ಹಲವು ಏರುಪೇರುಗಳಿಂದ ಕೂಡಿದ್ದು, 1993ರಲ್ಲಿ ಅವರಿಬ್ಬರ ಬೇರ್ಪಡುವಿಕೆಯಲ್ಲಿ ಕೊನೆಗೊಂಡಿತು.  2005 ರಲ್ಲಿ ಚಾರ್ಲ್ಸ್ ಮತ್ತೆ ಕಮಿಲಾ ಅವರನ್ನು ಮದುವೆಯಾದರು. 

ರಾಜನಾಗುವ ಮೊದಲಿನಿಂದಲೂ ಚಾರ್ಲ್ಸ್ ಸೈನ್ಯದ, ಸೈನಿಕರ ಜೊತೆಯ ತಮ್ಮ ಬಾಂಧವ್ಯವನ್ನು ಗಟ್ಟಿಯಾಗಿ ಇಟ್ಟುಕೊಂಡಿದ್ದಾರೆ.  ಹಲವಾರು ಚಾರಿಟಬಲ್ ಸಂಸ್ಥೆಗಳ ಪೋಷಕನಾಗಿ, ಅವುಗಳ ಕೆಲಸವನ್ನು ಪ್ರೋತ್ಸಾಹಿಸಿಕೊಂಡು ಬಂದಿದ್ದಾರೆ.  ವೇಲ್ಸ್ ಹಾಗೂ ಸ್ಕಾಟ್ಲಂಡ್ ಗಳ ಮೇಲಿನ ಅವರ ಪ್ರೀತಿ ಸುಲಭವಾಗಿ ಕಂಡುಬರುವಂಥದ್ದು. ಇವೆಲ್ಲದರೊಂದಿಗೆ ಚಾರ್ಲ್ಸ್ ರ ನಿಸರ್ಗ ಪ್ರೇಮ, ಅವರನ್ನು ಹಲವಾರು ಜಾಗತಿಕ ಹಾಗೂ ಸ್ಥಳೀಯ ಸವಾಲುಗಳೊಂದಿಗೆ ಸೆಣಸುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಸಿದೆ.  ಸುಸ್ಥಿರ ಭವಿಷ್ಯ (sustainable future), ಅಭಿವೃದ್ಧಿಗಾಗಿ ಅವರ ಹೋರಾಟ ಮುಂದುವರೆದಿದೆ.

ಮೂರನೆಯ ಚಾರ್ಲ್ಸ್, ಯುನೈಟೆಡ್ ಕಿಂಗ್ಡಮ್ ನ 22ನೆಯ ಸಿಂಹಾಸನಾಧೀಶ / ರಾಜ.  ಮುತ್ತಾತ ಐದನೆಯ ಜಾರ್ಜ್ ರಿಂದ ಸ್ಥಾಪಿತವಾದ ವಿಂಡ್ಸರ್ ಮನೆತನದ 6ನೇ ರಾಜ.  ಆಸ್ಟ್ರೇಲಿಯಾ, ನ್ಯೂಜಿಲಂಡ್, ಕೆನಡಾ ಸೇರಿದಂತೆ 16 ದೇಶಗಳ ರಾಜಪಟ್ಟ (ನೇರ ಆಡಳಿತವಿಲ್ಲದ ಸ್ವತಂತ್ರ ದೇಶಗಳು). 54 ಸ್ವತಂತ್ರ ದೇಶಗಳ ಸದಸ್ಯತ್ವದ ಕಾಮನ್ ವೆಲ್ತ್ ಕೂಟದ ಮುಖ್ಯಸ್ಥ.  
ಅತ್ಯಂತ ಜನಪ್ರಿಯ ರಾಣಿಯಾಗಿ 70 ವರ್ಷಕ್ಕೂ ಹೆಚ್ಚು ಕಾಲ ಇಲ್ಲ-ಸಲ್ಲದ ಕಾಂಟ್ರೋವರ್ಸಿಗಳಿಲ್ಲದೇ ’ರಾಜ್ಯಭಾರ’ ಮಾಡಿದ ಎರಡನೆಯ ಎಲಿಜಬೆತ್ ರಾಣಿಯ ಉತ್ತರಾಧಿಕಾರಿಯಾಗಿ ಸಿಂಹಾಸನವನ್ನೇರುವುದು ಸುಲಭದ ಮಾತಲ್ಲ.  ಹಾಗೆಯೇ ಸುರಳೀತವಾಗಿ ಹೊಸ ರಾಜನ ರಾಜ್ಯಾಡಳಿತವೂ ನಡೆಯಲೆಂದು ಹಾರೈಸೋಣ. 

-ಲಕ್ಷ್ಮೀನಾರಾಯಣ ಗುಡೂರ.

*********************************************************

ನಾನು ರಾಯಲ್ ಫೋಟೋಗ್ರಾಫರ್ (ಅನಧಿಕೃತ) ಆದ ದಿನ! - ಡಾ. ಶ್ರೀವತ್ಸ ದೇಸಾಯಿ
ಇದೇ ವಾರ ಲಂಡನ್ನಿನಲ್ಲಿ ಮೂರನೆಯ ಕಿಂಗ್ ಚಾರ್ಲ್ಸ್ ನ ಪಟ್ಟಾಭಿಷೇಕ ನಡೆಯಲಿದೆ. ರಾಣಿ ಎಲಿಝಬೆತ್ ಪಟ್ಟಕ್ಕೇರಿದ ವರ್ಷ
1952. ಆಗ ನಾಲ್ಕು ವರ್ಷದವನಾಗಿದ್ದ ಆತ ಈ ದಿನಕ್ಕಾಗಿ ಎಪ್ಪತ್ತು ವರ್ಷಗಳೇ ಕಾಯ್ದಿರ ಬಹುದು. ಆತನ ’ಹೆಡ್ ಅಂಡ್
ಶೋಲ್ಡರ್’ ಫೋಟೋ ತೆಗೆದು ನನ್ನನ್ನೊಬ್ಬ ಅನಧಿಕೃತ ಫೋಟೋಗ್ರಾಫರ್ ಅಂತ ನಾನೇ ಅಂದುಕೊಳ್ಳುತ್ತ ನಾನು 45
ವರ್ಷಗಳಿಂದ ಈ ದಿನಕ್ಕಾಗಿ ಕಾಯುತ್ತಿದ್ದೇನೆ ಅಂದರೆ ಬರೀ ಉಡಾಫೆ ಅಂದುಕೊಳ್ಳದೆ ಆ ಕಥೆಯನ್ನು ಕೇಳಿ ಆಮೇಲೆ ಹೇಳಿರಿ!

ರೆಡ್ ಲೆಟ್ಟರ್ ಡೇ, ಜೂಲೈ, 1978.
ಹದಿನೈದನೆಯ ಶತಮಾನದಿಂದಲೂ ಹಬ್ಬದ ದಿನಗಳ ಪ್ರಥಮಾಕ್ಷರವನ್ನು ಕೆಲೆಂಡರಿನಲ್ಲಿ ಕೆಂಪು ಅಕ್ಷರಗಳಿಂದ ಮುದ್ರಿಸುವ ಈ ರೀತಿಯ ಪರಿಪಾಠ ಪ್ರಿಂಟರ್ ವಿಲಿಯಮ್ ಕ್ಯಾಕ್ಸ್ಟನ್ ಶುರುಮಾಡಿದ ಕಾಲದಿಂದ ಬಂದಿದೆ ಅಂತ ಪ್ರತೀತಿ.
ನನ್ನ ಪಾಲಿಗೆ ಆ ದಿನ ಅಂಥದೊಂದು ದಿನ. ಒಂದು ಕೆಂಪು ಹೆಲಿಕಾಪ್ಟರನ್ನು ತಾನೇ ಪೈಲಟ್ ಆಗಿ ನಡೆಸಿಕೊಂಡು ಯು ಕೆ ನ ವೇಲ್ಸ್ ಪ್ರಾಂತದ ಮರ್ಥರ್ ತಿಡ್ಫಿಲ್ ಎನ್ನುವ ಊರಿನ ’ಪ್ರಿನ್ಸ್ ಚಾರ್ಲ್ಸ್ ಆಸ್ಪತ್ರೆ’ಯ ಖಾಲಿ ಕಾರ್ ಪಾರ್ಕಿನಲ್ಲಿ ಬಂದಿಳಿದಾಗ ರೆಡ್ ಲೆಟ್ಟರ್ ಡೇ ಆಯಿತು.  ಅಷ್ಟೇ ಏಕೆ, ಆತನ ಹೆಸರಿನಲ್ಲಿ ನಾಮಕರಣವಾಗಿ ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿಸಿದ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿ ನೆರೆದ ನೂರಾರು ಜನರಿಗೂ ಅದು ಮರೆಯಲಾರದ ದಿನ. ಆಗ ಮೋಬೈಲ್ ಕ್ಯಾಮರಾಗಳು ಹುಟ್ಟಿರಲಿಲ್ಲ. ಅದೇ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಜೂನಿಯರ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ನಾನು ಒಂದು ಹಳೆಯ ಮಾದರಿಯ ಅಶಾಯಿ ಪೆಂಟಾಕ್ಸ್ Asahi Pentax ಕ್ಯಾಮರಾ ಹಿಡಿದು ಆತನ ಒಂದು ಚಿತ್ರವನ್ನಾದರೂ ಸೆರೆ ಹಿಡಿಯಲು ಕಾತುರನಾಗಿದ್ದೆ. ರಾಜ ಕುಮಾರ ಅಂದ ಮೇಲೆ ಸಾಕಷ್ಟು ಸೆಕ್ಯೂರಿಟಿ ಇತ್ತಾದರೂ ಈಗಿನಷ್ಟು ಇರಲಿಲ್ಲ. ಆದರೂ ನಿಯಮಾವಳಿಗಳ (protocol) ಪ್ರಕಾರ ಫ್ಲಾಷ್ ಫೋಟೋಗೆ ಕಡ್ಡಾಯವಾಗಿ ನಿಷೇಧ. ಅದು ನನಗೆ ಸ್ವಲ್ಪ ನಿರಾಶೆಯನ್ನುಂಟು ಮಾಡಿದರೂ ನನ್ನ ಅದೃಷ್ಟವನ್ನು ಪರೀಕ್ಷಿಸಲು
ಸಿದ್ಧನಾದೆ.

ನನಗೂ ಫೋಟೋಗ್ರಾಫಿಗೂ ಅಂಟಿದ ನಂಟು ...
ಎಲಿಝಬೆತ್ ರಾಣಿ ಪಟ್ಟಕ್ಕೆ ಬಂದಾಗ ನಾವು ಊಟಿಯಲ್ಲಿ ವಾಸಿಸುತ್ತಿದ್ದೆವು. ಆಗ ನನಗೆ ಆರುವರ್ಷ, ನನ್ನ ಅಣ್ಣನಿಗೆ ಎಂಟು
ವರ್ಷ ವಯಸ್ಸಿರಬಹುದು. ನಮಗೆ ಮೊದಲಿನಿಂದಲೂ ಫೋಟೋ ತೆಗೆಯ ಬೇಕೆಂದು ತವಕ. ನನ್ನಣ್ಣ ಮತ್ತು ನಾನು ತಂದೆಯವರಿಗೆ
ಕಾಡಿ, ಬೇಡಿ ಒಂದು ಫುಲ್ ವ್ಯೂ ಕ್ಯಾಮರವನ್ನು ಅದೇ ಸಮಯಕ್ಕೆ ಗಿಟ್ಟಿಸಿದ್ದೆವು. ಆಗ ಬ್ಲಾಕ್ ಅಂಡ ವೈಟ್ ಫೋಟೊ ತೆಗೆದು,
ಊರಲ್ಲಿದ್ದ ಒಂದೇ ಸ್ಟೂಡಿಯೋಗೆ ಕೊಟ್ಟು, ’ತೊಳೆಸಿ’ ಪ್ರಿಂಟ್ ಮಾಡಿಸಿದ ನೆನಪು ಇನ್ನೂ ಹಸಿರಾಗಿದೆ. ಆಮೇಲೆ ಕಾಲೇಜಿಗೆ
ಬಂದಾಗ ನನ್ನ ಮಿತ್ರನೊಡನೆ ಸೇರಿ ನಾವೇ ಪ್ರಿಂಟ್ ಮಾಡಿದ್ದೂ ಇದೆ. ನಂತರ ಈಗ ಡಿಜಿಟಲ್ ಯುಗ ಬಂದಾಗಿನಿಂದ ಎಲ್ಲರಂತೆ
ನಾನೂ ಒಬ್ಬ ಡೇವಿಡ್ ಬೇಯ್ಲಿ, ಅಥವಾ ಕ್ರಿಸ್ ಜಾಕ್ಸನ್ ಅನ್ನುವ ಭ್ರಮೆಯಲ್ಲಿದ್ದೇನೆ!

ಲೈಬ್ರರಿಯಲ್ಲಿ ರಾಜನ ಭೇಟಿ
ಇಂಗ್ಲಿಷ್ ನಿಘಂಟು ಬರೆದು ಪ್ರಸಿದ್ಧರಾದ ಡಾ ಸಾಮ್ಯುಎಲ್ ಜಾನ್ಸನ್ ಅವರನ್ನು ಮೂರನೆಯ ಜಾರ್ಜ್ ಅವರು ತಮ್ಮ
ಇಚ್ಛೆಯಂತೆ ರಾಣಿಯ ಲೈಬ್ರರಿಯಲ್ಲಿ 1767 ರಲ್ಲಿ ಭೆಟ್ಟಿಯಾಗಿದ್ದರು ಅಂತ ಓದಿದ ನೆನಪು. ಅದನ್ನೇ ನೆನಪಿಸುವ ಅಂದಿನ
ಘಟನೆ. ಆಗ ನಾನು ಅದೇ ಆಸ್ಪತ್ರೆಯಲ್ಲಿ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದ ಡಾ ಲಾಲಾ ಎನ್ನುವ ಕಣ್ಣಿನ ತಜ್ಞರ ಕೆಳಗೆ ಕೆಲಸ
ಮಾಡುತ್ತಿದ್ದೆ. ಅವರು ಆ ದಿನ ಆಗ ಪ್ರಿನ್ಸ್ ಎಂದೇ ಕರೆಯಲಾಗುತ್ತಿದ್ದ ಚಾರ್ಲ್ಸ್ ಅವರನ್ನು ಭೇಟಿ ಮಾಡಲು ಇಚ್ಛಿಸಿದ್ದರು.
ಅದಕ್ಕೆ ಆಸ್ಪತ್ರೆಯ ಅಧಿಕಾರಿಗಳೂ ಒಪ್ಪಿದ್ದರು. ಅವರ ಜೊತೆಗೆ ನಾನೂ ಸೇರಿಕೊಳ್ಳಲೇ ಎಂದು ಹೊಂಚು ಹಾಕಿದ್ದು ಫಲಿಸಲಿಲ್ಲ.
ಪ್ರೋಟೋಕಾಲ್ ಅಂತ ಅಧಿಕಾರಿಗಳು ಅದೇ ಕೋಣೆಯಲ್ಲಿರಲು ಸಮ್ಮತಿಸಲಿಲ್ಲ.

ಅಂತೂ ಸಿಕ್ಕಿತು ಅವಕಾಶ
ನಂತರ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಚಾರ್ಲ್ಸ್ ’ತಮ್ಮ’ ಹೆಸರಿನ ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿಕೊಡಲು ಸುತ್ತಿತ್ತುರುವಾಗ ಅವರ ಹಿಂದೆ ’ಆಂಟೂರಾಜ್’ ಜೊತೆಗೆ ಸೇರಿಕೊಂಡು ಒಂದು ಕೋಣೆಯಲ್ಲಿ ಕೆಲವು ಡಾಕ್ಟರರು ಮತ್ತು ನರ್ಸ್ಗಳು ಸಾಲಾಗಿ ನಿಂತಿದ್ದನ್ನು ನೋಡಿ, ಅವರ ಹಿಂದಿನ ಸಾಲಿನಲ್ಲಿ ಆಯಕಟ್ಟಿನ ಸ್ಥಳದಲ್ಲಿ ನಿಂತುಕೊಂಡೆ. ನಮ್ಮ ಎದುರಿಗೆ ಮೂರೇ ಅಡಿ ದೂರದಲ್ಲಿ ಒಬ್ಬೊಬ್ಬರನ್ನಾಗಿ ವಿಚಾರಿಸುತ್ತ ಮಾತಾಡಿಸುತ್ತ ಬಂದ ಚಾರ್ಲ್ಸ್ ಅವರನ್ನು ಫೋಕಸ್ ಮಾಡಿ ತಲೆ ಮತ್ತು ಭುಜಗಳು (head and shoulder) ಇಷ್ಟೇ ಕಾಣಿಸುವಂಥ ನಾಲ್ಕೈದು ’ಪೋರ್ಟ್ರೇಟ್’ ಫೋಟೋಗಳನ್ನು ಕ್ಲಿಕ್ಕಿಸಿದೆ. ಆಗ ಡಿಜಿಟಲ್ ಕ್ಯಾಮರಾಗಳ ಆವಿಷ್ಕಾರ ಆಗಿದ್ದಿಲ್ಲ. ನೆಗೆಟಿವ್ ಗಾಗಿ ಫಿಲ್ಮ್ ಗಳನ್ನು ಕಂಪನಿಗೆ ಕಳಿಸಿ ಪೋಸ್ಟಿನಲ್ಲಿ ಪ್ರಿಂಟ್ ಬರುವ ವರೆಗೆ ಪ್ರಸೂತಿ ವೇದನೆ! ಎರಡು ವಾರಗಳ ನಂತರ ಪೋಸ್ಟ್ಮನ್ ಬಂದಾಗ ’ಹೆಣ್ಣೋ ಗಂಡೋ’ ಅಂತ ಕುತೂಹಲದಿಂದ ಮತ್ತು ಅವಸರದಿಂದ ಕವರನ್ನು ಬಿಚ್ಚಿ ನೋಡಿದೆ. ಫ್ಲಾಷ್ ಇಲ್ಲ ಅಂತ  1/15 ಸೆಕೆಂಡುಗಳ ಎಕ್ಸ್ ಪೋಶರ್ ಕೊಟ್ಟಿದ್ದೆ.  ಒಂದೇ ಒಂದು ಫೋಟೋ ಮಾತ್ರ ಅವರದೇ ಅನ್ನುವಷ್ಟಾದರೂ ಸ್ಪಷ್ಟವಾಗಿ ಕಾಣಿಸುವಂತಿತ್ತು. ನನಗೆ ಸ್ವರ್ಗ ಮೂರೇ ಗೇಣು! ಒಂದು ಕಾಲದಲ್ಲಿ ಆತ ಕಿಂಗ್ ಆಗುವ ದಿನವನ್ನೇ ಕಾಯುತ್ತಿದ್ದೇನೆ ಇಂದಿನ ವರೆಗೆ! ಇನ್ನುಳಿದ snaps ಕುದುರೆ ರೇಸಿನಲ್ಲಿ ಹೇಳುವಂತೆ 'also ran' ಅನ್ನುವ ಲೆಕ್ಕಕ್ಕಿಲ್ಲದವು! ಹೋಗಲಿ ಬಿಡಿ. ಆ ‘ಐತಿಹಾಸಿಕ' ಫೋಟೋ ಬಲಗಡೆ ಕೊಟ್ಟಿದೆ, ನಿಮಗಾಗಿ!(Credit: Monochrome editing by Nigel Burkinshaw)
ರೈಟ್ ರಾಯಲ್ ಖುಶಿ!
 ಆ ಫೋಟೋವನ್ನು ಎನ್ಲಾರ್ಜ್ ಮಾಡಿಸಿ, ಪೋಸ್ಟರ್ ಮಾಡಿಸಿ ನನ್ನ ಡಿಪಾರ್ಟ್ಮೆಂಟಿನಲ್ಲಿ ಇಟ್ಟಿದ್ದೆ. 1978 ರಲ್ಲಿ ಆ ಊರು ಬಿಟ್ಟು ಬಂದೆ. ಈಗ ಆ ದೊಡ್ಡ ಫೋಟೋದ ಗತಿ ಏನಾಯಿತು ಗೊತ್ತಿಲ್ಲ. ಆ ನೆಗಟಿವ್ ಮಾತ್ರ ಇನ್ನೂ ನನ್ನ ಹತ್ತಿರ ಇದೆ. ರಾಯಲ್ ಗ್ರಾಂಟ್ ಅಂತ ಒಂದು ’ಪದವಿ’ ಸಿಗುವದು ಅಷ್ಟು ಸುಲಭವಲ್ಲ. ಆ ಫೋಟೋದ ಒಂದು ಪ್ರತಿಯನ್ನು ’ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್’ ಲಂಡನ್ ಅಂತ ಹೆಮ್ಮೆಯಿಂದ ಕಳಿಸಿದ್ದು ಏನಾಯಿತೋ ಗೊತ್ತಿಲ್ಲ. ಆದರೆ ಈ ವರ್ಷದ ವರೆಗೆ ಕಾಯ್ದಿದ್ದ ನನಗೆ ಆ ಫೋಟೋ ಕ್ಲಿಕ್ಕಿಸಿದ ದಿನವನ್ನು ನೆನೆದು ಮೈ ಪುಳಕಿತವಾಗುತ್ತಿದೆ!  ನನ್ನ ಅತ್ಯಂತ ಅದೃಷ್ಟದ ಫೋಟೋ ಅದು ಅಂತ ನೀವೂ ಒಪ್ಪ ಬಹುದೆಂದು ಊಹಿಸುತ್ತೇನೆ! ಅದಕ್ಕೆ ನನ್ನ ಕಾಪಿರೈಟಿದೆ, ಎಚ್ಚರಿಕೆ!

ಶ್ರೀವತ್ಸ ದೇಸಾಯಿ
ಡೋಂಕಾಸ್ಟರ್, ಯಾರ್ಕ್ ಶೈರ್, ಯು ಕೆ.
  (ಫೋಟೋಗಳೆಲ್ಲ ಲೇಖಕರು ಕ್ಲಿಕ್ಕಿಸಿದ್ದು. Copyright reserved.)
  (ಇದೇ ವಾರದ ಕನ್ನಡ ಪ್ರಭ ಎನ್ ಆರ್ ಐ ಆವೃತ್ತಿಯಲ್ಲಿ ಪ್ರಕಟವಾದ ನನ್ನ ಲೇಖನದ  ಪರಿಷ್ಕೃತ ರೂಪ) 

**********************************************************